'ಐ'ಗಳ ಪುರಾಣ (ಭಾಗ 02)
('ಐ'-ಪೋನು_'ಐ'ಪ್ಯಾಡುಗಳ ಪಾಡಿನ ಹರಟೆ, ಪ್ರಬಂಧ, ಲೇಖನ, ಕಥನ..ಮುಂದುವರೆದಿದ್ದು - ಮೊದಲ ಭಾಗ ಈ ಲಿಂಕಿನಲ್ಲಿದೆ : http://sampada.net/%E0%B2%90%E0%B2%97%E0%B2%B3-%E0%B2%AA%E0%B3%81%E0%B2%... )
.
[ ಹಿನ್ನಲೆ: ಬಹುಶಃ ಈಗ ನಾನು ಹೇಳ ಹೊರಟಿರುವ ಕಥೆಯನ್ನು ಯಾರು ಅಷ್ಟು ಸುಲಭದಲ್ಲಿ ನಂಬುವುದಿಲ್ಲ ಅಂತ ಕಾಣುತ್ತೆ...ನನಗೆ ನಂಬಲು ಕಷ್ಟವಾದದನ್ನು ಬೇರೆಯವರಿಗೆ ನಂಬಿಸಬೇಕೆಂದರೆ ಇನ್ನೂ ತ್ರಾಸದಾಯಕವಲ್ಲವೆ? ಕೆಲ ಘಟನೆ, ಘಟಿತಗಳು ಒಮ್ಮೆ ಸಂಭವಿಸಿದರೆ ಕಾಕತಾಳೀಯ ಅನ್ನಬಹುದು. ಮತ್ತೆ ಅದೆ ಕ್ರಮದಲ್ಲಿ ಹಾಗೆಯೆ ಮರುಕಳಿಸಿದರೆ ಕಾಕತಾಳೀಯ ಎನ್ನಲು ಕಷ್ಟ. ಅದಕ್ಕೆ ಮುನ್ನ ತುಸು ಪೀಠಿಕೆಯಾಗಿ ಮೊದಲ ಭಾಗದಲ್ಲಿ ಸ್ಮಾರ್ಟ್ಪೋನ್ ಜಗದ ಕಿರುಹಿನ್ನಲೆ - ಮುಂದೆ ಓದಿ ]
.
ಹೀಗೆ ಬೆಳೆದ ಒಡನಾಟ ಕನ್ನಡದ ದೆಸೆಯಿಂದ ಸ್ಮಾರ್ಟ್ಫೊನಿನ ಜತೆಗಿನ ಸಖ್ಯ ಅನೋನ್ಯ ಸಂಬಂಧವಾಗಿ ಮುಂದುವರೆದಿದೆ. ಆದರ ನಡುವಿನ ಮತ್ತೊಂದು ಬೆಳವಣಿಗೆಯೆಂದರೆ - ಆಪಲ್ ಕಂಪನಿಯವರು ಐ ಪ್ಯಾಡ್ ಅನ್ನು ಬಿಡುಗಡೆ ಮಾಡಿದ್ದು (ಆಪಲ್ಲಿನ ಸ್ಟೀವ್ ಜಾಬ್ಸ್ ಬದುಕಿದ್ದ ಕಾಲದಲ್ಲೆ). ಐಪೋನಿನಲ್ಲಿ ಮಾಡಿದ್ದೆಲ್ಲಾ ನೋಡುವಾಗ, ಈ ಸ್ಕ್ರೀನು ಇನ್ನು ದೊಡ್ಡದಿರಬಾರದಿತ್ತೆ ಎಂದು ಎಷ್ಟೊ ಬಾರಿ ಅನಿಸಿದ್ದಿತ್ತು. ಹೀಗಾಗಿ ಐಪ್ಯಾಡು ಮಾರುಕಟ್ಟೆಗೆ ಬಂದಾಗ ಆ ಕೊರತೆಯನ್ನು ತುಂಬಿ ಉತ್ತರಿಸುವ ದೂತ ಸಿಕ್ಕಂತಾಗಿ ಐಪೋನಿನ ಜತೆಗೆ, ಐಪ್ಯಾಡು ಮನೆಯ ಗ್ಯಾಡ್ಜೆಟ್ಟುಗಳ ಬಳಗಕ್ಕೆ ಸೇರಿತು. ಅದೃಷ್ಟವಶಾತ್ ಎಲ್ಲವು ಒಂದೆ ಆಪಲ್ ಕುಟುಂಬವಾದ್ದರಿಂದ ಚೆನ್ನಾಗಿ , ಹೊಂದಾಣಿಕೆಯಿಂದ ಸಂಸಾರ ಮಾಡಿಕೊಂಡಿವೆ, ನನ್ನ ಮತ್ತು ಮಗರಾಯನ ಹೊಡೆತದ ನಡುವೆಯು :-)
.
ಈ ಐಪ್ಯಾಡಿನ ಒಂದು ವಿಶೇಷ ಕಥೆಯನ್ನು ಹೇಳದೆ ಈ ಕಥೆ ಮುಗಿಸುವಂತಿಲ್ಲ - ಅದನ್ನು ಮುಖ್ಯವಾಗಿ ಹೇಳಲೆಂದೆ ಈ ಬರಹ ಬರೆಯಲು ಹೊರಟಿದ್ದು. ಯಥಾರೀತಿ ಉಪಕಥೆಗಳೆಲ್ಲ ಸೇರಿ ಕೊಂಚ ಅಲ್ಲಿಲ್ಲಿ ಅಡ್ಡಾಡಿ ಬರುವಂತಾಯ್ತು. ಈ ಉಪಕಥೆ ತುಸು ಜಾದೂವಿನಂತೆ, ತುಸು ಅಸಂಭವನೀಯ ಸಂಘಟನೆಯಂತೆ ಕಾಣುವ ಸಾಧ್ಯತೆಯಿರುವುದರಿಂದ, ಈಗಲೇ ಹೇಳಿಬಿಟ್ಟಿರುತ್ತೇನೆ - ಇದು ನಿಜಕ್ಕೂ ನಡೆದ ಘಟನೆ. ಅದಕ್ಕೆ ಕಾಕತಾಳೀಯತೆ ಕಾರಣವೆ, ಸ್ಟೀವ್ ಜಾಬ್ಸನ ಅಮೋಘ ತಾಂತ್ರಿಕ ದೂರದೃಷ್ಟಿ ಮತ್ತು ವಿನ್ಯಾಸದ ಬಲವೆ, ಅಥವಾ ಇದ್ದಾವುದೂ ಅಲ್ಲದ ಅದೃಷ್ಟ ಪ್ರೇರಿತ ಬೆಂಬಲದ ಯಾವುದೊ ಅದೃಶ್ಯ ಶಕ್ತಿಯೊ - ನೀವೆ ಓದಿ ನಿರ್ಧರಿಸಿ (ಸಾಕಷ್ಟು ನಿರೀಕ್ಷೆ / ಸಸ್ಪೆನ್ಸು ಹುಟ್ಟಿಸಿದೆನೆಂದು ಕಾಣುತ್ತದೆ, ಯಾವುದಕ್ಕೂ ಸಪ್ಪೆಯಾದ ಕ್ಲೈಮಾಕ್ಸಿಗೂ ಸಿದ್ದರಿರುವುದು ಒಳಿತು)
.
ಈ ಕಥೆಯ ಕಥಾನಾಯಕ ನನ್ನ ಬಳಿಯಿರುವ ಈ ಐಪ್ಯಾಡೆ ಆಗಿರುವುದರಿಂದ ಮೊದಲು ಅದರ ಒಂದಷ್ಟು ಪ್ರವರ ವಿಚಾರಿಸಿಕೊಂಡು ನಂತರ ಘಟನೆಯತ್ತ ನೋಡೋಣ. ಹಾಗೆಯೆ, ಹರಿಕಥೆಗೊಂದು ಉಪಕಥೆಯೆಂಬಂತೆ ಒಂದು ಪುಟ್ಟ ಸಂಗತಿಯನ್ನು ಹೇಳಿಬಿಡುತ್ತೇನೆ. ಐಪ್ಯಾಡೆಂದಾಗೆಲ್ಲ ನೆನಪಾಗುವುದು ಮತ್ತೊಂದು ಪ್ಯಾಡು - ಹೆಬ್ಬೆಟ್ಟಿನ ಗುರುತು ಒತ್ತಿಸಲು ಉಪಯೋಗಿಸುವ 'ಇಂಕ್ ಪ್ಯಾಡ್'. ನಮ್ಮಲ್ಲಿ ಸಾಕಷ್ಟು ಜನ ಅವಿದ್ಯಾವಂತರಿರುವ ಕಾರಣ, ಎಷ್ಟೊ ಕಡೆ ಕಾಗದ ಪತ್ರಗಳಲ್ಲಿ ಸಹಿ ಮಾಡಬೇಕಾದ ಸಂಧರ್ಭದಲ್ಲಿ , ಸಹಿ ಮಾಡಲು ಬರದಿದ್ದರೆ ಎಡಗೈ ಹೆಬ್ಬೆಟ್ಟನ್ನು ಬಳಸಿ, ಇಂಕು ಚೆಲ್ಲಿದ ಪ್ಯಾಡಿನ ಮೇಲೊತ್ತಿ, ಹೆಬ್ಬೆರಳಿಗಂಟಿದ ಇಂಕಿನ ಮೂಲಕ ಸಹಿ ಹಾಕುವ ಜಾಗದಲಿ ಒತ್ತಿ ಕೈ ಹೆಬ್ಬೆರಳಿನ ಗುರುತು ಮೂಡುವ ಹಾಗೆ ಮಾಡಿಬಿಟ್ಟರೆ, ಅದು ಸಹಿಯಷ್ಟೆ ಸಕ್ರಮ ಹಾಗು ಬೆಲೆಯುಳ್ಳದ್ದು. ಸಾಕ್ಷಿಗೆ ಯಥಾರೀತಿ ಮತ್ತಿನ್ಯಾರದಾದರು ಸಹಿ , ಹೆಬ್ಬೆಟ್ಟು ಜತೆಗೆ ಹಾಕಿಸಬೇಕು. ಆದರೆ ವಿಷಯ ಅದಲ್ಲ; ನಮ್ಮ 'ಗೆಳೆಯರ ಬಳಗದಲ್ಲಿ' ಯಾರನ್ನಾದರೂ ಓದು, ಬರಹ ಬರೆಯದವರ ಕುರಿತು ಹೇಳಬೇಕು ಅಥವಾ ಕುರಿತು ಮಾತಾಡಬೇಕು ಅನಿಸಿದರೆ , "ಅವನಾ, ಅವನು ಬಿಡು, ಹೆಬ್ಬೆಟ್ಟು" ಎಂದು ಬಿಡುತ್ತಿದ್ದರು - ಅವನ ಬಗ್ಗೆ ಹೇಳಬೇಕಾದ, ಗುಣ ಪರಿಚಯ ಮಾಡಬೇಕಾದ ಎಲ್ಲಾ ಗುಣವಾಚಕಗಳನ್ನು ಆ ಒಂದೆ ಸರಳ ಪದದಲ್ಲಿ ಚಿತ್ರಿಸುವಂತ ಚಾಕಚಕ್ಯತೆ ಮತ್ತು ಜಾಣ್ಮೆ :-)
.
ಹಾಗೆ ಹೇಳಿದಾಗಲೆಲ್ಲ ನಮಗೆಲ್ಲರಿಗೂ ತುಟಿಯಂಚಲ್ಲೆ ನಗು. ಕೆಲವರಂತೂ ತಮ್ಮನ್ನೆ ಸ್ವವಿಮರ್ಶೆ ಮಾಡಿಕೊಳ್ಳುವ ಹಾಗೆ " ನಮ್ಮ ಕಥೆಯೇನು ಬಿಡಪ್ಪ, ನಾವು ಮೊದಲೆ ಹೆಬ್ಬೆಟ್ಟುಗಳು " ಅಂದುಬಿಡುತ್ತಿದ್ದರು. ಅವಿದ್ಯಾವಂತರೆಂಬ ಸೂಕ್ಷ್ಮವನ್ನು ಎಷ್ಟು ಸರಳವಾಗಿ, ಮೆಲು ಹಾಸ್ಯದಲ್ಲೆ ಹೇಳಿಬಿಡುವ ಶಕ್ತಿ ಈ ಪದಕ್ಕಿದೆ ನೋಡಿ? ಅದೂ ಯಾರಿಗೂ ಅಘಾತವೆನಿಸದ ಹಾಗೆ - ಸ್ವಯಂ ಆ ವ್ಯಕ್ತಿಯೂ ಸೇರಿದಂತೆ ..ಕೆಲವೊಮ್ಮೆ ಹೆಬ್ಬೆಟ್ಟಿನ ಜತೆಗೆ ಪ್ಯಾಡು ಸೇರಿಕೊಂಡು 'ನಾವ್ ಬಿಡಪ್ಪ ಹೆಬ್ಬೆಟ್ಟು-ಪ್ಯಾಡು' ಗಳಾಗಿ ಅವತರಣಿಕೆ ಕಾಣುತ್ತಿದ್ದರೂ ಮೂಲ ಸತ್ವ ಹಾಗೂ ತತ್ವ ಮಾತ್ರ ಅದೆ ಅಗಿರುತ್ತಿತ್ತು. ಹೆಚ್ಚು ಕಡಿಮೆ ನಾವೀಗ ಬಳಸುವ ಮೊಬೈಲು, ಸ್ಮಾರ್ಟ್ಫೋನು, ಐಪ್ಯಾಡುಗಳಲ್ಲೂ 'ಟೈಪಿಸಲು' ಈ ಹೆಬ್ಬೆಟ್ಟೆ ಪ್ರಮುಖ ಪಾತ್ರ ವಹಿಸುವುದರಿಂದ ಈ ಹಳೆ ಹೆಬ್ಬೆಟ್ಟಿನ ಪುರಾಣವೂ ನೆನಪಿಗೆ ಬಂತು. ನನಗೆ ಟೈಪಿಂಗ್ ಬರದ ಕಾರಣ ಹೆಬ್ಬೆರಳು, ತೋರ್ಬೆರಳುಗಳೆ 'ಬೆರಳಚ್ಚಿನ ಪರಿಕರ'ಗಳಾದ್ದರಿಂದ ಆ ಕಡೆ ಗಮನ ಹರಿಯಿತೆಂದು ಕಾಣುತ್ತದೆ...
.
ಪ್ರಕರಣದ ವರದಿಯ ಸರದಿಯೀಗ. ಐಪ್ಯಾಡ್ ಬಂದ ಹೊಸತಿನ ಕಾಲ - ಹೆಚ್ಚು ಕಡಿಮೆ ಐಪೋನಿನ ತರಹದ್ದೆ ಒಪ್ಪಂದ, ಒಡಂಬಡಿಕೆ ಮಗರಾಯನ ಜತೆಗಾಗಿದ್ದರೂ ಸಹ ಆಗ್ಗಾಗೆ ಸಣ್ಣ ಪುಟ್ಟ ಮಹಾಭಾರತಗಳು ನಡೆಯುತ್ತಲೆ ಇದ್ದವು. ಅವನೊ ಸ್ವಲ್ಪ ದೂರ್ವಾಸನ ವಂಶ (ಅಪ್ಪನದೇನು ಅಂತ ಕೇಳಬೇಡಿ). ಎಷ್ಟೊ ಬಾರಿ ಐಪ್ಯಾಡ್ ಕೇಳಿದಾಗ ಕೊಡಲಿಲ್ಲವೆಂದು ಕದನ , ಯುದ್ಧಗಳು ಆಗಿಯೆಬಿಡುವ ಸೂಚನೆಗಳು, ನಮ್ಮ ನೆರೆ'ಹೊರೆ' ದೇಶಗಳ ಜತೆ ಆಗ್ಗಾಗೆ ನಡೆಯುವ ಹಾಗೆ ನಮ್ಮಲ್ಲೂ ಆಗುತ್ತಿದ್ದುದುಂಟು. ಪ್ರತಿಬಾರಿಯೂ, ಇನ್ನೇನು ಅಸ್ತ್ರ ಶಸ್ತ್ರ ಪ್ರಯೋಗಕ್ಕೆ ಬಂದು ನಿಂತಿತೆನ್ನುವಾಗ, ಹೇಗೊ ಇಬ್ಬರೂ ಸಾವರಿಸಿಕೊಂಡು ಬಿಳಿ ಬಾವುಟ ಹಾರಿಸಿ ಶಾಂತಿ ಮಂತ್ರ ಪಠಿಸುತ್ತಿದ್ದೆವು. ಕೆಲವೊಮ್ಮೊಮ್ಮೆ ತಾಳ್ಮೆಯ ಗತಿ, ಮಿತಿ ಮೀರಿದಾಗ ವಿಕೋಪಕ್ಕೋಗಿದ್ದೂ ಉಂಟು. ಅಂತಹ ಒಂದು ವಿಷಗಳಿಗೆ - ಕೈಯಲಿದ್ದ ಐಪ್ಯಾಡನ್ನು ಎತ್ತಿ ಪಕ್ಕದಲ್ಲಿದ್ದ ಸೋಫಾ ಮೇಲೆ ಕುಕ್ಕಿ (ಅಕಟಕಟಾ!) - ಒಗೆದುಬಿಟ್ಟ......:-(
.
ಅಮೇಲೆ ನಡೆದ ರಾಮಾಯಣ, ಮಹಾಭಾರತದ ಸಚಿತ್ರ, ಸವಿವರವಾದ ವರದಿಯ ಬದಲು ಬರಿಯ ಸಾರಾಂಶವನ್ನು ಇಲ್ಲಿ ಬಿತ್ತರಿಸಿದರೆ ಸಾಕೆನಿಸುತ್ತದೆ. ಅದಾದ ಮರುಗಳಿಗೆಯೆ, ಐಪ್ಯಾಡಿನ ಪರದೆ (ಸ್ಕ್ರೀನ್) ಪೂರ್ತಿ ಹಾಳಾದಂತೆ ಕಲಸಿಹೋಗಿ, ಅದರ ಹಳೆಯ ಅಸಲಿ ಬಣ್ಣಗಳೆಲ್ಲ ಮಾಯವಾಗಿ ಬರಿಯ ಗಿಳಿ ಮತ್ತು ಗಾಢ ಹಸಿರು ಮಿಶ್ರಿತ ಪುಡಿ ಕಲಸಿಟ್ಟ ಬಣ್ಣಗಳು ಮಾತ್ರ ಕಾಣತೊಡಗಿತು (ನೀವು ಅರ್ನಾಲ್ಡ್ ಶ್ರೆವಾಜ್ನಿಗರನ 'ಟರ್ಮಿನೇಟರ' ಚಿತ್ರದ ಪ್ರಿಡೇಟರನ ಹಸಿರಸಿರು ದೃಷ್ಟಿಯನ್ನು ನೆನೆಸಿಕೊಂಡರೆ, ನಾನು ಹೇಳುತ್ತಿರುವ ಚಿತ್ರಣದ ಪರಿಪೂರ್ಣ ಕಲ್ಪನೆ ಸಿಕ್ಕಂತಾಗುತ್ತದೆ). ಅದೃಶ್ಯವಶಾತ್ ಬಿಳಿಯ ಬಣ್ಣಕ್ಕೇನೂ ಆಘಾತ ತಟ್ಟಿರಲಿಲ್ಲ - ಹೀಗಾಗಿ, ನನ್ನ ನೋಟ್ ಪ್ಯಾಡಿನ ಬರಹಗಳೆಲ್ಲ ಬದುಕಿಕೊಂಡವು, ಮತ್ತು ನನ್ನ ಬರಹದ ಕಾರ್ಯಕ್ಕೆ ಅಡಚಣೆಯಾಗದಷ್ಟು ಕಷ್ಟಪಟ್ಟು ಬರೆಯುವಷ್ಟು ಮಟ್ಟಕ್ಕೆ ಮಾತ್ರ ಉಳಿದುಕೊಂಡಿತ್ತು. ಇದರಿಂದಾದ ಒಂದೆ ಅನುಕೂಲವೆಂದರೆ, ಮಗರಾಯ ಐಪ್ಯಾಡಿನತ್ತ ಕಣ್ಣು ಹಾಕುವುದನ್ನು ಬಿಟ್ಟಿದ್ದು. ನಾನೂ ಅದೇ ಕಾರಣಕ್ಕೆ ರಿಪೇರಿ ಮಾಡಿಸುವ ಗೋಜಿಗೂ ಹೋಗದೆ ಸುಮ್ಮನಿದ್ದುಬಿಟ್ಟೆ; ಹೇಗೂ ನನ್ನ ಬರಹಕ್ಕೆ ಅಡ್ಡಿಯಿರಲಿಲ್ಲವಲ್ಲಾ?
.
ಹೆಚ್ಚುಕಡಿಮೆ, ಈ ಪ್ರಕರಣವೆ ಮರೆತುಹೋದಂತಾಗಿ ಸುಮಾರು ದಿನಗಳುರುಳಿತ್ತು. ಆ ಬಾರಿಯ ಜೂನಿನ ರಜೆಗೆ ನಾನು, ಸಕುಟುಂಬ ಪರಿವಾರ ಸಮೇತ ಮೈಸೂರಿಗೆ ಬಂದಿದ್ದೆ. ಆ ಸಮಯದಲ್ಲಿ ಕೊಂಚ ವ್ಯವಹಾರ ನಿಮಿತ್ತ ಪ್ರಯಾಣಗಳೂ ಇದ್ದ ಕಾರಣ ಬೆಂಗಳೂರಿಗೆ ಬರಬೇಕಾಗಿತ್ತು. ಅಲ್ಲೆ, ನನ್ನ ಶ್ರೀಮತಿಯ ತವರು ಮನೆಯಾದರಿಂದ ಅವರೂ ಜತೆಗೆ ಹೊರಟರು. ಅವಳು ಮಗನ ಜತೆಗೆ ತಾಯಿ ಮನೆಗೆ ನೇರ ಹೊರಟರೆ, ನಾನು ಆಫೀಸಿನ ಸನಿಹದ ಹೋಟೆಲಿನ ರೂಮಿನಲ್ಲಿ ಠಿಕಾಣಿ ಹೂಡಿದ್ದೆ. ತಾಯಿ, ಮಗ ಇಬ್ಬರು ಅಲ್ಲಿಂದಿಲ್ಲಿಗೆ ಓಡಾಡಿಕೊಂಡು ಕಾಲ ಹಾಕುತ್ತಿದ್ದರು. ಬೆಂಗಳೂರಿನ ಭಯಂಕರ ಟ್ರಾಫಿಕ್ಕಿನ ಸಾಮರ್ಥ್ಯಕ್ಕೆ ಶರಣಾಗಿ, ನಾನು ವಾರದ ಕೊನೆಯ ಒಂದು ದಿನ ಮಾತ್ರ ಭೇಟಿಯ ಕಾರ್ಯಕ್ಕೆ ಮೀಸಲಿರಿಸಿ, ಮಿಕ್ಕಂತೆ ವ್ಯವಹಾರಿಕ ಕಾರ್ಯಭಾರದಲ್ಲಿ ಮುಳುಗಿಹೋಗಿದ್ದೆ. ಹೀಗಿರುವ ನಡುವಿನೊಂದು ದಿನ, ತಾಯಿ ಮಗ ಇಬ್ಬರು ಐಪ್ಯಾಡ್ ತೆಗೆದುಕೊಂಡು ಆ ಮನೆಗೆ ಹೋಗುತ್ತೆವೆಂದು ಹಠ ಹಿಡಿದರು. ಹೇಗೂ ಆಫೀಸಿನ ಹೊತ್ತಲ್ಲಿ ನಾನೂ ಬಳಸುವಂತಿಲ್ಲವಲ್ಲ ಎಂಬ ತರ್ಕ ಅವರದು. ಜತೆಗೆ ಹೇಗೂ ಕೆಟ್ಟಿರುವ ಪರದೆ, ಮತ್ತಷ್ಟು ಕೆಡುವ ಸಾಧ್ಯತೆಯಿಲ್ಲವಲ್ಲ? (ಕೆಟ್ಟರೂ, ಏಟಿನ ಮೇಲೇಟು ಬಿದ್ದಾಗ , ಮೊದಲಿನ ಏಟಿನಷ್ಟು ತೀವ್ರತೆ ನಂತರದ್ದಕ್ಕೆ ಹೇಗೂ ಇರುವುದಿಲ್ಲವಲ್ಲ..) ಅದೊಂದು ರೀತಿ ಹೊಸ ಕಾರಿನ ಹಾಗೆ...ಮೊದಲಿನ ಸ್ಕ್ರಾಚು, ಗೆರೆ ಬೀಳುವ ತನಕ ಎಷ್ಟೊಂದು ಜತನ, ವೇದನೆ, ಕಾತರ, ಕಾಪಾಡುವ ಅವಸರ. ಆಮೇಲಿನದಕ್ಕೆ ಅಷ್ಟು ಆಸ್ಥೆ ಇರುವುದಿಲ್ಲವಂತೆ (ಹೊಸದಾಗಿ ಮದುವೆಯಾದಾಗ ಹೊಸ ಹೆಂಡತಿಯ ಬಗೆಯು ಗಂಡಂದಿರ ಪ್ರತಿಕ್ರಿಯೆ ಹೀಗೆ ಇರುತ್ತದೆಯೆಂದು ಗೆಳೆಯರೊಬ್ಬರ ಉವಾಚ..ಆದರೆ, ಆ ವಿಷಯ ತೀರ ಗಹನ ಮತ್ತು ಈಗ ಬರೆಯುತ್ತಿರುವ ವಸ್ತು ವಿಷಯದ ವ್ಯಾಪ್ತಿಯಿಂದಾಚೆಗೆ ಬರುವುದರಿಂದ, ಸದ್ಯಕ್ಕೆ ಅಲ್ಲಿಗೆ ಬಿಡೋಣ..:-) ). ಅಂತೂ ಸುಮಾರು ವಾದಾವಿವಾದ, ಆಣೆ, ಪ್ರಮಾಣ, ಸತ್ಯಗಳ ಪ್ರದರ್ಶನದ ನಂತರ, ನಾನೂ ಅರೆಮನಸ್ಸಿನಿಂದಲೆ ಐಪ್ಯಾಡು ಕೊಟ್ಟೆ - ಜತೆಗೆ ತೀವ್ರವಾದ ಎಚ್ಚರಿಕೆಗಳ ಜತೆಯಲ್ಲೆ.
.
ಅಂದಿನ ದಿನ ಸಂಜೆ ಎಂದಿನಂತೆ ಹೋಟೆಲಿನ ರೂಮಿಗೆ ಹಿಂತಿರುಗಿ ಏನೊ ಪರಿಶೀಲಿಸುತ್ತಾ ಕುಳಿತಿದ್ದೆ. ರಾತ್ರಿಯ ಹೊತ್ತಿಗೆ ಇವರಿಬ್ಬರೂ ವಾಪಸ್ಸು ಬಂದರು. ಎರಡು ಗಂಟೆಯ ಆಟೋ / ಬಸ್ಸಿನ ಪ್ರಯಾಣದಿಂದ ಜರ್ಝರಿತವಾಗಿದ್ದಕ್ಕೊ ಏನೊ ಊಟವನ್ನು ಬೇಡಾ ಎಂದು ಮಲಗಿಬಿಟ್ಟರು. ಮಲಗುವ ಮುನ್ನ ಮರೆಯದೆ ಐಪ್ಯಾಡ್ ಹಿಂದಿರುಗಿಸಿದ ಮಗನ ಶ್ರದ್ದೆಗೆ ಒಳಗೊಳಗೆ ಖುಷಿಯಾದರೂ ತೋರಿಸಿಕೊಳ್ಳದೆ, ಹಾಲು ಕುಡಿದು ಮಲಗಿ ಎಂದು ಹೇಳಿ ಮತ್ತೆ ಕೆಲಸದತ್ತ ಗಮನ ಹರಿಸಿದೆ. ಆ ಕೆಲಸದ ಗಡಿಬಿಡಿಯಲ್ಲಿ ಆ ರಾತ್ರಿ ಐಪ್ಯಾಡನ್ನು ತೆಗೆದು ನೋಡಲು ಸಮಯವಾಗಲಿಲ್ಲ. ಬೆಳಿಗ್ಗೆ ಎಂದಿನಂತೆ ಎದ್ದು ಆಫೀಸಿಗ್ಹೊರಡುವ ಮುನ್ನ, ಎಂದಿನಂತೆ ಇ-ಮೈಯಿಲ್ಸ್ ನೋಡೋಣವೆಂದು ಐಪ್ಯಾಡ್ ತೆರೆದರೆ - ಅರೆ! ಇದೇನಿದು ವಿಸ್ಮಯ?
.
ಹಸಿರು ಹಾವಾಗಿದ್ದ ಐಪ್ಯಾಡಿನ ಪರದೆ, ಮೊದಲಿದ್ದ ಹಾಗೆ ಬದಲಾಗಿ ಲಕಲಕನೆ ಹೊಳೆಯುತ್ತಿದೆ...:-)
.
ನನಗೆ ನಂಬಿಕೆಯೆ ಬರುತ್ತಿಲ್ಲ....ಹಾಗೆ, ಹೀಗೆ ತಿರುಗಿಸಿ, ಎರಡು ಮೂರು ಬಾರಿ ಆಫ್-ಆನ್ ಮಾಡಿ, ಮತ್ತೆ ಮತ್ತೆ ನೋಡಿದೆ. ಸಂಶಯವಿಲ್ಲ...ಖಚಿತವಾಗಿ ಸರಿಯಾಗಿಬಿಟ್ಟಿದೆ.. ಬಹುಶಃ ನಿನ್ನೆ ಯಾರಾದರೂ ಗೊತ್ತಿದ್ದವರ ಹತ್ತಿರ ಹೊಯ್ದು ರಿಪೇರಿ ಮಾಡಿಸಿರಬಹುದೆ ಅನಿಸಿತು. ಆದರು ಅಷ್ಟು ಕ್ಷಿಪ್ರದಲ್ಲಿ, ಅದರಲ್ಲೂ ಬೆಂಗಳೂರಿನಲಿನ್ನು ಐಪ್ಯಾಡ್ ಹೊರಬಂದಿರದ ಹೊತ್ತಲ್ಲಿ, ಯಾವ ಪರಿಣಿತ ತಾನೆ ದುರಸ್ತಿ ಮಾಡಬಲ್ಲ ಅನಿಸಿತು...
.
ಆಗತಾನೆ ಎದ್ದಿದ್ದ ಅವರಿಬ್ಬರನ್ನೆ ಕೇಳಿಬಿಡುವ ಎಂದು - 'ಐಪ್ಯಾಡಿಗೆ ಏನಾಯ್ತು? ಯಾರಾದರು ರಿಪೇರಿ ಮಾಡಿದ್ರಾ?' ಎಂದೆ. ಅವಳು ಗಾಬರಿಯಾಗಿ 'ಇಲ್ವಲ್ಲ...? ಯಾಕೆ , ತಿರ್ಗಾ ಕೆಟ್ ಹೋಯ್ತಾ?' ಎಂದಳು ಆತಂಕದ ದನಿಯಲ್ಲಿ.
.
'ಅದಕ್ಕಲ್ಲಾ..ಸ್ಕ್ರೀನ್ ಈಗ ಸರಿಯಾಗಿದೆ, ಬಣ್ಣ ಎಲ್ಲಾ ಸರಿಯಾಗಿ ಬರ್ತಾ ಇದೆ.....'
.
' ಹೂಂ ..ನಿನ್ನೆ ನೋಡಿದ್ವಿ..ಯಾವಾಗ ರಿಪೇರಿ ಮಾಡಿಸಿದ್ರಿ?'
.
ಅಲ್ಲಿಗೆ ಇವರು ನಾನೆ ರಿಪೇರಿ ಮಾಡಿಸಿದ್ದೇನೆ ಅಂತ ತಿಳಿದ್ಕೊಂಡಿದ್ದಾರೆಂದು ಖಚಿತವಾಯ್ತು. ಹಾಗಾದ್ರೆ, ಇದು ಹೇಗಾಯ್ತು?
.
ಮಗ ಮಾತ್ರ ತುಟಿ ಪಿಟಕ್ಕೆನ್ನದೆ, ಸುಮ್ಮನೆ ತಿಂಡಿ ಬಾರಿಸುತ್ತಿದ್ದ, ನಮ್ಮ ಮಾತಿನ ಪರಿವೆಯೆ ಇಲ್ಲದವನಂತೆ. ನನಗೊ, ಇದು ಕೊಂಚ ವಿಚಿತ್ರದ ಪವಾಡವಾಗಿ ಕಂಡರೂ ಕೆಟ್ಟು ಹೋಗಿದ್ದು ಸರಿಯಾದುದ್ದಕ್ಕೆ ತಲೆ ಕೆಡಿಸಿಕೊಳ್ಳುವುದೇಕೆಂದು ಸುಮ್ಮನಾದೆ; ಅಲ್ಲದೆ ಕೆಲಸಕ್ಕೆ ಹೊರಡುವ ಹೊತ್ತಾಗಿ ಹೆಚ್ಚು ವಿಚಾರಿಸಲು ಸಮಯವೂ ಇರಲಿಲ್ಲ. ಹೀಗೆಯೆ ದಿನವೆಲ್ಲ ಕಳೆದು ಆಮೇಲೆ ಆ ವಿಷಯವೆ ಮರೆತುಹೋಗಿ ಬೇರೆಯದೆ ದೈನಂದಿನ ಆಗುಹೋಗಿನ ಜತೆ ಮತ್ತೊಂದಾಗಿ ಸೇರಿ ಹೋಯ್ತು.
.
ಕಥೆ ಇಲ್ಲಿಗೆ ಮುಗಿದಿದ್ದರೆ, ಅಷ್ಟೊಂದು ವಿಶೇಷವೇನೂ ಇರುತ್ತಿರಲಿಲ್ಲವೇನೊ? ಮುಂದಿನ ಟ್ವಿಸ್ಟು ಕಾಣಲು ಮತ್ತಾರು, ತಿಂಗಳು , ವರ್ಷವೆ ಹಿಡಿಯಿತೆಂದು ಕಾಣುತ್ತದೆ. ಮತ್ತೊಂದು ಅಂತದೆ ಸೀನು - ತಂದೆ, ಮಕ್ಕಳ ಮಾತಿನ ಕಾಳಗ ಯಾವುದೊ ವಿಷಯಕ್ಕಾಗಿ. ಈ ಬಾರಿ ಮರಿ ದೂರ್ವಾಸನಪ್ಪ , ಹಿರಿ ದೂರ್ವಾಸನ ಸರದಿ...ಕೋಪಾವೇಷದಲ್ಲಿ, ಕೈಲಿದ್ದ ಐಪ್ಯಾಡನ್ನು ಅದರ ಹೊದಿಕೆಯ ಸಮೇತ ಸೋಫಾ ಮೇಲೆ ಕುಕ್ಕಿದ...
.
' ಹಾಗೆ ಕುಕ್ಕಬೇಡಪ್ಪ, ಹೋದ ಸಾರಿ ಏನಾಯ್ತು ಅಂತ ನೆನಪಿದೆ ತಾನೆ?'
.
ನನಗೆ ಸರಕ್ಕನೆ ಜ್ಞಾನೋದಯವಾಯ್ತು..ಹಾಗೆಯೆ ತಟ್ಟನೆ ಕೋಪವೂ ಇಳಿಯಿತು. ನನ್ನೆಲ್ಲಾ ಕಷ್ಟಪಟ್ಟು ಬರೆದೆಲ್ಲಾ ಸರಕು ಅದರೊಳಗೆ ತುಂಬಿದ್ದರಿಂದ ನನ್ನ ಕೋಪವನ್ನು ಅದರ ಮೇಲೆ ತೋರಿಸಿದರೆ ನಷ್ಟ ನನಗೇ ತಾನೆ? ಆದರೆ ಕುಕ್ಕಿದ್ದಾಗಿತ್ತು...ಮುವ್ವತ್ಮೂರು ಕೋಟಿ ದೇವರುಗಳನ್ನೆಲ್ಲ ಒಂದೆ ಏಟಿಗೆ ಸ್ಮರಿಸುತ್ತ ಐಪ್ಯಾಡ್ ಕೈಗೆತ್ತಿಕೊಂಡೆ..ಇಷ್ಟದ, ಕಷ್ಟದ, ನಂಬಿದ, ನಂಬದ ಎಲ್ಲಾ ದೇವರುಗಳನ್ನು ಕಣ್ಮುಚ್ಚಿ ಪ್ರಾರ್ಥಿಸುತ್ತಾ ಐಪ್ಯಾಡಿನ ಕದ ತೆರೆದೆ..
.
ನಿಧಾನವಾಗಿ ಕಣ್ಣು ತೆರೆಯುತ್ತಾ, ಏನೂ ಆಗಿರದಿರಲಪ್ಪಾ ಎಂದು ಮಿಣಮಿಣಿಸುತ್ತಲೆ....
.
ತಡವಾಗಿ ಹೋಗಿತ್ತು....:-( ಯಾವ ದೇವರಿಗೂ ನನ್ನ ಮೊರೆ ಕೇಳಲು ಪುರುಸೊತ್ತಿರಲಿಲ್ಲವೆಂದು ಕಾಣುತ್ತದೆ. (ಅಥವ ಎಲ್ಲರನ್ನು ಒಟ್ಟಾಗಿ ಕರೆದು ಅವರವರಲ್ಲೆ ಯಾರು ಬರುವುದು, ಯಾರು ಬಿಡುವುದು ಎಂದು ಜಗಳ, ಗೊಂದಲವೆಬ್ಬಿಸಿಬಿಟ್ಟೆನೋ ಏನೊ ಕಾಣೆ..)
.
ಏನಾಗಬಾರದೆಂದು ಪ್ರಾರ್ಥಿಸುತ್ತಿದ್ದೇನೊ ಅದೆ ಆಗಿತ್ತು..ಅದೇ ಕಳೆದ ಸಾರಿಯ ಹಾಗೆಯೆ - ಮತ್ತೆ ಪಾಚಿಗಟ್ಟಿದ ಹಸಿರು ಡಬ್ಬದ ಹಾಗೆ..
.
ತಟ್ಟನೆ, ಕಳೆದ ಸಾರಿ ಬಿಳಿ ಬಣ್ಣ ಕೆಲಸ ಮಾಡಿದ್ದು ನೆನಪಾಯ್ತು. ಅದನ್ನು ಮತ್ತೆ ಪರೀಕ್ಷಿಸಿ, ನನ್ನ ಬರಹಗಳ ಕ್ಷೇಮವ್ಹೇಗಿದೆಯೆಂದು ನೋಡಲ್ಹವಣಿಸಿದೆ...ಬಹುಶಃ ಆ ಮೂವತ್ಮೂರು ಕೋಟಿಯಲ್ಲಿ ಯಾರೊ ಒಬ್ಬರು ನನ್ನ ಮೊರೆ ಆಲಿಸುತ್ತಿದ್ದರೆಂದು ಕಾಣುತ್ತದೆ. ಅಥವ ನನ್ನಿ ಪರಿಸ್ಥಿತಿ ನೋಡಿ ಕರುಣೆಯುಕ್ಕಿತೋ ಏನೊ.. ಕಳೆದ ಬಾರಿಯ ಹಾಗೆ ಎಲ್ಲವೂ ಜತನವಾಗಿತ್ತು! ಅಂದರೆ, ನನ್ನ ಬರಹದ ಕಥೆ ಎಂದಿನಂತೆ ಸುರಕ್ಷಿತ ಅನಿಸಿ ಸಮಾಧಾನವಾಯ್ತು. ಆದರೆ ಮತ್ತೆ ಕೋಪದ ಕೈಗೆ ಸಿಕ್ಕಿ ಸರಿಯಾಗಿದ್ದ ಐಪ್ಯಾಡ್ ಮತ್ತೆ ಕೆಡಿಸಿಟ್ಟಿದ್ದಕ್ಕಾಗಿ ಖೇದವೂ ಆಯ್ತು.
.
ಆ ದಿನ ರಾತ್ರಿ ಮಲಗಲಿಕ್ಕೆ ಸಿದ್ದತೆ ನಡೆಸಿದ್ದಂತೆ ಮಗರಾಯ ಬಂದ. ಅವನ ಕಣ್ಣೆಲ್ಲ ಐಪ್ಯಾಡಿನತ್ತಲೆ ಇತ್ತು. ನನಗಿನ್ನು ಅದರ ಸ್ಕ್ರೀನು ಹಾಳಾದ ಕೋಪ ಆರಿರಲಿಲ್ಲ.
.
'ಇನ್ನು ಮೇಲೆ ಐಪ್ಯಾಡ್ ಕಡೆ ಕಣ್ಣೆತ್ತಿಯೂ ನೋಡಬೇಡಾ...ಯು ವಿಲ್ ನಾಟ್ ಗೆಟ್ ಇಟ್' ಎಂದೆ
.
' ಈಗ ಸ್ಕ್ರೀನ್ ಸರಿಯಾಯ್ತಾ..' ಎಂದ. ನಾನೂ ಮಾತಾಡದೆ ಐಪ್ಯಾಡ್ ತೆಗೆದೆ, ಹಸಿರಿನ ಪರದೆಯನ್ನು ನೇವರಿಸುತ್ತ.
.
ಅವನು ಕೊಂಚ ಹೊತ್ತು ಅದನ್ನೆ ದಿಟ್ಟಿಸಿ ನೋಡುತ್ತ - ' ಐ ಪ್ಯಾಡನ್ನ ಇನ್ನೊಂದು ಸಾರಿ ಎತ್ತಿ ಹಾಕಿ ಬಿಡಪ್ಪ, ಸರಿಯಾಗಿ ಬಿಡುತ್ತೆ..'ಎಂದ
.
ನನಗೆ ಕೋಪ ಇನ್ನು ಹೆಚ್ಚಾದರೂ ಸಾವಾರಿಸಿಕೊಂಡು - ' ಸಾಕು, ಬಾಯ್ಮುಚ್ಕೊಂಡು ಬಿದ್ಕೊಳ್ಳೊ..' ಎಂದೆ
.
'ಇಲ್ಲ ಅಪ್ಪ..ಹೋದ ಸಾರಿ ಬೆಂಗಳೂರಲ್ಲಿ ಹಂಗೆ ರಿಪೇರಿಯಾಗಿದ್ದೂ..ಆ ಸುಮ ಆಟ ಆಡ್ತೀನಿ ಅಂತ ಎತ್ತಿ ಕೆಳಗೆ ಬೀಳಿಸಿಬಿಟ್ಟಳು.. ಆಮೇಲೇ ಐಪ್ಯಾಡು ಸರಿಯಾಗಿದ್ದು..'
.
ಅವನಿಗರಿವಿಲ್ಲದಂತೆ ಹೋದ ಸಾರಿ ಬೆಂಗಳೂರಿನಲ್ಲಿ ಏನಾಯ್ತೆಂದು ಬಾಯ್ಬಿಟ್ಟುಬಿಟ್ಟಿದ್ದ!
.
ಆದರೀಗ ಕೋಪ ಬರುವ ಬದಲು ಅಚ್ಚರಿಯೂ, ನಗುವು ಬಂತು. ಖಚಿತ ಪಡಿಸಿಕೊಳ್ಳಲು ಮತ್ತೆ ಕೇಳಿದೆ :
.
' ನಿಜವಾಗ್ಲೂ ಮತ್ತೆ ಕೆಳಗೆ ಬಿದ್ದಿತ್ತಾ..? ಆಮೇಲೇನಾ ಸರಿ ಹೋಗಿದ್ದು..'
.
'ಹೌದಪ್ಪ..ನೀನು ಬೈತಿಯಾ ಅಂತ ಹೇಳ್ಲಿಲ್ಲ ಅಷ್ಟೆ..'
.
ನನಗೆ ತುಸು ಯೋಚಿಸುವಂತಾಯ್ತು. ಬಿದ್ದು ಮತ್ತೆ ರಿಪೇರಿಯಾಗುವುದೆ? ಅದು ಹೇಗೆ ಸಾಧ್ಯ? ಕೇವಲ ಕಾಕತಾಳಿಯವೆಂದರೂ ಎಲ್ಲೊ ನೂರಕ್ಕೊಂದೊ, ಸಾವಿರಕ್ಕೊಂದೊ ಹಾಗಾಗಬಹುದಷ್ಟೆ..ಬಹುಶಃ, ಇದು ಆ ಒಂದು ಕೇಸಿರಬಹುದೆ ಅಂದುಕೊಳ್ಳುತ್ತಲೆ, ಅವನಿಗೆ ಹೇಳಿದೆ.. 'ಅದು ರಿಪೇರಿಯಾಗಿದ್ದು , ಕೇವಲ ಆಕಸ್ಮಿಕ ಕಂದ..ಜಸ್ಟ್ ಬೈ ಚಾನ್ಸ್ ಅಷ್ಟೆ...ಒಂದು ಸಲ ಹಾಗಾಯ್ತು ಅಂದರೆ ಪ್ರತಿ ಸಲವು ಹಾಗೆ ಆಗುವುದಿಲ್ಲ..ಅದನ್ನ ಅಂಗಡಿಗೆ ಒಯ್ದು ರಿಪೇರಿ ಮಾಡಿಸಬೇಕಷ್ಟೇ....'
.
ನನಗೊ ಅವನು ಕೆಟ್ಟಿದ್ದೆಲ್ಲವನ್ನು ಎತ್ತಿ ಹಾಕಿದರೆ ರಿಪೇರಿಯಾಗುವುದೆಂಬ ಹುಸಿ ನಂಬಿಕೆಗೆ ಚಂದಾದಾರನಾಗದಿರಲೆಂಬ ತವಕ..ಆದರೆ ಅವನು ಪಟ್ಟು ಬಿಡದೆ, 'ನೀನು ಟ್ರೈ ಮಾಡಿ ನೋಡಪ್ಪಾ..ಬೇಕಾದ್ರೆ?..' ಎಂದ.
.
ಅವನು ಹೇಳಿದ್ದು ಒಂದುವೇಳೆ ನಿಜವೆ ಆಗಿದ್ದರೂ, ಅದನ್ನು 'ಟ್ರೈ' ಮಾಡುವ ಮನಸ್ಥಿತಿಯಂತೂ ನನ್ನದಾಗಿರಲಿಲ್ಲ. ಆದರೂ ಹೆಚ್ಚು ಚರ್ಚಿಸದೆ 'ಸರಿ ಸರಿ ಮಲಗು' ಎಂದು ಹೇಳುತ್ತಾ ಐಪ್ಯಾಡಿನ ಹಸಿರು ಪರದೆಯನು ಮುಚ್ಚಿ ಮಂಚದ ಪಕ್ಕದಲಿದ್ದ ಚಿಕ್ಕ ಸ್ಟೂಲಿನ ಮೇಲಿಟ್ಟು ಮಂಚದ ಮೇಲೊರಗಿದೆ. ಇನ್ನೇನು ದೀಪವಾರಿಸಿ ಕೈಯನ್ನು ತಲೆಯ ಮೇಲಿಟ್ಟು ಕಣ್ಣು ಮುಚ್ಚಲಿದ್ದ ಸಮಯ...ಚಲಿಸಿದ ಕೈ ಆಕಸ್ಮಿಕವಾಗಿ ಸ್ಟೂಲಿಗೆ ತಗಲಿ, ಸ್ಟೂಲಿನ ಮೇಲಿಂದ 'ಧಡ್' ಎಂಬ ಸದ್ದಿನೊಡನೆ ಐ ಪ್ಯಾಡ್ ದಢಕ್ಕನೆ ಕೆಳಗೆ ಬಿತ್ತು - ಸುಮಾರು ಎರಡಡಿ ಎತ್ತರದಿಂದ.. ನಾನು ಹೆಚ್ಚು ಕಡಿಮೆ ಚೀರಿದೆ - 'ಓ ಭಗವಂತ...!'
.
ಈಗಾಗಲೆ ಬಿದ್ದು ಬರಿ ಹಸಿರು ಮಾತ್ರ ಕಾಣುವಂತಾಗಿತ್ತು. ಈ ಬಾರಿ ಮತ್ತೆ ಬಿದ್ದಿತೆಂದರೆ ಈಗ ಕಾಣುತ್ತಿರುವುದು ಮಾಯವಾಗಿ ಪೂರ್ತಿ ಖಾಲಿ ಪರದೆಯಾದೀತೆಂಬ ಭೀತಿ ನನಗೆ. ಆ ಭೀತಿಯಲ್ಲೆ ಕೆಳಗೆ ಬಿದ್ದಿದ್ದ ಐಪ್ಯಾಡನ್ನು ಹುಷಾರಾಗಿ ಮೇಲೆತ್ತಿಕೊಂಡೆ. ಹೆಚ್ಚು ಕಡಿಮೆ ಅದು ಕೆಲಸ ಮಾಡುವುದಿಲ್ಲವೆಂಬ ಖಚಿತ ಖೇದಭಾವ ಮನಸಲ್ಲಿ. ಅದೇ ನಿರೀಕ್ಷೆಯಲ್ಲಿ ಐಪ್ಯಾಡಿನ ಸ್ವಿಚ್ಚು ಆನ್ ಮಾಡಿದೆ..ತುಸು ಹೊತ್ತು ಎಲ್ಲಾ ಕಪ್ಪು..ಕಪ್ಪು..
.
ನಂತರ ನಿಧಾನವಾಗಿ ಆಪಲ್ಲಿನ ಲೋಗೊ ಚಕ್ರ ಸುತ್ತತೊಡಗಿತು...ಕೊಂಚ ಆಶಾವಾದ..ಇನ್ನು ಕೆಲಸ ಮಾಡುತ್ತಿರಬಹುದೆಂದು.. ಒಂದೊಂದು ಕ್ಷಣವೂ ನಿಧಾನವಾಗಿ ಉರುಳುತ್ತಿರುವಂತೆ ಅನಿಸುತ್ತಿದೆ..ಎಲ್ಲೊ ದೂರದಿಂದ ಬಂದಂತೆ ಮಗನ ದನಿ ಕೇಳಿಸುತ್ತಿದೆ -
.
'ನೋಡಪ್ಪ, ನಾನ್ಹೇಳಿದ್ರೆ ನಂಬಲ್ಲಾ..ಈಗ ನೀನೇ ನೋಡುವೆಯಂತೆ'..
.
ಕ್ಷಣಕ್ಷಣವೂ ನಿಧಾನವಾಗಿ ಉರುಳುತ್ತಿರುವಾಗ..
.
ಕೊನೆಗೂ ಸ್ಕ್ರೀನ್ ತೆರೆದುಕೊಂಡಿತು..ಹಸುರಸುರು ಸುತ್ತುವಂತೆ ಸರಿದಾಡಿ...ಅರೆ! ಇದೇನಿದು? ಮತ್ತೆ ಹಸಿರೆಲ್ಲ ಮಾಯವಾಗಿ ಮಾಮೂಲಿನ ಬಣ್ಣಗಳು....? ಒಂದೊಂದೆ ಆಪ್ಸ್ ನಿಧಾನಕ್ಕೆ ಮೂಡತೊಡಗಿದಂತೆ ಖಚಿತವಾಗತೊಡಗಿತು...ಐ ಪ್ಯಾಡ್ ಮತ್ತೆ ಬಿದ್ದೆ ರಿಪೇರಿಯಾಗಿದೆ ಎಂದು...!!
.
ಮಗನ ಜತೆ ನಾನು ಸೇರಿ '..ಹುರೆರೆ ...ಐಪ್ಯಾಡ್ ರೀಪೇರಿಯಾಯ್ತು 'ಎಂದು ಕೂಗಿದೆ..
.
ಆ ಸಂಭ್ರಮಾಚರಣೆಗಳೆಲ್ಲ ಮುಗಿದ ಮೇಲೂ ನನ್ನ ಮನದಲ್ಲಿ ಕಾಡುತ್ತಿದ್ದ ಪ್ರಶ್ನೆಗಳು ಮಾತ್ರ ಮರೆಯಾಗಲಿಲ್ಲ...............?
.
- ಮೊದಲನೆ ಬಾರಿ ಬಿದ್ದು ರಿಪೇರಿಯಾದರೆ ಕಾಕತಾಳೀಯ ಅನ್ನುವುದು ಕಷ್ಟ..ಅಂತದ್ದು ಎರಡು ಬಾರಿ ಬಿದ್ದು ಎರಡು ಬಾರಿಯೂ ಅದೇ ರೀತಿ ರಿಪೇರಿಯಾಗುವುದೆಂದರೆ, ಏನನ್ನಬೇಕು?
- ಐ ಪ್ಯಾಡಿನ ಡಿಸೈನಿನಲ್ಲೆ ಬಿದ್ದರೆ ಕೆಟ್ಟ ಹಾಗೆ, ಮತ್ತೆ ಬಿದ್ದರೆ ರಿಪೇರಿಯಾಗುವ ತಂತ್ರಜ್ಞಾನ (ಅರಿವಿದ್ದೊ / ಅರಿವಿಲ್ಲದೆಯೊ) ಸೇರಿಬಿಟ್ಟಿದೆಯೊ? (ಸ್ಟೀವ್ ಜಾಬ್ಸನ ತರ ಗೊತ್ತಿದ್ದವರಿಗೆ, ಹಾಗಿದ್ದರೂ ಆಶ್ಚರ್ಯವಿಲ್ಲ ಅನ್ನುವುದೂ ನಿಜವೆ)
- ಕಾಕಾತಾಳೀಯವೂ ಅಲ್ಲದ, ಟೆಕ್ನಾಲಜಿಯೂ ಅಲ್ಲದ ಮತ್ತಾವುದೊ ಅದೃಷ್ಟದ ಆಟವೆ (ಮೂವತ್ಮೂರು ಕೋಟಿಯಲ್ಲಿ ಯಾರಿಗಾದರೂ ಕೇಳಿಸಿ ತಡವಾಗಾದರೂ ಸಹಾಯಾ ಮಾಡಬೇಕೆಂದನಿಸಿತೊ ಹೇಗೆ?)
.
ನಿಮಗೇನಾದರೂ ಉತ್ತರ ಗೊತ್ತಾದರೆ ನನಗೂ ತಿಳಿಸಿ...:-)
.
ಅದೇನಾದರೂ ಇರಲಿ, ನಾನಂತು ತಲೆ ಕೆಡಿಸಿಕೊಳ್ಳುವುದನ್ನು ನಿಲ್ಲಿಸಿದ್ದೇನೆ - ಈಗ ಐಪ್ಯಾಡ್ ಚೆನ್ನಾಗೆ ಕೆಲಸ ಮಾಡುತ್ತಾ ಇದೆ. ಆದರೂ ಮೂರನೆ ಬಾರಿಗೆ ಮತ್ತೆ ಬೀಳದಂತೆ ಎಚ್ಚರದಿಂದ ಕಾಯುತ್ತಾ ಇದ್ದೇನೆ. ಕಾಕಾತಾಳೀಯವಾದರೂ ಸರಿ, ಟೆಕ್ನಾಲಜಿಯಾದರೂ ಸರಿ, ಕೋಟಿಯಲ್ಲೊಬ್ಬ ದೇವರ ಕರುಣೆಯಿದ್ದರೂ ಸರಿ - ಮೂರನೆ ಬಾರಿ ಪರೀಕ್ಷಿಸಿ ನೋಡಲೂ ನಾನಂತೂ ತಯಾರಿಲ್ಲ!
.
ಅಂದ ಹಾಗೆ, ಈ ವಿವರವಾದ ಪ್ರವರ, ಕಥಾನಕವನ್ನೆಲ್ಲ ವಿವರವಾಗಿ ಬರೆದಿದ್ದು ಸಹ ಅದೇ ರಿಪೇರಿಯಾದ ಐಪ್ಯಾಡಿನಲ್ಲಿ..
.
- (ಇನ್ನೂ ಇದೆ)
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
.
(ಅಡಿ ಟಿಪ್ಪಣಿ: ಇದು ಎರಡೆ ಭಾಗಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ ಮತ್ತೊಮ್ಮೆ ಮರುಕಳಿಸಿದ ಘಟನೆಯೊಂದರ ಫಲವಾಗಿ ಮತ್ತೊಂದು ಭಾಗ ಸೇರಿಸಬೇಕಾಯ್ತು. ಈ ಮೂರನೆ ಭಾಗದಲ್ಲಿ ಏನಾಯ್ತೆಂಬ ಕುತೂಹಲವಿದ್ದರೆ ಮುಂದಿನ ಭಾಗಕ್ಕೆ ಕಾದು ನೋಡಿ)
Comments
ಉ: 'ಐ'ಗಳ ಪುರಾಣ (ಭಾಗ 02)
ತುಂಬಾ ಚೆನ್ನಾಗಿದೆ ನಿಮ್ಮ ಐಪ್ಯಾಡ್ ಪುರಾಣ, ನಾಗೇಶ್ ಅವರೆ. ಮುಂದಿನ ಕಂತಿಗಾಗಿ ಕಾಯುತ್ತಿದ್ದೇನೆ!
In reply to ಉ: 'ಐ'ಗಳ ಪುರಾಣ (ಭಾಗ 02) by Vasant Kulkarni
ಉ: 'ಐ'ಗಳ ಪುರಾಣ (ಭಾಗ 02)
ವಸಂತರೆ, ಧನ್ಯವಾದಗಳು. ಅತೀ ಶೀಘ್ರದಲ್ಲೆ ತೆರೆಗೆ ಬರಲಿದೆ, ಮೂರನೆ ಭಾಗ ಕೂಡ !
ಉ: 'ಐ'ಗಳ ಪುರಾಣ (ಭಾಗ 02)
ನಾಗೇಶರೆ,
ಈಗ ಅರ್ಥವಾಯಿತು ಐ-ಪ್ಯಾಡಿನ ಮರ್ಮ. ಅದನ್ನು ತೆಗೆದುಕೊಂಡು ಬಹುಶಃ ಯಾವುದಾದರೂ ಹಳೇ ಸಿನಿಮಾ ನೋಡಿರಬೇಕು. ಅದರಲ್ಲಿ ಒಮ್ಮೆ ಬಿದ್ದ ಹೀರೋಗೆ ಹಿಂದಿನದೆಲ್ಲಾ ಮರೆತು ಹೋಗುತ್ತದೆ ಮತ್ತೊಮ್ಮೆ ಬಿದ್ದಾಗ ಅವನಿಗೆ ನೆನಪು ಮರುಕಳಿಸುತ್ತದೆ. ಅದು ನಿಮ್ಮ ಆಪಲ್ ಐ-ಪ್ಯಾಡಿನಲ್ಲಿ ಪ್ರೋಗ್ರಾಮ್ ಆಗಿರಬೇಕು. ಹಾಗಾಗಿ ಅದು ಹಾಗೆ ವರ್ತಿಸುತ್ತದೆ :)
ಮೊಬೈಲ್ಗಳೂ ಹಾಗೆಯೇ ಅಲ್ಲವೇ? ಕೆಟ್ಟು ಹೋದಾಗ ಒಮ್ಮೆ ಆಫ್ ಮಾಡಿ ಮತ್ತೊಮ್ಮೆ ಆನ್ ಮಾಡಿದಾಗ ತನ್ನಷ್ಟಕ್ಕೇ ತಾನೇ ಎಲ್ಲಾ ಸರಿಹೋಗಿರುತ್ತದೆ. ಆದರೆ ಅವುಗಳನ್ನು ಬೀಳಿಸುವುದಿಲ್ಲವಷ್ಟೇ!
ಸ್ವಾರಸ್ಯಕರವಾದ ಬರಹಕ್ಕೆ ಧನ್ಯವಾದಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: 'ಐ'ಗಳ ಪುರಾಣ (ಭಾಗ 02) by makara
ಉ: 'ಐ'ಗಳ ಪುರಾಣ (ಭಾಗ 02)
ಶ್ರೀಧರರೆ, ನಿಮ್ಮ ಪ್ರತಿಕ್ರಿಯೆಯ ಒಂದು ತುಣುಕೆ ಮೂರನೆ ಭಾಗದ ಸರಕಾಗಿ ಸೇರಿಕೊಂಡಿದೆ. ನೀವು ಚಾಣಾಕ್ಷ್ಯಮತಿಗಳು - ಅದನ್ನು ಇಲ್ಲೆ ಹಿಡಿದು ಹೇಳಿಬಿಟ್ಟಿದ್ದೀರಾ! ನಿಮ್ಮ ಫಿಲ್ಮಿ ಸಿದ್ದಾಂತ ಐಗಳ ಜಗದಲ್ಲಿ ನಿಜವಾಗುವುದೊ , ಸುಳ್ಳಾಗುವುದೊ (ಮುಂದಿನ ಭಾಗದಲ್ಲಿ) ಕಾದು ನೋಡೋಣ :-)
ನನ್ನ ಮಗ ಪೀಎಸ್ಪಿ ವಿಷಯದಲ್ಲಿ ಇದನ್ನು ಪ್ರಯೋಗಿಸಿ ನೋಡಿದ - ಪೋನಿನ ಹಾಗೆ ಅಲ್ಲೂ ಸಫಲವಾಗಲಿಲ್ಲ ಈ ಬೀಳುಸುವ ಟ್ರಿಕ್ಕು !
ಉ: 'ಐ'ಗಳ ಪುರಾಣ (ಭಾಗ 02)
ಐ ಪ್ಯಾಡ ಪುರಾಣ ಚನ್ನಾಗಿದೆ. ಧನ್ಯವಾದಗಳು ನಾಗೇಶ ಜಿ.
In reply to ಉ: 'ಐ'ಗಳ ಪುರಾಣ (ಭಾಗ 02) by lpitnal
ಉ: 'ಐ'ಗಳ ಪುರಾಣ (ಭಾಗ 02)
ಇಟ್ನಾಳರಿಗೆ ನಮಸ್ಕಾರ, ಹಳೆ ಪುರಾಣ ಕಥಾ ಕಾಲಕ್ಷೇಪದ ಜೊತೆಗೆ ಇದೊಂದು ಆಧುನಿಕ ಕಥಾ ಕಾಲಕ್ಷೇಪ :-)
ಉ: 'ಐ'ಗಳ ಪುರಾಣ (ಭಾಗ 02)
ನಾಗೇಶ ಮೈಸೂರು ರವರಿಗೆ ವಂದನೆಗಳು
' ಐಗಳ ಪುರಾಣ ' ದ ಪಾರಾಯಣ ಚೆನ್ನಾಗಿ ಸಾಗಿದೆ, ಭಿನ್ನ ಬರವಣಿಗೆಯ ಶೈಲಿ ಮತ್ತು ನಿರೂಪಣೆ ಚೆನ್ನಾಗಿವೆ. ನೀವು ಒಬ್ಬ ಸವ್ಯಸಾಚಿ ಇದ್ದಂತೆ ನಿಮ್ಮ ಬರವಣಿಗೆಯ ಬತ್ತಳಿಕೆಯಲ್ಲಿ ಎಷ್ಟೊಂದು ಶೈಲಿಯ ಶರಗಳಿವೆ, ನಿಮ್ಮ ಸಾಹಿತ್ಯ ಭಂಡಾರ ಬಲು ದೊಡ್ಗದು ನಿಮ್ಮ ಬರವಣಿಗೆ ಯ ವೈವಿಧ್ಯತೆಗೆ ಧನ್ಯವಾದಗಳು.
In reply to ಉ: 'ಐ'ಗಳ ಪುರಾಣ (ಭಾಗ 02) by H A Patil
ಉ: 'ಐ'ಗಳ ಪುರಾಣ (ಭಾಗ 02)
ಪಾಟೀಲರೆ ನಮಸ್ಕಾರ, ನಿಮ್ಮೆಲ್ಲರ ಮಾರ್ಗದರ್ಶನ, ನಿರಂತರ ಪ್ರೋತ್ಸಾಹವೆ ಸ್ಪೂರ್ತಿಯ ಮೂಲ. ಬರಹ ವೈವಿಧ್ಯಮಯವಾಗಿದ್ದರೆ ಅದರ ಹಿರಿಮೆ ನನ್ನ ಬರಹಕ್ಕಿಂತ ಸಂಪದ ಮತ್ತು ಸಂಪದಿಗರ ಔದಾರ್ಯಕ್ಕೆ ಸಲ್ಲಬೇಕು :-)