೧೩೫. ಲಲಿತಾ ಸಹಸ್ರನಾಮ ೫೭೫ರಿಂದ ೫೭೭ನೇ ನಾಮಗಳ ವಿವರಣೆ

೧೩೫. ಲಲಿತಾ ಸಹಸ್ರನಾಮ ೫೭೫ರಿಂದ ೫೭೭ನೇ ನಾಮಗಳ ವಿವರಣೆ

                                                                                                                        ಲಲಿತಾ ಸಹಸ್ರನಾಮ ೫೭೫ - ೫೭೭

Mādhvīpānālasā माध्वीपानालसा (575)

೫೭೫. ಮಾಧ್ವೀಪಾನಾಲಸಾ

           ದೇವಿಯು ಉನ್ಮತ್ತ ಸ್ಥಿತಿಯಲ್ಲಿದ್ದಾಳೆ, ಏಕೆಂದರೆ ಆಕೆಯು ಮಧುವಿನಿಂದ ಮಾಡಲ್ಪಟ್ಟ ಮದ್ಯವನ್ನು ಸೇವಿಸಿದ್ದಾಳೆ (ಕೆಲವೊಂದು ಗ್ರಂಥಗಳು ಈ ಮದ್ಯವು ದ್ರಾಕ್ಷಿಯ ಸಾರ ಮತ್ತು ಜೇನು ತುಪ್ಪದ ಮಿಶ್ರಣದಿಂದ ತಯಾರಿಸಲ್ಪಟ್ಟಿದೆ ಎಂದು ಹೇಳುತ್ತವೆ). ಈ ನಾಮದ ಗೂಡಾರ್ಥವೇನೆಂದರೆ ದೇವಿಯು ಸಮಾಧಿ ಸ್ಥಿತಿಯಲ್ಲಿದ್ದು ಪರಮಾನಂದದ ಸ್ಥಿತಿಯನ್ನು ಆಸ್ವಾದಿಸುತ್ತಿದ್ದಾಳೆ ಎನ್ನುವುದಾಗಿದೆ. ದೇವಿಯು ಯಾವಾಗಲೂ ತನ್ನ ಸೃಷ್ಟಿಕರ್ತನಾದ ಶಿವನನ್ನು ಕುರಿತು ಧ್ಯಾನಿಸುತ್ತಾಳೆ. ಕುಂಡಲಿನೀ ಧ್ಯಾನದ ಉನ್ನತ ಹಂತಗಳಲ್ಲಿ ಜೇನಿನಂತಹ ದ್ರವವು (ಸಾಮಾನ್ಯವಾಗಿ ಅದನ್ನು ಅಮೃತವೆನ್ನುತ್ತಾರೆ) ಗಂಟಲಿನೊಳಗೆ ಹನಿಯುತ್ತದೆ, ಇದನ್ನು ಮಧು ಎನ್ನುತ್ತಾರೆ ಏಕೆಂದರೆ ಅದರ ರುಚಿ ಮತ್ತು ಸಾಂದ್ರತೆಯು ಜೇನುತುಪ್ಪವನ್ನು ಹೋಲುತ್ತದೆ.

          ಮಧುವನ್ನು ಆಧ್ಯಾತ್ಮಿಕ ಉನ್ಮತ್ತತೆಯನ್ನು ಉಂಟು ಮಾಡುವ ದ್ರವವೆಂದು ಕರೆಯುತ್ತಾರೆ ಏಕೆಂದರೆ ಅದರಲ್ಲಿ ಎಂಟು ವಿಧವಾದ ಉನ್ಮತ್ತತೆಯನ್ನು ಉಂಟು ಮಾಡುವ ಗುಣಗಳಿವೆ ಎನ್ನಲಾಗಿದೆ. ಅಮೃತದ ಸ್ರವಿಸುವಿಕೆಯು ಪರಮಾನಂದದ ಸ್ಥಿತಿಯಲ್ಲಿ ಉಂಟಾಗುತ್ತದೆ, ಈ ಹಂತದಲ್ಲಿ ಒಬ್ಬ ವ್ಯಕ್ತಿಯು ಸ್ಪೃಹೆ (ಬಾಹ್ಯ ಪ್ರಜ್ಞೆ) ಇಲ್ಲದವನಾಗುತ್ತಾನೆ, ಏಕೆಂದರೆ ಅವನ ಸಂಪೂರ್ಣ ಪ್ರಜ್ಞೆಯು ಬ್ರಹ್ಮದ ಮೇಲೆ ಕೇಂದ್ರೀಕೃತವಾಗಿರುತ್ತದೆ. ದೇವಿಯು ನಿತ್ಯ ಸಂತೋಷದ ಈ ಪರಮಾನಂದದ ಸ್ಥಿತಿಯಲ್ಲಿರುತ್ತಾಳೆಂದು ಹೇಳಲಾಗುತ್ತದೆ.

          ಈ ನಾಮವನ್ನು ಮೇಲೆ ತಿಳಿಸಿದಂತೆ ವ್ಯಾಖ್ಯಾನಿಸಿದರೂ ಸಹ, ವಾಸ್ತವವಾಗಿ ದೇವಿಯು ಪರಮಾನಂದಕ್ಕೆ ಕಾರಣಳಾಗಿದ್ದಾಳೆ. ದೇವಿಯ ಕುರಿತ ಜ್ಞಾನವನ್ನು ಪಡೆಯದೆ, ಪರಮಾನಂದವನ್ನು ಹೊಂದಲಾಗುವುದಿಲ್ಲ. ಈ ನಾಮವು ಮುಂಚಿನ ಚರ್ಚೆಗಳಲ್ಲಿ ವಿವರಿಸಿದಂತೆ ದೇವಿಯು ತನ್ನ ಬಳಿ ಇರುವುದನ್ನು ನಮಗೆ ಪ್ರಸಾದಿಸುತ್ತಾಳೆ ಎನ್ನುವುದನ್ನು ಮತ್ತೊಮ್ಮೆ ದೃಢ ಪಡಿಸುತ್ತದೆ. ದೇವಿಯು ಎಲ್ಲವನ್ನೂ ಹೊಂದಿದ್ದಾಳೆ ಮತ್ತು ಆಕೆಯು ಏನನ್ನಾದರೂ ಕೊಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾಳೆ.

Mattā मत्ता (576)

೫೭೬. ಮತ್ತಾ

           ಹಿಂದಿನ ನಾಮದಲ್ಲಿ ಉಲ್ಲೇಖಿಸಿದ ಮದ್ಯವನ್ನು ಸೇವಿಸಿರುವುದರಿಂದ ದೇವಿಯು ಉನ್ಮತ್ತ ಅಥವಾ ಮತ್ತೇರಿದ ಸ್ಥಿತಿಯಲ್ಲಿದ್ದಾಳೆ. ಈ ಉನ್ಮತ್ತತೆಯು ಹಿಂದಿನ ನಾಮದಲ್ಲಿ ಕೊಟ್ಟ ಕಾರಣಗಳಿಂದಾಗಿದೆ. ದೇವಿಯು ಶಿವನ ಅಹಂಕಾರವನ್ನು ಪ್ರತಿನಿಧಿಸುತ್ತಾಳಾದ್ದರಿಂದ ಮದೋನ್ಮತ್ತಳಂತೆ ಕಾಣಿಸುತ್ತಾಳೆ ಎಂದು ಹೇಳಲಾಗುತ್ತದೆ. ದೇವಿಯು ಆತ್ಮರತಿಯ (ತನ್ನಲ್ಲಿಯೇ ಸಂತೋಷವನ್ನು ಕಾಣುವ) ಸ್ಥಿತಿಯಲ್ಲಿ ಇರುವುದರಿಂದ ಆಕೆಯು ಉನ್ಮತ್ತಳಂತೆ ಕಾಣಿಸುತ್ತಾಳೆ.

           ಈ ಎರಡೂ ನಾಮಗಳು ಬಹುಶಃ ಪರಮಾನಂದದ ಸ್ಥಿತಿಯನ್ನು ಹಾಗೂ ಅದರ ಮಹತ್ವವನ್ನು ವಿವರಿಸಲು ಪ್ರಯತ್ನಿಸುತ್ತವೆ ಎಂದು ಕಾಣುತ್ತದೆ. ಪರಮಾನಂದವನ್ನು ಕುಂಡಲಿನೀ ಧ್ಯಾನದ ಸಾಧನೆಯ ಮೂಲಕ ಹಂತಹಂತವಾಗಿ ಸಾಗುವುದರ ಮೂಲಕ ಪಡೆಯಬಹುದು ಅಥವಾ ಆತ್ಮರತಿಯಲ್ಲಿ ಮುಳುಗಿ ಆತ್ಮಾವಲೋಕನ ಮಾಡಿಕೊ‌ಳ್ಳುತ್ತಾ ಹೊಂದಬಹುದು.

Mātṛkā-varṇa-rūpiṇī मातृका-वर्ण-रूपिणी (577)

೫೭೭. ಮಾತೃಕಾ-ವರ್ಣ-ರೂಪಿಣೀ

          ದೇವಿಯು ಮಾತೃಕೆಗಳೆಂದು ಕರೆಯಲಾಗುವ ಸಂಸ್ಕೃತದ ೫೧ ಅಕ್ಷರಗಳ ರೂಪದಲ್ಲಿದ್ದಾಳೆ. ಈ ಐವತ್ತೊಂದು ಅಕ್ಷರಗಳನ್ನು ಆರು ಗುಂಪುಗಳಾಗಿ ವಿಂಗಡಿಸಿ ಅವನ್ನು ಮೂಲಾಧಾರದಿಂದ ಪ್ರಾರಂಭಿಸಿ ಆಜ್ಞಾ ಚಕ್ರಗಳಲ್ಲಿ ಪೂಜಿಸಲಾಗುತ್ತದೆ. ಈ ಅಕ್ಷರಗಳಿಗೆ ವಿವಿಧ ಬಣ್ಣಗಳಿದ್ದು ಅವು ಆಕಾಶಕಾಯಗಳ ಅಧ್ಯಯನದೊಂದಿಗೆ ಅನುಬಂಧ ಹೊಂದಿವೆ ಎನ್ನಲಾಗುತ್ತದೆ. ಶಿವ ಮತ್ತು ಶಕ್ತಿಯರನ್ನು ವ್ಯಂಜನ ಮತ್ತು ಸ್ವರಗಳಿಗೆ ಹೋಲಿಸಲಾಗಿದೆ. ಸ್ವರಗಳು ಯಾವಾಗಲೂ ಸಕ್ರಿಯವಾಗಿದ್ದು ಕ್ರಿಯಾಶೀಲತೆಯನ್ನು ಹೊಂದಿರುವುದರಿಂದ ಅವುಗಳನ್ನು ’ಶಕ್ತಿ’ಯೊಂದಿಗೆ ಹೋಲಿಸಲಾಗುತ್ತದೆ ಮತ್ತು ವ್ಯಂಜನಗಳನ್ನು ಶಿವನಿಗೆ ಹೋಲಿಸಲಾಗುತ್ತದೆ. ಶಿವ-ಶಕ್ತಿಯರ ಸಂಯೋಗವಿಲ್ಲದಿದ್ದರೆ ಈ ವಿಶ್ವದ ಅಸ್ತಿತ್ವವಿರದು, ಏಕೆಂದರೆ ಅವುಗಳು ಬ್ರಹ್ಮದ ಎರಡು ವಿವಿಧ ಅಂಶಗಳಾಗಿವೆ. ಅದೇ ವಿಧವಾಗಿ ಸ್ವರ-ವ್ಯಂಜನಗಳ ಸಂಯೋಗವಿಲ್ಲದಿದ್ದರೆ ಶಬ್ದವು ಅಸ್ತಿತ್ವದಲ್ಲಿರದು. ಶಬ್ದವು ‘ಶಬ್ದ ಬ್ರಹ್ಮ’ದಿಂದ ಹೊರಹೊಮ್ಮಿದರೆ ಈ ವಿಶ್ವವು ಬ್ರಹ್ಮದಿಂದ ಹೊರಹೊಮ್ಮುತ್ತದೆ. ದೇವಿಯು ಶಬ್ದ ಬ್ರಹ್ಮವಾಗಿದ್ದಾಳೆ.

        ’ಅಕ್ಷ-ಮಾಲಾದಿ-ಧಾರಾ’ದಲ್ಲಿ (ನಾಮ ೪೮೯) ಚರ್ಚಿಸಿದಂತೆ ದೇವಿಯು ಐವತ್ತೊಂದು ಅಕ್ಷರಗಳಿಂದ ಮಾಡಿದ ಮಾಲೆಯನ್ನು ಧರಿಸಿರುತ್ತಾಳೆ. ಇನ್ನೊಂದು ವ್ಯಾಖ್ಯಾನದಂತೆ ದೇವಿಯು ಎಲ್ಲಾ ಅಕ್ಷರಗಳ ಮಾತೆಯಾಗಿದ್ದಾಳೆ (ಮಾತೃಕಾ=ಮಾತೆ, ಅಕ್ಷರ-ರೂಪಿಣೀ= ಎಲ್ಲಾ ಅಕ್ಷರಗಳನ್ನು ರೂಪಿಸುವವಳು). ಈ ಸಿದ್ಧಾಂತವು ದೇವಿಯು ಎಲ್ಲಾ ಅಕ್ಷರಗಳನ್ನು ಸೃಷ್ಟಿಸಿದವಳೆಂದು ನಿರೂಪಿಸಲು ಪ್ರಯತ್ನಿಸುತ್ತದೆ. ಈ ಅಕ್ಷರಗಳು ಶ್ರೀ ಚಕ್ರದ ಬುನಾದಿ ಅಥವಾ ಅಡಿಪಾಯವಾಗಿವೆ. ಶ್ರೀ ಚಕ್ರವು ಮಾನವ ಶರೀರವೆಂದು ಪ್ರತಿಪಾದಿಸುವ ಸಿದ್ಧಾಂತವನ್ನಾಧರಿಸಿ ಈ ಅಕ್ಷರಗಳು ಮನುಷ್ಯನ ಅಸ್ತಿತ್ವದ ಅಡಿಪಾಯವನ್ನು ರೂಪಿಸುತ್ತವೆ ಎಂದು ಹೇಳಲಾಗಿದೆ. ಮಾನವರಿಗೂ ಮತ್ತು ಪ್ರಾಣಿಗಳಿಗೂ ವ್ಯತ್ಯಾಸವಿರುವುದು ಶಬ್ದದ ರಹಸ್ಯವನ್ನು ಭೇದಿಸುವುದು ಮತ್ತು ಶಬ್ದಾರ್ಥವನ್ನು ಅರಿಯುವುದರಲ್ಲಿ; ಇದು ಶಬ್ದ ಬ್ರಹ್ಮನಿಂದಾಗಿ ಸಾಧ್ಯವಾಗುತ್ತದೆ. ಮಾತೃಕೆಗಳನ್ನು (ಅಕ್ಷರಗಳನ್ನು) ಮತ್ತು ಶ್ರೀ ಚಕ್ರವನ್ನು ಒಂದೇ ಆಗಿ ಪರಿಗಣಿಸಿ ಧ್ಯಾನಿಸುವುದು ಶ್ರೀ ಚಕ್ರವನ್ನು ಪೂಜಿಸುವ ಒಂದು ವಿಧಾನವಾಗಿದೆ, ಇದನ್ನೇ ಕೈಲಾಸ ಪ್ರಸ್ತಾರ ಎಂದು ಕರೆಯಲಾಗುತ್ತದೆ. ಇವಲ್ಲದೇ ಇನ್ನೂ ಎರಡು ಪ್ರಸ್ತಾರಗಳಿವೆ. ಅವೆಂದರೆ ಮೇರು-ಪ್ರಸ್ತಾರ; ಇದರಲ್ಲಿ ತಿಥಿ-ನಿತ್ಯ ದೇವಿಗಳನ್ನು ಹಾಗು ಶ್ರೀ ಚಕ್ರವನ್ನು ಒಂದಾಗಿ ಭಾವಿಸಿ ಧ್ಯಾನಿಸಲಾಗುತ್ತದೆ ಮತ್ತು ಭೂ-ಪ್ರಸ್ತಾರ, ಇದರಲ್ಲಿ ಈ ಸಹಸ್ರನಾಮವನ್ನು ರಚಿಸಿದ ವಾಗ್ದೇವಿಯರು ಹಾಗು ಶ್ರೀ ಚಕ್ರವನ್ನು ಒಂದಾಗಿ ಭಾವಿಸಿ ಧ್ಯಾನಿಸುವುದು.   ಪ್ರಸ್ತಾರವೆಂದರೆ ಮೆಟ್ಟಿಲುಗಳ ಆರೋಹಣ. ಸಂಸ್ಕೃತ ಅಕ್ಷರಗಳ ಕುರಿತಾದ ಹೆಚ್ಚಿನ ವಿವರಗಳನ್ನು ೮೩೩ನೇ ನಾಮದಲ್ಲಿ ನೋಡೋಣ. 

                                                                                                                          ******

            ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM MEANING 575-577 http://www.manblunder.com/2010/01/lalitha-sahasranamam-meaning-575-577.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

Rating
Average: 5 (1 vote)

Comments

Submitted by nageshamysore Thu, 10/17/2013 - 17:26

ಶ್ರೀಧರರೆ, ೧೩೫. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯಸಾರ ಪರಿಷ್ಕರಣೆಗೆ ಸಿದ್ದ :-)
.
.
ಲಲಿತಾ ಸಹಸ್ರನಾಮ ೫೭೫ - ೫೭೭
________________________________
.
೫೭೫. ಮಾಧ್ವೀಪಾನಾಲಸಾ 
ಸಮಾಧಿಯ ಪರನಾನಂದ ಸ್ಥಿತಿ, ಮಧುವ ಆಸ್ವಾದಿಸುತೆ ಉನ್ಮತ್ತೆ ಜಗತೀ
ಸುರೆಯೇರಿಸಿದಂತೆ ಮದ, ಕುಂಡಲಿನೀ ತೆರೆದ ಪರಮಾನಂದಾಮೃತ ಶಕ್ತಿ
ಅಷ್ಟೊನ್ಮತ್ತತೆ ಗುಣ, ಬ್ರಹ್ಮದೆ ಲೀನ ಬಾಹ್ಯ ಪ್ರಜ್ಞೆಯರಿವಿಲ್ಲದಷ್ಟು ಸಂತಸ
ಜ್ಞಾನದಾಯಿನಿ ತನ್ನಲಿಹುದ ಕೊಟ್ಟು, ಪರಮಾನಂದ ಮಾಧ್ವೀಪಾನಾಲಸಾ ||
.
೫೭೬. ಮತ್ತಾ
ಪರಮಾನಂದ ಮಧು ಮದವೇರಿದ ಹೊತ್ತು, ಶಿವ ಸಾನಿಧ್ಯವೆ ದೇವಿ ಸಂಪತ್ತು
ಪ್ರತಿನಿಧಿಸಿ ಶಿವನ ಅಹಂಕಾರ, ಮದೋನ್ಮತ್ತ ಮತ್ತೇರಿದ ಆತ್ಮರತಿ ಸವಲತ್ತು
ಸ್ವಸಂತೋಷದ ಪರಮಾನಂದ ಕುಂಡಲಿನೀ ಧ್ಯಾನ ಸಾಧನೆ ಹಂತದೆ ಕೊಡುತ
ಅತ್ಮಾವಲೋಕನ ಉನ್ಮತ್ತತೆ ಹೊಂದುವ ಸಾಧಕನಿಗೆ ಜತೆಯಾಗಿರುತ ಮತ್ತಾ ||
.
೫೭೭. ಮಾತೃಕಾ-ವರ್ಣ-ರೂಪಿಣೀ
ಐವತ್ತೊಂದು ಸಂಸ್ಕೃತಾಕ್ಷರ ಮಾತೃಕೆ ರೂಪದಲಿಹಳು ದೇವಿ ಶ್ರೀ ಲಲಿತೆ
ಮೂಲಾಧಾರದಿಂದಾಜ್ಞಾಚಕ್ರದತನಕ, ಷಡ್ಸಮೂಹದೆ ಪೂಜಿಸುವ ಘನತೆ
ಕ್ರಿಯಾಶೀಲ ಸ್ವರವೆ ಶಕ್ತಿ, ಶಿವನಾಗಿ ವ್ಯಂಜನ ಸಂಯೋಗದಿಂದ ಶಬ್ದಬ್ರಹ್ಮ
ಸೃಷ್ಟಿಸೆಲ್ಲ ಅಕ್ಷರ ಧರಿಸಿ ಮಾಲೆ, ಮಾತೃಕಾವರ್ಣರೂಪಿಣೀ ಆಗಿಹ ಮರ್ಮ ||
.
ವರ್ಣಾಕ್ಷರವೆ ಶ್ರೀ ಚಕ್ರದ ಬುನಾದಿ, ಅಡಿಪಾಯದಂತೆ ಭದ್ರ ತಳಹದಿ
ಮನುಜ ಶರೀರ ಸಿದ್ದಾಂತದ ಶ್ರೀಚಕ್ರ, ಮಾನವನಸ್ತಿತ್ವಕೆ ಸಿಕ್ಕ ಸುನಿಧಿ
ಮಾತೃಕೆ ಜತೆಗೆ 'ಕೈಲಾಸ ಪ್ರಸ್ತಾರ', ತಿಥಿನಿತ್ಯದೇವಿ 'ಮೇರುಪ್ರಸ್ತಾರ'
ವಾಗ್ದೇವಿಯರ ಜತೆ 'ಭೂ ಪ್ರಸ್ತಾರ' ಮೆಟ್ಟಿಲ ಆರೋಹಣವಾಗಿ ಪ್ರಸ್ತಾರ ||
.
.
- ಧನ್ಯವಾದಗಳೊಂದಿಗೆ
    ನಾಗೇಶ ಮೈಸೂರು

ನಾಗೇಶರೆ,
ಎಂದಿನಂತೆ ನಿರಂತರ ಸಾಗುತ್ತಿರುವ ನಿಮ್ಮ ಕಾವ್ಯ ಸೇವೆಗೆ ನಮನಗಳು. ನಾನು ಇವನ್ನು ಆಗಾಗ್ಯೆ ನೋಡುತ್ತಿದ್ದರೂ ಸಹ ಇವನ್ನು ಪರಿಷ್ಕರಿಸಲಾಗುತ್ತಿಲ್ಲ. ಅದಕ್ಕೆ ಕ್ಷಮೆ ಇರಲಿ. ೧೦೦೦ದ ಸರಣಿಯವರೆಗಿನ ಅನುವಾದವು ಪೂರ್ಣಗೊಂಡಿದ್ದು ಅದರ ಪರಿಷ್ಕರಣೆಯಲ್ಲಿ ಸ್ವಲ್ಪ ಕಾರ್ಯನಿರತನಾಗಿರುವುದರಿಂದ ಈ ಕಡೆ ಗಮನ ಹರಸಲಾಗುತ್ತಿಲ್ಲ, ಅನ್ಯಥಾ ಭಾವಿಸಬೇಡಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಶ್ರೀಧರರೆ, ಮೊದಲ ಆದ್ಯತೆ ಸಹಸ್ರನಾಮವನ್ನು ಮುಗಿಸುವುದಕ್ಕೆ. ಅಲ್ಲಿಯತನಕ ಪರಿಷ್ಕರಣೆಯ ಬಗ್ಗೆ ಚಿಂತೆ ಬೇಡ. ತಡವಾಗಿ ನಿಧಾನವಾಗಿ ಮಾಡಿದರೂ, ಒಂದು ರೀತಿ 'ಪೋರ್ಶನ್ ರಿವಿಶನ್' ಮಾಡಿದಂತಾಗುತ್ತದೆ - ಕಾವ್ಯ ಸಾರದೊಂದಿಗೆ. ಅಲ್ಲಿಯತನಕ ನೀವು ಮೂಲರೂಪ ಬರೆಯುತ್ತಾ ಹೋಗಿ, ನಾನು ಕಾವ್ಯರೂಪ ಸೇರಿಸುತ್ತಾ ಹೋಗುತ್ತೇನೆ :-)

ಧನ್ಯವಾದಗಳು, ನಾಗೇಶರೆ. ನಿಮ್ಮ ಅನೇಕ ಬರಹಗಳನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವನ್ನು ಓದುವುದೂ ಸಹ ಬಾಕಿ ಇದೆ!