೧೪೦. ಲಲಿತಾ ಸಹಸ್ರನಾಮ ೬೦೧ರಿಂದ ೬೦೫ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೬೦೧ - ೬೦೫
Darāndolita-dīrghākṣī दरान्दोलित-दीर्घाक्षी (601)
೬೦೧. ದರಾಂದೋಲಿತ-ದೀರ್ಘಾಕ್ಷೀ
ದೇವಿಗೆ ತಿದ್ದಿ ತೀಡಿದಂತಹ ಕಣ್ಣುಗಳಿದ್ದು ಅವು ಬಹುತೇಕ ಆಕೆಯ ಕಿವಿಯನ್ನು ತಾಕುತ್ತವೆ. ತನ್ನ ಭಕ್ತರ ಭಯವನ್ನು ಹೋಗಲಾಡಿಸಲು ಆಕೆಯ ಕಣ್ಣುಗಳು ಸುತ್ತಲೂ ತಿರುಗುತ್ತಿರುತ್ತವೆ.
ಮೂಕ ಪಂಚಶತೀ ಕೃತಿಯಲ್ಲಿ ದೇವಿಯ ಸೌಂದರ್ಯವನ್ನು ವರ್ಣಿಸುವ ೧೦೧ ಸ್ತೋತ್ರಗಳಿವೆ. ಸೌಂದರ್ಯ ಲಹರಿಯಲ್ಲಿಯೂ ಸಹ ದೇವಿಯ ಕಣ್ಣುಗಳನ್ನು ವರ್ಣಿಸುವ ಅನೇಕ ಶ್ಲೋಕಗಳಿವೆ. ದೇವಿಯ ಕಣ್ಣುಗಳು ಕರುಣೆಯನ್ನು ಸೂಸುತ್ತಾ ತನ್ನ ಭಕ್ತರ ಬಗೆಗೆ ಹೊಂದಿರುವ ಕಾಳಜಿಯನ್ನು ಸೂಚಿಸುತ್ತವೆ ಆದ್ದರಿಂದ ಆಕೆಯ ಕಣ್ಣುಗಳು ಸುತ್ತಲೂ ಸುತ್ತುತ್ತಾ ತನ್ನಲ್ಲಿ ಶರಣಾಗತಿ ಹೊಂದಿದವರ ಮೇಲೆ ಕೃಪೆಯನ್ನು ಬೀರುವುದಕ್ಕೆ ಸಿದ್ಧವಾಗಿರುತ್ತವೆ. ದೇವಿಯು ಜಗಜ್ಜನನಿಯ ಭಾರವನ್ನು ಹೊತ್ತಿರುವುದರಿಂದ ಆಕೆಯ ಕಣ್ಣುಗಳು ಕರುಣಾಪೂರಿತವಾಗಿವೆ. ಯಾರಾದರು ಆಕೆಯನ್ನು ಮಾ ಎಂದು ಕರೆದಾಗ ಆಕೆಯ ಕಣ್ಣುಗಳು ತನ್ನನ್ನು ಕರೆದ ಶಬ್ದದೆಡೆಗೆ ತಿರುಗುತ್ತವೆ. ಈ ಕಾರಣದಿಂದಾಗಿ ದೇವಿಯ ಕಣ್ಣುಗಳು ಸುತ್ತಲೂ ತಿರುಗುತ್ತಿರುತ್ತವೆ.
Darahāsojjvalan-mukhī दरहासोज्ज्वलन्-मुखी (602)
೬೦೨. ದರಹಾಸೋಜ್ವಲನ್-ಮುಖೀ
ಈ ನಾಮವು ದೇವಿಯ ಮಂದಹಾಸವನ್ನು ವರ್ಣಿಸುತ್ತದೆ. ದೇವಿಯ ಕಿರುನಗೆಯು ಎಲ್ಲರನ್ನೂ ಆಕೆಯ ಭಕ್ತರಾಗುವಷ್ಟರ ಮಟ್ಟಿಗೆ ಆಕರ್ಷಿಸುತ್ತದೆ. ಸಾಮಾನ್ಯವಾಗಿ ಒಬ್ಬರ ಕರುಣೆ ಮತ್ತು ದಯಾ ಗುಣಗಳು ಅವರ ಕಣ್ಣು ಮತ್ತು ನಗೆಯ ಮೂಲಕ ಹೊರಹೊಮ್ಮುತ್ತವೆ.
Gurumūrtiḥ गुरुमूर्तिः (603)
೬೦೩. ಗುರುಮೂರ್ತಿಃ
ದೇವಿಯು ಗುರುವಿನ ರೂಪದಲ್ಲಿದ್ದಾಳೆ. ಶ್ರೀ ವಿದ್ಯಾ ಉಪಾಸನೆಯಲ್ಲಿ, ಗುರು, ಮಂತ್ರ ಮತ್ತು ದೇವತೆಯರಲ್ಲಿ ಭೇದವನ್ನೆಣಿಸಬಾರದು. ವರಿವಶ್ಯಾ ರಹಸ್ಯದ (ಪಂಚದಶೀ ಮಂತ್ರವನ್ನು ವಿಶದವಾಗಿ ವಿವರಿಸುವ ಗ್ರಂಥ) ೧೦೨ನೇ ಶ್ಲೋಕವು ಹೀಗೆ ಹೇಳುತ್ತದೆ, "ಮಾತೆಯನ್ನು, ಶ್ರೀ ವಿದ್ಯಾವನ್ನು, ಶ್ರೀ ಚಕ್ರವನ್ನು, ಗುರುವನ್ನು ಮತ್ತು ಶಿಷ್ಯನು ಸ್ವಯಂ ತನ್ನನ್ನು ಎಲ್ಲರನ್ನೂ ಏಕವಾಗಿ ಭಾವಿಸುವುದನ್ನು ಅಭ್ಯಸಿಸಬೇಕು". ಇದರ ಮುಂಚಿನ ಶ್ಲೋಕವು (೧೦೧ನೆಯದು), "ಒಬ್ಬನ ಗುರುವು, ದೇವತಾ, ವಿದ್ಯಾ ಮತ್ತು ಶ್ರೀ ಚಕ್ರ ಇವುಗಳೊಂದಿಗೆ ಏಕವಾಗಿದ್ದಾನೆ....... ಗುರುವಿನ ಕೃಪೆಯಿಂದ ಸಾಧಕನು ಈ ಏಕತ್ವವನ್ನು ಹೊಂದುತ್ತಾನೆ" ಎಂದು ಹೇಳುತ್ತದೆ.
ಗುರು ಎಂದರೆ ಕತ್ತಲೆಯನ್ನು ಹೋಗಲಾಡಿಸುವವನು. ಗುರುವೆಂದರೆ ಬ್ರಹ್ಮದ ಕುರಿತಾದ ಪರಮೋನ್ನತ ಜ್ಞಾನವನ್ನು ಹೊಂದಿದವನೆಂದೂ ಸಹ ಅರ್ಥವಿದೆ. ಈ ಸಂದರ್ಭದಲ್ಲಿ ದೇವಿಯು ಪರಮೋನ್ನತ ಗುರುವೆಂದು ಹೇಳಲಾಗಿದೆ.
ವಿಷ್ಣು ಸಹಸ್ರನಾಮದ ೨೦೯ನೇ ನಾಮವೂ ಸಹ ವಿಷ್ಣುವನ್ನು ಗುರು ಎಂದು ಸಂಭೋದಿಸುತ್ತದೆ.
Guṇanidhiḥ गुणनिधिः (604)
೬೦೪. ಗುಣನಿಧಿಃ
ದೇವಿಯು ಗುಣಗಳ ಭಂಡಾರವಾಗಿದ್ದಾಳೆ. ಗುಣಗಳು ಮೂರು ವಿಧವಾದವು - ಸಾತ್ವಿಕ, ರಾಜಸಿಕ ಮತ್ತು ತಾಮಸಿಕ. ಈ ಗುಣಗಳ ಪ್ರಮಾಣವು ವ್ಯತ್ಯಯವಾದಾಗ ಅಗಣಿತ ಗುಣಗಳು ಏರ್ಪಡುತ್ತವೆ. ಗುಣಗಳ ಈ ಎಲ್ಲಾ ಸಂಯೋಜನೆಗಳು ದೇವಿಯಿಂದ ಉಗಮವಾಗುತ್ತವೆ.
ಸಾಂಖ್ಯ ಸೂತ್ರವು (೧.೧೨೮) ಹೀಗೆ ಹೇಳುತ್ತದೆ. "ಲಘುವಾಗಿರುವ ಗುಣ ಮೊದಲಾದವುಗಳ ಕಾರಣದಿಂದ ಅಂಶಗಳು ಒಂದಕ್ಕೊಂದು ಪೂರಕವಾಗಿ ಮತ್ತು ಒಂದಕ್ಕೊಂದು ವೈರುದ್ಧ್ಯವಾಗಿ ಇರುತ್ತವೆ". ಗುಣ ಎಂದರೆ ಒಂಬತ್ತು ಗುಣಗಳ ಸಂಕೀರ್ಣವೂ ಹೌದು. ಶಿವನು ಈ ಒಂಬತ್ತು ಗುಣಗಳನ್ನು ಹೊಂದಿದ್ದಾನೆಂದು ಹೇಳಲಾಗುತ್ತದೆ. ಆ ಒಂಬತ್ತು ಗುಣಗಳೆಂದರೆ ೧) ಸಮಯ (ಕಾಲ), ೨) ವಂಶಾವಳಿ (ಕುಲಾ), ೩) ಹೆಸರುಗಳು (ನಾಮ), ೪) ತಿಳುವಳಿಕೆ (ಜ್ಞಾನ), ೫) ಪ್ರಜ್ಞೆ ಅಥವಾ ಮನಸ್ಸು (ಚಿತ್ತ), ೬) ನಾದ (ಪ್ರಾಣಾಯಾಮವನ್ನು ಅಭ್ಯಸಿಸುವಾಗ ದೇಹದೊಳಗಡೆ ಏಳುವ ಸೂಕ್ಷ್ಮ ಶಬ್ದ ತರಂಗಗಳು), ೭) ಬಿಂದು (ಹದಿನಾರು ಕಲಾಗಳನ್ನು ಹೊಂದಿದೆ ಅವು ಪ್ರಾಣ, ಸಹಜ ಸ್ವಭಾವ, ಪಂಚಭೂತಗಳು, ತನ್ಮಾತ್ರಗಳು, ಇಂದ್ರಿಯಗಳು- ಕರ್ಮೇಂದ್ರಿಯಗಳು ಹಾಗು ಜ್ಞಾನೇಂದ್ರಿಯಗಳು, ಮನಸ್ಸು, ಆಹಾರ, ಜೀವನ ಶಕ್ತಿ, ತಪಸ್ಸು, ಮಂತ್ರಗಳು, ಕರ್ಮಗಳು, ಲೋಕಗಳು ಮತ್ತು ಹೆಸರುಗಳು ೮) ಕಲ್ಪ ಮತ್ತು ೯) ಜೀವ. ಈ ಒಂಬತ್ತು ಗುಣಗಳು ಗುಣ ಶಬ್ದದ ಸಾಮಾನ್ಯ ಅರ್ಥಕ್ಕೆ ಭಿನ್ನವಾಗಿವೆ.
ಈ ನಾಮದ ಹಿಂದೆ ಒಂದು ಕಥೆಯು ಬೆಸೆದುಕೊಂಡಿದೆ. ಗುಣವೆಂದರೆ ಹಗ್ಗ ಎನ್ನುವ ಅರ್ಥವೂ ಇದೆ. ಮಹಾಪ್ರಳಯ ಕಾಲದಲ್ಲಿ, ವಿಷ್ಣುವು ಒಂದು ಮತ್ಸ್ಯದ ರೂಪವನ್ನು ತಾಳಿ ಅವನು ಎಲ್ಲಾ ಜೀವಗಳ ಬೀಜಗಳನ್ನು ಗಂಟುಕಟ್ಟಿ, ಒಂದು ದೋಣಿಯಲ್ಲಿಟ್ಟು ಅದನ್ನು ಮೀನಿನ ಮೂಗಿಗೆ ಕಟ್ಟಿದ ಹಗ್ಗದ ಮೂಲಕ ಎಳೆದುಕೊಂಡು ಹೋದನಂತೆ. ದೇವಿಯು ಆ ಹಗ್ಗದ ರೂಪವನ್ನು ತಾಳಿ ಆ ಹಗ್ಗವನ್ನು ಸದೃಢವಾಗಿಸಿದಳಂತೆ.
ಪ್ರಶ್ನೋಪನಿಷತ್ತಿನ ಅಧ್ಯಾಯ ೬.೨ರಲ್ಲಿ ಹೀಗೆ ಹೇಳಲಾಗಿದೆ, " सः पुरुषो यस्मिन्नेताः षोडशकलाः प्रभवन्तीति - ಸಃ ಪುರುಷೋ ಯಸ್ಮಿನ್ನೇತಾಃ ಷೋಡಶಕಲಾಃ ಪ್ರಭವಂತೀತಿ" ಅಂದರೆ ‘ಷೋಡಶ ಕಲಾ’ಗಳು ಈ ಆತ್ಮನಿಂದ ಹೊರಹೊಮ್ಮುತ್ತವೆ. ಷೋಡಶ ಕಲಾ ಎಂದರೆ ಹದಿನಾರು ಭಾಗಗಳು. ಈ ಭಾಗಗಳನ್ನು ಅದೇ ಉಪನಿಷತ್ತಿನ ಅಧ್ಯಾಯದಲ್ಲಿ (೬.೪) ವಿವರಿಸಲಾಗಿದೆ. "ಆ ಪುರುಷನು (ನಿರ್ಗುಣ ಬ್ರಹ್ಮನು) ಪ್ರಾಣನನ್ನು (ಹಿರಣ್ಯಗರ್ಭನನ್ನು) ಸೃಷ್ಟಿಸಿದನು; ಹಿರಣ್ಯಗರ್ಭನಿಂದ ಶ್ರದ್ಧೆಯು ಹುಟ್ಟಿತು; ಆ ಶ್ರದ್ಧೆಯಿಂದ ಆಕಾಶ; ಆಕಾಶದಿಂದ ವಾಯು, ವಾಯುವಿನಿಂದ ಬೆಂಕಿ, ಬೆಂಕಿಯಿಂದ ನೀರು; ನೀರಿನಿಂದ ಭೂಮಿಯನ್ನು ಸೃಷ್ಟಿಸಿದನು. ತದನಂತರ ಭೂಮಿಯಿಂದ ಇಂದ್ರಿಯಗಳು, ಮನಸ್ಸು, ಅನ್ನಗಳು ಉದ್ಭವವಾದವು. ಅನ್ನದಿಂದ ವೀರ್ಯ (ಕರ್ಮ ಪ್ರವೃತ್ತಿಗೆ ಸಾಧನವಾದ ಸಾಮರ್ಥ್ಯ), ತಪಸ್ಸು, ಮಂತ್ರಗಳು (ಋಕ್ಕು, ಯಜಸ್ಸು, ಸಾಮ, ಅಥರ್ವಾಂಗಿರಸ್ಸು ಎಂಬ ವೇದ ಮಂತ್ರಗಳು), ಕರ್ಮ (ಯಜ್ಞ-ಯಾಗಾದಿ ಕರ್ಮಗಳು), ಲೋಕಗಳು (ಕರ್ಮಫಲಕ್ಕನುಗುಣವಾಗಿ ಹೊಂದುವ ಲೋಕಗಳು) , ಆ ಲೋಕಗಳಲ್ಲಿ ನಾಮಗಳನ್ನೂ (ವಿವಿಧ ವಸ್ತುಗಳನ್ನು) ಸೃಷ್ಟಿಸಿದನು."
Gomātā गोमाता (605)
೬೦೫. ಗೋಮಾತಾ
ದೇವಿಯು ಎಲ್ಲಾ ಹಸುಗಳ ಮಾತೆಯಾಗಿದ್ದಾಳೆ. ಆಕಳುಗಳನ್ನು ಪವಿತ್ರವಾದವುಗಳೆಂದು ಪರಿಗಣಿಸಲಾಗಿದೆ. ಬಹುಶಃ ಈ ನಾಮವು ಬಯಸಿದಷ್ಟು ಆಹಾರವನ್ನು ಯಾವುದೇ ಸಮಯದಲ್ಲಿ ಕೊಡುವ ದೈವೀ ಹಸುವಾದ ಕಾಮಧೇನುವನ್ನು ಕುರಿತು ಹೇಳಬಹುದು. ಗೋ (गो) ಶಬ್ದವನ್ನು ವೇದಗಳಲ್ಲಿ ಪದೇ ಪದೇ ಬಳಸಲಾಗಿದೆ. ಆಂತರಿಕ ಯಜ್ಞವನ್ನು ಅಭ್ಯಸಿಸುವಾಗ ಇದರರ್ಥವು ಜ್ಞಾನವೆಂದಾಗುತ್ತದೆ ಮತ್ತು ಬಾಹ್ಯ ಯಜ್ಞಾಚರಣೆಗಳಲ್ಲಿ ಇದರ ಅರ್ಥ ನಾಲ್ಕು ಕಾಲಿನ ಪ್ರಾಣಿಗಳು ಎಂದಾಗುತ್ತದೆ. ಗೌಃ ಎನ್ನುವ ಶಬ್ದಕ್ಕೆ ಮಾತು, ಕಿರಣಗಳು, ಸ್ವರ್ಗ ಮೊದಲಾದ ಅರ್ಥಗಳಿದ್ದು ಅವೆಲ್ಲವೂ ಆಕೆಯಿಂದ ಹೊರಹೊಮ್ಮಿವೆ ಎನ್ನುವುದನ್ನು ಈ ನಾಮವು ಸೂಚಿಸುತ್ತದೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 601 - 605 http://www.manblunder.com/2010/02/lalitha-sahasranamam-601-605.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೪೦. ಲಲಿತಾ ಸಹಸ್ರನಾಮ ೬೦೧ರಿಂದ ೬೦೫ನೇ ನಾಮಗಳ ವಿವರಣೆ
ಶ್ರೀಧರ್‌ಜಿ,
- ಗೋ (गो) ಶಬ್ದವನ್ನು ವೇದಗಳಲ್ಲಿ ಪದೇ ಪದೇ ಬಳಸಲಾಗಿದೆ. ಆಂತರಿಕ ಯಜ್ಞವನ್ನು ಅಭ್ಯಸಿಸುವಾಗ ಇದರರ್ಥವು ಜ್ಞಾನವೆಂದಾಗುತ್ತದೆ..
ಗೌಃ ಎನ್ನುವ ಶಬ್ದಕ್ಕೆ ಮಾತು, ಕಿರಣಗಳು, ಸ್ವರ್ಗ ಮೊದಲಾದ ಅರ್ಥಗಳಿದ್ದು ...
-ಗೋಹತ್ಯೆ ಎನ್ನುವಾಗ ಒಂದೇ ಅರ್ಥ -ಅನರ್ಥ :(http://hinduismglance.wordpress.com/go-or-gau-means-light-in-the-veda-no...
In reply to ಉ: ೧೪೦. ಲಲಿತಾ ಸಹಸ್ರನಾಮ ೬೦೧ರಿಂದ ೬೦೫ನೇ ನಾಮಗಳ ವಿವರಣೆ by ಗಣೇಶ
ಉ: ೧೪೦. ಲಲಿತಾ ಸಹಸ್ರನಾಮ ೬೦೧ರಿಂದ ೬೦೫ನೇ ನಾಮಗಳ ವಿವರಣೆ
ಮಾಹಿತಿಯುಕ್ತ ಕೊಂಡಿಗೆ ಧನ್ಯವಾದಗಳು, ಗಣೇಶ್ಜಿ.
ಉ: ೧೪೦. ಲಲಿತಾ ಸಹಸ್ರನಾಮ ೬೦೧ರಿಂದ ೬೦೫ನೇ ನಾಮಗಳ ವಿವರಣೆ
ಶ್ರೀಧರರೆ, '೧೪೦. ಶ್ರೀ ಲಲಿತಾ ಸಹಸ್ರನಾಮದ ವಿವರಣೆ'ಯ ಕಾವ್ಯಸಾರ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೬೦೧ - ೬೦೫
___________________________________
.
೬೦೧. ದರಾಂದೋಲಿತ-ದೀರ್ಘಾಕ್ಷೀ
ಸುತ್ತಲು ತಿರುಗುತೆ ದೇವಿ ನಯನ, ಭಕ್ತ ಭಯ ನಿವಾರಣ
ಕರುಣಾಪೂರ್ಣ ಕಾಳಜಿ, ಅಮ್ಮಾ ಎನಲತ್ತ ಕಣ್ಣಿನ ಗಮನ
ತಿದ್ದಿ ತೀಡಿದಾ ನಯನ, ಕರ್ಣವನು ಮುಟ್ಟುತ ವಿಶಾಲಾಕ್ಷಿ
ಜಗಜ್ಜನನೀ ಭಾರ ನಿರ್ವಹಿಸಿ ದರಾಂದೋಲಿತ-ದೀರ್ಘಾಕ್ಷೀ ||
.
೬೦೨. ದರಹಾಸೋಜ್ವಲನ್-ಮುಖೀ
ಸೌಂದರ್ಯಲಹರಿ, ಮೂಕಶತಿಯ ದೇವಿ ಸೌಂದರ್ಯದತಿಶಯ
ಹಾಡಿಯು ತೀರದಾ ಕೌತುಕ, ವರ್ಣನಾತೀತ ಗುಣಗಳ ಅಕ್ಷಯ
ಸೂಜಿಗಲ್ಲಂತೆ ಸೆಳೆವ ಕಿರುನಗೆ, ಭಕ್ತರನಾಗಿಸುತೆಲ್ಲರ ಸುಮುಖಿ
ಕರುಣೆ ದಯೆ ಮಂದಹಾಸದಲೆ, ದೇವಿ ದರಹಾಸೋಜ್ವಲನ್ಮುಖೀ ||
.
೬೦೩. ಗುರುಮೂರ್ತಿಃ
ಜ್ಞಾನದೀವಿಗೆ ಹಿಡಿದು ಕತ್ತಲ ಬೆಳಕಾಗಿಸುವ ಬ್ರಹ್ಮಜ್ಞಾನಿ ಗುರು
ದೇವತಾ-ವಿದ್ಯಾ-ಶ್ರೀ ಚಕ್ರದೇಕತ್ವಕೆ ಸಾಧಕನನೊಯ್ಯುವ ತೇರು
ಶ್ರೀ ವಿದ್ಯಾ ಉಪಾಸನೆಗೆ ಅವಶ್ಯಾ, ಭೇದವೆಣಿಸದ ಏಕತ್ವ ಪೂರ್ತಿ
ಏಕೋಭಾವ ಶಿಷ್ಯತ್ವಕೆ ದೇವಿ, ಕೈ ಹಿಡಿದು ನಡೆಸಿ ಗುರುಮೂರ್ತಿಃ ||
.
೬೦೫. ಗೋಮಾತಾ
ಆಂತರಿಕ ಯಜ್ಞದೆ 'ಗೋ' ಎನೆ ಜ್ಞಾನ, ಬಾಹ್ಯಾಚರಣೆ ಗೋವು
'ಗೌಃ' ಎನೆ ಮಾತು-ಕಿರಣ-ಸ್ವರ್ಗ ಹೊರಹೊಮ್ಮಿ ಪಸರಿಸಿದವು
ದೈವೀ ಹಸು ಕಾಮಧೇನು, ಬಯಸಿದಷ್ಟೂ ಬಡಿಸುವಾ ಸತತ
ಗೋವುಗಳ ತಾಯಿ ಲಲಿತ, ಕೇಳಿದಷ್ಟು ಕೊಡುವ ಗೋಮಾತಾ ||
.
೬೦೪. ಗುಣನಿಧಿಃ
ಮಹಾಪ್ರಳಯದೆ ಮತ್ಸ್ಯರೂಪಿ ವಿಷ್ಣು, ಎಲ್ಲ ಜೀವಬೀಜ ಗಂಟಲಿ ಕಟ್ಟಿ
ನಾವೆಯಲಿ ಮೂಗಲೆ ಎಳೆದೊಯ್ದ ಹೊತ್ತು, ಹಗ್ಗವಾಗಿ ಮಾಡಿರೆ ಗಟ್ಟಿ
ಗುಣವೆನೆ ಹಗ್ಗ, ತ್ರಿಗುಣವೆನೆ ಸಾತ್ವಿಕ-ರಾಜಸಿಕ-ತಾಮಸಿಕತೆ ಸನ್ನಿಧಿ
ವ್ಯತ್ಯಯ-ಸಂಯೋಜಿಸಿ ಅಗಣಿತ ಗುಣಭಂಡಾರವೆ ದೇವಿ ಗುಣನಿಧಿಃ ||
.
.
-ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ೧೪೦. ಲಲಿತಾ ಸಹಸ್ರನಾಮ ೬೦೧ರಿಂದ ೬೦೫ನೇ ನಾಮಗಳ ವಿವರಣೆ by nageshamysore
ಉ: ೧೪೦. ಲಲಿತಾ ಸಹಸ್ರನಾಮ ೬೦೧ರಿಂದ ೬೦೫ನೇ ನಾಮಗಳ ವಿವರಣೆ
ಎಂದಿನಂತೆ ಕವನಗಳು ಚೆನ್ನಾಗಿ ಮೂಡಿ ಬಂದಿವೆ ನಾಗೇಶರೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: ೧೪೦. ಲಲಿತಾ ಸಹಸ್ರನಾಮ ೬೦೧ರಿಂದ ೬೦೫ನೇ ನಾಮಗಳ ವಿವರಣೆ by makara
ಉ: ೧೪೦. ಲಲಿತಾ ಸಹಸ್ರನಾಮ ೬೦೧ರಿಂದ ೬೦೫ನೇ ನಾಮಗಳ ವಿವರಣೆ
ಶ್ರೀಧರರೆ, 'ಗುಣನಿಧಿಃ' ಯ ಗುಣದ ಕುರಿತ ಹೆಚ್ಚಿನ ವಿವರಣೆಯನ್ನು ಕಾವ್ಯರೂಪಕ್ಕೆ ಅಳವಡಿಸಲು ಯತ್ನಿಸಿದೆ. ಅದರ ಫಲಿತ ಈ ಪದ್ಯಗಳನ್ನು ಜತೆಗೆ ಸೇರಿಸಿದ್ದೇನೆ - ಪರಿಷ್ಕರಣೆಗಾಗಿ :-)
.
ಲಘುವಿಹ ಗುಣ ನವಗುಣ ಸಂಕೀರ್ಣ, ಪೂರಕವಿರುದ್ಧಾಂಶ ಶಿವ ಗುಣ
ಕಾಲ-ಕುಲ-ನಾಮ-ಜ್ಞಾನ-ಚಿತ್ತ-ನಾದ-ಬಿಂದು-ಕಲ್ಪ-ಜೀವ ಸಮ್ಮೇಳನ
ಸಮಯ-ವಂಶಾವಳಿ-ಹೆಸರು-ತಿಳುವಳಿಕೆ-ಪ್ರಜ್ಞಾಮನ-ಸೂಕ್ಷ್ಮಶಬ್ದಗಳ
ಜತೆಗೆ ಹದಿನಾರುಕಲಾ ಹೊಂದಿ ಬಿಂದು, ಕಲ್ಪ-ಜೀವಾದಿ ಭಿನ್ನಾರ್ಥಗಳ ||
.
ಪ್ರಾಣ-ಸಹಜ ಸ್ವಭಾವ-ಪಂಚಭೂತ-ತನ್ಮಾತ್ರಾ-ಇಂದ್ರಿಯಗಳಾ ಸಾಲು
ಕರ್ಮೇಂದ್ರಿಯ-ಜ್ಞಾನೇಂದ್ರಿಯ-ಮನಸ್ಸು-ಆಹಾರ-ಜೀವನ-ಶಕ್ತಿ ಇರಲು
ತಪಸ್ಸು-ಮಂತ್ರ-ಕರ್ಮ-ಲೋಕ-ಹೆಸರು ಸೇರಿ ಹದಿನಾರು ಕಲಾಪೂರ್ತಿ
ಅದನೊಳಗೊಂಡ ಬಿಂದು ನವಗುಣ ಸಂಕೀರ್ಣದಲೊಂದಾಗಿ ಸಹವರ್ತಿ ||
.
ಷೋಡಶ ಕಲಾಕರ್ತ ಪರಬ್ರಹ್ಮ-ಪುರುಷ, ಸೃಷ್ಟಿಸೆ ಪ್ರಾಣ-ಹಿರಣ್ಯಗರ್ಭ
ಪ್ರಾಣದಲೆ ಶ್ರದ್ದೆಯಾಗಿ ಆಕಾಶ, ವಾಯು, ಬೆಂಕಿ, ನೀರಾಗೊ ಸಂಧರ್ಭ
ನೀರಲಿ ಭೂಮಿ, ಭೂಮಿಗಿಂದ್ರಿಯ-ಮನಸು-ಅನ್ನ, ಆನ್ನದಿಂದ ಉತ್ಪನ್ನ
ವೀರ್ಯ-ತಪ-ಮಂತ್ರ-ಕರ್ಮ-ಲೋಕ, ಆ ಲೋಕದೆ ನಾಮ ವಸ್ತು ಜನ್ಮ ||
,
ಪುರುಷ ನಿರ್ಗುಣ ಬ್ರಹ್ಮ, ಪ್ರಾಣವೆ ಹಿರಣ್ಯ ಗರ್ಭ
ಕರ್ಮ ಪ್ರವೃತ್ತಿಗೆ ಸಾಧನ ಸಾಮರ್ಥ್ಯವೆ ವೀರ್ಯ
ಋಕ್ಕು-ಯಜಸ್ಸು-ಸಾಮ-ಅಥರ್ವಾಂಗಿರಸ್ಸು ವೇದ ಮಂತ್ರಗಳು
ಯಜ್ಞಯಾಗ ಕರ್ಮ, ಕರ್ಮಫಲಕನುಗುಣ ಹೊಂದೆ ಲೋಕಗಳು ||
.
.
-ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು