೧೩೬. ಲಲಿತಾ ಸಹಸ್ರನಾಮ ೫೭೮ರಿಂದ ೫೮೫ನೇ ನಾಮಗಳ ವಿವರಣೆ

೧೩೬. ಲಲಿತಾ ಸಹಸ್ರನಾಮ ೫೭೮ರಿಂದ ೫೮೫ನೇ ನಾಮಗಳ ವಿವರಣೆ

                                                                                                                                    ಲಲಿತಾ ಸಹಸ್ರನಾಮ ೫೭೮-೫೮೫

Mahā-kailāsa-nilayā महा-कैलास-निलया (578)

೫೭೮. ಮಹಾ-ಕೈಲಾಸ-ನಿಲಯಾ

            ಮಹಾ-ಕೈಲಾಸವು ಶಿವನ ಆವಾಸ ಸ್ಥಾನವಾಗಿದೆ. ಇದು ನಮಗೆ ತಿಳಿದಿರುವ ಕೈಲಾಸ ಪರ್ವತಗಳಿಗಿಂತ ದೂರವಾಗಿದೆ. ವಾಸ್ತವವಾಗಿ ಮಹಾ-ಕೈಲಾಸವು ಮಾನವನ ಕಲ್ಪನೆಗೆ ನಿಲುಕಲಾರದ್ದು. ಶಿವನಿಗೆ ಅನೇಕ ರೂಪಗಳಿದ್ದು ಅದರಲ್ಲಿ ಪರಮಶಿವನ ನಿವಾಸವು ಮಹಾ-ಕೈಲಾಸವಾಗಿದೆ. ಲಲಿತಾಂಬಿಕೆಯು ಸದಾ ಶಿವನೊಂದಿಗೆ ಉಪಸ್ಥಿತಳಿರುವುದರಿಂದ ಮಹಾ-ಕೈಲಾಸವು ಲಿಲಿತಾಂಬಿಕೆಯ ವಾಸಸ್ಥಾನವೂ ಆಗಿದೆ. ಈ ವ್ಯಾಖ್ಯಾನವನ್ನು ಪುರಾಣಗಳು ಕೊಡುತ್ತವೆ.

            ಸಹಸ್ರಾರದಲ್ಲಿರುವ ರಂಧ್ರವನ್ನು (ಬಿಂದುವನ್ನು) ಸಹ ಮಹಾ-ಕೈಲಾಸವೆಂದು ಕರೆಯಲಾಗುತ್ತದೆ. ಸಹಸ್ರಾರವು ಮಾನವ ಶರೀರದಲ್ಲಿ ಷಟ್ಚಕ್ರಗಳ (ಮೂಲಾಧಾರದಿಂದ ಆಜ್ಞಾದವರೆಗಿನ ಆರು ಚಕ್ರಗಳ) ಆಚೆಗೆ ಇರುತ್ತದೆ. ಶಿವನನ್ನು ಇಲ್ಲಿ ಬಿಂದು ಸ್ವರೂಪದಲ್ಲಿ ಕಲ್ಪಿಸಿಕೊಳ್ಳಲಾಗುತ್ತದೆ. ಇಲ್ಲಿ ದೇವಿಯು ತನ್ನ ಸೂಕ್ಷ್ಮಾತಿಸೂಕ್ಷ್ಮ ರೂಪದಲ್ಲಿ ಶಿವನೊಂದಿಗೆ ಒಂದುಗೂಡುವುದರಿಂದ ಇದನ್ನು ಆಕೆಯ ವಾಸಸ್ಥಾನವೆಂದು ಉಲ್ಲೇಖಿಸಲಾಗಿದೆ. ಹಿಂದಿನ ನಾಮದಲ್ಲಿ ಮೂರು ವಿಧವಾದ ಪ್ರಸ್ತಾರಗಳನ್ನು ಚರ್ಚಿಸಲಾಗಿತ್ತು ಮತ್ತು ಅವುಗಳಲ್ಲೊಂದು ಕೈಲಾಸ-ಪ್ರಸ್ತಾರವಾಗಿದ್ದು ಅದು ಈ ಸಹಸ್ರಾರದ ಕರ್ತೃಗಳಾದ ವಾಕ್-ದೇವಿಗಳಿಗೂ ನಿಲುಕದ್ದಾಗಿದೆ. ಈ ನಾಮದಲ್ಲಿ ಮಹಾ ಎನ್ನುವುದನ್ನು ಪೂರ್ವ ಪ್ರತ್ಯಯವಾಗಿ ಬಳಸಲಾಗಿದ್ದು ದೇವಿಯ ಅತ್ಯುತ್ತಮ ಗುಣಗಳನ್ನು ಅದು ಸೂಚಿಸುತ್ತದೆ ಮತ್ತು ಈ ಸಹಸ್ರನಾಮದಲ್ಲಿ ಮಹಾ ಪ್ರತ್ಯಯವನ್ನೊಳಗೊಂಡ ಮೂವತ್ತೇಳು ನಾಮಗಳಿವೆ.

Mṛuṇāla-mṛdu-dorlatā मृणाल-मृदु-दोर्लता (579)

೫೭೯. ಮೃಣಾಲ-ಮೃದು-ದೋರ್ಲತಾ

            ದೇವಿಯ ಕೈಗಳು ಎಳೇ ಕಮಲದ ದಂಟಿನಂತಿವೆ. ದೇವಿಯ ಸೂಕ್ಷ್ಮಾತಿಸೂಕ್ಷ್ಮ ರೂಪವು ಕುಂಡಲಿನೀ ಆಗಿದೆ; ಈ ರೂಪವನ್ನು ನಾಮ ೧೧೧ರಲ್ಲಿ ಕಮಲದ ದಂಟಿನ ಅತ್ಯಂತ ಸೂಕ್ಷ್ಮ ಎಳೆಗೆ (ಬಿಸತಂತು-ತನೀಯಸೀ) ಹೋಲಿಸಲಾಗಿದೆ.

Mahānīyā महानीया (580)

೫೮೦. ಮಹಾನೀಯಾ

            ದೇವಿಯು ಪ್ರೀತಿಯನ್ನುಕ್ಕಿಸುವವಳಾಗಿದ್ದಾಳೆ. ಅವಳನ್ನು ಯಾರು, ಯಾವ ವಿಧವಾಗಿ ಹೊಗಳಿದರೂ ಸಹ ಆಕೆಯು ಅದಕ್ಕೆ ತಕ್ಕವಳಾಗಿದ್ದಾಳೆ. ಬಹುಶಃ ಇದೇ ಕಾರಣಕ್ಕಾಗಿ ಹಲವಾರು ನಾಮಗಳಲ್ಲಿ ಮಹಾ (ಮಹತ್ತರವಾದದ್ದು) ಎನ್ನುವುದನ್ನು ಪೂರ್ವ ಪ್ರತ್ಯಯವಾಗಿ ಬಳಸಿರಬೇಕು.

Dayāmūrtī दयामूर्ती (581)

೫೮೧. ದಯಾಮೂರ್ತೀ

           ದೇವಿಯ ದಯೆಯ ಮೂರ್ತರೂಪವಾಗಿದ್ದಾಳೆ; ಇದು ಅವಳ ಪ್ರಮುಖವಾದ ಗುಣಗಳಲ್ಲೊಂದು. ಈ ಕಾರಣಕ್ಕಾಗಿಯೇ ಈ ಸಹಸ್ರನಾಮವನ್ನು ಶ್ರೀ ಮಾತಾ, ಈ ಜಗತ್ತಿನ ಕರುಣಾಮಯಿ ತಾಯಿ ಎನ್ನುವುದರ ಮೂಲಕ ಆರಂಭಿಸಲಾಗಿದೆ. ದೇವಿಯ ದಯಾಗುಣವನ್ನು ಒತ್ತಿ ಹೇಳುವುದಕ್ಕಾಗಿ ಈ ಗುಣವನ್ನು ನಾಮ ೧೯೭, ೩೨೬ ಮತ್ತು ೯೯೨ರಲ್ಲಿ ಪುನರಾವೃತಗೊಳಿಸಲಾಗಿದೆ. ದಯೆಯು ದೇವಿಯ ಪ್ರಧಾನ ಗುಣವಾಗುತ್ತದೆ ಏಕೆಂದರೆ ಆಕೆಯ ಕುರಿತು ಕ್ಷಣಕಾಲವೂ ಚಿಂತಿಸದೇ ಇರುವವರ ಬಗ್ಗೆಯೂ ಸಹ ಕಾಳಜಿ ವಹಿಸಿ ಸಲಹುತ್ತಾಳೆ. ಇದರರ್ಥ ದೇವಿಯು ಅವರಿಗೆ ಕೊಡಮಾಡಿದ ಅವಕಾಶಗಳನ್ನು ಅವರು ಕಳೆದುಕೊಳ್ಳುತ್ತಿದ್ದಾರೆ.

Mahā-sāmrājya-śālinī महा-साम्राज्य-शालिनी (582)

೫೮೨. ಮಹಾ-ಸಾಮ್ರಾಜ್ಯ-ಶಾಲಿನೀ

            ದೇವಿಯು ಈ ಸಮಸ್ತ ಬ್ರಹ್ಮಾಂಡದ ಎಲ್ಲಾ ಗ್ರಹಗಳನ್ನು ಅತ್ಯಂತ ದಕ್ಷತೆಯಿಂದ ನಿಯಂತ್ರಿಸುತ್ತಾಳೆ. ಸಾಮಾನ್ಯವಾಗಿ ಸಾಮ್ರಾಜ್ಯವೆಂದರೆ ರಾಜ್ಯಗಳ ಸಮೂಹ. ಆದರೆ ದೇವಿಗೆ ಸಾಮ್ರಾಜ್ಯವೆಂದರೆ ಗ್ರಹಗಳು ಮತ್ತು ಈ ಭೂಮಿಯು ಅವಳಿಂದ ಪರಿಪಾಲಿತವಾದ ವಿಶ್ವದ ರವೆಯಷ್ಟು ಸಣ್ಣಭಾಗ ಮಾತ್ರ. ಮಹಾಕೈಲಾಸವೂ ಸಹ ಶಿವನ ಸಂಗಾತಿಯಾದ ದೇವಿಯ ಸಾಮರ್ಥ್ಯದಿಂದ ಪರಿಪಾಲಿಸಲ್ಪಡುತ್ತದೆ.

Ātma-vidyā आत्म-विद्या (583)

೫೮೩. ಆತ್ಮ-ವಿದ್ಯಾ

            ಈ ನಾಮ ಮತ್ತು ಮುಂದಿನೆರಡು ನಾಮಗಳು ಮೂರು ವಿಧವಾದ ವಿದ್ಯೆಗಳನ್ನು (ಜ್ಞಾನಗಳನ್ನು) ಕುರಿತು ಹೇಳುತ್ತವೆ.

            ಆತ್ಮ ವಿದ್ಯೆ ಎಂದರೆ ಬ್ರಹ್ಮನ ಕುರಿತಾದ ಜ್ಞಾನ ಅಥವಾ ಬ್ರಹ್ಮ ವಿದ್ಯೆ. ಬ್ರಹ್ಮವನ್ನು ಆತ್ಮ ಎಂದೂ ಸಹ ಕರೆಯಲಾಗುತ್ತದೆ. ನಾಮ ೭೨೭ ’ಶಿವ ಜ್ಞಾನ ಪ್ರದಾಯಿನೀ’ ಆಗಿದ್ದು ದೇವಿಯು ಶಿವನ ಎಂದರೆ ನಿರ್ಗುಣ ಬ್ರಹ್ಮದ ಕುರಿತಾದ ಜ್ಞಾನವನ್ನು ಕೊಡಮಾಡುತ್ತಾಳೆ. ದೇವಿಯು ಪರಮಾತ್ಮನ (ಅತ್ಯುನ್ನತವಾದ ಆತ್ಮನ) ಕುರಿತಾದ ಜ್ಞಾನವನ್ನು ಕರುಣಿಸುವುದರಿಂದ ಆಕೆಯನ್ನು ಆತ್ಮ-ವಿದ್ಯಾ ಎಂದು ಸಂಭೋದಿಸಲಾಗಿದೆ.

’ತುರ್ಯಾ ಗಾಯತ್ರೀ’ ಸಹ ಆತ್ಮ ವಿದ್ಯೆ ಎಂದು ಕರೆಯಲ್ಪಡುತ್ತದೆ. ತುರ್ಯಾ ಗಾಯತ್ರೀ ಎಂದರೆ,

ಕ-ಏ-ಲ-ಹ್ರೀಂ-ವಾಗ್ಬವೇಶ್ವರೀ-ವಿದ್ಮಹೇ    ಹ-ಸ-ಕ-ಹ-ಲ-ಹ್ರೀಂ-ಕಾಮೇಶ್ವರೀ-ಚ-ಧೀಮಹೀ | ಸ-ಹ-ಲ-ಹ್ರೀಂ-ತನ್ನೋ-ಶಕ್ತಿಃ-ಪ್ರಚೋದಯಾತ್ ||

क-ए-ल-ह्रीं-वाग्बवेश्वरी-विद्महे  ह-स-क-ह-ल-ह्रीं-कामेश्वरी-च-धीमही । स-ह-ल-ह्रीं-तन्नो-शक्तिः-प्रचोदयात् ॥

ಆತ್ಮ-ಅಷ್ಟಾಕ್ಷರ ಮಂತ್ರ ಎನ್ನುವ ಒಂದು ಮಂತ್ರವೂ ಇದೆ. ಆ ಮಂತ್ರವು ಹೀಗಿದೆ,

ಓಂ -ಹ್ರೀಂ- ಹಂಸಃ-ಸೋಹಂ-ಸ್ವಾಹಾ || ॐ -ह्रीं-हम्सः-सोहं-स्वाहा ॥

            (ಈ ಮಂತ್ರವು ಶ್ರೀ ವಿದ್ಯಾ ಉಪಾಸನೆಯ ಭಾಗವಾಗಿದೆ). ದೇವಿಯು ತುರ್ಯಾ ಗಾಯತ್ರೀ ಮತ್ತು ‘ಆತ್ಮ-ಅಷ್ಟಾಕ್ಷರ ವಿದ್ಯಾ ರೂಪ’ಗಳಲ್ಲಿ ಇರುತ್ತಾಳೆಂದು ಹೇಳಲಾಗುತ್ತದೆ (ಅಷ್ಟಾಕ್ಷರ ಎಂದರೆ ಎಂಟು ಅಕ್ಷರಗಳು).

Mahā-vidyā महा-विद्या (584)

೫೮೪. ಮಹಾ-ವಿದ್ಯಾ

           ಒಳಗಿರುವ ಆತ್ಮವನ್ನು ಅರಿಯುತ್ತಾ ಸಾಗುವುದೇ ಆತ್ಮಸಾಕ್ಷಾತ್ಕಾರವಾಗಿದೆ ಮತ್ತು ಹಿಂದಿನ ನಾಮದ ವಿಶ್ಲೇಷಣೆಯ ಪ್ರಕಾರ ಅಂತಹ ಜ್ಞಾನವನ್ನು ‘ಮಹಾ ವಿದ್ಯಾ’ ಎನ್ನಲಾಗುತ್ತದೆ. ಪ್ರಸ್ತುತ ನಾಮವು, ಎಲ್ಲಾ ವಿದ್ಯೆಗಳಿಗಿಂತ ಆತ್ಮ ವಿದ್ಯೆಯು ಅತ್ಯುತ್ತಮವಾದದ್ದು ಎಂದು ಸಾರುತ್ತದೆ. ಆತ್ಮವನ್ನು ಅರಿಯುವುದರಿಂದ ಒಬ್ಬ ವ್ಯಕ್ತಿಗೆ ಸಂತೋಷ ಮತ್ತು ದುಃಖಗಳ ನಡುವೆ ವ್ಯತ್ಯಾಸವು ಕಾಣದಂತಾಗುತ್ತದೆ. ಅಂತಹ ವ್ಯಕ್ತಿಗಳು ದೇವಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ನಿತ್ಯ ಪರಮಾನಂದವನ್ನು ಹೊಂದುತ್ತಾರೆ ಮತ್ತವರು ಪುನರ್ಜನ್ಮವನ್ನು ಹೊಂದುವುದಿಲ್ಲ. ದುಃಖ ಮತ್ತು ಸಂತೋಷಗಳು ಕೇವಲ ಪುನರ್ಜನ್ಮ ಹೊಂದಿದವರಿಗೆ ಮಾತ್ರವೇ ಅನುಭವಕ್ಕೆ ಬರುತ್ತವೆ.

           ಈ ನಾಮಕ್ಕೆ ಮತ್ತೊಂದು ವಿಶ್ಲೇಷಣೆಯೂ ಇದೆ, ಅದರ ಪ್ರಕಾರ ‘ವನದುರ್ಗಾ ವಿದ್ಯೆ’ಯೇ ‘ಮಹಾ ವಿದ್ಯೆ’ ಆಗಿದೆ. ಏಳುನೂರು ಶ್ಲೋಕಗನ್ನೊಳಗೊಂಡ ‘ವನದುರ್ಗಾ ಸಪ್ತಶತಿ’ ಎನ್ನುವ ಒಂದು ಪುರಾತನ ಗ್ರಂಥವಿದೆ. ಅದರಲ್ಲಿರುವ ಪ್ರತಿ ಶ್ಲೋಕವೂ ಮೂಲ ಮಂತ್ರವನ್ನೊಳಗೊಂಡಿದೆ. ಅದು ಅತ್ಯಂತ ಶಕ್ತಿಯುತವಾದುದಾಗಿದ್ದು ಅದರ ಪಠನೆಯು ಖಂಡಿತವಾಗಿಯೂ ಎಲ್ಲಾ ಕ್ಷುದ್ರ ಶಕ್ತಿಗಳನ್ನು ಹೊಡೆದೋಡಿಸುತ್ತದೆ. ವನದುರ್ಗೆಯ ಮೂಲ ಮಂತ್ರವು ಮೂವತ್ತೇಳು ಬೀಜಾಕ್ಷರಗಳನ್ನು ಒಳಗೊಂಡಿದ್ದು ಅದು ಈ ಕೆಳಗಿನಂತಿದೆ:

           ಓಂ ಉತ್ತಿಷ್ಠ ಪುರುಷಿ ಕಿಂ ಸ್ವಾಪಿಷಿ ಭಯಂ ಮೇ ಸಮುಪಸ್ಥಿತಂ ಯದಿ ಶಕ್ಯಮಶಕ್ಯಂ ವಾ ತನ್ಮೇ ಭಗವತಿ ಶಮಯ ಸ್ವಾಹಾ||

           ॐ उत्तिष्ठ पुरुषि किं स्वापिषि भयं मे समुपस्थितं यदि शक्यमशक्यं वा तन्मे भगवति शमय स्वाहा॥

Śrī-vidyā श्री-विद्या (585)

೫೮೫. ಶ್ರೀ-ವಿದ್ಯಾ

            ಶ್ರೀ ವಿದ್ಯಾ ಎನ್ನುವುದು ಪಂಚದಶೀ ಮಂತ್ರವಾಗಿದೆ. ವಿಷ್ಣು ಪುರಾಣವು ನಾಲ್ಕು ವಿಧವಾದ ವಿದ್ಯೆಗಳನ್ನು ಉಲ್ಲೇಖಿಸುತ್ತದೆ. ಅವುಗಳೆಂದರೆ ಯಜ್ಞ-ವಿದ್ಯಾ (ಅದು ಯಜ್ಞ ಕರ್ಮಗಳ ಕುರಿತಾಗಿ ಚರ್ಚಿಸುತ್ತದೆ), ಮಹಾ-ವಿದ್ಯಾ (ಆಚರಣೆಗಳ ಕುರಿತಾದದ್ದು), ಗುಹ್ಯ-ವಿದ್ಯಾ (ರಹಸ್ಯ ಪೂಜೆ), ಆತ್ಮ-ವಿದ್ಯಾ (ಆತ್ಮದ ಕುರಿತಾದ ಜ್ಞಾನ/ವಿದ್ಯೆ). ಪಂಚದಶೀ ಮತ್ತು ಷೋಡಶೀ ಮಂತ್ರಗಳನ್ನು ಅತ್ಯಂತ ರಹಸ್ಯಾತ್ಮಕವಾದವುಗಳೆಂದು ಪರಿಗಣಿಸಲಾಗಿದೆ. ಈ ಮಂತ್ರಗಳ ವಿಧಿಬದ್ಧ ದೀಕ್ಷೆ ಮತ್ತು ನಿಯಮಾನುಸಾರ ಪಠನೆಯು ಒಬ್ಬನಿಗೆ ಮುಕ್ತಿಯನ್ನು ಉಂಟು ಮಾಡುತ್ತದೆ.

                                                                                                                      ******

            ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM MEANING 578-585 http://www.manblunder.com/2010/02/lalitha-sahasranamam-meaning-578-585.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
No votes yet

Comments

Submitted by nageshamysore Fri, 10/18/2013 - 19:40

ಶ್ರೀಧರರೆ, '೧೩೬. ಶ್ರೀ ಲಲಿತಾ ಸಹಸ್ರನಾಮದ ವಿವರಣೆ'ಯ ಕಾವ್ಯರೂಪ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೫೭೮-೫೮೫
_________________________
.
೫೭೮. ಮಹಾ-ಕೈಲಾಸ-ನಿಲಯಾ
ಪರಮಶಿವ ನಿವಾಸ ಮಹಾಕೈಲಾಸ, ಮನುಜ ಕಲ್ಪನಾತೀತ ದೂರದೆ
ಶಿವನ ಜತೆ ಲಲಿತೆಯವನ ಆವಾಸಸ್ಥಾನದಿ ಸದಾ ಉಪಸ್ಥಿತೆ ಹರ್ಷದೆ
ಷಟ್ಚಕ್ರಗಳಾಚೆ ಸಹಸ್ರಾರಬಿಂದು ರಂಧ್ರದೆ ದೇವಿ ಸೂಕ್ಷಾತಿಸೂಕ್ಷ್ಮಮಯ
ಇದೆ ಕೈಲಾಸ ಪ್ರಸ್ತಾರ ಲಲಿತೆ ನೆಲೆನಿಂತ, ಮಹಾ-ಕೈಲಾಸ-ನಿಲಯಾ ||
.
೫೭೯. ಮೃಣಾಲ-ಮೃದು-ದೋರ್ಲತಾ
ಮೃದುಲತೆಗೆ ಹೋಲಿಕೆಯೆಲ್ಲಿ, ಮೃದುಲವೆ ದೇವಿ ಮಾತಾಲಹರಿ
ಸೂಕ್ಷ್ಮಾತಿಸೂಕ್ಷ್ಮ ರೂಪ ಕುಂಡಲಿನೀ ತಾನಾಗುವ ಲಲಿತಾ ವಲ್ಲರಿ
ಎಳೆ ಕಮಲದ ದಂಟಿಗೆ, ದೇವೀ ಕೈಗಳ ಮೃದುತ್ವ ಹೋಲಿಸುತಾ
ವರ್ಣನಾತೀತ ವರ್ಣಿಸಿ ವಾಗ್ದೇವಿ,ಮೃಣಾಲ-ಮೃದು-ದೋರ್ಲತಾ ||
.
೫೮೦. ಮಹಾನೀಯಾ 
ಹೊಗಳಿಕೆ ಮಾನ್ಯತೆ ಘನತೆ, ಲಲಿತೆಗೆ ವಾಗ್ದೇವಿಯರಾರೋಪಿಸುತೆ
ಹೊಗಳಿಕೆಗೆ ತಕ್ಕಂತೆ ಪ್ರೀತಿಯುಕ್ಕಿಸುವಾ ದೇವಿ ಲಲಿತೆಯ ಶ್ರೇಷ್ಠತೆ
ಮಹತ್ತರವಾದುದೆಲ್ಲ 'ಮಹಾ', ಕರೆಯುತಲವಳನು ಮಹಾನೀಯ
ಹೊಗಳೇ ಸಾಲದೆ ಬಣ್ಣನೆಗೆ, ಮತ್ತೆಲ್ಹುಡುಕಲಿ ಅರಿಯದೆ ವಿಸ್ಮಯ ||
.
೫೮೧. ದಯಾಮೂರ್ತೀ
ದಯಾಗುಣವೆ ಪ್ರಧಾನ, ಭಕ್ತ ಸಾಧಕರ ಸಲಹುವ ಮನ
ತೃಣಮಾತ್ರ ಚಿಂತಿಸದವರಿಗೂ ಕಾಳಜಿಯಿಡೊ ತಾಯ್ಮನ
ಬಳಸಲಿ ಬಿಡಲಿ ಅವಕಾಶ, ದೇವಿ ದಯೆಗೆ ಮೂರ್ತರೂಪ
ಸರ್ವರ ಸಲಹೆ ಮಾತೆಯಾಗಿ,ದಯಾಮೂರ್ತೀ ಪ್ರತಿರೂಪ ||
.
೫೮೨. ಮಹಾ-ಸಾಮ್ರಾಜ್ಯ-ಶಾಲಿನೀ
ದೇವಿ ಸಾಮ್ರಾಜ್ಯವೆ ಗ್ರಹ, ತಾರೆ, ನೀಹಾರಿಕೆ, ಬ್ರಹ್ಮಾಂಡಾ, ವಿಶ್ವ
ಪಾಲಿಸಿ ಶಿವನ ಮಹಾಕೈಲಾಸ, ಭುವಿ ಕಿರು ಸಾಮ್ರಾಜ್ಯದ ಪಾರ್ಶ್ವ
ಅಂಡ ಪಿಂಡ ಬ್ರಹ್ಮಾಂಡದೆಲ್ಲ ಗ್ರಹಗಳ ದಕ್ಷತೆಯಲಿ ಪಾಲಿಸಿ ಜನನಿ
ನಿಯಂತ್ರಣದಲಿಟ್ಟೆಲ್ಲವನು ಸಲಹಿಹಳು ಮಹಾಸಾಮ್ರಾಜ್ಯಶಾಲಿನೀ ||
.
೫೮೩. ಆತ್ಮ-ವಿದ್ಯಾ
ಬ್ರ್ಹಹ್ಮವೆ ಆತ್ಮ, ಬ್ರಹ್ಮದರಿವೆ ಆತ್ಮವಿದ್ಯೆ ಬ್ರಹ್ಮಜ್ಞಾನ
ನಿರ್ಗುಣ ಬ್ರಹ್ಮದ ಜ್ಞಾನ ಪ್ರದಾಯಿಸುವ ದೇವಿಮನ
ಪರಮಾತ್ಮನ ಜ್ಞಾನದಾತೆ ಲಲಿತೆಯಾಗಿ ಆತ್ಮವಿದ್ಯಾ
'ಆತ್ಮ ಅಷ್ಟಾಕ್ಷರ'ಜತೆ 'ತುರ್ಯಾಗಾಯತ್ರೀ' ಸಾನಿಧ್ಯ ||
.
ತುರ್ಯಾ ಗಾಯತ್ರೀಯಾಗಿ ಆತ್ಮ-ವಿದ್ಯೆ
'ಕ-ಏ-ಲ-ಹ್ರೀಂ-ವಾಗ್ಭವೇಶ್ವರೀ-ವಿದ್ಮಹೇ'
'ಹ-ಸ-ಕ-ಹ-ಲ-ಹ್ರೀಂ-ಕಾಮೇಶ್ವರೀ-ಚ-ಧೀಮಹೀ |'
'ಸ-ಹ-ಲ-ಹ್ರೀಂ-ತನ್ನೋ-ಶಕ್ತಿಃ-ಪ್ರಚೋದಯಾತ್ ||'
.
'ಆತ್ಮ ಅಷ್ಟಾಕ್ಷರ ವಿದ್ಯಾ' ರೂಪದಲು ಪ್ರಸ್ತುತಳಿಹ ಲಲಿತೆ
ಶ್ರೀವಿದ್ಯಾ ಉಪಾಸನಾ ಭಾಗ, ಆತ್ಮ-ವಿದ್ಯಾ ರೂಪವಾಗುತೆ
ಎಂಟಕ್ಷರಗಳ ಮಂತ್ರವಾಗುದ್ಘೋಷಾ
'ಓಂ-ಹ್ರೀಂ-ಹಂಸಃ-ಸೋಹಂ-ಸ್ವಾಹಾ ||'
.
೫೮೪. ಮಹಾ-ವಿದ್ಯಾ 
ಅತ್ಮವನರಿತವಗೆ ಅಂತರವೆಲ್ಲಿ ಹರ್ಷ ದುಃಖವೊಂದೆ ಪ್ರಕಾರ
ನಿರಂತರ ದೇವಿ ಸಂಪರ್ಕದೆ ನಿತ್ಯಪರಮಾನಂದ ಹೊಂದುವರ
ಪುನರ್ಜನ್ಮದಿಂದ ಮುಕ್ತಿ, ಸುಖದುಃಖಕು ನಿರ್ಲಿಪ್ತ ಮಹಾವಿದ್ಯಾ
ಆತ್ಮವರಸುತ ಆತ್ಮಸಾಕ್ಷಾತ್ಕಾರ, ತೊಡಿಸುವ ಲಲಿತಾ ಸಾನಿಧ್ಯ ||
.
'ವನ-ದುರ್ಗಾ ಸಪ್ತಶತಿ' ಪುರಾತನ ಗ್ರಂಥ ವಿಶ್ಲೇಷಣೆ ಪರ್ಯಾಯ
ಸಪ್ತಶತ ಶ್ಲೋಕವಿಹ 'ವನ-ದುರ್ಗಾ ವಿದ್ಯೆ'ಯೆ ಆಗಿ ಮಹಾ-ವಿದ್ಯಾ
ಪ್ರತಿಶ್ಲೋಕ ಮೂಲಮಂತ್ರ, ಪಠನ ಹೊಡೆದೋಡಿಸುತೆ ಕ್ಷುದ್ರ ಶಕ್ತಿ
ಮೂವತ್ತೇಳು ಬೀಜಾಕ್ಷರ ಮೂಲಮಂತ್ರ, ಶಕ್ತಿಯುತ ಈ ಕೆಳರೀತಿ ||
.
ಮೂಲ ಅವೃತ್ತಿ:
_______________________
ಓಂ ಉತ್ತಿಷ್ಠ ಪುರುಷಿ ಕಿಂ ಸ್ವಾಪಿಷಿ ಭಯಂ ಮೇ ಸಮುಪಸ್ಥಿತಂ ಯದಿ ಶಕ್ಯಮಶಕ್ಯಂ ವಾ ತನ್ಮೇ ಭಗವತಿ ಶಮಯ ಸ್ವಾಹಾ |
.
ಚತುಷ್ಪಾದಿ ಆವೃತ್ತಿ (?)
_______________________
ಓಂ ಉತ್ತಿಷ್ಠ ಪುರುಷಿ
ಕಿಂ ಸ್ವಾಪಿಷಿ ಭಯಂ ಮೇ
ಸಮುಪಸ್ಥಿತಂ ಯದಿ ಶಕ್ಯಮಶಕ್ಯಂ
ವಾ ತನ್ಮೇ ಭಗವತಿ ಶಮಯ ಸ್ವಾಹಾ |
(ಹೀಗೆ ಸಾಲಾಗಿಸಿದಾಗ ಅರ್ಥಪಲ್ಲಟವಾಗುವುದೇನೊ ಗೊತ್ತಿಲ್ಲ - ಸದ್ಯಕ್ಕೆ ಈ ರೂಪದಲ್ಲಿನ ಆವೃತ್ತಿಯಾಗಿ ಇಟ್ಟಿದ್ದೇನೆ, ಪರಿಷ್ಕರಣೆಯ ನಂತರ ಸೂಕ್ತ ಆವೃತ್ತಿಯನ್ನು ಉಳಿಸಿಕೊಳ್ಳೋಣ)
.
೫೮೫. ಶ್ರೀ-ವಿದ್ಯಾ
ಯಜ್ಞ ಕರ್ಮಗಳ ಕುರಿತರಿಯೆ ಯಜ್ಞ-ವಿದ್ಯಾ, ಆಚರಣೆಗೆ ಮಹಾ-ವಿದ್ಯಾ
ರಹಸ್ಯ ಪೂಜೆಗಳನರುಹುವ ಗುಹ್ಯ-ವಿದ್ಯಾ, ಆತ್ಮದರಿವಿಗೇ ಆತ್ಮ-ವಿದ್ಯಾ
ರಹಸ್ಯಾತ್ಮಕ ಪಂಚದಶೀ ಮಂತ್ರವೆ ಶ್ರೀವಿದ್ಯಾ, ಷೋಡಶೀ ಮಂತ್ರದ ಜತೆ
ವಿಧಿಬದ್ದ ದೀಕ್ಷೆ ನಿಯಮಾನುಸಾರ ಪಠನೆ, ದೇವಿ ಮುಕ್ತಿಯ ಕರುಣಿಸುತೆ ||
.
.
- ಧನ್ಯವಾದಗಳೊಂದಿಗೆ
    ನಾಗೇಶ ಮೈಸೂರು