ಬ್ಯಾಸರ ಮಾಡ್ಕಳಕ್ಕಿಲ್ಲ !

ಬ್ಯಾಸರ ಮಾಡ್ಕಳಕ್ಕಿಲ್ಲ !

ನನ್ ಜೋಡಿ ಕನ್ನಡ ಮಾತಾಡಕ್ ಬರ್ತದಾ?

ಮಾತಾಡಕ್ ಬಂದ್ರೆ ಬರ್ತದೆ ಅನ್ನಿ

ಇಲ್ಲ ಅಂದ್ರೆ ಇಲ್ಲ ಅನ್ನಿ

ಕನ್ನಡದ ಕಂದ ನಾನು

ಬ್ಯಾಸರ ಮಾಡ್ಕಳಕ್ಕಿಲ್ಲ

 

ನಾನಿಲ್ಲಿ ಬರ್ದಿರೋದು ಓದೋಕ್ ಬರ್ತದಾ

ಓದೋಕ್ ಬಂದ್ರೆ ಬರ್ತದೆ ಅನ್ನಿ

ಇಲ್ಲ ಅಂದ್ರೆ ಇಲ್ಲ ಅನ್ನಿ

ಕನ್ನಡದ ಕಂದ ನಾನು

ಬ್ಯಾಸರ ಮಾಡ್ಕಳಕ್ಕಿಲ್ಲ

 

ನಾ ಬರೆದ ಕನ್ನಡ ಬರೀಲಿಕ್ ಬರ್ತದಾ

ಬರೀಲಿಕ್ ಬಂದ್ರೆ ಬರ್ತದೆ ಅನ್ನಿ

ಇಲ್ಲ ಅಂದ್ರೆ ಇಲ್ಲ ಅನ್ನಿ

ಕನ್ನಡದ ಕಂದ ನಾನು

ಬ್ಯಾಸರ ಮಾಡ್ಕಳಕ್ಕಿಲ್ಲ

 

ನನ್ನ ಪ್ರಶ್ನೆಗೆಲ್ಲ ನಿಮ್ ಉತ್ರ

ಅಂತಾದ್ರೆ ಇಲ್ಲ,ಇಲ್ಲ,ಇಲ್ಲ ಮಂತ್ರ

ಒಂದೋ ತಾಮಾಷೆ ಮಾಡ್ತಿದ್ದೀರ ನನ್ ಹತ್ರ

ಇಲ್ಲ ಅಂದ್ರೆ ಕನ್ನಡ ಬಲ್ಲವರ್ಯಾರೋ ನಿಮ್ ಮಿತ್ರ

 

ಕನ್ನಡದವರೇ ಹಂಗೆ ಕಣ್ಲಾ ಮೈಸೂರ್ ಮಲ್ಲಿಗೆ ಇದ್ದಂಗೆ

ತಲೆ ಮೇಲೇ ಇಟ್ಕೊಳ್ಳೋದ್ ಬ್ಯಾಡ ತುರುಬಿನ್ ಚಂದ್ರನಂಗೆ

ಮೈ ಮೇಲೆ ಹೇರಿಕೋಬೇಕಿಲ್ಲ ಉದ್ದನೆ ಹಾರದಂಗೆ

ಹತ್ರ ನಿಂತ್ರೂ ಸಾಕು ಘಮ್ಮನೆ ಸುವಾಸನೆ ಹೊದ್ದಂಗೆ

 

ಓದು ಬರಹ ತಿಳಿದಿದ್ರೆ ಮಾತ್ರ ಅಲ್ಲ ಕನ್ನಡಿಗ

ಭಾಷೆ ಬರದೆ ಅಭಿಮಾನ ಇದ್ರೆ ಅವನೂ ಕನ್ನಡಿಗ

 

ಕನ್ನಡ ರಾಜ್ಯೋತ್ಸವದ ಶುಭಾಶಯಗಳು !

 

Comments

Submitted by bhalle Sun, 11/03/2013 - 20:41

In reply to by nageshamysore

ದೀಪಾವಳಿ ಹಬ್ಬದ ಶುಭಾಶಯಗಳು ನಾಗೇಶರೇ ! ಅನಂತ ಧನ್ಯವಾದಗಳು ... ಇತ್ತೀಚೆಗೆ ತಿಳೀತು ನಮ್ಮ ಜಯಕುಮಾರ್ ನಿಮ್ಮ ಸ್ನೇಹಿತರು ಅಂತ !

Submitted by nageshamysore Mon, 11/04/2013 - 04:52

In reply to by bhalle

ಭಲ್ಲೆ ಜಿ, ಧನ್ಯವಾದಗಳು ಮತ್ತು ತಮಗೂ ದೀಪಾವಳಿಯ ಶುಭಾಶಯಗಳು :-)

ವಾಹ್ ..ಈ ಜಗತ್ತು ಎಷ್ಟು ಪುಟ್ಟದು ನೋಡಿ ! ಎರಡು ದಶಕಗಳಿಗೂ ಮೀರಿದ ಸ್ನೇಹ ಜಯಕುಮಾರರ ಜತೆ. ಆದರೆ ಜಾಗತಿಕವಾಗಿ ಹಂಚಿ ಹೋದ ವಾತಾವರಣದಲ್ಲಿ ಮುಖತಃ ಭೇಟಿಯಾಗುವ ಅವಕಾಶಗಳೆ ಸೀಮಿತವಾಗಿಹೋಗಿವೆ. ಆದರೂ ನಿರಂತರ ಮಿಂಚಚೆಯ ಸಂಪರ್ಕದಲ್ಲಿರುವುದರಿಂದ ಕೊಂಡಿಗಳು ಕಳಚದೆ ಉಳಿದುಕೊಂಡಿವೆ.