ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ "
ಹಿಂದಿ ಚಲನಚಿತ್ರ ಲೋಕದ ಹಿನ್ನೆಲೆ ಗಾಯಕರ ಕೊನೆಯ ಕೊಂಡಿ ಅಕ್ಟೋಬರ್ 24 ರ ಬೆಳಗಿನ ಜಾವ ಕಳಚಿ ಕೊಂಡಿತು. 1950 ರಿಂದ 80 ರ ಮೂರು ದಶಕಗಳ ಕಾಲ ಭಾರತೀಯ ಚಲನಚಿತ್ರ ರಂಗದ ಸುವರ್ಣ ಯುಗ. ಆ ಕಾಲದ ಹಿಂದಿ ಚಲನಚಿತ್ರ ಗೀತೆಗಳು ಇಂದಿಗೂ ಆಕಾಶವಾಣಿಯ ವಿವಿಧ ಭಾರತಿ ಮತ್ತು ಪ್ರಾದೇಶಿಕ ಕೇಂದ್ರಗಳಲ್ಲಿ ಪದೆ ಪದೆ ಬಿತ್ತರಗೊಳ್ಳುತ್ತ ಜನಮನ ರಂಜಿಸುತ್ತಿವೆ. ಇವುಗಳನ್ನು ಅಮರಗೊಳಿಸಿ ಜನಮನದಲ್ಲಿ ಇಳಿಯುವಂತೆ ಮಾಡಿದವರು ಸಂಗೀತ ಸಂಯೋಜಕರು ಜೊತೆಗೆ ಹಿನ್ನೆಲೆ ಗಾಯಕ ಗಾಯಕಿಯರು. ಇತ್ತೀಚೆಗೆ ನಮ್ಮ ಪೂರ್ವದ ಹಿರಿಯ ಸಾಧಕರು ಒಬ್ಬರ ಹಿಂದೆ ಒಬ್ಬರಂತೆ ಇಹಲೋಕವನ್ನು ತ್ಯಜಿಸಿ ಹೋಗುತ್ತಿದ್ದಾರೆ. ಅವರ ಅಭಿಮಾನಿಗಳಿಗೆ ಇದು ಒಂದು ರೀತಿಯ ಖೇದಕರ ಸಂಗತಿ. ಎಲ್ಲರೂ ಕೇಳಿ ತಿಳಿದ ವ್ಯಕ್ತಿ ಮತ್ತು ವಿಷಯಗಳ ಕುರಿತು ಯಾಕಾಗಿ ಬರೆಯಬೇಕು ಎಂದು ಒಂದು ರೀತಿ ಅನಿಸಿದರೆ, ಅವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಜನ ಸಾಮಾನ್ಯರನ್ನು ರಂಜಿಸಿದ ಪರಿ ಅವರು ಪ್ರತಿಯೊಬ್ಬ ತಮ್ಮ ಅಭಿಮಾನಿಯ ಮೇಲೆ ಉಂಟು ಮಾಡಿದ ಪ್ರಭಾವ ನಮ್ಮಂತಹ ಜನ ಸಾಮಾನ್ಯರನ್ನು ಬರೆಯಲು ಪ್ರೇರೇಪಿಸುತ್ತದೆ.
ಸ್ವಾತಂತ್ರಪೂರ್ವದಲ್ಲಿ ಚಲನಚಿತ್ರ ರಂಗದಲ್ಲಿ ಮೋಡಿ ಮಾಡಿದ ಗಾಯಕ ಕುಂದನಲಾಲ್ ಸೈಗಲ್. ಆತ ಗಾಯಕನಲ್ಲದೆ ಪ್ರತಿಭಾವಂತ ನಾಯಕ ನಟ ಕೂಡ ಆಗಿದ್ದ.ಆಗ ಇನ್ನೂ ಕೆಲ ಗಾಯಕರಿದ್ದರೂ ಸೆಹಗಲ್ ಪ್ರಮುಖ ಪಂಕ್ತಿಯ ಗಾಯಕನಾಗಿದ್ದ. ಆದರೆ ಸ್ವಾತಂತ್ರೋತ್ತರ ಕಾಲದಲ್ಲಿ ಅದ್ಭುತ ಗಾಯಕ ಗಾಯಕಿಯರು ಹಿಂದಿ ಚಲನ ಚಿತ್ರ ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಆಗಮಿಸಿದರು. ತಲತ್ ಮೆಹಮ್ಮೂದ್, ಮೊಹಮ್ಮದ್ರಫಿ, ಮುಖೇಶಚಂದ್ರ, ಮಹೇಂದ್ರ ಕಪೂರ, ಮನ್ನಾಡೇ, ಕಿಶೋರ್ ಕುಮಾರ್ ಎಷ್ಟೊಂದು ಭಿನ್ನ ಶೈಲಿಯ ಗಾಯಕರು ಅವರು ! ಮಧುರ ಕಂಠದ ಜೇನು ದನಿಯ ರಫಿ, ಮನಕಲುಕುವ ರೀತಿಯಲ್ಲಿ ವಿಷಾದ ಗೀತೆಗಳನ್ನು ಹಾಡುವ ಮುಖೇಶ,ಲಘು ಧಾಟಿಯ ಹಾಡುಗಾರಿಕೆಯ ಕಿಶೋರ್, ಭಿನ್ನ ಶೈಲಿಯ ಗಾಯನದ ತಲತ್ ಮೆಹಮ್ಮೂದ್ ಇಂತಹ ಗಾಯನ ದಿಗ್ಗಜಗಳ ಮಧ್ಯೆ ಮನ್ನಾಡೆ ತಮ್ಮದೇ ಆದ ಗಾನ ಶೈಲಿಯಿಂದ ವಿಶಿಷ್ಟ ಸ್ಥಾನದಲ್ಲಿ ನಿಲ್ಲುವಂತಹವರು. ನಾವು ನಮ್ಮ ಬಾಲ್ಯದ ದಿನಗಳಲ್ಲಿ ಪ್ರಾಥಮಿಕ ಶಾಲೆಗೆ ಹೋಗುವಾಗ ಹೋಟೆಲುಗಳ ರೇಡಿಯೋಗಳಲ್ಲಿ ಕೇಳಿ ಬರುತ್ತಿದ್ದ ಹಾಡುಗಳಿಗೆ ಕಿವಿಯಾಗುತ್ತ ಶಾಲೆಗೆ ಹೋಗುತ್ತಿದ್ದವು. ಹಿಂದಿ ಭಾಷೆಯಅರ್ಥ ನಮಗಾಗುತ್ತಿರಲಿಲ್ಲ, ಹಾಡಿನ ಸಂಗೀತ ಹಾಡುಗಾರ ಅಥವ ಹಾಡುಗಾರ್ತಿಯ ಶೈಲಿ ನಮ್ಮ ಮನ ತಟ್ಟುತ್ತಿತ್ತು.
