ಶ್ರೀ ರಾಮನಿಗೇನಿತ್ತನಿವಾರ್ಯ....?

ಶ್ರೀ ರಾಮನಿಗೇನಿತ್ತನಿವಾರ್ಯ....?

ಹೊಸವರ್ಷದ ಹೊಸ ಹರಕೆಯೊಡನೆ ಕಾಲಿಟ್ಟ ಯುಗಾದಿಯ ಸೊಗ ಆರುವ ಮೊದಲೆ, ಅದರ ಬೆನ್ನ ಹಿಂದೆಯೆ ಶ್ರೀ ರಾಮ ನವಮಿ ಕಾಲಿಡುತ್ತಿದೆ. ಶ್ರಿ ರಾಮನವಮಿಯೆಂದರೆ ಪಟ್ಟನೆ ನೆನಪಾಗುವುದು ಬೆಲ್ಲದ ಪಾನಕ, ನೀರು ಮಜ್ಜಿಗೆ. ಈ ಹಬ್ಬ ಬರುವ ಕಾಲದಲಿ ಸಾಮಾನ್ಯವಾಗಿರುವ ಬಿಸಿಲ ಬೇಗೆಯನ್ನು ಗಮನಿಸಿದರೆ, ಆ ಬೇಗೆಯನ್ನು ತಂಪಾಗಿಸಲೋಸುಗವೆ ನಮ್ಮ ಹಿರಿಯರು ಈ ಪಾನಕ ನೀರು ಮಜ್ಜಿಗೆಯಂತಹ ಪಾನೀಯಗಳನ್ನು ಹಬ್ಬದ ನೆಪದಲ್ಲಿ ಸೇವಿಸುತ್ತಿದ್ದರೆಂದೆನಿಸುತ್ತದೆ. ನಮ್ಮ ಮನೆಯ ಸುತ್ತಮುತ್ತಲಿದ್ದ ಎಲ್ಲಾ ರಾಮಮಂದಿರಗಳಲ್ಲಿ ಹಂಡೆಗಟ್ಟಲೆ ಮಾಡಿಟ್ಟು ಬಂದು ಹೋಗುವವರಿಗೆಲ್ಲ ಹಂಚುತ್ತಿದ್ದುದು ನಾನು ಚಿಕ್ಕವನಿದ್ದಾಗಿನಿಂದಲೂ ಕಾಣುತ್ತಿದ್ದ ಸಾಮಾನ್ಯ ದೃಶ್ಯ. ಆಗೆಲ್ಲ ಗುಂಪುಗುಂಪಾಗಿ ಎಲ್ಲ ರಾಮ ಮಂದಿರಕ್ಕೂ ಹೋಗಿ, ಸರತಿಯ ಸಾಲಲ್ಲಿ ನಿಂತು ಪಾನಕ ನೀರು ಮಜ್ಜಿಗೆ ಹಾಕಿಸಿಕೊಂಡು ಕುಡಿಯುತ್ತಿದೆವು. ಮನೆಯಲ್ಲಿಯೆ ಮಾಡಿರುತ್ತಿದ್ದರೂ ಅಲ್ಲಿ ಹೋಗಿ ಸಾಲಲ್ಲಿ ನಿಂತು ಪಡೆಯುವ 'ಥ್ರಿಲ್'ಗಾಗಿ, ಅದೂ ನಮ್ಮದೆ ಲೋಟಗಳನ್ನು ಹಿಡಿದು ಓಡುತ್ತಿದ್ದೆವು! ಆಗಿನ್ನು ಈಗಿನಷ್ಟು ಬಳಸಿ ಉಪಯೋಗಿಸುವ ಪ್ಲಾಸ್ಟಿಕ್ ಕಪ್ಪಿನ ಯುಗ ಕಾಲಿಟ್ಟಿರಲಿಲ್ಲವಾದ್ದರಿಂದ ನಮ್ಮ ಕಪ್ಪೆ ಬಳಸಬೇಕಿತ್ತು; ಎಷ್ಟು ದೊಡ್ಡದು ಸಾಧ್ಯವೊ ಅಷ್ಟು ದೊಡ್ಡದನ್ನೆ ಒಯ್ಯುತ್ತಿದ್ದೆವು - ಚೊಂಬಿನಷ್ಟು ದೊಡ್ಡದು ಎಂದು ಬೈಯ್ಸಿಕೊಳ್ಳಬಾರದೆಂದು, ಹೊಟ್ಟೆ ದಪ್ಪಗಿದ್ದ ಕಿರುಬಾಯಿನ ಗಿಂಡಿಯಂತಹ ಲೋಟಗಳನ್ನು ಒಯ್ಯುತ್ತಿದ್ದುದು ಉಂಟು.

ಆಗೆಲ್ಲ ರಾಮಾಯಣ ಮಹಭಾರತ ಕಥೆಗಳನ್ನು ಓದುವುದೆಂದರೆ ಏನೊ ಉತ್ಸಾಹ. ಓದಿದ್ದನ್ನೆ ಅದೆಷ್ಟು ಬಾರಿಮತ್ತೆ ಮತ್ತೆ ಓದಿದೆನೊ ನೆನಪಿಲ್ಲ. ದಪ್ಪ ರಾಮಾಯಣದ ಕನ್ನಡ ಪುಸ್ತಕವೊಂದು ದೊಡ್ಡಪ್ಪನ ಮನೆಯಲಿತ್ತು. ಅಲ್ಲಿದ್ದ ದಿನಗಳಲ್ಲಿ ಅರ್ಧ ಮಾಡುತ್ತಿದ್ದ ಕೆಲಸವೆಂದರೆ ಆ ಪುಸ್ತಕವನ್ನೆ ಮತ್ತೆ ಮತ್ತೆ ಓದುತ್ತಿದ್ದುದ್ದು. ರಾಮ, ಲಕ್ಷ್ಮಣ, ಸೀತೆ, ಹನುಮಂತ - ಹೀಗೆ ರಾಮಾಯಣದ ಎಲ್ಲಾ ಪಾತ್ರಗಳು ಒಂದೊಂದಾಗಿ ಮನದೊಳಗೆ ಆಳವಾಗಿಳಿದಿದ್ದು ಈ ಓದುವಿಕೆಯ ಪ್ರಭಾವದಿಂದಲೆ. ಆಗ ಬರಿಯ ಕಥೆಯನ್ನೊದುವ ಉತ್ಕಟೇಚ್ಛೆಯಿಂದ ಬಂದ ಓದುವ ಹವ್ಯಾಸ, ಹಂಬಲ; ಅವತಾರವೆತ್ತಿದ ಕಾರಣ, ವನವಾಸ, ಸೀತಾಪಹರಣ, ರಾಮ ರಾವಣ ಯುದ್ಧ - ಎಲ್ಲವೂ ಸುಸಂಬದ್ಧವಾಗಿ ಹೆಣೆದ ಮಹಾನ್ಕಥೆಯಾಗಿ ಮನದಲ್ಲಿ ನಿಂತು ಆ ಪಾತ್ರಗಳ ಅದೆಷ್ಟೋ ಗುಣ, ನಡವಳಿಕೆಗಳ ಆದರ್ಶಗಳನ್ನು ನಮಗರಿವಾಗುವ ಮೊದಲೆ ನಮ್ಮ ವ್ಯಕ್ತಿತ್ವದ ಭಾಗಗಳಾಗಿ ಲೇಪಿಸಿ, ರೂಪಿಸುತ್ತ ನಮ್ಮ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದು ಅಷ್ಟೆ ಗಮನೀಯ ; ಆದರೆ ಆ ವಯಸಿನಲ್ಲಿ ಅದರ ಅರಿವಿನ ಪರಿವೆಯೆಲ್ಲಿತ್ತು? ಹನುಮ ಹೇಗೆ ಹಾರಿದ, ಸುರಸೆಯನ್ಹೇಗೆ ಮಣಿಸಿದ, ಲಂಕಿಣಿಯನ್ಹೇಗೆ ದಂಡಿಸಿದ - ಆ ರೋಮಾಂಚನಗಳೆ ಹೆಚ್ಚು ಪ್ರಿಯವಾಗಿದ್ದ ಕಾಲ....

ದೊಡ್ಡವರಾಗುತ್ತ ಬೆಳೆದಂತೆ, ಪ್ರಬುದ್ದತೆ, ಫ್ರೌಡಿಮೆಗಳ ನೆರಳಡಿಯಲ್ಲಿ ಇಡಿ ರಾಮಾಯಣ ಮತ್ತು ವಿಷ್ಣುವಿನ ಹಲವು ಅವತಾರಗಳ ಸಮಗ್ರತೆಯ ಅರಿವಾದಾಗ ಹೆಚ್ಚೆಚ್ಚು ಬಾರಿ ಕಾಡುತ್ತಿದ್ದ ಪ್ರಶ್ನೆ ರಾಮನಿಗೇನಿತ್ತನಿವಾರ್ಯ - ಹೀಗೆ ಸಾಮಾನ್ಯ ಮಾನವನಾಗಿ ಜನಿಸಿ ಎಲ್ಲಾ ಕೋಟಲೆಗಳನ್ನು ಅನುಭವಿಸಲು- ಎಂದು...ಜಯವಿಜಯ ಗರ್ವ, ಶಾಪ ಇತ್ಯಾದಿಗಳ ಹಿನ್ನಲೆ ಕಥನ ಗೊತ್ತಿದ್ದರೂ ಪ್ರಶ್ನೆಯಿದ್ದದ್ದೂ ಅದಕ್ಕು ಮೀರಿದ ತಾತ್ವಿಕ, ಸೈದ್ದಾಂತಿಕ ಹಿನ್ನಲೆಯಲ್ಲಿ. ಯಾವ ಕಾರ್ಯಕಾರಣ ಉದ್ದೇಶಗಳ ಸಲುವಾಗಿ ನಡೆಯಿತೀ ಅಂಕ? ಬರಿ ಭೂಲೋಕೋದ್ದಾರದ, ದುಷ್ಟ ದೈತ್ಯ-ದಾನವರಿಂದ ಮಾನವಕುಲವನ್ನುಳಿಸುವ ಪ್ರಮೇಯ ಮಾತ್ರವಿತ್ತೆ? ಅಥವಾ ಅದಕ್ಕೂ ಮೀರಿದ ಹುಲು ಮನುಜರರಿಯಲಾಗದ ಬೇರೇನೊ ಕಾರಣವಿತ್ತೆ?  ಸಾಮಾನ್ಯನಾಗಿ ಅಷ್ಟೆಲ್ಲಾ ಕಷ್ಟವನ್ನುಭವಿಸುತ್ತ, ಬರಿ ಆದರ್ಶ, ಮರ್ಯಾದೆ, ಉದಾತ್ತತೆಗಳ ಉದಾಹರಣೆಯಾಗಿ ನಿಲ್ಲಲಷ್ಟೆ ಇರಲಾರದು ಈ ಅವತಾರದ ನಿಮಿತ್ತ. ಅಲ್ಲಿ ನಮ್ಮ ಕಣ್ಣಿಗೆ ಕಾಣುವುದಕ್ಕಿಂತಲೂ ಹೆಚ್ಚಿನದೇನೊ, ಮಿಕ್ಕಿದ್ದೇನೊ ಇದೆ - ಅದರೆ ನಮ್ಮ ಗಮ್ಯಕ್ಕೆ ನಿಲುಕದಷ್ಟೆ ಎಂದು ನನ್ನ ಭಾವನೆ. ಹಾಗಿಲ್ಲದೆ ಅಲೌಕಿಕತೆಯ ಪರದೆ ಬದಿಗಿಟ್ಟು, ನಮ್ಮ ಪರಂಪರಾಗತ ನಂಬಿಕೆಯ ನೆಲೆಗಟ್ಟಿನಲ್ಲಿ ನೋಡಿದರೆ, ಈ ಗೊಂದಲವೆ ಬರುವುದಿಲ್ಲ. ಲೋಕ ಕಲ್ಯಾಣಕ್ಕಾಗಿ ಭಗವಂತನ ಅವತಾರ, ನಮ್ಮಂತಹ ಮಾನವರ ನಡುವೆ ಮಾನವನಾಗಿಯೆ ನಡೆಸಿದ ಲೀಲಾ ಪ್ರಕ್ರಿಯೆ ಮಾತ್ರವೆ ಆಗಿಬಿಡುತ್ತದೆ. ಆದರೂ ಕೇಳದ ಮನದ ಕುತೂಹಲ ಇನ್ನೂ ಆಳದಲ್ಲಿ ಬೇರೆಯ ಕಾರಣ ಏನಾದರೂ ಇರಬಹುದೆಂದು ಕಲ್ಪಿಸುತ್ತದೆ; ಕಲ್ಪನೆಯ ಗಾಳಿಪಟಕ್ಕೆ ಲಂಗು ಲಗಾಮು ಕಟ್ಟುವುದಾದರೂ ಹೇಗೆ? ಸದ್ಯಕ್ಕೆ ಕೆಳಗೆ ಕಾಣಿಸಿದ ಈ ಒಂದು ಕವನದ ಆಶಯವಾದರೂ ತಾತ್ಕಾಲಿಕ ಉತ್ತರವಾದೀತೆಂಬ ಅನಿಸಿಕೆ ವಿಶ್ವಾಸದೊಡನೆ ನಿಮಗೆಲ್ಲರಿಗೂ ಶ್ರೀ ರಾಮನವಮಿಯ ಶುಭ ಹಾರೈಕೆಗಳನ್ನು ಬಯಸುತ್ತ - ಪಾನಕ ನೀರುಮಜ್ಜಿಗೆಯನ್ನು ನೆನಪಿಸುತ್ತಾ ಈ ಲೇಖನವನ್ನು ಮುಗಿಸುತ್ತೇನೆ!

ರಾಮಾನಿಗೇನಿತ್ತನಿವಾರ್ಯ....?
--------------------------------------------

ರಾಮನಿಗೇನಿತ್ತನಿವಾರ್ಯ, ಭೂಲೋಕ ವ್ಯಾಪಾರ
ಅವತಾರವೆತ್ತಿದ ತರಹ, ಏನೀ ಹಣೆಬರಹ?

ಬಿಟ್ಟು ಕ್ಷೀರ ಸಾಗರ ಕಲ್ಪ, ಆದಿಶೇಷನ ಮೃದು ತಲ್ಪ
ನಾರುಮಡಿ ಉಟ್ಟು ವೇಷ, ಕಾಡಿನಲಿ ವನವಾಸ!

ಕಾಲೆತ್ತಬಿಡ ನಲುಮೆ, ಕಾಲೊತ್ತಿ ವಕ್ಷಸ್ಥಳಸ್ಥೆ ಲಕುಮಿ    
ಬಿಟ್ಟವಳಶೋಕವೃಕ್ಷದಡಿ, ಪಟ್ಟ ಪಾಡೇನು ಗಡಿಬಿಡಿ?

ಹೊತ್ತೊಯ್ಯಲು ಗರುಡ, ಕೈಂಕರ್ಯಕೆ ದೇವಗಣ ನಿಭಿಢ
ಕಾಡಮೇಡಲೆದಾಟ, ವಾನರರೊಡನೇಕೇಕೊ ಕೂಟ?

ಯೋಗ ಮಾಯಾ ನಿದ್ರೆ, ಹರ ಬ್ರಹ್ಮ ಸಂವಾದ ಮುದ್ರೆ
ಬಿಟ್ಟೇಕೀ ಅವತಾರ ಶ್ರದ್ದೆ, ಹುಲು ಮಾನವರ ಮಧ್ಯೆ!

ಆ ಲೋಕ ಗಾಢಾವಲೋಕನ, ಮೋಕ್ಷಾನಂದ ಸಂಕೀರ್ತನ
ವಿಯೋಗದೊಬ್ಬಂಟಿ ಜೀವನ, ನಿನಗೇಕೀ ಇಹ ಬಂಧನ?

ಹುಡುಕಿ ಕಾರಣ ರಾಮ, ಮರ್ಯಾದಾಪುರುಷೋತ್ತಮನಾ
ಪ್ರಶ್ನಾರ್ಥಕಗಳೆ ಭ್ರಮಣ, ರಾಮ ಹೇಳೆಯಾ ಕಾರಣ?

-------------------------------------------------------------
ನಾಗೇಶ ಮೈಸೂರು, ಸಿಂಗಾಪುರ
-------------------------------------------------------------

Rating
No votes yet

Comments

Submitted by ಗಣೇಶ Wed, 10/23/2013 - 00:10

ನಾಗೇಶರೆ, ಸುಂದರ ಕವನ. ನೋಡೇ ಇರಲಿಲ್ಲ. "ಸಂಪದ ಆರ್ಕೈವ್" ಹೋಗಿ ನೋಡಿದಾಗ ಬಹುಷಃ ನಾನು "ಊರ್ಣಿ ಬಾತ್" ತಿನ್ನುವುದರಲ್ಲೇ ಮಗ್ನನಾಗಿದ್ದೆ. :(

Submitted by nageshamysore Thu, 10/24/2013 - 03:16

In reply to by ಗಣೇಶ

ಗಣೇಶ್ ಜಿ,
ಆದರೂ ಬಿಡಲಿಲ್ಲ ನೋಡಿ ಶ್ರೀರಾಮ - ಸೀತೆಯ ಲೇಖನದ ನೆಪದಲ್ಲಿ ಮತ್ತೆ ಎಳೆತಂದು ಓದುವಂತೆ ಮಾಡಿದ. ಆಗ 'ಊರ್ಣಿ ಬಾತ್' ನಲ್ಲಿ ಮುಳುಗಿದ್ದಕ್ಕೆ ಈಗ ಪಾನಕ, ನೀರುಮಜ್ಜಿಗೆ ಕುಡಿಸುವ ಹುನ್ನಾರ :-)
ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು

Submitted by makara Thu, 10/24/2013 - 18:29

ರಾಮ ಮಾನವಾಗಿ ಅವತಾರ ತೆಳೆದ ದೇವನೋ ಅಥವಾ ಮಾನವನಾಗಿ ಹುಟ್ಟಿ ದೈವತ್ವಕ್ಕೆ ಏರಿದನೋ ಗೊತ್ತಿಲ್ಲ. ಆದರೆ ಅವನ ಜೀವನಾದರ್ಶ ಮಾನವನಿಗೂ ಮತ್ತು ದೇವರಿಗೂ ನಡುವೆ ಇರುವ ಏಣಿಯಂತಿದೆ ಎನ್ನುತ್ತಾರೆ ಸ್ವಾಮಿ ಸೋಮನಾಥಾನಂದರು ತಮ್ಮ ರಾಮಾಯಣ ಶೀಲ ಸೌರಭ ಪುಸ್ತಕದಲ್ಲಿ. ಆಲೋಚನೆಗೆ ಹಚ್ಚುವ ಕವಿತೆಗೆ ಧನ್ಯವಾದಗಳು ನಾಗೇಶರೆ.

Submitted by nageshamysore Fri, 10/25/2013 - 18:32

In reply to by makara

ಶ್ರೀಧರರೆ, ಶ್ರೀ ರಾಮನ ವ್ಯಕ್ತಿತ್ವ ಮಾನವತ್ವಕ್ಕು ದೈವತ್ವಕೂ ಇರುವ ಕೊಂಡಿಯೆಂಬ ಮಾತು ಅರ್ಥಪೂರ್ಣ. ಮಾನವನಾಗಿ ಬದುಕಿದರೂ ಅದಕ್ಕೊಂದು ಆದರ್ಶ, ನೀತಿ-ನೆಲೆಗಟ್ಟಿನ ಆಯಕಟ್ಟಿರಬೇಕೆಂದು ಸಾರುತ್ತಲೆ, ಸ್ವತಃ ಹಾಗೆ ಬದುಕಿ ತೋರಿಸಿದ್ದು ರಾಮನ ಪಾತ್ರದ ಹಿರಿಮೆ. ಆ ತರದೂದಿನಲ್ಲಿ ಸ್ವಂತ ಬದುಕಿಗೆ ಪದೆ ಪದೆ ಅತೀವ ಘಾಸಿಯಾದರೂ ಸಹ ಸಹಿಸುತ್ತ ಬಾಳುವ ರೀತಿ ತೋರಿಸಿದ್ದು ಅಪೂರ್ವ ಆದರ್ಶದ ಮತ್ತೊಂದು ಮುಖ. ಈ ಕಲಿಯುಗದ ತೊಳಲಾಟದಲ್ಲಿ ಅದು ಆದರ್ಶದ ಮಟ್ಟದಲ್ಲೆ ಉಳಿದುಬರುವ ಹಾಗಾಗುತ್ತಿರುವುದು ಮಾತ್ರ ದುರಂತ :-(