೧೨೫. ಲಲಿತಾ ಸಹಸ್ರನಾಮ ೫೨೧ರಿಂದ ೫೨೭ನೇ ನಾಮಗಳ ವಿವರಣೆ

೧೨೫. ಲಲಿತಾ ಸಹಸ್ರನಾಮ ೫೨೧ರಿಂದ ೫೨೭ನೇ ನಾಮಗಳ ವಿವರಣೆ

ಚಿತ್ರ

ಲಲಿತಾ ಸಹಸ್ರನಾಮ ೫೨೧ - ೫೨೭

Ājñā-cakrābja nilayā आज्ञा-चक्राब्ज निलया (521)

೫೨೧. ಆಜ್ಞಾ-ಚಕ್ರಾಬ್ಜ-ನಿಲಯಾ

           ಇದನ್ನೊಳಗೊಂಡು ಮುಂದಿನ ಏಳು ನಾಮಗಳು ಅಜ್ಞಾ ಚಕ್ರದಲ್ಲಿ ನೆಲಸಿರುವ ದೇವತೆಯಾದ ಹಾಕಿನೀ ದೇವಿಯ ಕುರಿತಾಗಿದೆ. ಆಜ್ಞಾ ಚಕ್ರವು ಅತ್ಯಂತ ಪ್ರಮುಖವಾದ ಚಕ್ರವೆಂದು ಪರಿಗಣಿಸಲ್ಪಟ್ಟಿದೆ ಇದು ಎರಡು ಭ್ರೂಕುಟಿಗಳ ಮಧ್ಯೆ ಇರುತ್ತದೆ. ಈ ಚಕ್ರವು ಎರಡು ದಳದ ಶ್ವೇತ ಪದ್ಮವಾಗಿದ್ದು ಅವುಗಳ ಮೇಲೆ ಹಂ (हं) ಮತ್ತು ಕ್ಷಂ (क्षं) ಬೀಜಾಕ್ಷರಗಳು ಕೆತ್ತಲ್ಪಟ್ಟಿವೆ. ಯೋಗಿನಿಯ ಮೈಬಣ್ಣವು ಬಿಳಿಯಾಗಿದ್ದು (ಶ್ವೇತ ವರ್ಣವಾಗಿದ್ದು) ಅವಳಿಗೆ ಆರು ಮುಖಗಳು ಮತ್ತು ಪ್ರತಿಯೊಂದು ಮುಖಕ್ಕೂ ಮೂರು ಕಣ್ಣುಗಳಿವೆ ಮತ್ತು ಅವೆಲ್ಲವೂ ಕೆಂಪು ಬಣ್ಣದ್ದಾಗಿವೆ. ಯೋಗಿನಿಗೆ ಆರು ಕೈಗಳಿದ್ದು ಆಕೆಯು ರಾಜ ಗಾಂಭೀರ್ಯದಿಂದ ಶ್ವೇತ ಪದ್ಮದ ಮೇಲೆ ಆಸೀನಳಾಗಿರುತ್ತಾಳೆ. ಆಕೆಯ ಆರು ಕೈಗಳಲ್ಲಿ ಒಂದು ವರದ ಮುದ್ರೆಯಾದರೆ, ಮತ್ತೊಂದು ಆಭಯ ಮುದ್ರೆಯಾಗಿದೆ, ಇನ್ನುಳಿದ ನಾಲ್ಕರಲ್ಲಿ ಕೈಗೊಂದರಂತೆ ರುದ್ರಾಕ್ಷೀ ಮಾಲೆ, ಮಾನವ ಕಪಾಲ, ಡಮರುಗ ಮತ್ತು ಒಂದು ಪುಸ್ತಕಗಳು ಇವೆ. ಅತ್ಯಂತ ಸೂಕ್ಷ್ಮ ರೂಪದಲ್ಲಿ ಮನಸ್ಸು ಇಲ್ಲಿ ನಿವಸಿಸುತ್ತದೆ. ಎಲ್ಲಕ್ಕಿಂತಲೂ ಅತ್ಯಂತ ಪ್ರಮುಖವಾದ ಬೀಜಾಕ್ಷರವಾದ ಓಂ (ॐ) ಇಲ್ಲಿ ಇರಿಸಲ್ಪಟ್ಟು ಯಾವಾಗ ಕುಂಡಲಿನೀ ಶಕ್ತಿಯು ಈ ಚಕ್ರವನ್ನು ತಲುಪುತ್ತದೆಯೋ ಆಗ ಅತಿಮಾನುಷ ಶಕ್ತಿಗಳು ಸಾಧಕನಿಗೆ ಒಲಿಯುತ್ತವೆ. ಇದರ ಪರಿಧಿಯು ತಲೆಕೆಳಗಾದ ತ್ರಿಕೋಣಾಕಾರದಲ್ಲಿರುತ್ತದೆ. ಈ ತ್ರಿಕೋಣದ ಮೇಲೆ ಒಂದು ಅರ್ಧಚಂದ್ರವು ಇರುತ್ತದೆ. ಆಜ್ಞಾ ಚಕ್ರದ ಮೇಲಿನ ನಿಖರವಾದ ಧ್ಯಾನದಲ್ಲಿ ಮೊದಲು ಸೂಸುವ ಹೊಂಗಿರಣವು ಕೇವಲ ಈ ತ್ರಿಕೋಣದ ಮೇಲಿರುವ ಅರ್ಧಚಂದ್ರದಷ್ಟಿರುತ್ತದೆ. ಈ ಚಂದ್ರದ ಕಿರಣವು ಸಾಧಕನು ಧ್ಯಾನದಲ್ಲಿ ಮುಂದುವರೆದಂತೆಲ್ಲಾ ಪ್ರಜ್ವಲಿಸುವ ಪ್ರಕಾಶವಾಗುತ್ತದೆ; ಆತ್ಮಸಾಕ್ಷಾತ್ಕಾರದ ಉನ್ನತಿಯ ದ್ಯೋತಕವಾಗಿ. ಇಲ್ಲಿ ಪ್ರಜ್ವಲಿಸುವ ಜ್ಯೋತಿಯು ವಿಶೇಷವಾಗಿ ಪ್ರಖರವಾಗಿರುತ್ತದೆ ಏಕೆಂದರೆ ಇಲ್ಲಿ ಸೂರ್ಯ, ಚಂದ್ರ ಮತ್ತು ಅಗ್ನಿಗಳು ಒಂದುಗೂಡುತ್ತವೆ (ಇಡಾ, ಪಿಂಗಳ ಮತ್ತು ಸುಷುಮ್ನ ನಾಡಿಗಳು ಒಂದೆಡೆ ಸೇರುತ್ತವೆ). ಇಲ್ಲಿ ಶಿವ ಮತ್ತು ಶಕ್ತಿಯರಿಬ್ಬರೂ ಆವಿರ್ಭಾವಗೊಳ್ಳುತ್ತಾರೆ. ಒಬ್ಬನ ಗುರುಪರಂಪರೆಯನ್ನು ಈ ಚಕ್ರದಲ್ಲಿ ಪೂಜಿಸಲಾಗುತ್ತದೆ. ಗುರುವು ತಾನು ಯಾವುದೇ ಜಾಗದಲ್ಲಿ ಅಸ್ತಿತ್ವದಲ್ಲಿರಲಿ ಅವನು ತನ್ನ ಶಿಷ್ಯನಿಗೆ ಈ ಚಕ್ರದ ಮೂಲಕ ಆಜ್ಞೆಯನ್ನು ಕೊಡುತ್ತಾನೆ.

          ಕೆಳಗಿನವು ಭಗವದ್ಗೀತೆಯಲ್ಲಿ (೮.೯ ಮತ್ತು ೧೦) ಶ್ರೀ ಕೃಷ್ಣನ ಮಾತುಗಳಾಗಿವೆ, "ಬ್ರಹ್ಮವು ಕಲ್ಪನೆಗೆ ನಿಲುಕದ ರೂಪದಲ್ಲಿರುವ ಎಲ್ಲವನ್ನೂ ಬಲ್ಲವನೆಂಬ ಸಂಗತಿಯನ್ನು ಒಬ್ಬನು ತಿಳಿದಿರಬೇಕು; ಅವನು ಹೊಳೆಯುವ ಸೂರ್ಯನಂತಿದ್ದು, ಅವನು ಎಲ್ಲಾ ಭೌತಿಕ ಗುಣಲಕ್ಷಣಗಳಿಗೆ ಅತೀತನಾಗಿದ್ದಾನೆ (ನಿಲುಕಲಾರದವನಾಗಿದ್ದಾನೆ). ಯಾರು ತನ್ನ ಮರಣ ಕಾಲದಲ್ಲಿ ತನ್ನ ಯೋಗ ಶಕ್ತಿಯಿಂದ ಅವನ ಪ್ರಜ್ಞೆಯನ್ನು ಅವನ ಎರಡು ಭ್ರೂಕುಟಿಗಳ ಮಧ್ಯೆ (ಆಜ್ಞಾ ಚಕ್ರದ ಮೇಲೆ) ಸ್ಥಿರಗೊಳಿಸುತ್ತಾನೆಯೋ ಮತ್ತು ಅವನ ಮನಸ್ಸನ್ನು ಬ್ರಹ್ಮದ ಮೇಲೆ ಸ್ಥಿರಗೊಳಿಸುತ್ತಾನೆಯೋ ಅವನು ಬ್ರಹ್ಮವನ್ನು ಹೊಂದುತ್ತಾನೆ".

Śukla-varṇā शुक्ल-वर्णा (522)

೫೨೨. ಶುಕ್ಲ-ವರ್ಣಾ

          ಹಾಕಿನೀ ದೇವಿಯು ಗೌರವ ವರ್ಣದವಳಾಗಿದ್ದಾಳೆ. ಇದು ಬಹುಶಃ ಆಜ್ಞಾ ಚಕ್ರದ ಪರಿಶುದ್ಧತೆಯಿಂದಾಗಿರಬಹುದು.

Ṣaḍānanā षडानना (523)

೫೨೩. ಷಡಾನನಾ

           ಹಾಕಿನೀ ದೇವಿಗೆ ಆರು ಮುಖಗಳಿವೆ ಆದುದರಿಂದ ಈ ಚಕ್ರವನ್ನು ಈ ಸಹಸ್ರನಾಮದಲ್ಲಿ ಆರನೇ ಚಕ್ರವಾಗಿ ವರ್ಣಿಸಲಾಗಿದೆ. ಆಜ್ಞಾ ಚಕ್ರವು ಕೆಳಗಿನ ಐದು ಚಕ್ರಗಳನ್ನು ನಿಯಂತ್ರಿಸುವ ಚಕ್ರವಾಗಿದ್ದು; ಅವು ಪಂಚ ಮಹಾಭೂತಗಳನ್ನು ಪ್ರತಿನಿಧಿಸುತ್ತವೆ. ಆಜ್ಞಾ ಚಕ್ರವು ಮನಸ್ಸನ್ನು ನಿಯಂತ್ರಿಸುವ ಚಕ್ರವಾಗಿದೆ. ಆದ್ದರಿಂದ ಹಾಕಿನೀ ಯೋಗಿನಿಯನ್ನು ಆರು ಮುಖಗಳುಳ್ಳವಳಾಗಿ ವರ್ಣಿಸಲಾಗಿದೆ; ಒಂದು ಮನಸ್ಸನ್ನು ಪ್ರತಿನಿಧಿಸಿದರೆ ಉಳಿದ ಐದು ಮುಖಗಳು ಪಂಚ ಮಹಾಭೂತಗಳನ್ನು ಅದರಲ್ಲೂ ಪ್ರತ್ಯೇಕವಾಗಿ ತನ್ಮಾತ್ರಗಳಾದ ಶಬ್ದ, ರೂಪ, ರಸ, ಗಂಧ, ಸ್ಪರ್ಶಗಳನ್ನು ಪ್ರತಿನಿಧಿಸುತ್ತವೆ.

Majjā-saṁsthā मज्जा-संस्था (524)

೫೨೪. ಮಜ್ಜಾ-ಸಂಸ್ಥಾ

         ಹಾಕಿನೀ ದೇವಿಯು ಮಜ್ಜೆಯೊಳಗೆ (ಮೂಳೆಗಳ ಒಳಗೆ ಇರುವ ಅಂಗಾಂಶ) ನೆಲಸಿರುತ್ತಾಳೆ; ಇದು ಚರ್ಮದಿಂದ ಆರನೇ ಪದರವಾಗಿರುವ ಕಾರಣ ಆಜ್ಞಾ ಚಕ್ರವನ್ನು ಈ ಸಹಸ್ರನಾಮದಲ್ಲಿ ಆರನೇ ಚಕ್ರವಾಗಿ ಚರ್ಚಿಸಲಾಗಿದೆ.

Hamsavatī-mukhya śakti-samanvitā हम्सवती-मुख्य शक्ति-समन्विता (525)

೫೨೫. ಹಂಸವತೀ-ಮುಖ್ಯ ಶಕ್ತಿ-ಸಮನ್ವಿತಾ

          ಹಾಕಿನೀ ದೇವಿಯು ಅವಳ ಎರಡು ಪರಿಚಾರಿಕೆಯರಿಂದ ಸೇವಿಸಲ್ಪಡುತ್ತಾಳೆ . ಎರಡು ಬೀಜಾಕ್ಷರಗಳಾದ ‘ಹಂ’ (हं) ಮತ್ತು ‘ಕ್ಷಂ’ (क्षं) ಅನ್ನು ಪ್ರತಿನಿಧಿಸುವ ಹಂಸವತೀ ಮತ್ತು ಕ್ಷಮಾವತೀ ಆಗಿವೆ. ಈ ಎಲ್ಲಾ ಚಕ್ರಗಳಲ್ಲಿ ಯೋಗಿನಿಯರಿಗೆ ಸಹಾಯಕರಾಗಿರುವ ಸಹಯೋಗಿನಿಯರ ಹೆಸರುಗಳು ಆ ಚಕ್ರಗಳ ಪದ್ಮಗಳ ದಳಗಳ ಮೇಲೆ ಕೆತ್ತಲ್ಪಟ್ಟ ಮೊದಲನೇ ಅಕ್ಷರದಿಂದ ಪ್ರಾರಂಭವಾಗುತ್ತವೆ. ಅಕ್ಷರಗಳು, ಯೋಗಿನಿಯರ ಮೈಬಣ್ಣ, ಮುಖಗಳು ಮತ್ತು ಯೋಗಿನಿಯರ ಕೈಗಳು, ಚಕ್ರಗಳು ಪರಿಧಿಯ ಆಕೃತಿಗಳು ಈ ಚಕ್ರಗಳಿವೆ ಆರೋಪಿಸಿರುವ ಲಕ್ಷಣಗಳೊಂದಿಗೆ ವಿಶಿಷ್ಠವಾದ ಸಂಭಂದವನ್ನು ಹೊಂದಿವೆ.

Haridrānnaika-rasikā हरिद्रान्नैक-रसिका (526)

೫೨೬. ಹರಿದ್ರಾನ್ನೈಕ ರಸಿಕಾ

          ಹಾಕಿನೀ ದೇವಿಯು ಅರಿಶಿಣದಿಂದ ತಯಾರಿಸಿದ ಅನ್ನವನ್ನು (ಚಿತ್ರಾನ್ನ?) ಇಷ್ಟಪಡುತ್ತಾಳೆ.

Hākinī rūpa-dhāriṇī हाकिनी रूप-धारिणी (527)

೫೨೭. ಹಾಕಿನೀ ರೂಪ-ಧಾರಿಣೀ

           ಹಿಂದಿನ ಆರು ನಾಮಗಳಲ್ಲಿ ವಿವರಿಸಿರುವ ಯೋಗಿನಿಯ ರೂಪವನ್ನು ಧರಿಸಿರುವಾಕೆ.

******

        ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 521 - 527 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. ಆಜ್ಞಾ ಚಕ್ರ, ಚಿತ್ರಕೃಪೆ: ಗೂಗಲ್ 

Rating
Average: 5 (1 vote)

Comments

Submitted by nageshamysore Mon, 09/30/2013 - 20:10

ಶ್ರೀಧರರೆ, ೧೨೫. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯಸಾರ ಪರಿಷ್ಕರಣೆಗೆ ಸಿದ್ದ :-)

ಲಲಿತಾ ಸಹಸ್ರನಾಮ ೫೨೧ - ೫೨೭
______________________________________

೫೨೧. ಆಜ್ಞಾ-ಚಕ್ರಾಬ್ಜ-ನಿಲಯಾ 
ಭ್ರೂಕುಟಿ ದ್ವೈತದ ನಡುವಿನ, ದ್ವಿದಳ ಶ್ವೇತಪದ್ಮವೆ ಆಜ್ಞಾ ಚಕ್ರ
ತ್ರಿನೇತ್ರೆ ಷಡಾನನೆ ಯೋಗಿನಿ, ದಳದೆ 'ಹಂ' 'ಕ್ಷಂ' ಬೀಜಾಕ್ಷರ
ಶ್ವೇತ ತನು, ಕೆಂಪು ಕಣ್ಣು, ಆರು ಕೈ ಸಮೇತ ರಾಜಗಾಂಭೀರ್ಯ
ರುದ್ರಾಕ್ಷಿ-ಕಪಾಲ-ಡಮರುಗ-ಪುಸ್ತಕ, ಅಭಯ-ವರದ ಮುದ್ರಾ ||

'ಓಂ' ಬೀಜಾಕ್ಷರ ಸಮೇತ, ಸೂಕ್ಷ್ಮರೂಪಿ ಮನಸಿನ ನಿವಾಸ ಚಕ್ರ
ಕುಂಡಲಿನೀ ತಲುಪೆ ಅತಿಮಾನುಷ ಶಕ್ತಿ, ಸಾಧಕಗೆ ಧಾರಾಕಾರ
ತಲೆಕೆಳತ್ರಿಕೋಣ ಪರಿಧಿ, ಮೇಲರ್ಧಚಂದ್ರ ಧ್ಯಾನದ ಹೊಂಗಿರಣ
ಸೂರ್ಯಚಂದ್ರಾಗ್ನಿ ಸಮಾಗಮ ಪ್ರಖರ, ಆತ್ಮಸಾಕ್ಷಾತ್ಕಾರ ಪೂರ್ಣ ||

ಕಲ್ಪನೆಗೆ ನಿಲುಕದ ರೂಪವಿಹ ಬ್ರಹ್ಮ, ಎಲ್ಲವನು ಬಲ್ಲವ
ಭೌತಿಕ ಗುಣಲಕ್ಷಣಗಳಿಗತೀತ, ಸೂರ್ಯನಂತೆ ಹೊಳೆವ
ಮರಣದಲಿ ಸಾಧಕ ಪ್ರಜ್ಞೆ ಸ್ಥಿರವಾಗಿರೆ ಭ್ರೂಕುಟಿ ನಡುವೆ
ಮನಸು ಸ್ಥಿರವಾಗಿರೆ ಬ್ರಹ್ಮದತ್ತ, ಬ್ರಹ್ಮವಾಗುವಾ ಅರಿವೆ ||

೫೨೨. ಶುಕ್ಲ-ವರ್ಣಾ 
ಪರಿಶುದ್ಧ, ಪ್ರಮುಖವಿಹ ಆರನೆ ಆಜ್ಞಾಚಕ್ರ
ಸುತ್ತ ಮುತ್ತಲಲು ಹಬ್ಬಿಸಿ ಶುದ್ಧತೆ ಸರ್ವತ್ರ
ಯೋಗಿನಿ ಹಾಕಿನೀ ಸತತ ನೆಲೆಸಿಹ ತಾಣ
ಗೌರವ ವರ್ಣದಲಿ ಪರಿಶುದ್ಧಳು ಶುಕ್ಲ ವರ್ಣಾ ||

೫೨೩. ಷಡಾನನಾ 
ಕೆಳ ಚಕ್ರಗಳೈದು ಪ್ರತಿನಿಧಿಸುತ ಪಂಚಮಹಾಭೂತ
ನಿಯಂತ್ರಣಕಿಹ ಆಜ್ಞಾಚಕ್ರ, ಮನನಿಯಂತ್ರಣ ಸೂತ್ರ
ಹಾಕಿನೀ ಷಡ್ವದನದಲೊಂದು ಪ್ರತಿನಿಧಿಸಿ ಮನಸನ್ನಾ
ಪಂಚಮಹಾಭೂತ, ತನ್ಮಾತ್ರ ಬಿಂಬಿಸುತೆ ಷಡಾನನಾ ||

೫೨೪. ಮಜ್ಜಾ-ಸಂಸ್ಥಾ 
ಪದರ ಪದರ ಸಾಗಿದ ಗಣ, ಯೋಗಿನಿ ನೆಲೆಸಿಹ ತಾಣ
ಮೊದಲ ಪದರವೆ ಚರ್ಮ, ಕೆಳಗಿಹ ರಕ್ತವೆರಡನೆ ತಾಣ
ಮೂರನೆ ಪದರ ಮಾಂಸಖಂಡ, ನಾಲ್ಕಾಗಿ ಕೊಬ್ಬು,ಜಿಡ್ಡು
ಐದನೆ ಅಸ್ಥಿಯೊಳಗಾರೆ ಅಸ್ಥಿಮಜ್ಜೆ, ಹಾಕಿನೀ ನೆಲೆವೀಡು ||

೫೨೫. ಹಂಸವತೀ-ಮುಖ್ಯ ಶಕ್ತಿ-ಸಮನ್ವಿತಾ 
ದ್ವಿದಳ ಪದ್ಮದ ಬೀಜಾಕ್ಷರ 'ಹಂ' 'ಕ್ಷಂ' ಪರಿಚಾರಿಕೆಯರ
ಹಾಕಿನೀ ಸಹಯೋಗಿನಿಯಿಬ್ಬರ ಹೆಸರಿನ ಮೊದಲಕ್ಷರ
'ಹಂಸವತೀ','ಕ್ಷಮಾವತೀ' ಗುಣ, ಚಕ್ರಲಕ್ಷಣ ಹೋಲುತ
ಸೇವಿಸಿ ಯೋಗಿನಿಯ ಹಂಸವತೀ ಮುಖ್ಯ ಶಕ್ತಿ ಸಮನ್ವಿತಾ ||
         
೫೨೬. ಹರಿದ್ರಾನ್ನೈಕ ರಸಿಕಾ
ಯೋಗಿನಿಯರಾಗಿ ನೆಲೆ, ಹಂತ ಹಂತದಲಿ
ಲಲಿತಾಂಬಿಕೆ ಪಥವ ಪೊರೆವರೆ ಸತತದಲಿ
ಹಾಕಿನೀ ದೇವಿಯ ಓಲೈಸೆ ಪ್ರೀತ್ಯರ್ಥ ಭಕ್ಷ್ಯಾ
ಅರಿಶಿಣಾನ್ನವ ಬಯಸಿ ಹರಿದ್ರಾನ್ನೈಕ ರಸಿಕಾ ||

೫೨೭. ಹಾಕಿನೀ ರೂಪ-ಧಾರಿಣೀ 
ದ್ವಿದಳ ಕಮಲ ನಿವಾಸಿನಿ, ಆಜ್ಞಾಚಕ್ರದ ಯೋಗಿನಿ
ಷಡ್ವದನ ಶ್ರೇಣಿ, ಷಡ್ಬಾಹುಕರ ಆಯುಧ ಸಂಪೂರ್ಣಿ
ಗೌರವರ್ಣ ಹೊಳೆವ ಕಾಂತಿ, ಜತೆಗಿಬ್ಬರು ಸಹಚರಿಣಿ
ಅರಿಶಿಣಾನ್ನ ಬಯಸಿ ದೇವಿ ಹಾಕಿನೀ ರೂಪ ಧಾರಿಣೀ ||

ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು