೧೬೪. ಲಲಿತಾ ಸಹಸ್ರನಾಮ ೭೨೮ರಿಂದ ೭೩೪ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೭೨೮ - ೭೩೪
Cit-kalā चित्-कला (728)
೭೨೮. ಚಿತ್ಕಲಾ
ಚಿತ್ ಎನ್ನುವುದು ಮೂಲಭೂತ ಪ್ರಜ್ಞೆಯಾದ ಬ್ರಹ್ಮವಾಗಿದೆ ಮತ್ತು ಕಲಾ ಎನ್ನುವುದು ಆ ಪ್ರಜ್ಞೆಯ ಚಟುವಟಿಕೆಗಳನ್ನು (ಅಸ್ತಿತ್ವವನ್ನು) ಪರಿಮಿತಗೊಳಿಸುವ ಶಕ್ತಿಯಾಗಿದೆ. ಚಿತ್ ಎನ್ನುವುದು ಬ್ರಹ್ಮವಾಗದರೆ, ಕಲಾ ಎನ್ನುವುದು ದೈವದ ಶಕ್ತಿಯಾಗಿದೆ. ಕಾಲ ಮತ್ತು ಕಲಾ ಎರಡೂ ವಿಭಿನ್ನವೆನ್ನುವುದನ್ನು ಗಮನಿಸಿ. ಕಾಲ ಎಂದರೆ ಸಮಯವಾಗಿದೆ. ಶಕ್ತಿಯನ್ನು ಕಲಾ ಎಂದು ಕರೆಯಲಾಗಿದೆ, ಏಕೆಂದರೆ ಆಕೆಯು ಚಿತ್‌ನ ಶಕ್ತಿಯಾಗಿದ್ದಾಳೆ ಅಥವಾ ಆಕೆಯು ಸಂಪೂರ್ಣ ಸ್ವತಂತ್ರವನ್ನು ಹೊಂದಿರುವ ಬ್ರಹ್ಮವಾಗಿದ್ದಾಳೆ. ಶಕ್ತಿಯ ಕಲಾ ಶಕ್ತಿಯು ಆಕೆಯ ಮಾಯಾ ಶಕ್ತಿಗಿಂತ ಸ್ವಲ್ಪ ಕೆಳಸ್ತರದ್ದಾಗಿದೆ. ಕಲಾವು ಮಾಯೆಯ ಐದು ಹೊದಿಕೆಗಳಲ್ಲಿ ಒಂದನ್ನು ಉಂಟು ಮಾಡುತ್ತದೆ. ಸ್ಪಂದ ಕಾರಿಕವು (೩.೧೩) ಹೀಗೆ ಹೇಳುತ್ತದೆ, "ಕಲಾದ ದೆಸೆಯಿಂದ ತನ್ನ ಘನತೆಯಿಂದ ವಂಚಿತನಾಗಿ ವ್ಯಕ್ತಿಯು ಹಲವಾರು ಶಬ್ದಗಳಿಂದ ಉತ್ಪನ್ನವಾಗುವ ಶಕ್ತಿಗಳ ಸಮೂಹಕ್ಕೆ ಬಲಿಯಾಗುತ್ತಾನೆ ಮತ್ತು ಅವನು ಬದ್ಧ ಜೀವಿ ಎನಿಸಿಕೊಳ್ಳುತ್ತಾನೆ". ಕಲಾವು ಶಿವನ ಸರ್ವಶಕ್ತ ಗುಣವನ್ನು ವ್ಯಕ್ತಿಯೊಬ್ಬನಲ್ಲಿ ಕಡಿಮೆಗೊಳಿಸುವಲ್ಲಿ ಮಹತ್ತರ ಪಾತ್ರವನ್ನು ಹೊಂದಿದೆ.
ಬ್ರಹ್ಮಕ್ಕೆ ಐದು ಪ್ರಮುಖವಾದ ಶಕ್ತಿಗಳಿವೆ. ಅವೆಂದರೆ, ಚಿತ್ (ಪ್ರಜ್ಞೆ), ಆನಂದ, ಇಚ್ಛಾ, ಜ್ಞಾನ ಮತ್ತು ಕ್ರಿಯಾ ಶಕ್ತಿಗಳಾಗಿವೆ. ಈ ಚಿತ್ ಅಥವಾ ಶಿವನು (ಪ್ರಥಮ ವ್ಯಕ್ತಿಯು) ತನ್ನಷ್ಟಕ್ಕೆ ಮಾನವನಾಗುತ್ತಾನೆ (ತೃತೀಯ ವ್ಯಕ್ತಿ) ಮತ್ತು ಶಕ್ತಿಯು ಎರಡನೇ ವ್ಯಕ್ತಿಯಾಗಿದೆ. ಚಿತ್ ಎನ್ನುವುದು ಹಲವಾರು ಸೂಕ್ಷ್ಮ ಅಡಚಣೆಗಳು ಮತ್ತು ಹೊದಿಕೆಗಳಿಂದ ಆವರಿಸಲ್ಪಟ್ಟಿರುವುದರಿಂದ ನಾವು ಅವನನ್ನು ಸುಲಭವಾಗಿ ಗುರುತಿಸಲಾರದವರಾಗಿದ್ದೇವೆ.
ಜ್ಞಾನವು ನಮಗೆ ಈ ವಿಧವಾದ ಅಡಚಣೆಗಳು ಮತ್ತು ಹೊದಿಕೆಗಳನ್ನು ಅರಿಯುವಂತೆ ಮಾಡುತ್ತದೆ; ತನ್ಮೂಲಕ ನಮಗೆ ಅವುಗಳನ್ನು ಹೋಗಲಾಡಿಸಿ ಚಿತ್‌ನೆಡೆಗೆ ಸಾಗಲು ಸುಲಭವಾಗುತ್ತದೆ. ಬ್ರಹ್ಮವು ಈ ಹೊದಿಕೆಗಳ ಅಂತರಾಳದಲ್ಲಿ ಸುರಕ್ಷಿತವಾಗಿ ಬಚ್ಚಿಡಲ್ಪಟ್ಟಿದ್ದಾನೆ. ಕೃಷ್ಣನು ಭಗವದ್ಗೀತೆಯಲ್ಲಿ (೧೫.೭), "ಈ ದೇಹದಲ್ಲಿರುವ ನಿತ್ಯ ಜೀವಾತ್ಮವು ನನ್ನ ಸ್ವಂತದ ಒಂದು ಕಣವಾಗಿದೆ" ಎಂದು ಹೇಳುತ್ತಾನೆ.
ಈ ನಾಮವು ಮಾನವನಲ್ಲಿರುವ ದೈವತ್ವದ ಗುಣವನ್ನು ಉಲ್ಲೇಖಿಸುತ್ತದೆ. ನಮ್ಮ ದೇಹದಲ್ಲಿನ ದೇವಿಯ ಅಸ್ತಿತ್ವವವನ್ನು ಚಿತ್ಕಲಾ ಎಂದು ಕರೆಯಲಾಗಿದೆ.
Ānanda-kalikā आनन्द-कलिका (729)
೭೨೯. ಆನಂದ-ಕಲಿಕಾ
ದೇವಿಯು ಮಾನವರು ಅನುಭವಿಸುವ ಪರಮಾನಂದದ ರೂಪದಲ್ಲಿದ್ದಾಳೆ. ಈ ಆನಂದವು ಹಿಂದಿನ ನಾಮದಲ್ಲಿ ಹೆಸರಿಸಿರುವ ಅಡಚಣೆಗಳನ್ನು ಮತ್ತು ಹೊದಿಕೆಗಳನ್ನು ಜ್ಞಾನದ ಸಹಾಯದಿಂದ ನಿರ್ಮೂಲನಗೊಳಿಸಿದಾಗ ಉಂಟಾಗುತ್ತದೆ. ಪರಮಾನಂದವು ಸಂತೋಷವನ್ನು ಸೂಚಿಸಿದರೆ, ಕಲಿಕಾ ಎನ್ನುವುದು ಒಂದು ಮೊಗ್ಗನ್ನು ಸೂಚಿಸುತ್ತದೆ. ಈ ಸ್ಥಿತಿಯಲ್ಲಿ ಪರಮಾನಂದವು ಇನ್ನೇನು ಅನುಭವಿಸಬೇಕು ಎನ್ನುವ ಹಂತದಲ್ಲಿರುತ್ತದೆ. ಈ ಹಂತದಲ್ಲಿ ಪರಮಾನಂದವು ಇನ್ನೇನು ಅರಳಬೇಕೆನ್ನುವ ಮೊಗ್ಗಿನ ರೂಪದಲ್ಲಿ ಇರುತ್ತದೆ. ಹಿಂದಿನ ನಾಮದಲ್ಲಿ ದೈವ ಶಕ್ತಿಯ ಐದು ಮುಖ್ಯ ಶಕ್ತಿಗಳಲ್ಲಿ ಮೊದಲನೆಯದಾದ ಕಲಾವನ್ನು ಕುರಿತು ಚರ್ಚಿಸಲಾಗಿದ್ದರೆ ಈ ನಾಮದಲ್ಲಿ ಮುಂದಿನ ಶಕ್ತಿಯಾದ ಪರಮಾನಂದವನ್ನು ಕುರಿತು ಚರ್ಚಿಸಲಾಗಿದೆ. ಕೇವಲ ಬ್ರಹ್ಮ ಮಾತ್ರವೇ ಪರಮಾನಂದದ ರೂಪದಲ್ಲಿ ಪ್ರಕಾಶಿಸುತ್ತದೆ, ಚಿತ್ತವು (ಆನಂದ ಮತ್ತು ಪ್ರಜ್ಞೆಯನ್ನೊಳಗೊಂಡಿರುವುದು) ಇಚ್ಛಾ, ಜ್ಞಾನ ಮತ್ತು ಕ್ರಿಯಾ ಶಕ್ತಿಗಳೊಂದಿಗೆ ಮಾನವರಲ್ಲಿ ಇರುತ್ತದೆ.
ಪರಮಾನಂದವು ಕೇವಲ ಸಂತೋಷವಲ್ಲ. ಇದನ್ನು ತೈತ್ತರೀಯ ಉಪನಿಷತ್ತು (೨.೮) ವಿವರವಾಗಿ ವರ್ಣಿಸುತ್ತದೆ. ಅದು ಹಲವು ವಿಧದ ಸಂತೋಷಗಳನ್ನು ಒಂದು ನೂರರಿಂದ ಗುಣಿಸಿ ಅಂತಿಮವಾಗಿ ಅದು ಪ್ರಜಾಪತಿಯ (ಸಂತಾನೋತ್ಪತ್ತಿ ಮತ್ತು ಜೀವ ರಕ್ಷಕನಾದ ದೇವತೆಯ) ಸಂತೋಷವನ್ನು ಅದರಿಂದ ನೂರು ಬಾರಿ ಗುಣಿಸಿದರೆ ಅದು ಎಲ್ಲಾ ಜೀವಿಗಳ ಅಂತಿಮ ಪ್ರಭುವಾದ ಬ್ರಹ್ಮದ ಸಂತೋಷನ್ನು ಕೊಡುತ್ತದೆ, ಎಂದು ಹೇಳುತ್ತದೆ. ಬೃಹದಾರಣ್ಯಕ ಉಪನಿಷತ್ತು (೪.೩.೩೨) ಸಹ ಈ ಪರಮಾನಂದವನ್ನು ಹೀಗೆ ವಿವರಿಸುತ್ತದೆ: "ಇದುವೇ ಅದರ ಪರಮಗತಿ (ಅಂತಿಮವಾದ ಗತಿ), ಇದುವೇ ಅದರ ಪರಮ ಸಂಪತ್ತು, ಇದುವೇ ಅದರ ಪರಮ ಲೋಕ, ಮತ್ತು ಇದುವೇ ಅದರ ಪರಮಾನಂದ. ಈ ಪರಮಾನಂದದ ಒಂದು ಚಿಕ್ಕ ಕಣವನ್ನು ಅವಲಂಬಿಸಿ ಇತರೇ ಜೀವಿಗಳು ಜೀವಿಸುತ್ತವೆ".
ದೇವಿಯೊಂದಿಗೆ ದೈವೀ ಸಂಪರ್ಕವನ್ನು (ಭಕ್ತಿಯನ್ನು) ಏರ್ಪಡಿಸಿಕೊಂಡರೆ, ಆಕೆಯು ಪರಮಾನಂದವನ್ನು ಸರಿಯಾದ ಸಮಯದಲ್ಲಿ ಅರಿಯುವಂತೆ ಮಾಡುತ್ತಾಳೆ ಮತ್ತು ಅಂತಿಮವಾಗಿ ಶಿವನೊಂದಿಗೆ ಸಾಯುಜ್ಯ ಹೊಂದುವಂತೆ ಮಾಡುತ್ತಾಳೆ; ಎನ್ನುವುದನ್ನು ಈ ನಾಮವು ಒತ್ತು ಕೊಟ್ಟು ಹೇಳುತ್ತದೆ.
Prema-rūpā प्रेम-रूपा (730)
೭೩೦. ಪ್ರೇಮ-ರೂಪಾ
ಪ್ರೇಮ ಎಂದರೆ ಅಕ್ಕರೆ. ದೇವಿಯು ಪರಮೋನ್ನತಳಾದ ಜಗನ್ಮಾತೆ (ಶ್ರೀ ಮಾತಾ) ಆಗಿರುವುದರಿಂದ ಆಕೆಯು ಪ್ರೇಮದ ಸ್ವರೂಪವಾಗಿದ್ದಾಳೆ. ದೇವಿಯು ಪ್ರೇಮವನ್ನು ಹೊರಸೂಸುತ್ತಾಳೆ.
Priyaṃkarī प्रियंकरी (731)
೭೩೧. ಪ್ರಿಯಂಕರೀ
ದೇವಿಯು ಪ್ರೇಮಸ್ವರೂಪಳಾಗಿರುವುದರಿಂದ ಆಕೆಯು ಮಾನವರೊಳಗೆ ಪ್ರೇಮವನ್ನುಂಟು ಮಾಡುತ್ತಾಳೆ. ಹಿಂದಿನ ನಾಮದಲ್ಲಿ ಚರ್ಚಿಸಿದಂತೆ ಆಕೆಯು ಪ್ರೇಮವನ್ನು ಹೊರಸೂಸುವುದರಿಂದ ಅವಳು ಪ್ರೀತಿಗೆ ಕಾರಣಳಾಗಿದ್ದಾಳೆ. ಯಾವುದು ಹೊರಸೂಸಲ್ಪಡುವುದೋ ಅದನ್ನು ಒಳಗೊಳ್ಳದೇ ಇದ್ದರೆ ಹೊರಸೂಸುವಿಕೆಯು ಸಾಧ್ಯವಾಗುವುದಿಲ್ಲ. ಸೂರ್ಯನು ಸಂಪೂರ್ಣ ಬೆಳಕನ್ನು ಹೊಂದದೇ ಇದ್ದರೆ ಅವನು ಬೆಳಕನ್ನು ಕೊಡಲಾರ.
ಮಾನವರು ಏನನ್ನು ಪ್ರೀತಿಸುತ್ತಾರೋ ಅದನ್ನು ದೇವಿಯು ಕೊಡುತ್ತಾಳೆಂದು ಸಹ ಹೇಳಬಹುದು. ಮಾನವರು ಪ್ರೀತಿಸಬಹುದಾದದ್ದು ಕೇವಲ ಎರಡೇ ವಸ್ತುಗಳಿವೆ. ಒಂದು ಮುಕ್ತಿಯಾದರೆ ಮತ್ತೊಂದು ಪ್ರಾಪಂಚಿಕ ಸಂಪತ್ತುಗಳು. ದೇವಿಯು ನಾವು ಏನನ್ನು ಬಯಸುತ್ತೇವೆಯೋ ಅದನ್ನಾಧರಿಸಿ ಅವೆರಡರಲ್ಲಿ ಒಂದನ್ನು ಕರುಣಿಸುತ್ತಾಳೆ. ಜ್ಞಾನವಂತನಾದ ಮನುಜನು ಮುಕ್ತಿಗಾಗಿ ಬೇಡಿಕೊಂಡರೆ ತಿಳಿವಳಿಕೆಯುಳ್ಳದವರು ಪ್ರಾಪಂಚಿಕ ಸುಖಗಳನ್ನು ಕೋರಿಕೊಳ್ಳುತ್ತಾರೆ.
Nāma-pārāyaṇa-prītā नाम-पारायण-प्रीता (732)
೭೩೨. ನಾಮ-ಪಾರಾಯಣ-ಪ್ರೀತಾ
ಪಾರಾಯಣ ಎಂದರೆ ಪುನರುಚ್ಛರಣೆ. ದೇವಿಯು ಲಲಿತಾ ಸಹಸ್ರನಾಮದ ಪಾರಾಯಣವನ್ನು ಪದೇ ಪದೇ ಮಾಡುವುದನ್ನು ಇಷ್ಟಪಡುತ್ತಾಳೆ ಎನ್ನುವುದನ್ನು ಈ ನಾಮವು ಸೂಚಿಸುತ್ತದೆ. ಲಲಿತಾಂಬಿಕೆಯು ವಾಗ್ದೇವಿಗಳನ್ನು ತನ್ನನ್ನು ಕುರಿತಾದ ಸ್ತೋತ್ರಗಳನ್ನು ರಚಿಸಿ ಅವನ್ನು ಪಠಿಸುವಂತೆ ಮಾಡಿ ಅದರಿಂದ ತಾನು ಸುಪ್ರೀತಳಾಗುತ್ತೇನೆ ಎನ್ನುವುದು ಈ ಮಾತುಗಳಿಗೆ ಇಂಬು ಕೊಡುತ್ತದೆ. ಯಾವಾಗ ವಾಗ್ದೇವಿಗಳು ಈ ಸಹಸ್ರನಾಮದ ವಾಚನವನ್ನು ಪೂರೈಸಿದರೋ ಆಗ ಲಲಿತಾಂಬಿಕೆಯು ಅದರಿಂದ ಅತ್ಯಂತ ಸಂತುಷ್ಟಗೊಂಡು ಅವರನ್ನು ಹೊಗಳಿದಳು. ಇಂತಹ ಪಠಣೆಗಳ ಸತ್ಫಲಗಳನ್ನು ಈ ಸಹಸ್ರನಾಮದ ಉತ್ತರಭಾಗ ಅಥವಾ ಫಲಶ್ರುತಿಯ ಭಾಗದಲ್ಲಿ ಕೊಡಲಾಗಿದೆ.
ದೇವಿಯ ಹೆಸರುಗಳು ಅ ದಿಂದ ಕ್ಷ ವರೆಗೆ ಇವೆ. ಅವುಗಳನ್ನು ಮಾತೃಕಾ ಎಂದು ಕರೆಯಲಾಗಿದ್ದು ಅವುಗಳನ್ನು ಒಂದೊಂದು ತತ್ವಗಳಲ್ಲಿ ಅಡಕಗೊಳಿಸಲಾಗಿದೆ. ನಾಮ ೫೭೭, ’ಮಾತೃಕಾ ವರ್ಣ ರೂಪಿಣೀ’ಯಲ್ಲಿ ಇದರ ಕುರಿತಾದ ಹೆಚ್ಚಿನ ವಿವರಗಳನ್ನು ನೋಡಬಹುದು. ’ಕ’ ದಿಂದ ’ಕ್ಷ’ದವರೆಗೆ ೩೫ ವ್ಯಂಜನಾಕ್ಷರಗಳಿದ್ದು ಅದಕ್ಕೆ ಮೊದಲನೇ ಸ್ವರವಾದ ’ಅ’ ಅಕ್ಷರವನ್ನು ಸೇರಿಸಿದರೆ ಅವು ಒಟ್ಟು ೩೬ ಆಗುತ್ತದೆ. ಈ ೩೬ನ್ನು ೧೬ ಸ್ವರಗಳಿಂದ ಗುಣಿಸಿದರೆ ನಮಗೆ ೫೭೬ ದೊರೆಯುತ್ತದೆ ಮತ್ತೆ ಈ ೫೭೬ನ್ನು ೩೬ರಿಂದ ಗುಣಿಸಿದರೆ ನಮಗೆ ೨೦,೭೩೬ ದೊರೆಯುತ್ತದೆ. ಇದಕ್ಕೆ ಮತ್ತೆ ಮೊದಲನೇ ಅಕ್ಷರವಾದ ’ಅ’ ಅನ್ನು ಕೂಡಿಸಿದರೆ ನಮಗೆ ೨೦,೭೩೭ ದೊರೆಯುತ್ತದೆ. ಹೀಗೆ ೨೦,೭೩೭ ಅಕ್ಷರಗಳ ಸಂಯೋಜನೆಗಳಿದ್ದು ಅವುಗಳನ್ನು ಒಂದು ದಿನದಲ್ಲಾಗಲಿ, ಒಂದು ವಾರದಲ್ಲಾಗಲಿ, ಒಂದು ತಿಂಗಳಿನಲ್ಲಾಗಲಿ, ಒಂದು ಅಯನ ಕಾಲದಲ್ಲಾಗಲೀ (ಆರು ತಿಂಗಳ ಕಾಲ), ಅಥವಾ ಒಂದು ವರ್ಷದಲ್ಲಾಗಲೀ ಪಠಿಸಬೇಕು. ಈ ವಿಧವಾದ ಪಠನೆಯನ್ನೂ ಸಹ ’ಪಾರಾಯಣ’ ಎಂದು ಕರೆಯಲಾಗಿದೆ, ಇದನ್ನು ಘಟಿಕಾ ಪಾರಾಯಣ ಎಂದೂ ಹೇಳುತ್ತಾರೆ. ದೇವಿಯು ಈ ವಿಧವಾದ ಪಾರಾಯಣವನ್ನೂ ಇಷ್ಟಪಡುತ್ತಾಳೆ.
Nandi-vidyā नन्दि-विद्या (733)
೭೩೩. ನಂದಿ ವಿದ್ಯಾ
ದೇವಿಯು ನಂದಿಯಿಂದ ಪೂಜಿಸಲ್ಪಡುತ್ತಾಳೆ. ಶ್ರೀ ವಿದ್ಯೆಗೆ ಹನ್ನೆರಡು ಪ್ರಧಾನ ಋಷಿಗಳಿದ್ದಾರೆ (ವಿವರಗಳಿಗೆ ನಾಮ ೨೩೮ರ ವಿವರಣೆಯನ್ನು ನೋಡಿ). ಇವರನ್ನು ಹೊರತು ಪಡಿಸಿ ಅದಕ್ಕೆ ಇನ್ನೂ ಹಲವು ಋಷಿಗಳಿದ್ದಾರೆ ಅವುಗಳಲ್ಲಿ ನಂದಿ ಸಹ ಒಬ್ಬನು. ಈ ನಂದಿಯು ಶಿವನ ವಾಹನವಾದ ನಂದಿಯೇ ಅಥವಾ ನಂದಿ ಎಂಬ ಇನ್ನೊಬ್ಬ ಋಷಿಯೇ ಎನ್ನುವುದರ ಬಗೆಗೆ ಸ್ಪಷ್ಟವಾದ ಮಾಹಿತಿಯಿಲ್ಲ. ತಮಿಳಿನ ಪ್ರಸಿದ್ಧ ಋಷಿ ತಿರುಮೂಲರ್ ಶಿವನನ್ನು ನಂದಿ ಎಂದು ಸಂಭೋದಿಸಿದ್ದಾನೆ. ಶಿವನೂ ಸಹ ಪಂಚದಶೀ ಮಂತ್ರದ ಒಬ್ಬ ಋಷಿ ಮತ್ತು ಸಾಮಾನ್ಯವಾಗಿ ಪಂಚದಶೀ ಮಂತ್ರವನ್ನು ಆನಂದ ಭೈರವನನ್ನು ಋಷಿಯಾಗಿ ಪರಿಗಣಿಸಿ ಉಪದೇಶಿಸಲಾಗುತ್ತದೆ.
Naṭeśvarī नटेश्वरी (734)
೭೩೪. ನಟೇಶ್ವರೀ
ಶಿವನು ಬಹುದೊಡ್ಡ ನಾಟ್ಯಕಾರನಾಗಿದ್ದು ಅವನನ್ನು ನಟರಾಜನೆಂದು ಕರೆದಿದ್ದಾರೆ ಹಾಗಾಗಿ ಅವನ ಪತ್ನಿಯು ನಟೇಶ್ವರೀ ಆಗಿದ್ದಾಳೆ.
ಸೌಂದರ್ಯ ಲಹರಿಯು (ಸ್ತೋತ್ರ ೪೧) "ಹೇ ಭಗವತಿ, ನಿನ್ನ ಮೂಲಾಧಾರ ಚಕ್ರದಲ್ಲಿ ಲಾಸ್ಯದಲ್ಲಿ ನಿರತಳಾದ (ನೃತ್ಯಾಸಕ್ತಳಾದ) ಸಮಯಳೊಂದಿಗೆ ಶೃಂಗಾರಾದಿ ನವರಸಗಳಿಂದ ಅದ್ಭುತ ತಾಂಡವವನ್ನು ಮಾಡುತ್ತಿರುವವನ್ನು ಧ್ಯಾನಿಸುತ್ತೇನೆ. ಪ್ರಪಂಚದ ಉತ್ಪತ್ತಿಗೋಸ್ಕರ ದಯೆಯಿಂದ ಕೂಡಿರುವ ಇವರಿಬ್ಬರಿಂದ ಈ ಜಗತ್ತು ತಂದೆ-ತಾಯಿಗಳುಳ್ಳದ್ದಾಯಿತು" ಎಂದು ವರ್ಣಿಸುತ್ತದೆ. ಇಲ್ಲಿ ತಾಂಡವ ಮಾಡುತ್ತಿರುವವನು ಎನ್ನುವುದು ಬಹುಶಃ ಶಿವನನ್ನು ಸೂಚಿಸುತ್ತದೆ ಏಕೆಂದರೆ ಶಾಸ್ತ್ರಗಳಲ್ಲಿ ಸ್ತ್ರೀಕರ್ತೃವಾದ (ಸ್ತ್ರೀಯರು ಕೈಗೊಳ್ಳುವ) ನೃತ್ಯವು ಲಾಸ್ಯವೆಂದೂ ಪುರುಷಕರ್ತೃವಾದ ನೃತ್ಯವು ತಾಂಡವವೆಂದೂ ಹೇಳಲ್ಪಟ್ಟಿದೆ. ಮತ್ತು ಈ ಸ್ತ್ರೋತ್ರದಲ್ಲಿ ನಾಟ್ಯವಾಡುತ್ತಿರುವ ಶಿವನ ಸಂಗಾತಿಯಾಗಿ ದೇವಿಯನ್ನು ಚಿತ್ರಿಸಲಾಗಿದೆ, ಹಾಗಾಗಿ ದೇವಿಯು ನಟೇಶ್ವರೀ ಆಗಿದ್ದಾಳೆ.
ಶಿವನು ಸಂತೋಷದಿಂದ ಮಾಡುವ ನೃತ್ಯವನ್ನು ಆನಂದ ತಾಂಡವ ಎಂದು ಕರೆಯಲಾಗುತ್ತದೆ. ಅವನು ಆ ನೃತ್ಯವನ್ನು ಮಾಡಿದಾಗ ಈ ಕೆಳಗಿನ ಕೆಲವೊಂದು ಶಬ್ದಗಳು ಉತ್ಪನ್ನವಾಗುತ್ತವೆ (ಮೂಲ - ’ಶಿವ ತಾಂಡವ ಇಳಕ್ಕಣಂ’ ಎನ್ನುವ ಪುರಾತನ ತಮಿಳು ಕೃತಿ)
ಜಂಡ ಡುಗು ಡುಗುಡುಗುಡುಗು ಡುಗುಗುಡು ಡುಗುಡುಗು
ಡುಮಕಿಟ ಕಿಟಡಗ
ಜಣುಡ ಜಣುಡ ಡಗೀ ಜಣುಡ ಜಣುಡ ಡಗ
ಜಗಣಂ ಜರಿಡಗ ಜಗುಣಮ್ ನಗನಗ
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM MEANING 728 - 734 http://www.manblunder.com/2010/05/lalitha-sahasranamam-meaning-728-734.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೬೪. ಲಲಿತಾ ಸಹಸ್ರನಾಮ ೭೨೮ರಿಂದ ೭೩೪ನೇ ನಾಮಗಳ ವಿವರಣೆ
ಶ್ರೀಧರರೆ, "೧೬೪. ಶ್ರೀ ಲಲಿತಾ ಸಹಸ್ರನಾಮದ ವಿವರಣೆ" ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೭೨೮ - ೭೩೪
_______________________________________
.
೭೨೮. ಚಿತ್ಕಲಾ
ಕಲಾ ದೈವದ ಶಕ್ತಿ, ಚಿತ್ ಶಕ್ತಿಯಾಗಿ ಸ್ವತಂತ್ರ ಬ್ರಹ್ಮವಾಗಿಹಳು ಶಕ್ತಿ
ಮಾಯಾಶಕ್ತಿಗಿಂತ ಕೆಳಸ್ತರ, ಮಾಯೆಯೊಂದು ಹೊದಿಕೆ ಹೊದ್ದ ಉಕ್ತಿ
ಚಿತ್ ಮೂಲಭೂತ ಪ್ರಜ್ಞೆ ಬ್ರಹ್ಮ, ಅದರಸ್ತಿತ್ವ ಪರಿಮಿತಗೊಳಿಸೊ ಕಲಾ
ವ್ಯಕ್ತಿ ಘನತೆ ವಂಚಿತ, ಸರ್ವಶಕ್ತ ಗುಣ ಕುಂಠಿತವಾಗಿ ಕಲಾ ಪ್ರತಿಕೂಲ ||
.
ಚಿತ್-ಆನಂದ-ಇಚ್ಛಾ-ಜ್ಞಾನ-ಕ್ರಿಯಾಶಕ್ತಿಗಳೆ ಬ್ರಹ್ಮದೈದು ಪ್ರಮುಖಶಕ್ತಿ
ಚಿತ್ ಪ್ರಥಮ ವ್ಯಕ್ತಿ ಶಿವ ತಾನಾಗಿ ತೃತೀಯ ಮಾನವ, ದ್ವಿತೀಯಾ ಶಕ್ತಿ
ಚಿತ್ ಬ್ರಹ್ಮನನಾವರಿಸಿದ ಸೂಕ್ಷ್ಮ ಅಡಚಣೆ, ಹೊದಿಕೆಯ ತೆರೆಸೊ ಜ್ಞಾನ
ಮಾನವ ದೈವತ್ವಗುಣ, ದೇಹದಲಿರೆ ದೇವಿ ಅಸ್ಥಿತ್ವ, ಚಿತ್ಕಲಾ ಬ್ರಹ್ಮಕಣ ||
.
೭೨೯. ಆನಂದ-ಕಲಿಕಾ
ದೇವಿ ಜತೆ ದೈವೀ ಸಂಪರ್ಕ, ಪರಮಾನಂದ ಸಕಾಲದೆ ಅರಿಸಿ ಸಾಯುಜ್ಯ
ಅಡಚಣೆ ಹೊದಿಕೆ ನಿವಾರಣೆ ಜ್ಞಾನಮುಖೇನ, ಅಸೀಮಾನಂದ ಸಾಮ್ರಾಜ್ಯ
ಕಲಾ ನಂತರ ಶಕ್ತಿ ಪರಮಾನಂದ, ಮೊಗ್ಗಿನ ರೂಪದಿ ಬ್ರಹ್ಮವಷ್ಟೆ ಪ್ರಕಾಶಕ
ಆನಂದ ಪ್ರಜ್ಞೆಯೆ ಚಿತ್ತ, ಇಚ್ಛಾ-ಜ್ಞಾನ-ಕ್ರಿಯಾ ಜತೆ ಲಲಿತೆ ಆನಂದ ಕಲಿಕಾ ||
.
ಕೇವಲ ಸಂತೋಷವ ಮೀರಿಸಿದ ಪರಮಾನಂದ, ವರ್ಣನಾತೀತ ಅನುಭವ
ತರತರ ಸಂತಸದ ನೂರರ ಗುಣಕ, ಸಮವು ಪ್ರಜಾಪತಿ ಸಂತೋಷ ಭಾವ
ಮತ್ತದರ ನೂರರ ಗುಣಕ ನೀಡೆ, ಜೀವಿಗಳೆಲ್ಲದರಂತಿಮಪ್ರಭು ಬ್ರಹ್ಮದ ಲೆಕ್ಕ
ಈ ಆನಂದವೇ ಪರಮ ಗತಿ-ಪರಮ ಸಂಪತ್ತು-ಪರಮಾನಂದ-ಪರಮಲೋಕ ||
.
೭೩೦. ಪ್ರೇಮ-ರೂಪಾ
ಜಗ ಸೃಷ್ಟಿಸಿ ಜಗನ್ಮಾತೆ ಆಗಿರುವಳು ಶ್ರೀಮಾತೆ ಲಲಿತೆ
ತಾಯಿ ತಾನೆ ಪ್ರೇಮಸ್ವರೂಪಿಣಿ, ಹಂಚುವ ನಿಸ್ವಾರ್ಥತೆ
ಹೊರಸೂಸುತ ಪ್ರೇಮದ ಕ್ಷೀರ, ದೇವಿಯೆ ಪ್ರೇಮರೂಪಾ
ಮಾತೆ ಮಡಿಲ ಮಕ್ಕಳಿಗೆಲ್ಲ ಉಣಿಸುತಲಿಹ ಸಮರೂಪ ||
.
೭೩೧. ಪ್ರಿಯಂಕರೀ
ಬೆಳಕೆ ಇಲ್ಲದ ಸೂರ್ಯ ಕೊಡಲಾರ ಬೆಳಕು, ಅಂತೆಯೆ ಲಲಿತ
ಹೊರಸೂಸಲಾಗದು ಪ್ರೀತಿ ಪ್ರೇಮ, ಒಳಗೊಳ್ಳದಿರೆ ಅನವರತ
ಜ್ಞಾನಾರ್ಥಿ ಬೇಡಿ ಮುಕ್ತಿ, ಅಜ್ಞಾನಿ ಪ್ರಾಪಂಚಿಕ ಸುಖದ ಬೆನ್ನೇರಿ
ಬೇಡಿದ್ದನ್ನಿತ್ತು ಪ್ರೇಮವನುಂಟು ಮಾಡುವಳು ದೇವಿ ಪ್ರಿಯಂಕರಿ ||
.
೭೩೨. ನಾಮ-ಪಾರಾಯಣ-ಪ್ರೀತಾ
ಪುನರುಚ್ಚರಣೆಯೆ ಪಾರಾಯಣ, ನಾಮಾವಳಿ ಪಠನೆ ಲಲಿತೆ ಪ್ರೀತ್ಯರ್ಥ
ಸಂತುಷ್ಟಿಯಾಗಿ ಪ್ರಶಂಶಿಸಿ ದೇವಿ, ರಚಿಸಿದ ವಾಗ್ದೇವಿಯರಲಿ ಸುಪ್ರೀತ
ಪ್ರತಿ ವರ್ಣಾಕ್ಷರದೆ ನಾಮ ಮಾತೃಕಾ, ಅಡಕವಾಗಿಹ ತತ್ವ ಅಕ್ಷರಗಣ
೨೦,೭೩೭ ಅಕ್ಷರ ದಿನವಾರಮಾಸಾಯನವರ್ಷ ಘಟಿಕಾ ಪಾರಾಯಣ ||
.
೭೩೩. ನಂದಿ ವಿದ್ಯಾ
ದ್ವಾದಶ ಶ್ರೀ ವಿದ್ಯಾ ಪ್ರಧಾನ ಋಷಿಗಳು, ಮಿಕ್ಕನೇಕ ಆರಾಧಕರು
ಅವರಲೊಬ್ಬ ಋಷಿ ನಂದಿಯಿಂದ ಪೂಜಿತೆ, ನಂದಿ ವಿದ್ಯಾ ಹೆಸರು
ನಂದಿರೂಪಿ ಶಿವ ಪಂಚದಶೀ ಮಂತ್ರದ ಋಷಿ, ಆನಂದ ಭೈರವನಾ
ಗುರುವಾಗಿಸಿ ಉಪದೇಶಿಸುವ ಮಂತ್ರ, ಎಲ್ಲ ದೇವಿಯ ಆರಾಧನ ||
.
೭೩೪. ನಟೇಶ್ವರೀ
ನಾಟ್ಯಪ್ರವೀಣ ನಟರಾಜ ಶಿವನ, ಸತಿಯಾಗಿಗಳು ನಟೇಶ್ವರೀ
ಪುರುಷಕರ್ತೃ ಶಿವನೃತ್ಯ ತಾಂಡವ, ಸ್ತ್ರೀಕರ್ತೃ ಲಾಸ್ಯ ಲಹರಿ
ಸಂಗಾತಿ ಸಹನಾಟ್ಯ ನವರಸಾದ್ಭುತ ಶೃಂಗಾರಾ ಜಗದುತ್ಪನ್ನ
ಜಗನ್ಮಾತಾಪಿತ ಸತ್ಯ, ಶಿವನ್ಹರ್ಷನೃತ್ಯ ಆನಂದತಾಂಡವಘನ ||
.
ಶಿವನಾಡೆ ಆನಂದ ತಾಂಡವ ನೃತ್ಯ, ಉತ್ಪನ್ನವಾಗಿ ಅನೇಕ ಶಬ್ದ
'ಜಂಡ ಡುಗು ಡುಗುಡುಗುಡುಗು ಡುಗುಗುಡು ಡುಗುಡುಗು' ಬದ್ಧ
'ಡುಮಕಿಟ ಕಿಟಡಗ' 'ಜಣುಡ ಡಗೀ ಜಣುಡ ಜಣುಡ ಡಗ' ಪಾದ
'ಜಗಣಂ ಜರಿಡಗ ಜಗುಣಂ ನಗನಗ' ತಲ್ಲೀನತೆ ಭವ್ಯತೆ ಆಸ್ವಾದ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು