೧೪೭. ಲಲಿತಾ ಸಹಸ್ರನಾಮ ೬೩೧ರಿಂದ ೬೩೬ನೇ ನಾಮಗಳ ವಿವರಣೆ

೧೪೭. ಲಲಿತಾ ಸಹಸ್ರನಾಮ ೬೩೧ರಿಂದ ೬೩೬ನೇ ನಾಮಗಳ ವಿವರಣೆ

                                                                                 ಲಲಿತಾ ಸಹಸ್ರನಾಮ ೬೩೧ - ೬೩೬

Divya-gandhāḍhyā दिव्य-गन्धाढ्या (631)

೬೩೧. ದಿವ್ಯ-ಗಂಧಾಢ್ಯಾ

          ದೇವಿಯು ದಿವ್ಯವಾದ ಸುಗಂಧವನ್ನು ಹೊಂದಿದ್ದಾಳೆ. ಈ ವಿಧವಾದ ಸುವಾಸನೆಯು ಮೂರು ವಿಧವಾದ ಮೂಲಗಳಿಂದ ಹೊರಹೊಮ್ಮಬಲ್ಲುದು. ಮೊದಲನೆಯದಾಗಿ ಆಕೆಯ ಸ್ವರೂಪವೇ ಸುಗಂಧದಿಂದ ಕೂಡಿದೆ. ಎರಡನೆಯದಾಗಿ ಆಕೆಯು ಸಹಜ ಸುಗಂಧವುಳ್ಳ ದೇವತೆ ಮತ್ತು ಉಪದೇವತೆಗಳ ಸಮೂಹದಿಂದ ಸುತ್ತುವರೆಯಲ್ಪಟ್ಟಿದ್ದಾಳೆ. ಆ ದೇವತಾ ಸಮೂಹದ ಸಹಜ ಸುಗಂಧವು ದೇವಿಯು ದಿವ್ಯ ಸೌಗಂಧದೊಂದಿಗೆ ಮಿಳಿತವಾಗಿ ಅದು ಲೋಕಗಳಿಗೆಲ್ಲಾ ಪಸರಿಸುತ್ತದೆ. ಮನುಜರೂ ಸಹ ದೇವಿಯನ್ನು ಶ್ರೀಗಂಧ ಮತ್ತು ಇತರೇ ಸುವಾಸನಾಯುಕ್ತ ಪರಿಮಳಗಳಿಂದ ಪೂಜಿಸುತ್ತಾರೆ. ಹೀಗೆ ಆಕೆಯ ಭಕ್ತರಿಂದ ಅರ್ಪಿಸಲ್ಪಟ್ಟ ಪರಿಮಳವು ಎಲ್ಲಾ ಲೋಕಗಳಿಗೂ ಹರಡುತ್ತದೆ.

         ಒಬ್ಬನು ದೇವಿಯ ಮೇಲೆ ವಿಶೇಷವಾದ ಮತ್ತು ಮಹತ್ತರವಾದ ಭಕ್ತಿಯಿಂದ ಧ್ಯಾನಿಸಿದಾಗ, ಅವನ ಧ್ಯಾನದ ಅಂತ್ಯದಲ್ಲಿ ಅವನಿಂದ ಒಂದು ಸುವಾಸನಾಯುಕ್ತ ಪರಿಮಳವು ಹೊರಹೊಮ್ಮಿ ಅವನ ಸುತ್ತಲಿನ ಪರಿಸರವು ಸುಗಂಧಭರಿತವಾಗುತ್ತದೆ. ಇದಕ್ಕಾಗಿ ಒಬ್ಬನು ತನ್ನ ಪರಿಮಿತ ಮಟ್ಟವನ್ನು ಅಧಿಗಮಿಸಿಬೇಕು. ಪತಂಜಲಿಯ ಯೋಗ ಸೂತ್ರವು (೩.೪೨) ಪಂಚೇಂದ್ರಿಯಗಳ ಗ್ರಹಿಕೆಗಳನ್ನು ಅಧಿಗಮಿಸುವುದರ ಕುರಿತಾಗಿ ಹೇಳುತ್ತದೆ. ಪ್ರತಿಯೊಂದು ಇಂದ್ರಿಯಕ್ಕೂ ತನ್ನದೇ ಆದ ಒಂದು ವಿಧಾನ ಮತ್ತು ಪರಿಮಿತಿಗಳು ಇರುತ್ತವೆ. ಒಬ್ಬರು ಒಮ್ಮೆ ಮನಸ್ಸು ಮತ್ತು ಚಿತ್ತಗಳಿಂದ ಪ್ರಭಾವಿತವಾಗಿರುವ ಈ ಇಂದ್ರಿಯದ ಪರಿಮಿತಿಗಳನ್ನು ಅಧಿಗಮಿಸಿದರೆ, ಅದು ಅವನನ್ನು ಗ್ರಹಿಕೆಗೆ ಅತೀತವಾದುದ್ದರೆಡೆಗೆ ಕೊಂಡೊಯ್ಯುತ್ತದೆ.

