೧೬೮. ಲಲಿತಾ ಸಹಸ್ರನಾಮ ೭೫೧ರಿಂದ ೭೫೬ನೇ ನಾಮಗಳ ವಿವರಣೆ

೧೬೮. ಲಲಿತಾ ಸಹಸ್ರನಾಮ ೭೫೧ರಿಂದ ೭೫೬ನೇ ನಾಮಗಳ ವಿವರಣೆ

                                                                                         ಲಲಿತಾ ಸಹಸ್ರನಾಮ ೭೫೧-೭೫೬

Mahā-kālī महा-काली (751)

೭೫೧. ಮಹಾ-ಕಾಲೀ

            ದೇವಿಯನ್ನು ಮಹತೀ ಎಂದು ನಾಮ ೭೭೪ರಲ್ಲಿ ಹೇಳಲಾಗಿದೆ. ಮಹತ್ ಎನ್ನುವುದನ್ನು ಅತ್ಯುನ್ನತವಾದುದನ್ನು ಸೂಚಿಸಲು ಉಪಯೋಗಿಸುತ್ತಾರೆ. ಇದು ಮಹಾ ಎನ್ನುವ ಶಬ್ದ ಮೂಲದಿಂದ ನಿಷ್ಪತ್ತಿಯಾಗಿದೆ. ಎರಡೂ ಶಬ್ದಗಳು ಒಂದೇ ಅರ್ಥವನ್ನು ಕೊಡತ್ತವೆ. ಮಹತೀ ಎನ್ನುವುದನ್ನು ಸ್ವತಂತ್ರ ಶಬ್ದವಾಗಿ ಉಪಯೋಗಿಸುತ್ತಾರೆ. ಆದರೆ ಮಹಾ ಎನ್ನುವುದನ್ನು ಇನ್ನೊಂದು ಶಬ್ದದೊಂದಿಗೆ ಉಪಯೋಗಿಸಬೇಕು; ಇದು ಈ ನಾಮದ ಮೂಲವಾಗಿದೆ.

            ಮಹತ್ ಎಂದರೆ ಬುದ್ಧಿ ಎನ್ನುವ ಅರ್ಥವೂ ಇದೆ. ಇದು ಸಾಂಖ್ಯ ಯೋಗದಲ್ಲಿ ಮೂರನೇ ತತ್ವವಾಗಿದೆ. ಮೊದಲೆರಡು ಪುರುಷ ಮತ್ತು ಪ್ರಕೃತಿಯಾಗಿವೆ. ಕಾಳೀ (ಕಾಲೀ) ಎನ್ನುವ ಶಬ್ದಕ್ಕೆ ಹಲವಾರು ಅರ್ಥಗಳಿವೆ - ಕಪ್ಪು, ಶಿವನ ಪತ್ನಿ, ಕಪ್ಪು ಮೋಡಗಳು, ಕಪ್ಪು ಮೈಬಣ್ಣವುಳ್ಳ ಮಹಿಳೆ, ಮಹರ್ಷಿ ವ್ಯಾಸರ ತಾಯಿ. ಸರಸ್ವತೀ ದೇವಿ, ದುರ್ಗೆಯ ಒಂದು ರೂಪ, ಮೊದಲಾದವು. ಮಹಾ ಕಾಲ ಎಂದರೆ ಶಿವ ಮತ್ತು ಮಹಾಕಾಳಿಯು ಅವನ ಶಕ್ತಿಯಾಗಿದ್ದಾಳೆ. ಲಿಂಗ ಪುರಾಣ (ಅಧ್ಯಾಯ ೧೦೬) ಕಾಳಿಯ ಹುಟ್ಟಿನ ಕುರಿತು ಹೇಳುತ್ತದೆ. "ದೇವತೆಗಳ ಒಡೆಯನ ದೇಹದ ಒಳಸೇರಿದ ಪಾರ್ವತಿಯು ಶಿವನ ಕುತ್ತಿಗೆಯಲ್ಲಿ ತನ್ನ ಸ್ವಂತ ಶರೀರವನ್ನು ವಿಷದಿಂದ ತಯಾರಿಸಿದಳು ......... ಶಿವನು ತನ್ನ ಮೂರನೆಯ ಕಣ್ಣಿನಿಂದ ನೀಲಿ ಕುತ್ತಿಗೆಯುಳ್ಳ ಮತ್ತು ಗುಂಗುರು ಕೂದಲುಗಳುಳ್ಳ ಕಾಳಿಯನ್ನು ಸೃಷ್ಟಿಸಿದನು .......ಬೆಂಕಿಯನ್ನು ಹೋಲುವ ಮತ್ತು ವಿಷಪೂರಿತವಾದ ಕಪ್ಪನೆಯ ಕುತ್ತಿಗೆಯನ್ನು ಹೊಂದಿದ ಕಾಳಿಯನ್ನು ನೋಡುತ್ತಲೇ..........."

          ಈ ನಾಮವು ಲಲಿತಾಂಬಿಕೆಯು ಮಹಾಕಾಳಿಯ ರೂಪದಲ್ಲಿರುವ ಮರಣದ ಅಧಿದೇವತೆ ಎಂದು ಹೇಳುತ್ತದೆ. ಮರಣದ ಅಧಿದೇವತೆಯಾದ ಯಮನೂ ಸಹ ಕಪ್ಪನೆಯ ಬಣ್ಣವನ್ನು ಹೊಂದಿರುತ್ತಾನೆ. ಲಲಿತಾಂಬಿಕೆಯು ದುಷ್ಕೃತ್ಯಗಳನ್ನು ಎಸಗುವವರನ್ನು ವಿನಾಶ ಮಾಡುವಾಗ ಕೂಡಾ ಕಪ್ಪು ಮೈಬಣ್ಣವನ್ನು ತಳೆಯುತ್ತಾಳೆ. ಇದರ ಕುರಿತಾದ ಇನ್ನಷ್ಟು ವಿವರಗಳನ್ನು ೭೫೬ನೇ ನಾಮದಲ್ಲಿ ನೋಡೋಣ.

ಕಾಳಿಯ ಕುರಿತು ಇನ್ನಷ್ಟು ವಿವರಗಳು (ಶ್ರೀ ಕಂಚಿ ಮಹಾಸ್ವಾಮಿಗಳು ತಮ್ಮ ವಾಯ್ಸ್ ಆಫ್ ಗಾಡ್ - ಸಂಪುಟ ೧ರಲ್ಲಿ ಹೇಳಿದಂತೆ)

            "ಶ್ವೇತ ವರ್ಣದ ಶಿವನು ಕಪ್ಪನೆಯ ಬಣ್ಣವುಳ್ಳ ಪಾರ್ವತಿಯನ್ನು ಶಕ್ತಿಯಾಗಿ ಪಡೆದ ನಂತರ ಸಂಹಾರ ಕಾರ್ಯವನ್ನು ಕೈಗೊಳ್ಳುತ್ತಾನೆ. ಯಾವಾಗ ನಾವು ಸ್ವಯಂ ಅಂಬಾಳಳನ್ನೇ (ಶಕ್ತಿಯ ತಮಿಳು ರೂಪಾಂತರ) ಸಂಹಾರಮೂರ್ತಿಯಾಗಿ ಉಲ್ಲೇಖಿಸುತ್ತೇವೆಯೋ ಆಗ ಆಕೆಯನ್ನು ಕಾಳೀ ಎಂದು ಕರೆಯುತ್ತೇವೆ. ಕಾಳೀ ಎನ್ನುವ ಶಬ್ದವೇ ಕಪ್ಪಾಗಿರುವ ಮಹಿಳೆ ಎನ್ನುವ ಅರ್ಥವನ್ನು ಹೊಂದಿದೆ ............

            ನಾವು ಬಹಳಷ್ಟು ಕೆಲಸವನ್ನು ಮಾಡಿದಾಗ ಆಯಾಸಗೊಂಡು ನಿದ್ರೆ ಮಾಡುತ್ತೇವೆ. ಇದು ತಮಸ್ಸಿನಿಂದ ಉಂಟಾಗುತ್ತದೆ. ಅಲ್ಲಿ ಕೇವಲ ಕಪ್ಪು ಬಣ್ಣದ ಕಾರ್ಗತ್ತಲು ಇರುತ್ತದೆ. ಆದರೆ, ಈ ನಿದ್ರೆಯಲ್ಲಿ ಮನುಷ್ಯನು ಸ್ವಲ್ಪವಾದರೂ ಶಾಂತಿಯನ್ನು ಪಡೆಯುತ್ತಾನೆ. ಯಾರು ದಿನವೆಲ್ಲಾ ನಿಂತಲ್ಲಿ ನಿಲ್ಲದೇ ಕಷ್ಟಗಳಿಗೆ ಒಳಪಡುತ್ತಾರೋ ಅವರಿಗೆ ಸಮಾಧಾನವನ್ನುಂಟು ಮಾಡಲು ಪರಾಶಕ್ತಿಯು ಅವರಿಗೆ ನಿದ್ರೆಯನ್ನು ಪ್ರತಿದಿನವೂ ಕೊಟ್ಟು ಅವರಿಗೆ ಸ್ವಲ್ಪ ಶಾಂತಿಯನ್ನು ಕೊಡುತ್ತಾಳೆ. ಆದ್ದರಿಂದ ತಮಸ್ಸಿನಲ್ಲಿಯೇ ಸಾಕಷ್ಟು ಕೃಪೆಯಿರುವಂತೆ ಕಾಣುತ್ತದೆ.

           ಸಂಹಾರವೆನ್ನುವುದು ಒಂದು ದೀರ್ಘವಾದ ನಿದ್ರೆ. ಯಾವ ವಿಧವಾಗಿ ನಾವು ನಿದ್ರೆಯಲ್ಲಿ ದುಃಖಗಳಿಂದ ವಿಚಲಿತವಾಗದೆ ಶಾಂತಿಯ ಸ್ಥಿತಿಯಲ್ಲಿ ಇರುತ್ತೇವೆಯೋ ಅದೇ ವಿಧವಾಗಿ ಜೀವವು ಸಂಹಾರವನ್ನು ಹೊಂದಿ ಶಾಂತಿಯಲ್ಲಿ ಮುಳುಗಿ ಅದು ಚಟುವಟಿಕೆಗಳಿಂದ ಉಂಟಾಗುವ ವಿವಿಧ ರೀತಿಯ ಅನುಭವಗಳಿಂದ ಮುಕ್ತವಾಗಿರುತ್ತದೆ; ಇನ್ನೊಂದು ಜನ್ಮವನ್ನು ತೆಳೆಯುವವರೆಗೆ. ನಮಗೆ ಕರ್ಮ ಬಂಧನದಿಂದ ತಾತ್ಕಾಲಿಕ ವಿರಾಮವನ್ನು ಕೊಡಲು (ಉಪಶಮನವನ್ನು ಕೊಡಲು) ಭಗವಾನ್ ಶಿವನು ಸಂಹಾರ ಕ್ರಿಯೆಯನ್ನು ಕೈಗೊಳ್ಳುತ್ತಾನೆ. ಯಾರು ’ನಾನು ಕರ್ಮ ಮಾಡುತ್ತಿದ್ದೇನೆ’ ಎನ್ನುವ ಅಹಂಕಾರವಿಲ್ಲದವರಾಗಿರುತ್ತಾರೆಯೋ ಕೇವಲ ಅಂತಹ ಜ್ಞಾನಿಗಳು ಮಾತ್ರವೇ ಶಾಶ್ವತವಾಗಿ ಜನನ-ಮರಣಗಳ ಚಕ್ರದಿಂದ ಬಿಡುಗಡೆ ಹೊಂದಬಹುದು. ಆದರೆ ಒಬ್ಬ ಪಾಪಿಯೂ ಸಹ ತಾತ್ಕಾಲಿಕವಾಗಿಯಾದರೂ ಸ್ವಲ್ಪ ಕಾಲ ಕರ್ಮಕೋಟಲೆಗಳಿಂದ ಮುಕ್ತವಾಗಿರಲೆಂದು ಪರಾಶಕ್ತಿಯು ಅತ್ಯಂತ ಕರುಣೆಯಿಂದ ಸಂಹಾರವನ್ನು ವಿನ್ಯಾಸಗೊಳಿಸಿದ್ದಾಳೆ...........

          ಸಂಹಾರವನ್ನು ಕೈಗೊಳ್ಳುವ ರುದ್ರನ ಶಕ್ತಿಯಾಗಿರುವ ಪಾರ್ವತಿಯ ಬಣ್ಣವು ಕಪ್ಪಾಗಿರುತ್ತದೆ. ಪ್ರಾಪಂಚಿಕ ಬಂಧನಗಳಿಂದ ಮುಕ್ತನಾದಾಗ ಮಾತ್ರವೇ ಒಬ್ಬನು ದುಃಖ ಮತ್ತು ಯಾತನೆಗಳಿಂದ ಬಿಡುಗಡೆ ಹೊಂದಿ ಶಾಶ್ವತವಾದ ಶಾಂತಿಯನ್ನು ಹೊಂದುತ್ತಾನೆ. ನಮಗೆ ಶಾಂತ ಸ್ಥಿತಿಯನ್ನು ತಿಳಿಸಿ ಕೊಡುವುದು ಮತ್ತು ನಾವು ಶಾಂತಿಯಿಂದ ಇರುವುದು ಸಮಾಧಿ ಸ್ಥಿತಿಯಲ್ಲಿ. ಈ ಸ್ಥಿತಿಯನ್ನು ನಮಗೆ ಪರಾಶಕ್ತಿಯು ತನ್ನ ಕೃಪೆಯ ಕ್ರಿಯೆಯಿಂದಾಗಿ ಕರುಣಿಸಿದ್ದಾಳೆ. ಮುಂದಿನ ಹಂತವೇ ನಿದ್ರಾ ಸ್ಥಿತಿಯಲ್ಲಿರುವುದು ನಾವು ಶಾಂತ ಸ್ಥಿತಿಯಲ್ಲಿರುವೆವೆಂಬ ಪ್ರಜ್ಞೆಯಿಲ್ಲದೆ. ಆದ್ದರಿಂದ ಅನುಗ್ರಹದ ಸ್ಥಿತಿಗಿಂತ ಒಂದು ಹಂತ ಕೆಳಗಿರುವುದು ಮತ್ತು ಎಲ್ಲರಿಗೂ ಸಂತೋಷ ಕೊಡುವುದು ಸಂಹಾರವೊಂದೇ.

