ರಾಜ್ಯೋತ್ಸವದ ಮನವಿ : ಪದಗಳಿಗಾಗುತ ದನಿ 

ರಾಜ್ಯೋತ್ಸವದ ಮನವಿ : ಪದಗಳಿಗಾಗುತ ದನಿ 

ಎಂದಿನಂತೆ ರಾಜ್ಯೋತ್ಸವದ ಹಬ್ಬ ಬಂದಿದೆ. ಆಚರಣೆಯ ಸಂಭ್ರಮ ಒಂದೆಡೆಯಾದರೆ ದೀಪಾವಳಿಯ ರಜೆಯೂ ಹಿಂದೆಯೆ ಬರುತ್ತಿದೆ ಮತ್ತು ಧೀರ್ಘ ವಾರಾಂತ್ಯದ ಅನುಕೂಲವು ಜತೆಗೂಡಿದೆ ಕರ್ನಾಟಕದಲ್ಲಿ. ಸಂಪದದಲ್ಲಿಯೂ ಈಗಾಗಲೆ ಹಲವು ಕನ್ನಡ ರಾಜ್ಯೋತ್ಸವದ ಬರಹಗಳು ಕಾಣಿಸುತ್ತಿವೆ - ಆ ಗುಂಪಿಗೊಂದು ಸೇರ್ಪಡೆ ಈ ಕವನ. ಆದರೆ ಕವನದ ಆಶಯ ಸ್ವಲ್ಪ ಕನ್ನಡಿಗರಿಗೆ ಹೆಚ್ಚು ಪರಿಚಿತವಲ್ಲದ ದನಿಯೆಂದು ನನ್ನ ಅನಿಸಿಕೆ. ಸಹನೆ, ತಾಳ್ಮೆಯಿಂದ ಸಹಿಸುವುದು ಕನ್ನಡಿಗರ ಹುಟ್ಟು ಗುಣವಾದರೂ, ಸಂಧರ್ಭಕ್ಕೆ ತಕ್ಕಂತೆ ಅಗತ್ಯ ಬಿದ್ದಾಗ ಗುಡುಗಿ ಎಚ್ಚರಿಸುವುದು, ಕನ್ನಡದ-ಕನ್ನಡಿಗರ ಹಿತಾಸಕ್ತಿಗೆ ಎರವಾಗದಂತಹ ಪರಿಸರ ರೂಪಿಸಲು ಯತ್ನಿಸುವುದು ಅವಶ್ಯಕವೆಂದು ನನ್ನ ಭಾವನೆ. ಹೀಗಾಗಿ ಅಂತಹ ಸಂದರ್ಭಗಳು ಬಂದಾಗ ಮಾತ್ರವಲ್ಲದೆ, ಸದಾಕಾಲವೂ ಆ ಕಾಳಜಿಯ ಪ್ರಜ್ಞೆಯನ್ನು ಜಾಗೃತಗೊಳಿಸಿಟ್ಟುಕೊಂಡಿರುವುದು ಅವಶ್ಯ. ಹೇಗೆ ಪರನಾಡಿಗೆ ಹೋದ ಕನ್ನಡಿಗರು ಅಲ್ಲಿನ ಸಂಸ್ಕೃತಿ , ಆಚಾರ-ವಿಚಾರ-ಕಲಾಚಾರಗಳನ್ನು ಗೌರವಿಸುತ್ತಾರೊ, ಅದೇ ರೀತಿಯ ನಿರೀಕ್ಷೆಯನ್ನು ಕನ್ನಡ ನಾಡಿಗೆ ಬಂದಿರುವ, ಇಲ್ಲಿನ ನೆಲಜಲದ ಋಣದಲಿರುವ ಜನರಿಂದ ನಿರೀಕ್ಷಿಸುವುದು ತೀರಾ ಸಹಜ ಪ್ರಕ್ರಿಯೆ. ಈ ರೀತಿಯ ಹಲವು ಆಶಯಗಳನ್ನು ಮೇಳೈಸಿದ ರಾಜ್ಞೋತ್ಸವದ ಆಶಯ ಈ ಕವನ.

ಸಂಪದಿಗರಿಗೆ ಮತ್ತು ಸಮಸ್ತ ಕನ್ನಡ ನಾಡಿನ ಜನತೆಗೆ ಕನ್ನಡ ರಾಜ್ಞೋತ್ಸವ ದಿನದ ಹಾರ್ದಿಕ ಶುಭಾಶಯಗಳು.

ರಾಜ್ಯೋತ್ಸವದ ಮನವಿ : ಪದಗಳಿಗಾಗುತ ದನಿ 
______________________________

ನನ್ನ ಪದಗಳಿಗಾಗುವಿರ ದನಿ
ಕನ್ನಡಕಾಗಿ ಬಿಗಿಸುತ್ತ ಧಮನಿ
ಸಾಕಾಗಿ ಹೋಗಿದೆ ಸಹನೆ, ಮೌನ
ಬಲಿ ಹಾಕಬೇಕಿದೆ ಹುಸಿ ಸೌಜನ್ಯವನ್ನ ||

ಔದಾರ್ಯವಲ್ಲಾ ಬಲಹೀನತೆ
ಉದಾರತೆಯಲ್ಲ ಹತ್ತಿಕ್ಕಿ ಒತ್ತೆ
ಪರವಾನಗಿಯಿರದೆ ತುಳಿದವರತ್ತ 
ಕೆಂಗಣ್ಣನಾದರು ಹರಿಸಬೇಕಿದೆ ಸೂಕ್ತ ||

ಬಂದವರೆಷ್ಟೊ ಉಂಡವರೆಷ್ಟೊ
ಉಂಡೂ ಕೊಂಡೂ ಹೋಗದವರಿನ್ನೆಷ್ಟೊ
ಹಿಡಿಯಬೇಕಿದೆ ಜುಟ್ಟು ಬಗಲಿಗೆ ಕೈಯಿಟ್ಟು
ಯಾರಪ್ಪನ ಮನೆ ಗಂಟು ಕಳ್ಳರಲೆಂತಾ ನಂಟು ||

ಬರಲಿ ಇರಲಿ ಬೇಡೆಂದವರಾರು
ಬಗಲಿನಲಿಡದಿರೆ ಬೆಂಕಿ ಸೋದರತೆ ತೇರು
ಬಂದು ನುಂಗಿದರೆ ನೋಡಿ ಸುಮ್ಮನಿರೆ ಹಂದೆ
ಅನಿಸಿಕೊಂಡು ಬಳೆ ತೊಡಬೇಕಿದೆಯೆ ಮಂದೆ?

ಪುಟ್ಟ ಭಾರತವಾಗಿಸಲಿ ಕನ್ನಡಮ್ಮನ ತೊಡೆ
ಕನ್ನಡದ ಮಕ್ಕಳಂತೆ ಹೀರಲೆದೆ ಹಾಲ ಸುಧೆ
ಪಸರಿಸದೆಲೆ ಕಸ್ತೂರಿ ಕನ್ನಡದ ಕಂಪು ಎಲ್ಲೆಡೆ
ನೆಲ ಜಲ ಬಲ ಕಬಳಿಸಲೆ, ಕರವಾಳ ಕಲ್ಲೆದೆ ||

ಈ ರಾಜ್ಯೋತ್ಸವವಾಗಲಿ ಆಶಯ ಕನ್ನಡಿಗ ಮನದೆ
ಸಹಿಸಲಾರೆವು ತಾಯ್ ಸೊರಗೆ ಅನ್ಯಾಯ ಭಾರದೆ
ಪದಗಳಾಗುತ ಪ್ರತಿ ಕನ್ನಡಿಗನೆದೆ ಕವಿ ದನಿಯಲಿ
ಎಚ್ಚರಿಕೆ ದನಿಗಳಾಗುತ ಸುಳಿವುಗಳಿಗೂ ಗುಡುಗಲಿ ||

ಕೊಟ್ಟು ಪಡೆಯಲಿ ಗೌರವ, ಅವರ ನೆಲದಲಿದ್ದಂತೆ ನಾವು
ಬಾಳುವುದಿಲ್ಲವೆ ಅವರಂತೆ, ಕದಲಿಸದೆಲೆ ಸಂಸ್ಕೃತಿ ಕಾವು
ನಮ್ಮಿ ನೆಲದಲಿ ತಲೆಬಾಗಿ, ನಮದೆ ಸಂಸ್ಕೃತಿಗೆ ಸ್ವರವಾಗಿ
ಅನ್ನ ಕೊಟ್ಟ ನೆಲದ ಋಣ ತೀರಿಸೊ ಮನುಜತ್ವಕೆ ಶರಣಾಗಿ ||

-ಧನ್ಯವಾದಗಳೊಂದಿಗೆ
   ನಾಗೇಶ ಮೈಸೂರು
 

Comments

Submitted by makara Fri, 11/01/2013 - 07:27

ನಾಗೇಶರೆ,
ನಿಮ್ಮ ಸಂದೇಶ ಸಮಸ್ತ ಕನ್ನಡಿಗರಿಗೂ ಕಣ್ಣು ತೆರೆಸಲಿ. ಅವರ ಕನ್ನಡದ ಭಾಷಾಭಿಮಾನ ಕೇವಲ ನವೆಂಬರ್ ತಿಂಗಳಿಗೆ ಪರಿಮಿತವಾಗದಿರಲಿ ಎಂದು ಈ ಶುಭ ಸಂದರ್ಭದಲ್ಲಿ ಆಶಿಸೋಣ.
ಸಮಸ್ತ ಕನ್ನಡಿಗರಿಗೂ (ಹೊರರಾಜ್ಯದಲ್ಲಿರುವವರಿಗೂ ಹಾಗೂ ಒಳನಾಡುಗಳಲ್ಲಿರುವವರಿಗೂ) ರಾಜ್ಯೋತ್ಸವದ ಶುಭಾಶಯಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Fri, 11/01/2013 - 18:25

In reply to by makara

ಶ್ರೀಧರರೆ, ಧನ್ಯವಾದಗಳು. ನಿಮ್ಮ ಆಶಯವೆ ನನ್ನ ಆಶಯ ಸಹ. ಆಚರಣೆ ನವೆಂಬರಿಗೆ ಸೀಮಿತಗೊಳ್ಳದೆ ದಿನ ಜೀವನದಲ್ಲಿ ಸ್ವಾಭಾವಿಕವಾಗಿ ಅಳವಡಿಸಲ್ಪಟ್ಟಾಗಷ್ಟೆ, ನಿಜವಾದ ಸಾರ್ಥಕತೆ. ವಂದನೆಗಳೊಂದಿಗೆ, ನಾಗೇಶ ಮೈಸೂರು

Submitted by H A Patil Fri, 11/01/2013 - 20:10

ನಾಗೇಶ ಮೈಸೂರು ರವರಿಗೆ ವಂದನೆಗಳು
' ರಾಜ್ಯೋತ್ಸವದ ಮನವಿ ' ಕನ್ನಡದ ನೆಲ ಜಲ ಮತ್ತು ಸಂಸ್ಕೃತಿಗಳನ್ನು ಈ ನೆಲದ ಮೇಲೆ ವಾಸಿಸುವ ಎಲ್ಲರೂ ಹೇಗೆ ಗೌರವಿಸ ಬೇಕನ್ನುವ ಮತಿತಾರ್ಥದ ಕವನ, ಭಿನ್ನ ಶೈಲಿಯಲ್ಲಿ ಕನ್ನಡದ ಅಭಿಮಾನದ ಕುರಿತು ಬರೆದಿದ್ದೀರಿ, ಧನ್ಯವಾದಗಳು.,

Submitted by nageshamysore Sat, 11/02/2013 - 05:09

In reply to by H A Patil

ಪಾಟೀಲರೆ ನಮಸ್ಕಾರ. ಕನ್ನಡತನ, ಕನ್ನಡಮನ, ಕನ್ನಡಿಯಂತೆ ಪ್ರತಿಫಲನವಾಗಬೇಕಾದರೆ ಈ ನೆಲದೆಲ್ಲರೂ ತಾವಿರುವ ನಾಡಿನ, ಭಾಷೆಯ ಮೇಲೆ ಗೌರವಾದರ ಬೆಳೆಸಿಕೊಳ್ಳಬೇಕು ಎಂಬುದೆ ಮೂಲ ಆಶಯ. ಎಲ್ಲಿಂದಲೊ ಗುಜರಾತಿಗೆ ಓಡಿ ಬಂದ ಪಾರ್ಸಿಗಳು ರಾಜಾಶ್ರಯ ಬೇಡಿದಾಗ, ಅಲ್ಲಿನ ರಾಜ ಕಂಠಪೂರ್ತಿ ಹಾಲು ತುಂಬಿದ್ದ ತಂಬಿಗೆಯೊಂದನ್ನು ತೋರಿಸಿದನಂತೆ ನಾವೆ ತುಂಬಿ ತುಳುಕುತ್ತಿದ್ದೇವೆ, ಬೇರೆಯವರಿಗೆ ಜಾಗವಿಲ್ಲ ಎನ್ನುವ ಸಾಂಕೇತಿಕತೆಯಲಿ (ಬಹುಶಃ ಹಾಲಿನಂತಿರುವ ರಾಜ್ಯವನ್ನು ಕಲುಷಿತಗೊಳಿಸಬಿಡುವುದಿಲ್ಲ ಎನ್ನುವ ಸಂಕೇತವೂ ಇರಬಹುದೇನೊ). ಆದರೆ ಆ ಪಾರ್ಸಿ ಗುಂಪಿನ ಅರ್ಚಕರೊಬ್ಬರು ಅಲ್ಲೆ ಹತ್ತಿರವಿದ್ಸ ಸಕ್ಕರೆಯ ಬಟ್ಟಲೊಂದರಿಂದ ಸ್ವಲ್ಪ ಸಕ್ಕರೆಯನ್ನು ತೆಗೆದುಕೊಂಡು ಬೆರೆಸಿ ಹಾಕಿ ಕಲಕಿದರಂತೆ - 'ಸಕ್ಕರೆಯ ಹಾಲಂತೆ ಬೆರೆಯುತ್ತೇವೆ' ಎನ್ನುವ ಸಂಕೇತದಲ್ಲಿ. ಆಮೇಲಿನದೆಲ್ಲ ಇತಿಹಾಸ, ಆಶ್ರಯ ಸಿಕ್ಕಿದ ನಾಡಲ್ಲಿ ಅವರು ಏನೆಲ್ಲ ಸಾಧಿಸಿದರು ಎಂಬುದನ್ನು ಪರಿಗಣಿಸಿದರೆ. ದುರಂತವೆಂದರೆ ಅವರ ಜನಸಂಖ್ಯೆ ಕ್ಷೀಣಿಸುತ್ತ 60-70 ಸಾವಿರ ಮಟ್ಟಕ್ಕೆ ಬಂದಿದೆಯಂತೆ; 2020ಕ್ಕೆ ಸುಮಾರು 20 ಸಾವಿರವಾಗಲಿದೆಯೆಂದು ಅಂದಾಜು. ಅದಕ್ಕೆಂದೆ 'ಜೀಯೋ ಪಾರ್ಸಿ' ಕಾರ್ಯಕ್ರಮ ಶುರುವಾಗಿದೆ (ಇತ್ತೀಚಿನ ಕನ್ನಡ ಪ್ರಭದ 'ಬೆತ್ತಲೆ ಪ್ರಪಂಚ' ಅಂಕಣದಲ್ಲಿ ಈ ಕುರಿತು ಲೇಖನ ಬಂದಿತ್ತು. ಎನ್ಡಿಟೀವಿಯಲ್ಲೂ ಕಾರ್ಯಕ್ರಮವಿತ್ತಂತೆ)
.
ಸಾಂಸ್ಕೃತಿಕವಾಗಿ ಬೆರೆಯುವ ಮನೋಭಾವವಿದ್ದರೆ, ಎಲ್ಲರೂ ಎಲ್ಲೆಡೆಗೂ ಬಂದು ಸಹಜವಾಗಿ ಬೆರೆತು ಜೀವಿಸಬಹುದು - ಹಾಲಿನ ಸಕ್ಕರೆಯಾಗಿ ಮಾತ್ರವಲ್ಲ, ಕೇಸರಿ, ಅರಿಶಿನವಾಗಿ ಸಹ.
.
ಧನ್ಯವಾದಗಳೊಂದಿಗೆ

-ನಾಗೇಶ ಮೈಸೂರು

Submitted by venkatb83 Wed, 11/06/2013 - 17:50

In reply to by nageshamysore

"ಸಾಂಸ್ಕೃತಿಕವಾಗಿ ಬೆರೆಯುವ ಮನೋಭಾವವಿದ್ದರೆ, ಎಲ್ಲರೂ ಎಲ್ಲೆಡೆಗೂ ಬಂದು ಸಹಜವಾಗಿ ಬೆರೆತು ಜೀವಿಸಬಹುದು - ಹಾಲಿನ ಸಕ್ಕರೆಯಾಗಿ ಮಾತ್ರವಲ್ಲ, ಕೇಸರಿ, ಅರಿಶಿನವಾಗಿ ಸಹ."

ನವೆಂಬರ್ ಮೊದಲ ದಿನ ಮತ್ತು ನಂತರದ ಕೆಲ ದಿನಗಳವರೆಗೆ ಮಾತ್ರ ಕನ್ನಡದ ಬಗ್ಗೆ ಅಬ್ಬರ ಬೊಬ್ಬೆ ಕೂಗು -ಅದೇ ಸವಕಲು ಭಾಷಣ ಆಶ್ವಾಶನೆ ,ಗುರಿ ಧ್ಯೇಯ -ಛಲ ಇತ್ಯಾದಿ ಪದಗಳ ವ್ಯಾಪಕ ಬಳಕೆ ನಂತರ ಯಥಾಪ್ರಕಾರ -........... ಇದೇ ಮರುಕಳಿಸೋದು ಮತ್ತೆ ಮುಂದಿನ ನವೆಂಬರ್ಗೆ ...;(((

ಈ ದಿನ ಹಾರಿಸಿದ -ಹಾರಿಸುವ ಬಾವುಟಗಳ ನಂತರದ ದಿನಗಳ ದುಸ್ಥಿತಿ ಏನು ಹೇಳೋದು ??
ಆ ಬಗ್ಗೆ ನಮ್ಮ ಗಣೇಶ್ ಅಣ್ಣ ಅವರು ಕೆಲ ದಿನಗಳ ಹಿಂದೆ ಚಿತ್ರ ಸಮೇತ ಹಾಕಿ ಬರೆದಿರುವರು ..!
ಅದು ಹರಿದು ಚಿಂದಿಯಾಗಿ -ಬಣ್ಣ ಕಳೆದುಕೊಂಡು ತೇಲಾಡೋದು ....
ನಡು ನುಡಿ ಬಗ್ಗೆ ಭಾಷಣ ಬಿಟ್ಟು ಅದನ್ನು ನಡೆ ನುಡಿಯಲ್ಲಿ ತೋರಿಸಬೇಕು ಅಳವಡಿಸಿಕೊಳ್ಳಬೇಕು . ಈ ಹಿಂದೆ ಎಂ ಜಿ ರೋಡಲ್ಲಿ ಕೆಲಸ ಮಾಡುವಾಗ ಅಲ್ಲಿನ ಅನ್ಯ ರಾಜ್ಯ ಜನ ಮತ್ತು ವಿದೇಶಿಯರಿಗೆ ಕನ್ನಡ ಕಲಿಸಿ ಅವರು ನನ್ನೊಡನೆ ನಮ್ಮೊಡನೆ ಕನ್ನಡದಲ್ಲಿಯೇ ಮಾತಾಡುವ ಹಾಗೆ ಮಾಡಿದ್ದೆವು .. ಈಗಲೂ ಹಲವು ಜನ ಕನ್ನಡದಲ್ಲಿಯೇ ವ್ಯವಹರಿಸುವರು ..
ಈಗಲೂ ನಮ್ ಆಫೀಸಿಗೆ ಬರುವ ಜನರಿಗೆ ಮತ್ತು ನಾವ್ ಆಫೀಸು ಮನೆಗಳಿಗೆ ಸರ್ವೀಸ್ಗೆ ಹೋದಾಗ ಕನ್ನಡದಲ್ಲಿಯೇ ಮಾತಾಡಿ (ತೀರ ಕಡಿಮೆ ಸಂದರ್ಭದಲ್ಲಿ ಅತಿ ಅವಶ್ಯ ಅಲ್ಲದ ಹೊರತು ಹಿಂದಿ ಆಂಗ್ಲ ಭಾಷೆ ನಾವ್ ಮಾತಾಡಿಲ್ಲ ) ಅವರಿಗೂ ಕನ್ನಡ ಮಾತಾಡಬೇಕಾದ ಅನಿವಾರ್ಯತೆ ಬಗ್ಗೆ ತಿಳಿಸುವೆವು ..

ಇಂದಿಗೂ ಪ್ರಕಟ ಆಗುವ ಎಲ್ಲ ದಿನ ಪತ್ರಿಕೆ -ವಾರ ಪತ್ರಿಕೆ -ಪಾಕ್ಷಿಕ -ವಾರ್ಷಿಕ ವಿಶೇಷಗಳನ್ನು ಓದುವ ಕನ್ನಡ ಕಾರ್ಯಕ್ರಮ - ಸಿನೆಮ ನೋಡುವ ಜನರ ಸಂಖ್ಯೆಗೇನೂ ಕಡಿಮೆ ಇಲ್ಲ . ಅದು ನನ್ನ ಸ್ವ ಅನುಭವ ..
ಅಂತರ್ಜಾಲದಲ್ಲಿ -ದೈನಂದಿನ ವ್ಯವಹಾರ ಬಳಕೆಯಲ್ಲಿ ಈಗಲೂ ಹಲವು ಜನ ಕನ್ನಡಿಗರು ಕನ್ನಡದಲ್ಲಿಯೇ ವ್ಯವಹರಿಸುವರು . ಅನ್ಯ ರಾಜ್ಯದವರಿಗೂ ಅದರ ಅಗತ್ಯತೆ ಈಗ ಮನದಟ್ಟಾಗಿದೆ -ನಮ್ ಮೆಟ್ರೋ -ಬೀ ಎಂ ಟಿ ಸಿ - ಕೆ ಎಸ್ ಆರ್ ಟಿ ಸಿ ಇತ್ಯಾದಿ ಸಹ ದ್ವಿ ಭಾಷ ತ್ರಿ ಭಾಷ ಮೂಲಕ ಆ ಕೆಲಸ ಮಾಡುತ್ತಿವೆ ..

ಕನ್ನಡ ನಾಡು ನುಡಿ ಬಗ್ಗೆ ನಾ ಈಗಲೂ ಮುಂದೂ ಆಶಾವಾದಿ ..
ಕನ್ನಡ ನುಡಿ ನಮ್ ರಕ್ತದಲ್ಲಿಯೇ ನೆಲೆಸಿದೆ ,ಈ ನಾಡಲ್ಲಿ ಹುಟ್ಟಿದ ನಾವೆಸ್ಟು ಧನ್ಯ ಎಂದು ಅರಿವಾಗಿದ್ದು ಈ ಹಿಂದೆ ಹಲವು ಮಹನೀಯರು ಆ ಬಗ್ಗೆ ಹೇಳಿದ್ದಾಗ -ಅದು ಸ್ವತಹ ಮನದಟ್ಟಾಗಿದ್ದು ಮೊನ್ನೆ ದಸರಾಕ್ಕೆ ಮೈಸೂರಿಗೆ ಹೋದಾಗ . ಆ ಅಂಬಾರಿ - ಅರಮನೆ -ಆ ಮಹಾ ಜನತೆ -ಹರ್ಷೋದ್ಘಾರ -ಕರಾಡತನ ,ಸಂಭ್ರಮ ನಾ ಬಣ್ಣಿಸಲು ಅಶಕ್ಯ .. ಈ ಹಿಂದೆ ಹಲವು ಸಾರಿ ಹೋಗಬೇಕು ಎಂದುಕೊಂಡು ಹೋಗಲು ಆಗದೆ -ಈಗಲೂ ಹಾಗೆ ಆಗೋದು -ಆದರೆ ಧುತ್ತನೆ ಹಿಂದಿನ ದಿನ ಕೆಎಸ್ಆರ್ಟಿಸಿ ವಜ್ರ ಟಿಕೆಟ್ ಬುಕ್ ಮಾಡಿ ಹೋಗಿ ನೋಡಿ ದಸರ ವಸ್ತು ಪ್ರದರ್ಶನ - ಜಂಬೂ ಸವಾರಿ ನೋಡಿ ಧನ್ಯರಾದೆವು ..

ನಾವ್ ಕನ್ನಡಿಗರು- ನಾವ್ ಧನ್ಯರು ..

ಶುಭವಾಗಲಿ
\।/

Submitted by venkatb83 Wed, 11/06/2013 - 17:52

In reply to by venkatb83

>>>ಮೇಲಿನ ನನ್ ದೀರ್ಘ ಪ್ರತಿಕ್ರಿಯೆ ಅರ್ಧ ಬಂತು -ಮತ್ತೊಮ್ಮೆ ಅದರ ಉಳಿದ ಭಾಗ ಇಲ್ಲಿ

ಕನ್ನಡ ನಾಡು ನುಡಿ ಬಗ್ಗೆ ನಾ ಈಗಲೂ ಮುಂದೂ ಆಶಾವಾದಿ ..
ಕನ್ನಡ ನುಡಿ ನಮ್ ರಕ್ತದಲ್ಲಿಯೇ ನೆಲೆಸಿದೆ ,ಈ ನಾಡಲ್ಲಿ ಹುಟ್ಟಿದ ನಾವೆಸ್ಟು ಧನ್ಯ ಎಂದು ಅರಿವಾಗಿದ್ದು ಈ ಹಿಂದೆ ಹಲವು ಮಹನೀಯರು ಆ ಬಗ್ಗೆ ಹೇಳಿದ್ದಾಗ -ಅದು ಸ್ವತಹ ಮನದಟ್ಟಾಗಿದ್ದು ಮೊನ್ನೆ ದಸರಾಕ್ಕೆ ಮೈಸೂರಿಗೆ ಹೋದಾಗ . ಆ ಅಂಬಾರಿ - ಅರಮನೆ -ಆ ಮಹಾ ಜನತೆ -ಹರ್ಷೋದ್ಘಾರ -ಕರಾಡತನ ,ಸಂಭ್ರಮ ನಾ ಬಣ್ಣಿಸಲು ಅಶಕ್ಯ .. ಈ ಹಿಂದೆ ಹಲವು ಸಾರಿ ಹೋಗಬೇಕು ಎಂದುಕೊಂಡು ಹೋಗಲು ಆಗದೆ -ಈಗಲೂ ಹಾಗೆ ಆಗೋದು -ಆದರೆ ಧುತ್ತನೆ ಹಿಂದಿನ ದಿನ ಕೆಎಸ್ಆರ್ಟಿಸಿ ವಜ್ರ ಟಿಕೆಟ್ ಬುಕ್ ಮಾಡಿ ಹೋಗಿ ನೋಡಿ ದಸರ ವಸ್ತು ಪ್ರದರ್ಶನ - ಜಂಬೂ ಸವಾರಿ ನೋಡಿ ಧನ್ಯರಾದೆವು ..

ನಾವ್ ಕನ್ನಡಿಗರು- ನಾವ್ ಧನ್ಯರು ..

ಶುಭವಾಗಲಿ
\।/

Submitted by nageshamysore Fri, 11/08/2013 - 03:05

In reply to by venkatb83

ಸಪ್ತಗಿರಿಗಳೆ, ನವೆಂಬರಿನ ತಿಂಗಳಿನಲ್ಲಿ ಮಾತ್ರ ಸದ್ದು ಮಾಡುವ ರಾಜ್ಯೋತ್ಸವದ ಆಚರಣೆಯ ಬಗ್ಗೆ ಪ್ರತಿ ವರ್ಷವೂ ನವೆಂಬರಿನಲ್ಲಿ ಮಾತ್ರವೆ ಕೇಳುತ್ತಾ ಇರುತ್ತೇವೆ. ಆದರೆ ಈಗಿನ ಮಾಹಿತಿ ಮತ್ತು ಇಂಟರ್ನೆಟ್ಟಿನ ಯುಗದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಸಾಧ್ಯತೆ ಹೆಚ್ಚಿದೆ ( ಮೊದಲಿಗೆ ಹೋಲಿಸಿದರೆ ). ಯಾರು ಎಲ್ಲೆ ಇದ್ದರೂ ಯಾವುದೊ ಒಂದು ರೀತಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವ ಮೊದಲಿಗಿಂತ ಜಾಸ್ತಿಯಿರುವುದರಿಂದ ಅಭಿಮಾನವಿದ್ದೂ ಏನು ಮಾಡಲು ಸಾಧ್ಯವಿರದಿದ್ದವರು, ಈಗ ಏನಾದರೂ ಮಾಡಲು ಪ್ರೇರೇಪಣೆ ಸಿಗುತ್ತದೆ. ಹಾಗಾಗಿ ನಿಮ್ಮಂತೆ ನಾನೂ ಆಶಾವಾದಿ. ಉದಾಹರಣೆಗೆ ತೆಗೆದುಕೊಂಡರೆ ಸಂಪದದ ರೀತಿಯ ವೇದಿಕೆಗಳೆ ಇದಕ್ಕೊಂದು ಸಾಕ್ಷಿ. ಈಚೆಗೆ ಗೂಗಲ್ ತೆಗೆದಾಗ ಪರದೆಯ ಮೇಲೆ ಕನ್ನಡದಲ್ಲಿ ಕೊಂಡಿಗಳು ಕಾಣಿಸಿಕೊಳ್ಳುತ್ತಿವೆ. ಇವೆಲ್ಲ ನೇರವಾಗಿಯೊ, ಪರೋಕ್ಷವಾಗಿಯೊ ಸಹಕರಿಸುವುದಂತೂ ಸತ್ಯ. ಆದರೆ ಇದೆಲ್ಲದಕ್ಕೂ ಮೀರಿದ ಪ್ರಮುಖ ಅಗತ್ಯವೆಂದರೆ ಹಳಬರಿಂದ ಹಿಡಿದು ಎಲ್ಲಾ ಪೀಳಿಗೆಯವರಲ್ಲೂ ಈ ಭಾಷಾಭಿಮಾನ ಸದಾ ಜಾಗೃತವಾಗಿರುವುದು, ಮತ್ತು ಸತತ ದಾಟಿಸುತ್ತ ಸಾಗುವುದು. ಈ ನಿಟ್ಟಿನಲ್ಲಿ ಸಿಕ್ಕ ಸಣ್ಣ ಪುಟ್ಟ ಅವಕಾಶಗಳಲ್ಲೂ ,ಪರನಾಡಿನವರಿಗೆ ಕಲಿಸುವ ನಿಮ್ಮ ಯತ್ನ ಸ್ತುತಾರ್ಹ. ಹನಿಹನಿಗೂಡಿದರೆ ಹಳ್ಳವಲ್ಲವೆ?

Submitted by H A Patil Wed, 11/06/2013 - 20:11

In reply to by nageshamysore

ನಾಗೇಶ ಮೈಸೂರು ರವರಿಗೆ ವಂದನೆಗಳು
ತಮ್ಮ ಮರು ಪ್ರತಿಕ್ರಿಯೆಯನ್ನು ಇಂದು ನೋಡಿದೆ, ಗೊತ್ತಿಲ್ಲದ ಹಲವು ವಿಷಯಗಳನ್ನು ತಿಳಿಸಿದ್ದೀರಿ ಜೊತೆಗೆ ಸಾಂಸ್ಕೃತಿಕವಾಗಿ ಬೆರೆಯುವ ಮನೋಬಾವದ ಕುರಿತು ದಾಖಲಿಸಿದ್ದೀರಿ ಇದು ಬಹಳ ನಿಜ ಆ ಮನೋಭಾವ ಬಂದರೆ ಯಾವುದೇ ದೇಶದ ಯಾವುದೇ ಭಾಷೆ ಸಂಸ್ಕೃತಿ ಅವನತಿ ಹೊಂದುವುದು ಸಾಧ್ಯವೇ ಇಲ್ಲ, ಇದು ನಿಜವಾದ ಭಾಷಾ ಸಂಸ್ಕೃತಿ ಧನ್ಯವಾದಗಳು.

Submitted by nageshamysore Fri, 11/08/2013 - 19:03

In reply to by H A Patil

ಪಾಟೀಲರೆ ನಮಸ್ಕಾರ, ಸಂಸ್ಕೃತಿಯ ಸಾಮರಸ್ಯದ ವಿಷಯಕ್ಕೆ ಬಂದಾಗ ಮತ್ತೊಂದು ಸ್ಥಳೀಯ ವಿಷಯ ನೆನಪಿಗೆ ಬಂತು. ಸಿಂಗಾಪುರದಲ್ಲೂ ಹಲವಾರು ತರದ ಮತ ಧರ್ಮದ, ಬೇರೆ ಜನಾಂಗೀಯ ಮೂಲದ ಜನಗಳು ಒಟ್ಟಾಗಿ ವಾಸಿಸುತ್ತಿದ್ದಾರೆ. ಇಲ್ಲೊಂದು ವಿಶೇಷ ಏನೆಂದರೆ ಸರಕಾರದಿಂದಲೆ ಜಾರಿಯಲ್ಲಿರುವ ಕೆಲವು ಕಾನೂನು ನಿಯಮಗಳು: ಉದಾಹರಣೆಗೆ ಸರಕಾರದ ಹೌಸಿಂಗ್ ಬೋರ್ಡಿನ ಮನೆಗಳನ್ನು ಹಂಚಬೇಕಾಗಿದೆ ಎನ್ನಿ. ಪ್ರತಿ ಫ್ಲಾಟ್ ಕಟ್ಟಡದಲ್ಲಿ ಶೇಕಡಾ ಇಂತಿಷ್ಟು ಎಂದು ಪ್ರತಿ ಜನಾಂಗೀಯ ಮೂಲದ ಆಧಾರದ ಮೇಲೆ ನಿರ್ಧರಿಸಿ ನಿಗದಿಪಡಿಸಿಬಿಟ್ಟಿರುತ್ತಾರೆ. ಉದಾಹರಣೆಗೆ ಒಂದು ಕಟ್ಟಡದಲ್ಲಿ ಮನೆ ಖಾಲಿಯಿದ್ದರು ಆ ಜನಾಂಗದ (ಉದಾಹರಣೆಗೆ ಭಾರತೀಯ ಮೂಲದ ಪ್ರಜೆಗಳ) 'ಕೋಟಾ' ಈಗಾಗಲೆ ತುಂಬಿಹೋಗಿದ್ದರೆ ಆ ಮನೆಯನ್ನು ಅವರು ಖರೀದಿಸುವಂತಿಲ್ಲ. ಯಾರ ಕೋಟಾ ಇನ್ನೂ ಖಾಲಿಯಿದೆಯೆ ಅವರು ಮಾತ್ರ ಕೊಳ್ಳಬಹುದು. ಹಾಗೆಯೆ,  ಹೊರಗಿನಿಂದ ಬಂದವರು ನೇರ ಎಚ್.ಡಿ.ಬಿ ಯಿಂದ ಮನೆಕೊಳ್ಳುವಂತಿಲ್ಲ - ಅದೇನಿದ್ದರೂ ಸ್ಥಳೀಯ ಪ್ರಜೆಗಳಿಗೆ ಮಾತ್ರ. ಇಲ್ಲಿನ ನಿರಂತರ ವಾಸಿಗಳಿಗೆ ಮಾತ್ರ 'ಮರು ಖರೀದಿ'ಗೆ ಅವಕಾಶವಿರುತ್ತದೆ ಆದರೆ ಹೆಚ್ಚಿದ ಬೆಲೆಯಲ್ಲಿ , ಯಾವುದೆ ಸಬ್ಸಿಡಿಗಳಿಲ್ಲದೆ (ಅಂದರೆ ಯಾರದರೊಬ್ಬರಿಂದ ಎರಡನೆ ಕೈಯಾಗಿ ಕೊಳ್ಳುವುದು - ಅಲ್ಲೂ ಸಹ ಜನಾಂಗಿಯ ಕೋಟಾ ನಿಯಮ ಬಳಕೆಯಾಗುತ್ತದೆ !)

ಇಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಒಂದೆಡೆ ಎಲ್ಲಾ ಜನಾಂಗಿಯರೂ ಒಟ್ಟಾಗಿ ಒಂದೆ ಕಡೆ ಸೇರಿಸಿ ಒಗ್ಗೂಡಿ ಬಾಳುವುದನ್ನು ಅನಿವಾರ್ಯವಾಗಿಸುವ ಪ್ರಯತ್ನ ಕಂಡರೆ ಮತ್ತೊಂದೆಡೆ ಸ್ಥಳೀಯರಿಗಿರುವ ಸವಲತ್ತುಗಳು ಹೊರಗಿಂದ ಬಂದವರಿಗಿರುವ ಸವಲತ್ತುಗಳಲ್ಲಿ ವ್ಯತ್ಯಾಸ ಇಟ್ಟು, ಸ್ಥಳೀಯರಿಗೆ ಕೊಡುವ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ. ಇದೊಂದು ಸಮತೋಲನದ ತಕ್ಕಡಿ - ಕಾಲಕಾಲಕ್ಕೆ ಸಣ್ಣ ಪುಟ್ಟ ಬದಲಾವಣೆಗಳ ಜತೆಜತೆಗೆ ಸಾಗುತ್ತಿದೆ. ಚೀನಾದಂತಹ ದೇಶದಲ್ಲೂ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಹೋಗಿ ಕೆಲಸ ಮಾಡಲು ಕೆಲವು ರೀತಿಯಲ್ಲಿ ಪೂರ್ವಶರತ್ತಿಗೆ ಬದ್ದರಿರಬೇಕಾಗುತ್ತದೆ. ಆ ದೃಷ್ಟಿಯಲ್ಲಿ ನಮ್ಮಲ್ಲಿ ಯಾವುದೆ ನಿಯಂತ್ರಣ ಹತೋಟಿಯನಿಡದ ಸ್ವಾತ್ಯಂತ್ರದ ವಾತಾವರಣವಿದೆ. ಅದನ್ನು ದುರುಪಯೋಗಪಡಿಸಿಕೊಳ್ಳದೆ ಸದುಪಯೋಗಿಸಿಕೊಂಡರೆ ಎಲ್ಲರಿಗೂ ಒಳಿತಾಗುವುದರಲ್ಲಿ ಸಂಶಯವಿಲ್ಲ.