ಮೆರವಣಿಗೆ - ಸತ್ಯಾಗ್ರಹ ಪ್ರಸಂಗ

ಮೆರವಣಿಗೆ - ಸತ್ಯಾಗ್ರಹ ಪ್ರಸಂಗ

ಚಿತ್ರ

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಮೆರವಣಿಗೆ ಹೊತ್ತಿಗೆಯಿಂದ ಆಯ್ದ ಭಾಗ:

 

ಪ್ರತಿ ದಿನವೂ ಹರಾಜುಗಳು ನಡೆಯತೊಡಗಿದವು. ಕರ ನಿರಾಕರಣೆಯ ಸಂಬಂಧದಲ್ಲಿ ಹೊಸದಾಗಿ ಮಾಡಿದ ಆರ್ಡಿನೆನ್ಸ್ ಕರ್ನಾಟಕಕ್ಕೆ ಅನ್ವಯಿಸಿತು. ಬೊಮ್ಮೆಗೌಡನ ಮನೆಯನ್ನು ಅಧಿಕಾರಿಗಳು ಹರಾಜು ಮಾಡಿದರು. ಬೊಮ್ಮೆಗೌಡನೂ ಅವನ ಹೆಂಡತಿ ಮಕ್ಕಳೂ ಸುದರ್ಶನನೂ ಹೊರಗೆ ಬಂದು ಒಂದು ಮರದ ಕೆಳಗೆ ಉಳಿದರು. ಪೊಲಿಸಿನವರು ಇನ್ನೂ ಕೆಲವು ಮನೆಗಳನ್ನು ಸ್ವಾಧಿನಪಡಿಸಿಕೊಂಡು ಅಲ್ಲೆಲ್ಲಾ ತಮ್ಮ ಸಿಪಾಯಿಗಳನ್ನು ಇಟ್ಟರು. ಕಂದಾಯ ಕೊಡದಿದ್ದವರ ಮನೆಗಳೆಲ್ಲಾ ಹರಾಜಾದವು. ಅವರ ಮನೆಯ ಸಾಮಾನುಗಳೆಲ್ಲಾ ಒಂದು ಎರಡು ಆಣೆಗಳಿಗೆ ಸಹ ಹೋಗತೊಡಗಿದವು. ಪುಟ್ಟಪ್ಪನ ವೀಳೆದೆಲೆ ತೋಟದ ಮೇಲೆ ಭಟ್ಟರಿಗೆ ಬಹು ಕಾಲದಿಂದ ಆಸೆ ಇತ್ತು. ಅದು ಹರಾಜಾಗುವಾಗ ಭಟ್ಟರಿಗೆ ಸಹಿಸುವದಕ್ಕೆ ಆಗಲಿಲ್ಲ. ಅವರು ಆ ತೋಟವನ್ನು ಹರಾಜಿನಲ್ಲಿ ಕೂಗಿದರು. ಹರಾಜು ಆದ ಕೂಡಲೇ ಭಟ್ಟರಿಗೆ ಭಯ ಪ್ರಾರಂಭವಾಯಿತು. "ಊರಿನವರೆಲ್ಲಾ ಕಷ್ಟ ಅನುಭವಿಸುತ್ತಾ ಒಂದಾಗಿದ್ದಾರೆ. ನಾನು ಹೀಗೆ ಅವರಿಗೆ ವೀರೋಧವಾಗಿ ಹೋದೆನಲ್ಲಾ, ಅವರೇನಾದರೂ ಹುಲ್ಲು ಗುಡ್ಡೆಗೆ ಬೆಂಕಿ ಹಾಕಿದರೆ ಏನು ಮಾಡಲಿ, ಮನೆ ಮುರಿದರೆ ಏನು ಮಾಡಲಿ, ಅಥವಾ ನನಗೇ ನಾಲ್ಕು ಮಡಗಿದರೋ" ಎಂದು ಅವರ ಎದೆ ಹೊಡೆದುಕೊಳ್ಳತೊಡಗಿತು. ಭಟ್ಟರ ಹೆಂಡತಿ "ನಿಮಗೆ ದುರಾಸೆ, ಹೀಗೆ ಊರಿನವರಿಗೆಲ್ಲಾ ವಿರೋಧವಾಗಿ ಹೋದರೆ ನಮ್ಮನ್ನು ಸುಮ್ಮನೇ ಬಿಡ್ತಾರೆಯೆ?" ಎಂದು ಹೆದರಿಸಿದರು. ಗಾಂಧಿಯವರ ಹೆಸರು ಕೇಳಿಸುವದಕ್ಕಿಂತ ಮುಂಚೆ ಊರಿನಲ್ಲಿ ನಡೆದಿದ್ದ ಹೊಡದಾಟುಗಳೂ, ದೊಂಬಿಗಳೂ, ಕೈ ಕಾಲುಗಳು ಮುರಿದು ಹುಲ್ಲಿನ ಗುಡ್ಡೆಗೆ ಬೆಂಕಿ ಬಿದ್ದುದೂ, ಅವಳಿಗೆ ಚೆನ್ನಾಗಿ ಜ್ಞಾಪಕವಿದ್ದಿತು. ಆದರೆ ಭಟ್ಟರು "ಆ ಭಯ ಏನೂ ಇಲ್ಲ. ಈಗ ಇವರೆದೆಲ್ಲಾ ಅಹಿಂಸೆ. ಅಹಿಂಸೆಯ ಯಾವ ಆಯುಧ ಉಪಯೋಗಿಸುತ್ತಾರೆಯೋ! ಎಂದು ನಾನು ಹೆದರಿದ್ದೇನೆ" ಎಂದರು.

