೧೪೯. ಲಲಿತಾ ಸಹಸ್ರನಾಮ ೬೪೫ರಿಂದ ೬೫೦ನೇ ನಾಮಗಳ ವಿವರಣೆ

೧೪೯. ಲಲಿತಾ ಸಹಸ್ರನಾಮ ೬೪೫ರಿಂದ ೬೫೦ನೇ ನಾಮಗಳ ವಿವರಣೆ

                                                                              ಲಲಿತಾ ಸಹಸ್ರನಾಮ ೬೪೫ - ೬೫೦

Sarva-vedānta-saṁvedyā सर्व-वेदान्त-संवेद्या (645)

೬೪೫. ಸರ್ವ-ವೇದಾಂತ-ಸಂವೇದ್ಯಾ

           ದೇವಿಯನ್ನು ವೇದಾಂತದ ಮೂಲಕ ತಿಳಿಯಬಹುದು. ವೇದಾಂತದ ಶಬ್ದಶಃ ಅರ್ಥ ’ಪರಮೋನ್ನತ ಜ್ಞಾನ’. ವೇದಗಳು ಅತ್ಯುನ್ನತ ಜ್ಞಾನದ ಮೂಲವಾಗಿವೆ. ಅವುಗಳೆಂದರೆ ಮಂತ್ರಗಳು, ಬ್ರಾಹ್ಮಣ, ಅರಣ್ಯಕ ಮತ್ತು ಉಪನಿಷತ್ತುಗಳು. ಮಂತ್ರಗಳೆಂದರೆ ವೈದಿಕ ಸೂಕ್ತಿಗಳ ಸಂಗ್ರಹ. ಬ್ರಾಹ್ಮಣವು ವೇದಗಳ ಆಚರಣೆ ಮತ್ತು ಯಜ್ಞ-ಯಾಗಾದಿಗಳ ವಿಧಿ ವಿಧಾನಗಳನ್ನು ಕುರಿತು ಹೇಳುತ್ತದೆ. ಅರಣ್ಯಕವು ವೈದಿಕ ಆಚರಣೆಗಳು ಮತ್ತು ಆತ್ಮ ಅಥವಾ ಬ್ರಹ್ಮನ ಕುರಿತಾದ ಅಧ್ಯಯನಗಳೆರಡರ ಸಮ್ಮಿಳಿತ ಭಾಗವಾಗಿದೆ. ಅಂತಿಮವಾಗಿ ಉಪನಿಷತ್ತುಗಳಿವೆ, ಅವುಗಳು ಆಧ್ಯಾತ್ಮಿಕ ಸೌಧಗಳಾಗಿವೆ. ವೇದಗಳು ಸ್ಥೂಲ ಮಟ್ಟದಿಂದ ಸೂಕ್ಷ್ಮ ಮಟ್ಟದವರೆಗಿನ ಆಧ್ಯಾತ್ಮಿಕತೆಯತ್ತ ಕರೆದೊಯ್ಯುತ್ತವೆ. ಉಪನಿಷತ್ತುಗಳು ಅತ್ಯುನ್ನತ ಜ್ಞಾನವನ್ನು; ಬ್ರಹ್ಮದ ಕುರಿತಾದ ಜ್ಞಾನವನ್ನು ಕೊಡುವುದರಿಂದ ಅವುಗಳನ್ನು ವೇದಾಂತವೆಂದು ಕರೆಯಲಾಗಿದೆ. ಹಲವಾರು ಉಪನಿಷತ್ತುಗಳಿವೆ ಮತ್ತು ಅವೆಲ್ಲವುಗಳನ್ನೂ ಅಧ್ಯಯನ ಮಾಡುವುದಕ್ಕೆ ಬಹಳ ಸಮಯ ಹಿಡಿಯುತ್ತದೆ. ಇದನ್ನರಿತ ಮಹರ್ಷಿ ವ್ಯಾಸರು ಬ್ರಹ್ಮಸೂತ್ರಗಳನ್ನು ಬರೆಯಲು ನಿಂತರು; ಇದು ಉಪನಿಷತ್ತುಗಳ ಸಂಪೂರ್ಣ ಸಾರವನ್ನು ಹಿಡಿದಿಟ್ಟ ಸಂಕ್ಷಿಪ್ತ ರೂಪವಾಗಿದೆ.

          ಕೃಷ್ಣನು ಭಗವದ್ಗೀತೆಯಲ್ಲಿ (೧೫.೧೫) ಹೀಗೆ ಹೇಳುತ್ತಾನೆ, "ಎಲ್ಲಾ ವೇದಗಳಿಂದಲೂ ನಾನೇ ತಿಳಿಯತಕ್ಕವನು, ವೇದಾಂತವನ್ನು ಮಾಡಿದವನು ಮತ್ತು ವೇದವನ್ನು ತಿಳಿದವನು ಸಹ ನಾನೇ ".

          ಈ ನಾಮವು ದೇವಿಯನ್ನು ವೇದಾಂತದ (ಉಪನಿಷತ್ತುಗಳ) ಮೂಲಕ ಅರಿಯಬಹುದೆಂದು ತಿಳಿಸುತ್ತದೆ. ಬೇರೆ ಮಾತುಗಳಲ್ಲಿ ಹೇಳಬೇಕೆಂದರೆ, ದೇವಿಯ ನಿಜ ಸ್ವರೂಪವನ್ನು ಕೇವಲ ವೇದಾಂತದ ಮೂಲಕವಷ್ಟೇ ಅರಿಯಬಹುದು; ಏಕೆಂದರೆ ಅದು ನಮಗೆ ಬ್ರಹ್ಮವನ್ನು ಸಾಕ್ಷಾತ್ಕರಿಸಿಕೊಳ್ಳಲು ಅಗತ್ಯವಿರುವ ಸೂಕ್ಷ್ಮ ಜ್ಞಾನವನ್ನು ಕೊಡುತ್ತದೆ.

ವೇದಾಂತದ ಕುರಿತು ಹೆಚ್ಚಿನ ವಿವರಣೆಗಳು

          ಅದ್ವೈತ ವೇದಾಂತವು ಅನುಭವದಿಂದ ಕಂಡುಕೊಂಡ ಅತ್ಯುನ್ನತ ಸತ್ಯವಾಗಿದೆ. ವೇದಾಂತವು ವೇದಗಳ ಅಂತಿಮ ಭಾಗವಾಗಿದೆ. ಶ್ರೀ ಶಂಕರರು ಹೇಳುತ್ತಾರೆ, "ಸರ್ವಾಸಾಂ ಉಪನಿಷದಾಮ್ ಆತ್ಮ-ಯಾಥಾತ್ಮ್ಯ-ನಿರೂಪಣೇನೈವ ಉಪಕ್ಷಯಾತ್ सर्वासां उपनिषदाम् आत्म-याथात्म्य-निरूपणेनैव उपक्षयात् " ಅಂದರೆ ಉಪನಿಷತ್ತುಗಳು ಆತ್ಮದ ಕುರಿತಾಗಿ ಚರ್ಚಿಸುತ್ತಾ ತಮ್ಮಷ್ಟಕ್ಕೇ ತಾವು ಬರಿದಾಗುತ್ತವೆ. ಏಕೆಂದರೆ ಆತ್ಮವೊಂದೇ ಚರ್ಚಿಸಲು ಯೋಗ್ಯವಾದುದೆಂದು ತಿಳಿಯಲ್ಪಟ್ಟಿದೆ.

         ಎಲ್ಲವನ್ನೂ ಆತ್ಮದ ಮೇಲೆ ಆರೋಪಿಸಲಾಗಿದೆ. ಆತ್ಮವು ಯಾವಾಗ ಜೀವಿಯಲ್ಲಿ ಇರುತ್ತದೆಯೋ ಅದನ್ನು ಆತ್ಮ ಅಥವಾ ಜೀವಿ ಎಂದು ಕರೆಯಲಾಗುತ್ತದೆ ಮತ್ತು ವಿಶ್ವದ ಎಲ್ಲಾ ಜೀವಿಗಳ ಆತ್ಮಗಳನ್ನು ಒಟ್ಟು ಸೇರಿಸಿದಾಗ ಅದು ಪರಬ್ರಹ್ಮವಾಗುತ್ತದೆ. ಉಪನಿಷತ್ತುಗಳ ಸಾರಸರ್ವಸ್ವವನ್ನು ಬ್ರಹ್ಮಸೂತ್ರಗಳಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಯಾವುದೇ ವಿಧವಾದ ಗೊಂದಲವನ್ನು ಪರಿಹರಿಸಲು ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ಬ್ರಹ್ಮದ ರಹಸ್ಯಗಳನ್ನು ಭಗವದ್ಗೀತೆಯ ರೂಪದಲ್ಲಿ ಹೇಳಿದನು. ಪ್ರಸ್ಥಾನತ್ರಯಗಳಲ್ಲಿ (ಉಪನಿಷತ್ತು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆ) ಸುಲಭವಾಗಿ ಅರ್ಥವಾಗುವಂತಹುದು ಭಗವದ್ಗೀತೆ, ಏಕೆಂದರೆ ಸ್ವಯಂ ಪರಬ್ರಹ್ಮನೇ (ಶ್ರೀ ಕೃಷ್ಣನೇ) ಮುಕ್ತಿಯನ್ನು ಹೊಂದಲು ಏನು ಅವಶ್ಯವೋ ಅದನ್ನು ಹೇಳಿದ್ದಾನೆ. ಭಗವದ್ಗೀತೆಯ ಸಂಪೂರ್ಣವಾದ ತಿಳುವಳಿಕೆಯು ಖಂಡಿತವಾಗಿ ಮುಕ್ತಿಗೆ ದಾರಿಯನ್ನು ಒದಗಿಸುತ್ತದೆ.

          ವೇದಾಂತವು ಯಾವುದೇ ವಿಧವಾದ ಮತ-ಧರ್ಮಗಳನ್ನು ಹಾಗೂ ಅವಕ್ಕೆ ಸಂಭಂದಿಸಿದ ಕಟ್ಟುಪಾಡುಗಳನ್ನು ಬೋಧಿಸುವುದಿಲ್ಲ. ವೇದಾಂತಕ್ಕೆ ಯಾವುದೇ ವಿಧವಾದ ಎಲ್ಲೆ ಅಥವಾ ಪರಿಮಿತಿಗಳಿಲ್ಲ. ವೇದಾಂತವು ಮಾನವನ ಜೀವನದಲ್ಲಿ ಮೂರು ವಿಧವಾಗಿ ವಿಕಾಸ ಹೊಂದುತ್ತದೆ; ಅದೆಂದರೆ ದ್ವೈತ, ವಿಶಿಷ್ಠಾದ್ವೈತ ಮತ್ತು ಅದ್ವೈತ. ಯಾವಾಗ ಒಬ್ಬ ವ್ಯಕ್ತಿಯು ಆಧ್ಯಾತ್ಮದ ಹಾದಿಯನ್ನು ಕ್ರಮಿಸಲು ಬಯಸುತ್ತಾನೆಯೋ ಮತ್ತು ಅವನು ಯಾವಾಗ ಬ್ರಹ್ಮದ ಕುರಿತಾದ ಜಿಜ್ಞಾಸೆಯನ್ನು ತೆಳೆಯುತ್ತಾನೆಯೋ ಆಗ ಈ ಮೂರು ಹಂತಗಳು ಒಂದಾದ ಮೇಲೆ ಒಂದರಂತೆ ಉದಯಿಸುತ್ತವೆ.

          ’ವೇದಾಂತ ಪರಿಭಾಷ’ ಗ್ರಂಥವು ವೇದಾಂತದ ಉದ್ದೇಶವು ಎರಡು ವಿಧವಾದದ್ದು ಎಂದು ಹೇಳುತ್ತದೆ. ಒಂದು ಪ್ರಧಾನವಾದರೆ ಮತ್ತೊಂದು ಗೌಣವಾದದ್ದು. ಸಂತೋಷ ಹೊಂದುವುದು ಮತ್ತು ದುಃಖವಿಲ್ಲದೇ ಇರುವುದು ಪ್ರಧಾನ ಉದ್ದೇಶವಾದರೆ ಇವುಗಳನ್ನು ಹೊಂದುವ ಮಾರ್ಗವು ಗೌಣವಾದದ್ದಾಗಿದೆ. ಇಲ್ಲಿ ಮತ್ತೆ ಸಂತೋಷವು ಎರಡು ವಿಧವಾದದ್ದು ಎಂದು ಹೇಳಲಾಗುತ್ತದೆ; ಒಂದು ತುಲನಾತ್ಮಕವಾದದ್ದು ಅಥವಾ ಹೋಲಿಸಬಹುದಾದದ್ದು ಮತ್ತೊಂದು ಅಪರಿಮಿತ ಅಥವಾ ಪರಿಪೂರ್ಣವಾದದ್ದು. ಇಲ್ಲಿ ಹೋಲಿಕೆಯ ಸಂತೋಷವು ಪರಿವರ್ತಿತವಾದ ಪರಮಾನಂದದ ಒಂದು ಪ್ರತ್ಯೇಕವಾದ ರೂಪಾಂತರವಾಗಿದೆ; ಇದು ಒಂದು ವಸ್ತುವಿನೊಂದಿಗೆ ಸಂಪರ್ಕಕ್ಕೆ ಬಂದಾಗ ಉಂಟಾಗುವ ಮಾನಸಿಕ ಪರಿಸ್ಥಿತಿಯ ವ್ಯತ್ಯಾಸದಿಂದ ಹೊರಹೊಮ್ಮಿದ್ದಾಗಿದೆ.

           ಸಾಮಾನ್ಯವಾಗಿ ವೇದಾಂತಿಯು ಕೆಳಗಿನ ಆರು ಪ್ರಮಾಣಗಳ ಮೂಲಕ ಜ್ಞಾನವನ್ನು ಪಡೆದುಕೊಳ್ಳುತ್ತಾನೆ - ಪ್ರತ್ಯಕ್ಷ ಅನುಭವ, ಅನುಮಾನ (ನಿಷ್ಕರ್ಷೆ ಅಥವಾ ಕ್ರಮಬದ್ಧ ಜ್ಞಾನ), ಉಪಮಾನ (ಹೋಲಿಕೆ), ಶಬ್ದ ಸಾಕ್ಷ್ಯ (ವಾಕ್ಯ ಪ್ರಮಾಣ/ಶ್ರುತಿ ಪ್ರಮಾಣ), ಪೂರ್ವಾನುಭವ ಮತ್ತು ಪೂರ್ವಾಗ್ರಹರಾಹಿತ್ಯ. ವೇದಾಂತವು ಶುದ್ಧ ಚೈತನ್ಯವು ಮೂರು ರೂಪಗಳಲ್ಲಿರುತ್ತದೆ ಎಂದು ಹೇಳುತ್ತದೆ - ಮೊದಲನೆಯದು ವ್ಯಕ್ತಿ ಅಥವಾ ಜ್ಞಾನಿಯೊಂದಿಗೆ ಅನುಬಂಧವನ್ನು ಹೊಂದಿದ್ದು ಅದು ಮನಸ್ಸಿನಿಂದಾಗಿ ಪರಿಮಿತವಾಗಿದೆ. ಎರಡೆನೆಯದು ವಸ್ತುವಿನೊಂದಿಗೆ ಸಂಭಂದ ಹೊಂದಿದೆ ಮತ್ತು ಮೂರನೆಯದು ಮಾನಸಿಕ ಸ್ಥಿತಿಯೊಂದಿಗೆ ಅನುಭಂದವನ್ನು ಹೊಂದಿದೆ. ಮಾನಸಿಕ ಸ್ಥಿತಿಯ ಪರಿಧಿಯು ಅವಿದ್ಯೆ ಅಥವಾ ಅಜ್ಞಾನವನ್ನು ಹೋಗಲಾಡಿಸಲು ಸಹಾಯಕವಾಗಿದೆ. ಆದ್ದರಿಂದ ವೇದಾಂತವು ಸಂಕೀರ್ಣ ಮತ್ತು ಅರಿಯಬಹುದಾದ ಸಿದ್ಧಾಂತವಾಗಿದ್ದು ಅದು ನಮ್ಮನ್ನು ಅಂತಿಮ ಸತ್ಯವಾದ ಪರಬ್ರಹ್ಮನೆಡೆಗೆ ಕೊಂಡೊಯ್ಯುತ್ತದೆ.

Satyānanda-svarūpiṇī सत्यानन्द-स्वरूपिणी (646)

೬೪೬. ಸತ್ಯಾನಂದ-ಸ್ವರೂಪಿಣೀ

           ದೇವಿಯು ಸತ್ಯ ಮತ್ತು ನಿತ್ಯಾನಂದದ ಸ್ವರೂಪದಲ್ಲಿದ್ದಾಳೆ. ನಿತ್ಯವಾದ ಆನಂದವು ಸತ್ಯವನ್ನು ಅರಿತಲ್ಲದೇ ಹೊಂದಲಾಗದು. ಸತ್ಯವು ನಿತ್ಯಾನಂದದೆಡೆಗೆ ಕರೆದೊಯ್ಯುತ್ತದೆ. ಈ ಪರಮಾನಂದವನ್ನು ಹೊಂದಲು ಸತ್ಯವನ್ನು ಕಡೆಗಣಿಸುವಂತಿಲ್ಲ. ಇಲ್ಲಿ ಸತ್ಯವೆಂದರೆ ಅದ್ವೈತ ತತ್ವ ಅಥವಾ ದ್ವೈತವಿಲ್ಲದಿರುವಿಕೆಯಾಗಿದ್ದು ಅದು ನಮ್ಮನ್ನು ಪರಬ್ರಹ್ಮದೆಡೆಗೆ ಮುನ್ನೆಡುಸುತ್ತದೆ. ತೈತ್ತರೀಯ ಉಪನಿಷತ್ತು (೨.೬) ಹೀಗೆ ಹೇಳುತ್ತದೆ, "ಬ್ರಹ್ಮವು ನಮ್ಮ ಸುತ್ತಲಿರುವ ಎಲ್ಲಾ ವಸ್ತುಗಳಾಗಿ ರೂಪಾಂತರ ಹೊಂದಿದೆ, ಯಾರು ಬ್ರಹ್ಮವನ್ನು ತಿಳಿದಿದ್ದಾರೋ ಅವರು ಇದನ್ನು ‘ಸತ್ಯ’ ಎನ್ನುತ್ತಾರೆ”. ಆದ್ದರಿಂದ ಸತ್ಯವೆಂದರೆ ಬ್ರಹ್ಮವೆಂದು ಅರ್ಥ, ಇದೊಂದೇ ಮತ್ತು ಇದು ಮಾತ್ರವೇ ಬ್ರಹ್ಮಾಂಡದೆಲ್ಲೆಡೆ ವಿವಿಧ ವಸ್ತುಗಳ ರೂಪದಲ್ಲಿ ಅಸ್ತಿತ್ವದಲ್ಲಿದೆ. ಈ ಸತ್ಯವನ್ನು ಅರಿತರೆ, ಅದು ಸಂತೋಷದೆಡೆಗೆ ಕರೆದೊಯ್ಯುತ್ತದೆ, ಅದುವೇ ಆನಂದವಾಗಿದೆ.

          ಈ ನಾಮವು ದೇವಿಯ ನಿತ್ಯನಿರಂತರೆತೆಯನ್ನು ಉಲ್ಲೇಖಿಸುತ್ತದೆ, ಇದು ಬ್ರಹ್ಮದ ಸಾಟಿಯಿಲ್ಲದ (ಹೋಲಿಕೆಯಿಲ್ಲದ) ಸತ್-ಚಿತ್-ಆನಂದದ ಲಕ್ಷಣವಾಗಿದೆ. ಒಬ್ಬರು ಆಧ್ಯಾತ್ಮಿಕ ಪ್ರಗತಿಯ ಹಾದಿಯಲ್ಲಿ ಸಾಗುತ್ತಿರುವಾಗ ಅವರು ಬ್ರಹ್ಮವನ್ನು ಅರಿಯುವುದಕ್ಕೆ ಮೊದಲು ಆನಂದವನ್ನು ಅನುಭವಿಸುತ್ತಾರೆ. 

Lopāmudrārcitā लोपामुद्रार्चिता (647)

೬೪೭. ಲೋಪಾಮುದ್ರಾರ್ಚಿತಾ

           ಲೋಪಾಮುದ್ರೆಯು ಮಹರ್ಷಿ ಅಗಸ್ತ್ಯರ ಪತ್ನಿ. ಈ ನಾಮವು ದೇವಿಯು ಲೋಪಾಮುದ್ರೆಯಿಂದ ಪೂಜಿಸಲ್ಪಡುತ್ತಾಳೆ ಎಂದು ತಿಳಿಸುತ್ತದೆ.

           ಈ ಕೆಳಗಿನ ದೃಶ್ಯವು ಲಲಿತಾ ತ್ರಿಶತಿಯ ಪೂರ್ವಭಾಗದಲ್ಲಿ ನಿರೂಪಿತವಾಗಿದೆ. ಹಯಗ್ರೀವನು  ಲಲಿತಾಂಬಿಕೆಯು ವಿಧಿಸಿದ ಕೆಲವೊಂದು ನಿಯಮಗಳಿಗೆ ಬದ್ಧನಾಗಿ ಅಗಸ್ತ್ಯನೊಂದಿಗೆ ತ್ರಿಶತಿಯನ್ನು ಹಂಚಿಕೊಳ್ಳಲು ಇಷ್ಟಪಡಲಿಲ್ಲ, ಆಗ ಲಲಿತಾಂಬಿಕೆಯು ಶಿವನ ಸಮೇತ ಹಯಗ್ರೀವನ ಎದುರಿಗೆ ಪ್ರತ್ಯಕ್ಷಳಾಗಿ ಅಗಸ್ತ್ಯ ಮುನಿಗೆ ತ್ರಿಶತಿಯ ಉಪದೇಶವನ್ನು ಮಾಡುವಂತೆ ಆದೇಶಿಸಿದಳು. ಆಗ ದೇವಿಯು, "ನಮ್ಮಿಬ್ಬರಿಂದಲೂ  (ಶಿವ ಮತ್ತು ಶಕ್ತಿಯರಿಬ್ಬರಿಂದಲೂ) ರಚಿಸಲ್ಪಟ್ಟ ತ್ರಿಶತಿಯು ‘ಸರ್ವ ಪೂರ್ತಿಕಾರಿ’ (ಸಕಲಾಭೀಷ್ಟವನ್ನು ನೆರವೇರಿಸುವ) ಸಾಧನವಾಗಿದೆ. ಇದನ್ನು ಪಠಿಸುವುದರ ಮೂಲಕ ಎಲ್ಲಾ ಅಸಂಪೂರ್ಣ ಕಾರ್ಯಗಳು (ಕರ್ಮಗಳು) ನೇರವೇರಿ ಮುಕ್ತಿಗೆ ದಾರಿತೋರುತ್ತದೆ. ಇದನ್ನು ನೀನು ಅಗಸ್ತ್ಯನಿಗೆ ಉಪದೇಶಿಸಬಹುದು, ಅವನ ಹೆಂಡತಿಯಾದ ಲೋಪಾಮುದ್ರೆಯು ನನ್ನನ್ನು ವಿಶೇಷ ಭಕ್ತಿಯಿಂದ ಪೂಜಿಸುತ್ತಾಳೆ" ಎಂದು ಹೇಳಿದಳು. ಲಲಿತಾಂಬಿಕೆಯ ಮೇಲೆ ಲೋಪಾಮುದ್ರೆಯ ಭಕ್ತಿಯು ಈ ವಿಧವಾಗಿತ್ತು. ಲೋಪಾಮುದ್ರೆಯು ತನ್ನ ಸ್ವಂತ ಪಂಚದಶೀ ಮಂತ್ರದ ಮೂಲಕ ದೇವಿಯನ್ನು ಸ್ತುತಿಸಿದಳು. ಇದರ ಕುರಿತು ಇನ್ನಷ್ಟು ವಿವರಗಳಿಗೆ ನಾಮ ೨೩೮ ಮತ್ತು ೨೩೯ನ್ನು ಸಹ ನೋಡಬಹುದು.

Līlā-klṛpta-brahmāṇḍa-maṇḍalā लीला-क्लृप्त-ब्रह्माण्ड-मण्डला (648)

೬೪೮. ಲೀಲಾ-ಕ್ಲೃಪ್ತ-ಬ್ರಹ್ಮಾಂಡ-ಮಂಡಲಾ

           ದೇವಿಯು ಬ್ರಹ್ಮಾಂಡದ ಈ ಸೃಷ್ಟಿಯನ್ನು ಲೀಲಾಜಾಲವಾಗಿ ನಿಯಂತ್ರಿಸುತ್ತಾಳೆ. ದೇವಿಯು ಮೂರು ಕ್ರಿಯೆಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯಗಳಿಗೆ ನೀತಿ ನಿಯಮಗಳನ್ನು ರೂಪಿಸಿದ್ದಾಳೆ. ದೈವ ನಿಯಮವು ಕರ್ಮ ನಿಯಮವಾಗಿದೆ. ದೇವಿಯು ತಾನು ರೂಪಿಸಿದ ಕಟ್ಟಳೆಯನ್ನು ಅಧಿಗಮಿಸುವುದಿಲ್ಲವಾದುದರಿಂದ, ಆಕೆಯ ಕಾರ್ಯವು ಸುಗುಮವಾಗಿದೆ. ’ಉನ್ಮೇಷ-ನಿಮಿಷೋತ್ಪನ್ನ-ವಿಪನ್ನ-ಭುವನಾವಲಿಃ’ ನಾಮ ೨೮೧ನ್ನು ಸಹ ನೋಡಿ.

Adṛśyā अदृश्या (649)

೬೪೯. ಅದೃಶ್ಯಾ

          ದೇವಿಯು ಅಗೋಚರಳು. ದೇವಿಯನ್ನು ಜೈವಿಕ ಕಣ್ಣುಗಳಿಂದ ಅಥವಾ ಇತರೇ ಇಂದ್ರಿಯಗಳಿಂದ ಗ್ರಹಿಸಲಾಗದು. ಆಕೆಯನ್ನು ಕೇವಲ ಪ್ರಜ್ಞೆಯಲ್ಲಿ ಅರಿಯಬಹುದು, ಏಕೆಂದರೆ ಆಕೆಯು ಅತ್ಯಂತ ಸೂಕ್ಷ್ಮವಾಗಿದ್ದಾಳೆ (ಕಾಮಕಲಾ ಮತ್ತು ಕುಂಡಲಿನೀ) ಮತ್ತು ಕಲ್ಪನೆಗೆ ಮೀರಿದವಳಾಗಿದ್ದಾಳೆ. ಬೃಹದಾರಣ್ಯಕ ಉಪನಿಷತ್ತು (೩.೪.೨) ಈ ಸಂದರ್ಭವನ್ನು ಹೀಗೆ ವಿವರಿಸುತ್ತದೆ, "ದೃಷ್ಟೇಃ ದ್ರಷ್ಟಾರಂ ನ ಪಶ್ಯೇಃ दृष्टेः द्रष्टारं न पश्येः” ಅಂದರೆ ನೀನು ದೃಷ್ಟಿಗೆ ಸಾಕ್ಷಿಯಾಗಿರುವ ವಸ್ತುವನ್ನು ನೋಡಲಾರೆ". ನೋಡುವುದು ಹಲವಾರು ವಸ್ತುಗಳನ್ನು ಒಳಗೊಂಡ ಕ್ರಿಯೆಯಾಗಿದೆ, ಆದರೆ ಅದನ್ನು ಅಧಿಗಮಿಸಿ ಅದರ ಹಿಂದಿರುವ ಅಂತರಾತ್ಮದೊಳಗಿರುವ ಆತ್ಮವನ್ನು ಅದು ಬಹಿರಂಗಗೊಳಿಸುವುದಿಲ್ಲ. ದೇವಿಯ ರೂಪವನ್ನು ಕೇವಲ ಧ್ಯಾನದ ಮೂಲಕವಷ್ಟೇ ಸಾಕ್ಷಾತ್ಕರಿಸಿಕೊಳ್ಳಬಹುದು.

Dṛśyarahitā दृश्यरहिता (650)

೬೫೦. ದೃಶ್ಯರಹಿತಾ

           ದೇವಿಯು ನೋಟವನ್ನು ಅಧಿಗಮಿಸುತ್ತಾಳೆ. ಈ ನಾಮವು ಹಿಂದಿನ ನಾಮದ ವಿಸ್ತರಣೆಯಾಗಿದೆ. ಹೀಗೂ ಸಹ ಹೇಳಬಹುದು, ಅದೇನೆಂದರೆ ಹಿಂದಿನ ನಾಮವು ಆಕೆಯ ಕಾಮಕಲಾ ರೂಪವನ್ನು ಕುರಿತು ಹೇಳಿದರೆ, ಈ ನಾಮವು ಆಕೆಯ ಕುಂಡಲಿನೀ ರೂಪವನ್ನು ಉಲ್ಲೇಖಿಸುತ್ತದೆ. ದೇವಿಯು ಮಾನವನ ಬುದ್ಧಿಮತ್ತೆಗೆ ನಿಲುಕದ ಪರಮಜ್ಞಾನದ ಸ್ವರೂಪದಲ್ಲಿದ್ದಾಳೆ.

                                                                                     ******

ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 645- 650 http://www.manblunder.com/2010/03/lalitha-sahasranamam-645-650.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Sat, 11/02/2013 - 12:07

ಶ್ರೀಧರರೆ, "೧೪೯. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೬೪೫ - ೬೫೦
__________________________
.
೬೪೫. ಸರ್ವ-ವೇದಾಂತ-ಸಂವೇದ್ಯಾ
ಬ್ರಹ್ಮ ಸಾಕ್ಷಾತ್ಕಾರಕೆ ಬೇಕಿಹ ಸೂಕ್ಷ್ಮ ಜ್ಞಾನ, ವೇದಾಂತದಿಂದಾಗಮನ
ದೇವಿ ನಿಜಸ್ವರೂಪವನರಿಯೆ, ಉಪನಿಷತ್ತುಗಳಿಂದಲೆ ಜ್ಞಾನದ ಉಗಮ
ಉಪನಿಷತ್ತೆ ವೇದಾಂತ, ಪರಮೋನ್ನತ ಜ್ಞಾನಮೂಲ ನಿವಾರಿಸಲವಿದ್ಯಾ
ಬ್ರಹ್ಮವನರಿಯೊ ಸಾಧಕಗೆ ಲಲಿತಾಸಖ್ಯ, ಸರ್ವ ವೇದಾಂತ ಸಂವೇದ್ಯಾ ||
.
ಅತ್ಯುನ್ನತ ಜ್ಞಾನಮೂಲ ವೇದ, ಮಂತ್ರ-ಬ್ರಾಹ್ಮಣ-ಅರಣ್ಯಕ-ಉಪನಿಷತ್ತು
ವೈದಿಕ ಸೂಕ್ತಿ ಸಂಗ್ರಹವೆ ಮಂತ್ರ, ಬ್ರಾಹ್ಮಣವೆ ವೇದಗಳಾಚರಣೆ ಸಗಟು
ಯಜ್ಞ-ಯಾಗಾದಿ ವಿಧಿ ವಿಧಾನಗಳ ಕುರಿತು, ವೈದಿಕಾಚರಣೆ ಸಮ್ಮಿಲನ
ಬ್ರಹ್ಮದಧ್ಯಯನ ಅರಣ್ಯಕ, ವೇದಾಂತ ಆಧ್ಯಾತ್ಮಿಕಸೌಧ ಅತ್ಯುನ್ನತ ಜ್ಞಾನ ||
.
ಸ್ಥೂಲದಿಂದ ಸೂಕ್ಷ್ಮ ಆಧ್ಯಾತ್ಮಕತೆ ಮಟ್ಟ ಮುಟ್ಟೆ ಮೆಟ್ಟಿಲಾಗಿ ವೇದ ಸ್ತುತ
ಬ್ರಹ್ಮದ ಕುರಿತತ್ಯುನ್ನತ ಜ್ಞಾನಗಳಿಕೆಗೆ ಸೂಕ್ತ, ಉಪನಿಷತ್ತಾಗಿ ವೇದಾಂತ
ಹಲವಾರು ವೇದಾಂತೋಪನಿಷತ್ತುಗಳ ಸಹಿತ, ಸಾರಗ್ರಹಣೆಗೆ ಸಮಯ
ಸಂಕ್ಷಿಪ್ತರೂಪದಿ ವ್ಯಾಸರೆ, ಹಿಡಿದಿಟ್ಟ ಸಂಪೂರ್ಣಸಾರ ಮಿತ ಬ್ರಹ್ಮಸೂತ್ರ ||
.
೬೪೬. ಸತ್ಯಾನಂದ-ಸ್ವರೂಪಿಣೀ
ಸತ್-ಚಿತ್-ಆನಂದ ಸಾಟಿಯಿಲ್ಲದ ಬ್ರಹ್ಮ ಲಕ್ಷಣ, ನಿತ್ಯ ನಿರಂತರ
ಅಧ್ಯಾತ್ಮಿಕ ಪ್ರಗತಿಯ್ಹಾದಿಯಲಿ, ಬ್ರಹ್ಮವರಿವ ಮುನ್ನ ಆನಂದಸಾರ
ಸತ್ಯವರಿತಲ್ಲದೆ ಸಿಗದ ನಿತ್ಯಾನಂದ, ದೇವಿ ಸತ್ಯಾನಂದ-ಸ್ವರೂಪಿಣೀ
ಸತ್ಯದಿಂದ ನಿತ್ಯಾನಂದದೆಡೆಗೆ, ಅದ್ವೈತ ಸತ್ಯ ಬ್ರಹ್ಮಾನಂದ ಕಾರಣಿ ||
.
೬೪೭. ಲೋಪಾಮುದ್ರಾರ್ಚಿತಾ
ತನದೆ ಪಂಚದಶೀ ಮಂತ್ರದೆ ಸ್ತುತಿಸಿ, ಲೋಪಾಮುದ್ರೆ ಲಲಿತಾಪ್ರಿಯೆ
ಶಿವಶಕ್ತಿರಚಿತ ತ್ರಿಶತಿ, ಹಯಗ್ರೀವನಿಂದಗಸ್ತರಿಗುಪದೇಶ ದೇವಿ ದಯೆ
ಸಕಲಾಭೀಷ್ಟಕಾರಕ ಸಾಧನ, ಪಠಿಸೆ ಕರ್ಮಶೇಷ ನಿರ್ನಾಮ, ವಿಮುಕ್ತ
ಲೋಪಾಮುದ್ರೆಗಾಗಿ ಅಗಸ್ತ್ಯನಿಗೊಲಿದ ಲಲಿತೆ ಲೋಪಾಮುದ್ರಾರ್ಚಿತಾ ||
.
೬೪೮. ಲೀಲಾ-ಕ್ಲೃಪ್ತ-ಬ್ರಹ್ಮಾಂಡ-ಮಂಡಲಾ
ಸೃಷ್ಟಿ-ಸ್ಥಿತಿ-ಲಯ ಕ್ರಿಯೆಗಳ ಸರಿ ನಡೆಸೆ ನೀತಿ ನಿಯಮ
ರೂಪಿಸಿಹಳು ಲಲಿತೆ, ತಾನಧಿಗಮಿಸದೆ ಕಾರ್ಯ ಸುಗಮ
ಬ್ರಹ್ಮಾಂಡ ಸೃಷ್ಟಿ-ನಿಯಂತ್ರಣ ದೇವಿ ಲಲಿತೆಗೆ ಲೀಲಾಜಾಲ
ಕರ್ಮ ನಿಯಮವಾಗಿಸಿ ಲೀಲಾ-ಕ್ಲೃಪ್ತ-ಬ್ರಹ್ಮಾಂಡ-ಮಂಡಲಾ ||
.
೬೪೯. ಅದೃಶ್ಯಾ
ದೃಷ್ಟಿಗಗೋಚರತೆ ಬ್ರಹ್ಮದ ಲಕ್ಷಣ, ಇಂದ್ರಿಯ ಗ್ರಹಿಕೆ ಅಜ್ಞಾನ
ಅತಿಸೂಕ್ಷ್ಮ ಕಾಮಕಲಾ-ಕುಂಡಲಿನೀ, ಅರಿಯಲಷ್ಟೆ ಪ್ರಜ್ಞಾಮನ
ಕಲ್ಪನಾತೀತ, ದೃಷ್ಟಿಗೆ ಸಾಕ್ಷೀಭೂತ ಜೈವಿಕ ನಯನಕೆ ಅದೃಶ್ಯಾ
ಧ್ಯಾನಕಷ್ಟೆ ದೇವಿ ರೂಪ ಸಾಕ್ಷಾತ್ಕಾರ, ಅಂತರಾತ್ಮದಾತ್ಮ ರಹಸ್ಯ ||
.
೬೫೦. ದೃಶ್ಯರಹಿತಾ
ಅದೃಶ್ಯಾ ಭರಿಸಿ ಕಾಮಕಲಾಸ್ವರೂಪ, ಕುಂಡಲಿನೀ ದೃಶ್ಯರಹಿತಾ
ಮಾನವ ಬುದ್ದಿಮತ್ತೆಗೆ ನಿಲುಕದ, ಪರಮಜ್ಞಾನಸ್ವರೂಪಿಣಿ ಲಲಿತ
ನೋಟಗಳೆಲ್ಲವನಧಿಗಮಿಸುವಳು ದೇವಿ, ದೃಶ್ಯಾದೃಶ್ಯ ಅಪ್ರಸ್ತುತ
ಜ್ಞಾನಧಾರೆ ಧ್ಯಾನ ರೂಪದಿ ಹರಿಯೆ, ನಿಲುಕುವಳು ದೃಶ್ಯರಹಿತಾ ||
.
.
- ಧನ್ಯವಾದಗಳೊಂದಿಗೆ
   ನಾಗೇಶ ಮೈಸೂರು