ಹುಡುಗಾಟ ಆಡಿದ್ರೆ, ಪಟಾಕಿ ಸುಮ್ನೆ ಬಿಡುತ್ತ?

ಹುಡುಗಾಟ ಆಡಿದ್ರೆ, ಪಟಾಕಿ ಸುಮ್ನೆ ಬಿಡುತ್ತ?

ಪಾರ್ಥರ 'ಥುಸ್ ಪಟಾಕಿ' ಓದ್ತಾ ಹಳೆಯ ಪಟಾಕಿ ಹೊಡೆಯುತ್ತಿದ್ದ ದಿನಗಳೆಲ್ಲ ನೆನಪಾದವು. ಅದರಲ್ಲೂ 'ಟುಸ್ ಪಟಾಕಿ'ಯಾದರೆ ತರುತ್ತಿದ್ದ, ಅವಮಾನ, ಕೀಳರಿಮೆ, ಸಿಟ್ಟು, ರೋಷ, ಅಸಹಾಯಕತೆ ಎಲ್ಲಾ ನೆನಪಾಯಿತು. ಹಾಗೆಯೆ ರಸ್ತೆಯಲ್ಲೆ ಹಚ್ಚುವಾಗ ಓಡಾಡುವವರ ಪಾಡು, ಹಚ್ಚಿದ ಪಟಾಕಿಯ ಜತೆಯೆ ಹುಡುಗಾಟವಾಡುವ ತುಡುಗು ಹುಡುಗರ ಭಂಡ ಧೈರ್ಯ, ಹಚ್ಚಲು ಹೆದರುತ್ತಲೆ ಹಚ್ಚಿದ್ದೇವೆಂದುಕೊಂಡು ಕಿಡಿ ಅಂಟಿಕೊಳ್ಳುವ ಮೊದಲೆ ಓಡಿ ಬರುವ ಪುಕ್ಕಲಿನ ಚಿಣ್ಣರು, ಆ ಹೆದರಿಕೆಯನ್ನು ಮೆಟ್ಟಿದಾಗ ಕಲಿಕೆಯಾಗಿ ಬದಲಾಗುವ ಸೊಗಡು - ಎಲ್ಲಾ ನೆನಪಾಗಿ ತುಣುಕುಗಳಾಗಿ ಹೊರಬಿದ್ದದ್ದು ಈ ಕೆಳಗಿನ ಕವನವಾಗಿ. ಮಕ್ಕಳದೆಂದು ಹೇಳಬಹುದೊ ಇಲ್ಲವೊ - ಮಕ್ಕಳು ಮತ್ತು ಪಟಾಕಿಯ ಕುರಿತ ದೀಪಾವಳಿ ಚಿತ್ರಣವೆಂಬುದಂತೂ ನಿಜ. ಮತ್ತೆ ದೀಪಾವಳಿ -  ಬಲಿಪಾಡ್ಯಮಿಯ ಶುಭಾಶಯಗಳೊಂದಿಗೆ ತಮ್ಮ ಮನರಂಜನೆಗೆ :-)

ಸ್ಪೂರ್ತಿಗೆ ಕಾರಣರಾದ ಪಾರ್ಥರಿಗೆ ದೀಪಾವಳಿ ಶುಭಾಶಯದೊಂದಿಗೆ 'ಥ್ಯಾಂಕ್ಸು' :-)
.

- ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
.
.
ಹುಡುಗಾಟ ಆಡಿದ್ರೆ, ಪಟಾಕಿ ಸುಮ್ನೆ ಬಿಡುತ್ತ?
_____________________________
.
ಟುಸ್ ಪಟಾಕಿ ನೋಡೊಲೆ
ಬುಸ್ಬುಸ್ಸಂತ್ಲೆ ಬಿದ್ದೋದ್ವಲೆ
ಕಚಡಾ ಮಾಲು ಕೊಟ್ಟವ್ನಲ್ಲ
ಹಳೆ ಸ್ಟಾಕ್ತಂದು ಕೆಟ್ಟೋದ್ನಲ್ಲ ||
.
ಹಿಡ್ಕೊಂಡೆ ಚಡ್ಡಿ ಗಂಧದಕಡ್ಡಿ
ರಸ್ತೆಲಿಟ್ಟ ಕೈಕಾಲು ಎರಡಡಿ 
ಆನೆ ಪಟಾಕಿ ಹಚ್ಚೋಡಿ ಬಾಕಿ
ಬೆನ್ಹಾಕಿ ಕಣ್ಮುಚ್ಚಿ ಕಿವಿಗ್ಬೆರಳಾಕಿ ||
.
'ಜುಂಜುಂ' ಅದುರಿ ಮೈಯೆಲ್ಲ 
ಸರಿ ಇನ್ನೇನು ಸಿಡಿಯುತ್ತೆಲ್ಲಾ
ಬಿಗಿ ಕಣ್ಮುಚ್ಚಿದ್ರು, ಎದೆ ಡವಡವ
'ಢಂ' ಅನ್ನೋದ್ಯಾವಾಗ್ಲೊ ಶಿವಶಿವ ||
.
ಗಳ್ಗಳಿಗೆ ನಿಮಿಷ ಇಲ್ಲ ತಾನೆ ಮೋಸ
ಯಾಕೊ ಸಿಡಿಯೊ ಹಂಗೆ ಕಾಣ್ತಿಲ್ಲ ಖಾಸ
ಓಡಾಡೊ ಜನ್ರೆಲ್ಲ ನಿಂತವ್ರೆ ಕಿವಿ ಮುಚ್ತಾ
ಸಿಡಿಯೊ ಬಡ್ಡಿಮಗ್ನೆ , ಕೊಟ್ಟಿಲ್ವಾ ಕಾಸ? ||
.
ಯಾಕೊ ಅನುಮಾನ ಸದ್ದಿಲ್ಲ ಸುಸ್ತ
ತರಬಾರದಾಗಿತ್ತಲ್ಲಿ ಸಿಕ್ತೂಂತ ಸಸ್ತಾ
ಬೀದಿಲ್ಹೋಗೊವ್ರು ಅಂದ್ರೆ 'ಟುಸ್ ಪಟಾಕಿ'
ನಕ್ಕೊಂಡ್ ದಾಟ್ಕೊಂಡೋದ್ರೆ ಅವ್ಮಾನ ಜಾಸ್ತಿ ||
.
ಹತ್ರ ಹೋಗೋಕೂ ಭಯ, ಸಿಡಿದ್ಬಿಟ್ರೆ ಕಷ್ಟ
ಹೆಜ್ಜೆಜ್ಜೆ ಇಡ್ತಾ ಹೋಗ್ತ ಸರದ ಹತ್ರ ದಿಟ್ಟ
ಕಾಲಲ್ಜಾಡಿಸಿ ಆಡಿಸಿ ಕಿಡಿಯೆ ಕಾಣ್ತಿಲ್ವಲ್ಲಾ
ಅಯ್ಯೊ ಶಿವನೆ, ಬತ್ತಿನೆ ಹತ್ಕೊಂಡಿಲ್ವಲ್ಲ ! ||
.
ಈ ಸಾರಿ ಧೈರ್ಯ ದೂರ್ದಿಂದ್ಲೆ ಶೌರ್ಯ
ಕಿಡಿ ಕಾರೊತನಕ ಅಲ್ಲೆ ನಿಂತಿದ್ದ ಆರ್ಯ
ಬತ್ತಿ ದಾಟಿದ್ ಕತ್ತಿ, ಕಿಡಿಯೆಲ್ಲಾಕಡೆಗ್ಹತ್ತಿ 
ಬಿದ್ನೊ ಎದ್ನೊ ಓಡಿ, ಸಿಕ್ಕಿದ್ಮೂಲೆಗ್ ನುಗ್ತಿ ||
.
ಯಾಕೊ ಇನ್ನು ಕ್ಯಾಣ, ತಿಂತಿದೆಯಲ್ಲ ಪ್ರಾಣ
ನಾಳೆಯಿಂದ್ಲೆ ನನ್ನ 'ಟುಸ್ಪಟಾಕಿ' ಅಂತಾರಣ್ಣ
ಮಾನ ಉಳ್ಸೊ ಮಗನೆ, ಇಷ್ಟಾದ್ರೂ ಸದ್ದು
ಮಾಡ್ಕೊಂಡು ನೆಗೆದ್ಬೀಳು, ಒಳ್ಗಿಲ್ವಾ ಮದ್ದು? ||
.
ಕಣ್ತುಂಬಾ ನೀರು, ನೆರೆ-ಹೊರೆ ಸದ್ದೆ ಜೋರು
ದಾರಿಲ್ಹೋಗೊರ್ ಧೈರ್ಯ, ಒದ್ಕೊಂಡೆ ಹೋದ್ರು
ಕೀಟಲೆ ರಾಜ ಗೊತ್ತ, ಕಿಂಡಾಲ್ ಮಾಡ್ತ ಒದ್ದ
ಢಂಢಂ ಸಿಡಿದೆ ಬಿಡ್ತ, ಮಗ ಓಡ್ದಾ ಎದ್ದ್ ಬಿದ್ದಾ ||
.
ಸದ್ಯ ನಾನಾಗ್ಲಿಲ್ಲ, ಟುಸ್ಪಟಾಕಿ ಪದವಿಗ್ ತುತ್ತು
ತಡವಾಗೆ ಸಿಡಿದ್ರೂನು, ಸರಿಯಾಗ್ಗೂಸ ಕೊಡ್ತು
ಕಾಲ್ಗಾಕ್ಕೊಂಡವನೀಗ ಬ್ಯಾಂಡೇಜು, ಕುಂಟ್ತಾ
ಹುಡುಗಾಟ ಆಡಿದ್ರೆ, ಪಟಾಕಿ ಸುಮ್ನೆ ಬಿಡುತ್ತ? ||
.
.
ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು

Comments

Submitted by nageshamysore Tue, 11/05/2013 - 03:10

In reply to by ಗಣೇಶ

ಥ್ಯಾಂಕ್ಸ್ ಗಣೇಶ್ ಜಿ, ಮೊದಲು ನಾನು 'ಟುಸ್ ಪಟಾಕಿ' ಅನ್ಕೊಂಡೆ ಬರೆಯೋಕ್ ಶುರು ಹಚ್ಚಿದೆ. ಬರೀತಾ, ಬರೀತ ಹಳೆಯ ಘಟನೆಯೊಂದು ನೆನಪಾಯ್ತು - ಆ ಬಾಲ್ಯದ ದಿನಗಳಲೊಬ್ಬ ತಂಟೆಕೋರ ಹುಡುಗ 'ಟುಸ್ಪಟಾಕಿ' ಎಂದು ಒದೆಯೋಕ್ ಹೋಗಿ, ಅದು ಅನಿರೀಕ್ಷಿತವಾಗಿ ಸಿಡಿದು ಕಾಲು ಸುಟ್ಟುಕೊಂಡಿದ್ದು :-) (ನಮ್ಮ 'ಬಂಡೀಕೇರಿ'ಯಲ್ಲಿ ಅಂತಹ ಸಾಹಸಿಗಳು ಸಾಕಷ್ಟು ಜನ ಸಿಗುತ್ತಿದ್ದರು)

Submitted by partha1059 Tue, 11/05/2013 - 11:01

ಚೆನ್ನಾಗಿದೆ ಘಟನೆ ! ಕವನ‌ !
ಆನಂದ‌ ಸಾಗರ‌ ಎನ್ನುವ‌ ಸಿನಿಮಾಬಂದಿತ್ತು, ಮಾಸ್ಟರ್ ಹಿರಣ್ಣಯ್ಯ ಶತ‌ ಸೋಮಾರಿಯ‌ ಪಾತ್ರ. ಅವನ‌ ಹೆಂಡತಿ ಅಡುಗೆ ಕೆಲಸ‌ ಮಾಡಿ ಗಂಡನಿಗೆ ಎಂದು ಬಿಳಿ ಜುಬ್ಬ ಹೊಲಿಸಿರುತ್ತಾಳೆ, ಬೀದಿಯಲ್ಲಿ ಹುಡುಗರು ಪಟಾಕಿ ಸರ‌ ಹಚ್ಚಿದರೆ ಅದು ಥುಸ್ ಸ್ ಸ್ ಸ್....
"ಲೋ ಶಿವಕಾಶಿ ಪಟಾಕಿ ಬೆಂಗಳೂರ್ನಲ್ಲಿ ಹೊಡೆಯುತ್ತೇನೊ ಹೋಗ್ರೋ" ಎಂದು ಎಲ್ಲರನ್ನು ಓಡಿಸಿ, ಅ ಪಟಾಕಿಸರವನ್ನು ಎತ್ತಿ ನೋಡಿ ಜೋಬಿನಲ್ಲಿ ಹಾಕಿಕೊಂಡು ಮನೆ ಒಳಗೆ ಬರುವರು...
ಮುಂದಿನದು ನಾನು ಹೇಳಬೇಕಾ ?.........

Submitted by nageshamysore Wed, 11/06/2013 - 00:55

In reply to by partha1059

ಪಾರ್ಥಾ ಸಾರ್, 'ಆನಂದ ಸಾಗರ' ಚಿತ್ರವನ್ನು ನಾನು ನೋಡಿದ್ದೇನೆ. ಸಂಪೂರ್ಣ ಹಾಸ್ಯಮಯ ಚಿತ್ರ - ಬಹುಶಃ ಹಿರಣ್ಣಯ್ಯನವರಲ್ಲದೆ ಬೇರಾರೂ ಆ ಪಾತ್ರವನ್ನು ಅಷ್ಟು ಸಮರ್ಥವಾಗಿ ನಿಭಾಯಿಸಲು ಸಾಧ್ಯವೆ ಇಲ್ಲವೆನ್ನುವಷ್ಟು ಚೆನ್ನಾಗಿ ನಟಿಸಿದ್ದರು. ಉಢಾಳನ ಪಾತ್ರದ ಆ ಸನ್ನಿವೇಶ ನೆನೆದರೆ ಈಗಲೂ ನಗೆಯುಕ್ಕಿ ಬರುತ್ತದೆ. ಪಟಾಕಿ ಸಿಡಿಯುವ ಸಂಧರ್ಭ ಮತ್ತು ಪರಿಣಾಮ ವಾಸ್ತವದಲ್ಲಿ ಹಾಸ್ಯವಲ್ಲವಾದರೂ, ಆ ಚಿತ್ರದ ಸನ್ನಿವೇಶದಲ್ಲಿ ಮಾತ್ರ ಹೊಟ್ಟೆ ಹಿಡಿದು ನಗುವಂತೆ ಮಾಡುತ್ತದೆ. ಅದನ್ನು ನೆನಪಿಸಿ ಈಗಲೂ ನಗುವಂತೆ ಮಾಡಿದಿರಿ :-) (ಸಿಂಗಪೂರದ ಟೀವಿಯಲ್ಲೊಮ್ಮೆ ಅದರ ಮೂಲ ತಮಿಳು ಆವೃತ್ತಿಯನ್ನು ಸಹ ನೋಡಿದ್ದೆ - ತಮಿಳಿನಲ್ಲಿ ವಿಶೂ ಆ ಪಾತ್ರವನ್ನು ಮಾಡಿದ್ದವರು)