Sindūra-tilakāñcitā सिन्दूर-तिलकाञ्चिता (632)

೬೩೨. ಸಿಂಧೂರ-ತಿಲಕಾಂಚಿತಾ

          ದೇವಿಯ ಹಣೆಯು ಸಿಂಧೂರ ತಿಲಕದಿಂದ (ಕುಂಕುಮದ ತಿಲಕದಿಂದ) ಅಲಂಕೃತವಾಗಿದೆ. ಈ ನಾಮವು ದೇವಿಯು ಹೆಣ್ಣು ಆನೆಗಳ ಸಮೂಹದಿಂದ ಆವೃತಳಾಗಿದ್ದಾಳೆ ಎಂದೂ ಸಹ ತಿಳಿಸುತ್ತದೆ (ಸಿಂಧೂರವೆಂದರೆ ಹೆಣ್ಣು ಆನೆ). ಕುಂಕುಮವು ಮಂಗಳವನ್ನು ಸೂಚಿಸುವ ಶುಭ ಸಂಕೇತವಾಗಿದೆ.

Umā उमा (633)

೬೩೩. ಉಮಾ

          ದೇವಿಯ ಹೆಸರು ಉಮಾ ಆಗಿದೆ. ಆಕೆಯು ಮಹೇಶ್ವರನ ಹೆಂಡಿತಿಯಾಗಿರುವುದರಿಂದ ಅವನು ಉಮಾ ಮಹೇಶ್ವರನಾಗಿದ್ದಾನೆ. ದೇವಿಯು ಪರ್ವತರಾಜನಾದ ಹಿಮವಂತ ಮತ್ತು ಆತನ ಹೆಂಡತಿಯಾದ ಮೇನ ಇವರಿಗೆ ಜನಿಸಿದವಳು. ಆಕೆಯು ತನ್ನ ಐದನೇ ವಯಸ್ಸಿನಿಂದಲೇ ಮಹೇಶ್ವರ(ಶಿವ)ನನ್ನು ಪಡೆಯಲು ಕಠಿಣ ತಪಸ್ಸನ್ನು ಕೈಗೊಂಡಳು.

          ಶಿವ ಸೂತ್ರವು (೧.೧೩), "ಇಚ್ಛಾ ಶಕ್ತಿರ್ ಉಮಾ ಕುಮಾರೀ" ಎಂದು ಹೇಳುತ್ತದೆ. ಇಲ್ಲಿ ಉಮಾ ಎಂದರೆ ಶಿವನ ವೈಭವವಾಗಿದ್ದಾಳೆ. ಒಬ್ಬನ ಚಿತ್ತವು ಸ್ಥಿರವಾಗಿ ಶಿವನೊಂದಿಗೆ ಸಂವಹನದಲ್ಲಿದ್ದರೆ ಆ ಪ್ರಕ್ರಿಯೆಯನ್ನೂ ಸಹ ಉಮಾ ಎಂದು ಕರೆಯಲಾಗುತ್ತದೆ. ನಿತ್ಯವಾಗಿರುವ ’ನಾನು’ (ಅಹಂ) ಎನ್ನುವ ಶಿವನ ಪ್ರಜ್ಞೆಯು ಸ್ವತಂತ್ರವಾಗಿ ಎಲ್ಲವನ್ನೂ ತಿಳಿದುಕೊಳ್ಳುವುದಲ್ಲದೇ ಅದು ಎಲ್ಲ ಕಾರ್ಯಗಳನ್ನು ಸ್ವತಂತ್ರವಾಗಿ ಕೈಗೊಳ್ಳುತ್ತದೆ, ಅದನ್ನು ಸಹ ಉಮಾ ಎಂದು ಕರೆಯಲಾಗುತ್ತದೆ.

          ಉಮಾ ಎನ್ನುವುದು ಪ್ರಣವದ (ಓಂ) ಮೂರು ಅಕ್ಷರಗಳಾದ ಉ+ಮ+ಅ (= ಓಂ) ಇವುಗಳ ಸಂಯೋಗವಾಗಿದೆ. ಉ ಎನ್ನವುದು ಸೃಷ್ಟಿಯನ್ನು, ಮ ಎನ್ನುವುದು ಲಯವನ್ನು, ಮತ್ತು ಅ ಎನ್ನುವುದು ಪರಿಪಾಲನೆಯನ್ನು (ಸುಸ್ಥಿತಿಯಲ್ಲಿಡುವುದು ಅಥವಾ ಸ್ಥಿತಿ ಕ್ರಿಯೆ) ಸೂಚಿಸುತ್ತವೆ. ಆದ್ದರಿಂದ ಉಮಾ ಎಂದರೆ ಪರಬ್ರಹ್ಮದ ಮೂರು ಕ್ರಿಯೆಗಳೆಂದೂ ಅರ್ಥೈಸಬಹುದು. ಲಿಂಗ ಪುರಾಣವು (೧೩೩.೪೪) ಹೀಗೆ ಹೇಳುತ್ತದೆ, "ದೇವಿಯು ತ್ರಿಲೋಕಗಳ ಮಾತೆಯಾಗಿದ್ದಾಳೆ". ಮತ್ತದೇ ಪುರಾಣವು ಮುಂದುವರೆಯುತ್ತಾ ಹೀಗೆ ಹೇಳುತ್ತದೆ, "ರುದ್ರನ ಶರೀರದಿಂದ ಜನಿಸಿದ ದೇವಿಯು ದಕ್ಷನನ್ನು ನಾಶಮಾಡಿದಳು ಮತ್ತು ಹಿಮವಂತನ ಪುತ್ರಿಯಾದ ಉಮೆಯಾಗಿ ಜನ್ಮತಾಳಿದಳು. ತ್ರಿಜಗಗಳು ಆಕೆಗೆ ವಂದಿಸುತ್ತವೆ. ಆಕೆಯು ರುದ್ರನ ಮನಸ್ಸನ್ನು ತನ್ನ ಸೌಂದರ್ಯದಿಂದ ಸಮ್ಮೋಹನಗೊಳಿಸಲಿ. ಅವರ ಒಂದುಗೂಡುವಿಕೆಯಿಂದ ಸ್ಕಂದ ದೇವನು ಜನ್ಮಿಸುತ್ತಾನೆ".

        ಅನಾಹತ ಚಕ್ರ ಅಥವಾ ಹೃದಯ ಚಕ್ರದ ಶಬ್ದವನ್ನೂ ಸಹ ಉಮಾ ಎಂದು ಕರೆಯಲಾಗುತ್ತದೆ.

        ಉಮಾ ಎನ್ನುವುದನ್ನು ಶಕ್ತಿ ಪ್ರಣವ ಎನ್ನಲಾಗಿದೆ (ಕ್ಲೀಂ ಎನ್ನುವುದನ್ನೂ ಸಹ ಶಕ್ತಿ ಪ್ರಣವ ಎಂದು ಕರೆಯಲಾಗುತ್ತದೆ).

        ಆರು ವರ್ಷದ ಬಾಲೆಯನ್ನೂ ಸಹ ಉಮಾ ಎಂದು ಕರೆಯಲಾಗುತ್ತದೆ.

        ಕೇನ ಉಪನಿಷತ್ತು (೩. ೧೨) ಹೀಗೆ ಹೇಳುತ್ತದೆ, "ಬಹುಶೋಭಮಾನಾಮ್ ಉಮಾಮ್ ಹೈಮವತೀಮ್" ಅಂದರೆ ಬಹು ಆಭರಣಗಳಿಂದ ಭೂಷಿತವಾಗಿರುವವಳು ಹೈಮವತಿಯಾದ ಉಮೆ. ದೇವಿಯು ಆತ್ಮಜ್ಞಾನ, ಆಕರ್ಷಕ ಮೈಮಾಟ ಮತ್ತು ಮೋಹಕತೆಗಳ ಸಂಯೋಗವಾಗಿದ್ದಾಳೆ.

Śailendra-tanayā शैलेन्द्र-तनया (634)

೬೩೪. ಶೈಲೇಂದ್ರ-ತನಯಾ

           ಗಿರಿರಾಜನಾದ ಹಿಮವಂತನ ಮಗಳು. ಗಿರಿ (ಶೈಲ) ಅಥವಾ ಪರ್ವತವೆನ್ನುವುದು ಕದಲಿಸಲಾಗದ್ದು. ದೇವಿಯು ಶುದ್ಧ ಚೈತನ್ಯವಾಗಿದ್ದಾಳೆ. ಚೈತನ್ಯವೆಂದರೆ ಶುದ್ಧ ಪ್ರಜ್ಞೆಯಾಗಿದೆ. ಶುದ್ಧ ಪ್ರಜ್ಞೆಯು ಶುದ್ಧವಾದ ಜ್ಞಾನದಿಂದ ಉಂಟಾಗುತ್ತದೆ. ಇದನ್ನೇ ನಾಲ್ಕನೆಯ ಅವಸ್ಥೆಯಾದ ತುರಿಯಾ ಎಂದು ಹೇಳಲಾಗಿದೆ. ಈ ನಾಮವು ಪರೋಕ್ಷವಾಗಿ ಅಚರ ವಸ್ತುಗಳಲ್ಲೂ ಸಹ ಪರಬ್ರಹ್ಮವು ನಿವಸಿಸುತ್ತದೆ ಎಂದು ಹೇಳುತ್ತದೆ. ತನಯಾ ಎಂದರೆ ಜನಿಸಿದವಳು (ಹೊರಹೊಮ್ಮಿದವಳು).

Gaurī गौरी (635)

೬೩೫. ಗೌರೀ

          ದೇವಿಯು ಶ್ವೇತ ಮತ್ತು ಹಳದಿ ವರ್ಣಗಳ ಮಿಶ್ರಣವಾದ ಬಂಗಾರದ ವರ್ಣವುಳ್ಳವಳಾಗಿದ್ದಾಳೆ. ದೇವಿಯು ಜನಿಸಿದಾಗ ಆಕೆಯು ಶಂಖ, ಮಲ್ಲಿಗೆಯ ಹೂವು ಮತ್ತು ಚಂದ್ರ ಇವರುಗಳ ಸಂಯುಕ್ತ ವರ್ಣದ ಮೈಬಣ್ಣವನ್ನು ಹೊಂದಿದ್ದಳೆಂದು ಹೇಳಲಾಗುತ್ತದೆ. ಈ ಎಲ್ಲಾ ವಸ್ತುಗಳು ಕೇವಲ ಶ್ವೇತ ವರ್ಣದವುಗಳಾಗಿರುವುದಲ್ಲದೇ ಇವೆಲ್ಲಾ ವಸ್ತುಗಳನ್ನು ಅತ್ಯಂತ ಮಂಗಳಕರವಾದವುಗಳೆಂದು ಪರಿಗಣಿಸಲಾಗುತ್ತದೆ.

          ವರುಣನ (ನೀರಿನ ಅಧಿದೇವತೆಯ) ಪತ್ನಿಯ ಹೆಸರೂ ಗೌರಿಯಾಗಿದೆ.

          ಹತ್ತು ವರ್ಷದ ಬಾಲಕಿಯನ್ನೂ ಸಹ ಗೌರಿ ಎಂದು ಕರೆಯಲಾಗುತ್ತದೆ.

Gandharva-sevitā ग़न्धर्व-सेविता (636)

೬೩೬. ಗಂಧರ್ವ ಸೇವಿತಾ

         ಲಿಂಗ ಪುರಾಣವು ಹನ್ನೆರಡು ಶ್ರೇಷ್ಠ ಗಂಧರ್ವರನ್ನು ಉಲ್ಲೇಖಿಸುತ್ತದೆ. ಅವರು ಆಕಾಶದಲ್ಲಿ ಅಥವಾ ವಾಯು ಮತ್ತು ಸ್ವರ್ಗೀಯ ಜಲಗಳ ಪ್ರದೇಶದಲ್ಲಿ ವಾಸಿಸುವವರೆಂದು ಹೇಳಲಾಗಿದೆ. ಅವರು ದೇವಲೋಕದ ಗಾಯಕರಾಗಿದ್ದಾರೆ. ಅವರ ಹೆಸರುಗಳು ಇಂತಿವೆ - ೧) ತುಂಬುರ, ೨) ನಾರದ, ೩) ಹಾಹಾ, ೪) ಹೂಹೂ, ೫) ವಿಶ್ವಾವಸು, ೬) ಉಗ್ರಸೇನ, ೭) ಸುರುಗಿ, ೮) ಪರಾವಸು, ೯) ಚಿತ್ರಸೇನ, ೧೦) ಊರ್ಣಾಯು, ೧೧) ಧೃತರಾಷ್ಟ್ರ ಮತ್ತು ೧೨) ಸೂರ್ಯವರ್ಚಸ್.

        ಲಲಿತಾ ತ್ರಿಶತಿಯ ನಾಮ ೧೭೭ - ಹಾಹಾ ಹೂಹೂ ಮುಖ ಸ್ತುತ್ಯಾ ಆಗಿದ್ದು ಅದು ದೇವಿಯು ಗಂಧರ್ವರಾದ ಹಾಹಾ ಮತ್ತು ಹೂಹೂ ಇವರುಗಳಿಂದ ಪೂಜಿಸಲ್ಪಡುತ್ತಾಳೆ ಎಂದು ತಿಳಿಸುತ್ತದೆ. ಅವರುಗಳು ಸೂರ್ಯನನ್ನು ತಮ್ಮ ಗಾಯನಗಳಿಂದ ಪೂಜಿಸುತ್ತಾರೆ. ಈ ಹನ್ನೆರಡು ಗಂಧರ್ವರಲ್ಲಿ ಪ್ರತಿ ತಿಂಗಳೂ ಇಬ್ಬಿಬ್ಬರು ಕಾರ್ಯನಿರತರಾಗಿರುತ್ತಾರೆ. ಅವರುಗಳೂ ಸಹ ಯಾತನೆಗಳಿಗೆ ಒಳಪಡುತ್ತಾರೆ ಆದ್ದರಿಂದ ಅವರೂ ಸಹ ದೇವಿಯನ್ನು ಪೂಜಿಸುತ್ತಾರೆ.

                                                                                  ******

        ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 631 - 636 http://www.manblunder.com/2010/03/lalitha-sahasranamam-631-636.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
No votes yet

Comments

Submitted by nageshamysore Tue, 10/29/2013 - 04:36

ಶ್ರೀಧರರೆ, '೧೪೭. ಶ್ರೀ ಲಲಿತಾ ಸಹಸ್ರನಾಮದ ವಿವರಣೆ' ಯ ಕಾವ್ಯರೂಪ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೬೩೧ - ೬೩೬
_______________________________
.
.
೬೩೧. ದಿವ್ಯ-ಗಂಧಾಢ್ಯಾ
ಅಧಿಗಮಿಸೆ ಪಂಚೇಂದ್ರಿಯ ಗ್ರಹಿಕೆ, ಪರಿಮಿತಿ ದಾಟಿ ಗ್ರಹಣಾತೀತಕೆ
ಅನನ್ಯ ಭಕ್ತಿ ಧ್ಯಾನಾಂತ್ಯದಾ ಪರಿಮಳ, ಸುಗಂಧವಾಗ್ಹರಡಿ ಪರಿಸರಕೆ
ಸುಗಂಧ ಸ್ವರೂಪಿಣಿಯ ಸುತ್ತ ಸುಗಂಧಪೂರ್ಣ ದೇವಸಮೂಹ ರಾಜ್ಯ
ಭಕ್ತ ಚಂದನ ಪರಿಮಳಾ ಲಲಿತೆ, ಸಹಜ ಸೌಗಂಧಿನಿ ದಿವ್ಯ ಗಂಧಾಢ್ಯಾ ||
.
೬೩೨. ಸಿಂಧೂರ-ತಿಲಕಾಂಚಿತಾ
ಮಂಗಳ ಸೂಚಕ ಶುಭ ಸಂಕೇತ, ಸಿಂಧೂರ ಕುಂಕುಮ ತಿಲಕ
ದೇವಿ ಲಲಾಟದಿ ರಾರಾಜಿಸುತ, ಲಲಿತೆಗಲಂಕರಿಸುವ ತವಕ
ಹೆಣ್ಣಾನೆಯೆನೆ ಸಿಂಧೂರ, ಸಮೂಹದಿಂದಾವೃತ್ತಳು ಶ್ರೀಮಾತಾ
ಗಜ ತಿಲಕ ಭೂಷಿತೆ ಸನ್ಮಂಗಳದಾತೆ ಸಿಂಧೂರ ತಿಲಕಾಂಚಿತಾ ||
.
೬೩೩. ಉಮಾ
ಹಿಮವಂತ-ಮೇನ ಪುತ್ರಿ ಉಮಾ, ಬಾಲ್ಯದಲೆ ತಪ ಪಡೆಯೆ ಶಿವನ
ಶಿವ ವೈಭವವೆ ಉಮಾ, ಇಚ್ಛಾಶಕ್ತಿ ಸ್ಥಿರಚಿತ್ತ ಉಮೆ ಶಿವ ಸಂವಹನ
ಸ್ವತಂತ್ರ ಕಾರ್ಯನಿರತ 'ಅಹಂ' ಶಿವಪ್ರಜ್ಞೆಯೆ ಉಮಾ ಲಲಿತಾಧರ
ಸತಿಯಾಗಿ ಉಮೆಯೊಲುಮೆಗೆ, ಶಿವ ತಾನಾದ ಉಮಾ ಮಹೇಶ್ವರ ||
.
ಪ್ರಣವದ ಮೂರಕ್ಷರ ಉ-ಮ-ಅ 'ಓಂ' ಸಂಯೋಗದೆ ಉಮ ತ್ರಿಕ್ರಿಯ
ಉ-ಸೃಷ್ಟಿ, ಮ-ಲಯ, ಅ-ಸುಸ್ಥಿತಿ ಪರಬ್ರಹ್ಮಕೆ ಮೂರೆ ಪ್ರಮುಖಕ್ರಿಯ
ತ್ರಿಲೋಕಮಾತೆ, ತ್ರಿಲೋಕವಂದಿತೆ, ದಕ್ಷವಿನಾಶಿನಿ, ಸ್ಕಂದನಾಗಿ ಮಗ
ಅನಾಹತಶಬ್ದ-'ಕ್ಲೀಂ'ಶಕ್ತಿಪ್ರಣವ-ಷಡ್ಬಾಲೆ-ಜ್ಞಾನಾಕರ್ಷಣೆ ಸಂಯೋಗ ||
.
೬೩೪. ಶೈಲೇಂದ್ರ-ತನಯಾ
ಗಿರಿ ಶೈಲ ಪರ್ವತದಬಲ, ಕದಲಿಸಲಾಗದ ಅಚಲತೆ ಸಂಕೇತ
ಶುದ್ದ ಚೈತನ್ಯ ಶುದ್ಧ ಪ್ರಜ್ಞೆಯೆ ದೇವಿ, ಶುದ್ದಜ್ಞಾನದಿಂದುಟಾಗುತ
ತುರಿಯಾ ನಾಲ್ಕನೆ ಪ್ರಜ್ಞಾವಸ್ಥೆ, ಅಚರದಲು ಪರಬ್ರಹ್ಮ ನಿಲಯ
ಹಿಮವಂತಸುತೆ ಲಲಿತಾ ದಯ, ಬ್ರಹ್ಮದತ್ತ ಶೈಲೇಂದ್ರತನಯಾ ||
.
೬೩೫. ಗೌರೀ
ಹಳದಿ ಶ್ವೇತ ಮಿಶ್ರ ಬಂಗಾರ ದರ್ಪಣ, ದೇವಿ ಲಲಿತೆಯ ಗೌರವರ್ಣ
ಜನನದೆ ಶಂಖ-ಮಲ್ಲೆ-ಶಶಾಂಕತೆ, ಸಂಯುಕ್ತ ಶ್ವೇತ ಮಂಗಳ ಪೂರ್ಣ
ಗೌರವ ಭಾವ ಸದಾ, ಗೌರವರ್ಣ ಕಾಂತಿ ಸಮೃದ್ದ ದೇವಿ ಮಂಗಳಕರಿ
ಜಲಾಧಿದೇವ ವರುಣಾಸತಿ, ದಶ ವರ್ಷ ಬಾಲೆಯರ ಹೆಸರಾಗಿ ಗೌರಿ ||
.
೬೩೬. ಗಂಧರ್ವ-ಸೇವಿತಾ
ದೈವಿಕಪೂಜಾಗಾಯನ, ವ್ಯೋಮಾ ಸ್ವರ್ಗೀಯ ಜಲಾವೃತ ನಿವಸಿತ
ದ್ವಾದಶ ಶ್ರೇಷ್ಠ ಗಂಧರ್ವ ತುಂಬುರ-ನಾರದ-ಹಾಹಾ-ಹೂಹೂ ಸ್ತುತ
ವಿಶ್ವಾವಸು-ಉಗ್ರಸೇನ-ಸುರಗಿ-ಪರಾವಸು-ಚಿತ್ರಸೇನ-ಊರ್ಣಾಯು
ಧೃತರಾಷ್ಟ್ರ-ಸೂರ್ಯವರ್ಚಸಾದಿ ಗಂಧರ್ವಸೇವಿತಾ ದೇವಿಚಿರಾಯು ||
.
.
- ಧನ್ಯವಾದಗಳೊಂದಿಗೆ
   ನಾಗೇಶ ಮೈಸೂರು
 

Submitted by partha1059 Tue, 10/29/2013 - 12:16

ಶ್ರೀಧರ್ ಬಂಡ್ರಿಯವರೆ ಅತಿ ಕಷ್ಟಕರವಾದ ಕೆಲಸವನ್ನು ಅತಿ ಉತ್ತಮವಾಗಿ ನಿರ್ವಹಿಸುತ್ತಿದ್ದೀರಿ!
ತಮ್ಮ ವಿವರಣೆಗಳು ಬಾಷಂತರವೇ ಆದರೂ ಸಹ ತಮ್ಮ ಆಳ ಜ್ಞಾನವನ್ನು ತೋರಿಸುತ್ತಿವೆ
ಮುಂದುವರೆಯಲಿ

ಪಾರ್ಥ ಸರ್,
ನಿಮ್ಮ ಅಭಿಮಾನಪೂರ್ವಕ ಮಾತುಗಳಿಗೆ ಧನ್ಯವಾದಗಳು. ನಿಮ್ಮ ಈ ಉತ್ತೇಜನಪೂರ್ವಕ ಪ್ರತಿಕ್ರಿಯೆ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ವಾಸ್ತವವಾಗಿ ಈ ಕಂತಿನ ಬರಹ ಸ್ವಲ್ಪ ಕ್ಲಿಷ್ಟವಾಗಿಯೇ ಇತ್ತು. ಇದನ್ನು ಇನ್ನೂ ಉತ್ತಮ ಪಡಿಸಬಹುದಾಗಿತ್ತು ಎನ್ನುವುದು ನನ್ನ ಅನಿಸಿಕೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by ಗಣೇಶ Tue, 10/29/2013 - 23:39

ಶ್ರೀಧರ್‌ಜಿ,
-" सिन्दूर-तिलकाञ्चिता" ಸಿಂದೂರ ತಿಲಕಾಂಚಿತ. ನೀವು ಕನ್ನಡದಲ್ಲಿ ಬರೆಯುವಾಗ ಸಿಂ"ಧೂ"ರ ಮಾಡಿದಿರಿ.
-ದೇವಿಯ ಹಣೆಯು ಸಿಂಧೂರ ತಿಲಕದಿಂದ (ಕುಂಕುಮದ ತಿಲಕದಿಂದ) ಅಲಂಕೃತವಾಗಿದೆ. ಇದು ಇಲ್ಲಿ ಒಪ್ಪುತ್ತದೆ. ನಂತರದ ವಾಕ್ಯ-"ಈ ನಾಮವು ದೇವಿಯು ಹೆಣ್ಣು ಆನೆಗಳ ಸಮೂಹದಿಂದ ಆವೃತಳಾಗಿದ್ದಾಳೆ ಎಂದೂ ಸಹ ತಿಳಿಸುತ್ತದೆ (ಸಿಂಧೂರವೆಂದರೆ ಹೆಣ್ಣು ಆನೆ)" ಏಕೋ ಸರಿ ಅನಿಸುವುದಿಲ್ಲ. ಸಿಂಧೂರ ಅಲ್ಲ "ಸಿಂಧುರ ಅಂದರೆ ಆನೆ" http://pustak.org/home.php?mean=87554
ಉಮಾ-
>>ಆಕೆಯು ತನ್ನ ಐದನೇ ವಯಸ್ಸಿನಿಂದಲೇ ಮಹೇಶ್ವರ(ಶಿವ)ನನ್ನು ಪಡೆಯಲು ಕಠಿಣ ತಪಸ್ಸನ್ನು ಕೈಗೊಂಡಳು.-
ಐದನೇ ವಯಸ್ಸಿಗೇ ಭಕ್ತಿ ಒಪ್ಪಬಹುದು. ಶಿವನನ್ನೇ ಪಡೆಯಲು ಕಠಿಣ ತಪಸ್ಸು ಯಾಕೆ ಎಂದು ಹುಡುಕಿದಾಗ ಈ ಕೊಂಡಿ ಸಿಕ್ಕಿತು- http://murugan.org/saivaneethi/kanda-puranam-1.htm
ಪಾರ್ಥಸಾರಥಿಯವರ ಅಭಿಪ್ರಾಯಕ್ಕೆ ನನ್ನದೂ +೧.

