ದೀಪೋತ್ಸಾಹಂ ಭುವಂಗತೆ.
ಈ ಬಾರಿಯ ಬೆಳಕಿನ ಹಬ್ಬ ದೀಪಾವಳಿ ಇಂದಿನಿಂದ ಆರಂಭವಾಗುತ್ತಿದೆ (02.11.2013). ಮತ್ತೆ ಕಣ್ಮುಂದೆ ಹಿನ್ನಲೆಯಾಗಿ ಅನೇಕಾನೇಕ ಚಿತ್ರಗಳು - ಸೀತಾರಾಮಲಕ್ಷ್ಮಣರ ವನವಾಸ ಮುಗಿದು ಅಯೋಧ್ಯೆಗೆ ಹಿಂದಿರುಗಿದ್ದು, ನರಕಾಸುರ ವಧೆ, ವಾಮನ - ಬಲಿ ಚಕ್ರವರ್ತಿ ಪ್ರಕರಣ, ಲಕ್ಷ್ಮಿ ಪೂಜೆ - ನೀರು ತುಂಬುವ ಹಬ್ಬ ಇತ್ಯಾದಿ. ಹಾಗೆಯೆ ಬೆಂಗಳೂರಿನಲ್ಲಿದ್ದಾಗ ನೋಡಿದ್ದ ವರ್ತಕ ಸಮೂಹದ ದೀಪಾವಳಿ ವರ್ಷಾರಂಭದ ಸೊಗಡು, ವಿನಿಮಯವಾಗುತ್ತಿದ್ದ ಸಿಹಿತಿಂಡಿ ಪೊಟ್ಟಣಗಳು, ಒಣ ಹಣ್ಣುಗಳು; ಜೊತೆಗೆ ಮೂರು ರಾತ್ರಿಯ ಸದ್ದುಗದ್ದಲದ ನಂತರದ ಬೆಳಗಿನಲ್ಲಿ ವಾಕ್ ಹೊರಟರೆ ಬೀದಿಬೀದಿಯಲ್ಲೂ ಕಾಣುತ್ತಿದ್ದ, ಚೆಲ್ಲಾಡಿ ಚೂರುಚೂರಾಗಿ ಬಿದ್ದ ಸಿಡಿದ ಪಟಾಕಿಯ ಕಾಗದದ ಚೂರುಗಳು. ಎಲ್ಲವೂ ದೀಪಾವಳಿಗೆ ಮೆರುಗೀಯುವುದರ ಜತೆಗೆ ತುಸು ಆತಂಕವನ್ನು ಹುಟ್ಟಿಸುತ್ತಿದ್ದವು ಸಹಜವಾಗಿ.
ನಿಜ ಹೇಳಬೇಕೆಂದರೆ, ನಾವು ಚಿಕ್ಕವರಾಗಿದ್ದಾಗ ದೀಪಾವಳಿಯೆಂದರೆ ಮನಃಪಟಲದಲಿ ಮೂಡುತ್ತಿದ್ದ ಮೊದಲ ಚಿತ್ರ ಪಟಾಕಿ. ಕುದುರೆ, ಪಟಾಕಿ, ಆನೆ ಪಟಾಕಿ, ಲಕ್ಷ್ಮಿ ಪಟಾಕಿ, ಡಬ್ಬಲ್ ಸೌಂಡು, ಆಟಂಬಾಂಬ್ ಇತ್ಯಾದಿ. ಜತೆಗೆ ಸುರುಸುರುಬತ್ತಿ, ಮತಾಪು, ಹಾವಿನ ಗುಳಿಗೆ, ಭೂಚಕ್ರ, ವಿಷ್ಣು ಚಕ್ರ, ಪೆನ್ಸಿಲ್, ವೈರು, ಹೂಕುಂಡಗಳು ಸಹ ಇರುತ್ತಿದ್ದರೂ, ಗಂಡು ಹುಡುಗರಿಗೆ 'ಹೆಚ್ಚು' ಸದ್ದು ಮಾಡುವ ಪಟಾಕಿಗಳ ಮೇಲೆ ಮೊದಲ ಕಣ್ಣು. ಮನೆಯ ಮುಂದೆ ಬೆಳಕಿನ ವರ್ಷಧಾರೆಯ ಕಾರಂಜಿಯೆಬ್ಬಿಸುವ ಸದ್ದಿರದ ಪಟಾಕಿಗಳೆ ದೀಪಾವಳಿಯ ನಿಜವಾದ ಕಳೆಗಟ್ಟಿಸುತ್ತಿದ್ದರೂ, 'ನಾನು ಹೆಚ್ಚು ಸದ್ದಿನ ಪಟಾಕಿ ಹೊಡೆದೆ' ಎಂಬುದು ಹೆಮ್ಮೆಯ ವಿಷಯವಾಗುತ್ತಿತ್ತು, ಆ ದಿನಗಳಲಿ.
ಈಗ ಬದಲಾದ ಕಾಲ, ಪೀಳಿಗೆ. ಇನ್ನು ಮಕ್ಕಳು ಅದೆ ತರಹದ ಉತ್ಸಾಹದಲಿರುತ್ತಾರೊ, ಇಲ್ಲವೊ - ನಾನಂತೂ ನೋಡಲಾಗಿಲ್ಲ. ಆದರೆ ಶಾಲೆಗಳಲ್ಲಿನ ತಿಳುವಳಿಕೆಯ ಪರಿಣಾಮ, ಕೊಂಚ ಕಡಿಮೆಯಿರಬಹುದೆಂದೆ ಕಾಣುತ್ತದೆ - ಸಿಡಿದು ಆಗಬಹುದಾದ ಅಪಘಾತ, ಸುಟ್ಟಾಗಿನ ವಾತಾವರಣ ಕಲುಷಿತವಾಗುವುದರಿಂದ ಹಿಡಿದು, ಸದ್ದಿನಿಂದ ವಯಸಾದವರಿಗೆ, ಹಸೂಗೂಸುಗಳಿಗೆ, ಹಾಸಿಗೆ ಹಿಡಿದು ಮಲಗಿದವರಿಗೆ ಹಾಗೂ ಸದ್ದಿಗೆ ಭೀತರಾಗುವ ಆಳ್ಳೆದೆಯವರವರೆಗೆ ಉಂಟುಮಾಡುವ ಆತಂಕ, ಉದ್ವೇಗ , ಒತ್ತಡಗಳ ಪರಿಗಣನೆಯ ಜತೆ, ಶಿವಕಾಶಿಯಂತಹ ಜಾಗದಲ್ಲಿ ಇವನ್ನು ತಯಾರಿಸುವಾಗ ಬಳಸುವ ಬಾಲಕಾರ್ಮಿಕರ ಚಿತ್ರವೂ ಸೇರಿ ನೈತಿಕ ಜವಾಬ್ದಾರಿಯ ದ್ವಂದ್ವವನ್ನು ಉಂಟಾಗಿಸಿ ಕೆಲವು ಮಕ್ಕಳು ಪಟಾಕಿ ಹಚ್ಚದ ಪ್ರತಿಜ್ಞೆ ಮಾಡಿದ್ದನ್ನು ಕಂಡಿದ್ದೇನೆ.
ಆದರೆ ಪಟಾಕಿಯಿಲ್ಲದ ದೀಪಾವಳಿ ಹೇಗೆ ಎಂಬ ದ್ವಂದ್ವದೊಡನೆ ಸಂಪ್ರದಾಯದ ತಿಕ್ಕಾಟ, ಮಕ್ಕಳಿಗದರಿಂದಾಗುವ ಆನಂದ, ತೃಪ್ತಿ, ಉಲ್ಲಾಸ, ಉತ್ಸಾಹ ಎಲ್ಲವೂ ಮೇಳೈವಿಸಿದಾಗ ಹೊಂದಾಣಿಕೆಯ ಸೂತ್ರಕ್ಕೆ ಅರೆಮನಸಲೆ ರಾಜಿಯಾಗಬೇಕಾದ ಅನಿವಾರ್ಯ. ಇಲ್ಲಿ ಸಿಂಗಪೂರದಲ್ಲೂ ದೀಪಾವಳಿ ಒಂದು ದಿನ ಆಚರಿಸುತ್ತಾರೆ. ಇಲ್ಲೂ ಪಟಾಕಿ ಸಿಗುತ್ತದೆ. ಆದರೆ ವಿಶೇಷವೆಂದರೆ ಸದ್ದಿನ ಪಟಾಕಿ ಸಿಗುವುದಿಲ್ಲ (ಕಾನೂನುಬಾಹಿರ ಅನ್ನುವುದಕ್ಕಿಂತ, ಬೇಕಿದ್ದರೂ ಸಿಗುವುದಿಲ್ಲ ಅನ್ನಿ!) - ಬರಿ ಬೆಳಕು ಚೆಲ್ಲುವ ಸುರುಸುರು ಬತ್ತಿಯಂತದ್ದು ಮಾತ್ರ ಮಾರಬಹುದು. ಹೀಗಾಗಿ ವ್ಯವಸ್ಥೆಯಲ್ಲೆ ಒಂದು ಹತೋಟಿ, ಶಿಸ್ತು ಅಂತರ್ಗತವಾಗಿಬಿಟ್ಟಿದೆ. ಒಂದು ತಿಂಗಳಿನಿಂದ 'ಲಿಟಲ್ ಇಂಡಿಯ' ರಸ್ತೆಗಳೆಲ್ಲ ಬೀದಿಯ ವಿಶೇಷ ದೀಪಾಲಂಕಾರದಲ್ಲಿ ನವ ವಧುವಿನಂತೆ ಮಿಂಚುತ್ತಿದೆ. ಹಬ್ಬಕ್ಕೆಂದೆ ತೆರೆದಿದ್ದ ದೀಪಾವಳಿ ತಾತ್ಕಾಲಿಕ ಪೆಂಡಾಲುಗಳೆಲ್ಲ ತಿಂಗಳ ಪೂರ್ತಿಯ ಬಿರುಸಿನ ವ್ಯಾಪಾರ ಚಟುವಟಿಕೆ ಮುಗಿಸಿ ನಾಳೆಯ ನಂತರ ಮತ್ತೆ 'ಬಿಕೊ' ಎನ್ನುವ ಖಾಲಿ ಮೈದಾನಗಳಾಗಲಿವೆ. ಹೊರದೇಶದಲಿದ್ದೂ, ದೀಪಾವಳಿಯ ಉತ್ಸಾಹವನ್ನು ಕಾಣುವ ಸುಯೋಗ ಸಿಂಗಪುರ, ಮಲೇಶಿಯದಂತಹ ಕೆಲವು ದೇಶಗಳಲ್ಲಿ ಸಾಧ್ಯ - ಅಷ್ಟರ ಮಟ್ಟಿಗೆ (ಇಲ್ಲಿ ವಾಸಿಸುವ ನನಂತಹವರಿಗೆ) ಬೇರೆ ದೇಶಗಳಿಗಿಂತ ತುಸು ಪರವಾಗಿಲ್ಲ ಎನ್ನಬಹುದಾದ ವಾತಾವರಣ :-)
ಅದೇನೆ ಇದ್ದರು, ಎಲ್ಲ ವಯೋಮಾನದವರಲ್ಲು ತನ್ನದೆ ಆದ ರೀತಿಯಲ್ಲಿ, ದೀಪಾವಳಿ ಚಿಮ್ಮಿಸುವ ಉತ್ಸಾಹದ ಬಗ್ಗೆ ಎರಡು ಮಾತಿಲ್ಲ. ಅದಕ್ಕೆಂದೆ ಈ ದೀಪಾವಳಿಗೆ ಸಮಸ್ತ ಸಂಪದಿಗರಿಗೂ, ಈ ನಾಡಿನ ಜನರೆಲ್ಲರಿಗು ಹಾರ್ದಿಕ ಶುಭಾಶಯಗಳನ್ನು ಕೋರುತ್ತ, ಈ ಬಾರಿಯ ಆಚರಣೆ ಅದರಲ್ಲೂ ಮಕ್ಕಳೊಡನೆ ಆಚರಿಸುವಾಗ - ಹರ್ಷದಾಯಕವಾಗಿರಲಿ, ಸುರಕ್ಷಿತವಾಗಿರಲಿ ಎಂದು ಹಾರೈಸುತ್ತೇನೆ. ಅದೆ ಬಿರುಸಿನಲ್ಲಿ ಈ ಕೆಳಗಿನ ಜೋಡಿ ಕವನಗಳನ್ನು ಸೇರಿಸುತ್ತಿದ್ದೇನೆ - ದೀಪಾವಳಿಯ ಹೋಳಿಗೆಯ ಜತೆ ಸವಿಯಲು
1. ದೀಪಗಳಾಗಿ ಭುವಂಗತ
2. ಸದ್ದುಗಳ ನಡುವೆ.
ಮತ್ತೊಮ್ಮೆ ಶುಭ ದೀಪಾವಳಿ, 'ದೀಪೋತ್ಸಾಹಂ ಭುವಂಗತೆ' :-)
ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು
1. ದೀಪಗಳಾಗಿ ಭುವಂಗತ...
_____________________
ದೀಪಗಳಾದುವೆ ಭುವಂಗತ
ಕತ್ತಲೆಯನ್ನಾಗಿಸಿ ಅಸ್ತಂಗತ
ಜಗಮಗ ಹೊತ್ತಿ ದೀಪದ ಶಿಸ್ತ
ಹಣತೆಗಳ್ಹೆತ್ತ ಸೂರ್ಯನ ರಥ ||
ಸಂಜೆಗತ್ತಲಿಗೆ ಮಿಣುಕು ಕಣ್ಣಿತ್ತ
ಗಾಳಿಯಾಡಿಸಿ ಸೊಡರು ನೃತ್ಯ
ಕಿಟಕಿ ಗೂಡು ಹೊಸಿಲ ನೊಸಲು
ಕಾಂಪೌಂಡಿನ ಹೆಗಲೇರಿದ ಸಾಲು ||
ಸಾಲು ಸಾಲು ಸಾಲಂಕೃತ ಬಳ್ಳಿ
ತೆರೆದು ಬಿಟ್ಟಂತೆ ಬೆಳಕಿನಾ ನಲ್ಲಿ
ಯಾರೊ ಚೆಲ್ಲಿದ ಹಳದಿ ಮಲ್ಲಿಗೆ
ಜ್ಯೋತಿಯ ರೂಪಾಗೆಲ್ಲೆಡೆ ಬೆಳಗೆ ||
ಚಿಮ್ಮುತ ನೆರಿಗೆ, ಸಿಗ್ಗು ರೇಶಿಮೆಗೆ
ಲಲನೆ ಬಣ್ಣದ ಚಿಗುರು ಬೆರಳಿಗೆ
ದೀಪದಲಿ ದೀಪ ಹಚ್ಚುವ ಸರತಿ
ಯಾರ ಬಾಳಿಗೊ ಬೆಳಗುವಾರತಿ ||
ಬಾಣ ಬಿರುಸಿನ ಕುದುರೆ ಚದುರೆ
ಬೆಳಕಿಗೆ ಬೆಳಕನು ಕೂಡಿಸಿ ಧಾರೆ
ಕತ್ತಲ ರಾತ್ರಿಯ ಹಿತ್ತಲಿಗು ತಾರೆ
ದೀಪದಲುಡಿಸಿದ ನೆರಿಗೆಯ ಸೀರೆ ||
2. ಸದ್ದುಗಳ ನಡುವೆ..
_____________________
ಸದ್ದು ಸದ್ದು ಸದ್ದಾಗದಿದ್ದರೆ ಗುದ್ದು
ಪಟಾಕಿ ಧಾರಣೆಯಾಗಿ ಸಿಡಿಮದ್ದು
ಸದ್ದಿರದವನನ್ಹಚ್ಚೊ ಒಳ್ಳೆ ಧೋರಣೆ
ರಸ್ತೆ ರಂಗೋಲಿ ಅಳಿಸದಂತೆ ಗೆಣೆ ||
ಚೂರುಚೂರಾದ ಚಿಂದಿ ಪಟಾಕಿಯ
ಸುತ್ತಲೆಷ್ಟೆಳಸೂ ಕೈ ಸೋಕಿವೆಯೊ
ಕತ್ತರಿಸಿದ ಮರಗಳೆಷ್ಟೊ ಲೆಕ್ಕವಿಲ್ಲ
ಸುಟ್ಟು ಸದ್ದಾಗಿಸೆ ಚಿಣ್ಣರದೆ ಗದ್ದಲ ||
ಸಿಂಗಪುರದಲೂ, ದೀಪಾವಳಿ ಹೌದು
ಸಿಡಿಮಿಡಿ ಪಟಾಕಿ ಬೇಕೆಂದರು ಸಿಗದು
ಸುರುಸುರು ಬತ್ತಿ, ಮತಾಪುಗಳ ಶಿಸ್ತು
ಉಟ್ಟುಂಡು ಕೊಂಡಾಡಲೆ ಹಬ್ಬವಾಯ್ತು ||
ಈ ದೀಪಾವಳಿಗು ಸೂರ್ಯ ಅಸ್ತಂಗತ
ನೆನಪಿರಲಿ ಹಣತೆಯು ಕಲಿಸಿದ ಪಾಠ
ಸದ್ದಿರದೆ ಮೌನದಲುರಿದೆ ಕೊಟ್ಟ ಜ್ಯೋತಿ
ಸಿಡಿತ ಕ್ಷಣಿಕ, ಬೆಳಕು ಪಸರಿಸೊ ಪ್ರಗತಿ ||
ಅಂತಿರಲಿ ದೀಪಾವಳಿ ಒಳ ಬೆಳಕ ಬುಗ್ಗೆ
ನರ ನಾಡಿಗೆಲ್ಲ ಹೊತ್ತಿಸಿ ಉತ್ಸಾಹ ಬುಗ್ಗೆ
ಅಸ್ತಂಗತವಾಗಲಿ ಬಾಳಿಗಂಟಿದೆಲ್ಲ ಶಾಪ
ಭುವಂಗತವಾಗುತ್ಸಾಹ ಕಳೆಸಿ ಪರಿತಾಪ ||
ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು
Comments
ಉ: ದೀಪೋತ್ಸಾಹಂ ಭುವಂಗತೆ.
ನಾಗೇಶರೆ,
ನಿಮ್ಮ ಬಾಲ್ಯವನ್ನು ನೆನೆಸಿಕೊಳ್ಳುತ್ತಾ ದೀಪಾವಳಿಯ ಇಂದಿನ ಆಚರಣೆಯ ವೈವಿಧ್ಯತೆ ಮತ್ತು ವೈಪರೀತ್ಯಗಳೆರಡನ್ನೂ ಕಟ್ಟಿಕೊಟ್ಟಿದ್ದೀರ ಮತ್ತು ಅದನ್ನು ಕವನದಲ್ಲೂ ಅಳವಡಿಸಿದ್ದೀರ. ನಿಮಗೂ ಸಹ ದೀಪಾವಳಿಯ ಶುಭಾಶಯಗಳು. ನಮ್ಮಲ್ಲಿ ದೀಪಾವಳಿಯ ದಿವಸ ಪಟಾಕಿಗಳ ಸಡಗರದೊಂದಿಗೆ, ಆಕಾಶಬುಟ್ಟಿಯೊಂದನ್ನು ಮನೆಯ ಮೇಲೆ ಕಟ್ಟುತ್ತಿದ್ದೆವು. ಹಿಂದೆ ಅದರಲ್ಲಿ ದೀಪವಿರಿಸುತ್ತಿದ್ದರಂತೆ, ನಮ್ಮ ಜಮಾನಾಕ್ಕಾಗಲೇ ಅದರೊಳಗೆ ಲೈಟ್ ಇರಿಸುವ ಸಂಪ್ರದಾಯ ಬಂದಿತ್ತು. ಇದನ್ನು ಸಂಕ್ರಾಂತಿಯವರೆಗೆ ಇರಿಸುತ್ತಿದ್ದೆವು. ಇನ್ನು ಉತ್ತರ ಕರ್ನಾಟಕದಲ್ಲಿ ಬಿದಿರಿನಿಂದ ತಯಾರಿಸಿದ ಆಕಾಶಬುಟ್ಟಿಯಲ್ಲಿ ಹಣತೆಗಳನ್ನಿರಿಸಿ ಅದು ಆಗಸದಲ್ಲಿ ತೇಲುವಂತೆ ಮಾಡುತ್ತಿದ್ದರು. ಇವು ಇನ್ನೂ ಎಲ್ಲಿಯಾದರೂ ಉಳಿದುಕೊಂಡಿವೆಯೋ ಗೂಗಲ್ ಹುಡುಕಿ ನೋಡಬೇಕಷ್ಟೇ. ಕಾಲಾಯ ತಸ್ಮೈ ನಮಃ ಎನ್ನದೇ ಬೇರೆ ವಿಧಿಯಿಲ್ಲ :)
ಕೊನೆ ಹನಿ: ದೀಪಾವಳಿ ಭುವಂಗತೆ, ದಿವಂಗತೆ ಶಬ್ದವನ್ನು ನೆನಪಿಸುತ್ತದೆ - ಭೋಜರಾಜ...ದಿವಂಗತೆ ಜ್ಞಾಪಕಕ್ಕೆ ಬಂತು :)
In reply to ಉ: ದೀಪೋತ್ಸಾಹಂ ಭುವಂಗತೆ. by makara
ಉ: ದೀಪೋತ್ಸಾಹಂ ಭುವಂಗತೆ.
ಶ್ರೀಧರರೆ,
ಆಕಾಶಬುಟ್ಟಿಯೆಂದಾಗ ನೆನಪಾಯ್ತು - ಆ ಆಚರಣೆ ಮೈಸೂರು ಕಡೆಯೂನಿತ್ತು. ಆದರೆ ಕಾರ್ತಿಕದವರೆಗೆ ಮಾತ್ರ ಕಟ್ಟುತ್ತಿದ್ದಂತೆ ನೆನಪು. ದೀಪ ಹಚ್ಚುವ ಕುರಿತು ಗೊತ್ತಿರಲಿಲ್ಲ, ನಾವು ಯಾವಗಲೂ ಲೈಟೆ ಇರಿಸುತ್ತಿದ್ದ ಕಾರಣ. ಅಂದ ಹಾಗೆ ಶಾಂಘೈನಲ್ಲೊಮ್ಮೆ ವ್ಯವಹಾರ ನಿಮಿತ್ತ ಪ್ರಯಾಣದಲ್ಲಿದ್ದಾಗ 'ಬಂಡ್' ನದಿತಟದಲ್ಲಿ ಕುಳಿತಿದ್ದಾಗ, ಕೆಲವು ಜನರು ಆಕಾಶ ಬುಟ್ಟಿಯೊಳಗೆ ಮೇಣದ ಬತ್ತಿ ಹಚ್ಚಿ ಹಾರಿಬಿಡುವುದನ್ನು ಕಂಡಾಗ ವಿಸ್ಮಯವಾಗಿತ್ತು - ಸಂಪ್ರದಾಯಕ್ಕಿಂತ ಹೆಚ್ಚಾಗಿ ಏನಿದರ ವಿಜ್ಞಾನದ ಹಿನ್ನಲೆ ಎಂದು. ಯಾಕೆಂದರೆ ಹಚ್ಚಿಸಿ ಹಾರಿಸಿದ ಬುಟ್ಟಿ, ನದಿ ತಟದ ಗಾಳಿಗೊ, ಬಿಸಿಗೆ ಹಗುರಾದ ಗಾಳಿಯ ಒತ್ತಡಕ್ಕೊ ಅಥವ ಎರಡರ ಸಂಯುಕ್ತ ಕಾರಣಕ್ಕೊ, ಸೂತ್ರವಿಲ್ಲದಿದ್ದರೂ ಸರಸರನೆ ಮೇಲೇರುತ್ತ ಮಿಣುಕು ನಕ್ಷತ್ರಗಳಂತೆ ಮಿನುಗುತ್ತ ಹಾರಿ ಹೋಗುತ್ತಿದ್ದವು. ತಟದಲ್ಲಿ ಅನೇಕ ಜನ ಇದನ್ನು ಮಾಡುತ್ತಿದ್ದರೆಂದು ಕಾಣುತ್ತದೆ - ಯಾಕೆಂದರೆ ಆಕಾಶದಲ್ಲಿ ಈ ರೀತಿಯ ಅನೇಕ ಬುಟ್ಟಿಗಳು ಹಾರಾಡುತ್ತಿದ್ದುದು ಕಾಣಿಸುತ್ತಿತ್ತು. ಆದರೆ ಅದು ದೀಪಾವಳಿಯ ಸಮಯದಲಲ್ಲ - ಚೀನಿ ವರ್ಷದ ಆಸುಪಾಸಿನಲೊಇ. ಈಗ ನಿಮ್ಮಿಂದ ಇದು ಉತ್ತರ ಕರ್ನಾಟಕದಲ್ಲೂ ಪ್ರಚಲಿತವಿದ್ದ ಆಚರಣೆಯೆಂದು ತಿಳಿದು ಖುಷಿಯಾಯ್ತು :-)
ಕೊನೆ ಹನಿಯ ಕೊಸರಿಗೆ : ನನಗೆ ಭುವಂಗತೆ, ದಿವಂಗತೆ ಶಬ್ದಗಳ ಪರಿಚಯವಾಗಿದ್ದೆ ಕವಿರತ್ನ ಕಾಳಿದಾಸ ಚಿತ್ರದಲ್ಲಿದ್ದ ಈ ಶ್ಲೋಕದ ಮೂಲಕ. ನನ್ನ 'ಸಂಸ್ಖೃತ (ಅ)ಜ್ಞಾನ' ನಿಮಗೆ ಗೊತ್ತೆ ಇದೆ :-) ಆ ದಿನಗಳಲ್ಲಿ ಅಣ್ಣಾವ್ರ ಹಾಡು ಕೇಳಿ ಕೇಳಿ ಆ ಶ್ಲೋಕಗಳು ಅಲ್ಪಸ್ವಲ್ಪ ಬಾಯಿಗೆ ಬರುತ್ತಿತ್ತು - ಬಹುಶಃ ತಪ್ಪಾಗಿಯೂ ಬರುತ್ತಿತ್ತೊ ಏನೊ ? (ನನಗೆ ನೆನಪಿರುವ ರೀತಿ - ಅದ್ಯದಾರ, ಸದಾದಾರ, ಸದಾಲಂಬ ಸರಸ್ವತಿಃ, ಪಂಡಿತಾಃ ಮಂಡಿತಾ ಸರ್ವೆ, ಭೋಜರಾಜೇ ಭುವಂಗತೆ)
ಅದರ ಮೊದಲ ಭಾಗ 'ಭೋಜರಾಜೇ ದಿವಂಗತೆ' ಸಹ ಅದೇ ರೀತಿ ಅರಿತಿದ್ದು (ಸದಾದಾರ ಬದಲು ನಿರಾಧಾರ, ಸದಾಲಂಬ ಬದಲು ನಿರಾಲಂಬ..ಇತ್ಯಾದಿ ಪದ ಬದಲಾವಣೆಯ ಚಳಕವಿತ್ತಲ್ಲಿ). ಆಮೇಲರಿವಾಗಿದ್ದು ಇವೆಲ್ಲ ಶ್ಯಾಮಲದಂಡಕದ ಶ್ಲೋಕಗಳೆಂದು (ಮುಂದೊಮ್ಮೆ ನೀವು ಅದನ್ನು ವ್ಯಾಖ್ಯಾನಿಸಬಹುದೆಂದು ಕಾಣುತ್ತದೆ)
ಕವನದ ಮೊದಲ ಆವೃತ್ತಿಯಲ್ಲಿ 'ದೀಪಗಳಾಗಿ ಭುವಂಗತೆ' ಜತೆಗೆ ಆ ಬೆಳಕಿನ ಕಾರಣದಿಂದ 'ಕತ್ತಲಾಗಿ ದಿವಂಗತೆ' ಎಂದೆ ಸೇರಿಸಿದ್ದೆ. ಆದರೆ ಹಬ್ಬಕ್ಕೆ ದಿವಂಗತ ಪದ ಬೇಡವೆಂದು ಬದಲಾಯಿಸಿಬಿಟ್ಟೆ :-)
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ದೀಪೋತ್ಸಾಹಂ ಭುವಂಗತೆ. by nageshamysore
ಉ: ದೀಪೋತ್ಸಾಹಂ ಭುವಂಗತೆ.
ನಾಗೇಶರೆ,
ನರಕಾಸುರ ದಿವಂಗತೇ ಆಗಿದ್ದರಿಂದಲೇ ಅಲ್ಲವೇ ದೀಪಾವಳಿ ಭುವಂಗತೇ ಆಗಿದ್ದು :) ಭುವಂಗತೆ ಎನ್ನುವುದನ್ನು ನೆಲಕಚ್ಚಿದ ಎಂದೂ ಅರ್ಥೈಸಬಹುದು ಹಾಗಾಗಿ ನೀವು ಆ ಪದದಿಂದ ಹೊರಬಂದಂತೆ ಆಗಲಿಲ್ಲ :))
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ನೋಡೋಣ ಶ್ಯಾಮಲ ದಂಡಕವನ್ನೂ ವಿಶ್ಲೇಷಿಸುವ ಅವಕಾಶ ದೊರೆಯಬಹುದು. ಶ್ರೀಯುತ ವಿ.ರವಿಯವರು ಅದನ್ನು ಮೊದಲು ವಿಶ್ಲೇಷಿಸಿದರೆ. ಈ ಸರಣಿಯ ನಂತರ ಶ್ರೀ ಚಕ್ರ, ನವಾವರಣ ಪೂಜೆ ಮೊದಲಾದವುಗಳ ಕುರಿತಾಗಿ ಅನುವಾದ ಮಾಡಬೇಕಾಗಿರುವುದೂ ಬಹಳಷ್ಟಿದೆ. ಶ್ರೀಯುತ ರವಿಯವರು ಅಷ್ಟನ್ನೂ ಮಾಡಿ ಮುಗಿಸಿದ್ದಾರೆ. ಅವರ ಸರಣಿಯಲ್ಲಿ ಶಿವಸೂತ್ರ, ಬ್ರಹ್ಮಸೂತ್ರ ಹೀಗೆ ಬ್ರಹ್ಮಾಂಡವೇ ಅಡಗಿದೆ. ನೋಡೋಣ ಲಲಿತಾಂಬಿಕೆ ಯಾವ ವಿಧವಾದ ಭಕ್ತಿ ಮತ್ತು ಶಕ್ತಿಗಳನ್ನು ಕರುಣಿಸುತ್ತಾಳೆಯೋ?
In reply to ಉ: ದೀಪೋತ್ಸಾಹಂ ಭುವಂಗತೆ. by makara
ಉ: ದೀಪೋತ್ಸಾಹಂ ಭುವಂಗತೆ.
ಶ್ರೀಧರರೆ,
ಪಟಾಕಿ ಹಚ್ಚುವ ಉತ್ಸಾಹ 'ಸುರಕ್ಷತೆಯ ಮಿತಿಯನ್ನು ಮೀರದಂತೆ' ನೆಲಕಚ್ಚಿರಲಿ - ಎಂದು ಅರ್ಥೈಸಿಕೊಂಡುಬಿಡುವ ಬಿಡಿ :-)
ನರಕಾಸುರ ಸತ್ತು ದಿವಂಗತೇ, ಬಲಿ ಪಾತಾಲೋಕಕೆ ತಳ್ಳಿ ಭುವಂಗತೆ (ನೆಲಕಚ್ಚಿದ) ಇಬ್ಬರ ನೆನಪಲಿ ನಾವು 'ಬರಿ' ಕವಿತೆ :-)
ನಿಜ, ಶ್ರೀಯುತ ರವಿಯವರ ಸೈಟು ನೋಡಿದರೆ ಜೀವಮಾನಕ್ಕಾಗಿ ಮಿಕ್ಕುವಷ್ಟಿದೆ. ವಿಷ್ಣು ಸಹಸ್ರ ನಾಮಾವಳಿ, ಭಗವದ್ಗೀತೆ - ಯಾವುದಿದೆ ಎನ್ನುವುದಕ್ಕಿಂತ, ಯಾವುದಿಲ್ಲ ಎಂದು ಹುಡುಕುವುದೆ ಸುಲಭವೆಂದು ಕಾಣುತ್ತದೆ. ಬರೆಸುವ ಮನಸಿದ್ದರೆ, ಬರೆಯುವ ಪ್ರೇರಣೆ ತಾನಾಗಿ ಒದಗಿಬರುತ್ತದೆ , ಬಿಡಿ !
ನಿಮ್ಮ ಪ್ರತಿಕ್ರಿಯೆಯಿಂದ ಗಮನಕ್ಕೆ ಬಂತು. ಯಾಕೊ ಈ ಲೇಖನದ ಫಾರ್ಮ್ಯಾಟಿಂಗ್ ಎಲ್ಲಾ ಕಲಸಿಕೊಂಡುಬಿಟ್ಟಿದೆ. ಮುನ್ನೋಟದಲ್ಲಿ ಸರಿಯಾಗಿದ್ದಂತೆ ನೆನಪು. ಓದುವಾಗ ತುಸು ಅಹಿತಕರ ಅನುಭವ ಆಗಬಹುದು ಸಂಪದಿಗರೆ, ಅದಕ್ಕೆ ಕ್ಷಮೆಯಿರಲಿ.
In reply to ಉ: ದೀಪೋತ್ಸಾಹಂ ಭುವಂಗತೆ. by nageshamysore
ಉ: ದೀಪೋತ್ಸಾಹಂ ಭುವಂಗತೆ.
ಭುವಂಗತೆ ಕವನ ಚೆನ್ನಾಗಿದೆ ನಾಗೇಶರೆ, ಕವಿರತ್ನಕಾಳಿದಾಸ-ಭೋಜರಾಜರ ಬಗ್ಗೆ ನಮ್ಮ ಹಂಸಾನಂದಿಯವರ ಈ ಬರಹವನ್ನೊಮ್ಮೆ ಗಮನಿಸಿ- http://sampada.net/blog/hamsanandi/04/03/2011/30725
In reply to ಉ: ದೀಪೋತ್ಸಾಹಂ ಭುವಂಗತೆ. by ಗಣೇಶ
ಉ: ದೀಪೋತ್ಸಾಹಂ ಭುವಂಗತೆ.
ಥ್ಯಾಂಕ್ಸ್ ಗಣೇಶ್ ಜಿ, ಹಂಸಾನಂದಿಯವರ ಬರಹದ ಒಳ್ಳೆ ಕೊಂಡಿ ಕೊಟ್ಟಿದ್ದಿರಿ. ನಾನು ಈ ಬಗ್ಗೆ (ಭೋಜರಾಜ - ಕಾಳಿದಾಸರ ಕಾಲಮಾನದ ಕುರಿತು) ತುಸು ಗುಸುಗುಸು ಕೇಳಿದ್ದೇನಾದರೂ ಸರಿಯಾದ ವಿವರಣೆ ಓದಿರಲಿಲ್ಲ. ಈ ಲೇಖನದಿಂದ ಅದರ ಪೂರ್ಣಚಿತ್ರ ಸಿಕ್ಕಂತಾಯ್ತು. ಲೇಖನದ ಜತೆ ಪ್ರತಿಕ್ರಿಯೆಯೆಲ್ಲ ನೋಡುತ್ತಿದ್ದರೆ ಸಂಪದದ ಹಳೆ ಕಡತದಲ್ಲಿ ಇನ್ನೂ ಏನೇನಿವೆಯೊ ಅನಿಸಿ ಅಚ್ಚರಿಯಾಗುತ್ತಿದೆ :-)
ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
ಉ: ದೀಪೋತ್ಸಾಹಂ ಭುವಂಗತೆ.
ಸಮಯೋಚಿತ ಮತ್ತು ಒಳ್ಳೇ ಲೇಖನ ನಾಗೇಶರೇ, ಸುಂದರ ಕವನ ಕೂಡ.
In reply to ಉ: ದೀಪೋತ್ಸಾಹಂ ಭುವಂಗತೆ. by Vasant Kulkarni
ಉ: ದೀಪೋತ್ಸಾಹಂ ಭುವಂಗತೆ.
ವಸಂತರೆ, ತಮ್ಮ ಅನಿಸಿಕೆಗೆ ಧನ್ಯವಾದಗಳು - ದೀಪಾವಳಿ ವರ್ಷವರ್ಷ ಬಂದರೂ ಅದರ ಜತೆಗೆ ಬರುವ ಉತ್ಸಾಹ, ಉಲ್ಲಾಸ, ವೈವಿಧ್ಯ ಮತ್ತು ವೈಪರೀತ್ಯಗಳನ್ನು ಹಿಡಿಯುವ ಪುಟ್ಟ ಯತ್ನ :-)
ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
ಉ: ದೀಪೋತ್ಸಾಹಂ ಭುವಂಗತೆ.
[ ಒಂದು ತಿಂಗಳಿನಿಂದ 'ಲಿಟಲ್ ಇಂಡಿಯ' ರಸ್ತೆಗಳೆಲ್ಲ ಬೀದಿಯ ವಿಶೇಷ ದೀಪಾಲಂಕಾರದಲ್ಲಿ ನವ ವಧುವಿನಂತೆ ಮಿಂಚುತ್ತಿದೆ] ಸಂತೋಷಯಾಯ್ತು ಆ ದೇಶದ ದೀಪಾವಳೀ ಕಂಡು. ನಮ್ಮ ದೇಶದ ನಗರಗಳಲ್ಲೂ ರಸ್ತೆಯ ಬದಿಯ ಮನೆಗಳ ಮುಂದೆ ದೀಪ ಹಚ್ಚುತ್ತಾರೆ. ಆದರೆ ರಸ್ತೆಯಲ್ಲಿ ಸಾಮಾನ್ಯರು ಓಡಾದಲು ಸಾಧ್ಯವಿಲ್ಲದಂತ ಪಟಾಕಿ ಶಬ್ಧ! ಸುಟ್ಟ ವಾಸನೆ! ನಿಜವಾಗಿ ಕೇವಲ ಬೆಳಕು ಚೆಲ್ಲುವ ಪಟಾಕಿಗಳು ಕಣ್ತುಂಬುತ್ತವೆ. ಆದರೆ ಶಬ್ಧ ಕಿವಿಗೆ ಅಪ್ಪಳಿಸಿ ಸಾಕು ಮಾಡುತ್ತವೆ. ಎಲ್ಲಿ ಭಯೋತ್ಪಾದಕರು ಬಾಂಬ್ ಹಾಕುತ್ತಾರೋ ಎಂಬ ಭಯ ಬೇರೆ.
ಲೇಖನ ಚೆನ್ನಾಗಿದೆ. ಧನ್ಯವಾದಗಳು
In reply to ಉ: ದೀಪೋತ್ಸಾಹಂ ಭುವಂಗತೆ. by hariharapurasridhar
ಉ: ದೀಪೋತ್ಸಾಹಂ ಭುವಂಗತೆ.
ಧನ್ಯವಾದಗಳು ಶ್ರೀಧರ್, ಬೀದಿಯ ತುಂಬ ಸಾಲು ದೀಪಗಳು ಇನ್ನು ಇವೆ - ಬಹುಶಃ ಈ ವಾರದ ಕೊನೆಯವರೆಗೆ ಇರುತ್ತೆಂದು ಕಾಣುತ್ತದೆ. ಹೀಗಾಗಿ ಇನ್ನು ಸಂಭ್ರಮದ ಕಳೆ ಹಾಗೆ ಇದೆ. ಸದ್ದಿರುವ ಪಟಾಕಿ ಬಿಡಿ, ಬೆಳಗುವ ಸುರುಸುರು ಬತ್ತಿಗು ಹಚ್ಚಿ ಆದ ಮೇಲೆ ಎಲ್ಲೆಲ್ಲೊ ಎಸೆಯಲಾಗದು. ತಣ್ಣೀರಿನಲ್ಲಿ ಅದ್ದಿ ಸರಿಯಾದ ರೀತಿಯಲಿ ವಿಲೇವಾರಿ ಮಾಡಬೇಕು. ಹೀಗಾಗಿ ಹೊರಗೆಲ್ಲೂ ಪಟಾಕಿಗಳ ಕುರುಹು ಕಾಣಿಸುವುದಿಲ್ಲ. ನಮ್ಮ ಮನೆಯ ಹತ್ತಿರವಿರುವ ದೇವಸ್ಥಾನದಲ್ಲಿ ಹಬ್ಬದ ದಿನ ಪೂರ ಪ್ರಸಾದದ ಹೆಸರಲಿ ಊಟದ ಪೊಟ್ಟಣ ಹಂಚುತ್ತಿದ್ದರು - ಸಾವಿರಾರು ಜನಕ್ಕೆ. ಒಂದು ರೀತಿಯ ವಿಶಿಷ್ಠವಾದ ದೀಪಾವಳಿ :-)