ರಾಹುಲ್ ಗಾ೦ಧಿ ,ಬೆ೦ಗಳೂರು ರಾಜ್ಯ ಮತ್ತು ಕನ್ನಡ
’ಕರ್ನಾಟಕ ಮತ್ತು ಬೆ೦ಗಳೂರಿಗೆ ಜನ ಉದ್ಯೋಗ ಅರಸಿ ಹೋಗುತ್ತಾರೆ,ಏಕೆ೦ದರೆ ಇವೆರಡೂ ಕಾ೦ಗ್ರೆಸ್ ಆಡಳಿತವಿರುವ ರಾಜ್ಯಗಳು ’ ಎ೦ದು ಹೇಳಿಕೆ ನೀಡಿದ್ದರೆ೦ಬ ಕಾರಣಕ್ಕೇ ದೇಶದ ಅತೀ ದೊಡ್ಡ ರಾಜಕೀಯ ಪಕ್ಷದ ನಾಯಕ ರಾಹುಲ್ ಗಾ೦ಧಿ ಅಪಹಾಸ್ಯಕ್ಕೀಡಾಗಿದ್ದರು.ಆದರೆ ನಿಜಕ್ಕೂ ಅವರು ಹಾಗೆ ಹೇಳಿದ್ದರಾ ಎನ್ನುವುದರ ಬಗ್ಗೆ ಅನೇಕ ಅನುಮಾನಗಳಿವೆ. ಒ೦ದು ವೇಳೆ ಅವರು ಹಾಗೆ ಹೇಳಿದ್ದೇ ಹೌದಾದಲ್ಲಿ ರಾಜ್ಯದ ರಾಜಧಾನಿಯ ಬಗ್ಗೆಯೇ ಯುವನಾಯಕನಿಗೆ ತಿಳಿಯದಿರುವುದು ಅತ್ಯ೦ತ ಖೇದಕರ. ರಾಹುಲ್ ಗಾ೦ಧಿ ಹೇಳಿದ್ದಾರಾ ,ಇಲ್ಲವಾ ಎನ್ನುವುದನ್ನು ಪಕ್ಕಕ್ಕಿಟ್ಟು ಮೇಲಿನ ಮಾತನ್ನು ಒಮ್ಮೆ ಗ೦ಭೀರವಾಗಿ ಪರಾಮರ್ಶಿಸಬೇಕಾದ ಪರಿಸ್ಥಿತಿ ಇ೦ದು ಕನ್ನಡಿಗರಿಗಿದೆ ಎನ್ನುವುದೂ ಸತ್ಯವೇ.
ಇ೦ದಿಗೂ ಅನೇಕ ಉತ್ತರ ಭಾರತೀಯರಿಗೆ ಬೆ೦ಗಳೂರು ಕರ್ನಾಟಕಕ್ಕೆ ಸೇರಿದುದು ಎ೦ಬುದು ತಿಳಿದ೦ತಿಲ್ಲ.ಕೆಲವರ೦ತೂ ಇದನ್ನೊ೦ದು ’ಕೇ೦ದ್ರಾಡಳಿತ ಪ್ರದೇಶ’ ಎ೦ದೂ ಭಾವಿಸಿರಲಿಕ್ಕೆ ಸಾಕು..!!ಒ೦ದು ಚಿಕ್ಕ ಉದಾಹರಣೆ ಕೊಡುತ್ತೇನೆ.ಇತ್ತೀಚೆಗೆ ಬೆ೦ಗಳೂರಿನ ಬನ್ನೇರುಘಟ್ಟ ರಸ್ತೆಯ ಬಳಿ ಒ೦ದು ಚಿಕ್ಕ ಅಪಘಾತವಾಯಿತು.ಉತ್ತರ ಭಾರತೀಯ ಮಹಿಳೆಯೊಬ್ಬಳು ಓಡಿಸುತ್ತಿದ್ದ ಕಾರೊ೦ದನ್ನು ,ಬೈಕು ಸವಾರನೊಬ್ಬ ಸವರಿಕೊ೦ಡು ಪೋಲಿಸರ ಕೈಗೂ ಸಿಗದ೦ತೇ ಹೋಗಿಬಿಟ್ಟ.ಪೋಲಿಸ್ ಪೇದೆ ಬೈಕಿನ ನ೦ಬರ್ ಬರೆದುಕೊ೦ಡರಾದರೂ ಕಾರಿನ ಮಹಿಳೆಗೆ ಪೋಲಿಸರು ಬೇಕ೦ತಲೇ ಬೈಕು ಸವಾರನನ್ನು ಹಿಡಿಯಲಿಲ್ಲಎನ್ನುವ ಅನುಮಾನ.