ಮುರಿದು ಬಿದ್ದ ಪಿಎಸ್ಪಿ
ಬೆಳೆಯುವ ಮಕ್ಕಳೊಂದಿಗೆ ದೊಡ್ಡವರ ಅನುಭವವೂ ಬೆಳೆಯುತ್ತಾ ಹೋಗುವುದು ಒಂದು ಸಹಜ ಪ್ರಕ್ರಿಯೆ. ದೊಡ್ಡವರ ಸಹನೆ, ತಾಳ್ಮೆಯನ್ನು ಕೆಣಕಿ ಪರೀಕ್ಷಿಸಿ ಸಿಟ್ಟಿನ ದೂರ್ವಾಸರನ್ನು ಮೆತ್ತಗಾಗಿಸಲೆ ಆಗಲಿ ಅಥವಾ ಸಿಟ್ಟಿನ ಕಿಡಿ ಕೆದರಿ ಅಗ್ನಿಪರ್ವತ ಸಿಡಿಸಿದ ಲಾವಾ ರೂಪವೆ ಆಗಲಿ - ತಾವು ಮಕ್ಕಳಾಗಿದ್ದಾಗ ಏನೆಲ್ಲಾ ತರ ಗೋಳು ಹಾಕಿಕೊಂಡು ತಲೆ ತಿಂದಿರಬಹುದೆಂಬ ಅರಿವಾಗುವುದು, ತಮ್ಮ ಮಕ್ಕಳಿಂದ ಅದೆ ಅನುಭವಕ್ಕೊಳಪಟ್ಟಾಗಲೆ. ವಾಸ್ತವವೆಂದರೆ, ಆ ಸಂಧರ್ಭಗಳು ಅವಕಾಶಗಳೂ ಹೌದು, ದುರಂತವಾಗುವ ಸಾಧ್ಯತೆಯೂ ಹೌದು. ಅದನ್ನೊಂದು ಕಲಿಕೆಯ ಅವಕಾಶವೆಂದು ತಿಳಿದು, ಮಕ್ಕಳ ಮನಸಿನ ಭಾವನೆ ಹಿನ್ನಲೆ ಪರಿಗಣಿಸಿ, ಅವರಂತೆ ಆಲೋಚಿಸಿ ಶಾಂತ ರೀತಿಯ ರಾಜೀಸೂತ್ರದಿಂದೊಡಗೂಡಿದ ಅಥವ ಸರ್ವಸಮ್ಮತವಾದ ಪರಿಹಾರ ಹುಡುಕುವುದು ಒಂದು ವಿಧಾನ. ಇದರಿಂದ ಸಮಸ್ಯೆ ಪರಿಹಾರವಾಗುವುದು ಮಾತ್ರವಲ್ಲ, ಅಂತಹ ಪರಿಸ್ಥಿತಿಗಳನ್ನು ನಿಭಾಯಿಸುವ ಪ್ರಬುದ್ಧತೆ, ಪಕ್ವತೆಯತ್ತ ಬೆಳೆಯಲು ಅನುವು ಮಾಡಿಕೊಡುತ್ತದೆ. ಹಾಗಲ್ಲದೆ ಸಿಟ್ಟಿನ ಕೈಗೆ ಬುದ್ದಿ ಕೊಟ್ಟು ರಣರಂಗವಾಗಿಸಿದರೆ, ಸಂಬಂಧಗಳ ಅಂತರಗಂಗೆ ಹಳಸುತ್ತಾ ನಡುವಿನ ಕಂದರಗಳನ್ನು ವಿಸ್ತರಿಸುವ ನಿರಂತರ ಯಾತನೆಯಾಗಿ ಪರಿವರ್ತಿತವಾಗಿ ಹೋಗುತ್ತದೆ.
.
ದುರದೃಷ್ಟವಶಾತ್ ಇದು ಬಹುತೇಕ ಎಲ್ಲರಿಗೂ ಗೊತ್ತಿರುವ ಅಂಶವಾದರೂ ಒಬ್ಬ ವ್ಯಕ್ತಿ ಪ್ರತಿಕ್ರಿಯಿಸುವ ರೀತಿ, ಆ ಸಂಧರ್ಭದ ಪರಿಸ್ಥಿತಿ, ಹವಾಗುಣ, ಮನಸ್ಥಿತಿಗಳ ಮೇಲೆ ಹೆಚ್ಚು ಅವಲಂಬಿಸಿರುತ್ತದೆ. ಅಲ್ಲಿ ಚಿಂತನೆಯ ನಂತರ ಪ್ರತಿಕ್ರಿಯೆಯಾಗುವ ಬದಲು, ಮೊದಲು ಪ್ರತಿಕ್ರಿಯೆ ನಂತರ ಚಿಂತನೆಯಾಗಿಬಿಡುತ್ತದೆ. ಎಲ್ಲಾ ಮುಗಿದ ಮೇಲೆ ಹಾಗಾಗಬಾರದಿತ್ತು ಎಂದು ಮನ ಆಮೇಲೆ ಹಪಹಪಿಸಿದರೂ, ಈಗಾಗಲೆ ತಡವಾಗಿ ಹೋಗಿ, ಆದದ್ದನು ಬದಲಿಸಲು ಸಾಧ್ಯವಾಗದೆ, ಹಮ್ಮಿನ ಅಹಂನಿಂದಾಗಿ ಕ್ಷಮೆ ಕೇಳಿ ಹೊಂದಾಣಿಸುವ ಮನಸತ್ವಕ್ಕೂ ದಾರಿಕೊಡದೆ, ವಿಷಚಕ್ರದ ಹಾಗೆ ನಿರಂತರವಾಗಿ ಹರಿಯುವ ಕೊಳಕು ತೊರೆಯಾಗಿಬಿಡುತ್ತದೆ. ಒಂದು ಹಂತ ದಾಟಿದ ಮೇಲಂತೂ ಈ ದೂರ ಎಷ್ಟು ಆಗಾಧವಾಗಿ ಬಿಡುತ್ತದೆಂದರೆ - ಅವರು ಬರಿ ಮಾತನಾಡುತ್ತಿರುತ್ತಾರೆ ಹೊರತು ಸಂವಹಿಸುತ್ತಿರುವುದಿಲ್ಲ!
.
ಆದ ಕಾರಣ ಮಕ್ಕಳೊಡನೆಯ ನಂಟನ್ನು ಬಲು ಸೂಕ್ಷ್ಮಜ್ಞತೆಯಿಂದ ಕಟ್ಟುತ್ತಾ ಹೋಗಬೇಕು. ತಪ್ಪುಗಳಾದರೂ ಸಾಧ್ಯವಾದಷ್ಟು ಶೀಘ್ರ ತೇಪೆ ಹಾಕಿ ಧನಾತ್ಮಕದತ್ತ ತಿರುಗಿಸಿಕೊಳ್ಳಬೇಕು. ಆದರಿದು ಬಾಯಲೇಳಲಷ್ಟೆ ಸುಲಭ, ಆಚರಣೆ ಬಲು ಕಷ್ಟ. ಅದರಿಂದಾಗಿಯೆ ಇದೊಂದು ಕಲಿಕೆಯ ಅವಕಾಶ ಎಂದದ್ದು. ಅದನ್ನು ಕಳೆದುಕೊಳ್ಳದೆ ಸದುಪಯೋಗಪಡಿಸಿಕೊಂಡವ ಜಾಣ; ವಿಪರೀತಕ್ಕೇರಿಸಿಕೊಂಡವ ಸದಾ ಸರ್ವದಾ ನಿತ್ರಾಣ :-)
.
ಯಾವುದೊ ಸಂವಾದ ಕೋಪದ ಗಳಿಗೆಯಲ್ಲಿ ಮಗ ಬೆಲೆಬಾಳುವ ವಸ್ತುವನ್ನು ಹಾಳುಗೆಡವಿದಾಗ ಉಂಟಾಗುವ ಆಲೋಚನೆ, ಭಾವಲಹರಿ, ಕಲಿಕೆಯ ನೋಟ, ದೌರ್ಬಲ್ಯತೆಯ ಒದ್ದಾಟ, ಎಲ್ಲವನ್ನು ಮೀರಿಸಿ - ಈ ಮಕ್ಕಳು ಮಾನಸಿಕವಾಗಿ ಬೆಳೆಯದೆ ಜೀವಮಾನ ಪೂರ್ತಿ ಹೀಗೆಯೆ ಇದ್ದುಬಿಡುತ್ತಾರೇನೊ ಎನ್ನುವ ಧಾವಂತ , ಆತಂಕ - ಈ ಎಲ್ಲ ತುಣುಕುಗಳ ಸಂಕಲಿತ ರೂಪದ ಕವನ "ಮುರಿದುಬಿದ್ದ ಪಿಎಸ್ಪಿ"
ಹಾಗೆಯೆ ಹೇಳದಿದ್ದರೂ ಅಂತರ್ಗತವಾಗಿರುವ ಅಥವ ಮಕ್ಕಳ ಮನದಲ್ಲಿ ಹುಟ್ಟಬಹುದಾದ ತಾರ್ಕಿಕ ಪ್ರಶ್ನೆ - 'ಅಂದ ಹಾಗೆ ಈ ಅಪ್ಪಗಳು ಬೆಳೆಯುವುದು ಯಾವಾಗ?' ಎಂದು. ಕೆಲವೊಮ್ಮೆ ಪ್ರಶ್ನೆಯಲ್ಲೆ ಉತ್ತರವಿರುವಂತೆ, ಇಲ್ಲಿ ಉತ್ತರದಲ್ಲೆ ಪ್ರಶ್ನೆಗಳಿರುವ ಸಾಧ್ಯತೆಯೆ ಹೆಚ್ಚು !
.
ಮುರಿದು ಬಿದ್ದ ಪಿಎಸ್ಪಿ
______________________
.
ಮಕ್ಕಳ ಕೋಪವೇನು ಕಡಿಮೆಯೆ?
ಬೆಳೆದ ಮಕ್ಕಳಿಗೆ
ಲಾರ್ಜು, ಎಕ್ಸ್ಟ್ರಾಲಾರ್ಜು
ಬೆಳೆಯುವ ಮಕ್ಕಳಿಗೆ
ಸ್ಮಾಲು, ಮೀಡಿಯಂ
ಇನ್ನೂ ಬೆಳೆಯದವಕ್ಕೆ
ಮಿನಿ, ಮೈಕ್ರೊ, ನ್ಯಾನೊ..
ಒಟ್ಟಾರೆ ವಿಶ್ವರೂಪವೆಂದದ್ದು
ಕೋಪವನ್ನು ನೋಡೆ ಇರಬೇಕು..
ಅದು ತಾಳುವ, ಏನೆಲ್ಲಾ ರೂಪ
ಮಾಡುವ ಏನೆಲ್ಲಾ ಅನಾಹುತ
ತಡಕಾಡಿಸುವ ಎಷ್ಟೆಲ್ಲಾ ಅವಾಂತರ..
.
ನೂರಾರು
ಸಾವಿರಾರು ಡಾಲರು
ಸುರಿದು ತಂದ ಗ್ಯಾಡ್ಜೆಟ್ಟುಗಳು
ವೀಡಿಯೋ ಗೇಮ್ಸ್
ಪಿಎಸ್ಪೀಗಳು
ಹಗಲಿರುಳು ಕೂತು
ಪಾಠಕ್ಕಿಂತ ಹೆಚ್ಚು ಶ್ರದ್ದೆಯಿಂದ
ಯೂಸರ್ ಮ್ಯಾನುಯಲ್ ಓದದೆ
ಕಲಿತ ಆಟದ ಪಾತ್ರಗಳು,
ನಿಯಮಗಳು
ತಡಕಾಡಿಸುವ ಹೆಸರುಗಳು..
.
ಜಪ್ಪಯ್ಯ ಎಂದು ತಲೆಕೆಳಗಾದರೂ
ನಾವರಿಯಲಾಗದ ಬೆರಳ ಚಲನೆ
ಹೊಂದಾಣಿಸಲಾಗದ ಸಂಯೋಜನೆ
ಆಡಲಾಗದ ಆಟ ಹಂತಗಳು
ದಾಟಲಾಗದ ಒಂದೂ ಲೆವಲ್ಲುಗಳು..
ಇವಕ್ಕದೆಲ್ಲಿಂದ ಬಂತೊ ಪಟಪಟ?
ನೋಡುತ್ತಲೆ ಎಂಟು, ಹತ್ತನೆ ಹಂತ
ಮಟ್ಟ ಸ್ತರ ಎತ್ತರವೆಲ್ಲಾ ದಾಟಿ
ಒಂದೆ ಗಳಿಗೆಯಲ್ಲಿ ಎಲ್ಲಾ ಕರಗತ
ಆಟದೆಲ್ಲಾ ಅಂತರ್ಗತ
ಕರತಲಾಮಲಕ..!
.
ಪೀಳಿಗೆಯಾ ಅಂತರವೆನ್ನಿ
ವಯಸಿನ ಕಂದರವೆನ್ನಿ
ಮೆದುಳಿನ ಬೆಳವಣಿಗೆಯೆನ್ನಿ
ಈ ಕಾಲಮಾನದ ವ್ಯಾಪಾರವೆನ್ನಿ
ಒಟ್ಟಾರೆ ಮೆಚ್ಚಲು ಅನಿಷ್ಟ
ಮೆಚ್ಚದಿರಲೂ ಕಷ್ಟ
ಹುಚ್ಚು ಹಿಡಿದಂತವರ ನೋಡಿ
ಸುಮ್ಮನೆ ಕೂತಿರಲಾಗದ ಅಸ್ಪಷ್ಟ
ಹಾಳಾಗಲಿ ಬಿಡಿ ಆಡಿಕೊಂಡೆ
ಚಿಗುರಲಿ ಹೇಗೊ ಬುದ್ದಿಮತ್ತೆ.
.
ಅಬ್ಬಬ್ಬಾ..ಏನು ಏಕಾಗ್ರತೆ?
ಗಮನ ಕೇಂದ್ರೀಕೃತ ನಿಶ್ಯಬ್ದ ಸಂತೆ
ಅವರವರ ಜಗದಲಿ ನಿರತ
ಅವರವರದೆ
ಕ್ಲಿಯೋಪಾತ್ರ;
ಯಾರೊ ಏನೊ ಬೇಕೆಂದಿತ್ತ
ತುಸು ಅಲುಗಾಡಿದರೂ ಸಾಕಿತ್ತ..
ಆ ಕೋಪವದೆಲ್ಲಿತ್ತ?
ಕಾರಣ ನಿಮಿತ್ತ ..
....
ಎಸೆದ ಪಿಎಸ್ಪಿ
ಮೂಲೆಯ ಚೂರಲಿತ್ತ
ಮತ್ತೆ ಆಡಲಾಗದ
ಅಂಗವಿಕಲನ ಚಿತ್ತ...
.
ಕೋಪದಿ ಕೊಯ್ದ ಮೂಗು
ಶಾಂತಿಯಲಿ ಹಿಂಬರದ ಸೊಬಗು.
ಅದು ಮರಿ ದೂರ್ವಾಸರಿಗೆ
ಅರಿವಾಗಿತ್ತ?
ಅವರ ಪ್ರಿಯ ಪ್ರೀತಿ ಪಾತ್ರವೆ
ಮುರಿದ ಹೊತ್ತ
ಜ್ಞಾನೋದಯವಾದರೂ ಆದೀತ
ಮುರಿದು ಬಿದ್ದ ಸುನೀತ..?
ಇಲ್ಲಾ, ಉಕ್ಕೇರಿಸಿದ ಕಡಲಲಿ
ಮತ್ತಷ್ಟು ಉಬ್ಬರವಿಳಿತ, ಭರತ.
ಮತ್ತದೆ ಸದಾ ಕಾಡುವ
ಕಡಲ್ಕೊರೆತ
ಆಪೋಷಿಸಿದ ಅಗಸ್ತನೊ
ಅನುಮಾನಿಸದ ದೂರ್ವಾಸನೊ
ಎಲ್ಲ ಗೆದ್ದ ವಶಿಷ್ಠನೊ, ವಿಶ್ವಾಮಿತ್ರನೋ?
.
ಮೂಲೆಯಲಿ ಚೂರಾಗಿ ಬಿದ್ದ ಮಿತ್ರ
ನಗುತ್ತಿರುವನೊ, ಅಳುತ್ತಿರುವನೊ?
ಎಂದರಿಯಲಾಗದಷ್ಟು ಛಿದ್ರ..
ಬ್ಯಾಟರಿ, ಮಿಂಚುವ ಹೊರಹೊದಿಕೆ..
ಓಡುವ ಒಳಗಣ ಸೀಡಿ..
ತಂತಿಯಾಗಿ ಇಣುಕುವ ಅಸ್ತಿಪಂಜರ..
ಮುರಿದುಬಿದ್ದಿದೆ ಪಿಎಸ್ಪಿ !
ಬೆಳೆದು ನಿಂತಿದ್ದಾನೆ
ನೋಡುತ್ತಾ ಮಗ
ಅವನು ಬೆಳೆಯುತ್ತಾನ?
ಪಿಎಸ್ಪಿ ಅವನನ್ನು ಮೀರಿ
ಬೆಳೆಯುತ್ತದಾ?
ಕುತೂಹಲದಿಂದ
ಕಾದು ನೋಡುತ್ತಿದ್ದಾನೆ
ಕಾತರವೆಂಬ ಅಪ್ಪ..!
......
ಹುಡುಗನಲ್ಲಿ ಮಥನ
ಅಪ್ಪನಾಗುವುದು ಯಾವಾಗ?
.
.
ಧನ್ಯವಾದಗಳೊಂದಿಗೆ
-ನಾಗೇಶ ಮೈಸೂರು
Comments
ಉ: ಮುರಿದು ಬಿದ್ದ ಪಿಎಸ್ಪಿ
ನಾಗೇಶರೇ, ಮಕ್ಕಳು ದೊಡ್ಡವರಿಗಿಂತ ವೇಗಿಗಳು! ಅದರಲ್ಲಿ ಅನುಮಾನವಿಲ್ಲ. ಕೆಲವೊಮ್ಮೆ ನಾವೂ ಚಿಕ್ಕವರಾಗಿದ್ದರೆ ಏನೇನೋ ಮಾಡಿಬಿಡುತ್ತಿದ್ದೆವು ಎಂದು ಮಾತ್ರ ಅಂದುಕೊಳ್ಳಬಹುದು. ಧನ್ಯವಾದ.
In reply to ಉ: ಮುರಿದು ಬಿದ್ದ ಪಿಎಸ್ಪಿ by kavinagaraj
ಉ: ಮುರಿದು ಬಿದ್ದ ಪಿಎಸ್ಪಿ
ಧನ್ಯವಾದಗಳು ಕವಿಗಳೆ, ನನಗನಿಸುವ ಹಾಗೆ ಒಂದು ಮುಖ್ಯ ವ್ಯತ್ಯಾಸವೆಂದರೆ ಕಲಿಕೆಗಿರುವ ಆಸಕ್ತಿ. ಆಡಬೇಕೆಂಬ ಅದಮ್ಯ ಉತ್ಸಾಹವೂ ಜತೆ ಸೇರಿ ನೈಜ್ಯ ರೂಪದಲಿ ಆಸಕ್ತಿ ಕಲಿಕೆಯ ವೇಗದ ರೂಪದಲ್ಲಿ ಪ್ರಕಟವಾಗುತ್ತದೆ. ದೊಡ್ಡವರಿಗೆ ಮೊದಲನೆಯದಾಗಿ ಅದು ಆದ್ಯತೆಯ ವಿಷಯವಾಗಿರುವುದಿಲ್ಲ; ಆಸಕ್ತಿ ಮೇಲ್ನೋಟಕಷ್ಟೆ ಸೀಮಿತ. ಹೀಗಾಗಿ, ಕಲಿಯುವ ವೇಗವೂ ಕುಂಠಿತ. ಇದರ ಜತೆಗೆ ವಯೋಮಾನದ ಸಹಜ ಮಿತಿಗಳೆಲ್ಲ ಜತೆ ಸೇರಿಬಿಟ್ಟರಂತೂ ಮಾತಾಡುವ ಹಾಗಿಲ್ಲ :-)
ಉ: ಮುರಿದು ಬಿದ್ದ ಪಿಎಸ್ಪಿ
ನಾಗೇಶ ಮೈಸೂರು ರವರಿಗೆ ವಂದನೆಗಳು
' ಮುರಿದು ಬಿದ್ದ ಪಿಎಸ್ಪಿ ' ವರ್ತಮಾನದ ವಸ್ತು ಸ್ಥಿತಿಗೆ ಹಿಡಿದ ಕೈಗನ್ನಡಿ, ತುಂಬಾ ಅರ್ಥಪೂರ್ಣವಾದ ರಚನೆ ಮತ್ತು ಯೋಚನೆಗೆ ಹಚ್ಚುವಂತಹುದು, ಧನ್ಯವಾದಗಳು.
In reply to ಉ: ಮುರಿದು ಬಿದ್ದ ಪಿಎಸ್ಪಿ by H A Patil
ಉ: ಮುರಿದು ಬಿದ್ದ ಪಿಎಸ್ಪಿ
ಹಿರಿಯ ಪಾಟೀಲರಿಗೆ ನಮಸ್ಕಾರ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಈಗಿನ ಆಧುನಿಕ ಜಗದ ಜೀವನ ಶೈಲಿಯಲ್ಲಿ ನಗರ ಜೀವನದ ಕುಟುಂಬಗಳಲ್ಲಿ ಸಾಧಾರಣವಾಗಿ ಕಾಣುವ ಒಂದು ಮುಖದ ಚಿತ್ರಣದ ಯತ್ನ. ಜತೆಗೆ ಬೆಳೆಯುವಿಕೆಯಲಂತರ್ಗತವಾಗಿರುವ ಆತಂಕದ ಪ್ರಕ್ರಿಯೆಯ ಅನಾವರಣ ಸಹ. ಹಿಂದೆ ಜಂಟಿ ಕುಟುಂಬದ ವಾತಾವರಣದಲ್ಲಿ ಕಾಣದಿರುತ್ತಿದ್ದ ಎಷ್ಟೊ ಸಮಸ್ಯೆಗಳು ಇಂದು ಭೂತಾಕಾರದಂತೆ ಕಾಣಿಸುವ ಕುರಿತ ಉಲ್ಲೇಖ. ಆದರಲ್ಲೂ ಹೊರನಾಡಿನಲ್ಲಿ ಸಹಜ ಸಂಸ್ಕೃತಿಯ ಚೌಕಟ್ಟಿನ ಹೊರಗೆ ಬದುಕು ಸಾಗಿಸುತ್ತಿದ್ದರಂತೂ ಮತ್ತಷ್ಟು ಬಗೆಯ ತೊಡಕುಗಳು. ಇದೆಲ್ಲದರ ನಡುವೆ 'ಮುರಿದುಬಿದ್ದ ಪೀಎಸ್ಪಿ' ಸಾಂಕೇತಿಕವಾಗಿ ನಮ್ಮ ಕಣ್ಣೆದುರೆ ಮುರಿದುಬಿದ್ದ / ಬೀಳುತ್ತಿರುವ ಮೌಲ್ಯ, ಪರಂಪರೆಗಳನ್ನು ವೀಕ್ಷಿಸುತ್ತ ಇದು ಬರಿ ಬೆಳವಣಿಗೆಯ ಸಹಜ ಪರಿಯೊ ಅಥವಾ ಬದಲಾಗಿ ಕಳುವಾಗುತ್ತಿರುವ ನೈತಿಕ ಗುಣಮಟ್ಟದ ಸೂಚನೆಯೊ ಎಂಬ ಆತಂಕಪೂರ್ಣ ಕಳಕಳಿ ವ್ಯಕ್ತಪಡಿಸುವ ಪ್ರಯತ್ನ. ತಮ್ಮ ಎಂದಿನ ಪ್ರೋತ್ಸಾಹಕ್ಕೆ ಮತ್ತೆ ನಮನಗಳು ಪಾಟೀಲರೆ.