ಇದು ಯಾವ‌ ಬಸ್ಸು ? --ಭಾಗ -2

ಇದು ಯಾವ‌ ಬಸ್ಸು ? --ಭಾಗ -2

ರಾತ್ರಿ ಎಂಟರ ಸುಮಾರಿಗೆ ಇಂತಹದ್ದೇ ಒಂದು ವಾತಾವರಣವಿರುವ ಬಸ್ಸ ಹತ್ತಿದ ನನ್ನಂಥಹಾ ಸಹ ಪ್ರಯಾಣಿಕರಿಗೆ ಒಂದು ವಿಶಿಷ್ಠ ಅನುಭವವಾದದ್ದು ಒಬ್ಬ ಮಹಿಳಾ ಕಂಡಕ್ಟರ್ ಒಬ್ಬರಿಂದಾ.ಅಪ್ಪಟ್ಟ ಕಾರ್ನ್(ಅರಳು) ಹುರಿದಂತೆ ಅವಳು ಇಂಗ್ಲಿಷ್ ನಲ್ಲಿ ಮಾತನಾಡುವ ಪರಿ ಎಲ್ಲರನ್ನು ಸೂಜಿಗಲ್ಲಿನಂತೆ ಅವಳತ್ತ ಆಕರ್ಷಿಸುತ್ತಿತ್ತು...

"ಭಾರತಿ,ಆರತಿ,ಕಲ್ಪನಾ... ಪ್ಲೀಸ್ ಕಂ ಇನ್ ಸೈಡ್.. ಗೆಟ್ ಇಂಟು ದಿ ಬಸ್ಸ್.." ಎಂದು ಮುಂದಿನ ಬಾಗಿಲಿನಿಂದ ಹತ್ತುತ್ತಿದ್ದ ಮಹಿಳಾ ಮಣಿಗಳು ಇನ್ನು ಬಸ್ಸ ಹತ್ತಿ ತಮ್ಮ ಪರ್ಸ್ ತೆಗೆಯುವ ಮುಂಚೆಯೇ ಇಂಥಾ ಒಂದು ಅನಿರೀಕ್ಷಿತ ಸುಸ್ವಾಗತ ಕೇಳಿ ಮೊದಲಿಗೆ ಸ್ವಲ್ಪ ಗಲಿಬಿಲಿಗೊಂಡು, ಕೊನೆಗೆ ಒಂದು ನಗು ಚೆಲ್ಲಿ ಒಳಗೆ ಬರುತ್ತಿರುವುದನ್ನು ನೋಡುವುದು ಒಳಗಿದ್ದ ಪ್ರಯಾಣಿಕರಿಗೆ ಒಂದು ಕುತೂಹಲದ ಸಂಗತಿಯಾಗಿತ್ತು.

 
ಪುರುಷರಿಗೂ ಸಹಾ ಹಾಗೆಯೇ.."ಶಾರುಖ್.. ಸಲ್ಮಾನ್..ಆಮೀರ್... ಪ್ಲೀಸ್ ಗಿವ್ ಪ್ರಾಪರ್ ಚೇಂಜ್...." ಎನ್ನುತ್ತಾ ನಮ್ಮ ಎಳೆಯ ಹಿಂದಿ ಹಿರೋಗಳಿಂದ ಶುರುಮಾಡಿ ಕನ್ನಡದ ದರ್ಶನ್,ಸುದೀಪ್,ಪುನಿತ್ ವರೆಗೂ ಎಲ್ಲರು ಈ ನಮ್ಮ ಕಂಡಕ್ಟರ್ ನಾಲಿಗೆಯ ಮೇಲೆ ನಲಿದಾಡುತ್ತಿದ್ದರು.  
 
ಇವಳ ಅನಿರೀಕ್ಷಿತ ಚಕುಮಕಿಗಳಿಂದ ಪ್ರಯಾಣಿಕರಲ್ಲಿ ಒಂದು ಮಂದನಗೆ ಸದಾ ಮೂಡಿ ಅವರು ತಮ್ಮ ದೈನಂದಿನ ಜಂಜಾಟಗಳನ್ನು ಮರೆತು ಬಿಡುತ್ತಿದ್ದರು.ಬಸ್ಸಿನ ವಾತಾವರಣವೇ ಬದಲಾಗಿ ಎಲ್ಲರೂ ಅವಳ ಸಮ್ಮೋಹನಕ್ಕೆ ಸಿಲುಕಿದ್ದಾರೋ ಎಂಬಂತೆ ನಮ್ಮ ಬಸ್ಸು ಚಲಿಸುತ್ತಿತ್ತು .ಪ್ರತಿ ನಿಲುಗಡೆಯಲ್ಲೂ ಅವಳು ಕೋರುವ ಸ್ವಾಗತ ಹೊಸ ಬಗೆಯದಾಗಿರುತ್ತಿತ್ತು. ಒಂದು ಹದಿ-ಹರೆಯದ ಜೋಡಿ ಏನಾದರು ಬಸ್ಸ ಹತ್ತಿದರೆ"ಐಶ್ವರ್ಯಾ- ಅಭಿಷೇಕ್.. ಪ್ಲೀಸ್ ಕಂ" ಎಂದು ಅವರನ್ನು ಕರೆಯುತ್ತಿದ್ದಂತೆ ಈ ತರಹದ ಸ್ವಾಗತ ನಿರೀಕ್ಷಿಸದ ಹುಡುಗಿ 
ಕೆಂಪು ಗುಲಾಬಿಯಾಗಿರುತ್ತಿದ್ದಳು. ಬಹುಶಃ ಅವಳ ಬಾಯ್ ಫ್ರೆಂಡ್ ಕೂಡಾ ಇಷ್ಟು ಪ್ರೇಮ ಪೂರ್ವಕವಾಗಿ ಅವಳನ್ನು ಕರೆದಿರಲಿಕ್ಕಿಲ್ಲಾ. "ಸ್ವಲ್ಪ ಅಕಿನ್ನ್ ನೋಡಿ ಕಲಿ".. ಎಂದು ಹುಡುಗಿ ಹುಡುಗನಿಗೆ ತಿವಿಯುವದೊಂದೇ ಬಾಕಿ.
 
ಕೆಲವೊಮ್ಮೆ ಅವಳು ಯಾವ ನಾಯಕಿಯರ ಹೆಸರಿಟ್ಟು ಕರೆಯದೆ ಸುಮ್ಮನೆ "ದಿ ಗರ್ಲ್ ವಿಥ್ ದುಪಟ್ಟಾ.. " ಎಂದು ಹೇಳಿದರೆ ಸಾಕು ಬಸ್ಸಿನಲ್ಲಿರುವ ಎಲ್ಲಾ ಲಲನೆಯರು ತಮ್ಮ ಸಲ್ವಾರ್ ಕಮೀಜಿನ ವೇಲನ್ನು ಒಮ್ಮೆ ಖಾತ್ರಿ ಪಡಿಸಿಕೊಂಡು ನಮ್ಮ ಕಂಡಕ್ಟರಿನ ಮುಂದಿನ ಆದೇಶಕ್ಕೆ ಕಾಯ್ದವರಂತೆ ನೋಡುತ್ತಿರುವುದು ಒಂದು ಮೋಜಿನ ಸಂಗತಿಯಾಗಿರುತ್ತಿತ್ತು.ಬರೀ ಜೀನ್ಸ್ ಹಾಗು ಟಾಪ್ ಧರಿಸಿದ ಹುಡುಗಿಯರು ಏನು ಮಾಡುತ್ತಾರೆ ಎಂಬ ತುಂಟ ಪ್ರಶ್ನೆಯನ್ನು ಕೇಳಬೇಡಿ.
 
ಹೀಗೆಯೇ ಎಲ್ಲರನ್ನು ಮಾತನಾಡಿಸುತ್ತಾ ಪಾದರಸದಂತೆ 'ಎರಡಂತಸ್ತಿನ' ವೋಲ್ವೋ ಬಸ್ಸ ಹತ್ತಿ ಇಳಿದು, ಬಸವಳಿದು ಕೊನೆಗೆ ಉಸ್ಸಪ್ಪಾ ಎಂದು "ಐ ಕಾಂಟ್ ಹ್ಯಾಂಡಲ್ ದಿಸ್ ಎನಿ ಮೋರ್" ಎನ್ನುತ್ತಾ ಹತಾಷ ಭಾವನೆಯಿಂದ ಸ್ವಲ್ಪ ಲಘು ವಿಶ್ರಾಂತಿ ಪಡೆದು ಮತ್ತೆ ತನ್ನ ಲವಲವಿಕೆಯ ಮಾತುಗಳಿಂದ ವಾತಾವರಣವನ್ನು ತಿಳಿಗೊಳಿಸುತ್ತಿದ್ದಳು. ಅಷ್ಟರಲ್ಲಿಯೇ ಯಾವುದೋ ತುಂಬಾ ಗಂಭೀರವಾದ ಮುಖ ನೋಡಿ ಆಕೆಯ ಅಂತರಂಗವರಿತಂತೆ "ಯಾಕೆ ಸಪ್ಪಗಿದ್ದಿರಾ..  ? " ಎನ್ನುತ್ತಾ ಮೆತ್ತಗೆ ಸಂಭಾಷಣೆಗೆ ತೊಡಗಿ, ಆಪ್ತ ಸಮಾಲೋಚನೆ ನಡೆಸಿ 
ಕೆಲ ಸಂತ್ವಾನದ ಮಾತಾಡಿಸಿ ಅವಳಿಂದ ಒಂದು ಸಮಾಧಾನದ ನಗೆ ಸ್ವೀಕರಿಸಿದ ಮೇಲೆಯೇ ಅವಳಿಂದ ಮತ್ತೆ ಯಥಾರೀತಿ  "ಆರತಿ.. ಭಾರತಿ..ಕಲ್ಪನಾ.. ಶುರುವಾಗುತ್ತಿತ್ತು"
 
ಇದೆಲ್ಲದರ ಮಧ್ಯೆ ಟಿಕಿಟ್ ಕೊಡವ ಸಂಭ್ರಮ,ಸ್ಟಾಪ್ ಬಂದಾಗ ಜನರನ್ನು ಹತ್ತಿ ಇಳಿಸುವುದಂತೂ ನಿರಾತಂಕವಾಗಿ ನಡೆದೇ ಇರುತ್ತಿತ್ತು.
 
ಅಷ್ಟೇ ಫ್ಯಾಷನ್ ಕಾನ್ಸ್ಹಿಯಸ್ಸ್ ಆಗಿದ್ದ ನಮ್ಮ ಕಂಡಕ್ಟರ್ ಯಾವುದಾದರು ಬಿನ್ನಾಣಗಿತ್ತಿ ಬಸ್ಸ ಹತ್ತಿದರೆ ಸ್ವಲ್ಪವೂ ಈರ್ಷೆಗೆ ಒಳಗಾಗದೆ ಆಕೆಯ ಜೊತೆ ಟಿಕೀಟ್ ಕೊಡುವ ನೆಪದಲ್ಲಿ ಒಂದು ಲಘು ಮಾತುಕತೆ ನಡೆಸಿ "ಇ ಇಯರ್ ರಿಂಗ್ ಎಲ್ಲಿ ತೊಗೊಂಡೆ ? ,ಎಷ್ಟು ಚೆನ್ನಾಗಿದೆ.. ಮೊನ್ನೆ ಕಮರ್ಷಿಯಲ್ ಸ್ಟ್ರೀಟ್ ಎಲ್ಲಾ ಹುಡುಕಿದೆ ಆದರೆ ಈ ತರಹದ ರಿಂಗ್ ಸಿಗಲಿಲ್ಲಾ ಎಂದು ಪೇಚಾಡಿ,ಕೊನೆಗೆ ಆಕೆಯ ಲಿಪ್-ಗ್ಲಾಸಿನ ಬಗ್ಗೆ ಚರ್ಚಿಸಿ, ಸ್ಟ್ರಾ ಬೆರಿ ಶೇಡ್ ಟ್ರೈ ಮಾಡು..." ಎಂದು ಒಂದು ಪುಕ್ಕಟೆ ಸಲಹೆಯನ್ನು ಆಕೆಗೆ ನೀಡಿ ಮುಂದೆ ಸಾಗುತ್ತಿದ್ದಳು.
 
"ಇಷ್ಟು ಗಹನವಾದ ಖಾಸಗಿ ಚರ್ಚೆ ನಿನ್ಯಾಕೆ ಕೇಳಿಸಿಕೊಂಡೆ..?" ಎಂಬ ನಿಮ್ಮ ಈ ಕೆಟ್ಟ ಅನುಮಾನವನ್ನು ಇಲ್ಲೇ ಈಗಲೇ ಪರಿಹರಿಸುವುದು ನನ್ನ ಆಧ್ಯ ಕರ್ತವ್ಯ. ಇಲ್ಲವಾದಲ್ಲಿ ಈ ಲೇಖನವನ್ನು ಓದಿ ಮುಗಿಸುವದರೊಳಗೆ ನೀವು ನನ್ನ ತೇಜೋವಧೆ ಮಾಡುವುದು ಗ್ಯಾರಂಟಿ.ಉಸಿರಾಡಿಸಲು ಕೂಡಾ ಸ್ಥಳವಿಲ್ಲದಷ್ಟು ತುಂಬಿ ತುಳುಕುತ್ತಿರುವ ಬಸ್ಸುಗಳಲ್ಲಿ ನಮ್ಮ ಜೊತೆಗೆ ನಿಂತಿರುವ ಸಹ ಪ್ರಯಾಣಿಕರ ಅಂತರ್ಯವನ್ನು ಕೂಡಾ ತಿಳಿದುಕೊಳ್ಳಬಹುದಾದ ಪರಿಸ್ಥಿತಿ ನಿರ್ಮಾಣವಾಗಿರುವ ಪರಿಸರದಲ್ಲಿ ಇಂಥಾ ಬಿಸಿ-ಬಿಸಿ ಚರ್ಚೆ 
ಬೇಡವೆಂದರೂ(ಸಹಜವಾಗಿ ಯಾರು ಬೇಡಾ ಎನ್ನುವುದಿಲ್ಲಾ) ನಿಮ್ಮ ಕರ್ಣಗಳಿಗೆ ತಲುಪುತ್ತದೆ.ಹೀಗಾಗಿ ಇದಕ್ಕೆ ನಾನು ನೇರ ಹೊಣೆಗಾರನಲ್ಲಾ,ನಮ್ಮ ಈ ಗಡಿಬಿಡಿ ಕಂಡಕ್ಟರ್ ಬಗ್ಗೆ ಕೆಲ ವಿಚಾರಗಳನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುವ ನಿಟ್ಟಿನಲ್ಲಿ ನಾನು ಕೇವಲ ನಿಮಿತ್ತ ಮಾತ್ರ. 
 
ಅಂತೂ,ಇದೆಲ್ಲದರ ನಡುವೆ ಬಸ್ಸ ಹತ್ತಿದ ಒಬ್ಬ ವಿದೇಶೀ ಮಹಿಳೆಯೊಂದಿಗೆ ಮಾತಾಡಿಸಿ ಹತ್ತೇ ನಿಮಿಷದಲ್ಲಿ ಆಕೆಯ ಜನ್ಮ ಜಾಲಾಡಿ ಆಕೆ ಬೆಂಗಳೂರಿಗೆ ಬಂದ ಉದ್ದೇಶ ತಿಳಿದುಕೊಂಡು ಈ ಸುದ್ದಿಯನ್ನು ಬಸ್ಸಿನಲ್ಲಿದ್ದ ಇತರರ ಜೊತೆಗೆ ಹಂಚಿಕೊಂಡು ಕೆಲ ರಸ ನಿಮಿಷಗಳನ್ನು ಕಳೆಯುವುದನ್ನು ನೋಡಿದರೆ ನನಗೆ ಅಷ್ಟೇ ಆಶ್ಚರ್ಯವಾಗುತ್ತಿತ್ತು.ದೈನಂದಿನ ಒತ್ತಡದ ನಡುವೆಯೂ ಇಷ್ಟೊಂದು ಅದಮ್ಯ ಉತ್ಸಾಹದ ಬುಗ್ಗೆಯಾಗಿದ್ದ ನಮ್ಮ ಕಂಡಕ್ಟರನ್ನು ನೋಡಿದರೆ ಸಾಕು. ಆಕೆಯ ಮುಂದೆ ಅದೆಷ್ಟೋ ಸೆಲ್ಫ್-ಹೆಲ್ಪ್ ಪುಸ್ತಕಗಳನ್ನು ನಿವಾಳಿಸಿ ತೆಗೆಯಬೇಕು.
 
ಅರ್ಧದಷ್ಟು ಬಸ್ಸ ಖಾಲಿಯಾಗಿ ನಮ್ಮ ಕಥಾನಾಯಕಿ ಬಸ್ಸ ಕಂಡಕ್ಟರ ಸ್ವಲ್ಪ ಸುಧಾರಿಸಿಕೊಳ್ಳುತ್ತಾ ಇರುವಾಗ ಆಕೆ ನನಗೆ ಕೊಡಬೇಕಾಗಿದ್ದ ಚಿಲ್ಲರೆ ಹಣ ಪಡೆದುಕೊಳ್ಳಲು ನಾನು ಆಕೆ ಬಳಿ ಹೋದೆ.ಅಡಕೊತಿಗೆ ಸಿಕ್ಕ ಅಡಿಕೆಯಾದರು ಅಂದುಕೊಳ್ಳಿ, ಅಥವಾ ವನಕೆಗೆ ಕೊಟ್ಟ ತಲೆ ಎಂತಲೂ ಅಂದುಕೊಳ್ಳಿ, ನನ್ನ ಉತ್ಸಾಹ ತಡೆಯಲಾಗದೆ,"ಮೇಡಂ,ಇಷ್ಟೊಂದು ಸರಿಯಾದ ರೀತಿಯಲ್ಲಿ ಬಸ್ಸನ್ನು ನಿರ್ವಹಿಸಿಕೊಂಡು ಹೋಗುತ್ತಿರುವುದನ್ನು ನೋಡಿ ತುಂಬಾ ಖುಷಿ ಆಯಿತು ಆದರೆ ನೀವು ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚಾಗಿ ಇಂಗ್ಲಿಷ್ ಬಳಸುವುದು ಸರಿಯೇ.." ಎಂದು ಕೇಳಿಬಿಟ್ಟೆ. 
 
ಆಗಾ ಆಕೆ, "ನನ್ನ ವಿಶಯ ಬಿಡಿ ಸರ್... ಮೊದಲು ನಿಮ್ಮ ಸುದ್ದಿ ಹೇಳಿ.. ಮೊದಲಿಗೆ ನೀವು ಈ ಬಸ್ಸಲ್ಲಿ ಕಂಡೆ ಇಲ್ಲಾ...ಬೆಂಗಳೂರಿಗೆ ಹೊಸಬ್ರಾ ? ಯಾವ ಕಂಪನಿ ? ಯಾವ ಊರು ? ಏನ್ ಮಾಡ್ಕೊಂಡಿದ್ದಿರಿ.. ?" ಎಂದು ಶುರು ಹಚ್ಚಿ ಇನ್ನೇನೂ ನನ್ನ ಕಡೆಯ ಹೆಬ್ಬಾಳದ ಸ್ಟಾಪ್ ಬರುವವರೆಗೂ ನನ್ನ ವ್ರತ್ತಾಂತವನ್ನು ಸವಿಸ್ತಾರವಾಗಿ ಸವಿದು,ಮೂರೂ ವರ್ಷಗಳಿಂದ ನನ್ನ ಮನೆಯಾಗಿದ್ದ ಪುಣೆ ಬಿಟ್ಟು ಬೆಂಗಳೂರಿಗೆ ವಾಪಸ್ಸ ಬರುವ ಕಾರಣಗಳ ಬಗ್ಗೆ  ಕೂಲಂಕುಶವಾಗಿ ಚರ್ಚಿಸಿ. ಇನ್ನು ನನ್ನ ಇದ್ದ-ಬಿದ್ದ ಸರಕಿನಲ್ಲಿ ಎಳ್ಳಷ್ಟು ಕೂಡಾ ಹುರುಳಿಲ್ಲವೆಂದು ಖಾತರಿ ಪಡಿಸಿಕೊಂಡು, ಐ.ಟಿ ಕಂಪನಿಯಲ್ಲಿ ಕೆಲಸವೆಂದು ತಿಳಿದು ಸ್ವಲ್ಪ ಮರುಗಿ ಆಮೇಲೆ ತನ್ನ ಇಂಗ್ಲಿಷ್ ವ್ಯಾಮೋಹದ ಬಗ್ಗೆ ವಿವರಿಸತೊಡಗಿದಳು.
 
ಮುಂದುವರೆಯುವುದು.....
 
 
 
 

Comments

Submitted by makara Wed, 05/15/2013 - 07:39

ಗಿರಿಯವರೆ, ಚೆನ್ನಾಗಿದೆ ನಿಮ್ಮ ಹೈ-ಟೆಕ್ ಕಂಡಕ್ಟರ್ ಕಥೆ. ಮೊದಲು ಈ ಭಾಗವನ್ನು ಓದಿ ತದನಂತರ ಕುತೂಹಲದಿಂದ ಮೊದಲನೇ ಭಾಗವನ್ನು ಓದಿದೆ. ಸ್ವಾರಸ್ಯಕರವಾಗಿ ಮೂಢಿಬರುತ್ತಿದೆ ಮುಂದಿನ ಪಯಣ ಸಾಗಲಿ.
Submitted by venkatb83 Wed, 11/27/2013 - 17:40

""ನನ್ನ ವಿಶಯ ಬಿಡಿ ಸರ್... ಮೊದಲು ನಿಮ್ಮ ಸುದ್ದಿ ಹೇಳಿ.. ಮೊದಲಿಗೆ ನೀವು ಈ ಬಸ್ಸಲ್ಲಿ ಕಂಡೆ ಇಲ್ಲಾ...ಬೆಂಗಳೂರಿಗೆ ಹೊಸಬ್ರಾ ? ಯಾವ ಕಂಪನಿ ? ಯಾವ ಊರು ? ಏನ್ ಮಾಡ್ಕೊಂಡಿದ್ದಿರಿ.. ?" ಎಂದು ಶುರು ಹಚ್ಚಿ "

;())))))

ಸಖತ್ ಮಾರರೆ ..!!

ದಿನ ನಿತ್ಯ ಬಸ್ಸಲ್ಲಿ ಅಡ್ಡಾಡುವ ನಂಗೆ ಈ ತರಹದ್ದು ಮಾಮೂಲು ,, ಹಾಗೆಯೇ ನೀವ್ ಹೇಳಿದ ತರಹದ ಕೆಲ ಜನರನ್ನ (ನಿರ್ವಾಹಕರು ) ನಾ ಕಂಡಿರುವೆ ,ಬಸ್ಸಿಗಾಗ್ ಕಾಯ್ವಾಗ -ಬಸ್ಸು ಬಂದಾಗ -,ಬಸ್ಸು ಹತ್ತುವ ಮುಂಚೆ -ಹತ್ತಿದ ಮೇಲೆ -ಈ ಎಲ್ಲ ಹಂತಗಳಲ್ಲಿ ನಾವ್ ಪ್ರಯಾಣಿಕರಿಗೆ ಹಲ ಯೋಚನಾ ಲಹರಿಗಳು -ಆಶೆ (ಸೀಟ್ ಸಿಗಲಿ -ಖಾಲಿ ಇರಲಿ ಎಂದು ). ಆದರೆ ತುಂಬ ತುಂಬಿ ತುಳುಕುವ ಬಸ್ಸು ಹತ್ತಿ ಮಧ್ಯದಲ್ಲಿ ಸಿಕ್ಕಿಕೊಂಡು ಏದುಸುರು ಬಿಡುತ್ತ -ಆ ಸಮಯದಲ್ಲಿ ನಿರ್ವಾಹಕರು ಟಿಕೆಟ್ ಎಲ್ಲಿಗೆ ಎಂದಾಗ ರೇಗಿ ಬರದೆ ಇರದು -ಇನ್ನು ಕಾಲ ಮೇಲೆ ನಿಂತಿಲ್ಲ ಆಗಲೇ ಟಿಕೆಟ್ ಟ್ತಾ ..!!

ನಾ ಯಶವಂತಪುರದಲ್ಲಿದ್ದಾಗ ,೯೦ ರೂಟಿನ ಬಸ್ಸು ಮತ್ತು ಅದರ ನಿರ್ವಾಹಕ ನಂಗೆ ಅಚ್ಚು ಮೆಚ್ಹಾಗಿದ್ದರು .. ಕಾರಣ ಅದು ಶಾರ್ಟ್ ಕಟ್ನಲ್ಲಿ ಮೆಜೆಸ್ಟಿಕ್ಕಿಗೆ ಹೋಗೋ ಬರೋ ಬಸ್ಸು ಮತ್ತು ಅದರ ನಿರ್ವಾಹಕ (ಈಗಲೂ ಅವರೇ ಇರುವರು )ಮಾತಾಡುವ ಅಚ್ಹ ಸ್ವಚ್ಛ ಶುದ್ಧ ಕನ್ನಡ .. ಸುಮಾರು ೨ ವರೆ ವರ್ಷ ಹೋಗ್ವಾಗ ಬರ್ವಾಗ ನೋಡಿದೆ -ಒಂದಿನವೂ ಒಂದು ಆಂಗ್ಲ ಶಬ್ದ ಬಳಸಲಿಲ್ಲ , ಆಗಾಗ ಹಲ ನೆರೆ ರಾಜ್ಯದವರಿಗೆ -ಕೆಲವೊಮ್ಮೆ ನಮ್ಮ ಕಂಗ್ಲಿಷ್ ಕನ್ನಡಿಗರಿಗೆ ಸೌಮ್ಯವಾಗಿ ಬಯ್ದು ಕನ್ನಡ ಬಳಸುವ ಬಗ್ಗೆ ಹೇಳುತ್ತಿದ್ದರು . ಅವರ ಸಮವಸ್ತ್ರದ ಮೇಲೆ ಕನ್ನಡ ಎಂಬ ಒಂದು ಬಿಲ್ಲೆಯು ಇದೆ . .

ಬೀಪಿಓ ಮತ್ತಿತರ ಕಡೆ ಹಗಲು ರಾತ್ರಿ ಕೆಲಸ ಮಾಡಿ ಸುಸ್ತಾದ ಹುಡುಗ ಹುಡುಗಿಯರು ಈಗ ಸರಕಾರೀ ನೌಕರಿ ಎಂಬ ಕಾರಣಕ್ಕೆ ಮತ್ತು ತಾವ್ ವೋಲ್ವೋ ಎಸಿ ನಿರ್ವಾಹಕರೋ ಚಾಲಕ್ರೋ ಆಗುವುದು ಖಾತ್ರಿ ಎಂದು ಸರಕಾರಿ ಕೆಲ್ಸಕ್ಕೆ ಸೇರ್ತಿರುವರು .
ಇದೇ ತರಹದ ಬಸ್ಸುಗಳ ಪ್ರಯಾಣದ ಅಲ್ಲಿನ ಸನ್ನಿವೇಶದ ಬಗ್ಗೆ ಯಾರೋ ಒಬ್ಬರು ಈ ಹಿಂದೆ ಇಲ್ಲಿ ಬರೆದ ನೆನಪು ( ಏಸಿ ಬಸ್ಸಲ್ಲಿ ಕೂತವರ ಮನೋಭಾವ ಎಂದು ಏನೋ ) ..

ನಿಮ್ಮ ಅನುಭವ ಬರಹ ಓದಿ ಮುಸ್ಸಂಜೇಲಿ ಮನ ಮುದಗೊಂಡಿತು ..
ಆಗಾಗ ಈ ತರಹದ ಟಾನಿಕ್ -ಚೇತೋಹಾರಿ ಬರಹಗಳ ಅವಶ್ಯಕತೆ ಸಂಪದಕ್ಕಿದೆ ..
ಮುಂದಿನ ಭಾಗಗಳ ನಿರೀಕ್ಷ್ಯೆಯಲ್ಲಿ
ನನ್ನಿ
ಶುಭವಾಗಲಿ

\। /

Submitted by venkatb83 Wed, 11/27/2013 - 17:42

In reply to by venkatb83

ಓಹ್ ...!! ಅದೂ ಬರೆದದ್ದು ನೀವೇ ..!! ಇದರ ಮೊದಲ ಭಾಗ .>!! ಓದಿ ಬಹಳ ದಿನ ಆಗಿತ್ತು ನೋಡಿ ಅದ್ಕೆ ಅದು ಬರೆದದ್ದು ಯಾರೋ ಎಂದುಕೊಂಡೆ ,ಈಗ ನೋಡಿದರೆ ಅದು ಇದರ ಮೊದಲ ಭಾಗ ಬರೆದವರೂ ನೀವೇ ..!!
ಮುಂದಿನ ಭಾಗ ಶೀಘ್ರ ಬರಲಿ ಗುರುವೇ
ಶುಭವಾಗಲಿ
\।/