ಮುಂದೆ ಬೆಳೆಯುತ್ತ ದೊಡ್ಡವರಾಗುತ್ತ ನಡೆದಂತೆ ಎಷ್ಟೊಂದು ಗಾಯಕ ಗಾಯಕಿಯರು, ಸೈಗಲ್, ರಫಿ, ಮುಖೇಶ, ತಲತ್, ಮನ್ನಾಡೆ, ಹೇಮಂತ ಕುಮಾರ, ನೂರ್ ಜಹಾನ್, ಸುರಯ್ಯಾ, ಕಮಲ್ ಬಾರೂದ್, ಉಮಾದೇವಿ, ಜೋಹರಾ ಅಂಬೇವಾಲಿ, ಲತಾ ಮಂಗೇಶಕರ್, ಆಶಾ ಭೋಸಲೆ, ಸುಮನ್ ಕಲ್ಯಾಣಪೂರ್ ಎಷ್ಟೊಂದು ಭಿನ್ನ ಶೈಲಿಯ ಗಾಯಕ ಗಾಯಕಿಯರು. ಈ ಎಲ್ಲ ಅಸಾಮಾನ್ಯ ಪ್ರತಿಭೆಗಳ ಪೈಕಿ ಮನ್ನಾಡೆ ಒಬ್ಬ ಭಿನ್ನ ಶೈಲಿಯ ವೈಶಿಷ್ಟ್ಯಪೂರ್ಣ ಗಾಯಕ. ಅವರು ನಾಯಕ ನಟರ ನೆರಳಲ್ಲಿ ಅರಳಿದ ಗಾನ ಪ್ರತಿಭೆಯಲ್ಲ. ಆತ ಸತ್ವಭರಿತ ಗೀತೆ ಮಾಧುರ್ಯಪೂರ್ಣ ಸಂಗೀತ ಪರಿಣಾಮಕಾರಿ ಸನ್ನಿವೇಶಗಳ ನಿರೂಪಣೆಯ ಗಾಯಕ. ಆತನದು ಸ್ವರಬದ್ಧ ಗಾಯನ ಅವರ ಎಲ್ಲ ಹಾಡುಗಳಲ್ಲಿ ಇದನ್ನು ಗಮನಿಸಬಹುದು. ಉಳಿದ ಅವರ ಸಮಕಾಲೀನ ಗಾಯಕರೊಟ್ಟಿಗೆ ಅವರನ್ನು ತುಲನೆ ಮಾಡಿದಾಗ ಮನ್ನಾಡೆ ಅವರಿಗೆ ಉಳಿದವರಿಗಿಂತ ಶಾಸ್ತ್ರೀಯ ಸಂಗೀತ ಜ್ಞಾನ ಬಹಳ ಮೇಲ್ಮಟ್ಟದ್ದಾಗಿರುವುದು ಕಂಡು ಬರುತ್ತದೆ. ಅವರು ತಮ್ಮ ಹಾಡುಗಾರಿಕೆಯಲ್ಲಿ ಹೊರಡಿಸುವ ಸ್ವರ ಸಂಚಾರ ಅವರಿಗಿರುವ ಸ್ಪಷ್ಟ ಸ್ವರಜ್ಞಾನದ ಕಲ್ಪನೆಯನ್ನು ಕೇಳುಗರಿಗೆ ತೆರೆದು ತೋರುತ್ತೆ. ಅವರ ಗಾಯನದಲ್ಲಿ ಬರುವ ಸ್ವ್ರರ ಕಂಪನ ಅವರ ಸಂಪೂರ್ಣ ಪರಿಣತಿ ಮಾಮೂಲಿ ಸಿನೆಮಾ ಗಾಯಕರಿಗೆ ಕಷ್ಟ.
ಇವರು ಬಂಗಾಳಿ, ಹಿಂದಿ, ಕನ್ನಡ, ಮಲೆಯಾಳಂ, ತೆಲುಗು ಸೇರಿದಂತ ಏಳು ರಾಷ್ಟ್ರೀಯ ಭಾಷೆಗಳ ಚಿತ್ರಗಳಲ್ಲಿ ಹಾಡಿದ್ದಾರೆ. ಯಾವುದೇ ಬೆಂಬಲವಿಲ್ಲದೆ ಹಿಂದಿ ಚಲನಚಿತ್ರ ರಂಗದಲ್ಲಿ ನೆಲೆನಿಂತು ತಮ್ಮದೆ ಛಾಪನ್ನು ಮೂಡಿಸಿ ಪದ್ಮಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆವ ಮಟ್ಟಿಗೆ ಸಾಧನೆ ಮಾಡಿ ಇವರು ಏರಿದ ಎತ್ತರ ಮಾಡಿದ ಸಾಧನೆ ಅನುಪಮವಾದದು ತನ್ನ ಸಮಕಾಲೀನ ಗಾಯಕರಾದ ರಫಿ ಮತ್ತು ಮುಖೇಶರಿಗೆ ಗಗನ ಕುಸುಮವಾದ ಫಾಲ್ಕೆ ಪ್ರಶಸ್ತಿ ಇವರನ್ನು ಅರಸಿ ಬಂದದ್ದು ಅವರ ಸಂಗೀತ ಸಾಧನೆಗೆ ಸಂದ ಅರ್ಹ ಗೌರವ. ಇಂತಹ ಶ್ರೇಷ್ಠ ಗಾಯಕ ನಮ್ಮೆಲ್ಲ ಕನ್ನಡಿಗರ ಮಧ್ಯೆ ಬದುಕಿದ್ದರೂ ಸಾಂಸ್ಕೃತಿಕವಾಗಿ ಅವರನ್ನು ನಾವು ಗುರುತಿಸಲಿಲ್ಲ ಗೌರವಿಸಲಿಲ್ಲ. ಹುಟ್ಟಿನಿಂದ ಕನ್ನಡಿಗನಲ್ಲವಾದರೂ ಯಾವುದೋ ಕಾರಣಕ್ಕಾಗಿ ಅವರು ಬೆಂಗಳೂರಿನಲ್ಲಿ ನೆಲೆ ನಿಂತಿದ್ದರೂ ನಮ್ಮ ಸರಕಾರ ಅದನ್ನು ಗುರಿತಿಸದುದು ಖೇದಕರ. ನಮ್ಮ ಕನ್ನಡ ಚಿತ್ರರಂಗ ಕೆಲ ಹಾಡುಗಳನ್ನಾದರೂ ಹಾಡಿಸಿ ಗೌರವಿಸ ಬೇಕಿತ್ತು. ಯಾವುದಾದರೂ ಒಂದು ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸ ಬೇಕಿತ್ತು, ಇವು ಯಾವುವೂ ಸಂಭವಿಸಲಿಲ್ಲ. ಇದು ನಮ್ಮ ಜಡ್ಡು ಗಟ್ಟಿದ ಮನಸ್ಥಿತಿಯನ್ನು ತೋರಿಸುತ್ತದೆ. ಸಾರ್ವಜನಿಕ ರಂಗದಲ್ಲಿ ಗೌರವಯುತ ಹಿರಯನಂತೆ ನಾವು ಬಳಸಿ ಕೊಳ್ಳ ಬಹುದಿತ್ತು. ಅವರು ತೀರಿ ಕೊಂಡಾಗ ಬೆರಳೆಣಿಕೆಯ ಕನ್ನಡ ಚಿತ್ರ ರಂಗದವರು ಹೋಗಿ ಬಂದದ್ದನ್ನು ಬಿಟ್ಟರೆ, ಆ ಸ್ಟಾರ್ ಈ ಸ್ಟಾರ್ ಎಂದು ಉಪಾಧಿಗಳಿಂದ ಕರೆಯಲ್ಪಡುವ ನಮ್ಮ ಗ್ರೇಟ್ ಹೀರೊಗಳಿಗೆ ನಮ್ಮ ನಡುವೆ ಬದುಕಿ ಹೋದ ಒಂದು ಹಿರಿಯ ಜೀವಕ್ಕೆ ಒಂದು ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿ ಸೂಚಿಸಲೂ ಆಗದಷ್ಟು ಬೌದ್ಧಿಕ ಬಡತನೆವೆ ? ಹೋಗಲಿ ಬಿಡಿ ಇದನ್ನೆಲ್ಲ ಅವರು ಬಯಸಿದವರೂ ಅಲ್ಲ ಅಲ್ಲವೆ ?
ಮನ್ನಾಡೆಯವರು ಹಾಡಿದ ಎಲ್ಲ ಗೀತೆಗಳು ಉತ್ತಮವಾದ ಗೀತೆಗಳೆ, ಆದರೂ ಅವುಗಳಲ್ಲಿ ಕೆಲವನ್ನು ಹೆಸರಿಸುವುದಾದಲ್ಲಿ ಇವುಗಳನ್ನು ಗಮನಿಸಬಹುದು. ತರಾಸು ಕಾದಂಬರಿ ‘ಹಂಸಗೀತೆ’ ಯನ್ನಾಧರಿಸಿ ತಯಾರಿಸಲಾದ ಭರತ ಭೂಷಣ್ ಅಭಿನಯದ ಶಂಕರ ಜೈಕಿಶನ್ ಸಂಗೀತ ಸಂಯೋಜನೆಯ ‘ ಬಸಂತ ಬಹಾರ ಚಿತ್ರದ “ ಕೇತಕಿ ಗುಲಾಬ ಜೂಹಿ” ಎಂಬ ಗೀತೆಯನ್ನು ಖ್ಯಾತ ಹಿಂದುಸ್ಥಾನಿ ಕಿರಾನಾ ಘರಾನಾದ ಮೇ್ಉ ಗಾಯಕ ಭೀಮಸೇನ್ ಜೋಶಿ ಯವರ ಜೊತೆ ಯುಗಳ ಗೀತೆಯೊಂದನ್ನು ಅವರ ಸರಿ ಸಮಾನವಾಗಿ ಹಾಡಿದ್ದು ಅವರಿಗಿರುವ ಅಪಾರ ಸಂಗೀತ ಜ್ಞಾನದ ಒಂದು ನಿದರ್ಶನ. ಅದೇ ರೀತಿ ಅಶೋಕ ಕುಮಾರ ಮತ್ತು ಆಶಾ ಪಾರೇಖ ಅಭಿನಯದ ಅದೇ ಶಂಕರ ಜೈಕಿಆನ್ ರಾಗ ಸಂಯೋಜನೆಯ ‘ಮೇರಿ ಸೂರತ್ ತೇರಿ ಆಂಖೇ’ ಚಿತ್ರದ “ ಪೂಛೋನ ಕೈಸೆ ಮೆರೆ ನೈನ ಬತಾಯೇ” ಒಂದು ಅದ್ಭುತ ಗೀತೆ ಇದೊಂದು ಸಾರ್ವಕಾಲಿಕ ಶ್ರೇಷ್ಠ ಗೀತೆಗಳಲ್ಲೊಂದು. ಇನ್ನೊಂದು ಭರತ ಭೂಷಣ್ ಮತ್ತು ಮಧುಬಾಲಾ ಅಭಿನಯದ ರೋಶನ್ ಲಾಲ್ ( ನಟ ಹೃತಿಕ್ ರೋಶನ್ನ ಅಜ್ಜ )ಸಂಗೀತ ಸಂಯೋಜನೆಯ ‘ಬರಸಾತ್ ಕಿ ರಾತ್’ ಚಿತ್ರದ' ನಾ ತೋ ಕಾರವಾನ್' ಹಾಡು ಒಂದು ಅಸಾಧಾರಣ ಗೀತೆ. ಮತ್ತೊಂದು ಬಿ.ಆರ್.ಛೋಪ್ರಾ ಬ್ಯಾನರಿನ '‘ವಕ್ತ್’ ಚಿತ್ರದ ರವಿ ಯವರ ಮಾಧುರ್ಯ ಪೂರ್ಣ ಸಂಗೀತ ಸಂಯೋಜನೆಯ ಬಲರಾಜ್ ಸಹಾನಿ ಮತ್ತು ಅಚಲಾ ಸಚದೇವ್ ಅವರ ಮೇಲೆ ಚಿತ್ರಿಕರಿಸಲಾದ ‘ಏ ಮೆರೆ ಜೊಹರ್ ಜಬಿ ತುಝೇ ಮಾಲೂಮ್ ನಹಿಂ’ ಹಾಡು, ಅದೇ ರೀತಿ ಮೇರೆ ಹುಜೂರ್, ಪಡೋಸನ್, ಬಾಬಿ, ಶೋಲೆ ಮುಂತಾದ ಹಲವು ಗೀತೆಗಳು ಎಂದಿಗೂ ನೆನಪಿನಲ್ಲುಳಿಯುವಂತಹವು.
ಅದೇ ರೀತಿ ಮನ್ನಾಡೆ ಎರಡು ಕನ್ನಡ ಚಲನಚಿತ್ರಗಳಿಗೂ ಹಾಡಿದ್ದಾರೆ.ಒಂದು ಕಲ್ಪವೃಕ್ಷ ಚಿತ್ರದ ‘ಜಯತೆ ಜಯತೆ ಸತ್ಯಮೇವ ಜಯತೆ’ ಎನ್ನುವ ಹಾಡಾದರೆ, ಇನ್ನೊಂದು ಉದಯಕುಮಾರ, ಜಯಂತಿ ಯವರ ಅಭಿನಯದ ಕಲಾವತಿ ಚಿತ್ರದಲ್ಲಿ ಅಳವಿಡಿಸಿಕೊಳ್ಳಲಾದ ಕುವೆಂಪು ವಿರಚಿತ ಗೀತೆ ‘ಕುಹೂ ಕುಹೂ ಕುಹು ಕುಹೂ ಎನ್ನುತ ಹಾಡುವ ಕಿನ್ನರ ಕಂಠದ ಕೋಗಿಲೆಯೆ’ ಹಾಡುಗಳಂತು ಕನ್ನಡದ ಸುಶ್ರಾವ್ಯ ಗೀತೆಗಳ ಮಾಲಿಕೆಗೆ ಸೇರು ವಂತಹವು. ಅದೇ ರೀತಿ ಅವರು ಮಲೆಯಾಳಂ ಚಿತ್ರ ‘ಚೆಮ್ಮೀನ್’ ಗೂ ಸಹ ಹಾಡಿದ್ದಾರೆ ಈ ಹೆಗ್ಗಳಿಕೆ ಅವರದು. ಇವೆಲ್ಲವುಗಳ ಮಧ್ಯೆ ನಾವು ಇನ್ನೊಂದು ಗೀತೆಯನ್ನು ಗಮನಿಸಲೇ ಬೇಕು.ಅದು ಬ್ಲಾಕ್ ಎಂಡ್ ವೈಟ್ ಜಮಾನಾದ ಹಿಂದಿಯ ಖ್ಯಾತ ಹಾಸ್ಯ ನಟ ಮೆಹಮ್ಮೂದ್ನ ತಯಾರಿಕೆ ಮತ್ತು ನಾಯಕ ನಟನೆಯ ‘ಭೂತ್ ಬಂಗ್ಲಾ’ ಚಿತ್ರ. ಈ ಚಿತ್ರದಲ್ಲಿ ಅಳವಡಿಸಲಾದ ಪಾಶ್ಚಾತ್ಯ ಶೈಲಿಯ ಗಾಯನದ ‘ಆವೋ ಟ್ವಿಸ್ಟ್ ಕರೆ'’ಹಾಡನ್ನು ಮನ್ನಾಡೆ ಎಷ್ಟು ಅಮೋಘವಾಗಿ ಹಾಡಿದ್ದಾರೆಂದರೆ ಈ ಹಾಡಿನ ಸನ್ನಿವೇಶದಲ್ಲಿ ಲವಲವಿಕೆಯಿಂದ ಟ್ವಿಸ್ಟ್ ಮಾಡಿದ ಮೆಹಮ್ಮೂದ್ ಆಗಿನ ಕಾಲದ ಜಂಪಿಂಗ್ ಜಾಕ್ ಗಳೆಂದು ಪರಿಗಣಿಸಲಾಗಿದ್ದ ಶಮ್ಮಿ ಕಪೂರ್, ಜಾಯ್ ಮುಖರ್ಜಿ ಮತ್ತು ಶಶಿ ಕಪೂರ್ ರವರಿಗೆ ಏನೂ ಕಡಿಮೆಯಿಲ್ಲದಂತೆ ನಟಿಸಿದ್ದಾನೆ. ಇದನ್ನು ವಿವರಿಸಿದ ಉದ್ದೇಶವಿಷ್ಟೆ ಮನದುಂಬಿ ಹಾಡುವ ಗಾಯಕ ನಟನ ನಟನೆಗೂ ಪ್ರೇರಣೆ ಯಾಗಬಲ್ಲ ಎಂಬುದು .
ಪಶ್ಚಿಮ ಬಂಗಾಲದ ಕಲ್ಕತ್ತಾದಲ್ಲಿ ಜನಿಸಿದ ಪ್ರಬೋಧ ಚಂದ್ರ ಡೇ ಸಂಗೀತದ ಸೆಳೆತಕ್ಕೆ ಒಳಗಾಗಿ ಮುಂಬೈಗೆ ಬಂದು ನೆಲೆ ನಿಂತು 1942 – 1990 ರ ವರೆಗೆ ಮೂರೂವರೆ ಸಾವಿರಕ್ಕೂ ಮಿಗಿಲಾಗಿ ಹಿಂದಿ ಪ್ರಮುಖವಾಗಿ ರಾಷ್ಟ್ರದ ಏಳು ಭಾಷೆಗಳಲ್ಲಿ ಹಾಡಿ, ತನ್ನ ಇಳಿ ವಯಸ್ಸಿಗೆ ಬೆಂಗಳೂರಿಗೆ ಬಂದು ನೆಲೆ ನಿಂತು 94 ವರ್ಷಗಳ ಕಾಲ ತುಂಬು ಜೀವನ ನಡೆಸಿದ ವ್ಯಕ್ತಿ ಅವರು. ಕಳೆದ ವರ್ಷ ಹೆಂಡತಿಯನ್ನು ಕಳೆದುಕೊಂಡ ಅವರು ವೃದ್ಧಾಪ್ಯದ ಕಾರಣಗಳಿಂದಾಗಿ ನಿಧನರಾದದ್ದು ಒಂದು ತುಂಬಲಾರದ ನಷ್ಟ. ಇದು ಸಾಹಿತ್ಯ ಕಲೆ ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ನಮ್ಮನ್ನು ಅಗಲಿ ಹೊದ ಸಂಧರ್ಭದಲ್ಲಿ ಬಳಸ ಬಹುದಾದ ಬಹುತೇಕ ಬಳಸುವ ಪದ ಕ್ಲೀಷೆಯದಾದರೂ ಒಂದು ರೀತಿಯಲ್ಲಿ ಅದು ನಿಜ ಕೂಡ. ಅವರು ಕಾಯಿಲೆ ಪೀಡಿತರಾದಾಗ ಅವರ ಆಸ್ಪತ್ರೆಯ ವೆಚ್ಚವನ್ನು ಭರಿಸಲಾಗದ ಅವರ ಹೆಣ್ಣು ಮಕ್ಕಳ ಆರ್ಥಿಕ ಪರಿಸ್ಥಿತಿ, ಅವರ ಖಾತೆಯಲ್ಲಿದ್ದ ಹಣವನ್ನು ಅವರ ಜಂಟೀ ಖಾತೆದಾರ ಮೋಸದಿಂದ ಪಡೆದು ಆಸ್ಪತ್ರೆಯ ಖರ್ಚಿಗೂ ಪರದಾಟ ನಡೆಸಬೇಕಾದ ಅವರ ಮಕ್ಕಳ ಸ್ಥಿತಿ, ಇದೊಂದು ನೋವಿನ ಸಂಗತಿ. ಹಿನ್ನೆಲೆ ಗಾಯನ ಕ್ಷೇತ್ರದಲ್ಲಿ ಉನ್ನತ ಸ್ಥಾನ ಗಳಿಸಿ ವೃದ್ಧಾಪ್ಯದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿ ಮರಣವನ್ನಪ್ಪಿದುದು ನಮ್ಮ ದೇಶದ ದಾರುಣ ಸ್ಥಿತಿಗೆ ಹಿಡಿದ ಕನ್ನಡಿ ಎನ್ನಬಹುದು.
ಅವರು ಹುಟ್ಟಿದ, ಗಾಯಕರಾಗಿ ಬೆಳೆದ ಮತ್ತು ವೃದ್ಧಾಪ್ಯದಲ್ಲಿ ನೆಲೆ ನಿಂತ ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ತೋರಿದ ಉದಾಸೀನ ಮನೋಭಾವ ಒಂದು ರೀತಿಯ ವಿಷಾದವನ್ನು ಮಾತ್ರ ಹುಟ್ಟು ಹಾಕಬಲ್ಲದು. ಮೊನ್ನೆ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳು ಮನ್ನಾಡೆ ಯವರ ಆಸ್ಪತ್ರೆ ಖರ್ಚಿನ ಬಾಕಿ ಉಳಿದ ಹಣ 25 ಲಕ್ಷ ರೂ.ಗಳನ್ನು ತೀರಿಸುವುದಾಗಿ ಘೋಷಿಸಿ ಅಷ್ಟರ ಮಟ್ಟಿಗೆ ಮಾನವತೆಯನ್ನು ಮೆರೆದಿದ್ದಾರೆ, ಆದರೆ ಇದೇ ತೀರ್ಮಾನವನ್ನು ಅವರು ಮನ್ನಾಡೆ ಬದುಕಿದ್ದಾಗ ಕನಿಷ್ಟ ಒಂದು ವಾರದ ಮುಂಚೆಯಾದರೂ ತೆಗೆದು ಕೊಂಡಿದ್ದರೆ ಅವರ ಮತ್ತು ರಾಜ್ಯದ ಘನತೆ ಇನ್ನಷ್ಟು ಹೆಚ್ಚುತ್ತಿತ್ತು, ಆದರೆ ಜಡ್ಡು ಗಟ್ಟಿದ ಬ್ಯೂರಾಕ್ರಸಿಗೆ ಇಂತಹ ಮಾನವೀಯ ಬದುಕಿನ ಸೂಕ್ಷ್ಮಗಳು ಬೇಗ ಅರ್ಥವಾಗುವುದು ಕಷ್ಟ. ಆದರೂ ತಡವಾಗಿಯಾದರೂ ಮನ್ನಾದಾಗೆ ಮಾನವೀಯತೆಯ ಕನ್ನಡಿಗರು ಉದಾರತನ ಮೆರೆದಿದ್ದಾರೆ. ಯಾರ ಹಂಗಿಗೂ ಕಾಯದೆ ಬದುಕಿಗೆ ವಿದಾಯ ಹೇಳಿದ ಮನ್ನಾದಾಗೆ ಸದ್ಗತಿ ಕೋರೋಣ ಅಲ್ಲವೆ ?
***
ಚಿತ್ರ ಕೃಪೆ; ಅಂತರ್ಜಾಲ
Comments
ಉ: ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ "
ಒಳ್ಳೆಯ ಶ್ರದ್ಧಾಂಜಲಿ ಮತ್ತು ಕಳಕಳಿಯುಕ್ತ ಲೇಖನ. ಬ್ಯೂರೋಕ್ರಸಿಯ ಬಗ್ಗೆ ಎಷ್ಟು ಹೇಳಿದರೂ (ಹಳಿದರೂ) ಕಡಿಮೆಯೇ!
In reply to ಉ: ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ " by kavinagaraj
ಉ: ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ "
ಕವಿ ನಾಗರಾಜ ರವರಿಗೆ ವಂದನೆಗಳು ಲೇಖನದ ಮೆಚ್ಚುಗೆಗೆ ಧನ್ಯವಾದಗಳು.
ಉ: ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ "
ಪಾಟೀಲರಿಗೆ ನಮಸ್ಕಾರ. ಮನ್ನಾಡೆಯವರ ಕುರಿತು ವಿಸ್ತೃತ ಲೇಖನ ಚೆನ್ನಾಗಿ ಮೂಡಿಬಂದಿದೆ. ನನಗೆ ಮನ್ನಾಡೆಯವರ ಮತ್ತು ಅವರು ಹಾಡಿದ ಕೆಲವು ಹಾಡುಗಳು ಪರಿಚಿತವಿದ್ದರೂ, ಮಿಕ್ಕೆಲ್ಲ ವಿವರಗಳ ಅರಿವಿರಲಿಲ್ಲ. ಅವರು ಕೊನೆಗಾಲದಲ್ಲಿ ಬೆಂಗಳೂರಿನಲ್ಲೆ ಇದ್ದರೆಂದು ತಿಳಿದು ಅಚ್ಚರಿಯೂ ಆಯ್ತು. ಭೌತಿಕವಾಗಿ ನಮ್ಮನ್ನಗಲಿದರೂ, ಇಂತಹ ಮಹಾನ್ ಗಾಯಕರು ಮನದಲ್ಲಿ ಸದಾಕಾಲ ಉಳಿಯುವುದು ತಮ್ಮ ಅದ್ಭುತ ಗಾಯನ / ಹಾಡುಗಳಿಂದಲೆ. ಅವರ ಕುರಿತ ಸಕಾಲಿಕ ಮತ್ತು ಸೂಕ್ತ ಲೇಖನಕ್ಕಾಗಿ ನಮನಗಳು.
ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
In reply to ಉ: ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ " by nageshamysore
ಉ: ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ "
ನಾಗೇಶ ಮೈಸೂರು ರವರಿಗೆ ವಂದನೆಗಳು
ಮನ್ನಾಡೆ ಕುರಿತು ಬರೆದ್ ಲೇಖನಕ್ಕೆ ತಾವು ಬರೆದ ಪ್ರತಿಕ್ರಿಯೆ ಓದಿದೆ. ಲೇಖನದ ಮೆಚ್ಚುಗೆಗೆ ಧನ್ಯವಾದಗಳು.
ಉ: ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ "
ಪಾಟೀಲರಿಗೆ ನಮಸ್ಕಾರಗಳು.
ದಿವಂತಹ ಮನ್ನಾಡೆ ಕುರಿತ ಸಾಂದರ್ಭಿಕ ಲೇಖನ ನನಗೆ ತುಂಬಾ ಹಿಡಿಸಿತು.ಹಾಗೆಯೆ ಗಾಯಕನ ಸಲುವಾಗಿ ಇಂದಿನ ಸಮಾಜ ತೋರಿದ ನಿರುತ್ಸಾಹ ಸಹ ಮನದಲ್ಲಿ ವಿಷಾದವನ್ನುಂಟು ಮಾಡಿತು.ಅವರು ಹಾಡಿದ 'ಪೂಛೋನ ಕೈಸೆ 'ಕೇಳಿ ತಲೆ ತೂಗುವ ನಮ್ಮಂಥ ಹಿರಿಯರೆಲ್ಲೋ ! ಇತ್ತೀಚೆಗೆ ಬಿಡುಗಡೆಯಾದ ತಮಿಳು ಚಿತ್ರದ ' ಲುಂಗಿ ಡ್ಯಾನ್ಸ ' ಹಾಡನ್ನು ಕೇಳಿ ಹುಚ್ಚೆದ್ದು ಕುಣಿಯುವ ಯುವ ಜನತೆ ಯಲ್ಲೋ ! ಅಲ್ಲವೆ?.
ವಂದನೆಗಳು.
In reply to ಉ: ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ " by swara kamath
ಉ: ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ "
ರಮೇಶ ಕಾಮತರಿಗೆ ವಂದನೆಗಳು
ಮನ್ನಾಡೆ ಕುರಿತು ಬರೆದ ಲೇಖನಕ್ಕೆ ತಾವು ಬರೆದ ಪ್ರತಿಕ್ರಿಯೆ ಓದಿದೆ. ಆತನೊಬ್ಬ ಅಪ್ರತಿಮ ಗಾಯಕ ಆತನ ಹಾಡಗುಗಳನ್ನು ತಾನು ಕೇಳುತ್ತಿದ್ದೆ ಎಂದು ಶ್ರೇಷ್ಟ ಗಾಯಕ ರಫಿ ಹೇಳಿದ್ದಾನೆ ಎಂದ ಮೇಲೆ ಬೇರೆ ಮೆಚ್ಚುಗೆ ಅವನಿಗೆ ಬೇಕಿಲ್ಲ. ಇದು ತಲೆಮಾರುಗಳ ನಡುವಿನ ಅಂತರ ವೆನ್ನಿಸುತ್ತೆ, ಆದರೂ ಆತನನ್ನು ಬೆಂಗಳೂರಿಗರು ಒಬ್ಬ ಸಾಂಸ್ಕೃತಿಕ ರಾಯಭಾರಿಯನ್ನಾಗಿ ಆತನನ್ನು ಬಳಸಿ ಕೊಳ್ಳಬಹುದಿತ್ತು. ಅದು ಆಗಲಿಲ್ಲ. ಲುಂಗಿ ಡಾನ್ಸ್ ಹಾಡು ಇಂದು ಕೇಳಿ ನಾಳೆ ಮರೆಯಬುದಾದ ಗೀತೆ, ಆದರೆ ಮನ್ನಾಡೆ ಸಾರ್ವಕಾಲಿಕ ಗಾಯಕ, ಮೆಚ್ಚುಗೆಗೆ ಧನ್ಯವಾದಗಳು.
ಉ: ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ "
ಪಾಟೀಲರಿಗೆ ನಮಸ್ಕಾರಗಳು,
ಮನ್ನಾ ಡೇ ಕನ್ನಡದಲ್ಲಿ ಹಾಡಿದ ಇನ್ನೂ ೩ ಹಾಡುಗಳು -
೧. ಕಣ್ಣಿಲ್ಲವೇನೂ ನಿಜ ಕಾಣದೇನೂ, ೨. ಅಣು ಅಣುವಿನಲ್ಲಿ ವಿಷದ್ವೇಷ ಜ್ವಾಲೆ - ಚಿತ್ರ ’ಮಾರ್ಗದರ್ಶಿ’
- ಕೇಳಲು ಇಲ್ಲಿ ಚಿಟುಕಿಸಿ - http://www.dhingana.com/kannada/margadarshi-songs-rajkumar-sampat-38563d1
೩. ನೀರೆ ನೀನು ಬಾರೆ ಬೇಗ - ಚಿತ್ರ ’ಕ್ರಾಂತಿವೀರ ಸಂಗೊಳ್ಳಿರಾಯಣ್ಣ’ (೧೯೬೭)
In reply to ಉ: ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ " by keshavmysore
ಉ: ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ "
ಕೇಶವ ಮೈಸೂರು ರವರಿಗೆ ವಂದನೆಗಳು
ಮಾನ್ಯರೆ ತಾವು ಮನ್ನಾಡೆ ಹಾಡಿದ ಮಾರ್ಗದರ್ಶಿ ಚಿತ್ರದ ಎರಡು ಹಾಡುಗಳು ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಒಂದು ಹಾಡನ್ನು ಕುರಿತು ಲಿಂಕ್ ನೀಡಿದ್ದೀರಿ, ಕೇಳಿದೆ ಹಾಡುಗಳು ಮಧುರವಾಗಿವೆ. ಆ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಪಾಟೀಲ ಎನ್ನುವವರೊಬ್ಬರು ( ಅವರ ಪೂರ್ಣ ಹೆಸರು ನೆನಪಿಗೆ ಬರುತ್ತಿಲ್ಲ ) ನಾಯಕಿಯ ಪಾತ್ರದಲ್ಲಿ ಸುಮಿತ್ರಾಬಾಯಿ ಕುಂದಾಪುರ ಎನ್ನುವವರು ಅಭಿನಯಿಸಿದ್ದಂತೆ ನೆನಪು, ಅದರಲ್ಲಿ ' ಬೆಳ್ಳನೆ ಬೆಳಗಾಯಿತು ' ಹಾಡನ್ನು ಲತಾ ಮಂಗೇಶಕರ್ ಹಾಡಿದ್ದಾಳೆ, ಇದರ ಮೂಲದ ಹಾಡು ' ಜ್ಯೋತಿ ಕಲಶ ಝಲಕೆ ' ಯನ್ನು' ಭಾಭಿ ಕಿ ಚೂರಿಯಾ ' ಚಿತ್ರದಲ್ಲಿ ಮೀನಾಕುಮಾರಿ ಪಾತ್ರಕ್ಕೆ ಅಳವಡಿಸಲಾಗಿತ್ತು, ಆ ಧಾಟಿಯನ್ನೆ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ ಎಂದು ನೆನಪು. ಮನ್ನಾಡೆ ಹಾಡಿನ ಲಿಂಕ್ ನೀಡಿದ್ದಕ್ಕೆ ಧನ್ಯವಾದಗಳು.
In reply to ಉ: ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ " by H A Patil
ಉ: ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ "
ಹಾಗೆಯೇ, ೧೯೬೭ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ದಲ್ಲಿ ಮನ್ನಾ ಡೇ ರವರ ಇನ್ನೂ ಒಂದು ಹಾಡು - ’ಜಗವಿದು ಸೋಜಿಗ...’
ಆ ಚಿತ್ರದಲ್ಲಿ ಅಭಿನಯಿಸಿದವರು - ವಿ. / ಬಿ. ಎಸ್. ಪಾಟೀಲ್, ಆಭಿ ಭಟ್ಟಚಾರ್ಯ, ಕಾಮಿನಿ ಕದಮ್ ಇತರರು ಎನ್ನುವುದು ವೈಕಿ ಪೀಡಿಯದ ಮಾಹಿತಿ; ಈ ಚಿತ್ರದಲ್ಲಿ ಲತಾ ಮಂಗೇಶ್ಕರ್ ಅಲ್ಲದೆ, ಅವರ ಸಹೋದರಿಯರಾದ ಆಶಾ ಮತ್ತು ಉಷಾ ಮಂಗೇಶ್ಕರ್ ಕೂಡಾ ಹಾಡಿದ್ದಾರೆ.
In reply to ಉ: ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ " by keshavmysore
ಉ: ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ "
ಕೇಶವ ಮೈಸೂರು ರವರಿಗೆ ವಂದನೆಗಳು
ತಮ್ಮ ಮರು ಪ್ರತಿಕ್ರಿಯೆ ಓದಿದೆ, ಬಹುಶಃ 1963 - 64 ನೇ ಸಾಲು ಎಂದು ಕಾಣುತ್ತದೆ. ಗುಡಗೇರಿಯಲ್ಲಿ ನಾನು ಹೈಸ್ಕೂಲಲ್ಲಿ ಅಭ್ಯಾಸ ಮಾಡುತ್ತಿದ್ದೆ, ಆಗ ಗುಡಗೇರಿ ಬಸವರಾಜ್ ' ಸಂಗಮೇಶ್ವರ ನಾಟ್ಯ ಸಂಘ ' ಎನ್ನುವ ನಾಟಕ ಕಂಪನಿಯೊಂದನ್ನು ಹೊಸದಾಗಿ ಹರಕುಣಿ ಸಿದ್ದಪ್ಪ ಎದನ್ನುವವರ ಜೊತೆಗೂಡಿ ಪ್ರಾರಂಭಿಸದ್ದರು. ಅವರು " ಸಾಕು ಮಗಳು " ನಾಟಕಕ್ಕೆ ಬಿ.ಎಸ್.ಪಾಟೀಲ ( ನೀವು ಬರೆದದ್ದನ್ನು ನೋಡಿ ನೆನಪಿಗೆ ಬಂತು ) ಮತ್ತು ಸುಮಿತ್ರಾ ಬಾಯಿ ಕುಂದಾಪುರ್ ರವರು ಕೆಲವು ದಿನಗಳ ಕಾಲ ಆ ನಾಟಕದ ನಾಯಕ ಮತ್ತು ನಾಯಕಿ ಪಾತ್ರ ಮಾಡಲು ಬಂದಿದ್ಚರು, ಆ ಬಗೆಗೆ ಪ್ರಚಾರ ಮಾಡುತ್ತಿದ್ದುದನ್ನು ಕೇಳಿ ನಾಟಕ ನೋಡಿದ ನೆನಪು, ಆದರೆ ನನಗೆ ಆ ಚಿತ್ರ ನೋಡಲಾಗಿಲ್ಲ, ತಾವು ನಮೂದಿದಿಸ ರೀತಿ ಅಭಿಭಟ್ಟಾಚಾರ್ಯ ಮತ್ತು ಕಾಮಿನಿ ಕದಮ್ ನಟಿಸಿರಬಹುದು ಅವರಿಬ್ಬರೂ ಆ ಕಾಲದಲ್ಲಿ ಹಿಂದಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದರು, ಆದರೆ ಸುಮಿತ್ರಾಬಾಯಿ ಕುಂದಾಪುರ ರವರು ಸಹ ನಾಯಕಿಯಲ್ಲದ ಬೇರೆ ಪಾತ್ರವನ್ನು ನಿರ್ವಹಿಸಿರ ಬಹುದು ಎಂದು ನನ್ನ ಅನಿಸಿಕೆ, ತಮ್ಮ ಮರು ಪ್ರತಿಕ್ರಿಯೆಗೆ ಧನ್ಯವಾದಗಳು.
ಉ: ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ "
ಪಾಟೀಲರೆ, ಮನ್ನಾಡೆ ನಿಧನದ ಮಾರನೇ ದಿನ ನಿಮ್ಮಿಂದ ಈ ಲೇಖನ ಬರಬಹುದೆಂದು ನಿರೀಕ್ಷಿಸಿದ್ದೆ. ತಡವಾದರೂ ಉತ್ತಮ ಮನ್ನಾಡೆ ಶೃದ್ಧಾಂಜಲಿ ಲೇಖನ.
>>ಸ್ವಾತಂತ್ರಪೂರ್ವದಲ್ಲಿ ಚಲನಚಿತ್ರ ರಂಗದಲ್ಲಿ ಮೋಡಿ ಮಾಡಿದ ಗಾಯಕ ಕುಂದನಲಾಲ್ ಸೈಗಲ್. ಆತ ಗಾಯಕನಲ್ಲದೆ ಪ್ರತಿಭಾವಂತ ನಾಯಕ ನಟ ಕೂಡ ಆಗಿದ್ದ.
-> ನನ್ನ ಮಾವ(ತಂದೆಯ ತಂಗಿ ಗಂಡ)ನವರು ಸೈಗಲ್ ಅವರ ಭಾರೀ ಅಭಿಮಾನಿ. ಬೆಂಗಳೂರಿಂದ ಬರುವಾಗೆಲ್ಲಾ ಸೈಗಲ್ ಹಾಡಿನ ಕ್ಯಾಸೆಟ್ ತಾ ಎನ್ನುತ್ತಿದ್ದರು. (ನಾವು ಈಗಿನ ಹಾಡುಗಾರರನ್ನು ಅಣಕಿಸುವಂತೆ) ಕಿಶೋರ್, ರಫಿ..ಯವರೆಲ್ಲಾ ತೀರಾ ಸಾಮಾನ್ಯ ಗಾಯಕರು ಎಂದು ಹಾಸ್ಯ ಮಾಡುತ್ತಿದ್ದರು.ಆ ಕಾಲದ ಹಾಡುಗಾರರಲ್ಲಿ ಮನ್ನಾಡೇಯನ್ನು ಮಾತ್ರ ಮೆಚ್ಚುತ್ತಿದ್ದರು- ಕಾಬೂಲಿವಾಲಾ ಸಿನೆಮಾದ "ಎ ಮೆರೆ ಪ್ಯಾರೇ ವತನ್.." ಇಷ್ಟಪಟ್ಟು ಹಾಡುತ್ತಿದ್ದರು...
>>ನಾವು ನಮ್ಮ ಬಾಲ್ಯದ ದಿನಗಳಲ್ಲಿ ಪ್ರಾಥಮಿಕ ಶಾಲೆಗೆ ಹೋಗುವಾಗ ಹೋಟೆಲುಗಳ ರೇಡಿಯೋಗಳಲ್ಲಿ ಕೇಳಿ ಬರುತ್ತಿದ್ದ ಹಾಡುಗಳಿಗೆ ಕಿವಿಯಾಗುತ್ತ ಶಾಲೆಗೆ ಹೋಗುತ್ತಿದ್ದೆವು. ಹಿಂದಿ ಭಾಷೆಯ ಅರ್ಥ ನಮಗಾಗುತ್ತಿರಲಿಲ್ಲ, ಹಾಡಿನ ಸಂಗೀತ ಹಾಡುಗಾರ ಅಥವ ಹಾಡುಗಾರ್ತಿಯ ಶೈಲಿ ನಮ್ಮ ಮನ ತಟ್ಟುತ್ತಿತ್ತು.-> ನಿಜ ಪಾಟೀಲರೆ. ಆ ಕಾಲದ ಹಿಟ್ ಹಾಡು "ಸತ್ಯಮೇವ ಜಯತೇ.." ಹಾಡಿದ್ದು ಮನ್ನಾಡೇ ಅಂತ ತಿಳಿದಿರಲಿಲ್ಲ.
"ಪೂಚೋ ನ ಕೈಸೆ ಮನ್ ರೈನ್ ಬಿತಾಯಿ.., ಲಾಗಾ ಚುನರೀ ಮೆ ದಾಗ್..., ಎ ಮೆರೆ ಜೊಹ್ರ ಜಬೀನ್.., ಯಾರಿ ಹೆ ಇಮಾನ್ ಮೇರಾ.., ಎಕ್ ಚತುರ ನಾರ್.., ಒಂದಕ್ಕಿಂತ ಒಂದು ಸುಮಧುರ ಹಾಡುಗಳು. ಪ್ಯೂರ್ ವೆಜಿಟೇರಿಯನ್ಗಳು ಸಹ "ಚೆಮ್ಮೀನ್" ಇಷ್ಟಪಡಲು ಕಾರಣಗಳಲೊಂದು ಮನ್ನಾಡೇ ಹಾಡಿದ ಸೂಪರ್ ಹಾಡು- "ಮಾನಸ..ವರೂ..."
ಶೋಲೆ ಚಿತ್ರದ ಅಮಿತಾಬ್-ಧರ್ಮೇಂದ್ರ ಜೋಡಿ ಹಾಡು-"ಯೇ ದೋಸ್ತಿ.." ಹಮ್ ನಹಿ ಭೂಲೆಂಗೆ. ಇನ್ನೂ ಒಂದು ಹಾಡು ಚಿತ್ರದಲ್ಲಿ ಸೇರಿಸಿಲ್ಲ -http://www.dailymotion.com/video/x14skek_g9-premiers-sholay-movie-shelve... . ಇನ್ನು - ಮನ್ನಾಡೇ ಬಗ್ಗೆ ಉದಾಸೀನ ಭಾವ.. ಈ ಕಾಲ ಹಾಗೇ.. :(
In reply to ಉ: ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ " by ಗಣೇಶ
ಉ: ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ "
ಗಣೇಶ ರವರಿಗೆ ವಂದನೆಗಳು
ಮನ್ನಾಡೆ ಲೇಖನಕ್ಕೆ ತಾವು ಬರೆದ ಪ್ರತಿಕ್ರಿಯೆ ಓದಿದೆ, ಸೊಗಸಾಗಿ ಮನ್ನಾದಾ ಬಗ್ಗೆ ಪ್ರತಿಕ್ರಿಯಿಸಿದ್ದೀರಿ. ಚಲನಚಿತ್ರ ರಂಗ ನನ್ನನ್ನು ಬಾಲ್ಯದಲ್ಲಿ ನನ್ನನ್ನು ಬಹಳ ಅಕರ್ಷಿಸಿದಂತಹುದು. ಅದು ಯಾವುದೇ ಭಾಷೆಯಿರಲಿ ಹಿಂದುಸ್ತಾನಿ ಸಂಗೀತ ಪರಂಪರೆಯ ರಾಗಗಳನ್ನು ಅಳವಿಡಿಸಿದ ಗೀತೆಗಳು ಅಂದಿನಂತ ನನಗೆ ಇಂದೂ ಸಹ ಇಷ್ಟ. ನೀವಂದಂತೆ ಮನ್ನಾಡೆ ತೀರಿ ಹೋದ ಕೂಡಲೆ ಬರೆಯಲಾಗಲಿಲ್ಲ, ಎಲ್ವರಿಗೂ ಗೊತ್ತಿರುವ ವಿಷಯವನ್ನು ಮತ್ತೆ ಬರೆದು ಓದುಗನಿಗೆ ಬೋರ್ ಹೊಡೆಸಬಾರದು ಎನ್ನುವ ಧೋರಣೆ. ಬರಿ ಶ್ರದ್ಧಾಂಜಲಿ ಲೇಖನ ಬರೆಯ ಬೇಕೊ ಬೆಡವೋ ಎನ್ನುವ ಆತಂಕ ಒಂದು ಕಡೆ. ಮನ್ನಾಡೆ ಯಂತಹ ಮೇರುಗಾಯಕ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಪುರಸ್ಕೃತನೊಬ್ಬನ ಕೊನೆಗಾಲದ ಅಸಹಾಯಕ ಸ್ಥಿತಿ ನನ್ನನ್ನು ಬಹಳ ಕಾಡಿತು, ಹೀಗಾಗಿ ಆತನ ಕುರಿತು ನನಗೆ ನೆನಪಿದ್ದಷ್ಟನ್ನು ದಾಖಲಿಸಿದೆ. ನನ್ನ ಮನರಂಜಿಸಿದ ಸಾರ್ವಕಾಲಿಕ ಸಿನೆಮಾ ಹಿನ್ನೆಲೆ ಗಾಯಕರಲ್ಲೊಬ್ಬನಾದ ಆತನ ಬಗೆಗೆ ಬರೆಯಬೇಕಿನಿಸಿತು ಬರೆದೆ, ತಡವಾಗಿ ಬರೆದದ್ದಾದರೂ ಅದನ್ನು ಓದಿ ಹಲವು ಸಂಪದಿಗರು ಮೆಚ್ಚಿ ಬರೆದಿದ್ದೀರಿ, ನಿಮ್ಮೆಲ್ಲರ ಪ್ರತಿಕ್ರಿಯೆಗೆ ಧನ್ಯವಾದಗಳು.
ಉ: ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ "
ಹಿರಿಯರಾದ ಪಾಟೀಲರವರಿಗೆ ಲಕ್ಷ್ಮೀಕಾಂತ ಇಟ್ನಾಳ ರ ನಮಸ್ಕಾರ. ಮನ್ನಾಡೆ ಯವರ ವ್ಯಕ್ತಿ ಚಿತ್ರ, ಅವರ ಸಾಧನೆ, ಅವರೊಡನೆ ವ್ಯವಸ್ಥೆ ನಡೆದುಕೊಂಡ ರೀತಿ ತುಂಬ ಮನಮುಟ್ಟುವ ಹಾಗೆ ಬರೆದಿದ್ದೀರಿ. ಉತ್ತಮ ಸಕಾಲಿಕ ಲೇಖನಕ್ಕೆ ಧನ್ಯವಾದಗಳು.
In reply to ಉ: ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ " by lpitnal
ಉ: ಇನ್ನಿಲ್ಲದ ಗಾನ ಲೋಕದ ರೂಪಕ ಮತ್ತು ಪ್ರತಿಮೆ" ಮನ್ನಾಡೆ "
ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
ತಾವು ಬಹಳ ಸಮಯದ ನಂತರ ಸಂಪದಕ್ಕೆ ಮರಳಿದ್ದೀರಿ ತಮ್ಮ ಪ್ರತಿಕ್ರಿಯೆ ನೋಡಿ ಬಹಳ ಸಂತಸವಾಯಿತು. ಲೇಖನದ ಮೆಚ್ಚುಗೆಗೆ ಧನ್ಯವಾದಗಳು.