 

ಅವರ ಬೆದರಿಕೆಗೆ ಆಧಾರವಿಲ್ಲದೆ ಇರಲಿಲ್ಲ. ಮರು ದಿವಸ ಅವರು ಹಾಸಿಗೆಯಿಂದ ಬೀದಿಯ ಬಾಗಿಲಿಗೆ ಬರುವ ವೇಳೆಗೆ ಅವರ ಮನೆಯ ಜಗಲಿಯ ಮೇಲೆ ಹತ್ತು ಜನ ಗಂಡಸರೂ 5 ಜನ ಹುಡುಗಿಯರೂ ಕುಳಿತಿದ್ದರು. ಭಟ್ಟರು ಅವರನ್ನು ನೋಡಿದ ಕೂಡಲೇ ಗಾಬರಿಯಿಂದ "ಏನು. ಯಾಕೆ ಕುಳಿತಿದ್ದಿರಿ ಏನು ಬೇಕು" ಎಂದರು. ಕುಳಿತಿದ್ದವರು "ಏನೂ ಬೇಡ" ಎಂದು ಪ್ರತ್ಯುತ್ತರವಿತ್ತರು. ಭಟ್ಟರು ಹಾಗಾದರೆ ಒಳಕ್ಕೆ ಬನ್ನಿ ಎಂದರು. ಬಂದಿದ್ದವರು "ಇಲ್ಲೆ ಇರುತ್ತೇವೆ" ಎಂದರು. ಹೀಗೆ ಮದ್ಯಾಹ್ನವಾಯಿತು. ಭಟ್ಟರಿಗೆ ಊಟದ ಹೊತ್ತಾಯಿತು. ಬಂದಿದ್ದವರು ಊಟದ ಯೋಚನೆಯಿಲ್ಲದೆ ನಿರ್ಯೋಚನೆಯಿಂದ ಕುಳಿತಿದ್ದರು. ಭಟ್ಟರ ಭಯ ಗಳಿಗೆ ಗಳಿಗೆಗೂ ಹೆಚ್ಚಾಯಿತು. "ಇವರು ಮೇಲೆ ಬಿದ್ದರೆ ಪೋಲಿಸಿರಿಗಾದರೂ ಹೇಳಿ ಅವರ ಸಹಾಯವನ್ನಾದರೂ ಹೊಂದಬಹುದು. ಆದರೆ ಅದೂ ಇಲ್ಲ, ಸುಮ್ಮನೇ ಕುಳಿತಿದ್ದಾರೆ ಏನೂ ಮಾಡುವದಕ್ಕೂ ತೋಚುವುದಿಲ್ಲ" ಎಂದುಕೊಂಡು ಅವರು "ಅಡಿಗೆ ಮಾಡಿಸಲೇ" ಎಂದರು. ಬಂದಿದ್ದದವರು "ಬೇಡ ಊಟ ಮಾಡುವುದಿಲ್ಲ" ಎಂದರು. ಭಟ್ಟರಿಗೆ ಏನೂ ತೋಚದಾಯಿತು. ಅವರು "ಇರಲಿ ನೋಡೋಣ" ಎಂದುಕೊಂಡು ತಾವು ಹೋಗಿ ಊಟ ಮಾಡಿ ಬಂದರು. ಬಂದಿದ್ದವರು ಕುಳಿತ ಜಾಗದಿಂದ ಅಲುಗಾಡದೆ ಕುಳಿತೇ ಇದ್ದರು. ಆಗ ಭಟ್ಟರಿಗೆ ಗೊತ್ತಾಯಿತು. ಇವರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ ಎಂದು.

 

ಗಾಂಧಿಯವರ ಮಾರ್ಗ ಉಪವಾಸ ಎಂದು ಭಟ್ಟರಿಗೆ ಗೊತ್ತಿದ್ದಿತು. ಆದರೆ ಇಷ್ಟು ಹತ್ತಿರದಲ್ಲಿ ಆ ಅಸ್ತ್ರ ತಮ್ಮ ಮೇಲೆಯೇ ಪ್ರಯೋಗವಾದಿತು ಎಂದು ಅವರು ತಿಳಿದಿರಲಿಲ್ಲ. ಅದು ಆಗುವವರೆಗೆ ಇಂತಹದು ಸಾಧ್ಯವೆಂದೂ ಅವರು ನಂಬಿರಲಿಲ್ಲ. ಈಗ ನೋಡುತ್ತಾರೆ. 15 ಜನ ಉಪವಾಸ ಕುಳಿತಿದ್ದಾರೆ. ಭಟ್ಟರು ಊಟ ಮಾಡಿಕೊಂದು ಬಂದಾಗ ಆ ಉಪವಾಸ ಸತ್ಯಾಗ್ರಹಿಗಳು ಅವರ ಕಡೆ ನೋಡದೇ ಇದ್ದರೂ ಭಟ್ಟರಿಗೇನೋ ಇವರು ನನ್ನ ಹೊಟ್ಟೆ ಕಡೆಯೇ ನೋಡುತ್ತಿದ್ದಾರೆ ಎಂದು ತೋರತೊಡಗಿತು. ಇದನ್ನು ಎದುರಿಸುವುದು ಹೇಗೆ? ಮೇಲೆ ಬಿದ್ದರೆ ನಾವೂ ಮೇಲೆ ಬೀಳಬಹುದು. ಪೋಲಿಸಿನವರ ಸಹಾಯ ಕೇಳಬಹುದು. ಹೀಗೆ ಉಪವಾಸ ಕುಳಿತಿರುವವರನ್ನು ಹೇಗೆ ಎದುರಿಸಲಿ ಎಂಬುದು ಅವರ ಸಮಸ್ಯೆಯಾಯಿತು. "ಹಾಳು ಮುಂಡೆ ತೋಟ, ನಾನು ಯಾಕಯ್ಯ ಕೊಂಡುಕೊಂಡೆ" ಎಂದು ಅವರಿಗೆ ಬಹಳ ದುಃಖವಾಯಿತು.

 

ಅಷ್ಟು ಹೊತ್ತಿಗೆ ಪೋಲಿಸ್ ಇನಿಸ್ಪೆಕ್ಟರ್ ಮಹಮ್ಮದಾಲಿ ಖಾನ್ ಅಲ್ಲಿಗೆ ಬಂದರು. ಪೋಲಿಸಿನವರಾದುದರಿಂದ ಇನಿಸ್ಪೆಕ್ಟರಿಗೆ ಯಾವಾಗಲು ಇತರರ ಕೆಲಸಗಳಲ್ಲಿಯೇ ಆಸಕ್ತಿ. ಅಲ್ಲದೇ ಅವರಿಗೆ ಗೊತ್ತು. ಮೊದಲು ದಿವಸ ಭಟ್ಟರು ಹರಾಜಿನಲ್ಲಿ ಕಂದಾಯ ಕೊಡದವರ ಜಮೀನು ಕೊಂಡುಕೊಂಡುದರಿಂದ, ಸರ್ಕಾರವನ್ನೇ ತಲೆ ಕೆಳಗು ಮಾಡಲು ನಿಂತಿರುವ ಈ ಜನ ಅವರ ಮೇಲೆ ಏನಾದರೂ ಪ್ರತೀಕಾರ ಮಾಡಬಹುದು ಎಂದು. ಆದರೆ ಆ ಪ್ರತೀಕಾರ ಹೇಗೆ ಮಾಡುತಾರೆ ಎಂಬುದು ಅವರಿಗೆ ತಿಳಿಯಲಿಲ್ಲ. ನೋಡೋಣ ಎಂದು ಭಟ್ಟರ ಮನೆ ಬಾಗಿಲಿಗೆ ಬಂದರು. ದೂರದಿಂದ ಬರುತ್ತಿರುವಾಗಲೇ ಭಟ್ಟರ ಬಾಗಿಲಿನಲ್ಲಿ 10-15 ಜನ ಕುಳಿತಿರುವದನ್ನು ಕಂಡ ಮಹಮ್ಮದಾಲಿ ಖಾನರು, "ಒಹೋ ಸೇರಿದ್ದಾರೆ. ನಾನು ಪಿಸ್ತೂಲು ತರಬೇಕಾಗಿದ್ದಿತು" ಎಂದುಕೊಂಡು ಹಿಂದಕ್ಕೆ ಹೋಗಿ ಪಿಸ್ತೂಲನ್ನು ತೆಗೆದುಕೊಂಡು ಬಂದರು. ಆದರೆ ಭಟ್ಟರ ಮನೆಯ ಹತ್ತಿರಕ್ಕೆ ಬಂದಮೇಲೆ "ಈ ಜನಗಳ ಮೇಲೆ ಹೊಡದಾಡುವು ನೆರಳಿನ ಮೇಲೆ ಹೊಡದಾಡಿದಂತೆ. ಇವರು ಮೇಲೆ ಬೀಳುವುದಿಲ್ಲ. ಪಿಸ್ತೂಲು ದಂಡ" ಎಂದುಕೊಂಡರು. ಮಹಮ್ಮದಾಲಿ ಖಾನ ದುಷ್ಟ. ಕಟುಕ. ಸ್ವಲ್ಪ ನೆಪ ಸಿಕ್ಕಿದರೂ ಪಿಸ್ತೂಲನ್ನು ಹಾರಿಸುವ ಅಭ್ಯಾಸ ಅವನದು. ಆದುದರಿಂದಲೇ ಅವನಿಗೆ ಬರಿಯ ರುಜು ಹಾಕುವದಕ್ಕೆ ಮಾತ್ರ ಬರುತ್ತಿದ್ದರೂ ಅವನು ಸಬ್ ಇನಿಸ್ಪೆಕ್ಟರ್ ಆಗಿದ್ದನು. ಸರ್ಕಾರದಲ್ಲಿ ಬುದ್ದಿ ಇರುವವರಿಗೆ ಹೇಗೆ ಸ್ಥಳವಿಲ್ಲವೋ ಹಾಗೆಯೇ ಪೋಲಿಸಿನಲ್ಲಿ ಮನುಷ್ಯತ್ವವಿರುವವರಿಗೆ ಸ್ಥಳವಿಲ್ಲ. ಆದರೆ, ಈ ಉಪವಾಸ ಸತ್ಯಾಗ್ರಹಿಗಳೆದುರಿಗೆ ಸಬ್ ಇನಿಸ್ಪೆಕ್ಟರಿಗೂ ಏನೂ ಮಾಡಲು ಸಾಧ್ಯವಾಗಲಿಲ್ಲ. ಅವರು ಉಪವಾಸ ಹೂಡುತ್ತಿದ್ದ ಕೆಲವರನ್ನು ದಸ್ತಗಿರಿ ಮಾಡಿದರು. ಎರಡು ಹುಡುಗಿಯರನ್ನೂ ದಸ್ತಗಿರಿ ಮಾಡಿದರು. ಭಟ್ಟರಿಗೆ ಏನೂ ಮಾಡುವದಕ್ಕೂ ತೋಚಲಿಲ್ಲ. ಅವರು ಜಮೀನನ್ನು ರಾಜಿನಾಮೆ ಕೊಟ್ಟರು. 

Rating
No votes yet

Comments

Submitted by ಶ್ರೀನಿವಾಸ ವೀ. ಬ೦ಗೋಡಿ Mon, 10/28/2013 - 16:45

In reply to by ಗಣೇಶ

ಹೌದು ಗಣೇಶ ಅವರೆ. ನನಗೂ ಒಂದೆರಡು ಕಡೆ ಪದ ಪ್ರಯೋಗದ ಬಗ್ಗೆ, ತಡೆಗುರುತು (punctuation)ಗಳ ಬಗ್ಗೆ ಅನುಮಾನ ಬಂದಿತು. ಆದರೆ ಹೊತ್ತಿಗೆಯಲ್ಲಿ ಹೇಗಿದೆಯೋ ಹಾಗೆ ಕೊಟ್ಟಿದ್ದೇನೆ.