ಅವರೇ ನನ್ನ ದೇವರು
ನನ್ನ ಮನೆಯು ನನಗೆ ಗುಡಿಯು
ನಾನು ಅದರ ಭಕ್ತನು
ಮನೆಯ ತುಂಬ ಹಿರಿಯರಿಹರು
ಅವರೇ ನನ್ನ ದೇವರು
ಕೂಸುಮರಿಯು ಆಗಿ ನಾನು ಕುಳಿತು ಬಿಡುವೆನು
ಹೊತ್ತುಕೊಂಡ ನನ್ನ ಅಜ್ಜ ದಣಿದು ಬಿಡುವನು
ನೋವ ಮರೆತು ನನ್ನ ನಗಿಸಿ ತಾನು ನಗುವನು
ಹಿರಿಯನವನು, ಆದ್ದರಿಂದ ಅವನೇ ನನ್ನ ದೇವರು
ಕಥೆಯ ಕೇಳಲೆಂದು ನಾನು ಮಾಡಿಬಿಡುವೆ ಅವಸರ
ಬಿಟ್ಟುಬಿಡದೇ ಹೇಳುವಲ್ಲಿ ಅಜ್ಜಿಗಿಷ್ಟು ಬೇಸರ
ನಿದ್ದೆಮಂಪರಲ್ಲಿ ಮರೆತು ಬಿಡುವಳದರ ಹೆಸರ
ಹಿರಿಯಳವಳು, ಆದ್ದರಿಂದ ಅವಳೇ ನನ್ನ ದೇವರು
ದೂರವಿರುವ ಪುಟ್ಟ ಶಾಲೆಯಲ್ಲಿ ನನ್ನ ಕಲಿಕೆಯು
ದಿನವೂ ಎತ್ತಿಕೊಂಡು ಬರುವ ಅಣ್ಣನೊಡನೆ ಚರ್ಚೆಯು
ಬೆವರ ಸುರಿವ ಅವನ ಮೊಗದ ನಗುವೆ ಎನಗೆ ರಕ್ಷೆಯು
ಹಿರಿಯನವನು, ಆದ್ದರಿಂದ ಅವನೇ ನನ್ನ ದೇವರು
ಪಾಟಿ ಮೇಲೆ ದಿನವೂ ನಾನು ಅ,ಆ,ಇ,ಈ ಬರೆವೆನು
ತಪ್ಪುಗಳನು ತಿದ್ದಿ ತೀಡಿ ಅಪ್ಪ ಬುದ್ಧಿ ಹೇಳ್ವನು
ಅವನು ಕೊಟ್ಟ ಲೆಕ್ಕ ಮಾಡಿ ಆಗಿಬಿಡುವೆ ಜಾಣನು
ಹಿರಿಯನವನು, ಆದ್ದರಿಂದ ಅವನೇ ನನ್ನ ದೇವರು
ರುಚಿಯು ಶುಚಿಯು ನನ್ನ ಅಮ್ಮ ಮಾಡಿದಡಿಗೆ ಊಟವು
ನನ್ನ ಕೋಪ,ತಾಪಕೆಲ್ಲಾ ಸಿಟ್ಟೇ ಇರದ ನೋಟವು
ನೋವಿನಲ್ಲೂ ನಲಿವಿನಲ್ಲೂ ದಿನವು ನಮ್ಮ ಆಟವು
ಹಿರಿಯಳವಳು, ಆದ್ದರಿಂದ ಅವಳೇ ನನ್ನ ದೇವರು
ನನ್ನ ಮನೆಯು ನನಗೆ ಗುಡಿಯು
ನಾನು ಅದರ ಭಕ್ತನು
ಮನೆಯ ತುಂಬ ಹಿರಿಯರಿಹರು
ಅವರೇ ನನ್ನ ದೇವರು
Comments
ಉ: ಅವರೇ ನನ್ನ ದೇವರು
ಇದೊಂದು ಶಿಶುಕಾವ್ಯ. ಶಿಶುಕಾವ್ಯ ರಚನೆಯಲ್ಲಿ ನಾನೂ ಪುಟ್ಟ ಶಿಶು.ಭಾವಗೀತೆ ಹಾಡುವ ಉತ್ಸಾಹಿಗಳು ಸಂಗೀತದೊಂದಿಗೆ ಪ್ರಯತ್ನಿಸಬಹುದು ಎಂದು ಕೋರಿಕೆ.
In reply to ಉ: ಅವರೇ ನನ್ನ ದೇವರು by Shashikant P Desai
ಉ: ಅವರೇ ನನ್ನ ದೇವರು
ಕವನ ಚೆನ್ನಾಗಿದೆ ದೇಸಾಯಿಯವರೆ.
-"..ಭಾವಗೀತೆ ಹಾಡುವ ಉತ್ಸಾಹಿಗಳು ಸಂಗೀತದೊಂದಿಗೆ ಪ್ರಯತ್ನಿಸಬಹುದು ಎಂದು ಕೋರಿಕೆ. "
-ನೀವೇ ಯಾಕೆ ಪ್ರಯತ್ನಿಸಬಾರದು? ಸಂಪದದ ಅನೇಕ ಕವಿಗಳು ಹಾಡಿ ಕೊಂಡಿ ಕೊಟ್ಟಿದ್ದಾರೆ. ಅವರಲ್ಲಿ ಒಬ್ಬ ಕವಿ ಕೃಷ್ಣಪ್ರಕಾಶರ ಕವಿತೆ ಇಲ್ಲಿ ಕೇಳಿ- http://v7b.sampada.net/blog/%E0%B2%B9%E0%B2%B3%E0%B3%86%E0%B2%AF-%E0%B2%...
ಉ: ಅವರೇ ನನ್ನ ದೇವರು
ಶ್ರೀಯುತರಾದ ಗುಣಶೇಖರ ಹಾಗೂ ಗಣೇಶ ಅವರುಗಳಿಗೆ ತಾತ್ವಿಕ ಮತ್ತು ಸಾತ್ವಿಕ ವಿಮರ್ಶೆಗೆ ತುಂಬು ಹೃದಯದ ಧನ್ಯವಾದಗಳು.