Submitted by kavinagaraj Tue, 11/05/2013 - 16:24

ಚೆನ್ನಾಗಿದೆ. ನಾಗೇಶ ಮತ್ತು ಪಾರ್ಥರಿಬ್ಬರಿಗೂ ಧನ್ಯವಾದ. ನಾನು ಚಿಕ್ಕವನಿದ್ದಾಗ ಆನೆ ಪಟಾಕಿಯನ್ನು ಕೈಯಲ್ಲಿಟ್ಟುಕೊಂಡು ಹಚ್ಚಿ ಎಸೆಯುತ್ತಿದ್ದೆ. ಒಮ್ಮೆ ಪಟಾಕಿಯ ಬದಲು ಊದಿನಕಡ್ಡಿ ಎಸೆದಿದ್ದೆ. ಸದ್ಯಕ್ಕೆ ಪಟಾಕಿ ಟುಸ್ ಅಂದಿದ್ದರಿಂದ ಆಯಿತು. ಟುಸ್ ಅಂದಿದ್ದರೂ ಹೆಬ್ಬೆರಳು ಮತ್ತು ತೋರುಬೆರಳ ತುದಿಗಳು ಸುಟ್ಟಿದ್ದವು. ನಮ್ಮಪ್ಪನಿಂದ ಪೆಟ್ಟು ಬೋನಸ್ ಆಗಿ ಸಿಕ್ಕಿತ್ತು!

Submitted by nageshamysore Wed, 11/06/2013 - 01:01

In reply to by kavinagaraj

ಕವಿನಾಗರಾಜರೆ, ನೀವು ವಾಸಿ ಬರಿತ ಆನೆ ಪಟಾಕಿ ಕೈಯಲ್ಲಿ ಹಿಡಿದು ಬಚವಾಂತೂ ಆದಿರಿ. ನಮ್ಮ ಕೆಲವು ವೀರಾಗ್ರಣಿಗಳು ಹೂಕುಂಡ ಬರಿಗೈಯಲ್ಲಿ ಹಿಡಿದು ಗಿರಕಿ ಸುತ್ತುತ್ತಿದ್ದರು! ಒಂದೆರಡು ಬಾರಿ ಅದು ಸಿಡಿದ ಸಂಧರ್ಭದಲ್ಲಿ ಬ್ಯಾಂಡೇಜು ಸುತ್ತಿದ ಕೈಯಲ್ಲೆ ಓಡಾಡುತ್ತ ನರಳಿದ್ದು ಬೇರೆ ವಿಷಯ. ಆ ವಯಸ್ಸಿನಲ್ಲಿ ನಾನೂ ಹಾಗೆ ಮಾಡುವ ಇತರರನ್ನು ನೋಡಿ ಹೀರೋ ಆಗಲಿಕ್ಕೆ ಹೊರಟಿದ್ದೆ - ಪಟಾಕಿ ಹಚ್ಚಿ ಹಚ್ಚಿ ಕೈಯಿಂದೆಸೆಯುವ ಮೂಲಕ. ಆದರೆ ಕುದುರೆ ಪಟಾಕಿಯನ್ನು ಮಾತ್ರ, ದೊಡ್ಡ ಆನೆ ಪಟಾಕಿಗೆಲ್ಲ ಹಾಗೆ ಮಾಡುವ ಧೈರ್ಯವಿರಲಿಲ್ಲವಾಗಿ ಬಚಾವ್!

Submitted by venkatb83 Wed, 11/06/2013 - 18:06

In reply to by nageshamysore

ನಿಮ್ಮ ಬರಹಕ್ಕೂ ಗುರುಗಳ ಬರಹಕ್ಕೆ ಬರೆದ ಪ್ರತಿಕ್ರಿಯೆ ಹಾಕಿರುವೆ .. ಇದಕ್ಕೂ ಅನ್ವಯ ಅದು ..!!

ನಾವ್ ಪಟಾಕಿ ಹೊಡೆದದ್ದು ಬಹು ಕಡಿಮೆ - ಈಗ್ಗೆ ೧೦ ವರ್ಷಗಳ ಹಿಂದೆ ಕೊನೆಯಾಯ್ತು . ಮೊದಲು ಚಿಕ್ಕವನಿದ್ದಾಗ ಹಳ್ಳಿಯಲ್ಲಿ ಅಕ್ಕ ಪಕಕ್ ಗುಡಿಸಲು ಹಾಗಾಗಿ ಪಟಾಕಿ ಹಚ್ಚಲು ಆಗುತ್ತಿರಲಿಲ್ಲ . ಆಮೇಲೆ ಟೀವಿಲಿ ನೋಡಿ -ಓದಿ ಪಟಾಕಿ ಹೊಡೆಯೋದ್ರಿಂದ ಆಗುವ ವಾಯು ಮಾಲಿನ್ಯ, ನೆಲ ಮಾಲಿನ್ಯ (ದೀಪಾವಳಿ ನಂತರ ಬೀದಿಗಳನ್ನು ನೋಡಿದರೆ ಕಲರ್ ಕಲರ್ ಒನ್ಲಿ ಯಾಶ್ ಕಲರ್ ) .ಚೆ ಛೆ ಅನ್ನಿಸಿತು .. ಹಣತೆ ಬೆಳಗಿ ದೀಪಾವಳಿ ..
ಅಸ್ಟೇ ..

ಈಗ ಪಟಾಕಿ ಹೊಡೆಯುವವರನ್ನು ಅದರಲ್ಲೂ ವಿದ್ಯಾವಂತರು -ಪಟಾಕಿ ಸರಕ್ಕೆ ಬೆಂಕಿ ಹಚ್ಚಿ ಹೊಡೆವುದು ಕಂಡಾಗ ಮನ ಕೊರಗುವುದು ಮರುಗುವುದು .. ;(((
ಹಾಗಯೇ ಈ ಒಂದು ವಾರ ಬೀದಿ ಮತ್ತು ಸಾಕಿದ ನಾಯಿಗಳ ಪಾಡು ಹೇಳೋದು ಹೇಗೆ ?
ಅವುಗಳ ಧೈರ್ಯ ಕುಗ್ಗಿ ಹೃದಯ ಬಡಿತ ಹೆಚ್ಚಿ ಊಟ ನೀರು ಬಿಟ್ಟು ನಿತ್ರಾಣ ಆಗುವವು .. ಬೇಕಾದ್ರೆ ನೀವೇ ನೋಡಿ ...

ಈ ದಿನಗಳಲ್ಲಿ ವಯಸ್ಸಾದವರು ಏನು ನಮ್ಮಂತ ಯುವಕರಿಗೆ ಈ ಶಬ್ದ ಕೇಳಿ ಕಿರಿಕಿರಿ ಅನ್ನಿಸುವುದು . ಮೊನ್ನೆ ನಮ್ಮನೆ ಹತ್ರ ಮಧ್ಯ ರಾತ್ರಿ ಪಟಾಕಿ ಅದೂ ಜೋರ್ ಶಬ್ದ ಮಾಡಿ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟವರಿಗೆ ಅಗೌರವ ತೋರಿದ್ದು ವಿದ್ಯಾವಂತರೇ -ನಾವ್ ಹೋಗಿ ಬಯ್ದಾಗ ತಮ್ಮ ಮನೆ ಒಳ ಹೊಕ್ಕರು ..

ದೀಪಾವಳಿ ಮೊದಲು ನಂತರ ತಮಿಳುನಾಡಲ್ಲಿ ಅಗ್ನಿ ದುರಂತ ಮಾಮೂಲಿ ;((
ಇದೆಲ್ಲ ಬೇಕಾ?

ಶುಭವಾಗಲಿ
\।/

Submitted by nageshamysore Fri, 11/08/2013 - 03:28

In reply to by venkatb83

ಸಾಂಸ್ಕೃತಿಕ ನೆಲೆಗಟ್ಟು ಸಂಪ್ರದಾಯಗಳ ಜತೆ ಮಕ್ಕಳ ಖುಷಿಗೆ ಎನ್ನುವ ಕಾರಣವೂ ಸೇರಿರುವುದರಿಂದ ಏಕಾಏಕಿ ಇದನೆಲ್ಲ ನಿಲ್ಲಿಸುವುದು ಕಷ್ಟವೆ. ಮತ್ತೊಂದೆಡೆ ಇದನ್ನೆ ನಂಬಿರುವ ಉದ್ಯಮ, ಕೆಲಸಗಾರರ ಜೀವನ ಭವಿಷ್ಯ ಕೂಡ ಇದರಲ್ಲಡಗಿದೆ. ಈ ಕಾರಣಕ್ಕೆ ಸಿಂಗಪುರದ ಸುವರ್ಣ ಮಧ್ಯಮ ಮಾರ್ಗ ನನಗೆ ಹಿಡಿಸಿದ್ದು - ಬರಿ ಬೆಳಕಿಗೆ ಓಕೆ, ಸದ್ದಿಗೆ ಕಟ್ಟಳೆ. ಈ ಬಾರಿಯಂತು ನಾವು ಅದನ್ನು ಹಚ್ಚಲಿಲ್ಲ - ಮಗನೆ ಆಸಕ್ತಿ ತೋರದ ಕಾರಣ. ಮಕ್ಕಳಲ್ಲೆ ಚಿಕ್ಕಂದಿನಿಂದ ಈ ರೀತಿಯ ಭಾವನೆ ಬೆಳೆದರೆ ನಿಧಾನವಾಗಿಯಾದರೂ ಕಡಿಮೆಯಾಗಬಹುದೇನೊ.

ನಿಮ್ಮ 'ನಾಯಿ ಪಾಡಿನ' ಕಥೆಯಂತು ಬಲು ನಿಜ. ಬೀದಿಯ ಸಾರ್ವಭೌಮನಂತೆ ಓಡಾಡಿಕೊಂಡಿರುತ್ತಿದ್ದ ಬೀದಿ ನಾಯಿಗಳು ಪಟಾಕಿಯ ದಿನಗಳಲ್ಲಿ ಮಂಗಮಾಯ! ಸದ್ದೆ ಇಲ್ಲದಂತೆ ಯಾವುದೊ ಮೂಲೆ ಸೇರಿಕೊಂಡುಬಿಟ್ಟಿರುತ್ತಿದ್ದವು (ಹೆಚ್ಚಾಗಿ ಮೋರಿಗಳಡಿಯಲ್ಲಿ). ಹಾಗೆ ಹೋಗದೆ ಇದ್ದ ಕೆಲವುಗಳ ಕುಯುಂಗುಟ್ಟುವಿಕೆ, ಗೋಳಾಟವಂತು ಕರುಣಾಜನಕ.

Submitted by H A Patil Wed, 11/06/2013 - 20:03

ನಾಗೇಶ ಮೈಸೂರು ರವರಿಗೆ ವಂದನೆಗಳು
ಠುಸ್ ಪಟಾಕಿ ಕುರಿತು ಬರೆದ ಪೀಠಿಕೆ ಮತ್ತು ಕವನ ಓದಿದೆ, ಪ್ರತಿಯೊಂದನ್ನು ಸಹ ಕವನದಲ್ಲಿ ಹಿಡಿದಿಡುವ ನಿಮ್ಮ ಆಸಕ್ತಿ ಮತ್ತು ಕವಿತಾ ರಚನಾಶಕ್ತಿಗೆ ನನ್ನ ಮೆಚ್ಚುಗೆಯಿದೆ. ಠುಸ್ ಪಟಾಕಿ ನಮ್ಮ ಬಾಲ್ಯದ ದಿನಗಳನ್ನು ನೆನಪಿಗೆ ತರುತ್ತದೆ. ನಮ್ಮ ಕಡೆ ಹಳ್ಳಿಗಳಲ್ಲಿ ಪಟಾಕಿ ಹಚ್ಚುವುದು ಕಡಿಮೆ ಆದರೆ ಗಣೇಶ ಚೌತಿಯಂದು ಪಟಾಕಿ ಖರೀದಿ ಜೋರು. ನಮಗೆ ನಾಲ್ಕಾಣೆ ಹೊಂದಿಸಲು ಕಷ್ಟವಾಗಿ ಬಿಡುತ್ತಿತ್ತು. ಒಂದಾಣೆ ಕೊಟ್ಟು ಒಂದು ಪಟಾಕಿ ಸರ, ಒಂದಾಣೆ ಮೆಣಸಿನಕಾಯಿ, ಒಂದಾಣೆಯ ಚುಚಂದ್ರಿ ಕಡ್ಡಿ, ಇನ್ನೊಂದಾಣೆಯ ಹಗಲಬತ್ತಿ ಪೊಟ್ಟಣ ಖರೀದಿಸಿದರೆ ಆಯಿತು ನಮ್ಮ ಪಟಾಕಿ ಸಂಭ್ರಮ, ಆ ಪಟಾಕಿಗಳ ಪೈಕಿ ಯಾವುದಾದರೂ ಠುಸ್ ಆದರೆ ಅದನ್ನು ನಾವು ಬಿಡುತ್ತಿರಲಿಲ್ಲ, ಅದರ ಹಿರಿದು ಚಿಮಣಿ ದೀಪಕ್ಕೆ ಹಿಡಿದು ಸೊರ್ ಅನಿಸಿ ಆ ಪಟಾಕಿಯ ಹಿಂಬದಿಗೆ ಉಪಯೋಗಿಸಿ ಚುಚಂದ್ರಿ ಕಡ್ಡಿಯನ್ನು ಸಿಕ್ಕಿಸಿ ಅದನ್ನು ಸಹ ಸೊರ್ ಅನಿಸದೆ ಬಿಡುತ್ತಿರಲಿಲ್ಲ, ಈ ಎಲ್ಲ ನೆನಪಿಸಿತು ನಿಮ್ಮ ಕವನ ಧನ್ಯವಾದಗಳು.

Submitted by nageshamysore Fri, 11/08/2013 - 03:39

In reply to by H A Patil

ಪಾಟೀಲರಿಗೆ ನಮಸ್ಕಾರ. ತಮ್ಮ ಪಟಾಕಿ ಸಂಭ್ರಮದ ಮೆಲುಕು ತುಂಬಾ ಸೊಗಸಾಗಿದೆ. ನಾಕಾಣೆಯಲ್ಲೆ ಎಲ್ಲಾ ಸಂಭಾಳಿಸುತಿದ್ದರು ಅದು ನಾನೂರು ರೂಪಾಯಿಗೆ ಮೀರಿದ ಹರ್ಷ ಕೊಡುತ್ತಿತ್ತೆನ್ನುವುದರಲ್ಲಿ ಸಂದೇಹವೆ ಇರಲಾರದು. 'ಠುಸ್' ಪಟಕಿಯನ್ನು ಚುಚಂದ್ರಿ ಕಡ್ಡಿಗೆ ಚುಚ್ಚಿ 'ಚುರ್' ಅನಿಸುತ್ತಿದ್ದುದನ್ನು ನಾವೂ ಮಾಡುತ್ತಿದ್ದೆವು - ಸುರುಸುರುಬತ್ತಿಯ ಕಡ್ಡಿಯ ಹಿಂಬಾಗಕ್ಕೊ, ಇಲ್ಲ ಯಾವುದಾದರು ತಂತಿಗೊ ಸಿಕ್ಕಿಸಿ - ಕೊಟ್ಟ ಒಂದು ನಯಾಪೈಸೆಗು ಮೋಸವಾಗದಂತೆ ಅದರ ಹತ್ತು ಪಟ್ಟು ವಸೂಲು ಮಾಡುತ್ತಿದ್ದೆವು.

ನಾನು ಗಮನಿಸಿದಂತೆ ಹಳ್ಳಿಗಳಲ್ಲಿ (ನಮ್ಮೂರಿನ ಕಡೆ ಕೂಡ) ಪಟಾಕಿ ಹೊಡೆಯುತ್ತಲೆ ಇರಲಿಲ್ಲ - ಬರಿ ಬಟ್ಟೆಬರೆ, ಔತಣಗಳ ಸಂಭ್ರಮವೆ ಜಾಸ್ತಿ. ಬಹುಶಃ ಸಿಟಿಗಳಲ್ಲೆ ಇದು ಜಾಸ್ತಿಯೆಂದು ಕಾಣುತ್ತದೆ.

ಹಾಗೆಯೆ ನಿಮ್ಮ ಪ್ರತಿಕ್ರಿಯೆ ಮೂಲಕ 'ಠುಸ್' ಪಟಾಕಿಯ ಸರಿಯಾದ ಪ್ರಯೋಗ ಅರಿವಾಯ್ತು  ('ಟುಸ್' ಬದಲಿಗೆ) - ಅದಕ್ಕೂ ಧನ್ಯವಾದಗಳು