ಗಣೇಶನನ್ನು ಕುರಿತು....

ಗಣೇಶನನ್ನು ಕುರಿತು....

ಮೊನ್ನೆ ಅನಂತ ಚತುರ್ದಶಿಯಂದು ಟಿವಿ ಕಾರ್ಯಕ್ರಮವೊಂದರಲ್ಲಿ ಗಣೇಶನ ಹಬ್ಬವನ್ನು ತೋರಿಸುತ್ತಿದ್ದರು. ನನ್ನ ಹದಿ ವಯಸ್ಸಿನ ಮಗಳು ತನ್ನಷ್ಟಕ್ಕೆ ತಾನೇ ಎಂಬಂತೆ ಪ್ರಶ್ನೆಯೊಂದನ್ನು ಕೇಳಿದಳು. ಗಣೇಶನಿಗೆ ಆನೆಯ ಮುಖವೇಕೆ? ಒಂದಲ್ಲ ಒಂದು ದಿನ ಈ ಪ್ರಶ್ನೆ, ಅನೇಕ ವಿಚಾರವಂತರನ್ನು ಕಾಡಿದೆ ಅಲ್ಲವೇ? ಆನೆಯ ಮುಖ, ಮನುಷ್ಯನ ಬೊಜ್ಜು ದೇಹ, ಒಂದು ವಿಚಿತ್ರ ಸಂಯೋಜನೆ ಅಲ್ಲವೇ? ಚಿಕ್ಕಂದಿನಲ್ಲಿ ನಾವು ಕೇಳಿದ ಪುರಾಣದ ಗಣೇಶನ ಕಥೆಯಲ್ಲಿ, ಪಾರ್ವತಿ ಗಣೇಶನನ್ನು ಹಿಟ್ಟಿನಿಂದ ಮಾಡಿ, ಅವನನ್ನು ಮನೆಬಾಗಿಲು ಕಾಯುವಂತೆ ಆಜ್ಞಾಪಿಸಿ, ತಾನು ಸ್ನಾನಕ್ಕೆ ಹೋದಾಗ, ಶಿವ ಬಂದು ತನ್ನನ್ನು ಒಳಗೆ ಬಿಡದ ಗಣೇಶನ ತಲೆ ಕಡಿದು ಹಾಕಿದ್ದು, ಮತ್ತು ನಂತರ ಪಾರ್ವತಿಯಿಂದ ನಿಜ ಸಂಗತಿ ತಿಳಿದು,ಉತ್ತರ ದಿಕ್ಕಿಗೆ ಮುಖ ಮಾಡಿ ಮಲಗಿದ್ದ ಆನೆಯೊಂದರ ತಲೆಯನ್ನು ತಂದು ಗಣೇಶನಿಗೆ ಹಚ್ಚಿ ಆತನಲ್ಲಿ ಜೀವ ತರಿಸಿದ ಕಥೆ, ಅಂದು ನಮಗೆ ತೃಪ್ತಿ ಕೊಟ್ಟಿರಬಹುದು. ಆದರೆ ಆ ಕಥೆ ನಮ್ಮ ಇಂದಿನ ಆಧುನಿಕ ಯುಗದ ಮಕ್ಕಳ ವೈಜ್ಞಾನಿಕ ಮನೋಭಾವನೆಗೆ ಅಪ್ಯಾಯಮಾನವಾಗಬಲ್ಲದೇ? ಅದರಲ್ಲೂ ನಮ್ಮ ಸಂಸ್ಕೃತಿಯ ಇಂತಹ ವೈಶಿಷ್ಟ್ಯಗಳ ಬಗ್ಗೆ, ಹೊರದೇಶದಲ್ಲಿ ಬೆಳೆದ ಮಕ್ಕಳ ಗಲಿಬಿಲಿಯಂತೂ ಅನುಭವಿಸಿದರಿಗೇ ಗೊತ್ತು.

ಈ ಅವಕಾಶವನ್ನು ಅಲ್ಲಿಗೇ ಬಿಡಬಾರದು ಎಂದುಕೊಂಡು, ನಾನು ಸ್ವಲ್ಪ ವಿಷಯ ಸಂಗ್ರಹ ಮಾಡತೊಡಗಿದೆ. ನನ್ನ ಮುಖ್ಯ ಗಮನವಿದ್ದದ್ದು ಗಣೇಶ ಎಂಬ ಆಕರ್ಷಕ ಆಕಾರದ ದೇವರು ಯಾವ ಸದ್ಗುಣಗಳನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತಾನೆ ಎನ್ನುವುದರ ಮೇಲೆ. ಆಗ ಗಣೇಶನ ಆಕಾರವನ್ನು ಕುರಿತು ಅನೇಕ ವ್ಯಾಖ್ಯಾನಗಳಿರುವುದು ಗೊತ್ತಾಯಿತು. ನನಗೆ ಹಿಡಿಸಿದ ವ್ಯಾಖ್ಯಾನವನ್ನು ಇಲ್ಲಿ ಸ್ವಲ್ಪ ಮಟ್ಟಿಗೆ ವಿಷದೀಕರಿಸಿದ್ದೇನೆ.

೧. ಆನೆ ಪ್ರಾಣಿಗಳಲ್ಲೆಲ್ಲಾ ತುಂಬಾ ಜಾಣ, ಸೌಮ್ಯ, ಶಕ್ತಿಶಾಲಿ ಮತ್ತು ತಿಳುವಳಿಕೆಯುಳ್ಳದ್ದು. ಆನೆ ತನಗೆ ಬರುವ ಅಡೆತಡೆಗಳಿಂದ ಹಿಂಜರಿಯುವುದಿಲ್ಲ. ಅದರ ಬದಲು ತನ್ನ ಶಕ್ತಿಯಿಂದ ಎಲ್ಲ ಅಡೆತಡೆಗಳನ್ನು ಅನಾಮತ್ತಾಗಿ ಕಿತ್ತೆಸೆಯುತ್ತದೆ.  ಗಣೇಶನ ಆನೆಯ ಮುಖ ನಮಗೆ ಆನೆಯ ಈ ಗುಣಗಳನ್ನು ನೆನಪಿಸುತ್ತದೆ. ಮನುಷ್ಯನನ್ನು ಆನೆಯಂತೆ ಸೌಮ್ಯ ಸ್ವಭಾವ, ಜಾಣತನ ಮತ್ತು ಶಕ್ತಿಶಾಲಿಯನ್ನಾಗಿಸಲು ಪ್ರೇರೇಪಿಸುತ್ತದೆ. ಆದುದರಿಂದ ಆನೆಯ ಮುಖ ಜ್ಞಾನ ಶಕ್ತಿ ಮತ್ತು ಕರ್ಮ ಶಕ್ತಿಗಳ ಬೆಳವಣಿಗೆಗೆ ಇಂಬುಕೊಡುತ್ತದೆ. ನಮ್ಮನ್ನು ನಮ್ಮ ಬುದ್ಧಿಯನ್ನು ಚುರುಕುಗೊಳಿಸಿ ನಮಗೆ ಅಡ್ಡ ಬರುವ ಎಲ್ಲ ಅಡೆ ತಡೆಗಳನ್ನು ಯಶಸ್ವಿಯಾಗಿ ಎದುರಿಸಲು ಪ್ರೋತ್ಸಾಹಿಸುತ್ತದೆ, ಗಣೇಶನ ರಮಣೀಯ ಮುಖ.

೨. ಗಣೇಶನ ಸಣ್ಣ ಕಣ್ಣುಗಳು ಏಕಾಗ್ರತೆಯನ್ನು, ದೊಡ್ಡ ಕಿವಿಗಳು ಸಮಚಿತ್ತದಿಂದ ಇತರರು ಹೇಳುವುದನ್ನು ಕೇಳುವ ಗುಣವನ್ನು ಮತ್ತು ಸೊಂಡಿಲು ಸಾಮರ್ಥ್ಯವನ್ನು ಪ್ರತಿನಿಧಿಸುತ್ತವೆ. ಆತನ ಒಂದೇ ದಂತ, ಒಳ್ಳೆಯದನ್ನು ಇಟ್ಟುಕೊಂಡು ಕೆಟ್ಟದನ್ನು ಬಿಟ್ಟು ಬಿಡುವುದನ್ನು ಪ್ರತಿನಿಧಿಸುತ್ತದೆ.

೩. ಗಣೇಶನ ದೊಡ್ಡ ಹೊಟ್ಟೆ ಉದಾರತನವನ್ನು ಸಂಕೇತಿಸಿದರೆ, ಗಣೇಶನ ಒಂದು ಹಸ್ತ ಅಭಯಪ್ರದಾನ ಮಾಡುತ್ತದೆ. ಗಣೇಶ ಹಿಡಿದ ಅಂಕುಶ ನಮ್ಮನ್ನು ಕಟ್ಟಿಹಾಕುವ ಋಣಾತ್ಮಕ ಬಂಧಗಳಿಂದ ಮುಕ್ತಗೊಳಿಸಿ ಪ್ರಬುದ್ಧತೆಯತ್ತ ಸಾಗಲು ಪ್ರೇರೇಪಿಸುತ್ತದೆ ಮತ್ತು ಆತ ಮತ್ತೊಂದು ಕೈಯಲ್ಲಿ ಹಿಡಿದ ಪಾಶ ನಮ್ಮನ್ನು ಅಂಕೆಯಲ್ಲಿರಲು ಎಚ್ಚರಿಸುತ್ತದೆ.

ಈ ಬಗೆಯ ಸಾಂಕೇತಿಕ ಅರ್ಥವನ್ನು ಹೊಂದಿದ ದಿವ್ಯತೆಯ ಪ್ರತೀಕ ಗಣೇಶ. ಗಣೇಶನ ಈ ದಿವ್ಯ ಛಾಯೆಯನ್ನು ಶತಮಾನಗಳಿಂದ ಪೂಜನೀಯ ದೃಷ್ಟಿಯಿಂದಲೇ ನೋಡುತ್ತ ಬಂದಿದ್ದೇವೆ. ತಲೆ ತಲಾಂತರಗಳಿಂದ ಯಾವುದೇ ವರ್ಗಭೇಧವಿಲ್ಲದೇ ಗಣೇಶ ಎಲ್ಲರಿಂದಲೂ ಪೂಜೆಗೊಳ್ಳುತ್ತಾ ಬಂದಿದ್ದಾನೆ. ಭಾರತದಲ್ಲಿಯ ಅನೇಕ ವರ್ಗ, ಜಾತಿ ಮತ್ತು ಧರ್ಮಗಳ ಜನಗಳಿಗೆ ಯಾವಾಗಲೂ ಪೂಜನೀಯ ದೇವರೇ ಹೌದು. ಭಾರತದಲ್ಲಿ ಮಾತ್ರವಲ್ಲ, ಗಣೇಶ ಭಾರತದಿಂದ ಹೊರ ನುಗ್ಗಿ ಅನೇಕ ದಕ್ಷಿಣ ಪೂರ್ವ ದೇಶಗಳಲ್ಲಿ ಕೂಡ ಜನಪ್ರಿಯ ದೇವರಾಗಿ ಪರಿವರ್ತನೆಗೊಂಡಿದ್ದಾನೆ. ಸಿಂಗಪುರದಲ್ಲಿರುವ ನಾನು, ಗಣೇಶ ಮಯನ್ಮಾರ್ (ಬರ್ಮಾ), ಥೈಲ್ಯಾಂಡ್, ಕಾಂಬೋಡಿಯ ಮತ್ತು ಇಂಡೋನೇಶಿಯಾಗಳಲ್ಲಿ ಪೂಜಿಸಲ್ಪಡುವನು ಎಂಬುವುದನ್ನು ಅರಿತಿದ್ದೇನೆ. ಅದರಲ್ಲಿಯೂ ಥೈಲ್ಯಾಂಡ್‍ಗೆ ಹೋದಾಗಲೆಲ್ಲ, ಅಲ್ಲಿನ ಗುಡಿಗಳಲ್ಲಿ ಗಣೇಶನ ಮೂರ್ತಿಯನ್ನು ನೋಡಿ ಅಚ್ಚರಿಗೊಂಡಿದ್ದೇನೆ. ಇತ್ತೀಚೆಗೆ ನನಗೆ ಜಪಾನಿನಲ್ಲಿ ಕೂಡ ಗಣೇಶ ಆರನೇ ಶತಮಾನದಿಂದ ಪೂಜಿಸಲ್ಪಡುತ್ತಿದ್ದಾನೆ ಎಂಬುದು ತಿಳಿದು ಬಂದಿತು. ಜಪಾನಿಗೆ ಗಣೇಶ ಪ್ರವೇಶಿಸಿದ್ದು ಟಿಬೆಟ್ ಮತ್ತು ಚೀನಗಳ ಮೂಲಕ. ಗಣೇಶನಿಗೆ ಹಿಂದುಗಳು ಮಾತ್ರವಲ್ಲ, ಜೈನರು, ಬೌದ್ಧರೂ ಕೂಡ ಶತಮಾನಗಳಿಂದ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ತಿಳಿದು ಬರುತ್ತದೆ. ಆದುದರಿಂದ ಗಣೇಶ ಯಾವುದೇ ಮತೀಯ ಮತ್ತು ಪ್ರಾದೇಶಿಕ ಎಲ್ಲೆಗಳನ್ನು ಮೀರಿದ ದೈವೀ ಸಂಕೇತ.

ಇಂದಿನ ವೈಜ್ಞಾನಿಕ ಯುಗದಲ್ಲಿ, ನಮ್ಮ ಸಂಸ್ಕೃತಿಯ ತಾತ್ವಿಕ ನೆಲೆಗಟ್ಟನ್ನು ನಾವು ಬಲಪಡಿಸಲು ಶ್ರಮಿಸಬೇಕಾಗಿದೆಯೇ ಹೊರತು, ಅಂಧಾಚರಣೆಗಳನ್ನಲ್ಲ.  ಆದುದರಿಂದ ಗಣೇಶನ ಪೂಜಕರಾದ ನಾವು ಕೇವಲ ಗಣೇಶನ ದೈವೀ ಆಕೃತಿಗೆ ಮಾತ್ರ ಪೂಜೆಯನ್ನು ಸಲ್ಲಿಸದೇ, ಅವನ ಸಾಂಕೇತಿಕ ಅರ್ಥಕ್ಕೆ ಹೆಚ್ಚು ಮಹತ್ವವನ್ನು ಕೊಡುವದು ಇಂದು ಮುಖ್ಯವಾಗಿದೆ.  ಗಣೇಶ ಪ್ರತಿನಿಧಿಸುವ ಸದ್ಗುಣಗಳ ಜೊತೆಗೆ ನಮ್ಮನ್ನು ನಾವು ಗುರುತಿಸಿಕೊಂಡರೆ ಮತ್ತು ಅದರ ಬಗ್ಗೆ ತಿಳಿಹೇಳಿದರೆ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಈ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಕೇತವನ್ನು ವೈಜ್ಞಾನಿಕವಾಗಿ ವರ್ಗಾಯಿಸಬಹುದು. ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ನಂಬಿಕೆಗಳು ಮತ್ತು ಆಚರಣೆಗಳಲ್ಲಿ ಕೇವಲ ಅಂಧ ಶೃದ್ಧೆಗಳು ಮಾತ್ರ ಇಲ್ಲ, ಅನೇಕ ಆಚರಣೆಗಳಲ್ಲಿ ಮಹತ್ವವಾದ ಸಾಂಕೇತಿಕ ಅರ್ಥವಿದೆ ಎಂಬುದು ಮನದಟ್ಟಾದಾಗ ನಮ್ಮ ಮುಂದಿನ ಪೀಳಿಗೆ ಅದನ್ನು ನಮ್ಮಷ್ಟೇ ಶೃದ್ಧೆಯಿಂದ ಸ್ವಾಗತಿಸುತ್ತದೆ ಎಂಬುದು ನನ್ನ ಅಭಿಮತ.

ಅಷ್ಟೊಂದು ಧನಾತ್ಮಕ ಅಂಶಗಳನ್ನೊಳಗೊಂಡ ದೈವೀ ಸಂಕೇತವಾದರೂ, ಇತ್ತೀಚೆಗೆ ನಮ್ಮ ಸ್ವಯಂಘೋಷಿತ ಬುದ್ಧಿಜೀವಿಗಳ ಲಕ್ಷ್ಯ ಈ ಸಾತ್ವಿಕ ಗಣಪನತ್ತ ತಿರುಗಿದೆ. ನಮ್ಮ ಕರ್ಮ ಭೂಮಿಯಲ್ಲಿ ತನ್ನ ಪಾಡಿಗೆ ತಾನು, ಪ್ರಥಮ ಪೂಜೆಯನ್ನು ಪಡೆಯುತ್ತ, ತನ್ನನ್ನು ನಂಬಿದ ಜನರನ್ನು ಅಪವಾದರಹಿತರನ್ನಾಗಿಸಲು ಅನುಗ್ರಹಿಸುತ್ತಿದ್ದ ಈ ಅಪವಾದಹಾರಕ ಗಣೇಶನ ಮೇಲೆಯೇ ಈಗ ಅಪವಾದಗಳು ಎರಗಿವೆ. ಆತನ ಉಪಾಸಕರಲ್ಲರೂ, "ಇದು ಕಲಿಯುಗ ಸ್ವಾಮಿ! ಏನು ತಾನೇ ಮಾಡಲಾಗುತ್ತೆ?" ಎಂದು ನಿಟ್ಟುಸಿರು ಬಿಡುವಂತಾಗಿದೆ. ಮಹತ್ವದ ಸಾಂಕೇತಿಕ ಅರ್ಥದ ಗಣೇಶನ ಮೇಲಿನ ಇತ್ತೀಚಿನ ಅಪಶೃತಿ, ನಮ್ಮ ಸಂಸ್ಕೃತಿಯ ಮೇಲೆ, ಸಂಶೋಧನೆಯ ಹೆಸರಿನಲ್ಲಿ ಮತ್ತೊಂದು ಉದ್ದೇಶಪೂರ್ವಕ ಪ್ರಹಾರವೋ ಅಥವಾ ಸುಲಭದಲ್ಲಿ ಪ್ರಚಾರ ಗಿಟ್ಟಿಸಲು ಮಾಡಿದ ಪ್ರಚಾರಪ್ರಿಯರ ಹಾಹಾಕಾರವೋ ಎನ್ನುವುದು ಒಂದು ಪ್ರಶ್ನೆ. ಅದೇನೇ ಇದ್ದರೂ ಈ ಪ್ರಚಾರಪ್ರಿಯರ ಅರಚಾಟಗಳಿಗೆ ಮತ್ತು ಅವರ ದುರುದ್ದೇಶಪೂರ್ವಕ ವಿಕೃತ ಸಂಶೋಧನೆಗಳಿಗೆ ಅಷ್ಟೊಂದು ಮಹತ್ವ ನೀಡದೇ, ಅವರನ್ನು ಉಪೇಕ್ಷಿಸುವದೇ ಒಳ್ಳೆಯ ಮದ್ದು ಎಂಬುದು ನನ್ನ ಭಾವನೆ. ಅವರ ಈ ಕೃತಿಗಳಿಗೆ ಹೆಚ್ಚು ಗಮನವಿತ್ತರೆ ಮತ್ತು ಪ್ರತಿಭಟನೆ ತೋರಿದರೆ, ಅವರಿಗೆ ಹೆಚ್ಚಿನ ಪ್ರಚಾರವನ್ನು ಕೊಟ್ಟಂತಾಗುತ್ತದೆ. ಅವರಿಗೆ ಬೇಕಾದದ್ದೂ ಅದೇ ತಾನೆ? ನಾವೆಲ್ಲ ಸೇರಿ, ನಮ್ಮ ಗಣಪ ಎಂಬ ದಿವ್ಯತೆಯ ಸಂಕೇತದ ಮಹತ್ವವನ್ನು ನಮ್ಮ ಸಂಸ್ಕೃತಿಯ ಉತ್ತರಾಧಿಕಾರಿಗಳಾದ ನಮ್ಮ ಮುಂದಿನ ಪೀಳಿಗೆಗೆ ಸರಿಯಾಗಿ ತಿಳಿಸಿಕೊಟ್ಟರೆ ಸಾಕು. ಅವರದನ್ನು ಭವಿಷ್ಯದೆಡೆಗೆ ಭದ್ರವಾಗಿ ಕರೆದೊಯ್ಯುತ್ತಾರೆ ಎಂಬುದು ನನ್ನ ನಂಬಿಕೆ.

ಚಿತ್ರ ಕೃಪೆ : http://clip-art-free-clipart.blogspot.sg/

Comments

Submitted by ಗಣೇಶ Tue, 10/08/2013 - 00:55

ಗಣೇಶನ ಆನೆಮುಖ, ದೊಡ್ಡಹೊಟ್ಟೆ..ಇತ್ಯಾದಿಗಳ ಸಾಂಕೇತಿಕ ಅರ್ಥದೊಂದಿಗೆ ಲೇಖನ ಚೆನ್ನಾಗಿದೆ.
Submitted by Vasant Kulkarni Tue, 10/08/2013 - 06:59

ತುಂಬಾ ವಂದನೆಗಳು ಗಣೇಶ್ ಅವರೆ. ನಮ್ಮ ಸಂಸ್ಕೃತಿಯನ್ನು ನಾವೇ ಆಗಾಗ್ಗೆ reinvent ಮಾಡ್ತಾ ಇರಬೇಕು ಅಲ್ಲವೇ? ಅದರಿಂದ ಹೊಸ ಪರಿಪ್ರೇಕ್ಷದಲ್ಲಿ ಹೊಸ ವ್ಯಾಖ್ಯಾನಗಳು ಹೊರಹೊಮ್ಮಿ ಅದನ್ನು ಇನ್ನಷ್ಟು ಶ್ರೀಮಂತಗೊಳಿಸಬಹುದು.
Submitted by nageshamysore Tue, 10/08/2013 - 08:49

ವಸಂತರೆ, ಗಣೇಶತ್ವದ ಪ್ರತೀಕ, ಸಾಂಕೇತಿಕತೆ ಹೇಳಿ, ಬರೆದು ಮುಗಿಸಲಾಗದಷ್ಟು ಅನಂತ. ಲೇಖನ ಅದನ್ನ ಚೆನ್ನಾಗಿ ಬಿಂಬಿಸಿದೆ.