ಗಣೇಶ್‌ಜಿ,
ನಿಮ್ಮ ಸೂಕ್ಷ್ಮ ದೃಷ್ಟಿಗೆ ಮತ್ತೊಮ್ಮೆ ಅಭಿನಂದನೆಗಳು. ಸಿಂಧೂರದ ಕುರಿತಾಗಿ ನನ್ನ ಗಮನ ಸೆಳೆದ ಮೇಲೆ ಶ್ರೀ ರಾಮಕೃಷ್ಣ ಆಶ್ರಮದಿಂದ ಪ್ರಕಟಗೊಂಡ ಲಲಿತಾ ಸಹಸ್ರನಾಮದ ಕೈಹೊತ್ತಿಗೆಯನ್ನು ನೋಡಿದೆ. ಅದರಲ್ಲೂ ಸಹ ಮೂಲ ಲೇಖಕರು ನಮೂದಿಸಿರುವಂತೆ ಸಿಂದೂರವೆಂದೇ ಇದೆ. ಹಾಗಾಗಿ ನನ್ನ ಪ್ರಯೋಗವೇ ತಪ್ಪು. ಪ್ರೊ. ಜಿ.ವಿ. ಯವರ ಪದಕೋಶವನ್ನು ನೋಡಿದಾಗ ಅದು ವೇದ್ಯವಾಯಿತು. ಅದನ್ನು ಸರಿಪಡಿಸಿಕೊಳ್ಳುತ್ತೇನೆ.
ಹುಡುಕು ಪದ: ಸಿಂದೂರ
ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು
ಸಿಂದೂರ ನಾಮಪದ
(ಸಂ) ಮಂಗಳ ದ್ರವ್ಯವಾದ ಕೇಸರಿ ಬಣ್ಣದ ಪುಡಿ, ಚಂದ್ರ
ನೀವು ಹೇಳಿದಂತೆ ಸಿಂಧುರ ಎಂದರೆ ಆನೆ ಇದನ್ನು ಶ್ರೀಯುತ ರವಿಯವರಲ್ಲಿ ಚರ್ಚಿಸಿ ಇತ್ಯರ್ಥ್ಯ ಮಾಡಿಕೊಳ್ಳುತ್ತೇನೆ.
ಹುಡುಕು ಪದ: ಸಿಂಧುರ
ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು
ಸಿಂಧುರ ನಾಮಪದ
(ಸಂ) ೧ ಆನೆ, ಗಜ ೨ ಒಬ್ಬ ರಾಕ್ಷಸನ ಹೆಸರು, ಗಜಾಸುರ ೩ ಎಂಟು ಎಂಬ ಸಂಖ್ಯೆಯ ಸಂಕೇತ
ಉಮೆಯ ತಪಸ್ಸಿನ ಕುರಿತಾದ ಕೊಂಡಿಗೆ ಧನ್ಯವಾದಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ಗಣೇಶ್‌ಜಿ,
ಸಿಂಧುರದ ಕುರಿತಾದ ನೀವು ಎತ್ತಿದ ಪ್ರಶ್ನೆಗೆ ಶ್ರೀಯುತ ರವಿಯವರು ಉತ್ತರಿಸಿದ್ದಾರೆ. ನೀವು ಹೇಳಿದ್ದು ಸರಿಯೆಂದು ಅನುಮೋದಿಸುತ್ತಾ ಅವರು ಕಾವ್ಯದಲ್ಲಿ ಇಂತಹ ಅಲ್ಪ-ಪ್ರಾಣ ಮಹಾಪ್ರಾಣಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಹಾಗಾಗಿ ಈ ವ್ಯಾಖ್ಯಾನವೂ ಕಾವ್ಯದ ಪರಿಭಾಷೆಯಲ್ಲಿ ಸರಿಯಾದದ್ದೇ ಎಂದು ಉತ್ತರಿಸಿದ್ದಾರೆ. ತಡವಾಗಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಮತ್ತೊಮ್ಮೆ ಕ್ಷಮೆಯಿರಲಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