ಹೂ ನೋಟದ ಫಲ - ಲಕ್ಷ್ಮೀಕಾಂತ ಇಟ್ನಾಳ
ಹೂ ನೋಟದ ಫಲ - ಲಕ್ಷ್ಮೀಕಾಂತ ಇಟ್ನಾಳ
ಅವಳ ನಡೆದು ಹೋದ ಮಣ್ಣ ರಸ್ತೆಯಲ್ಲಿ ಮೂಡಿದ
ಅವಳ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು
ತಲ್ಲೀನನಾಗುತ್ತಿದ್ದೆ,
ಅದೆಷ್ಟೊ ಹೊತ್ತು!
ಬೀಳುತ್ತಿವೆ ಹೆಜ್ಜೆಗಳೀಗ
ಅವಳ ಬಳುಕುತ್ತ ಸರಿದು ಹೋದ ಹೆಜ್ಜೆಗಳಿಗಾಗಿ
ಹುಡುಕುತ್ತ,
ದಶಕಗಳ ನಂತರ!
ಹೆಜ್ಜೆ ಮೂಡವು ಈಗ,
ಡಾಂಬರು ಬಳಿದುಕೊಂಡಿದೆ ರಸ್ತೆ,
ರಸ್ತೆಯ ಅಂಚಿನ ಅರಳಿ ಮರದ ಕೆಳಗೆ ನಿಂತವನನ್ನು
ಕುಡಿನೋಟಿದಿಂದ ಒಮ್ಮೆ ನೋಡಿ ಮಂದಹಾಸ ನೀಡಿ,
ಮುಂದಡಿಯಿಡುತ್ತಿದ್ದ ಅವಳ ನೆನಪಿಗಾಗಿ
ಆ ಅರಳಿ ಮರವನ್ನಾದರೂ ನೋಡಲು
ಅದರತ್ತ ಹೆಜ್ಜೆ ಹಾಕಿದೆ,
ಅರಳಿ ಮರವೂ ಇಲ್ಲ, ಕಟ್ಟೆಯೂ ಇಲ್ಲ,
ಅವಳಿಲ್ಲದ ನೆಲದಲ್ಲಿ ಯಾವ ಸುಳಿವೂ ಇಲ್ಲ.
ಮರಳುವಾಗ ಗಮನಿಸಿದೆ,
ಕಟ್ಟೆ ಇರುವಲ್ಲಿ ಹೂವರಳಿ ನಿಂತಿದ್ದವು,
ನಮ್ಮ ಹೂ ನೋಟದ ಫಲವೆ ಇರಬಹುದೆ?
Rating
Comments
ಉ: ಹೂ ನೋಟದ ಫಲ - ಲಕ್ಷ್ಮೀಕಾಂತ ಇಟ್ನಾಳ
ಹೂಗಳ ಪರಿಮಳ ಚೆಲ್ಲುವ ದಿವ್ಯ ಕವನ ಲಕ್ಷ್ಮೀಕಾಂತ್ ಅವರೇ, ಹೀಗೆ ಬರೆಯುತ್ತಿರಿ.
ಉ: ಹೂ ನೋಟದ ಫಲ - ಲಕ್ಷ್ಮೀಕಾಂತ ಇಟ್ನಾಳ
ತಮ್ಮ ಆತ್ಮೀಯ ಪ್ರತಿಕ್ರಿಯೆಗೆ ವಂದನೆಗಳು, ವಸಂತ ಕುಲಕರ್ಣಿರವರೇ, ಸಮಯ ಸಿಕ್ಕಾಗ ಬರೆಯಲು ಪ್ರಯತ್ನಿಸುವೆ. ಧನ್ಯವಾದಗಳು. ಶುಭ ಮುಂಜಾವು.
ಉ: ಹೂ ನೋಟದ ಫಲ - ಲಕ್ಷ್ಮೀಕಾಂತ ಇಟ್ನಾಳ
ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
' ಹೂ ನೋಟದ ಫಲ ' ಕಾಲದ ನಿನ್ನೆ ಮತ್ತು ಇಂದಿನ ಅಂತರ ಬಿಡಿಸಿಡುವ ಮತ್ತು ಪ್ರೇಮದ ಕಾಲಾತೀತತೆಯನ್ನು ಸಾರುವ ಅರ್ಥಪೂರ್ಣ ಕವನ, ಒಳ್ಳೆಯ ಕವನ ನೀಡಿದ್ದೀರಿ ಧನ್ಯವಾದಗಳು.
In reply to ಉ: ಹೂ ನೋಟದ ಫಲ - ಲಕ್ಷ್ಮೀಕಾಂತ ಇಟ್ನಾಳ by H A Patil
ಉ: ಹೂ ನೋಟದ ಫಲ - ಲಕ್ಷ್ಮೀಕಾಂತ ಇಟ್ನಾಳ
ಹಿರಿಯರಿಗೆ ಪ್ರೋತ್ಸಾಹಕರ ಮೆಚ್ಚುಗೆಗೆ ವಂದನೆಗಳು
ಉ: ಹೂ ನೋಟದ ಫಲ - ಲಕ್ಷ್ಮೀಕಾಂತ ಇಟ್ನಾಳ
ಇಟ್ನಾಳರೆ ನಮಸ್ಕಾರ,
ಮರಳುವಾಗ ಗಮನಿಸಿದೆ,
ಕಟ್ಟೆ ಇರುವಲ್ಲಿ ಹೂವರಳಿ ನಿಂತಿದ್ದವು,
ನಮ್ಮ ಹೂ ನೋಟದ ಫಲವೆ ಇರಬಹುದೆ?
ಹೂ ನೋಟದ ಫಲ ನೆನಪಿನ ತೋಟದ ಹೂ-ನೆಲೆಯಾಗಿ ಬೇರೂರಿ ಗಮಗಮಿಸುವ ಪರಿ ನವಿರಾಗಿ ಮೂಡಿದೆ. ನಮಗೂ ಆ ಸೊಬಗಿನ ತೋಟದ ಸುತ್ತು ಹಾಕಿಸಿದ್ದಕ್ಕೆ ಧನ್ಯವಾದಗಳು :-)
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು