ಯಾಚನೆ, ಯಾತನೆ (ಘಜಲ್)

ಯಾಚನೆ, ಯಾತನೆ (ಘಜಲ್)

ಘಜಲ್ ನ ಕಲ್ಪನೆಯಲ್ಲಿ ಬರೆದ ಜೋಡಿ ಪದ್ಯಗಳಿವು (1990). ಘಜಲ್ ರೂಪುರೇಷೆ ಹೇಗಿರಬೇಕು, ಯಾವ ನಿಯಮಕ್ಕೊಳಪಟ್ಟಿರಬೇಕು ಇತ್ಯಾದಿಗಳ ತಿಳುವಳಿಕೆ ಇರದಿದ್ದರೂ (ಈಗಲೂ ಇಲ್ಲಾ!) , ಶರಾಬು, ನಲ್ಲೆ, ನೋವು, ವಿಷಾದ, ಪ್ರೇಮ ಇತ್ಯಾದಿಗಳ ಮತ್ತೇರಿಸುವ ಹೂರಣವಂತೂ ಇರುತ್ತದೆಂದು ಕೆಲವು ಹಿಂದಿ ಘಜಲ್ ಕೇಳಿದ್ದರ ಕಾರಣದಿಂದ ಸ್ವಲ್ಪ ಅನುಭವವಾಗಿತ್ತು. ಅದನ್ನೆ ಬಳಸಿ ರಚಿಸಿದ ಗೀತೆಗಳಿವು.

ಮೊದಲನೆಯದು 'ಯಾಚನೆ', ಶರಾಬಿನ ನಷೆಯಲ್ಲೆ ಪ್ರಿಯತಮೆಯ ಪ್ರೇಮಕಾಗಿ ಯಾಚಿಸುತ ಮತ್ತಷ್ಟು ವಿರಹ ಹಾಗೂ ಶರಾಬಿನ ಧಾರೆ ಸ್ಪುರಿಸುವ ಚಿತ್ರಣ. ಬರಿ ಯಾಚನೆಯ ಗೋಳಷ್ಟೆ ಇಲ್ಲಿ ಅನುರಣಿತ.

01. ಯಾಚನೆ:
_____________________

ಪ್ರೇಮದ ಬಟ್ಟಲು ಬರಿದಾಗಿದೆ
ಸಖಿ
ತುಂಬಿಸು ಬೇಗ 
ನಿನ್ನ ಪ್ರೀತಿಯ ಶರಾಬು..
ಕಾತರಿಸಿ ಕಾದಿಹ
ಈ ಚಂದ್ರಿಕೆಯ ಇರುಳಲ್ಲಿ
ಮಧು ಪಾತ್ರೆಯಾ
ಬಗ್ಗಿಸು
ನಿಷೆಗೆ
ನಶೆಯೇರಿಸು
ಹಾಗಾದರೂ ನಂದಲಿ 
ಈ ವಿರಹದಾ ಮತಾಪು! 

ಗಾಢರಾತ್ರಿಯಲಿ ತಂಗಾಳಿ
ನಿನ್ನ 
ನೆನೆದು ಅಳುತಲಿದೆ
ಎಣ್ಣೆಯಿರದ ಹಣತೆಯಂತೆ!
ಆರುವಂತಿಲ್ಲ ಸಖಿ ಹಣತೆ
ನಿನ್ನ
ಕಣ್ಸುಧೆಯನ್ನೇ ಸುರಿಸು 
ಉರಿವ ಬೆಳಕಿಗೂ ಮತ್ತೇರಿಸು;
ಹೀಗೆ ದೂರ ನಿಂತೆ 
ಬರಿ ನೋವ ಸುರಿವೆಯಲ್ಲ
ಬದಲು 
ಹಾಳು ಶರಾಬಾದರೂ ಸುರಿ! 

ಗುಲಾಬಿ ದಳಗಳ ಮೆತ್ತೆಗೆ
ಸವರಿ
ಮುತ್ತಿಕ್ಕುತಿದೆ ದುಂಬಿ 
ಸಖಿ
ಮತ್ತೇರಿ ಅಳುತಿದೆ ಮೋಡಾ
ಸಿಹಿಯ ನೆನಪಿಗೋ ಏನೋ 
ತುಟಿ 
ಬಿರುಕು ನೆಲವಾಗಿದೆ 
ಕರಗಿದ ಮೋಡಗಳಂತೂ
ತಂಪೆರೆದಿಲ್ಲ
ಬಿಸಿ ಚುಂಬನವಾದರೂ ನೀಡು
ಹಾಳು ಶರಾಬಾದರೂ ಕೊಡು!

ಯಾಚಿಸಿ ಯಾಚಿಸಿ ಸಾಕಾಗಿ, ಸೋಲುಂಡ ಯಾಚನೆ ದಿಕ್ಕುತಪ್ಪಿದಂತಾಗಿ 'ಯಾತನೆ'ಯ ಹಾದಿ ಹಿಡಿದಾಗಿನ ದುಃಖ, ವೇದನೆ, ವಿರಹ - ಮತ್ತೆ  ಶರಬಿನ ಮೊರೆಹೊಕ್ಕು ಎಲ್ಲ ಮರೆಯುವ ಹವಣಿಕೆ, ವಿದ್ರಾವಕ ಯಾತನೆಯಾಗಿ ಪ್ರಕಟಗೊಂಡ ರೀತಿ ಇಲ್ಲಿದೆ - 'ಯಾತನೆ'ಯಲ್ಲಿ.

2. ಯಾತನೆ 
_________________________

ಅಂದು
ನೀನೆ ಸುರೆಯಾಗಿದ್ದೆ 
ನಾ ಮನಸಾರೆ ಹೀರಿದ್ದೆ
ಆ ಸುರೆಯೆದುರು ಈ ಶರಾಬೇನು?
ಸೆರೆಯಾಗಿಸಿ ಸುರೆಗೆ
ನೀ ನನ್ನ ಕೈ ಬಿಟ್ಟೆ
ಅಯ್ಯೋ..
ನೆನಪುಗಳ ಶೂಲ ಇರಿಯುತಿದೆ
ಗೆಜ್ಜೆಯ ಇನಿದನಿ ಕೆಣಕುತಿದೆ 
ಮತ್ತೆ ದೂರಾಗುತಿಹೆಯಲ್ಲ...
ಹೋಗುವ ಮುನ್ನ
ಹಾಳು ಶರಾಬಾದರು ಸುರಿ!

ನಿನ್ನ
ಮರೆಯಲೆಂದೇ
ಹೀರುತ್ತೇನೆ ಶರಾಬು - 
ಬಟ್ಟಲೊಳಗೂ ಬರುತ್ತಿ, ನೀನೆಂತಾ ಕ್ರೂರಿ?
ನಿನ್ನೆ ಕುಡಿದು
ಅಬ್ಬಾ! ಅನ್ನುವುದಕ್ಕಿಲ್ಲ
ಎದೆಯಲಿ ನುಗ್ಗಿ
ನೆನಪುಗಳ ಕಲ್ಲರೆಯುತ್ತಿ..
ನೋಡು ಸಖಿ,
ಕೈಯೇಕೋ ನಡುಗುತಿದೆ
ಬಟ್ಟಲು ಬರಿದಾಗುತಿದೆ
ಖಾಲಿ ಬಟ್ಟಲ ತುಂಬಾ
ಮತ್ತೆ ವಿರಹವೆ ತುಳುಕುತಿದೆ
ಈಗಲಾದರೂ ಬಂದು
ನಡುಗುವ ಕೈಹಿಡಿ 
ಇಲ್ಲಾ,
ಹಾಳು ಶರಾಬಾದರೂ ಸುರಿ!

-------------------------------------------------------
ನಾಗೇಶ ಮೈಸೂರು, ( ೧೯೯೦ ) 
-------------------------------------------------------

Comments

Submitted by H A Patil Tue, 10/01/2013 - 20:37

ನಾಗೇಶ ಮೈಸೂರು ರವರಿಗೆ ವಂದನೆಗಳು ತಮ್ಮ ಗಜಲ್‍ ಗಳನ್ನು ಓದಿದೆ ಮನಕೆ ಮುದ ನೀಡುವುದರ ಜೊತೆಗೆ ಓದುಗನನ್ನು ಗಾಢ ಚಿಂತನೆಗೆ ಹಚ್ಚುತ್ತವೆ, ಸತ್ವಪೂರ್ಣ ರಚನೆಗಳನ್ನು ನೀಡಿದ್ದೀರಿ ಧನ್ಯವಾದಗಳು.
Submitted by nageshamysore Wed, 10/02/2013 - 04:22

