೧೪೪. ಲಲಿತಾ ಸಹಸ್ರನಾಮ ೬೧೯ರಿಂದ ೬೨೨ನೇ ನಾಮಗಳ ವಿವರಣೆ

೧೪೪. ಲಲಿತಾ ಸಹಸ್ರನಾಮ ೬೧೯ರಿಂದ ೬೨೨ನೇ ನಾಮಗಳ ವಿವರಣೆ

                                                                                                                     ಲಲಿತಾ ಸಹಸ್ರನಾಮ ೬೧೯ - ೬೨೨

Pāvanākṛitiḥ पावनाकृतिः (619)

೬೧೯. ಪಾವನಾಕೃತಿಃ

            ದೇವಿಯು ಪರಿಶುದ್ಧತೆಯ ಮೂರ್ತರೂಪವಾಗಿದ್ದಾಳೆ. ದೇವಿಯು ಎಲ್ಲಾ ವಿಧವಾದ ಮಂಗಳಕರ ಕೆಲಸಗಳನ್ನೂ ಅಂದರೆ ಸೃಷ್ಟಿ, ಸ್ಥಿತಿ ಮತ್ತು ಮುಕ್ತಿಯಂತಹ ಕಾರ್ಯಗಳನ್ನೂ ಮಾಡುತ್ತಾಳೆ ಎನ್ನುವ ಅರ್ಥವನ್ನೂ ಈ ನಾಮವು ಹೊಂದಿದೆ. ದೇವಿಯು ಆತ್ಮಸಾಕ್ಷಾತ್ಕಾರಕ್ಕೆ ಕಾರಣಳಾಗಿದ್ದಾಳೆ ಏಕೆಂದರೆ ಆಕೆ ಮಾತ್ರವೇ ಶಿವನಲ್ಲಿಗೆ ಕರೆದೊಯ್ಯಬಲ್ಲಳು. ಒಂದು ಜೀವಿಯು ತಪಸ್ಸು ಹಾಗು ಜ್ಞಾನದಿಂದ ಪರಿಶುದ್ಧವಾಗುತ್ತದೆ. ಅತ್ಯುನ್ನತವಾದ ಜ್ಞಾನ ಅಥವಾ ವಿವೇಕವನ್ನು ಹೊಂದುವುದರಿಂದ ಮಾತ್ರವೇ ಬ್ರಹ್ಮಸಾಕ್ಷಾತ್ಕಾರವು ಸಾಧ್ಯವಾಗುತ್ತದೆ. ಈ ವಿಧವಾದ ಶುದ್ಧೀಕರಣವು ಕೇವಲ ದೇವಿಯ ಕೃಪೆಯಿಂದ ಮಾತ್ರವೇ ಸಾಧ್ಯ. ಕೇವಲ ದೇವಿಯನ್ನು ಕುರಿತು ಆಲೋಚಿಸಿದರೆ ಸಾಕು ಒಬ್ಬನು ಪರಿಶುದ್ಧನಾಗುತ್ತಾನೆ ಎಂದು ಹೇಳಲಾಗುತ್ತದೆ. ನಿರಂತರವಾಗಿ ಆಕೆಯನ್ನು ಮನಸ್ಸಿನಲ್ಲಿ ಚಿಂತಿಸುತ್ತಿರುವುದೇ ಅತ್ಯಂತ ಹೆಚ್ಚಿನದಾದ ಆಧ್ಯಾತ್ಮಿಕ ಕ್ರಿಯೆಯಾಗಿದೆ. ಉಳಿದೆ ಕ್ರಿಯೆಗಳಾದ ಧ್ಯಾನ ಮತ್ತು ಬಾಹ್ಯಾಚರಣೆಗಳನ್ನೆಲ್ಲಾ ಕೆಳಸ್ತರದವು ಮತ್ತು ಪರಿಣಾಮರಹಿತವಾದವುಗಳೆಂದು ಪರಿಗಣಿಸಲಾಗಿದೆ. ಈ ಕ್ರಿಯೆಗಳೆಲ್ಲಾ ಕೇವಲ ಅಂತಿಮವಾಗಿ ನಿರಂತರ ಅರಿವುಂಟು ಮಾಡುವ ಕ್ರಿಯೆಯಾದ ದೈವೀ ಸಂವಹನ, ಪರಮಾನಂದ ಮತ್ತು ಮುಕ್ತಿಗಳ ಕಡೆಗೆ ಕೊಂಡೊಯ್ಯುವ ಸಲಕರಣೆಗಳಾಗಿವೆ. ೫೪೨ನೇ ನಾಮವನ್ನೂ ಸಹ ನೋಡಿ.

Aneka-koṭi-brahmāṇḍa-jananī अनेक-कोटि-ब्रह्माण्ड-जननी (620)

೬೨೦. ಅನೇಕ-ಕೋಟಿ-ಬ್ರಹ್ಮಾಂಡ-ಜನನೀ

           ದೇವಿಯು ಕೋಟ್ಯಂತರ ಪ್ರಪಂಚಗಳಿಗೆ ಜನ್ಮವಿತ್ತಿದ್ದಾಳೆ ಎನ್ನುವುದು ಈ ನಾಮದ ಶಬ್ದಶಃ ಅರ್ಥ. ಈ ಅರ್ಥವು ಆಕೆಯ ಲಕ್ಷಣಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯವುಂಟು ಮಾಡುವ ಕ್ರಿಯೆಗಳ ಮೇಲೆ ಆಧಾರಿತವಾಗಿದೆ. ಈ ಪ್ರಪಂಚವು ಭೂಮಿಯಂತಿರುವ ಲಕ್ಷಾಂತರ ಗ್ರಹಗಳು ಮತ್ತು ಅವುಗಳ ನೀಹಾರಿಕೆಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಮನುಷ್ಯನಿಗೆ ನಾಲ್ಕು ಪ್ರಧಾನವಾದ ಪ್ರಜ್ಞೆಯ ಹಂತಗಳಿವೆ - ನಿದ್ರಾ (ಜಾಗ್ರತ್), ಸ್ವಪ್ನ, ಸುಷುಪ್ತಿ (ಗಾಢ ನಿದ್ರಾವಸ್ಥೆ) ಮತ್ತು ತುರಿಯಾ ಅವಸ್ಥೆ. ಈ ವಿಧವಾದ ಪ್ರಜ್ಞೆಗಳು ಜೀವಿಗಳು ಅಥವಾ ಅಣುಲೋಕಕ್ಕೆ ಸೇರಿದವರಿಗೆ ಅನ್ವಯಿಸುತ್ತವೆ. ಅದೇ ವಿಧವಾಗಿ ಪರಬ್ರಹ್ಮ ಅಥವಾ ಬೃಹತ್‌ ಬ್ರಹ್ಮಾಂಡಲೋಕದವನಿಗೆ ನಾಲ್ಕು ವಿವಿಧ ಹಂತಗಳಿವೆ. ಅವುಗಳೆಂದರೆ ಅವ್ಯಕ್ತ, ಈಶ್ವರ, ಹಿರಣ್ಯಗರ್ಭ ಮತ್ತು ವಿರಾಟ್.

           ಅವ್ಯಕ್ತ ಎಂದರೆ ರೂಪಾಂತರ ಹೊಂದದೇ ಇರುವ ಪ್ರಕೃತಿಯಾಗಿದ್ದು ಈ ಹಂತದಲ್ಲಿ ತ್ರಿಗುಣಗಳು ಸಮಾನ ಪ್ರಮಾಣದಲ್ಲಿ ಇರುತ್ತವೆ. ಅವ್ಯಕ್ತ ಎನ್ನುವುದು ಪರಬ್ರಹ್ಮದ ಪ್ರಥಮ ಹಂತವಾಗಿದ್ದು ಅದನ್ನು ವಿವರಿಸಲಾಗದು, ಏಕೆಂದರೆ ಅದು ಪರಬ್ರಹ್ಮದ ಪರಿಶುದ್ಧ ರೂಪವಾಗಿದ್ದು ಅದು ಅನಾದಿಯಾಗಿರುತ್ತದೆ. ಇದನ್ನೇ ತುರಿಯಾ ಅಥವಾ ಪ್ರಜ್ಞೆಯ ನಾಲ್ಕನೆಯ ಹಂತವೆಂದು ಕರೆಯಲ್ಪಡುತ್ತದೆ. ಇದು ದ್ವಿತ್ವ ರಹಿತ ಅಥವಾ ಅದ್ವೈತ ಸ್ಥಿತಿ, ಇಲ್ಲಿ ಅದ್ವಿತೀಯವಾದ ಬ್ರಹ್ಮದ ಸಾಕ್ಷಾತ್ಕಾರವಾಗುತ್ತದೆ. ಇದು ಅತ್ಯಂತ ಸೂಕ್ಷ್ಮಗುಣದ್ದಾಗಿದ್ದು ಇದು ಪರಮಶಾಂತತೆ ಮತ್ತು ಪರಿಪೂರ್ಣವಾದ ಆನಂದದ (ಪರಮಾನಂದ) ಸ್ಥಿತಿಯನ್ನು ಹೊಂದಿರುತ್ತದೆ.