Mahā-grāsā महा-ग्रासा (752)

೭೫೨. ಮಹಾಗ್ರಾಸಾ

           ದೇವಿಯು ಹೊಟ್ಟೆಬಾಕಳಾಗಿದ್ದಾಳೆ. ಈ ನಾಮವು ಎಲ್ಲವೂ ಬ್ರಹ್ಮದೊಳಗೆ ಐಕ್ಯವಾಗುತ್ತದೆ ಎಂದು ತಿಳಿಸುತ್ತದೆ. ಕಠೋಪನಿಷತ್ತು (೧.೨.೨೫) ಹೇಳುತ್ತದೆ, "ಮನಷ್ಯರಲ್ಲಿ ಅತ್ಯುತ್ತಮರಾದವರು ಆತ್ಮಕ್ಕೆ ಆಹಾರದಂತೆ. ಮರಣವು ಎಲ್ಲರನ್ನೂ ಮೀರಿಸುತ್ತದೆ, ಆದರೂ ಸಹ ಮರಣವು ಆತ್ಮಕ್ಕೆ ಕೇವಲ ಒಂದು ರೋಚಕ ಆಹಾರದಂತೆ".

           ಬ್ರಹ್ಮಸೂತ್ರವೂ (೧.೨.೯) ಸಹ ಹೀಗೆ ಹೇಳುತ್ತದೆ, "ಚಲಿಸುವುದೆಲ್ಲವನ್ನೂ ಮತ್ತು ಚಲಿಸದೇ ಇರುವುದೆಲ್ಲವನ್ನೂ ಸಹ ಒಳಗೆಳೆದುಕೊಳ್ಳುವುದರಿಂದ ಅದು (ಬ್ರಹ್ಮವು) ತಿನ್ನುಗನಾಗಿದೆ (ಕಬಳಿಸುವವನಾಗಿದೆ)".

          ಈ ನಾಮವು ಬ್ರಹ್ಮದ ವಿನಾಶ ಅಥವಾ ಮಹಾಪ್ರಳಯದ ಕುರಿತಾಗಿ ಉಲ್ಲೇಖಿಸುತ್ತದೆ.

Mahā-śanā महा-शना (753)

೭೫೩. ಮಹಾ-ಶನಾ

            ಮಹಾ-ಶನಾ ಎಂದರೆ ಮಹಾನ್ ಕಬಳಿಸುವವಳು. ಹಿಂದಿನ ಮತ್ತು ಈ ನಾಮಕ್ಕೆ ಹೇಳಿಕೊಳ್ಳುವಂತಹ ವ್ಯತ್ಯಾಸವೇನಿಲ್ಲ. ಬಹುಶಃ ಹಿಂದಿನ ನಾಮವು ಮಹಾಪ್ರಳಯದ ಕುರಿತಾಗಿ ಹೇಳಿದರೆ ಈ ನಾಮವು ವಿನಾಶ ಅಥವಾ ಲಯದ ಕುರಿತಾಗಿ ಹೇಳುತ್ತದೆ. ಮಹಾಪ್ರಳಯದ ಕಾಲದಲ್ಲಿ ಸಂಪೂರ್ಣ ವಿಶ್ವವು ಅಸ್ತಿತ್ವವಿಲ್ಲದಂತೆ ಸರ್ವನಾಶವಾಗುತ್ತದೆ ಮತ್ತು ವಿನಾಶ ಅಥವಾ ಲಯದಲ್ಲಿ ಕೇವಲ ಪ್ರಪಂಚದ ಒಂದು ಭಾಗ ಮಾತ್ರವೇ ಅಥವಾ ದುಷ್ಕೃತ್ಯಗಳನ್ನೆಸುಗುವವರು ಮಾತ್ರವೇ ನಾಶವಾಗುತ್ತಾರೆ.

             ಈ ನಾಮವು ೨೨೯ನೇ ನಾಮವಾದ ಮಹಾಸನಾ ಎನ್ನುವುದಕ್ಕಿಂತ ಭಿನ್ನವಾದುದು, ಏಕೆಂದರೆ ದೇವಿಯು ಮಹಾನ್ ಆಸನವುಳ್ಳವಳು ಎಂದು ಆ ನಾಮವು ತಿಳಿಸುತ್ತದೆ.

Aparṇā अपर्णा (754)

೭೫೪. ಅಪರ್ಣಾ

           ದೇವಿಯು ಋಣರಹಿತಳು. ’ಅಪ’ವನ್ನು (ಇಲ್ಲದಿರುವಿಕೆಯನ್ನು) ಋಣಕ್ಕೆ ಪೂರ್ವಪ್ರತ್ಯಯವಾಗಿ ಉಪಯೋಗಿಸಿದಾಗ ಅದು ದೇವಿಯು ಋಣವಿಲ್ಲದವಳೆನ್ನುವ ಅರ್ಥವನ್ನು ಕೊಡುತ್ತದೆ. ದೇವಿಯು ತನ್ನ ಭಕ್ತರ ಭಕ್ತಿಗೆ ಪ್ರತಿಯಾಗಿ ವರಗಳನ್ನು ದಯಪಾಲಿಸುತ್ತಾಳಾದ್ದರಿಂದ ಆ ಮೂಲಕ ಆಕೆಯು ಭಕ್ತರ ಋಣವನ್ನು ಇಟ್ಟುಕೊಳ್ಳದವಳಾಗಿದ್ದಾಳೆ. ದೇವಿಯು ಶಿವನಿಗೂ ಸಹ ಋಣಿಯಾಗಿಲ್ಲ ಏಕೆಂದರೆ ಅವಳು ಆತನ ಕ್ರಿಯೆಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ನೋಡಿಕೊಳ್ಳುತ್ತಾಳೆ. ಆಕೆಯು ದೇವತೆಗಳಿಗೂ ಋಣಿಯಾಗಿಲ್ಲ ಏಕೆಂದರೆ ದೇವಿಯು ಅವರನ್ನು ರಾಕ್ಷಸರಿಂದ ಕಾಪಾಡುತ್ತಾಳೆ. ಆದ್ದರಿಂದ ದೇವಿಯು ಈ ಪ್ರಪಂಚದ ಯಾರ ಋಣವನ್ನೂ ಹೊಂದಿದವಳಲ್ಲ.

          ಭಾಸ್ಕರಾಚಾರ್ಯನು (ವರಿವಶ್ಯಾ ರಹಸ್ಯ ಕೃತಿಯ ಕರ್ತೃ) ದೇವಿಯ ಮಹಾನ್ ಭಕ್ತನಾಗಿದ್ದನು. ಅವನ ಬಳಿಯಲ್ಲಿ ಸಣ್ಣ ಪುಟ್ಟ ಪೂಜೆಗಳನ್ನು ಕೈಗೊಳ್ಳಲೂ ಸಹ ಸಾಕಷ್ಟು ಹಣವಿರಲಿಲ್ಲ. ಅವನು ಹಣವನ್ನು ಸಾಲವಾಗಿ ಪಡೆದು ದೇವಿಯ ನಿತ್ಯ ಅನುಷ್ಠಾನವನ್ನು ಕೈಗೊಳ್ಳುತ್ತಿದ್ದ. ಅವನ ಸಾಲಗಾರರು ಅವನಿಗೆ ತಮ್ಮ ಸಾಲವನ್ನು ಹಿಂದಿರುಗಿಸಲು ಒತ್ತಾಯ ಮಾಡಲಾರಂಭಿಸಿದರು. ಅವನ ಬಳಿಯಲ್ಲಿ ಹಣವಿರಲಿಲ್ಲ ಏಕೆಂದರೆ ದೇವಿಯನ್ನು ಪೂಜಿಸುವುದೊಂದೇ ಅವನ ಏಕೈಕ ಕಾಯಕವಾಗಿತ್ತು. ಮತ್ತು ಅವನಿಗೆ ಯಾವುದೇ ವಿಧವಾದ ಆರ್ಥಿಕ ಮೂಲಗಳಿರಲಿಲ್ಲ. ಕೆಲವು ಕಾಲದ ನಂತರ ಅವನಿಗೆ ಇದ್ದಕ್ಕಿದ್ದಂತೆ ಸಾಲಗಾರರ ಒತ್ತಡವು ಕಡಿಮೆಯಾಯಿತು. ಅದೇಕೆ ಹೀಗಾಯಿತೆಂದು ಪರಿಶೀಲಿಸಿದಾಗ ತಿಳಿದು ಬಂದದ್ದೇನೆಂದರೆ ಸ್ವಯಂ ಲಲಿತಾಂಬಿಕೆಯು ಅವನ ಹೆಂಡಿತಿಯ ರೂಪದಿಂದ ಅವನ ಸಾಲಗಳನ್ನೆಲ್ಲಾ ತೀರಿಸಿದ್ದಳು. ಐಶ್ವರ್ಯ ಮತ್ತು ಕಲ್ಮಶವಿಲ್ಲದ ಭಕ್ತಿ ಎರಡೂ ಒಟ್ಟಿಗೆ ಇರಲಾರವು!

          ಅಪರ್ಣಾ ಎಂದರೆ ಎಲೆಯಿಲ್ಲದಿರುವುದು. ದೇವಿಯು ಶಿವನನ್ನು ಪಡೆಯಲು ಎಲೆಗಳನ್ನೂ ಸಹ ತಿನ್ನಲಿಲ್ಲವೆಂದು ಹೇಳಲಾಗುತ್ತದೆ. ಆದ್ದರಿಂದ ಅಪರ್ಣಾ ಎಂದರೆ ದುರ್ಗಾ ಅಥವಾ ಪಾರ್ವತೀ.

         ಇನ್ನೊಂದು ವ್ಯಾಖ್ಯೆಯ ಪ್ರಕಾರ ಪರ್ಣ ಎಂದರೆ ಬೀಳುವುದು ಅಥವಾ ಪತನವಾಗುವುದು ಮತ್ತು ಅಪರ್ಣಾ ಎಂದರೆ ದೇವಿಯು ಪತನವಾಗುವುದಕ್ಕೆ ಹೊರತಾಗಿದ್ದಾಳೆ ಎಂದರ್ಥ. ಬ್ರಹ್ಮಕ್ಕೆ ಪತನ ಎನ್ನುವುದು ಇರುವುದಿಲ್ಲ.

Caṇḍikā चण्डिका (755)

೭೫೫. ಚಂಡಿಕಾ

            ದೇವಿಯು ದುರ್ಗೆಯಾಗಿದ್ದಾಳೆ. ದೇವಿಯ ಕೋಪದಿಂದಾಗಿ ಆಕೆಯನ್ನು ಸಮೀಪಿಸಲಾಗದು. ಆಕೆಯು ದುರ್ಗಾ, ಲಕ್ಷ್ಮೀ ಮತ್ತು ಸರಸ್ವತೀ ಇವರುಗಳ ಸಂಯುಕ್ತ ರೂಪವಾಗಿದ್ದಾಳೆ. ೭೦೪ನೇ ನಾಮವನ್ನೂ ನೋಡಿ. ಚಂಡಿ ಅಥವಾ ಚಂಡಿಕಾ ಯಾವುದೇ ವಿಧವಾದ ದುಷ್ಕೃತ್ಯಗಳನ್ನೆಸಗುವವರನ್ನು ಸಹಿಸುವುದಿಲ್ಲ ಆಕೆಯು ಅವರನ್ನು ನೋಡುತ್ತಲೇ ಕೆಂಡಾಮಂಡಲವಾಗುತ್ತಳೆ. ಆಕೆಯು ಈ ದುಷ್ಕೃತ್ಯಗಳನ್ನು ಮಾಡುವವರನ್ನು ನಿಷ್ಕರುಣೆಯಿಂದ ಸಂಹರಿಸುತ್ತಾಳೆ. ದೇವಿಯ ಸಿಟ್ಟನ್ನು ದೇವಿ ಮಹಾತ್ಮ್ಯೆಯಲ್ಲಿ ಚೆನ್ನಾಗಿ ವರ್ಣಿಸಲಾಗಿದೆ.

            ತೈತ್ತರೀಯ ಉಪನಿಷತ್ತು (೩.೮.೧) ಹೇಳುತ್ತದೆ, "ಗಾಳಿಯು ಅವನ (ಬ್ರಹ್ಮದ) ಭಯದಿಂದ ಬೀಸುತ್ತದೆ. ಸೂರ್ಯನೂ ಸಹ ಭಯದಿಂದ ಬೆಳಗುತ್ತಾನೆ. ಭಯದಿಂದಾಗಿ ಅಗ್ನಿ, ಇಂದ್ರ, ಯಮ ಇವರೆಲ್ಲರೂ ತಂತಮ್ಮ ಕಾರ್ಯಗಳನ್ನು ನಿರ್ವಹಿಸಲು ಓಡುತ್ತಾರೆ". ಶ್ರೀ ರುದ್ರಮ್ (೧.೧) ಅವನ ಕೋಪಕ್ಕೆ ಗೌರವವನ್ನು ಸಲ್ಲಿಸುತ್ತಾ ಹೀಗೆ ಪ್ರಾರಂಭವಾಗುತ್ತದೆ, ಅದು ಹೇಳುತ್ತದೆ “ನಮಸ್ತೇ ರುದ್ರ ಮನ್ಯವ ........ ನಮಃ”.

            ದೇವಿಯ ಚಂಡಿಕಾ ರೂಪವು ಭಯಂಕರವಾದುದ್ದೆಂದು ಹೇಳಲಾಗುತ್ತದೆ. ದೇವಿಯು ಕೆಟ್ಟ ಕಾರ್ಯಗಳನ್ನು ಸಹಿಸಿಕೊಳ್ಳುವುದಿಲ್ಲ. ಆಕೆಯ ಕೋಪದ ದೆಸೆಯಿಂದಾಗಿ ಜಗತ್ತಿನ ಚಟುವಟಿಕೆಗಳೆಲ್ಲವೂ ವ್ಯವಸ್ಥಿತವಾಗಿ ನಿಯಮಾನುಸಾರ ನಡೆಯುತ್ತವೆ.

            ಏಳು ವರ್ಷದ ಹುಡುಗಿಯನ್ನೂ ಸಹ ಚಂಡಿಕಾ ಎಂದು ಕರೆಯುತ್ತಾರೆ.

Caṇḍa-muṇḍāsura-niṣūdinī चण्ड-मुण्डासुर-निषूदिनी (756)

೭೫೬. ಚಂಡ-ಮುಂಡಾಸುರ-ನಿಷೂದಿನೀ

           ಚಂಡ ಮತ್ತು ಮುಂಡ ಎನ್ನುವ ಇಬ್ಬರು ರಾಕ್ಷಸರನ್ನು ದೇವಿಯು ಸಂಹರಿಸಿದ್ದರಿಂದ ಆಕೆಯನ್ನು ಚಾಮುಂಡ ಎಂದರೆ ಆ ರಾಕ್ಷಸರ ಮೊದಲೆರಡು ಅಕ್ಷರಗಳನ್ನೊಳಗೊಂಡ ಹೆಸರಿನಿಂದ ಕರೆಯಲಾಗುತ್ತದೆ. ಮಾರ್ಕಂಡೇಯ ಪುರಾಣ (ದೇವಿ ಭಾಗವತ - ೮೪.೨೫)ರಲ್ಲಿ ಚಂಡಿಕಾ ದೇವಿಯು ಕಾಳಿಯನ್ನು ಹೀಗೆ ಸಂಭೋದಿಸುತ್ತಾಳೆ, "ನೀನು ಚಂಡ ಮತ್ತು ಮುಂಡರನ್ನು ಸಂಹರಿಸಿರುವುದರಿಂದ ಇನ್ನು ಮುಂದೆ ಚಾಮುಂಡಾ ಎನ್ನುವ ಹೆಸರಿನಿಂದ ಜಗತ್ತಿನಲ್ಲಿ ಪ್ರಸಿದ್ಧಳಾಗುತ್ತೀಯ". ಚಂಡಿಕ ಮತ್ತು ಚಾಮುಂಡಾ ಇಬ್ಬರೂ ಬೇರೆ ಬೇರೆ ಎನ್ನುವುದನ್ನು ಗಮನಸಿ. ಚಂಡಿಕಾ ಎನ್ನುವುದು ದುರ್ಗಾ, ಲಕ್ಷ್ಮೀ ಮತ್ತು ಸರಸ್ವತೀ ಇವರುಗಳ ಸಂಯುಕ್ತ ರೂಪವಾದರೆ, ಚಾಮುಂಡ ಎನ್ನುವುದು ಕಾಳಿಯ ಒಂದು ರೂಪವಾಗಿದೆ. ಈ ಎಲ್ಲಾ ರೂಪಗಳೂ ಸಹ ಲಲಿತಾಂಬಿಕೆಯ ವಿವಿಧ ಅವತಾರಗಳೆ. ಸಪ್ತ ಮಾತೆಯರಲ್ಲಿ ಒಬ್ಬ ದೇವಿಯ ಹೆಸರೂ ಸಹ ಚಾಮುಂಡಾ ಆಗಿದೆ.

           ಹಿಂದಿನ ನಾಮದಲ್ಲಿ ದೇವಿಯು ದುಷ್ಟ ಕಾರ್ಯಗಳನ್ನು ಮಾಡುವವರನ್ನು ನೋಡಿದರೆ ದೇವಿಯು ಸಿಟ್ಟಾಗುತ್ತಾಳೆ ಎಂದು ಹೇಳಲಾಗಿತ್ತು. ಈ ಅಂಶವನ್ನು ನಿರೂಪಿಸಲು ಆಕೆಯು ಇಬ್ಬರು ಮಹಾನ್ ದುಷ್ಟರನ್ನು ಅಂದರೆ ರಾಕ್ಷಸರನ್ನು ಸಂಹರಿಸಿರುವುದನ್ನು ಈ ನಾಮದಲ್ಲಿ ಪ್ರಸ್ತಾಪಿಸಲಾಗಿದೆ.

                                                                                                                 ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM MEANING 751 - 756 http://www.manblunder.com/2010/05/lalitha-sahasranamam-meaning-751-756.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

 

Rating
Average: 5 (1 vote)

Comments

Submitted by nageshamysore Tue, 11/26/2013 - 03:46

ಶ್ರೀಧರರೆ "೧೬೮. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯ ರೂಪ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೭೫೧-೭೫೬
_______________________________
,
೭೫೧. ಮಹಾ-ಕಾಲೀ
ಮಹತ್ ಮೂಲ ಮಹಾ, ಪ್ರಕೃತಿ ಪುರುಷಾ ನಂತರದ ಮೂರನೆ ತತ್ವ
ಅತ್ಯುನ್ನತ-ಬುದ್ಧಿ ಮಹಾನ್, ಮಹಾಕಾಲ ಶಿವ ಮಹಾಕಾಳಿ ಶಕ್ತಿ ಸತ್ವ
ಮರಣದಧಿದೇವತೆಯಾಗಿ, ಮಹಾಕಾಲೀ ರೂಪದಲಿಹ ಲಲಿತಾಂಬಿಕೆ
ದುಷ್ಕೃತ್ಯವೆಸಗುವವರ ವಿನಾಶಕೆ, ಕಪ್ಪು ಯಮನಾಗುತ ದುರ್ಗಾಂಬಿಕೆ ||
.
ಶಿವನ ಕೊರಳ ವಿಷಕನ್ನಿಕೆ, ಫಾಲನೇತ್ರಜೆ ಗುಂಗುರ-ಕೇಶ ನೀಲಿ-ಕಂಠ
ಸಂಹಾರಕಾರ್ಯ ನಿಮಿತ್ತ ಶ್ವೇತ ಶಿವ, ಬೆಂಕಿಯಂತ ಕರಿ ಕಾಳಿ ಸಹಿತ
ತಮದ ನಿದ್ದೆ ಶಾಂತಿಯ ಕೃಪೆ, ಸಂಹಾರ ಜನ್ಮಾಂತರ ಕರ್ಮ ವಿರಾಮ
ಪಾಪಿಗು ತಾತ್ಕಾಲಿಕ ಕರುಣೆ, ಇಹ ಬಂಧನ ಜ್ಞಾನದಿಂದಷ್ಟೆ ನಿರ್ನಾಮ ||
.
೭೫೨. ಮಹಾಗ್ರಾಸಾ
ಚರಾಚರವೆಲ್ಲವ ಒಳ ಸೆಳೆಯುತ ಕಬಳಿಸುವ ತಿನ್ನುಗ ಬ್ರಹ್ಮ
ಮಹಾಪ್ರಳಯ ವಿನಾಶ ಕಾರ್ಯ, ಆಪೋಷಿಸುತೆಲ್ಲಾ ಮರ್ಮ
ಸರ್ವೋತ್ತಮರೆ ಆತ್ಮದಾಹಾರ, ಶಕ್ತಮೃತ್ಯುವು ಆತ್ಮನಿಗೆ ಸಖ
ಬ್ರಹ್ಮೈಕ್ಯವಾಗುತೆಲ್ಲ, ಮಹಾಗ್ರಾಸಾ ದೇವಿ ಹೊಟ್ಟೆಬಾಕತೆ ಲೆಕ್ಕ ||
.
೭೫೩. ಮಹಾ-ಶನಾ
ಲಯ-ವಿನಾಶದೆ ಮಹಾನ್ ಕಬಳಿಸುವವಳೆ ಮಹಾ ಶನಾ
ದುಷ್ಕೃತ್ಯನಿರತ ಭಾಗಶಃ ಪ್ರಪಂಚ ವಿನಾಶಗೊಳಿಸಿ ನಿತ್ರಾಣ
ಮಹಾನ್ ಆಸನ ಪೀಠಸ್ಥೆಯಾಗಿ ಲಯಕಾರಣಿ ಮಹಾಸನಾ
ದುಷ್ಟ ನಿಗ್ರಹದ ಕಬಳಿಕೆಯಲಿ ತಾಳಿದ ರೂಪ ಮಹಾ ಶನಾ ||
.
೭೫೪. ಅಪರ್ಣಾ
ಬ್ರಹ್ಮಕೆಲ್ಲಿ ಪತನ ಬೀಳದಗುಣ, ಪರ್ಣವಾಗದ ದೇವಿ ಅಪರ್ಣಾ
ಶಿವನೊಲುಮೆಗೆ ಎಲೆಯೂ ತಿನ್ನದ, ದುರ್ಗೆ ತಪ ಅಸಾಧಾರಣ
ಭಕ್ತಋಣ ವರದೆ, ಶಿವಋಣ ತ್ರಿಕಾರ್ಯದೆ, ದೇವರ ಕಾಪಿಡುತೆ
ದೇವಿ ಲಲಿತೆ ಋಣ ರಹಿತೆ, ಭಾಸ್ಕರಾಚಾರ್ಯನ ಸಲಹಿದಂತೆ ||
.
೭೫೫. ಚಂಡಿಕಾ
ಲಲಿತಾ ಭಯಂಕರ ರೂಪ ಚಂಡಿಕಾ, ನಿಯಮದಂತೆ ಲೋಕವ ನಡೆಸುತ
ಗಾಳಿ ಬೀಸುತ , ರವಿ ಬೆಳಗುತ, ಅಗ್ನಿ-ಯಮ-ಇಂದ್ರಾದಿ ಕಾರ್ಯ ನಿರತ
ದುರ್ಗಾ-ಲಕ್ಷ್ಮೀ-ಸರಸ್ವತೀ ಸಂಯುಕ್ತ ರೂಪ, ದೇವಿ ಕೋಪವೇ ಅಪರಿಮಿತ
ಕೆಂಡಾಮಂಡಲ ನಿಷ್ಕರುಣೆಯಿಂದ ದೇವಿ, ದುಷ್ಕೃತ್ಯನಿರತರ ಸಂಹರಿಸುತ ||
.
೭೫೬. ಚಂಡ-ಮುಂಡಾಸುರ-ನಿಷೂದಿನೀ
ಚಂಡ ಮುಂಡ ರಾಕ್ಷಸ ಪುಂಡ, ಸಂಹರಿಸಿ ನಿವಾರಿಸಿ ಲಲಿತಾ ಪ್ರಚಂಡ
ಚಂಡಿಕಾ ದೇವಿ ಕಾಳಿಗಿತ್ತ ನಾಮ, ಚಂಡ ಮುಂಡರ ವಧಿಸಿ ಚಾಮುಂಡಾ
ಕಾಳಿ ರೂಪಲಿ ದುಷ್ಟಕಾರ್ಯ ನಿರತರ ದಮನ, ದೇವಿ ಸಿಟ್ಟಿನ ಪ್ರತಿಧ್ವನಿ
ದುಷ್ಕೃತ್ಯದ ಅಸಹನೆ ನಿರೂಪಿಸುತಾ, ಚಂಡ-ಮುಂಡಾಸುರ-ನಿಷೂದಿನೀ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು