ಮಂಗಳ ಗ್ರಹಕ್ಕೊಂದು ಕಲ್ಲು

Submitted by nageshamysore on Thu, 11/07/2013 - 08:38

ಇಸ್ರೋ ಈ ದೀಪಾವಳಿಯನ್ನು ವಿಶಿಷ್ಠವಾಗಿ ಆಚರಿಸಿಕೊಂಡಿದೆ.  ಪಟಾಕಿಯ ರಾಕೆಟ್ಟು ಬಿಟ್ಟು ಭೂಮಿಯ ಹದಗೆಟ್ಟ ವಾತಾವರಣವನ್ನು ಮತ್ತಷ್ಟು ಹದಗೆಡಿಸುವ ಬದಲು ನಿಜವಾದ ರಾಕೆಟ್ಟೊಂದನ್ನು ನೆರೆಮನೆಯ ಮಂಗಳನತ್ತ ಹಾರಿಸಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿಬಿಟ್ಟಿದೆ. ಜತೆಗೆ ಎಲ್ಲೆಡೆ ವಾದ, ಸಂವಾದ, ವಿವಾದಗಳನ್ನು ಹುಟ್ಟುಹಾಕಿದೆ - ನಮ್ಮ ದೇಶದ ಈಗಿನ ಸ್ಥಿತಿಯಲ್ಲಿ ಇದು ಸಂಗತವೆ, ಅಸಂಗತವೆ, ಸಾಧುವೆ - ಇತ್ಯಾದಿ. ಇದರ ನಡುವೆ ವಿದೇಶಿ ಮಾಧ್ಯಮಗಳೂ ಸಹ ಎಚ್ಚರಿಕೆಯಿಂದ ಪ್ರತಿಕ್ರಿಯಿಸುತ್ತ ಈ 'ಅಲ್ಪ ವೆಚ್ಚದ' ಮಂಗಳಯಾನದ ಕುರಿತು ಶಭಾಶಗಿರಿ, ಅಚ್ಚರಿ ವ್ಯಕ್ತಪಡಿಸಿವೆ. ನಡುವೆ ವಿಜ್ಞಾನಿ ಸಮೂಹಗಳು ಇದರ ತಾಂತ್ರಿಕತೆಯ ನಾವೀನ್ಯತೆಯ ಕುರಿತು ಮೂಗು ಮುರಿಯುತ್ತ, ನೇರ ಉಡಾವಣೆಯಲ್ಲದ ಪರೋಕ್ಷ ವಿಧಾನಕ್ಕೆ ಆಕ್ಷೇಪಣೆಯೆತ್ತಿವೆ (ಉಡವಾಣೆಯಾದ ಮೊದಲ ತಿಂಗಳಷ್ಟು ಕಾಲ ಭೂಮಿಯ ಪರಿಧಿಯಲ್ಲೆ ಸುತ್ತುತ್ತ, ನಂತರ ಸರಿದು ಮಂಗಳನ ಕಕ್ಷೆಯತ್ತ ಸಾಗುವ ವಿಧಾನದಿಂದಾಗಿ ಸಮಯವೂ ಹೆಚ್ಚು ಹಿಡಿಯುತ್ತದೆಂಬ ವಾದ). 
.
ಆದರೆ ಇದೆಲ್ಲವನ್ನು ಮೀರಿ ನಾವು ನೋಡಬೇಕಾದ ಮಹತ್ತರ ಅಂಶವೆಂದರೆ - ಅಂತಿಮ ಫಲಿತ. ಇದು ಸಂಪೂರ್ಣ ಯಶಸ್ವಿಯಾಗುವುದೊ ಇಲ್ಲವೊ ತಿಳಿಯಲು ಇನ್ನು ಒಂಭತ್ತು ತಿಂಗಳು ಕಾಯಬೇಕು. ಆ ಲೆಕ್ಕದಲ್ಲಿ ಹೇಳಬೇಕಾದರೆ ಈಗ ಸಿಕ್ಕಿರುವ ಯಶಸ್ಸು, ಅಭಿನಂದನೆಯೆಲ್ಲವು ಕೇವಲ ಬಸಿರಾದ ಸುದ್ದಿಗೆ ಮಾತ್ರ. ಗರ್ಭಪಾತವಾಗದೆ, ಯಾವುದೆ ಅವಘಡಕ್ಕೆ ಒಳಗಾಗದೆ ಮಂಗಳನ ಕಕ್ಷೆ ದಾಟಿ ಅವನಂಗಳಕ್ಕೆ ಇಳಿದ ಪ್ರಸವದ ಸುದ್ದಿ ಬರುವತನಕ ಇದು ಅರೆಬರೆ ಜಯ ಮಾತ್ರ. ಇಳಿದ ಮೇಲೂ ಶೈಶವಾವಸ್ಥೆಯಿಂದ ಬಾಲಾವಸ್ಥೆ ದಾಟಿ ನಡೆದು ನಿಂತಾಡುವ ಕೆಲಸವೂ ಬಾಕಿಯುಂಟು. ಅಂದರೆ ಇದನ್ನೆಲ್ಲವನ್ನು ಮುಂದಿನ ದಿನಗಳಲ್ಲಿ ನಮ್ಮ ವಿಜ್ಞಾನಿಗಳ ತಂಡ ದಕ್ಷತೆ, ಕಾರ್ಯಕ್ಷಮತೆ, ಎಚ್ಚರಿಕೆಯಿಂದ ನಿರ್ವಹಿಸಬೇಕಿದೆ. ಈ ಹಂತದಲ್ಲಿ ಅವರಿಗೆ ನೀಡಬೇಕಾದ್ದು ಬೆನ್ನು ತಟ್ಟಿ ಪ್ರೋತ್ಸಾಹಿಸುವ ದನಿ; ಆತ್ಮವಿಶ್ವಾಸ ಕುಗ್ಗಿಸಿ, ಸ್ಥೆರ್ಯಗೆಡಿಸುವ ಅವಹೇಳನವಾಗಲಿ, ಕಾಲೆಳೆಯುವಿಕೆಯಾಗಲಿ ಅಲ್ಲ. ಈ ಮಾತುಗಳಿಂದ ಅವರಲ್ಲಿ ಸೋಲಬಾರದೆಂಬ ಛಲವೂ ಹುಟ್ಟುವುದಾದರೂ ತೀರಾ ಅತಿಯಾದ ತೆಗಳಿಕೆ, ಕೀಳು ನುಡಿಗಳು ಗಮ್ಯದಿಂದ ವಿಚಲಿತರಾಗುವಂತೆ ಗಲಿಬಿಲಿಗೊಳಿಸುವ ಸಾಧ್ಯತೆಯೂ ಇಲ್ಲದಿಲ್ಲ. 
.
ಇದೆಲ್ಲಾ ಹಿನ್ನಲೆಯಲ್ಲಿ ಈ ಉಡ್ಡಯನ ಯಾನವನ್ನು ನೋಡಬೇಕಿದೆ. ಇದರಿಂದೇನು ಪ್ರಯೋಜನವೆನ್ನುವ ಮಾತು ಸಾಕಷ್ಟು ಕೇಳಿಬಂದಿದೆ. ಆದರೆ ನೆನಪಿರಲಿ - ಇಂದು ಎಲ್ಲರು ಚೀನಿ ಪದಾರ್ಥಕ್ಕೆ ಮುಗಿಬಿಳಲೊಂದು ಮುಖ್ಯ ಕಾರಣ ಅಗ್ಗದ ಸರಕು ಎಂದು. ಈ ತಾಂತ್ರಿಕತೆಯು ಹೋಲಿಕೆಯಲ್ಲಿ ಬಲು ಅಗ್ಗದ ಯಾನ. ಇದನ್ನೆ ಸಮರ್ಥವಾಗಿ ಸೂಕ್ತ ಮಾರುಕಟ್ಟೆಯಲ್ಲಿ ಮಾರುವ ಸಾಧ್ಯತೆಗಳೂ ಇದ್ದೆ ಇರುತ್ತದೆ. ಎಲ್ಲಕ್ಕಿಂತ ಮುಖ್ಯವಾದದ್ದು - ಈಗಿನ ಜಾಗತಿಕ ಗೋಮಾಳದಲ್ಲಿ ಈ ಯಾನದ ದೆಸೆಯಿಂದ ಎದೆಯೆತ್ತಿ, ತಲೆಯೆತ್ತಿ ನಿಲ್ಲುವಂತೆ ಮಾಡಿದೆ, ಹತ್ತಲವಾರು ಸಂಕಟಗಳ ನಡುವೆಯೆ. ಅದಕ್ಕೆಂದೆ ಸದ್ಯಕ್ಕೊಂದು ಎಚ್ಚರಿಕೆಯ ಅಭಿನಂದನೆ ಹೇಳುವ ಪುಟ್ಟ ಯತ್ನ ಈ ಕವನದ್ದು.
.
.
ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
.
.
ಮಂಗಳ ಯಾನ, ಅಗ್ಗದ ಜಾಣ !
_____________________
.
ಮಂಗಳನ ಅಂಗಳಕೆ ಕಳಿಸಿದ್ದು ಪಾತ್ರೆ
ಜೋಮು ಹಿಡಿದ ಮನಗಳಿಗಿತ್ತ ಮಾತ್ರೆ
ಹತಾಶೆ ನಿರಾಶೆ ನಿರಭಿಮಾನದ ಮಧ್ಯೆ
ಚಿಮ್ಮಿತಾಕಾಶಕೆ ಅಂಗಾರಕನರಸಿ ವಿದ್ಯೆ ||
.
ಕುಜದೋಷವೆಂದರು ಮಂಗಳ ಕೆಂಪಣ್ಣ
ಕೆಂಪಿನೊಳಗೇನಿದೆ ಅರಿಯಲೀ ಪಯಣ
ಕೆಂಪು ಗ್ರಹ ಕೋಪದಲಿ ಬೀರಿ ಕೆಂಗಣ್ಣು
ವಿಫಲವಾಗಿಸದಿರಲಿ ಕುಜಯಾನವನ್ನು ||
.
ತಿರುಪತಿಯಲಿ ಪ್ರತಿಕೃತಿ ಇಟ್ಟೆ ಪೂಜೆ
ವಿಜ್ಞಾನದಾ ಪ್ರಗತಿ ಯಾಕದರ ಗೋಜೆ
ಎಂದವರ ಭಾವ ಅನ್ನದವರ ಅನುಭವ
ಕೈಲ್ಲಾದು ಮಾಡಿ ಕೈಚೆಲ್ಲೊ ವೈದ್ಯ ಶಿವ ||
.
ತಡಕಾಡಿದೆ ಹೊಟ್ಟೆ, ನೂರೆಂಟು ತಪನೆ
ಬೇಕಿತ್ತೆ ಜುಟ್ಟಿಗೆ ಮಲ್ಲಿಗೆ ಹೂ ಯಾತನೆ
ಎಂದವರದು ಸತ್ಯ, ಅನದವರದೆ ನಿತ್ಯ
ತಪನೆಗಳ ನಡುವೆ ಹುಡುಕುವ ವೈಚಿತ್ರ್ಯ ||
.
ಪಾತಾಳಕಿಳಿದಾ ಪ್ರತಿಷ್ಟೆ ನಮ್ಮ ಮಾತೆ
ಅತ್ಯಾಚಾರ ಅಪಮೌಲ್ಯ ಭ್ರಷ್ಟ ಸಂಹಿತೆ
ನೋಡುಗ ಜಗದಾ ಕಣ್ಣಲ್ಲಿ ನಗೆ ಪಾಟಲು
ಆಗುವ ನಡುವೆ ಇದಲ್ಲವೆ ಬೆನ್ನು ತಟ್ಟಲು ||
.
ಸಿಕ್ಕಲಿ ಬಿಡಲಿ ಕಲ್ಲುಮಣ್ಣಿನ ಚೂರುಗಳು
ಜ್ಞಾನಹಾದಿಯಲೇನಿದೆಯೊ ಅಳತೆಗಳು
ಸಿಕ್ಕರೂ ಸಿಗಬಹುದು ಹಿರಣ್ಯಗರ್ಭ ನಿಧಿ
ಏನಿಲ್ಲದಿದ್ದರೂ ನೆರೆಹೊರೆ ಗ್ರಹದ ಸನ್ನಿಧಿ ||

ತಾಂತ್ರಿಕತೆ ಹಳತೊ ಹೊಸತೊ ಅಮುಖ್ಯ
ಗುರಿ ಮುಟ್ಟಿದರೆ ಯಶಸ್ಸೆ ಜೀವನದ ಸತ್ಯ
ಕನಿಷ್ಠ ವೆಚ್ಚದಲಿ ಹಾರಲಿಲ್ಲವೆ ಉಡ್ಡಯನ
ಏನಿಲ್ಲವೆನ್ನಿ ತಾಂತ್ರಿಕತೆಯನೆ ಮಾರೋಣ ||
.
ಜಡ್ಡುಹಿಡಿದ ಮನಸುಗಳಿಗೊಂದು ಊಸಿ
ಕೊಟ್ಟಿದ್ದಂತು ನಿಜ ಇಸ್ರೋದ ಈ ಪ್ರವಾಸಿ
ಸುಖಪ್ರದವಾಗಿರಲಯ್ಯ ನಿನ್ನೀ ಪ್ರಯಾಣ
ಮರೆಯದಿರು ಬರೆಯಲು ಇತಿಹಾಸವನ್ನ ||
.
ಇನ್ನು ತಿಂಗಳುಗಳಿವೇ ಬಾಕಿ ನವ ಮಾಸ
ಈಗ ಗರ್ಭಿಣಿಯಾದ ಸುದ್ದಿ ತಿಳಿದ ಹರ್ಷ
ಬಾಣಂತಿಯಾಗುವತನಕ ಬಸಿರ ಆತಂಕ
ಜತನದಲಿ ಸಾಗಲಿ ಮೇರೆ ಮೀರದೆ ಲೆಕ್ಕ ||
.
ಸಹನೆಯಿಂದ ಕಾದು ನೋಡಲೆ ಸುದಿನ
ಟೀಕೆ ಟಿಪ್ಪಣಿ ಸದ್ಯಕೆ, ಪಕ್ಕಕೆ ಸರಿಸೋಣ
ಪೂರ್ಣವಾಗಲಿ ಯಾನ ಯಶಸಿನ ಧ್ಯಾನ
ಸ್ತಿಮಿತದೆ ಸೋಲುಗೆಲುವ ಸ್ವೀಕರಿಸೋಣ ||
.
.
ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
.