In reply to by partha1059

ಪಾರ್ಥಾ ಸಾರ್, ಗಣೇಶರ ವಿವರಣಾ ಕೊಂಡಿಗಳಿಂದ ಇದನ್ನು 'ಗಜಲ್' ಎಂದು ಕರೆಯುವಂತಿಲ್ಲ ಎಂದರಿವಾಗಿ ಮತ್ತೇನೆಂದು ಕರೆಯಬಹುದೊ ಎಂದು ಆಲೋಚಿಸುತ್ತಿದ್ದೆ - ನಿಮ್ಮ ಪ್ರತಿಕ್ರಿಯೆಯಲ್ಲೆ ಉತ್ತರ ಸಿಕ್ಕಿಬಿಟ್ಟಿತು ನೋಡಿ - ಇದು 'ಗಜಲ್' ಅಲ್ಲಾ, 'ಪಜಲ್' ಅಂತ! ಯಾತನೆ ನೋವುಗಳೆ ಇಂತಹ 'ಪಜಲ್'ಗಳ 'ದಿಲ್' ಮತ್ತು 'ಜ್ಯುವೆಲ್' ಅಲ್ಲವೆ :-)
Submitted by ಗಣೇಶ Tue, 10/01/2013 - 23:40

"..ಹಾಳು ಶರಾಬಾದರೂ ಸುರಿ.." ವ್ಹಾ ವ್ಹಾ ಕ್ಯಾ ಬಾತ್.. ಗಜಲ್ ಲೋಕಕ್ಕೂ ಕಾಲಿರಿಸುತ್ತಿರುವ ನಾಗೇಶರಿಗೆ ಶುಭಾಶಯಗಳು. ಸಂಪದದಲ್ಲೇ ಅನೇಕ ಗಜಲ್‌ಗಳನ್ನು mmshaik ಎಂಬವರು ಬರೆಯುತ್ತಿದ್ದರು. http://www.sampada.n... ಅದರಲ್ಲಿ ಒಂದು ಕೊಂಡಿಯಲ್ಲಿ ಗಜಲ್ ನ ರೂಪುರೇಷೆ, ನಿಯಮಗಳ ಬಗ್ಗೆ ಇದೆ. ನಿಮಗೆ ಸಹಾಯವಾಗಬಹುದು. ಎಲ್ಲಾದರೂ ಕೊಂಡಿ ಓಪನ್ ಆಗದಿದ್ದರೆ ಜುಲೈ ೨೬,೨೦೧೨ರಂದು mmshaik ಅವರು ಸಂಪದದಲ್ಲಿ ಬರೆದ "ಗಜಲ್" ಹುಡುಕಿ- www.sampada.net/ಗಜಲ್-25 (ಇದನ್ನು ಕಟ್ ಮಾಡಿ ಸರ್ಚ್‌ನಲ್ಲಿ ಪೇಸ್ಟ್ ಮಾಡಿ.)
Submitted by nageshamysore Wed, 10/02/2013 - 04:15

In reply to by ಗಣೇಶ

ಗಣೇಶ್ ಜಿ, 1) ಯಾವುದೆ ನಿಯಮಕ್ಕೊಳಪಡದ ಇದಕ್ಕೆ ಗಜಲ್ ಅಂತ ಕರೆಯಬಾರದು ಅಂತ ತಿಳುವಳಿಕೆ ಬಂತು 2) ಗಜಲ್ ನ ರೂಪುರೇಷೆ, ನಿಯಮಗಳ ಬಗೆ ಸೂಕ್ತ ವಿವರಣೆಯ ಲೇಖನದಿಂದ 'ಗಜಲ್ ಜ್ಞಾನೋದಯ'ವೂ ಆಯ್ತು! (ಗಜಲ್ ನ ಕಲ್ಪನೆಯಿಂದ ಪ್ರೇರಿತ 'ಪದ್ಯ' ಎಂದಿರುವುದೆ ಸದ್ಯದ ಸೂಕ್ತ ವಿವರಣೆಯೇನೊ?) ಎರಡಕ್ಕೂ ಧನ್ಯವಾದಗಳು.
Submitted by ಗಣೇಶ Thu, 10/03/2013 - 23:21

In reply to by nageshamysore

ನಾಗೇಶರೆ, ಮೆಹದಿ ಹಸನ್,ಗುಲಾಂಅಲಿ, ಪಂಕಜ್ ಉಧಾಸ್, ಜಗ್‌ಜೀತ್ ಸಿಂಗ್..ರ ಗಜಲ್‌ಗಳ ಕ್ಯಾಸೆಟ್ ದಿನಾ ಕೇಳುತ್ತಿದ್ದೆ...ಒಂದು ಕಾಲದಲ್ಲಿ. ಈಗ ಅಪರೂಪಕ್ಕೊಮ್ಮೆ ಕೇಳುತ್ತಿರುವೆ. ಕನ್ನಡದ ಭಾವಗೀತೆಗಳಂತೆ ಇದು "ಬಾರ್ ಗೀತೆ" ಅನ್ನುತ್ತಿದ್ದೆ. :) mmshaikರ ಗಜಲ್‌ಗೆ ರಾಜೇಂದ್ರಕುಮಾರರ ಪ್ರತಿಕ್ರಿಯೆ(ಮೇಲಿನ ಕೊಂಡಿಯಲ್ಲಿದೆ) ನೋಡಿದಾಗ ಆಶ್ಚರ್ಯವಾಯಿತು. ಇದಕ್ಕೂ ರೂಲ್ಸ್‌ಗಳಿವೆ ಎಂದು ಗೊತ್ತಾಗಿದ್ದು ಆಗಲೆ! ೧೯೯೦ರಲ್ಲಿ ತಾವು ಬರೆದ ಕವನವಿದು..ಆ ವಿರಹ, ಯಾತನೆ, ಯಾಚನೆ, ಶರಾಬು, ಸಾಕಿ ಎಲ್ಲಾ ಇರುವಾಗ ನನ್ನ ಪಾಲಿಗೆ ಇದು ಗಜಲ್ಲೇ! ಕ್ರಮ ಪ್ರಕಾರ ಆಡುವ ಡಿಫೆನ್ಸ್, ಸ್ಕ್ವೇರ್ ಕಟ್‌‍ಗಿಂತ ಎತ್ತಿ ಬಾರಿಸಿದ ಸಿಕ್ಸರ್ ಮೆಚ್ಚುವ ಟ್ವೆಂಟಿ ಟ್ವೆಂಟಿ ಕಾಲವಿದು. ಲಲಿತಾ ಸಹಸ್ರನಾಮವನ್ನೇ ಕವನಕ್ಕೆ ಅಳವಡಿಸುವ ನಿಮಗೆ, ಈ ಕವನವನ್ನೇ ಗಜಲ್ ನಿಯಮಕ್ಕನುಸಾರ ಬದಲಾಯಿಸುವುದು ಕಷ್ಟವೇನಲ್ಲ. ಯಾಕೆ ಪ್ರಯತ್ನಿಸಬಾರದು?
Submitted by makara Wed, 10/02/2013 - 05:18

ನಾಗೇಶರೆ, ಇದಕ್ಕೆ ಬಹುಶಃ ಗಜಲ್ ಸ್ಟೈಲಿನ ವಿರಹಗೀತೆ ಎನ್ನಬಹುದು. ಕವಿತೆ ಯಾವ ವರ್ಗಕ್ಕೆ ಸೇರಿದರೇನು ಮನವನ್ನು ಮುದಗೊಳಿಸುವುದರಲ್ಲಿ ಎರಡು ಮಾತಿಲ್ಲ.
Submitted by nageshamysore Thu, 10/03/2013 - 19:53

In reply to by makara

ಶ್ರೀಧರರೆ, ಸರಿ ಬಿಡಿ, ಒಂದು ಬಟ್ಟಲು 'ಹಾಳು' ಶರಾಬು ಹಿಡಿದೆ , 'ಜೈ' ಎಂದು ಬಿಡೋಣ :-) (ಒಂದು ರೀತಿ ಈಗ ತಾನೆ ಮುಗಿದ ಮಗನ 'ಪರೀಕ್ಷಾ ಸಮಯದ' ಸೆಲೆಬ್ರೇಟ್ ಮಾಡಿದಂತೆಯೂ ಆಗುತ್ತದೆ!)   ಧನ್ಯವಾದಗಳೊಂದಿಗೆ ನಾಗೇಶ ಮೈಸೂರು