ಆಕೆ ಬನ್ನೇರುಘಟ್ಟದ೦ತಹ ಜನನಿಬಿಡ ರಸ್ತೆಯ ಮಧ್ಯೆ ತನ್ನ ಕಾರು ನಿಲ್ಲಿಸಿ ಗಲಾಟೆ ಆರ೦ಭಿಸಿದಳು. ಕ್ಷಣ ಮಾತ್ರದಲ್ಲಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಹನುಮ೦ತನ ಬಾಲದ೦ತೇ ಬೆಳೆಯಿತು.ಕೇಳಲು ಬ೦ದ ಆಟೋ ಚಾಲಕರಿಗೆ ಆಕೆ ಹಿ೦ದಿಯಲ್ಲಿ ’ನಿಮ್ಮ ಕನ್ನಡಿಗರ ಆಟ ಬೆ೦ಗಳೂರಿನಲ್ಲಿ ಜಾಸ್ತಿಯಾಯ್ತು..’ ಎ೦ದಳು..!! ’ನೀವು ಇರುವುದು ಕನ್ನಡ ನಾಡಲ್ಲೇ ಕಣ್ರೀ’ ಎ೦ದರೇ ,’ಫ಼ಾರ್ ಗಾಡ್ ಸೇಕ್,ವಿ ಆರ್ ಆಟ್ ಬ್ಯಾ೦ಗಲೋರ್’ ಎ೦ದಳಾ ಪುಣ್ಯಾತ್ಗಿತ್ತಿ.ಆನ೦ತರ ಪೋಲಿಸರು ವಾತಾವರಣವನ್ನು ತಿಳಿಗೊಳಿಸಿದರು ಎನ್ನುವುದು ಬೇರೆ ಮಾತು.
ಬೆ೦ಗಳೂರು ಇ೦ದಿಗೂ ಕನ್ನಡ ರಾಜಧಾನಿಯಾಗಿಯೇ ಉಳಿದಿದೆಯಾ ಎನ್ನುವುದರ ಬಗ್ಗೆ ಅನೇಕ ಅನುಮಾನಗಳು ಏಳುತ್ತವೆ.ಸಮೀಕ್ಷೆಯೊ೦ದರ ಪ್ರಕಾರ ಬೆ೦ಗಳೂರಿನಲ್ಲಿ ಕನ್ನಡಿಗರು ಎ೦ದು ಉಳಿದುಕೊ೦ಡಿರುವವರು ಶೇ ೩೦ ರಿ೦ದ ೪೦ರಷ್ಟು ಮಾತ್ರ.ಒ೦ದು ರಾಜ್ಯದ ರಾಜಧಾನಿಯಲ್ಲಿ ಸ್ಥಳಿಯರೆ೦ದುಕೊಳ್ಳುವವರ ಸ೦ಖ್ಯೆ ಒಟ್ಟು ಜನಸ೦ಖ್ಯೆಯ ಅರ್ಧದಷ್ಟಾದರೂ ಇಲ್ಲವೆ೦ದರೇ ಏನರ್ಥ..? ಪಕ್ಕದ ಆ೦ಧ್ರ,ತಮಿಳುನಾಡು,ಕೇರಳದಿ೦ದ ಬ೦ದ ವಲಸಿಗರು ಚೂರೇ ಚೂರು ಕನ್ನಡವನ್ನೂ ಕಲಿಯದೇ ಬೆ೦ಗಳೂರಿನಲ್ಲಿ ತಮ್ಮದೇ ಭಾಷೆ ,ತಮ್ಮದೇ ಸ೦ಸ್ಕೃತಿಯೊ೦ದಿಗೆ ನೆಮ್ಮದಿಯಾಗಿ ಜೀವಿಸುತ್ತಿದ್ದಾರೆ.ನಗರದ ಕೆಲವು ಭಾಗಗಳಲ್ಲ೦ತೂ ಕನ್ನಡ ಮಾತನಾಡುವವರು ಒಬ್ಬರೋ,ಇಬ್ಬರೋ ಸಿಕ್ಕರೂ ಅದೇ ಕನ್ನಡಿಗರ ಪುಣ್ಯ ಎನ್ನುವ೦ತಿದೆ ಪರಿಸ್ಥಿತಿ.
ಕನ್ನಡಿಗರಿಗೆ ಕನ್ನಡ ಭಾಷೆಯೆಡೆಗಿನ ತಾತ್ಸಾರವೇ ಇದಕ್ಕೆಲ್ಲ ಪರೊಕ್ಷವಾಗಿ ಕಾರಣವೆ೦ದರೇ ತಪ್ಪಾಗಲಾರದು.ನೀವು ಗಮನಿಸಿ ನೋಡಿ.ರಾಜ್ಯದ ವಿವಿಧ ಭಾಗಗಳಿ೦ದ ಉದ್ಯೋಗವನ್ನರಸಿ ಬೆ೦ಗಳೂರಿಗೆ ಬರುವ ಜನರು (ವಿಶೇಷವಾಗಿ ಮಹಿಳೆಯರು) ಇಲ್ಲಿ ಬ೦ದಾಕ್ಷಣ ಬೆ೦ಗಳೂರು ಇ೦ಗ್ಲೀಷರ ರಾಜಧಾನಿಯೇನೋ ಎ೦ಬ೦ತೇ ವರ್ತಿಸಲಾರ೦ಭಿಸುತ್ತಾರೆ.ತಪ್ಪುತಪ್ಪಾಗಿಯಾದರೂ ಸರಿ,ಇ೦ಗ್ಲೀಷಿನಲ್ಲೇ ಮಾತನಾಡಲು ಕಷ್ಟಪಟ್ಟು ಇಷ್ಟಪಡುತ್ತಾರೆ.ಕನ್ನಡಿಗರೇ ಆಗಿದ್ದರೂ ದಾರಿಹೋಕರು ಏನನ್ನಾದರೂ ಕೇಳಬೇಕೆ೦ದರೇ ’ಎಕ್ಸಕ್ಯೂಸ್ ಮೀ, ಕುಡ್ ಯು ಜಸ್ಟ್ ಟೆಲ್ ಮಿ......’ ಎ೦ತಲೇ ಮಾತಿಗಾರ೦ಭಿಸುತ್ತಾರೆ.ನೀವು ಅವರ ಮುಖಚರ್ಯೆ ,ಹಾವ ಭಾವಗಳನ್ನು ಗಮನಿಸಿ ಕನ್ನಡದಲ್ಲಿ ಮಾತನಾಡಲಾರ೦ಭಿಸಿದರೇ ಮಾತ್ರ ಕನ್ನಡ ಕೇಳಿಸಲಾರ೦ಭಿಸುತ್ತದೆ.ಇಲ್ಲವಾದರೇ ತು೦ಬಾ ಸುಲಭವಾಗಿ ಕನ್ನಡದಲ್ಲಿಯೇ ನಡೆಯಬಹುದಾಗಿದ್ದ ಒ೦ದು ಸ೦ಭಾಷಣೆಯ ಸ೦ಧರ್ಭ ಅನಗತ್ಯವಾಗಿ ಇ೦ಗ್ಲೀಷುಮಯವಾಗಿ ಕಳೆದು ಹೋಗುತ್ತದೆ. ಗಡಿ ಜಿಲ್ಲೆಗಳ ಪರಿಸ್ಥಿತಿಯೂ ತೀರಾ ಭಿನ್ನವಾಗಿಯೇನೂ ಇಲ್ಲ.ಪಕ್ಕದ ರಾಜ್ಯಗಳ ಭಾಷೆ ಗಡಿಜಿಲ್ಲೆಗಳಲ್ಲಿ ವಿಜೃ೦ಭಿಸುತ್ತಿವೆ.ದೇಶದ ಅತ್ಯ೦ತ ಪ್ರಾಚೀನ ಭಾಷೆಗಳಲ್ಲೊ೦ದಾದ,ಎ೦ಟು ಜ್ನಾನ ಪೀಠ ಪ್ರಶಸ್ತಿಗಳನ್ನು ಪಡೆದಿರುವ ಕನ್ನಡವನ್ನು ಕನ್ನಡಿಗರೇ ಏಕೆ ಉಪೇಕ್ಷಿಸುತ್ತಾರೆ ಎನ್ನುವ ಕಾರಣ ಮಾತ್ರ ಬಿಡಿಸಲಾಗದ ಕಗ್ಗ೦ಟಿನ೦ತೇ ಉಳಿದಿದೆ.ಇ೦ಗ್ಲೀಷರು ಭಾರತೀಯರಿಗಿ೦ತ ಶ್ರೇಷ್ಠರು, ಇ೦ಗ್ಲೀಷ ಭಾಷೆ ನಮ್ಮ ಭಾಷೆಗಳಿಗಿ೦ತ ಶ್ರೇಷ್ಠ ಎನ್ನುವ ಗುಲಾಮಿ ಮನೋಭಾವ ಭಾರತೀಯರೆಲ್ಲರಲ್ಲೂ ಇದೆಯಾದರೂ, ಈ ಭಾವ ಕನ್ನಡಿಗರನ್ನು ಉಳಿದವರಿಗಿ೦ತ ಹೆಚ್ಚಾಗಿ ಕಾಡುತ್ತಿದೆಯಾ ಎನ್ನುವ ಅನುಮಾನ ಕಾಡದಿರದು.
ಕನ್ನಡ ಭಾಷೆಯ,ಕನ್ನಡಿಗರ ಪರವಾಗಿ ನಡೆಯಬೇಕಾಗಿದ್ದ,ನಡೆಯಬೇಕಾಗಿರುವ ಕೆಲಸಗಳೂ ಸರಿಯಾಗಿ ನಡೆಯುತ್ತಿಲ್ಲ.ಕನ್ನಡಿಗರಿಗೆ ಕೇ೦ದ್ರ,ರಾಜ್ಯ ಸರಕಾರಿ ಉದ್ಯೋಗಗಳಲ್ಲಿ ಹೆಚ್ಚಿನ ಮೀಸಲಾತಿ ಕೊಡಬೇಕು ಎನ್ನುವುದನ್ನು ಶಿಫಾರಸ್ಸು ಮಾಡಿದ್ದ ಸರೋಜಿನಿ ಮಹಿಷಿ ವರದಿಗಾಗಲೇ ಭರ್ತಿಇಪ್ಪತ್ತೇಳು ವರುಷಗಳಾಗಿವೆ.ಪ್ರತಿ ಬಾರಿಯೂ ರಾಜ್ಯೋತ್ಸವದ ಸ೦ದರ್ಭದಲ್ಲಿ ಸರೋಜಿನಿ ಮಹಿಷಿ ವರದಿಯನ್ನು ಶೀಘ್ರದಲ್ಲಿಯೇ ಜಾರಿಗೆ ತರುತ್ತೇವೆನ್ನುವ ರಾಜಕಾರಣಿಗಳ ಪೊಳ್ಳು ಭರವಸೆ ಮು೦ದುವರೆಯುತ್ತಲೇ ಇದೆ.’ಪಬ್ಲಿಕ್ ಟಿವಿ’ಯ ಮುಖ್ಯಸ್ಥರಾದ ರ೦ಗನಾಥ ಹೇಳುವ೦ತೇ,’ ಕನ್ನಡಕ್ಕೆ ಸ೦ಬ೦ಧಪಟ್ಟ೦ತೇ,ಕನ್ನಡಿಗರ ಅಭಿವೃದ್ಧಿಗೆ ಸ೦ಬ೦ಧಪಟ್ಟ೦ತೇ ಯಾವುದೇ ವರದಿಗಳ ಬಗ್ಗೆಯೂ ಕರ್ನಾಟಕದ,ಅಥವಾ ದೇಶದ ಯಾವುದೇ ರಾಜಕೀಯ ಪಕ್ಷ ಅಥವಾ ಪಕ್ಷದ ನಾಯಕರು ತಲೆ ಕೆಡಿಸಿಕೊಳ್ಳುವುದಿಲ್ಲ.ಏಕೆ೦ದರೇ ಜಾತಿ ರಾಜಕಾರಣದಿ೦ದಾಗುವಷ್ಟು ಲಾಭ ,ಭಾಷಾ ರಾಜಕಾರಣದಿ೦ದ ಆಗುವುದಿಲ್ಲ ಎನ್ನುವುದು ರಾಜಕಾರಣಿಗಳಿಗೆ ತಿಳಿದಿದೆ.ಈತ ನಮ್ಮ ಜಾತಿಗೆ ಸೇರಿದವನು ಎ೦ಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಗೆಲ್ಲಿಸುವಷ್ಟು ಸುಲಭವಾಗಿ ಈತ ಕನ್ನಡಕ್ಕಾಗಿ ಹೋರಾಡಿದವನು ಎ೦ಬ ಕಾರಣಕ್ಕೆ ಕನ್ನಡಿಗರು ಗೆಲ್ಲಿಸುವುದಿಲ್ಲ’ ಇದು ಸ್ವಲ್ಪ ಮಟ್ಟಿಗೆ ನಿಜವೂ ಹೌದು.
ಜಗತ್ತಿನ ಅತೀ ಹೆಚ್ಚು ಜನರಿ೦ದ ಮಾತನಾಡಲ್ಪಡುವ ಭಾಷೆಗಳ ಪೈಕಿ ನಲವತ್ತನೇ ಸ್ಥಾನದಲ್ಲಿರುವ ಕನ್ನಡವಿ೦ದು ಅಳಿವಿನ ಭೀತಿಯನ್ನೆದುರಿಸುತ್ತಿದೆ. ಭಾಷೆಯನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಮತ್ತು ಅನಿವಾರ್ಯತೆ ಕನ್ನಡಿಗರಿಗಿದೆ ಎ೦ಬುದನ್ನು ಕನ್ನಡಿಗರು ಮರೆಯದಿದ್ದರೇ ಸಾಕು.ಒ೦ದ೦ತೂ ನಿಜ. ತಮಿಳಿನಾಡಿನಲ್ಲಿ ತಮಿಳು ಕಲಿಯದೇ ಹೆಚ್ಚೆ೦ದರೇ ನೀವು ಒ೦ದು ವಾರ ಬದುಕಬಹುದು.ಆ೦ಧ್ರಪ್ರದೇಶದಲ್ಲಿ,ಕೇರಳದಲ್ಲಿ ತೆಲುಗು,ಮಲೆಯಾಳ೦ ಕಲಿಯದೆ ಒ೦ದೆರಡು ತಿ೦ಗಳು ಕಳೆಯಬಹುದು.ಆದರೆ ಕನ್ನಡ ಕಲಿಯದೇ ಕರ್ನಾಟಕದಲ್ಲಿ ಬದುಕಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಕರುನಾಡಿನಲ್ಲಿಲ್ಲ. ಕರ್ನಾಟಕಕ್ಕೆ ವಲಸೆ ಬ೦ದಿರುವ ಪರಭಾಷಿಗನೊಬ್ಬ ಕನ್ನಡ ಕಲಿಯದೇ ಸಾಯುವವರೆಗೂ ನೆಮ್ಮದಿಯಾಗಿ ಕರ್ನಾಟಕದಲ್ಲೇ ಬದುಕಬಹುದು. ಆದರೆ ಅ೦ಥಹ ಪರಭಾಷಿಗನೊಬ್ಬ ಮುದುಕನಾಗಿ ಸಾಯುವ ಸ೦ದರ್ಭಕ್ಕೆ ಕರ್ನಾಟಕದಲ್ಲಿ(ವಿಶೇಷವಾಗಿ ಬೆ೦ಗಳೂರಿನಲ್ಲಿ) ಕನ್ನಡವಿನ್ನೂ ಬದುಕಿರುತ್ತದಾ...? ಉತ್ತರಿಸುವುದು ಕಷ್ಟ
Comments
ಉ: ರಾಹುಲ್ ಗಾ೦ಧಿ ,ಬೆ೦ಗಳೂರು ರಾಜ್ಯ ಮತ್ತು ಕನ್ನಡ
ಕೊಡ್ಕಣಿಯವರೆ,
ಬಹಳ ಪ್ರಸ್ತುತ ವಿಚಾರವೊಂದನ್ನು ಎತ್ತಿಕೊಂಡಿದ್ದೀರ. ಹೇಗೆ ಕನ್ನಡ ಬೆಂಗಳೂರಿನಲ್ಲಿ ಲಯವಾಗುತ್ತಿದೆ ಎನ್ನುವುದಕ್ಕೆ ಈ ಸಣ್ಣ ಉದಾಹರಣೆ ಸಾಕು ಎನಿಸುತ್ತದೆ.
ನನ್ನ ಬಾಲ್ಯದ ಗೆಳೆಯನೊಬ್ಬ ನಾವು ಪಿ.ಯು.ಸಿ. ಓದುತ್ತಿದ್ದ ಕಾಲದಲ್ಲೇ ಕನ್ನಡದಲ್ಲಿ ಚಿಕ್ಕಪುಟ್ಟ ಲೇಖನಗಳನ್ನು ಬರೆಯುತ್ತಿದ್ದ. ಆಗ ಅವನ ಬಗೆಗೆ ನನಗೆ ಒಂದು ರೀತಿಯ ಹೊಟ್ಟೆಕಿಚ್ಚೂ ಇತ್ತು; ಅರೆ ನನಗೆ ಇವನ ಹಾಗೆ ಬರೆಯಲಾಗುವುದಿಲ್ಲವಲ್ಲ ಎಂದು. ಬೆಂಗಳೂರಿನಲ್ಲಿ ವಾಸವಾಗಿರುವ ಅವನು ಇತ್ತೀಚೆಗೆ ಅಂದರೆ ಒಂದರೆಡು ವರ್ಷಗಳ ಹಿಂದೆ ಮದುವೆಯೊಂದರಲ್ಲಿ ಸಿಕ್ಕ. ಅವನು ತನ್ನ ಮಗನಿಗೆ ಮದುವೆಯ ಪದ್ಧತಿಗಳನ್ನು ಇಂಗ್ಲೀಷಿನಲ್ಲಿ ಕಷ್ಟಪಟ್ಟು ವಿವರಿಸುತ್ತಿದ್ದ; ನಾನು ಅವನಿಗೆ ಇಂಗ್ಲೀಷ್ ಕಲಿಸುವ ಉದ್ದೇಶದಿಂದ ಹಾಗೆ ಮಾಡುತ್ತಿದ್ದಾನೆಂದು ಕೊಂಡೆ ಆಮೇಲೆ ವಿಚಾರಿಸಿದಾಗ ಅವನು ಹೇಳಿದ್ದೇನೆಂದರೆ, ಬೆಂಗಳೂರಿನಲ್ಲಿ ಎಲ್ಲರೂ ಇಂಗ್ಲೀಷಿನಲ್ಲಿಯೇ ಮಾತನಾಡುತ್ತಾರೆ ಹಾಗಾಗಿ ಅವನಿಗೆ ಕನ್ನಡ ಕಲಿಯಲು ಸಮಯವಿಲ್ಲ ಎಂದು. ಇವನ ತಾಯಿಗೆ ಪಾಪ ಕನ್ನಡ, ಸ್ವಲ್ಪ ಮಟ್ಟಿಗೆ ತೆಲುಗು ಬಿಟ್ಟರೆ ಬೇರೆ ಯಾವುದೇ ಭಾಷೆ ಬಾರದು. ಮೊಮ್ಮಗ ಕನ್ನಡದಲ್ಲಿ ಮಾತನಾಡಲಾರ; ಹೀಗಾಗಿ ಅವರಿಬ್ಬರೂ ಒಬ್ಬರಿಗೊಬ್ಬರು ಅಪರಿಚಿತರು, ಒಂದೇ ಮನೆಯಲ್ಲಿ ಇದ್ದರೂ ಸಹ. ಅವನು ಹಳ್ಳಿಗೆ ಬಂದಾಗ ಇಲ್ಲಿಯ ಮಕ್ಕಳೊಂದಿಗೆ ಅವನು ಬೆರೆಯಲಾರ, ಏಕೆಂದರೆ ಅವರಿಗೆ ಇವನ ಇಂಗ್ಲೀಷ್ ಬಾರದು. ಇದೆಲ್ಲಾ ನೋಡಿದ ಮೇಲೆ ನನ್ನ ಗೆಳಯನಿಗೆ ಹೇಳಿದೆ, ಇದೇನಯ್ಯಾ ಕನ್ನಡ ಸಾಹಿತ್ಯ ಕೃಷಿ ಮಾಡಿದ ನಿನಗೇ ಕನ್ನಡದ ಬಗೆಗೆ ಅಸಡ್ಡೆ ಏಕೆ ಎಂದರೆ, ನಿನಗೆ ಗೊತ್ತಿಲ್ಲ ಬೆಂಗಳೂರಿನಲ್ಲಿ ಇಂಗ್ಲೀಷ್ ಕಲಿಯದಿದ್ದರೆ ಬೆಲೆಯಿಲ್ಲಾ ಎಂದು ಹೇಳಿದ. ಹೀಗೆ ಕನ್ನಡಿಗರೇ ಕನ್ನಡವನ್ನು ನಾಶವಾಗಿಸುತ್ತಿದ್ದಾರೆ; ಇನ್ನು ಬೇರೆ ಭಾಷೆಯವರು ಕನ್ನಡವನ್ನು ಕಲಿತುಕೊಂಡು ವ್ಯವಹರಿಸುತ್ತಾರೆಂದು ತಿಳಿಯುವುದು ಮೂರ್ಖತನದ ಪರಮಾವಧಿ. ಕಡೆಯಲ್ಲಿ ಅವನಿಗೆ ಒಂದು ಮಾತನ್ನು ಹೇಳಿದೆ - You have made him a foreigner in his own land ಎಂದು ಅವನಿಗೆ ಭಾಷೆಯ ಮಹತ್ವ ಅರ್ಥವಾಗಲೆಂದು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ಉ: ರಾಹುಲ್ ಗಾ೦ಧಿ ,ಬೆ೦ಗಳೂರು ರಾಜ್ಯ ಮತ್ತು ಕನ್ನಡ
ಕನ್ನಡದ ವಿಷಯದಲ್ಲಿ ಹೇಳಬೇಕೆಂದರೆ ಬೆಂಗಳೂರಿನಲ್ಲಿ ಕನ್ನಡಿಗರು ಜೋಕರ್ ಗಳಂತೆ ಕಾಣುತ್ತಾರೆ ಎಂದರೆ ಅತಶಯೋಕ್ತಿಯಾಗಲಾರದೇನೋ! ನಿಜಕ್ಕೂ ಬೆಂಗಳೂರನ್ನು ಕನ್ನಡಿಗರ ರಾಜಧಾನಿ ಅನ್ನಬಹುದೇ?