           ಎರಡನೆಯ ಹಂತವು ಈಶ್ವರವಾಗಿದೆ. ದೇವರ ಪರಿಕಲ್ಪನೆಯು ಇಲ್ಲಿಂದ ಪ್ರಾರಂಭವಾಗುತ್ತವೆ. ಈ ಹಂತವು ಸೃಷ್ಟಿ, ಸ್ಥಿತಿ ಮತ್ತು ಲಯಕ್ಕೆ (ಮರಣಕ್ಕೆ) ಕಾರಣವಾಗಿದ್ದು ಮತ್ತು ಈ ಹಂತವು "ಸರ್ವಜ್ಞ" ಸ್ಥಿತಿಯಾಗಿದೆ. ಮಾಯೆ ಅಥವಾ ಸಾಮಾನ್ಯ ಅರ್ಥದಲ್ಲಿ ಭ್ರಮೆಯು ಈ ಹಂತದಲ್ಲಿ ಸಂಬಂಧವನ್ನು ಹೊಂದಿರುತ್ತದೆ. ಇದು ಕಾರಣ ಶರೀರವನ್ನುಂಟು ಮಾಡುತ್ತದೆ.

          ಮೂರನೆಯ ಹಂತವು ಹಿರಣ್ಯಗರ್ಭವಾಗಿದೆ. ಇದುವೇ ಪ್ರಪಂಚವನ್ನು ಬೆಸೆಯುವ ಅಂಶವಾಗಿದೆ. ಇದು ಎಲ್ಲಾ ಸೃಷ್ಟಿಗಳನ್ನು ಒಟ್ಟಿಗೆ ಹಿಡಿದಿಡುತ್ತದೆ. ಇದರಿಂದ ಸೂಕ್ಷ್ಮ ಶರೀರ ಅಥವಾ ಲಿಂಗ ಶರೀರವು ಉಂಟಾಗುತ್ತದೆ. 

          ನಾಲ್ಕನೆಯ ಹಂತವು ವಿರಾಟ್ ಆಗಿದೆ. ಇದನ್ನು ವೈಶ್ವಾನರವೆಂದೂ ಕರೆಯಲಾಗುತ್ತದೆ. ಈ ಹಂತದಲ್ಲಿ ವಿವಿಧ ರೂಪಗಳ ಆವಿರ್ಭಾವವು ಉಂಟಾಗುತ್ತದೆ ಮತ್ತು ಈ ಪ್ರಪಂಚದ ಸ್ಥೂಲ ರೂಪವು ಅನುಭವಕ್ಕೆ ಬರುತ್ತದೆ ಮತ್ತು ಇದು ನಮ್ಮ ಜೈವಿಕ ಕಣ್ಣುಗಳಿಗೆ ಗೋಚರವಾಗುತ್ತದೆ. ಆದರೆ ಇದು ಸರ್ವವೂ ಅಲ್ಲ. ಇದು ಕೇವಲ ಬ್ರಹ್ಮದ ಒಂದು ಅಣುವಿನಷ್ಟು ಸಣ್ಣ ಅಂಶವಷ್ಟೇ.. ಯಾವಾಗ ವಿರಾಟ್ ಅಥವಾ ವೈಶ್ವಾನರವು ಮಾಯೆಯೊಂದಿಗೆ ಸಂಯೋಗವನ್ನು ಹೊಂದುತ್ತದೆಯೋ ಆಗ ಸ್ಥೂಲ ರೂಪಗಳು ಗ್ರಹಿಕೆಗೆ ನಿಲುಕುತ್ತವೆ. ವಿರಾಟ್‌ ಅಥವಾ ವೈಶ್ವಾನರದಿಂದ ಸ್ಥೂಲ ರೂಪವು ಉಂಟಾಗುತ್ತದೆ.

         ಯಾವಾಗ ಜೀವಿ ಅಥವಾ ಪುರುಷವು ಪ್ರಕೃತಿಯೊಂದಿಗೆ ಸಂಯೋಗವನ್ನು ಹೊಂದುತ್ತದೆಯೋ ಆಗ ಎಲ್ಲಾ ಜೀವಿಗಳ ಹುಟ್ಟು ಆರಂಭವಾಗುತ್ತದೆ. ಯಾವಾಗ ವಿರಾಟ್ ಎನ್ನುವುದು ಮಾಯೆಯೊಂದಿಗೆ ಸಂಯೋಗ ಹೊಂದುತ್ತದೆಯೋ ಆಗ ಈ ಪ್ರಪಂಚದ ಹುಟ್ಟು ಪ್ರಾರಂಭವಾಗುತ್ತದೆ. ಮೊದಲನೆಯದು ಅಣುಲೋಕವಾದರೆ ತದನಂತರದ್ದು ಬ್ರಹ್ಮಾಂಡಲೋಕವಾಗಿದೆ. ಈ ನಾಲ್ಕೂ ಹಂತಗಳು ಈ ಸಹಸ್ರನಾಮದಲ್ಲಿ ಉಲ್ಲೇಖಗೊಂಡಿವೆ. ಅವ್ಯಕ್ತವು (ಅವ್ಯಕ್ತಾ ಆಗಿ ೩೯೮ನೇ ನಾಮದಲ್ಲಿ), ಈಶ್ವರವು (ಈಶ್ವರೀ ಆಗಿ ೨೭೧ನೇ ನಾಮದಲ್ಲಿ), ಹಿರಣ್ಯಗರ್ಭವು (ಸ್ವರ್ಣಗರ್ಭಾ ಆಗಿ ೬೩೮ನೇ ನಾಮದಲ್ಲಿ) ಮತ್ತು ವಿರಾಟ್ ಎನ್ನುವುದು ವಿರಾಟ್-ರೂಪಾ ಆಗಿ ೭೭೮ನೇ ನಾಮದಲ್ಲಿ ಉಲ್ಲೇಖಿಸಲ್ಪಟ್ಟಿವೆ. ಈ ನಾಮವು ಈ ನಾಲ್ಕು ಹಂತಗಳ ಸಂಯುಕ್ತ ರೂಪವನ್ನು ಹೇಳುತ್ತದೆ.

        ಐತರೇಯ ಉಪನಿಷತ್ತು ಹೀಗೆ ಪ್ರಾರಂಭವಾಗುತ್ತದೆ, "ಮೊದಲು ಇದು ಆತ್ಮನೊಬ್ಬನೇ ಆಗಿತ್ತು (ತಾನೇ ಸಂಪೂರ್ಣವಾಗಿತ್ತು), ವೀಕ್ಷಣವೇ ಮೊದಲಾದ ಕ್ರಿಯೆಯುಳ್ಳ ಬೇರೆ ಯಾವುದೂ ಇರಲಿಲ್ಲ. ಲೋಕಗಳನ್ನು ಸೃಷ್ಟಿಸುವೆನು ಎಂದು ಅವನು ಆಲೋಚಿಸಿದನು". ಇದು ಸೃಷ್ಟಿ ಹಾಗು ಸೃಷ್ಟಿ ಕ್ರಿಯೆಯ ಕುರಿತಾದ ಬ್ರಹ್ಮದ ಇಚ್ಛೆಯನ್ನು ಕುರಿತು ಹೇಳುತ್ತದೆ.

Divya-vigrahā दिव्य-विग्रहा (621)

೬೨೧. ದಿವ್ಯ ವಿಗ್ರಹ

           ದೇವಿಗೆ ದಿವ್ಯ ಆಕಾರವನ್ನು ಹೊಂದಿದ ಶರೀರವಿದೆ ಇಂತಹ ಸೌಂದರ್ಯವನ್ನು ಹೊಂದುವುದು ಕೇವಲ ದೈವಗಳಿಗೆ ಮಾತ್ರವೇ ಸಾಧ್ಯ. ಈ ನಾಮಕ್ಕೆ ಮತ್ತೊಂದು ವ್ಯಾಖ್ಯಾನವೂ ಇದೆ. ದಿವ್ಯ ಎಂದರೆ ದೇವಲೋಕ ಮತ್ತು ವಿಗ್ರಹ ಎಂದರೆ ಯುದ್ಧ. ಶ್ರೀ ದೇವಿ ಮಹಾತ್ಮ್ಯದಲ್ಲಿ, ದೇವಿಯು ಆಕಾಶಕ್ಕೆ ಯಾವುದೇ ಆಧಾರವಿಲ್ಲದೇ ಏರಿ ಅಲ್ಲಿಂದಲೇ ರಾಕ್ಷಸನಾದ ಶುಂಭನೊಂದಿಗೆ ಹೋರಾಟವನ್ನು ಮಾಡಿದಳೆಂದು ತಿಳಿಸುತ್ತದೆ.

Klīṁkārī क्लींकारी (622)

೬೨೨. ಕ್ಲೀಂಕಾರೀ

          ದೇವಿಯು ಕಾಮ ಬೀಜವಾದ ಕ್ಲೀಂ (क्लीं) ರೂಪದಲ್ಲಿದ್ದಾಳೆ. ಇದನ್ನು ಪ್ರೇಮದ ಅಧಿದೇವತೆಯಾದ ಮನ್ಮಥ ಅಥವಾ ಕಾಮದೇವನ ಬೀಜಾಕ್ಷರವೆಂದೂ ಕರೆಯಲಾಗುತ್ತದೆ. ಕ  (क) ಎನ್ನುವುದು ಕಾಮದೇವನನ್ನು,  ಲ (ल) ಇಂದ್ರನನ್ನು ಮತ್ತು ಈ (ई) ಸ್ವಸ್ಥತೆ (ತೃಪ್ತಿ) ಮತ್ತು ಬಿಂದುವು ಒಬ್ಬನ ಕರ್ಮ ಶೇಷಕ್ಕನುಗುಣವಾಗಿ ಸುಖ ಅಥವಾ ದುಃಖವನ್ನು ಸೂಚಿಸುತ್ತವೆ. ಈ ವಿವರಣೆಯನ್ನು ಶಿವನು ಶಕ್ತಿಯ ಮೇಲಿನ ಪ್ರೀತಿಯಿಂದಾಗಿ ಅವಳಿಗೆ ತಿಳಿಸಿದ್ದಾನೆ. ಕ್ಲೀಂ(क्लीं) ಬೀಜಾಕ್ಷರವನ್ನು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯನ್ನು ಪ್ರಸನ್ನಗೊಳಿಸುವುದಕ್ಕಾಗಿ ಬಳಸಲಾಗುತ್ತದೆ.

         ಕ್ಲೀಂಕಾರ ಎಂದರೆ ಶಿವ ಮತ್ತು ಆತನ ಹೆಂಡತಿಯು ಕ್ಲೀಂಕಾರೀ ಮತ್ತು ಈ ವಿಧವಾಗಿ ಕ ಎಂದರೆ ಶಿವ ಮತ್ತು ಲ ಎಂದರೆ ಶಕ್ತಿ ಮತ್ತು ಈಂ (ईं) ಎನ್ನುವುದನ್ನು ಕಾಮಕಲಾ (ನಾಮ ೩೨೨) ಎಂದು ಪರಿಗಣಿಸಲಾಗಿದೆ. ಆದ್ದರಿಂದ ಕ್ಲೀಂ (क्लीं) ಬೀಜವು ಶಿವ-ಶಕ್ತಿಯರ ಐಕ್ಯತೆಯನ್ನು ಸೂಚಿಸುತ್ತದೆ.

                                                                                                                                ******

ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 619 - 622 http://www.manblunder.com/2010/02/lalitha-sahasranamam-619-622.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Fri, 10/25/2013 - 18:18

ಶ್ರೀಧರರೆ, '೧೪೪. ಶ್ರೀ ಲಲಿತಾ ಸಹಸ್ರನಾಮದ ವಿವರಣೆ' ಯ ಕಾವ್ಯರೂಪ ಪರಿಷ್ಕರಣೆಗೆ ಸಿದ್ಧ :-)
.
ಲಲಿತಾ ಸಹಸ್ರನಾಮ ೬೧೯ - ೬೨೨
___________________________________
.
೬೧೯. ಪಾವನಾಕೃತಿಃ
ಮಾಡುತೆಲ್ಲ ಮಂಗಳ ಸೃಷ್ಟಿ, ಸ್ಥಿತಿ,ಮುಕ್ತಿ,ಆತ್ಮಸಾಕ್ಷಾತ್ಕಾರ
ತಪ-ಜ್ಞಾನದೆ ಪರಿಶುದ್ಧ, ದೇವಿ ಕೃಪೆ ಶುದ್ಧಿಗೆ ಕಾರ್ಯಾಗಾರ
ನಿರಂತರಮನ ದೇವಿಚಿಂತನ, ಉನ್ನತಸ್ತರ ಆಧ್ಯಾತ್ಮಿಕ ಕೃತಿ
ದೈವೀ ಸಂವಹನ-ಪರಮಾನಂದ-ಮುಕ್ತಿಯತ್ತ ಪಾವನಾಕೃತಿಃ ||
.
೬೨೦. ಅನೇಕ-ಕೋಟಿ-ಬ್ರಹ್ಮಾಂಡ-ಜನನೀ
ಸೃಷ್ಟಿ-ಸ್ಥಿತಿ-ಲಯ ಬ್ರಹ್ಮ ಲಕ್ಷಣ, ಕೋಟ್ಯಂತರ ಪ್ರಪಂಚಕೆ ಜನ್ಮವಿತ್ತ ಕಾರಣ
ಭುವಿಯಂತಗಣಿತ ಗ್ರಹ-ತಾರ-ನೀಹಾರಿಕೆ ತುಂಬಿ, ನಾಲ್ಕುಹಂತ ಸಂಪೂರ್ಣ
ನಿದ್ರಾ-ಸ್ವಪ್ನ-ಸುಷುಪ್ತಿ-ತುರ್ಯ ಪ್ರಜ್ಞಾಹಂತ, ಮನುಜಜೀವಾಣುಲೋಕ ಸರಣಿ
ಅವ್ಯಕ್ತ-ಈಶ್ವರ-ಹಿರಣ್ಯಗರ್ಭ-ವಿರಾಟ್ ಹಂತ ಅನೇಕಕೋಟಿಬ್ರಹ್ಮಾಂಡಜನನೀ ||
.
ತ್ರಿಗುಣಗಳಿಹ ಸಮ ಪ್ರಮಾಣ, ರೂಪಾಂತರ ಹೊಂದದ ಪ್ರಕೃತಿಯೆ ಅವ್ಯಕ್ತ
ಪರಿಶುದ್ಧ ಬ್ರಹ್ಮದನಾದಿ ರೂಪ, ವಿವರಿಸಲಾಗದ ಪರಬ್ರಹ್ಮ ಪ್ರಥಮ ಹಂತ
ತುರ್ಯಾವಸ್ಥಾ ಅದ್ವೈತ ಸ್ಥಿತಿ, ಪರಮಶಾಂತತೆ ಪರಿಪೂರ್ಣಾನಂದ ಸಾಕಾರ
ಸೂಕ್ಷ್ಮಗುಣದ ದ್ವಿತ್ವರಹಿತದೀ ಸ್ಥಿತಿಯಲಿ, ಅದ್ವಿತೀಯ ಬ್ರಹ್ಮದ ಸಾಕ್ಷಾತ್ಕಾರ ||
.
ದೈವ ಪರಿಕಲ್ಪನೆ ಆರಂಭ ಎರಡನೆ ಹಂತ, ಸೃಷ್ಟಿ ಸ್ಥಿತಿ ಲಯ ಕಾರಣ ಈಶ್ವರ
ಮಾಯ ಭ್ರಮೆ ಸಂಬಂಧಿ ಹಂತ, ಮಾಡಿ ಕಾರಣ ಶರೀರ, ಸರ್ವಜ್ಞ ಸ್ಥಿತಿ ಪೂರ
ಪ್ರಪಂಚ ಬೆಸೆವಾಂಶ ಹಿರಣ್ಯಗರ್ಭ, ಸೃಷ್ಟಿ ಸಮಷ್ಟಿಯಲಿಡುವ ಮೂರನೆ ಹಂತ
ಸೂಕ್ಷ್ಮ ಶರೀರ - ಲಿಂಗ ಶರೀರ, ಉಂಟು ಮಾಡುವ ಸಂಯೋಜಕ ಜಗಸಂಕೇತ ||
.
ವೈಶ್ವಾನರವೆನ್ನುವ ನಾಲ್ಕನೆ ಹಂತವೆ ವಿರಾಟ್, ವಿವಿಧ ರೂಪಗಳ ಆವಿರ್ಭಾವ
ಲೌಕಿಕಾನುಭವ ಗಮ್ಯ ಜಗ ಸ್ಥೂಲ ರೂಪ, ಜೈವಿಕ ನಯನಗೋಚರ ಅನುಭವ
ಸರ್ವವಲ್ಲದ ಹಂತ, ಕೇವಲ ಬ್ರಹ್ಮದ ತುಣುಕುರೂಪ, ಗ್ರಹಿಕೆಗೆ ನಿಲುಕಿ ಸ್ಥೂಲ
ಮಾಯೆ ಸಂಯೋಗದಲಿ ವೈಶ್ವಾನರ, ಸ್ಥೂಲ ರೂಪ ಉಂಟಾಗಿಸುವ್ಹಂತ ಸಬಲ ||
.
೬೨೧. ದಿವ್ಯ ವಿಗ್ರಹ
ದೇವಲೋಕವೆ ದಿವ್ಯ, ವಿಗ್ರಹವೆನೆ ಯುದ್ಧ ರಾಕ್ಷಸಾ ಶುಂಭ
ಆಧಾರವಿಲ್ಲದೆ ಆಕಾಶಕೇರಿ ಹೋರಾಟ, ಶ್ರೀದೇವಿಗೆ ಶೋಭ
ಕಡೆದ ವಿಗ್ರಹದಂತೆ, ದೈವಕಷ್ಟೆ ಇಹ ಅದ್ಭುತ ಸೌಂದರ್ಯ
ದಿವ್ಯಾಕಾರದಲೀ ಶರೀರ, ದೇವಿಯಾಕಾರವೆ ದಿವ್ಯ ವಿಗ್ರಹ ||
.
೬೨೨. ಕ್ಲೀಂಕಾರೀ
ಪ್ರೇಮದಧಿದೇವತೆ ಕಾಮದೇವನ ಬೀಜಾಕ್ಷರ 'ಕ್ಲೀಂ' ರೂಪದಲಿಹಳು ಲಲಿತೆ
ಕ-ಮನ್ಮಥ, ಲ-ಇಂದ್ರ, ಈ-ಸ್ವಸ್ಥತೆ, ಬಿಂದು-ಕರ್ಮಶೇಷಾಸುಖದುಃಖ ಕಥೆ
ಸಂಪತ್ತಿನಧಿದೇವತೆ ಲಕ್ಷ್ಮಿ ಸಂಪ್ರೀತಿಗೆ 'ಕ್ಲೀಂ', ಕ-ಶಿವ, ಲ-ಶಕ್ತಿ ಐಕ್ಯತೆಗೆ ಗುರಿ
ಈಂ-ಕಾಮಕಲ ಬೀಜ, 'ಕೀಂ' ಐಕ್ಯತೆ ಸಾರಿ, ಕ್ಲೀಂಕಾರವೆ ಶಿವ, ಶಕ್ತಿ ಕ್ಲಿಂಕಾರೀ ||
.
.
- ಧನ್ಯವಾದಗಳೊಂದಿಗೆ
   ನಾಗೇಶ ಮೈಸೂರು