೧೫೦. ಲಲಿತಾ ಸಹಸ್ರನಾಮ ೬೫೧ರಿಂದ ೬೫೫ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೬೫೧ - ೬೫೬
Vijñātrī विज्ञात्री (651)
೬೫೧. ವಿಜ್ಞಾತ್ರೀ
ದೇವಿಯು ವಿಜ್ಞಾತೃವಾಗಿದ್ದಾಳೆ ಮತ್ತು ಆಕೆಯು ಎಲ್ಲವನ್ನು ಬಲ್ಲವಳಾಗಿದ್ದಾಳೆ. ಸಕಲವನ್ನೂ ತಿಳಿದುಕೊಂಡಿರುವುದು ಬ್ರಹ್ಮದ ವಿಶಿಷ್ಠ ಲಕ್ಷಣವಾಗಿದೆ. ಬೃಹದಾರಣ್ಯಕ ಉಪನಿಷತ್ತು (೨.೪.೧೪) ಅದನ್ನು ಹೀಗೆ ವಿವರಿಸುತ್ತದೆ, ""ಯೇನೇದಂ ಸರ್ವಂ ವಿಜನಾತಿ ತಂ ಕೇನ ವಿಜಾನೀಯಾತ್? ವಿಜ್ಞಾತರಮರೇ ಕೇನ ವಿಜಾನೀಯಾದಿತಿ? ಅಂದರೆ ಯಾವುದರಿಂದ ಇದೆಲ್ಲವನ್ನೂ ತಿಳಿದುಕೊಳ್ಳುತ್ತಾನೆಯೋ ಅದನ್ನು ಯಾವುದರಿಂದ ತಿಳಿದುಕೊಂಡಾನು? ವಿಜ್ಞಾತೃವನ್ನು (ತಿಳಿದವನನ್ನು) ಯಾವುದರಿಂದ ತಿಳಿದುಕೊಂಡಾನು?" ಇಲ್ಲಿ ಅದು ಮತ್ತು ತಿಳಿದವನು (ವಿಜ್ಞಾತೃ) ಎರಡೂ ಬ್ರಹ್ಮವೆಂದು ಅರ್ಥ. ಒಬ್ಬ ಆತ್ಮಾನುಭೂತಿಯನ್ನು ಹೊಂದಿದ ವ್ಯಕ್ತಿಯು ನಿತ್ಯ - ಅನಿತ್ಯ ವಸ್ತುಗಳ ನಡುವೆ ಭೇದವನ್ನು ವಿವೇಚೆನಯಿಂದ ತಿಳಿಯುತ್ತಾನೆ. ಅಲ್ಲಿ ಕೇವಲ ವಿಷಯವೊಂದೇ ಇರುತ್ತದೆ; ಪರಿಪೂರ್ಣವಾದದ್ದು ಮತ್ತು ಅದ್ವಿತೀಯವಾದದ್ದು. ದೇವಿಯು ಆ ಪರಿಪೂರ್ಣ ಸ್ವರೂಪಳಾಗಿದ್ದಾಳೆ, ಅದು ಜ್ಞಾನದ ಮೂರ್ತರೂಪವಾಗಿದೆ.
Vedyavarjitā वेद्यवर्जिता (652)
೬೫೨. ವೇದವರ್ಜಿತಾ
ವೇದವರ್ಜಿತಾ ಅಂದರೆ ದೇವಿಯು ತಿಳಿಯಬೇಕಾದುದೇನೂ ಇಲ್ಲ, ಇದು ಸಹ ಬ್ರಹ್ಮದ ಮತ್ತೊಂದು ಲಕ್ಷಣವಾಗಿದೆ. ದೇವಿಯು ಸರ್ವಜ್ಞಳು. ಇದು ಹಿಂದಿನ ನಾಮದ ಅರ್ಥವನ್ನು ದೃಢಪಡಿಸುತ್ತದೆ.
Yoginī योगिनी (653)
೬೫೩. ಯೋಗಿನೀ
ದೇವಿಯು ಯೋಗದ ರೂಪದಲ್ಲಿದ್ದಾಳೆ. ಇಲ್ಲಿ ಯೋಗವೆಂದರೆ ಆತ್ಮವು ಪರಮಾತ್ಮದೊಂದಿಗೆ ಸಂಯೋಗ ಹೊಂದುವುದು. ಆಕೆಯು ಶಿವನೊಂದಿಗೆ ಐಕ್ಯಳಾಗಿ ಇರುತ್ತಾಳೆ. ಯೋಗವು ದೇಹ, ಮನಸ್ಸು ಮತ್ತು ಆತ್ಮ ಇವುಗಳಲ್ಲಿ ಸಾಮರಸ್ಯವನ್ನು ತರುವುದರ ಮೂಲಕ ಬಂಧಿತವಾಗಿರುವ ಆತ್ಮವನ್ನು ಅಂತಿಮ ಬಿಡುಗಡೆಯೆಡೆಗೆ ಕರೆದೊಯ್ಯುವ ಉದ್ದೇಶವನ್ನು ಹೊಂದಿದೆ. ಅಂತಿಮ ಬಿಡುಗಡೆಯನ್ನು ಮುಕ್ತಿ, ಮೋಕ್ಷ ಮೊದಲಾದ ಶಬ್ದಗಳಿಂದ ಕರೆಯಲಾಗುತ್ತದೆ.
ಈ ನಾಮವು ಬಹುಶಃ ಶ್ರೀ ಚಕ್ರದ ನವಾವರಣಗಳಲ್ಲಿ ಆಸೀನರಾಗಿರುವ ಯೋಗಿನಿಯರನ್ನೂ ಸಹ ಕುರಿತು ಹೇಳಬಹುದು.
ಯೋಗವೆಂದರೆ ಭಾರತೀಯ ಜ್ಯೋತಿಶಾಸ್ತ್ರದ ಭಾಗವಾಗಿರುವ ಪಂಚಾಂಗದ ಒಂದು ಅಂಗವೂ ಆಗಿದೆ. ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ ಇವು ಐದು ವಸ್ತುಗಳು ಸೇರಿ ಪಂಚಾಂಗವಾಗುತ್ತವೆ.
ಢಾಕಿನೀ ಮೊದಲಾದ ಯೋಗಿನಿಯರು ಮೆದುಳು ಹಾಗೂ ಮೆದುಳು ಬಳ್ಳಿಯ ವ್ಯವಸ್ಥೆಯಲ್ಲಿರುವ ಏಳು ಚಕ್ರಗಳನ್ನು ನಿಯಂತ್ರಿಸುತ್ತಾರೆ. ಇದನ್ನು ಯೋಗಿನಿಯರ ಪರಿಚಯ ಲೇಖನದಲ್ಲಿ ಮತ್ತು ೪೭೫ರಿಂದ ೫೩೪ರವರೆಗಿನ ನಾಮಗಳ ವಿವರಣೆಯಲ್ಲಿ ಚರ್ಚಿಸಲಾಗಿದೆ.
Yogadā योगदा (654)
೬೫೪. ಯೋಗದಾ
ದೇವಿಯು ತನ್ನ ಭಕ್ತರಿಗೆ ಯೋಗವನ್ನು ಅನುಗ್ರಹಿಸುತ್ತಾಳೆ. ದೇವಿಯ ಕೃಪೆಯಿಂದಾಗಿ ಆತ್ಮವು ಪರಮಾತ್ಮದೊಂದಿಗೆ ಲೀನವಾಗಬೇಕೆಂಬ ಹಂಬಲು ಉಂಟಾಗುತ್ತದೆ.
Yogyā योग्या (655)
೬೫೫. ಯೋಗ್ಯಾ
ದೇವಿಯನ್ನು ಯೋಗದ ಮೂಲಕ ಹೊಂದಬಹುದು. ಸ್ವಯಂ ದೇವಿಯೇ ಯೋಗವಾಗಿದ್ದಾಳೆ, ಆಕೆಯು ಯೋಗವನ್ನು ಕರುಣಿಸುವವಳಾಗಿದ್ದಾಳೆ ಮತ್ತು ಆಕೆಯನ್ನು ಯೋಗದ ಮೂಲಕ ಹೊಂದಬಹುದು. ಶ್ವೇತಾಶ್ವತರ ಉಪನಿಷತ್ತು (೧.೧೨) ಹೀಗೆ ಹೇಳುತ್ತದೆ, "ಒಬ್ಬನು ಅಂತಾರಾಳದೊಳಗಿರುವ ಬ್ರಹ್ಮವನ್ನು ಅರಿಯಬೇಕು ಎಂದು ಹೇಳುತ್ತಾ ಬ್ರಹ್ಮವನ್ನು ಅರಿಯುವ ಜ್ಙಾನಕ್ಕಿಂತ ಮಿಗಿಲಾದದ್ದು ಮತ್ತೇನೂ ಇಲ್ಲವೆಂದು ಸಾರಿ ಹೇಳುತ್ತದೆ". ಯೋಗಿನೀ (ನಾಮ ೬೫೩) ಅಥವಾ ಭೋಕ್ತೃ, ಭೋಗಿಸಲ್ಪಡುವ ವಸ್ತು (ಭೋಗ್ಯಾ) ಅಥವಾ ಯೋಗ್ಯಾ (ಪ್ರಸ್ತುತ ನಾಮವಾದ ೬೫೫) ಮತ್ತು ಭೋಗವನ್ನು ಒದಗಿಸುವವಳು ಅಥವಾ ಯೋಗ್ಯದಾ (ನಾಮ ೬೫೪) ಇವೆಲ್ಲವೂ ಬ್ರಹ್ಮವೇ ಆಗಿವೆ.
ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ (೬.೨೩) ಹೀಗೆ ಹೇಳುತ್ತಾನೆ, "ಆ ಸ್ಥಿತಿಯು ಯೋಗವೆನಿಸಿಕೊಳ್ಳುತ್ತದೆ; ಯಾವುದು ದುಃಖದಿಂದ ಕುಗ್ಗುದೇ ಸ್ವತಂತ್ರವಾಗಿರುವುದೋ, ಅದನ್ನು ಅರಿಯಬೇಕು ಮತ್ತು ಅದನ್ನು ನಿಷ್ಠೆಯಿಂದ ಮತ್ತು ಶುದ್ಧ ಮನಸ್ಸಿನಿಂದ ಅಭ್ಯಸಿಸಬೇಕು”.
ಮಹರ್ಷಿ ಪತಂಜಲಿಯು ತನ್ನ ಯೋಗ ಸೂತ್ರದಲ್ಲಿ (೧.೨) ಹೀಗೆ ಹೇಳುತ್ತಾನೆ, "ಚಿತ್ತವೃತ್ತಿಗಳನಿರೋಧವೇ ಯೋಗ”. ಶ್ರೀ ಕೃಷ್ಣನು ಇದನ್ನು ಭಗವದ್ಗೀತೆಯಲ್ಲಿ ಹೆಚ್ಚು ವಿಶದವಾಗಿ ತಿಳಿಸಿದ್ದಾನೆ.
Yogānandā योगानन्दा (656)
೬೫೬. ಯೋಗಾನಂದಾ
ದೇವಿಯು ಯೋಗದ ಮೂಲಕ ಹೊಂದಬಹುದಾದ ಆನಂದದ ರೂಪದಲ್ಲಿದ್ದಾಳೆ. ದೇವಿಯು ಶಿವನನ್ನು ಸೇರಿಕೊಂಡಾಗ ಆನಂದವನ್ನು ಹೊಂದುತ್ತಾಳೆ. ನಾವು ದೇವಿಯನ್ನು ಹೊಂದಿದಾಗ ಆನಂದವನ್ನು ಪಡೆಯುತ್ತೇವೆ. ಎಲ್ಲಿಯವರೆಗೆ ನಾವು ಆನಂದದ ಸ್ಥಿತಿಯನ್ನು ಹೊಂದುವುದಿಲ್ಲವೋ ಅಲ್ಲಿಯವರೆಗೆ ಎರಡು ಭಿನ್ನ ವಸ್ತುಗಳ ಅವಶ್ಯಕತೆಯಿರುತ್ತದೆ ಮತ್ತು ಯಾವಾಗ ಒಬ್ಬನು ಈ ಪರಮಾನಂದವನ್ನು ಅಧಿಗಮಿಸುತ್ತಾನೆಯೋ, ಆಗ ಕೇವಲ ಒಂದೇ ಒಂದು ವಸ್ತುವಿರುತ್ತದೆ ಅಲ್ಲಿ ಎರಡನೆಯದೆನ್ನುವುದು ಇರುವುದಿಲ್ಲ. ಗಾಢನಿದ್ರಾವಸ್ಥೆಯು ಆನಂದಕ್ಕೆ ಸೂಕ್ತವಾದ ಉದಾಹರಣೆ ಎಂದು ಹೇಳಲಾಗುತ್ತದೆ; ಏಕೆಂದರೆ ಈ ಅವಸ್ಥೆಯಲ್ಲಿ ಒಬ್ಬನು ಪ್ರಪಂಚದಿಂದ ಸಂಪೂರ್ಣವಾಗಿ ಬೇರ್ಪಡಿಸಲ್ಪಟ್ಟಿರುತ್ತಾನೆ. ಅಂತರಂಗದಲ್ಲಿ ಕೇವಲ ಮನಸ್ಸೊಂದೇ ಕಾರ್ಯನಿರತವಾಗಿರುವುದಿಲ್ಲ ಆದರೆ ಇತರೇ ಎಲ್ಲಾ ಜೈವಿಕ ಅಂಗಗಳು ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತವೆ. ಈ ಹಂತವನ್ನು ಯೋಗ+ಆನಂದಾ= ಯೋಗಾನಂದಾ, ಎಂದು ಕರೆಯುತ್ತಾರೆ. ವಿಷ್ಣುವಿನ ನಾರಸಿಂಹ ಅವತಾರವನ್ನು ಸಹ ಯೋಗಾನಂದವೆಂದು ಕರೆಯುತ್ತಾರೆ.
ಯೋಗಾನಂದಾ ಎನ್ನುವುದು ಅಯೋಗ+ನಂದ ಇವುಗಳ ಸಂಯುಕ್ತ ರೂಪವಾಗಿದೆ. ಅಯೋಗವೆಂದರೆ ಯಾವುದೇ ವಿಧವಾದ ಬಂಧನಗಳಿಲ್ಲದಿರುವುದು (ಮೋಹಪಾಶಗಳಿಲ್ಲದಿರುವುದು). ಬೃಹದಾರಣ್ಯಕ ಉಪನಿಷತ್ತು (೩.೯.೨೬) ಹೀಗೆ ಹೇಳುತ್ತದೆ, "ಅದು ಗ್ರಹಿಕೆಗೆ/ಕಲ್ಪನೆಗೆ ನಿಲುಕದ್ದು, ಏಕೆಂದರೆ ಅದನ್ನು ಗ್ರಹಿಸಲಾಗದು. ಅದು ಅವಿನಾಶಿ, ಏಕೆಂದರೆ ಅದು ಎಂದಿಗೂ ಕೊಳೆಯುವುದಿಲ್ಲ. ಅದು ಸ್ವತಂತ್ರವಾದದ್ದು ಏಕೆಂದರೆ ಅದು ಯಾವುದೇ ವಿಧವಾದ ಬಂಧನಕ್ಕೆ ಸಿಲುಕಿಕೊಳ್ಳುವುದಿಲ್ಲ". ನಂದಾ ಎನ್ನುವುದು ಗಂಗಾ ನದಿಯನ್ನು ಸೂಚಿಸುತ್ತದೆ. ನಂದಾ ಎಂದರೆ ದೇವಿಯು ನಂದಗೋಪನಿಗೆ ಜನಿಸಿದವಳೆಂದು (ಶ್ರೀಮದ್ ಭಾಗವತ) ಸಹ ಸೂಚಿಸುತ್ತದೆ. ಸರಸ್ವತೀ ನದಿಯು ಹಿಮಾಲಯದ ತಪ್ಪಲಿನಲ್ಲಿ ಇದೆ ಅದನ್ನೂ ಸಹ ನಂದಾ ಎಂದು ಕರೆಯಲಾಗುತ್ತದೆ. ನಂದಾ ಎನ್ನುವುದು ಕೆಲವು ಚಾಂದ್ರಮಾನದ ತಿಥಿಗಳನ್ನು ಸಹ ಸೂಚಿಸುತ್ತದೆ. ನಂದ ಎಂದರೆ ಸಂತೋಷ ಎನ್ನುವ ಅರ್ಥವೂ ಇದೆ. ಆಗ ಈ ನಾಮದ ಒಟ್ಟಾರೆ ಅರ್ಥವು ದೇವಿಯು ನಿರಂತವಾರ ಆನಂದದ ಸ್ಥಿತಿಯಲ್ಲಿ ಯಾವುದೇ ಮೋಹಬಂಧನಗಳಿಲ್ಲದೇ ಇರುತ್ತಾಳೆಂದು ಸೂಚಿಸುತ್ತದೆ. ಈ ನಾಮವು ಒಬ್ಬನು ಪ್ರಾಪಂಚಿಕ ವಸ್ತುಗಳಿಗೆ ಅಂಟಿಕೊಳ್ಳದೇ ಇದ್ದರೆ ಅವನು ಪರಮಾನಂದದ ಸ್ಥಿತಿಯಲ್ಲಿ ಇರುತ್ತಾನೆನ್ನುವ ಅರ್ಥವನ್ನೂ ಕೊಡುತ್ತದೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 651-656 http://www.manblunder.com/2010/03/lalitha-sahasranamam-651-656.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೫೦. ಲಲಿತಾ ಸಹಸ್ರನಾಮ ೬೫೧ರಿಂದ ೬೫೫ನೇ ನಾಮಗಳ ವಿವರಣೆ
ಶ್ರೀಧರರೆ, "೧೫೦. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೬೫೧ - ೬೫೬
_____________________________
.
೬೫೧. ವಿಜ್ಞಾತ್ರೀ
ಬ್ರಹ್ಮದ ಲಕ್ಷಣವೆ ಸರ್ವಜ್ಞ, ಸಕಲ ತಿಳುವಳಿಕೆ ಜ್ಞಾನ
ವಿಜ್ಞಾತೃವಾಗಿಹಳು ಲಲಿತಾ, ಎಲ್ಲಾ ಬಲ್ಲ ಬ್ರಹ್ಮ ಘನ
ಅರಿವಾಗಿಸುವವನರಿಯಲಾರಿಂದ ಎರಡೊಂದಾಗಿ ಸತ್ಯ
ಪರಿಪೂರ್ಣಸ್ವರೂಪೀದೇವಿ ಜ್ಞಾನದ ಮೂರ್ತರೂಪ ನಿತ್ಯ ||
.
೬೫೨. ವೇದವರ್ಜಿತಾ
ಜನ್ಮವಿತ್ತವಳು ವೇದಕೆ, ತಾನೇ ವೇದವಾದವಳು ಲಲಿತಾ
ತಿಳಿಸಿದವಳವಳು ತಿಳಿಯಲೇನಿದೆ, ದೇವಿ ವೇದವರ್ಜಿತಾ
ಜ್ಞಾನ ಪರಿಪೂರ್ಣತೆ ಬ್ರಹ್ಮ ಲಕ್ಷಣ, ಸರ್ವಜ್ಞಳಾಗಿಹ ದೇವಿ
ಅದ್ವಿತೀಯತೆಯೊಡಗೂಡಿ ಸ್ವಯಂಭು ಕಾಂತಿ ಪುಂಜ ಛವಿ ||
.
೬೫೩. ಯೋಗಿನೀ
ಅತ್ಮ ಪರಮಾತ್ಮ ಸಂಯೋಗವೆ ಯೋಗ, ಶಿವಶಕ್ತಿಯರ ತರಹ
ಯೋಗಮುಖೇನ ಮುಕ್ತಿಗೆ, ದೇಹ-ಮನಸು-ಆತ್ಮದ ಸಾಮರಸ್ಯ
ಶ್ರೀ ಚಕ್ರ ನವಾವರಣ ನಿವಸಿತ ಯೋಗಿನೀ, ಸಪ್ತಚಕ್ರ ಹತೋಟಿ
ತಿಥಿ-ವಾರ-ನಕ್ಷತ್ರ-ಯೋಗ-ಕರಣದ ಪಂಚಾಂಗದಲಿಹ ಸಂಗತಿ ||
.
೬೫೪. ಯೋಗದಾ
ಕೇಳದೆಯೂ ಕೊಡುವಳು ದಾತೆ, ಭಕ್ತರಿಗೆ ಪ್ರಸಾದಿಸುತೆ
ಮುಕ್ತಿ-ಮೋಕ್ಷದ ಮಾರ್ಗಕೆ, ಯೋಗವಾ ಅನುಗ್ರಹಿಸುತೆ
ಆತ್ಮ ಪರಮಾತ್ವದ ಅದ್ವೈತಕೆ, ಹಂಬಲಿಸುವಂತೆ ಸಮೃದ್ಧ
ಕರುಣೆಯೊಡನೆ ಅಗಣಿತ ಕೃಪೆ, ನೀಡಿ ಲಲಿತೆ ಯೋಗದಾ ||
.
೬೫೫. ಯೋಗ್ಯಾ
ಭೋಕ್ತೃವೆ ಯೋಗಿನೀ, ಭೋಗವಸ್ತು ಭೋಗ್ಯಾ ತಾನಾಗಿ ಯೋಗ್ಯಾ
ಭೋಗವೊದಗಿಸೊ ಭೋಗದಾಯಿ ಯೋಗ್ಯದಾ, ಎಲ್ಲ ಬ್ರಹ್ಮಮಯ
ಸ್ವಯಂ ದೇವಿಯೆ ಯೋಗ, ಕರುಣಿಸುತ ಯೋಗ ದೇವಿ ಯೋಗ್ಯಾ
ದುಃಖಕೆ ಕುಗ್ಗದ ಸ್ವತಂತ್ರ ಸ್ಥಿತಿ, ಚಿತ್ತವೃತ್ತಿ ನಿರೋಧ ಪ್ರವೃತ್ತಿ ಭಾಗ್ಯ ||
.
೬೫೬. ಯೋಗಾನಂದಾ
ದೇವಿ ಸೇರಿ ಶಿವ ಸಾನಿಧ್ಯ, ಹೊಂದುವಾ ಐಕ್ಯತೆ ಅದ್ವೈತಾನಂದ
ಯೋಗರೂಪಿಣಿ ಲಲಿತಾಮುಖೇನ, ಅಧಿಗಮಿಸೆ ಪರಮಾನಂದ
ಒಂದೇ ವಸ್ತು ಎರಡಿಲ್ಲದ ಪ್ರಪಂಚ, ಗಾಢ ನಿದ್ರಾವಸ್ಥೆ ಏಕಾನಂದ
ಸರ್ವಾಂಗ-ಮನಕಾರ್ಯಸತತ, ದಿವ್ಯಾನುಭೂತಿ ಯೋಗಾನಂದ ||
.
ಮೋಹಪಾಶಬಂಧನರಾಹಿತ್ಯ ಅಯೋಗ, ಗ್ರಹಣಾತೀತ ಅವಿನಾಶಿ
ಗಂಗೆಯೇ ನಂದಾ, ನಂದಗೋಪನು ಸಂಬಂಧ, ಸರಸ್ವತೀ ಹಿಮರಾಶಿ
ಚಂದ್ರಮಾನತಿಥಿ ಸಂತೋಷ ಸೂಚಕ, ದೇವಿ ನಿರಂತರ ಆನಂದಸ್ಥಿತಿ
ಅಯೋಗ-ನಂದವೆ ಯೋಗಾನಂದ, ನೀರ್ಗುಳ್ಳೆ ಪರಮಾನಂದಪೂರ್ತಿ ||
.
.
ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು