ನಾನು ಏಕಾಂಗಿಯಲ್ಲ!
ರಾತ್ರಿ ನಿದ್ದೆಗಣ್ಣಿನಲಿ, ರೆಕ್ಕೆಯ ಅಗಲಿಸಿ
ನಿನ್ನ ತಡಕಾಡಿ ತಬ್ಬಲು ಹವಣಿಸಿದೆ,
ರೆಕ್ಕೆ ಚಾಚಿದಷ್ಟು, ಬರಿಯ ನಿರ್ವಾಣ,
ಅಯ್ಯೋ ನೀನಿಲ್ಲ!
ತಟ್ಟನೆ ಎದ್ದು, ದಿಗ್ಗನೆ ಪಿಳಿಗುಟ್ಟಿದೆ,
ಅಯ್ಯೋ ನೀನು ನಿಜವಾಗಿಯೂ ಇಲ್ಲ!
ಓ ಭಗವಂತ, ಏನಾಗಿ ಹೋಯಿತು
ನನ್ನ ಮುದ್ದು ಮಗುವಿಗೆ,
ದಿಗ್ಬಂದನಕ್ಕೊಳಗಾಯಿತು ಮನ,
ಏನೊಂದು ತೋಚದು ನನಗೆ,
ಎಲ್ಲಿ! ಎಲ್ಲಿ! ನನ್ನ ಮುದ್ದು ನೀನೆಲ್ಲಿ ?
ಕಿರುಚಿದೆ, ಚೀರಿದೆ, ಗೋಳಾಡಿದೆ,
ಕೇಳುವವರಾರು? ಆ ಮೌನದ ಕೂಗನ್ನು,
ಜಗವೆಲ್ಲ ಮಲಗಿರಲು ನಾನೊಬ್ಬಳೇ ಎದ್ದೆ.
ನಿನ್ನ ಹುಡುಕಲು, ನಿನ್ನೊಳಗಿನ ನನ್ನ ಹುಡುಕಲು,
ಕಾಳನ್ನು ಹೆಕ್ಕಿ ತಂದು, ನಿನ್ನ ತುಟಿಗೊತ್ತಿದಾಗ,
ಅಲ್ಲಿಲ್ಲಿ ಚೆಲ್ಲಿ, ಚಿಂವ್-ಗುಟ್ಟಿದ್ದೆ ನೀನು,
ಮಳೆ ಜೋರಾಗಿ, ಗುಡುಗು ಸಿಡಿಲು ಅಬ್ಬರಿಸಲು
ಶಬ್ಧವ ಹುಡುಕುತ್ತಾ ಹೊರಟಿದ್ದೇ ನೀನು,
ಬೆರುಗುಗಣ್ಣಿನ ನಿನ್ನ ನೋಟ,
ತಬ್ಬಿ ಮುತ್ತಿಷ್ಟಟ್ಟು, ಹೆಚ್ಚುವ ನಿನ್ನ ಮೈಮಾಟ,
ನಿನ್ನ ಮೈಯ ರೋಮಗಳೇ ನನಗೆ ಹೂದೋಟ,
ಮೊಟ್ಟೆಯ ಒಡೆದು, ನೀ ಹೊರಬಂದಾಗ,
ನಾನು ಏಕಾಂಗಿಯಲ್ಲ! ಮೈ ಮರೆತು ನುಡಿದಿದ್ದೆ,
ನೆನಪಾಗುತ್ತಿದೆ! ನೆನಪೇ? ಮರೆತೆನೆ ನಾನಿನ್ನ,
ನಾ ನೋಡುವ ಪ್ರತಿಯೊಂದು, ನೀನಾಗಿರಲಿ,
ಅಯ್ಯೊ ಅದು ನೀನಲ್ಲ, ಅಯ್ಯೊ ಇದು ಅಲ್ಲ,
ನಮ್ಮ ಗೂಡಿನ ಸುತ್ತ, ನಮ್ಮ ಕೊಂಬೆಯ ಸುತ್ತ,
ನಮ್ಮ ಕಾಡಿನ ಪ್ರತಿ ಮರದ ಸುತ್ತ,
ನೀನಿಲ್ಲ, ನೀನು ಇಲ್ಲವೆ ಇಲ್ಲ,
ಇಲ್ಲ! ನಂಬಲಾಗುತ್ತಿಲ್ಲ!
ನಾನು ನಂಬುವುದಿಲ್ಲ,
ಎಲ್ಲಿ ಹೋದೆ ಮಗು,
ದುಷ್ಟರ ಪಾಲದೆಯ, ನೀನಾಗಿಯೆ ಬಿಟ್ಟುಹೊದೆಯಾ ?
ದುಷ್ಟರ ಪಾಲಾಗಲು, ಮಾನವರಾರು ಇಲ್ಲಿಲ್ಲ,,
ಹಾಗದರೆ,,,, ಅಯ್ಯೋ, ಕಲ್ಪಿಸಲಾಗದು,
**********************
ಹೌದು ಅದು ನೀನೆ, ವರ್ಷಗಳಾದರೇನು,
ಹೆತ್ತ ಕರುಳು, ನಿನ್ನ ಮರೆತೀತೆ ?
ನನ್ನ ಗುರುತು ಹಿಡಿಯಲು ನಿನಗಾಗದು,
ನಿನ್ನ ನೆನಪಲ್ಲೇ, ಯವ್ವನವ ಮುಗಿಸಿದೆ,
ಮುದಿತನದಲ್ಲಿ, ಆಸರೆ ಬೇಕೆನಿಸಿದೆ,
ಆದರೆ ನಿನ್ನ ಆಸರೆಯಲ್ಲ,
ತಾಯಿ ಇದ್ದು ತಬ್ಬಲಿ ನೀನು,
ನೀನಿದ್ದು ಬಂಜೆ ನಾನು,
ಆದರೆ ನಾನು ಏಕಾಂಗಿಯಲ್ಲ.
ಇನ್ನೂ ನಿನ್ನ ನೆನಪು ನನ್ನೊಂದಿಗೆ ಇದೆಯಲ್ಲ
-ನವೀನ್ ಜೀ ಕೇ
Comments
ಉ: ನಾನು ಏಕಾಂಗಿಯಲ್ಲ!
ನವೀನ್ ರವರೆ ಸು೦ದರ ಕವನ. ನೆನಪ ಕಡಲಲಿ ಏಕಾ೦ಗಿ ಯಾನದಲಿ ತಾಯಿಗೆ ನೋವೇ ಎಲ್ಲ. ಹ೦ಚಿಕೊ೦ಡದ್ದಕ್ಕೆ ಧನ್ಯವಾದಗಳು.
In reply to ಉ: ನಾನು ಏಕಾಂಗಿಯಲ್ಲ! by Soumya Bhat
ಉ: ನಾನು ಏಕಾಂಗಿಯಲ್ಲ!
ಸೌಮ್ಯಕ್ಕ,,, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ತಾಯಿ ಅಂದ್ರೆ ಹಾಗೆ ಅಲ್ವ, ಜೀವ ಹೋಗೋಷ್ಟು ನೋವಾದ್ರೂ,,,, ಸಹಿಸಿಕೊಂಡು ಹೆತ್ತ ಜೀವ ಚೆನ್ನಾಗಿರಲಿ ಅಂತ ಹಾರೈಸುತ್ತಾಳೆ,,,,,,, (ಆದರೆ ಇನ್ನು ಎರಡು ಸಾಲನ್ನ ಇದಕ್ಕೆ ಸೇರಿಸಬೇಕು ಅಂತ ಅಂದುಕೊಂಡಿದ್ದೆ,, ಆದರೆ ಕೊನೆ ಕ್ಷಣದಲ್ಲಿ ತೆಗೆದೇ,)
"ನಾಲ್ಕು ದಿನದ ಹಿಂದೆ ನೀನು ಹಾರಲು ಕಲಿತಾಗ,,
ನಾನು ಮೈಮರೆತು ಹೇಳಿದ್ದೆ, ನೀನು ಇನ್ನು ಎತ್ತರೆಕ್ಕೆ ಹಾರಬೇಕು"
ಆದರೆ,,,
ನೀನು ನನ್ನನೇ ಬಿಟ್ಟು ಹೋಗುವಷ್ಟು ದೂರ ಹಾರಿದೆಯಲ್ಲ"
(ಯಾಕೋ ಈ ಸಾಲುಗಳು ಬೇಡ ಅನಿಸಿತು,,,)
-- ನವೀನ್ ಜೀ ಕೇ
ಉ: ನಾನು ಏಕಾಂಗಿಯಲ್ಲ!
ನಿಜವಾಗಿಯೂ ಪ್ರೀತಿ(ಯಾವುದಾದರರೇನು)ಯ ಆಳವ ನಾನು ಇಲ್ಲಿ ಕಾನುತಿದ್ದೆ...ನಿಮಗೆ ಧನ್ಯವಾದಗಳು