DLI ಪುಸ್ತಕನಿಧಿ: ಇಂಗ್ಲಂಡದ ರಾಜಕೀಯ ಬೆಳವಣಿಗೆಗಳು
ನಿನ್ನೆ ನಾನು ಕಛೇರಿಗೆ ಹೋಗುವಾಗ ಇಂಗ್ಲಂಡದ ರಾಜಕೀಯ ಬೆಳವಣಿಗೆಗಳು ಎ0ಬ ಪುಸ್ತಕವನ್ನು ಓದಿಮುಗಿಸಿದೆ. ( ಇದು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಿಂದ ಇಳಿಸಿಕೊಂಡ ಪುಸ್ತಕ)ಇದು ಮೈಸೂರು ವಿಶ್ವವಿದ್ಯಾಲಯವು 1940 ರಲ್ಲಿ ಪ್ರಕಟಮಾಡಿದ 80 ಪುಟಗಳ ಪುಸ್ತಕ. ( ೧೯೪೦ ರಲ್ಲಿ ನಾವು ಸ್ವತಂತ್ರರಾಗಿರಲಿಲ್ಲ , ಮೊದಲಮಹಾಯುದ್ಧ ಮುಗಿದು ಎರಡನೆಯ ಮಹಾಯುದ್ಧದ ಹೊಸ್ತಿಲಲ್ಲಿ ಜಗತ್ತು ಇತ್ತು ). ಇದನ್ನು ಓದಿ ನನಗೆ ಇಂಗ್ಲಂಡಿನ ಇತಿಹಾಸವೂ (ಇದು ಶುರುವಾಗೋದು ಬರೀ ೧೫೦೦ ವರ್ಷದ ಹಿಂದೆ . ನಮ್ಮ ದೇಶದಲ್ಲಿ ಅಷ್ಟು ಹೊತ್ತಿಗೆ ಏನೇನೆಲ್ಲ ಆಗಿ ಹೋಗಿತ್ತು!) ಅಲ್ಲಿ ಪ್ರಜಾಸತ್ತೆ ಬೆಳೆದು ಬಂದ ಬಗೆಯೂ ಜಾಗತಿಕ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದ ಮಹತ್ವವೂ , ನಮ್ಮ ಈಗಿನ ಪ್ರಜಾಸತ್ತೆಯ ಕೆಲವು ಸಮಸ್ಯೆಗಳೂ ಕೆಲವು ಸೂಕ್ಷ್ಮ ಸಂಗತಿಗಳೂ ತಿಳಿದುಬಂದವು.ಮುನ್ನುಡಿಯಲ್ಲಿ - "ಮುಂದುವರಿದ ಜನಾಂಗಗಳ ಚರಿತ್ರೆಯನ್ನು ಓದುವುದೇ ಒಂದು ಬಗೆಯ ರಾಜಕೀಯ ಶಿಕ್ಷಣ, ವಿಚಕ್ಷಣೆಯಿಂದಲೂ ವ್ಯವಸ್ಥಿತ ಪ್ರಯತ್ನದಿಂದಲೂ ಒಂದು ದೇಶವು ಹೇಗೆ ಏಳಿಗೆಗೆ ಬರಬಹುದು ಎಂಬುದಕ್ಕೆ ಇಂಗ್ಲಂಡದ ಚರಿತ್ರೆಯು ಒಂದು ಉತ್ತಮ ಉದಾಹರಣೆ ಆಗಿದೆ. ಸ್ತಿಮಿತ (ಸ್ಥಿರತೆ) ಹೊಂದಿದ ಪ್ರಗತಿಯನ್ನು ಸಾಧಿಸುವುದರಲ್ಲಿ ಆಂಗ್ಲೇಯರು ಅಗ್ರಗಣ್ಯರು . ಅಮೂಲ್ಯವಾದ ನಮ ಪೂರ್ವಿಕ ಸಂಸ್ಕೃತಿಯನ್ನು ಉಳಿಸಿಕೊಂಡು ಸ್ವಾತಂತ್ರ್ಯವನ್ನೂ ಅಭ್ಯುದಯವನ್ನೂ ಸಾಧಿಸಬೇಕಾದ ನಮಗೆ ಅವರು ಆದರ್ಶಪ್ರಾಯರಾಗಿದ್ದಾರೆ . ....೧೫೦೦ ವರ್ಶಗಳ ಹಿಂದೆ ಆಂಗ್ಲೇಯರಾಗಲೀ ಇಂಗ್ಲೆಂಡೆಂಬ ಹೆಸರಾಗಲೀ ಇರಲಿಲ್ಲ. ಇಂದು ಅವರು ಪ್ರಪಂಚದ ಜನಾಂಗಗಳಲ್ಲಿ ಅತಿಶಯವಾದ ಮನ್ನಣೆಯನ್ನು ಪಡೆದಿದ್ದಾರೆ...ಕ್ರಮಕ್ರಮವಾಗಿ ಶಿಸ್ತಿನಿಂದ ಬೆಳೆದ ವ್ಯವಸ್ಥಿತವಾದ ಆಡಳಿತ ಪದ್ಧತಿಯು ಅವರ ಜೀವನದಲ್ಲಿ ಬೇರೂರಿದೆ. ವಿಸ್ತೀರ್ಣದಲ್ಲಿ ಅವರ ದೇಶವು ನಮ್ಮ ಮೈಸೂರು ಸಂಸ್ಥಾನದ ಒಂದೂ ಮುಕ್ಕಾಲರಷ್ಟು ಮಾತ್ರ ಇದ್ದರೂ ಅವರ ಆಡಳಿತ ವ್ಯಾಪ್ತಿ ಭೂಮಂಡಲದ ನಾಲನೆಯ ಒಂದು ಭಾಗ ಅವರ ಹಿಡಿತದಲ್ಲಿದೆ. ಈ ಪ್ರಬಲಜನಾಂಗದ ಬೆಳವಣಿಗೆಯ ಇತಿಹಾಸವನ್ನು ಪರಿಶೀಲಿಸುವುದರಿಂದ ರಾಜ್ಯ ಶಾಸ್ತ್ರದ ಅರಿವು ಚುರುಕಾಗುವುದರಲ್ಲಿ ಸಂದೇಹವಿಲ್ಲ " ಎಂದು ಇದೆ.
ಕ್ರಿಸ್ತಶಕದ ಮೊದಲ ನಾಲ್ಕು ಶತಮಾನಗಳಲ್ಲಿ ಬ್ರಿಟನ್ನು ರೋಂ ಸಾಮ್ರಾಜ್ಯದ ಭಾಗವಾಗಿತ್ತು. ರೋಮನ್ನರು ಅಲ್ಲಿಂದ ಹೋಗಬೇಕಾದಾಗ ಬ್ರಿಟಿಶರಿಗೆ ನಾಗರಿಕ ಜನರ ಸಂಪರ್ಕ ತಪ್ಪಿತು. ( !!)
ಏಳನೆಯ ಶತಮಾನದಲ್ಲಿ ಕ್ರೈಸ್ತಮತವು ಅಲ್ಲಿ ಹರಡಿತು.
ಆಗ ಅಲ್ಲಿ ನಾಲ್ಕಾರು ರಾಜ್ಯಗಳಿದ್ದವು . ರಾಜರು ತಮ್ಮ ತಮ್ಮಲ್ಲಿ ಕಾದಾಡುತ್ತಿದ್ದರು.
ಒಂಬತ್ತನೆಯ ಶತಮಾನದಲ್ಲಿ ಆಲ್ಫ್ರೆಡ್ ಎಂಬುವನು ಡೇನರಿಂದ ಆಂಗ್ಲೇಯರನ್ನು ಕಾಪಾಡಿ ಇಡೀ ಇಂಗ್ಲಂಡಿಗೆ ರಾಜನೆಂದೆನಿಸಿಕೊಂಡನು, ( ನಮ್ಮ ಬಾದಾಮಿಯ ಪುಲಿಕೇಶಿಯು ಏಳನೆಯ ಶತಮಾನದಲ್ಲಿ ದಕ್ಷಿಣಾಪಥೇಶ್ವರ - ಇಡೀ ದಕ್ಷಿಣ ಭಾರತದ ಒಡೆಯ- ಎನಿಸಿಕೊಂಡಿದ್ದನು!)
ಮುಂದಿನ ಶತಮಾನದಲ್ಲಿ ಅಶಕ್ತರೂ ಅವಿವೇಕಿಗಳೂ ರಾಜಪದವಿಗೆ ಬಂದರು. ಒಳಕಲಹಗಳು ತಲೆದೋರಿ ಡೇನರು ಇಂಗ್ಲಂಡನ್ನು ಗೆಲ್ಲಲು ಅವಕಾಶವಾಯಿತು. ಕೆನ್ಯೂಟ್ ಎಂಬ ಡೇನಿಶ್ ರಾಜನು - ಅವನು ವಿದೇಶೀಯನಾಗಿದ್ದರೂ - ( ಆಗ ರಾಷ್ಟ್ರೀಯತೆಯ ಕಲ್ಪನೆಯೇ ಇರಲಿಲ್ಲವಲ್ಲ ?) ಆಂಗ್ಲೇಯರ ಹಿತಚಿಂತಕನಾಗಿ ವರ್ತಿಸಿದನು.
ಇಂಡಿಯಾ ದೇಶವು ಪದೇಪದೇ ಪರದೇಶದವರ ಅಧೀನಕ್ಕೆ ಒಳಪಟ್ಟಂತೆಯೇ ಬ್ರಿಟನ್ ಕೂಡ ಒಂದು ಸಾವಿರ ವರ್ಷಗಳ ಕಾಲದಲ್ಲಿ ರೋಮನ್ನರು, ಆಂಗ್ಲೇಯರು ( ಜರ್ಮನಿಯಿಂದ ಬಂದವರು ಎಂಬ ಅರ್ಥದಲ್ಲಿ ! -ಅದೇಕೋ ಅವರಿಗೆ ಆಂಗ್ಲೇಯರು ಅಂದರಲ್ಲ? ಆಂಗ್ಲರು ಅಂದರೆ ಇಂಗ್ಲೀಷರು ಅಂತ ತಿಳಿದಿದ್ದೆವಲ್ಲ? ) ,ಡೇನರು , ನಾರ್ಮನ್ನರು ಎಂಬ ನಾಲ್ಕು ಬಗೆಯ ಪರದೇಶೀಯರ ಆಕ್ರಮಣಕ್ಕೆ ತುತ್ತಾಯಿತು.
ಜರ್ಮನಿಯಿಂದ ಬಂದ ಆಂಗ್ಲೇಯರು ಸ್ವಾತಂತ್ರ್ಯಪ್ರೇಮಿಗಳು. ಸಾರ್ವಜನಿಕ ಕಾರ್ಯಗಳಲ್ಲಿ ಭಾಗವಹಿಸುವುದು ಪ್ರತಿಯೊಬ್ಬ ಪ್ರಜೆಯ ಆಜನ್ಮ ಸಿದ್ಧ ಹಕ್ಕು ಮಾತ್ರವಲ್ಲದೆ ಬಾಧ್ಯತೆಯೂ (ಕರ್ತವ್ಯವೂ) ಹೌದೆಂದು ಅವರು ಭಾವಿಸಿದ್ದರು. ಪ್ರತಿಯೊಂದು ಗ್ರಾಮದಲ್ಲೂ ಸ್ವತಂತ್ರರಾದ ಗ್ರಾಮಸ್ಥರ ಸಮಿತಿ ಕಾಲಕಾಲಕ್ಕೆ ಸಭೆಸೇರಿ ಸಾರ್ವಜನಿಕ ಕೆಲಸಗಳ್ನ್ನು ನಿರ್ವಹಿಸುತ್ತಿತ್ತು ( ೨೫೦೦ ವರ್ಷಗಳ ಹಿಂದೆ ಭಾರತ ದೇಶದಲ್ಲಿ ಗ್ರಾಮಗಳು ಸ್ಥಳೀಯ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದವೆಂಬ ಬಗ್ಗೆ ಅಡಿಟಿಪ್ಪಣಿಯೂ ಉಲ್ಲೇಖಗಳೂ ಇಲ್ಲಿವೆ) ಹಲವುಗ್ರಾಮಗಳನ್ನೊಳಗೊಂಡ ಹನ್ಡ್ರೆಡ್ ಗಳೆಂಬ ಭಾಗಗಳು ಆಗ ಇಂಗ್ಲೆಂಡಿನಲ್ಲಿದ್ದವು .( ನಮ್ಮ ಕನ್ನಡನಾಡಿನಲ್ಲೂ ಈ ತರಹವೇ ನೂರರ ಹೆಸರಿನ ಪ್ರದೇಶಗಳು ಇದ್ದವಲ್ಲವೇ ? )
ಕೇಂದ್ರ ಆಡಳಿತವನ್ನು ರಾಜನೇ ವಹಿಸಿದ್ದನು. ರಾಜನ ಸಹಾಯಕ್ಕಾಗಿ ಹಿರಿಯರ ಸಭೆ ಇತ್ತು. ಇದರಲ್ಲಿ ರಾಜಕುಟುಂಬದವರೂ ಮಠಾಧಿಪತಿಗಳೂ ( ಅಂದರೆ ಚರ್ಚಿನವರುರೀ!- ನಮ್ಮ ಮಠಾಧಿಪತಿಗಳಲ್ಲ !!), ಮುಖ್ಯ ಶ್ರೀಮಂತರೂ , ಕೆಲವು ಉದ್ಯೋಗಸ್ಥರೂ ಇದರಲ್ಲಿದ್ದರು. ( ಇದೇ ಈಗಿನ ಹೌಸ್ ಆಫ್ ಲಾರ್ಡ್ಸ್ / ನಮ್ಮ ರಾಜ್ಯ ಸಭೆಯ ಮೂಲ). ಮೊದಮೊದಲು ಈ ಸಭೆಯೇ ರಾಜನನ್ನು ಚುನಾಯಿಸುತ್ತಿತ್ತು ( ಈಗಿನ ನಮ್ಮ ಸಂಸತ್ತಿನ ಹಾಗೆ)
ಆಮೇಲೆ ನಾರ್ಮನ್ನರು ದಕ್ಷತೆ , ಸ್ಥಿರತೆಯನ್ನು ಒದಗಿಸಿದರು , ವಿಲ್ಯಂ ಮುಂತಾದ ಒಳ್ಳೆಯ ರಾಜರು ಬಂದರು. ಹಾಗೇ ದುಷ್ಟ ರಾಜರೂ ಕೂಡ . ಸರದಾರರೂ ಮಠಾಧಿಪತಿಗಳೂ ಒಂದಾಗಿ ಜನರ ಪರವಾಗಿ ಜಾನ್ ಎಂಬ ಮಹಾದುಷ್ಟ ರಾಜನನ್ನು ಎದುರಿಸಿ ೧೨೧೫ ರಲ್ಲಿ ಒಂದು ಮಹಾಸ್ವಾತಂತ್ರ್ಯಪತ್ರಕ್ಕೆ ( ಇದೇ ಮ್ಯಾಗ್ನಾಕಾರ್ಟಾ ) ರುಜು ಹಾಕಿಸಿದರು. ಇದರಲ್ಲಿ ಅನೇಕ ಶರತ್ತುಗಳು ಇದ್ದವು. ಇದರಲ್ಲಿ ಎರಡು ನಿಯಮಗಳು ಆಂಗ್ಲೇಯರ ವ್ಯಕ್ತಿ ಸ್ವಾತಂತ್ರ್ಯಕ್ಕೆ ಮೂಲಾಧಾರವೆಂದು ಹೇಳಬಹುದು. ೧. ದೇಶದ ಕಾನೂನುಗಳಿಗೆ ಅನುಸಾರವಾಗಿ ವಿಚಾರಣೆ ನಡೆಸದೆ ಯಾರನ್ನೂ ಕೈದು ಮಾಡಬಾರದು, ದೇಶಭ್ರಷ್ಟರನ್ನಾಗಿ ಮಾಡಬಾರದು, ಮತ್ತು ಮಿಕ್ಕ ಯಾವ ರೀತಿಯಲ್ಲೂ ಹಿಂಸಿಸಬಾರದು. ೨.ರಾಜನು ಹಕ್ಕುಗಳನ್ನಾಗಲೀ ನ್ಯಾಯವನ್ನಾಗಲೀ ಯಾರಿಗೂ ವಿಕ್ರಯಮಾಡಬಾರದು; ಯಾರಿಗೂ ಅವನ್ನು ಇಲ್ಲವೆನ್ನಕೂಡದು ; ಅವುಗಳನ್ನು ದೊರಕಿಸಲು ತಡಮಾಡಲೀ ಕೂಡದು.
ಈ ಶರತ್ತುಗಳಿಗನುಸಾರವಾಗಿ ರಾಜನು ನಡೆಯದೇ ಹೋದಲ್ಲಿ ನಿರ್ದಿಷ್ಟರಾದ ೨೫ ಜನ ಸರದಾರರು ಅವನ ಮೇಲೆ ಯುದ್ಧಮಾಡಬಹುದೆಂಬ ಅಂಶವನ್ನು ಈ ಪತ್ರದಲ್ಲಿಯೇ ಕಾಣಿಸಿದ್ದರು.
ಆದರೆ ಜಾನನು ಕೆಲವು ತಿಂಗಳುಗಳಲ್ಲಿಯೇ ಈ ಒಪ್ಪಂದವನ್ನು ಉಲ್ಲಂಘಿಸಿದನು. ಆದರೆ ಕೆಲವು ತಿಂಗಳುಗಳಲ್ಲಿಯೇ ಆಂಗ್ಲೇಯರ ಭಾಗ್ಯವಿಶೇಷದಿಂದ ಜಾನನು ಮೃತನಾದನು. (!) ಇವನ ಜೀವಮಾನದಲ್ಲೆಲ್ಲ ಇವನು ಮಾಡಿದ ಕೆಲಸಗಳಲ್ಲಿ ಒಳ್ಳೆಯದು ಇದು ಒಂದೇ.(!!)
ಆ ಹೊತ್ತಿಗೆ ರಾಜ್ಯಾಡಳಿತವನ್ನು ರಾಜನೇ ನಿರ್ವಹಿಸುತ್ತಿದ್ದನು , ಕಾನೂನುಗಳನ್ನು ರಾಜನೂ ಕೆಲವು ಶ್ರೀಮಂತರೂ ಸೇರಿ ವಿಧಿಸುತ್ತಿದ್ದರು. ರಾಜ್ಯಭಾರದಲ್ಲಿ ಪ್ರಜೆಗಳು ಭಾಗಿಯಾಗಿರಲಿಲ್ಲ. ಪ್ರಜೆಗಳು ಆಡಳಿತದಲ್ಲಿ ಭಾಗವಹಿಸುವಂತೆ ಅವಕಾಶವನ್ನು ನಂತರದ ರಾಜ ಎಡ್ವರ್ಡನು ಮಾಡಿದನು. ನಂತರ ಪಾರ್ಲಿಮೆಂಟ್ ಏರ್ಪಟ್ಟಿತು. ಹಿಂದೆ ರಾಜನು ಅಧಿಕಾರಿಗಳನ್ನು ರಾಜ್ಯದ ನಾನಾ ಭಾಗಗಳಿಗೆ ಕಳಿಸುತ್ತಿದ್ದರೆ , ಈಗ ಪ್ರಜೆಗಳ ಪ್ರತಿನಿಧಿಗಳು ರಾಜ್ಯದ ನಾನಾ ಭಾಗಗಳಿಂದ ಬಂದು ಸಭೆ ಸೇರತೊಡಗಿದರು. 'ಸರ್ವರಿಗೂ ಸಂಬಂಧಪಟ್ಟ ವ್ಷಯಗಳನ್ನು ಸರ್ವರೂ ಅನುಮೋದಿಸಬೇಕು' ಎಂಬ ತತ್ವವನ್ನು ಎಡ್ವರ್ಡನು ಜಾರಿಗೆ ತಂದನು.
ನಂತರ ಪಾರ್ಲಿಮೆಂಟು ಎರಡು ಭಾಗವಾಗಿ ಏರ್ಪಟ್ಟಿತು. ಹೌಸ್ ಆಫ್ ಲಾರ್ಡ್ಸ್ - ಶ್ರೀಮಂತರು, ಮಠಾಧಿಪತಿಗಳ ಸಭೆಯಾದರೆ ಹೌಸ್ ಆಫ್ ಕಾಮನ್ಸ್ ಗೆ ಚುನಾಯಿತ ಪ್ರತಿನಿಧಿಗಳು ಸದಸ್ಯರಾದರು. ಅದು ಹದಿನಾಲ್ಕನೇ ಶತಮಾನ.
( ಇನ್ನೂ ಇದೆ.... ಈ ವರೆಗೆ ನೀವು ಓದಿದ್ದರೆ ತಿಳಿಸಿ . ನಿಮಗೆ ಬೇಕೆನಿಸಿದರೆ ಮುಂದಿನ ಭಾಗವನ್ನು ಇಲ್ಲಿ ಬರೆಯುವೆ)
Comments
ಉ: DLI ಪುಸ್ತಕನಿಧಿ: ಇಂಗ್ಲಂಡದ ರಾಜಕೀಯ ಬೆಳವಣಿಗೆಗಳು
ಇಂಡಿಯಾ ದೇಶವು ಪದೇಪದೇ ಪರದೇಶದವರ ಅಧೀನಕ್ಕೆ ಒಳಪಟ್ಟಂತೆಯೇ
ಈ ಸಾಲು ತಕ್ಷಣಕ್ಕೆ ಸ್ವಲ್ಪ ತಬ್ಬಿಬ್ಬು ಆಗುವಂತೆ ಮಾಡಿತು. ಪರದೇಶದ ಆಡಳಿತ ಅಂದರೆ ನಮ್ಮ ಮನಸಿಗೆ ತಕ್ಷಣಕ್ಕೆ ಬರುವುದು ಇಂಗ್ಲೇಂಡ್ ಮಾತ್ರ
ನನ್ನ ಸಿಸ್ಟನ್ ಏಕೊ ಡಿ ಎಲ್ ಐ ಪುನಹ ಸೆಟ್ಟಿಂಗ್ ಹೋಗಿಬಿಟ್ಟಿದೆ ಸರಿ ಮಾಡಬೇಕು.
ಉ: DLI ಪುಸ್ತಕನಿಧಿ: ಇಂಗ್ಲಂಡದ ರಾಜಕೀಯ ಬೆಳವಣಿಗೆಗಳು
ಈ ವರೆಗೆ ನೀವು ಓದಿದ್ದರೆ ತಿಳಿಸಿ . ನಿಮಗೆ ಬೇಕೆನಿಸಿದರೆ ಮುಂದಿನ ಭಾಗವನ್ನು ಇಲ್ಲಿ ಬರೆಯುವೆ
-ಓದಿದ್ದೇನೆ. ಮುಂದಿನ ಭಾಗ ಬೇಕು..
-ಗಣೇಶ.
In reply to ಉ: DLI ಪುಸ್ತಕನಿಧಿ: ಇಂಗ್ಲಂಡದ ರಾಜಕೀಯ ಬೆಳವಣಿಗೆಗಳು by ಗಣೇಶ
ಉ: DLI ಪುಸ್ತಕನಿಧಿ: ಇಂಗ್ಲಂಡದ ರಾಜಕೀಯ ಬೆಳವಣಿಗೆಗಳು
ಗಣೇಶರೆ , ಇದೋ , ಇನ್ನೊಂಚೂರು ಮುಂದಿನ ಭಾಗ
ಹೌಸ್ ಆಫ್ ಕಾಮನ್ಸ್ ನಲ್ಲಿ ಚುನಾಯಿತ ಪ್ರತಿನಿಧಿಗಳು ಮಾತ್ರ ಸದಸ್ಯರಾಗಿ ಮುಂದೆ ರಾಜನಿಗೂ ಪ್ರಜೆಗಳಿಗೂ ಜಗಳವೇನಾದರೂ ಉಂಟಾದಲ್ಲಿ ಈ ಪ್ರತಿನಿಧಿಸಭೆಯು ಸಾಮಾನ್ಯ ಜನ ಸಮುದಾಯದ ಪರವಾಗಿ ಹೋರಾಡುವುದಕ್ಕೆ ಅಧಿಕಾರವುಳ್ಳ ಸಂಸ್ಥೆಯಾಗಿ ಬೆಳೆಯಿತು. ಮುಂದೆ ಪಾರ್ಲಿಮೆಂಟ್ ಆಂಗ್ಲೇಯರ ರಾಜಕೀಯ ಜೀವನದಲ್ಲಿ ಅತಿಮುಖ್ಯ ಸ್ಥಾನವನ್ನು ಪಡೆಯಿತು. ಇದನು ಮಾದರಿಯನ್ನಾಗಿ ಮಾಡಿಕೊಂಡು ಪ್ರಪಂಚದ ನಾನಾಕಡೆಗಳಲ್ಲಿ ಆಧುನಿಕ ಪ್ರಜಾಸಭೆಗಳನ್ನು ರಚಿಸಿದ್ದಾರೆ.
ಮುಂದೆ ಹದಿನಾರನೇ ಶತಮಾನದ ಹೊತ್ತಿಗೆ ಯೂರೋಪಿನಲ್ಲಿ ರಾಷ್ಟ್ರೀಯತೆಯ ಭಾವನೆ ಹುಟ್ಟಿ ಯುರೋಪಿನ ದೇಶಗಳು ಸರಿಸುಮಾರು ಇಂದಿನ ಸ್ವರೂಪ ಪಡೆದವು. ಪುನರುಜ್ಜೀವನ ಯುಗವೂ ಆರಂಭವಾಯಿತು , ಕಲೆ ,ಪಾಂಡಿತ್ಯ ಏಳಿಗೆ ಹೊಂದಿ ಹರಡಿದವು.ಮುದ್ರಣಯಂತ್ರಗಳಿಂದಾಗಿ ಪುಸ್ತಕಗಳು ಅಗ್ಗವಾಗಿ ಬಡವರೂ ಜ್ಞಾನಾರ್ಜನೆ ಮಾಡತೊಡಗಿದರು. ಜನರು ವಿವೇಚನೆಮತ್ತು ಪರಿಶೋಧನ ಬುದ್ಧಿಯವರಾದರು, ಪೋಪನ ಅಧಿಕಾರ ಕುಗ್ಗಿತು. ಅಂತರ್ರಾಷ್ಟ್ರೀಯ ವ್ಯಾಪಾರವೂ ಬೆಳೆಯಿತು.
ಇಂಗ್ಲಂಡಿನಲ್ಲಿ ಮುಂದೆ ಟ್ಯೂಡರ್ ರಾಜರು ಪ್ರಬಲರಾಗಿ ಜನಪ್ರಿಯರೂ ನಿರಂಕುಶರೂ ಆದರು. ಜನಕ್ಕೆ ಸ್ವಾತಂತ್ರ್ಯ ಕ್ಕಿಂತ ಶಾಂತಿ, ನೆಮ್ಮದಿ ,ವ್ಯಾಪಾರ ,ಅಭಿವೃದ್ಧಿ ಬೇಕಿತ್ತು. ಏಳನೇ ಹೆನ್ರಿಯು ಇತರ ರಾಜರೊಂದಿಗೆ ವಿವಾಹ ಸಂಬಂಧಗಳಿಂದಲೂ ವ್ಯಾಪಾರ ಒಪ್ಪಂದಗಳ ಮೂಲಕವೂ 'ಒಂದು ಯುದ್ಧವನ್ನೂ ಮಾಡದೆ ಯುರೋಪಿನಲ್ಲಿ ಗೌರವ ಸಂಪಾದಿಸಿದನು'.
ಎಂಟನೇ ಹೆನ್ರಿಗೂ ಪೋಪನಿಗೂ ಮನಸ್ತಾಪ ಉಂಟಾಗಿ ಅವನು ಪೋಪನ ಅಧಿಕಾರವನ್ನು ಕೊನೆಗಾಣಿಸಿದನು . ಚರ್ಚುಗಳ ಅಪಾರ ಆಸ್ತಿಯನ್ನು ವಶಪಡಿಸಿಕೊಂಡನು. ಚರ್ಚಿನ ಜನರ ದುರಾಸೆ , ದುಷ್ಕೃತ್ಯಗಳು ಜನರಲ್ಲಿ ಅಸಮಾಧಾನವುಂಟು ಮಾಡಿದ್ದರಿಂದ ಜನರ ಬೆಂಬಲವೂ ರಾಜನಿಗೇ ಸಿಕ್ಕಿತು.
ಎಲಿಜಬೆತ್ ರಾಣಿ (೧೫೫೮-೧೬೦೩) ಒಳ್ಳೆಯ ದಕ್ಷ ಆಡಳಿತ ಕೊಟ್ಟಳು, ವ್ಯಾಪಾರ , ಕೈಗಾರಿಕೆ, ವಸಾಹತೀಕರಣವನ್ನು ಪ್ರೋತ್ಸಾಹಿಸಿದಳು . ಭಾರತದೊಡನೆ ವ್ಯಾಪಾರ ಮಾಡಲು ಈಸ್ಟ್ ಇಂಡಿಯಾ ಕಂಪನಿಗೆ ಅನುಮತಿ ಕೊಟ್ಟಳು, "ಮುಂದೆ ತಮಗಿರುವ ಸಾಮ್ರಾಜ್ಯ ಭಾಗ್ಯವನ್ನು ಅರಿಯದೆ" ಕೇವಲವ್ಯಾಪಾರಕ್ಕಾಗಿ ಆಂಗ್ಲರು ನಮ್ಮ ದೇಶಕ್ಕೆ ಬರತೊಡಗಿದರು. ಅವಳು ಇಂಗ್ಲೆಂಡಿನ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಿದಳು.
ಆಗ ಯುರೋಪಿನಲ್ಲಿ ಸ್ಪೇನ್ ಪ್ರಬಲವಾಗಿತ್ತು. ಅಲ್ಲಿಯ ರಾಜ ಎರಡನೆಯ ಫಿಲಿಪ್ , ಅವನು ಪೋಪ್ ಮತ್ತು ಕ್ಯಾಥೊಲಿಕ್ ಮತದ ಪರವಾಗಿದ್ದನು. ಅಷ್ಟು ಹೊತ್ತಿಗೆ ಇಂಗ್ಲಂಡ್ ಪ್ರೊಟೆಸ್ಟಂಟ್ ಸಂಪ್ರದಾಯವನ್ನು ಜಾರಿಗೆ ತಂದಿತ್ತು. ವ್ಯಾಪಾರದಲ್ಲಿಯು ಎರಡೂ ದೇಶಗಳು ಪ್ರತಿಸ್ಪರ್ಧಿಗಳಾಗಿದ್ದವು. ಎರಡನೆಯ ಫಿಲಿಪ್ ಒಂದು ಭಾರೀ ನೌಕಾಸೈನ್ಯವನ್ನು ಇಂಗ್ಲಂಡಿನತ್ತ ಕಳಿಸಿದನು, ಅವರ ಅದೃಷ್ಟವೂ ಚೆನ್ನಾಗಿರಲಿಲ್ಲ, ಸೈನ್ಯವೂ ಅಸಮರ್ಥವಾಗಿತ್ತು, ಇಂಗ್ಲೀಷರೂ ಸಾಹಸಿಗಳಾದ ನಾವಿಕರು, ಅಲ್ಲದೆ ತಮ್ಮ ಪರವಾಗಿ ಇಂಗ್ಲಂಡಿನ ಕ್ಯಾಥೊಲಿಕರು ದಂಗೆ ಏಳುವರೆಂಬ ಸ್ಪೇನಿಷರ ನಂಬುಗೆ ಹುಸಿಯಾಯಿತು. "ಉಜ್ವಲ ದೇಶಾಭಿಮಾನಿಗಳನ್ನು ಮತವಿಷಯಗಳಲ್ಲಿರುವ ಭಿನ್ನಾಭಿಪ್ರಾಯಗಳು ಎಂದಿಗೂ ವಿಭಾಗಿಸುವುದಿಲ್ಲ." ಸ್ಪೇನಿನ ಸೋಲಿನ ಮೂಲಕ ಇಂಗ್ಲಂಡಿನ ಸಾಮ್ರಾಜ್ಯವು ಜಗತ್ತಿನಲ್ಲಿ ಅನೇಕ ಕಡೆಗಳಲ್ಲಿ ವಿಸ್ತರಿಸಲು ಅಡೆತಡೆ ಇಲ್ಲದಂತಾಯಿತು .
ಎಲಿಜಬೆತ್ ರಾಣಿಯೊಂದಿಗ್ ಟ್ಯೂಡರ್ ರಾಜಮನೆತನವು ಕೊನೆಗೊಂಡಿತು. ಇವಳು ಮದುವೆ ಮಾಡಿಕೊಳ್ಳಲಿಲ್ಲ. ವಿದೇಶೀಯ ರಾಜನನ್ನು ವರಿಸಿದರೆ ಇಂಗ್ಲೆಂಡಿನ ಸ್ವಾತಂತ್ರ್ಯಕ್ಕೂ , ಸ್ವದೇಶೀಯ ಪ್ರಜೆಯೊಬ್ಬನನ್ನು ವರಿಸಿದರೆ ತನ್ನ ಗೌರವಕ್ಕೂ ಹಾನಿಯುಂಟಾಗಬಹುದೆಂಬ ಧರ್ಮಸಂಕಟಕ್ಕೆ ಸಿಕ್ಕಿ ಇವಳು ವಿವಾಹವಿಲ್ಲದೆಯೇ ತನ್ನ ಕಾಲವನ್ನು ಕಳೆದಳು.
ಟ್ಯೂಡರ್ ಮನೆತನಕ್ಕೆ ಇಂಗ್ಲಂಡ್ ದೇಶವು ಅನೇಕ ವಿಷಯಗಳಲ್ಲಿ ಋಣಿಯಾಗಿದೆ. ಆ ರಾಜರು ಜನಾಭಿಪ್ರಾಯವನ್ನು ಅರಿತು ಅದರಂತೆಯೇ ನಡೆಯುತ್ತಿದ್ದರು. ಪಾರ್ಲಿಮೆಂಟನ್ನು ಗೌರವಿಸುತ್ತಿದ್ದರು. ಆದರೆ ಅದು ಇವರ ಅಧೀನವಾಗಿತ್ತು. ಅವರುಗಳ ನಿರಂಕುಶ ಪ್ರಭ್ತ್ವವು ಬೇರೆಡೆಗಳಲ್ಲಿನಂತಲ್ಲದೆ ಜನಪರವಾಗಿತ್ತು. ಅವರ ನೂರು ವರ್ಷಗಳ ಆಳಿಕೆಯಲ್ಲಿ ಪಾರ್ಲಿಮೆಂಟ್ ಹೆಚ್ಚು ಪಕ್ವತೆಯನ್ನು ಹೊಂದಿತು.
ನಂತರ ಸ್ಕಾಟ್ಲೆಂಡಿನವರು ಇಲ್ಲಿ ರಾಜರಾದರು. ಆದರೆ ನೂರು ವರ್ಷಗಳಿಂದಲೂ ಇಂಗ್ಲೆಂಡಿಗೂ ಸ್ಕಾಟ್ಲೆಂಡಿಗೂ ಬದ್ಧ ದ್ವೇಷ ಇದ್ದಿತು. ಸ್ಕಾಟ್ಲೆಂಡಿನವರು ರಾಜರಾದದ್ದು ಅವರ ಮನಸ್ಸಿಗೆ ಒಪ್ಪಲಿಲ್ಲ, ಈ ರಾಜರೂ ವಿವೇಕರಹಿತರೂ ವ್ಯವಹಾರಜ್ಞಾನವಿಲ್ಲದವರೂ ಆಗಿದ್ದರು. ಈ ವರೆಗೆ ರಾಜನು ಇಲ್ಲಿನ ವ್ಯವಸ್ಥೆಯಲ್ಲಿ ಪ್ರಧಾನಸ್ಥಾನವನ್ನು ಪಡೆದಿದ್ದನು, ಉಳಿದೆಲ್ಲ ಸಂಸ್ಥೆಗಳು ಅವನ ಅಧೀನವಾಗಿದ್ದವು. ಈಗ ಪಾರ್ಲಿಮೆಂಟು ಪಾರಮ್ಯವನ್ನು ಬಯಸಿತು .
In reply to ಉ: DLI ಪುಸ್ತಕನಿಧಿ: ಇಂಗ್ಲಂಡದ ರಾಜಕೀಯ ಬೆಳವಣಿಗೆಗಳು by shreekant.mishrikoti
ಉ: DLI ಪುಸ್ತಕನಿಧಿ: ಇಂಗ್ಲಂಡದ ರಾಜಕೀಯ ಬೆಳವಣಿಗೆಗಳು
ಮಿಶ್ರಿಕೋಟಿಯವರೆ, ಆಸಕ್ತಿದಾಯಕವಾಗಿದೆ. Robert Dudley ( http://en.wikipedia.org/wiki/Robert_Dudley,_Earl_of_Leicester ) ಎಲಿಜಬೆತ್ ರಾಣಿಯ ಪ್ರಿಯತಮನಾಗಿದ್ದರೂ, ಮದುವೆ ಅವರ ಹಣೆಯಲ್ಲಿ ಬರೆದಿರಲಿಲ್ಲ.ಇನ್ನೂ ಅನೇಕ ರಾಜರು ವರಿಸಲು ತಯಾರಿದ್ದರೂ ಆಗಲಿಲ್ಲ. ನಮ್ಮ ರಾಹುಲ್ ಗಾಂಧಿಗೂ ಇದೇ ಪ್ರಾಬ್ಲೆಂ ಇರಬಹುದೇ? :) ಮುಂದಿನ ಭಾಗ ತಮಗೆ ಸಮಯವಾದಾಗ ಸೇರಿಸಿ..