ಮಳೆಯೊಡನೆ ಬೆರೆತಾಗ

ಮಳೆಯೊಡನೆ ಬೆರೆತಾಗ

ಕವನ

ಮಳೆ ಹನಿಯು ಚಿಟಪಟನೆ ಧರೆಗೆ ಉರುಳುವಾಗ

ಹನಿಯೊಡನೆ ನೀ ಬೆರತು ಥಕಥಕನೆ ಕುಣಿಯುವಾಗ

ಸಾಲು ಸಾಲಾಗಿ ಓಡಿದಂತೆ ಜಿಂಕೆಮರಿಗಳು

ನಿನ್ನ ಕಾಲ ಬೆರಳ ತುದಿಯಂಚುಗಳು

 

ಬೆಳ್ಳಿ ಅಂಬರದಂತೆ ನಿನ್ನ ಮೈಯ ಬಣ್ಣ

ನಾಚುತ್ತ ತಲೆಯ ತಗ್ಗಿಸಿತು ಮಲೆನಾಡ ಬಣ್ಣ

ನಿನ್ನ ಬೆಳಿಯುಡುಗೆ ಅಮೃತದ ಶಿಲೆಯಂತೆ

ಹನಿಯೊಡನೆ ಸರಸದ ತನುಭಂಗಿ ಅಜಂತಾ ಕಲೆಯಂತೆ

ಎಂಥಾ ದ್ರುಶ್ಯವೋ! ಎಂಥಾ ಸ್ಪರ್ಶವೋ!

ಸ್ಪರ್ಶವೋ! ದ್ರುಶ್ಯವೋ! ಏನು ಹರುಷವೋ!

 

ಕೆತ್ತಿದ ಹಾಗಿದೆ ಕತ್ತಿಯಂಚಿನ ಹು‌ಬ್ಬು

ಯಾರೆ ಈ ಘಳಿಗೆ ನೋಡಿದರು ಅಲ್ಲೆ ತಬ್ಬಿಬ್ಬು

ಕಟ್ಟಿದ ಕೇಶದ ಹೆರಳು ಬಿಚ್ಚಿದರೆ

ಗರಿ ಇರದ ಹೆಣ್ಣು ನವಿಲೊಂದು ಗರಿ ಬಿಚ್ಚಿಕೊಂಡತೆ

ಎಂಥಾ ಆ ಕಾಮನೆ! ಎಂಥಾ ಆಕರ್ಷಣೆ!

ಆಕರ್ಷಣೆ! ಆ ಕಾಮನೆ! ಏನು ಘರ್ಷಣೆ!

 

ತುಟಿಯ ಅಂಚಿನಲಿ ಲಾಸ್ಯದ ಜೇನಿದೆ

ಈ ಭೂಮಿ ಬಯಲು ಮಂದಿರದಲ್ಲಿ ರಂಗ ಕಲಾವಿದೆ

ಗುಲಾಬಿ ಹಸ್ತದಲಿ ಮಳೆಹನಿ ಚೆಲ್ಲಾಟಪರಿ 

ಯೌವನವ ಸೆಳೆದೊಯ್ಯುವಂತಹ ಮಾಂತ್ರಿಕ ಲಹರಿ

ಎಂಥಾ ಸೊಬಗಿದು! ಎಂಥಾ ಮೆರುಗಿದು!

ಮೆರುಗಿದು!  ಸೊಬಗಿದು! ಏನು ಒಲವಿದು!

 

ಬಿರುಸಿನ ನೇತ್ರಗಳು ಚಂಚಲತೆ ಮೂಡಿಸಿದೆ

ಮನದಾಳದ ಸೀಮೆಗೆ ಉದ್ವೇಗದ ಕಿಚ್ಚು ಹಚ್ಚಿದೆ

ಎಷ್ಟು ಮುಕ್ಕಿದರು ಹಿಂಗದ ಹಸಿವಿದೆ

ಬಾಹ್ಯ ಪ್ರಪಂಚದ ಅರಿವೆ ಬಾರದಂತೆ ನೀನೆ ಮಾಡಿದೆ

ಎಂಥಾ ವಿಸ್ಮಯ! ಎಂಥಾ ತನ್ಮಯ! 

ತನ್ಮಯ! ವಿಸ್ಮಯ! ಏನು ರಮಣೀಯ!

 

ಹಾರೋಹಳ್ಳಿ ರವೀಂದ್ರ

 

ಚಿತ್ರ್

Comments