ಹೊರಳು ನೋಟ

ಹೊರಳು ನೋಟ

ಕಣ್ಣು ತೋರುವವರೆಗು ನಲ್ಲನಾ ಹಾದಿಯನೆ ಕಾಯ್ತು ಬೇಸತ್ತಾಗಲೆ
ದಾರಿಗರ ಸಪ್ಪಳವು ನಿಲ್ಲುತಿರೆ ಹೊರಗೆಲ್ಲ ಹಬ್ಬುತಿರೆ ಕಾರ್ಗತ್ತಲೆ
ಹೆಣ್ಣಿವಳು ಮನೆಯೆಡೆಗೆ ತಿರುಗುತ್ತ ಹಾಕಿರಲು ಹೆಜ್ಜೆಯೊಂದನ್ನಾಕಡೆ
ಕೂಡಲೆಯೆ ಬಂದನೇನೋಯೆನುತ ಕತ್ತನ್ನು ಮೆಲ್ಲಹೊರಳಿಸಿ ನೋಳ್ಪಳೆ

ಸಂಸ್ಕೃತ ಮೂಲ: (ಅಮರುಕನ ಅಮರುಶತಕದಿಂದ, ಪದ್ಯ 76)

ಆದೃಷ್ಟಿ ಪ್ರಸಾರಾತ್ ಪ್ರಿಯಸ್ಯ ಪದವೀಂ ಉದ್ವೀಕ್ಷ್ಯ ನಿರ್ವಿಣ್ಣಯಾ
ವಿಚ್ಛಿನ್ನೇಶು ಪಥಿಶ್ವಃ ಪರಿಣತೌ ಧ್ವಾಂತೇ ಸಮುತ್ಸರ್ಪತಿ |
ದತ್ತೈಕಂ ಸಶುಚಾ ಗೃಹಂ ಪ್ರತಿ ಪದಮ್ ಪಾಂಥಃ ಸ್ತ್ರಿಯಾಸ್ಮಿನ್ ಕ್ಷಣೇ
ಮಾ ಭೂದಾಗತ ಇತ್ಯಾಮಂದವಲಿತಗ್ರೀವಂ ಪುನರ್ವೀಕ್ಷಿತಂ ||

आदृष्टिप्रसारात् प्रियस्य पदवीं उद्वीक्ष्य निर्विण्णया
विच्छिन्नेषु पथिश्वः परिणतौ ध्वान्ते समुत्सर्पति |
दत्तैकं सशुचा गृहं प्रति पदं पान्थः स्त्रियास्मिन् क्षणे
माभूदागत इत्यामंदवलितग्रीवं पुनर्वीक्षितं ||

-ಹಂಸಾನಂದಿ

ಕೊ: ನೋಳ್ಪಳೆ = ನೋಡಿದಳೆ, ನೋಡುತ್ತಿದ್ದಾಳಲ್ಲ ಅನ್ನುವರ್ಥದಲ್ಲಿ

ಕೊ: ಅಮರುಕನ ಒಂದು ಪದ್ಯವೇ ಒಂದು ಕಾವ್ಯಕ್ಕೆ ಸಮನೆಂದು ಪ್ರತೀತಿ. ಹಾಗಾಗಿ, ಆ ಮೂಲದಲ್ಲಿರುವ ಅದೇ ಭಾವನೆಗಳನ್ನ ಅಷ್ಟೇ ಕುಸುರಿನಿಂದ ಅನುವಾದ ಮಾಡುವುದು ಕಷ್ಟವೇ. ಆದರೂ , ಆದಷ್ಟೂ ಮೂಲವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದೇನೆ

ಕೊ.ಕೊ.ಕೊ: ಅನುವಾದವು ಯಾವುದೇ ಪೂರ್ವಪ್ರಸಿದ್ಧ ಛಂದಸ್ಸಿನಲ್ಲಿಲ್ಲದಿದ್ದರೂ, ಪಂಚಮಾತ್ರಾ ಗತಿಯ ನಡಿಗೆಯಲ್ಲಿದೆ. ಪ್ರತಿಸಾಲಿನಲ್ಲೂ, ಐದು ಮಾತ್ರೆಯ ಆರುಗಣಗಳು, ಮತ್ತೆ ಕೊನೆಗೊಂದು ವಿರಾಮ (ಗುರು). ಪ್ರಾಸವನ್ನು ಪಾಲಿಸಹೋಗಿಲ್ಲ.

Rating
No votes yet

Comments

Submitted by nageshamysore Tue, 11/26/2013 - 04:38

ಕಾಯುವಿಕೆಯ ಕಾತುರ,ಸೂಕ್ಷ್ಮ ತಪನೆ, ಯಾತನೆಗಳೆಲ್ಲ 'ಹೇಳದ' ಪದಗಳಲ್ಲೆ ವ್ಯಕ್ತವಾದಂತಿವೆ - ಆ ಅರ್ಥದಲ್ಲಿ ಇದೊಂದು ಕಾವ್ಯಕ್ಕೆ ಸಮವೆ ಅನ್ನುವುದರಲ್ಲಿ ಸಂಶಯವಿಲ್ಲ :-)
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು