'ಐ'ಗಳ ಪುರಾಣ - ಭಾಗ 03

'ಐ'ಗಳ ಪುರಾಣ - ಭಾಗ 03

('ಐ'-ಪೋನು_'ಐ'ಪ್ಯಾಡುಗಳ ಪಾಡಿನ ಹರಟೆ, ಪ್ರಬಂಧ, ಲೇಖನ, ಕಥನ..ಮುಂದುವರೆದಿದ್ದು -
.
ಮೊದಲ ಭಾಗ ಈ ಲಿಂಕಿನಲ್ಲಿದೆ :http://sampada.net/%E0%B2%90%E0%B2%97%E0%B2%B3-%E0%B2%AA%E0%B3%81%E0%B2%...
.
ಎರಡನೆ ಭಾಗ ಈ ಲಿಂಕಿನಲ್ಲಿದೆ : http://sampada.net/%E0%B2%90%E0%B2%97%E0%B2%B3-%E0%B2%AA%E0%B3%81%E0%B2%... )
.
[ ಹಿನ್ನಲೆ: ಕೆಲ ಘಟನೆ, ಘಟಿತಗಳು ಒಮ್ಮೆ ಸಂಭವಿಸಿದರೆ ಕಾಕತಾಳೀಯ ಅನ್ನಬಹುದು. ಮತ್ತೆ ಅದೆ ಕ್ರಮದಲ್ಲಿ ಹಾಗೆಯೆ ಮರುಕಳಿಸಿದರೆ ಕಾಕತಾಳೀಯ ಎನ್ನಲು ಕಷ್ಟ. ಅಂತಹ ಕಾಕತಾಳೀಯತೆಯ ಸಂಧರ್ಭದಲ್ಲಿ ಕೆಳೆಗೆ ಬಿದ್ದ ಐಪ್ಯಾಡೊಂದು ಮತ್ತೊಮ್ಮೆ ಕೆಳಗೆ ಬಿದ್ದು ತಾನೆ 'ರಿಪೇರಿ'ಯಾಗಿಬಿಡುವ ಅದ್ಭುತವೊಂದು ನಡೆದುಬಿಡುತ್ತದೆ - ಅದೂ ಎರಡು ಬಾರಿ. ಇದು ಮತ್ತೆಂದೂ ಮರುಕಳಿಸದು, ಆದಕಾರಣ ಮತ್ತೆ ಜೋಪಾನದಲ್ಲಿ ಕಾಪಾಡಬೇಕು ಎಂದುಕೊಳ್ಳುತ್ತಾನೆ ಲೇಖಕ - ಮುಂದೆ ಓದಿ ]
.
.
ಎರಡು ಬಾರಿಯ 'ಕಾಕತಾಳೀಯತೆಯೋ' ಅಥವಾ ಅದೃಷ್ಟದ ಬೆಂಬಲವೊ - ಐ ಪ್ಯಾಡು ಕುತ್ತಿನಿಂದ ಪಾರಾಗಿ ಉಳಿದ ಮೇಲೆ, ಅದನ್ನು ಬಲು ಎಚ್ಚರದಿಂದ , ಜತನದಿಂದ ಕಾಪಾಡಿಕೊಂಡು ಬರುತ್ತಿದ್ದೆ. ಯಾವುದೆ ಕಾರಣಕ್ಕೂ ಅದನ್ನು ಮತ್ತೆ ಯಾವುದೆ ಬಗೆಯ ಪ್ರಯೋಗಕ್ಕೊಳಪಡಿಸಿ ಪರೀಕ್ಷಿಸಿ ನೋಡಲು ನಾನು ಸಿದ್ದನಿರಲಿಲ್ಲ. ಕಾರಣ, ಈ ಮೊದಲೆ ಹೇಳಿದಂತೆ ಸರಳ - ನನ್ನೆಲ್ಲಾ ಇತ್ತೀಚಿನ ಬರಹಗಳೆಲ್ಲ ಡಿಜಿಟಲ್ ರೂಪದಲ್ಲಿ ಈ ಪ್ಯಾಡಿನ ಒಳಗೆ ಸಂಗ್ರಹವಾಗಿ ಕೂತುಬಿಟ್ಟಿತ್ತು. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಬರೆದ ಬರಹಗಳು, ಕಾವ್ಯಗಳು ಸಾಕಷ್ಟಿದ್ದ ಕಾರಣ ಅದನ್ನೆಲ್ಲಾ ಸರಿಯಾದ ರೂಪದಲ್ಲಿ ಒಂದೆಡೆ ಸಂಗ್ರಹಿಸಿ, ಸಂಸ್ಕರಿಸಿ, ಬೆನ್ನು ಕಾಪಿಗಳನ್ನು ತಯಾರಿಸಿ (ಬ್ಯಾಕಪ್) ಇಡಲು ಸಾಕಷ್ಟು ಸಮಯ ಹಿಡಿಸುತ್ತಿತ್ತು. ಹೀಗಾಗಿ, ಸದ್ಯಕ್ಕೆ ಐ ಪ್ಯಾಡಿನ ಸಂಗ್ರಹಕ್ಕೆ ಘಾಸಿಯಾಗದಂತೆ ತುಂಬಾ ಎಚ್ಚರದಿಂದ ನೋಡಿಕೊಳ್ಳುವುದು ಅತ್ಯಾವಶ್ಯಕವಾಗಿತ್ತು. ಹಿಂದಿನ ಎರಡು ಬಾರಿಯ ಅನುಭವಗಳಿನ್ನು ಬರಿ ಆಕಸ್ಮಿಕವೆಂದೆ ಮನ ಪರಿಗಣಿಸಿದ್ದ ಕಾರಣ, ಆ ವಿಧಾನದಲ್ಲಿ ಪರಿಹಾರ ಸಾಧ್ಯವೆಂದು ನಂಬಲು ನಾನೂ ತಯಾರಿರಲಿಲ್ಲ. ಅದು ಆಕಸ್ಮಿಕದ ಆಕಸ್ಮಿಕವೆಂದೆ ನನ್ನ ತೀರ್ಮಾನವಾಗಿತ್ತು - ಈ ಮೂರನೆಯ ಸಂಘಟನೆ ನಡೆಯುವ ತನಕ!
.
ಎರಡು ಬಾರಿಯ 'ಮುಗ್ಗರಿಸಿದ' ಅನುಭವವಾದ ಮೇಲೆ ನನ್ನ ಐ ಪ್ಯಾಡನ್ನು ಹೆಚ್ಚುಕಡಿಮೆ ಹಸುಗೂಸಿನ ಹಾಗೆ ನೋಡಿಕೊಳ್ಳುತ್ತಿದ್ದೆ - ತುಂಬಾ ಜೋಪಾನವಾಗಿ ಎತ್ತಿಕೊಳ್ಳುವುದು, ಯಾವಾಗಲೂ ಅದರ ಹೊದಿಕೆಯ ಸಮೇತವೆ ಕೈಗೆತ್ತಿಕೊಂಡು ಹಾಗೆ ವಾಪಸ್ಸಿಡುವುದು, ಬಳಸುವಾಗಲೂ ಅಷ್ಟೆ ಜತನ, ಜೋಪಾನದಿಂದ ಬಳಸುವುದು ಇತ್ಯಾದಿ. ಯಾವುದೆ ಕಾರಣಕ್ಕೂ ಅದನ್ನು 'ಮೂರಕ್ಕೆ ಮುಕ್ತಾಯ'ವಾಗಲಿಕ್ಕೆ ಬಿಡುವುದಿಲ್ಲವೆಂಬ ಘನ 'ಭೀಷ್ಮ ಪ್ರತಿಜ್ಞೆ' ಸದಾ ಜಾಗೃತವಾಗಿದ್ದು ಕಾಯುತ್ತಿತ್ತು - ಮೊದಲ 'ಗರ್ಲ್ ಫ್ರೆಂಡ್' ಯಾ ಪ್ರೇಮಿಯ ಕುರಿತು ಯಾವ ರೀತಿಯ ತೀವ್ರ 'ಪೊಸೆಸ್ಸಿವ್' ಭಾವನೆಯಿರುವುದೊ ಅದೆ ರೀತಿಯ ಭಾವೇಕಾಗ್ರತೆಯಲ್ಲಿ (ನಂತರದ ಫ್ರೆಂಡಿಣಿಯರಿಗೆ ಆ ಭಾವನೆ ಇರುವುದಿಲ್ಲವೆಂದಲ್ಲ ; ಮೊದಲಿನಷ್ಟು ಪ್ರಾಮಾಣಿಕವಾಗಿ, ತೀವ್ರವಾಗಿರುವುದಿಲ್ಲ ಅಷ್ಟೆ - ಎಂದು ಇಲ್ಲೊಬ್ಬರ ಉವಾಚ!).
.
ಸುಮಾರು ಮೂರು ನಾಲ್ಕು ತಿಂಗಳವರೆಗೆ ಹೀಗೆ ನಡೆಯಿತು 'ಬಾಣಂತಿ ಸೇವೆ'. ಅದೃಷ್ಟವಶಾತ್, ನನ್ನೆಣಿಕೆಯಂತೆ ಎಲ್ಲವೂ ಸುಗಮವಾಗಿಯೆ ಸಾಗುತ್ತಿತ್ತು. ಪ್ರತಿದಿನದ ಕನ್ನಡ ಸೇವೆ ಕಾವ್ಯ ರೂಪದಲ್ಲೊ, ಬರಹ ರೂಪದಲ್ಲೊ ಐಪ್ಯಾಡಿಗೆ ಸೇರುತ್ತಿತ್ತು. ಆದರೆ ಅಪ್ಪಿತಪ್ಪಿಯು ಕೆಳ ಬೀಳದಂತೆ ಎಚ್ಚರಿಕೆ ಮಾತ್ರ ಎಂದಿನ ಅದೆ ಪ್ರಜ್ಞಾಪೂರ್ಣ ಸ್ಥಿತಿಯಲ್ಲಿ ಕೆಲಸ ಮಾಡುತ್ತಿತ್ತು. ನನ್ನ ಅನವರತದ ಜಾಗೃತ ಪ್ರಜ್ಞೆ ಕೈಕೊಡದೆ ಕೆಲಸ ಮಾಡುತ್ತಿರುವುದಕ್ಕೆ ಒಳಗೊಳಗೆ ಖುಷಿಯೂ ಆಗುತ್ತಿತ್ತು. ಹೀಗೆ ಒಂದು ದಿನ ರಾತ್ರಿ ತುಂಬಾ ಹೊತ್ತಿನ ತನಕ ಏನೊ ಗೀಚುತ್ತಾ ಕುಳಿತವನಿಗೆ, ಬೆಳಿಗ್ಗೆ ಬೇಗನೆದ್ದು ಅಷ್ಟೊತ್ತಿಗೆ ಹೊರಡಬೇಕೆಂದು ತಟ್ಟನೆ ಜ್ಞಾನೋದಯವಾಗಿ, ಜತೆಗೆ ನಿದ್ದೆಯಿಂದ ಭಾರವಾಗಿ ಎಳೆಯುತ್ತಿದ್ದ ಕಣ್ಣುಗಳನ್ನು ನಿಯಂತ್ರಿಸಲಾಗದೆ, ಐ ಪ್ಯಾಡನ್ನು ಮುಚ್ಚಿ, ಹೊದಿಕೆಯ ಸಮೇತ ಅದನ್ನಿಡುವ ಮತ್ತೊಂದು ಚೀಲಕ್ಕೆ ಸೇರಿಸಿ, ಬೆಳಿಗ್ಗೆ ಅದರ ಮಾಮೂಲು ಜಾಗಕ್ಕೆತ್ತಿಟ್ಟರಾಯ್ತೆಂದು , ಮಲಗುವ ಮಂಚದ ಪಕ್ಕದಲ್ಲಿದ್ದ ಸ್ಟೂಲೊಂದರ ಮೇಲಿರಿಸಿ ಮಲಗಿಬಿಟ್ಟೆ. ಆ ಚೀಲದ ಉದ್ದ ನೇತಾಡುವ ಭಾಗ, ನೇತು ಬಿದ್ದ ಜಡೆಯಂತೆ ಸ್ಟೂಲಿನ ಒಂದು ಬದಿಗೆ ಹಾಸಿಕೊಂಡಿದ್ದರೂ ನಿದ್ದೆಯ ಮಂಪರಿನ ಹೊಸ್ತಿಲಲ್ಲಿ ಅದು ಗಮನಕ್ಕೆ ಬರಲಿಲ್ಲ. ಮಲಗಿದ ಕೆಲವೆ ಕ್ಷಣಗಳಲ್ಲಿ ನಿದ್ರಾದೇವಿಯ ವಶವಾಗಿಹೋಗಿತ್ತು ಬಳಲಿದ್ದ ದೇಹ. 
.
ಕಾಕತಾಳೀಯತೆಯಲ್ಲಿ ಅಷ್ಟಾಗಿ ಗಾಢ ನಂಬಿಕೆಯಿರದ ನನ್ನನ್ನು ಆ ದಿನ ಒಂದು ಕೈ ನೋಡಿಯೆ ಬಿಡಬೇಕೆಂದುಕೊಂಡಿತ್ತೇನೊ...? 'ಮರ್ಫಿ' ಕೈ ಕೊಡುವುದು ಅದನ್ನು ನಿರೀಕ್ಷಿಸದ ಹೊತ್ತಿನಲ್ಲೆ ಎನ್ನುತ್ತಾರೆ. ಅದು ಆ ರಾತ್ರಿ ನಿಜವಾಗಿ ಹೋಗಬೇಕೆ? ಅದಾವುದೊ ಮಾಯದಲ್ಲಿ ಸ್ಟೂಲಿನ ಬದಿಗೆ ತೂಗಾಡುತ್ತಿದ್ದ ಐಪ್ಯಾಡ್ ಚೀಲದ ನೇತುಹಾಕಿಕೊಳ್ಳುವ ಪಟ್ಟಿ ಸ್ಟೂಲಿನ ಒಂದು ಕಾಲಿನ ಬದಿಗೆ ಒಂದು ರೀತಿ ಹಾರದಂತೆ ಲಘುವಾಗಿ ಕೊಕ್ಕೆ ಹಾಕಿಕೊಂಡುಬಿಟ್ಟಿತ್ತೆಂದು ಕಾಣುತ್ತದೆ. ನಾನು ಎಂದಿನಂತೆ ಎದ್ದಾಗ ನಾನು ಏಳುವ ವಿರುದ್ದ ದಿಕ್ಕಿನಲ್ಲಿದ್ದ ಆ ಪಟ್ಟಿ ಕಣ್ಣಿಗೆ ತಂತಾನೆ ಗೋಚರವಾಗುವಂತಿರಲಿಲ್ಲ. ಅದೂ ಅಲ್ಲದೆ, ರಾತ್ರಿ ಐ ಪ್ಯಾಡಿನ ಬ್ಯಾಗನ್ನು ಸ್ಟೂಲಿನ ಮೇಲಿಟ್ಟಿದ್ದೆ ಮರೆತು ಹೋಗಿತ್ತು. ಹೀಗಾಗಿ ಬೆಳಿಗ್ಗೆ ಎದ್ದಾಗ ರಾತ್ರಿ ನೀರಿಡದೆ ಮಲಗಿದ್ದನ್ನೂ ಮರೆತು, ಮಾಮೂಲಿ ಅಭ್ಯಾಸದಂತೆ ಸ್ಟೂಲಿನ ಮೇಲಿದ್ದ ನೀರನ್ನು ತೆಗೆದುಕೊಳ್ಳುವ ಉದ್ದೇಶದಿಂದ ಸ್ಟೂಲನ್ನು ತುಸು ಹತ್ತಿರಕ್ಕೆ ಎಳೆದುಕೊಂಡೆ. ಹಾಗೆ ಎಳೆದುಕೊಂಡ ಲಾಘವದಲ್ಲಿ, ಜೋತಾಡುತ್ತಿದ್ದ ಚೀಲದ ಹೆಗಲ ಪಟ್ಟಿ, ಹತ್ತಿರವಿದ್ದ ಸ್ಟೂಲಿನ ಕಾಲಿಗೆ ತೊಡರಿಕೊಂಡು, ಅದರ ಮೇಲೆ ಸ್ಟೂಲಿನ ಕಾಲು ಸ್ವಸ್ಥವಾಗಿ ತಳವೂರಿ ನಿಂತುಬಿಟ್ಟಿತು. 
.
ಬರಿ ಅಷ್ಟೆ ಆಗಿದ್ದಿದ್ದರೆ, ಈ ಮೂರನೆಯ ಪ್ರಕರಣ ಬರೆಯುವ ಪ್ರಸಂಗವೆ ಬರುತ್ತಿರಲಿಲ್ಲವೋ ಏನೊ...ಆದರೆ, 'ತಾನೊಂದು ಬಗೆದರೆ ದೈವವೊಂದು ಬಗೆಯಿತು..' ಅನ್ನುವುದು ಬರಿ ಹುಲುಮನುಜರಿಗೆ ಮಾತ್ರವಲ್ಲದೆ, ಈಗಿನ ಜಮಾನದ ನಿರ್ಜೀವ 'ಗ್ಯಾಡ್ಜೆಟ್ಟು'ಗಳಿಗೂ ಅನ್ವಯಿಸುತ್ತದೆಂದು ಕಾಣುತ್ತದೆ. ಯಾವಾಗ, ಚೀಲದ ಹೆಗಲಿನ ಪಟ್ಟಿ ಸ್ಟೂಲಿನಡಿ ಸಿಕ್ಕಿಕೊಂಡಿತೊ, ಅದೇ ಹೊತ್ತಿನಲ್ಲಿ ಸ್ಟೂಲನ್ನು ಎಳೆದ ಕಾರಣದಿಂದ ಸ್ವಲ್ಪ ಮುಂದೆ ಜರುಗಿತ್ತಷ್ಟೆ? ಮಾಮೂಲಿ ಸಂಘಟನೆಯಲ್ಲಾಗಿದ್ದರೆ ಜಡತ್ವದ ಕಾರಣದಿಂದ, ಸ್ಟೂಲಿನ ಜತೆ ಐಪ್ಯಾಡಿನ ಬ್ಯಾಗು ಸರಿಯುತ್ತಿದ್ದುದರಿಂದ ಅದು ಕೆಳಗೆ ಬೀಳದೆ ಸ್ಟೂಲಿನ ಮೇಲೆ ಆರಾಮವಾಗಿ ಕೂತಿರುತ್ತಿತ್ತು. ಆದರಿಲ್ಲಿ ಕೊಕ್ಕೆಯಂತೆ ಕೆಳಗೆ ಸಿಕ್ಕಿಕೊಂಡ ಪಟ್ಟಿಯಿಂದಾಗಿ, ಸ್ಟೂಲು ಚಲಿಸಿದಾಗ ಒತ್ತಿ ಹಿಡಿದಿದ್ದ ಪಟ್ಟಿಯೆ ಬ್ಯಾಗನ್ನು ಮುಂದೆ ಚಲಿಸಬಿಡದೆ ಹಿಂದಕ್ಕೆಳೆದ ಪರಿಣಾಮವಾಗಿ, ಸಮತೋಲನ ತಪ್ಪಿ ಆ ಬ್ಯಾಗು ಸ್ಟೂಲಿನ ಮೇಲಿಂದ ಐ ಪ್ಯಾಡಿನ ಸಮೇತ 'ದೊಪ್ಪನೆ' ಸದ್ದು ಮಾಡುತ್ತ ಜಾರಿ, ಕುಪ್ಪಳಿಸಿ ನೆಲದ ಮೇಲೆ ಕುಕ್ಕರಿಸಿಬಿಟ್ಟಿತು!
.
ಯಾವಾಗ 'ಟಪ್ಪನೆ' ಬಿದ್ದ ಸದ್ದಾಯಿತೊ, ನನ್ನೆಲ್ಲಾ ಅಂತರಂಗಿಕ ಇಂದ್ರೀಯಗಳೆಲ್ಲ ತಟ್ಟನೆ ಜಾಗೃತವಾಗಿ, ಇದ್ದಬದ್ದ ನಿದ್ದೆಯ ಮಂಪರನೆಲ್ಲ ಒದ್ದೊಡಿಸಿ , 'ಅಯ್ಯೊ! ದೇವರೆ!!' ಎಂದುದ್ಗರಿಸುತ್ತ ದಢಕ್ಕನೆ ಹಾಸಿಗೆಯ ಮೇಲೆದ್ದು ಕುಳಿತೆ. ಹಾಗೆ ಕೂರುತ್ತಲೆ ಮೊದಲು ಕಣ್ಣು ಹಾಯ್ದದ್ದು ಸ್ಟೂಲಿನ ಮೇಲಿನ ಐಪ್ಯಾಡಿನತ್ತ. ಅಲ್ಲೆಲ್ಲಿದೆ ಐ ಪ್ಯಾಡು? ಎದೆ ಧಸಕ್ಕೆಂದಿತ್ತು, ಖಾಲಿ ಜಾಗವನ್ನು ಕಂಡಾಗ (ನೋ, ನೋ..ನಾಟ್ ಎಗೈನ್ ಪ್ಲೀಸ್...). ಹೆದರೆದರುತ್ತಲೆ, ಸ್ಟೂಲಿನ ಹಿಂಭಾಗದತ್ತ ದೃಷ್ಟಿ ಹರಿಸಿದರೆ ಅಲ್ಲಿ ನೆಲದ ಮೇಲೆ ಕೆದರಿದ ಜಡೆಯ ಕೈಕೆಯಂತೆ ಬಿದ್ದುಕೊಂಡಿದ್ದ ಐಪ್ಯಾಡಿನ ಅವಸ್ಥೆ ಕಣ್ಣಿಗೆ ಬಿತ್ತು. ಸಾಮಾನ್ಯವಾಗಿ ದೇವರಿಗೆ ನಮಸ್ಕರಿಸಲು ಲೆಕ್ಕಾಚಾರ ಹಾಕುವ ನಾನು, ಅಂದು ಮಾತ್ರ (ಕಳೆದ ಬಾರಿಯಂತೆ) ಎಲ್ಲಾ ಮತದ, ಎಲ್ಲಾ ದೇವತೆಗಳನ್ನು - ದೇವತೆ, ಉಪದೇವತೆ ಸಮೇತ - ಎಲ್ಲರಿಗೂ ಒಂದೆ ಸಾರಿ ಮೊರೆಯಿಟ್ಟೆ, 'ಭಗವಂತ ಈ ಬಾರಿ ಹಿಂದಿನ ಬಾರಿಯ ಹಾಗಾಗದಿರಲಿ' . ಹಾಗೆ ಮೊರೆಯಿಕ್ಕುತಲೆ, ಐಪ್ಯಾಡನ್ನು ಕೈಗೆತ್ತಿಕೊಂಡೆ ತೆರೆದೆ ಪರದೆಯ ಬಣ್ಣದ ಅವತಾರ ಇದ್ದ ಹಾಗೆ ಇರಲಪ್ಪ ಎಂದವಣಿಸುತ್ತ...
.
'ನೀರೊಳಿರ್ದ್ದು ಬೆಮರ್ದಂ...' ಅನ್ನುವಂತೆ, ಆ ಬೆಳಗಿನ ತಂಪಿನಲ್ಲೂ ಹಣೆಯಿಂದ ಹನಿಯುತ್ತಿದ್ದ ಬೆವರಮಣಿ, ಐಪ್ಯಾಡನ್ನು 'ಆನ್' ಮಾಡುತ್ತಿದ್ದಂತೆ ಅಲ್ಲಿ ಕಂಡ ಪರದೆಯ ಬಣ್ಣದಂತೆ ವಿವರ್ಣವಾಗಿ, ಧಾರಾಕಾರ ಬೆವರ ಮಳೆಯಾಗಿಹೋಯ್ತು.. ನಾನೂ ಏನಾಗಬಾರದೆಂದು ಮುವತ್ಮೂರು ಕೋಟಿ 'ಪ್ಲಸ್' ದೇವತೆಗಳಿಗೆ ಮೊರೆಯಿಡುತ್ತಿದ್ದೇನೊ - ಅದೇ ಆಗಿ ಹೋಗಿತ್ತು :-( ಆ ಎತ್ತರದಿಂದ ಬಿದ್ದ ರಭಸಕ್ಕೆ ಒಳಗಿನ ಯಾವ 'ಎಲೆಕ್ಟ್ರಾನಿಕ್ ಮಾಂಸಖಂಡ'ದಲ್ಲಿ ಏನು ಏರುಪೇರಾಯಿತೊ, ಯಾವ 'ವಿದ್ಯುನ್ಮಾನ ರಕ್ತ ಸರ್ಕ್ಯೂಟ್' ಕುಲಗೆಟ್ಟು ಕಂಗೆಡಿಸಿತ್ತೊ - ಮಾಮೂಲಿನ ಸ್ವಾಭಾವಿಕ ಬಣ್ಣಗಳೆಲ್ಲ ಮಾಯವಾಗಿ, ಕಲಸಿ ರಾಡಿಯಾದ 'ಟರ್ಮಿನೇಟರ್ ಹಸಿರು' ಬಣ್ಣಕ್ಕೆ ತಿರುಗಿಬಿಟ್ಟಿತ್ತು. ಅದರಲ್ಲೆ ಯಾವುದಾದರೂ 'ಆಪ್ಸ್' ತೆರೆದರೆ ಅದರ ಒಳಗಿರುವುದೆಲ್ಲವನ್ನು ಓದಲೊ, ನೋಡಲೋ ಸಾಧ್ಯವೆ ಆಗದಂತೆ ಪರದೆಯ ತುಂಬೆಲ್ಲ ಅಲ್ಲಲ್ಲಿ ತೊಪ್ಪೆ ಹಾಕಿದ ಹಾಗೆ ಕಾಮನ ಬಿಲ್ಲಿನ ಕಲಸನ್ನದ ವರ್ಣ ವೈವಿಧ್ಯ... ಕಲಸನ್ನವಿಲ್ಲದ ಎಡೆಯಲ್ಲಿ ತೆಳು ಹಸಿರು ಪಾಚಿಯ ಚೆಲ್ಲಾಡಿದ ಹೊದಿಕೆಯ ಕಲೆಗಳು. ಇವೆರಡು ಇಲ್ಲದ ಕಡೆ ಇರುವುದನ್ನು ಓದಲೊ, ನೋಡಲೊ ಆಗುತ್ತಿದ್ದರೂ, ಪ್ರಯೋಜನವೇನು? ಬರಿ ಸ್ಕ್ರೀನನ ಭಾಗಾಂಶವಷ್ಟೆ ಕಾಣಿಸಿ, ಉಳಿದದ್ದೆಲ್ಲ ಒಟ್ಟಾರೆಯಾಗಿ ನೋಡಿದರೆ ಮತ್ತೊಂದು 'ನವ್ಯ ಕಲೆಯ ನಮೂನೆ'ಯ ಹಾಗೆ ಕಾಣಿಸುತ್ತಿತ್ತು. 
.
ಮೊದಲೆರಡು ಬಾರಿ ಈ ರೀತಿಯಾದಾಗ ಕನಿಷ್ಠ ನಾನು ಬರೆದಿಡುತ್ತ ಇದ್ದ ಕವನ, ಬರಹಗಳಾದರೂ ಓದಲಾಗುತ್ತಿತ್ತು - ಯಾಕೆಂದರೆ, ನೋಟ್ ಪ್ಯಾಡಿನ ಬಿಳಿಯ ಬಣ್ಣದ ಮುಂದೆ ಈ ಬಣ್ಣದ ಕಾಮಣ್ಣನ ಆಟ ನಡೆಯುತ್ತಿರಲಿಲ್ಲ. ಆದರೆ ಈ ಬಾರಿ ಅದೂ ಖೋತ.. ಅಲ್ಲಿಗೆ ಈ ಐ ಪ್ಯಾಡಿನ ಕಥೆ ಮುಗಿದ ಹಾಗೆಯೆ, ಇನ್ನು...ಬೇರೆ ದಾರಿಯೆ ಇಲ್ಲ..ಈಗ ಹೊಸ ಐಪ್ಯಾಡು ಖರೀದಿಸಲೆಬೇಕೆಂದು ಕಾಣುತ್ತದೆ ಮತ್ತೊಂದು ಸಾವಿರ ಡಾಲರ್ ಕಕ್ಕಿ... ನಂತರ ಹೇಗಾದರೂ ಡೇಟಾ ಟ್ರಾನ್ಸಫರ್ ಮಾಡಿಕೊಂಡು ಅಲ್ಲೆ ಕೆಲಸ ಮುಂದುವರೆಸಬೇಕೇನೊ..ಹೀಗೆಲ್ಲ ಚಿಂತಿಸುತ್ತಲೆ, ಒಂದೆರೆಡು ಬಾರಿ ಐಪ್ಯಾಡು ರೀಸ್ಟಾರ್ಟು ಕೂಡ ಮಾಡಿ ನೋಡಿದೆ. ಸುಖವಿಲ್ಲಾ..ಅದೆ ಫಲಿತಾಂಶ. ಹಿಂದಿನ ಬಾರಿಯಂತೆ ಏನಾದರೂ ಜಾದು ನಡೆಯಬಹುದೇನೊ ಎನ್ನುವ ಹುನ್ನಾರದಲ್ಲಿ, ಐದು ಹತ್ತು ಇಂಚಿನೆತ್ತರದಿಂದ ಹಾಸಿಗೆಯ ಮೇಲೆ ಮೆಲುವಾಗಿ ಎತ್ತಿ ಹಾಕಿದೆ (ಎತ್ತರದಿಂದ ಬೀಳಿಸುವ ಧೈರ್ಯವಿರಲಿಲ್ಲವಲ್ಲಾ!). ಏನೂ ಮಾಡಿದರೂ ಅಷ್ಟೆ - ಉಭ ಎನ್ನಲಿಲ್ಲ, ಶುಭ ಎನ್ನಲಿಲ್ಲ. ಅಲ್ಲಿಗೆ ಈ ಬಾರಿ ಐಪ್ಯಾಡ್ ಪಾಡು ನಾಯಿಪಾಡೆ, ಎಲ್ಲಾ ಪಡ್ಚ ಅಂದುಕೊಳ್ಳುತ್ತಲೆ ಐಪ್ಯಾಡನ್ನು ಜತನದಿಂದಲೆ ಮುಚ್ಚಿಟ್ಟು ನಿರಾಸೆಯಿಂದ ಆಫೀಸಿಗೆ ಹೊರಡಲು ಮೇಲೆದ್ದೆ.
.
ಆ ದಿನ ಆಫೀಸಿನಲ್ಲಿಯೂ ಅದೆ ಚಿಂತೆ - ಐಪ್ಯಾಡಿನದಲ್ಲಾ, ಆದರೊಳಗಿರುವ ಮಾಹಿತಿ, ಬರಹಗಳದ್ದು. ಅದೊಂದು ಮಾತ್ರ ಹಾಳಾಗದಿರಲಪ್ಪ ಎಂದು ಕೈಕೊಟ್ಟ ಅದೇ ದೇವರುಗಳಿಗೆ ಪ್ರಾರ್ಥಿಸುತ್ತಲೆ ದಿನ ಕಳೆದೆ (ಬ್ಯಾಕಪ್ ಮಾಡಿ ತುಸು ದಿನಗಳಾಗಿದ್ದ ಕಾರಣ ಈ ಅತಂಕ). ಅದೂ ಇದೂ ಸಹೋದ್ಯೋಗಿಗಳೊಬ್ಬರ ಜತೆ ಮಾತನಾಡುತ್ತ ಇದ್ದಾಗ "ಯಾಕೊ ಮಂಕಾಗಿರುವಂತಿದೆಯಲ್ಲಾ ಇವತ್ತು ?" ಎಂದು ಕೇಳಿದರು. ಕೇಳಿದ್ದೆ ಸಾಕೆನ್ನುವಂತೆ ಲಂಚಿನಲ್ಲಿ ನಡೆದಿದ್ದೆಲ್ಲವನ್ನು ಹಂಚಿಕೊಂಡೆ. ಅವರಿಗೆ ಹಿಂದಿನ ಎರಡು ಬಾರಿಯ ಕಥೆ ಗೊತ್ತಿದ್ದರಿಂದ ಮೂರಕ್ಕೆ ಮುಕ್ತಾಯವಾದ ಬಗ್ಗೆ ಕೇಳಿ ಬಿದ್ದು ಬಿದ್ದು ನಕ್ಕರು. ಆ ನಗುವಿನ ನಡುವೆಯೆ,
.
" ಹೇಗೂ ಕೆಟ್ಟಂತೂ ಹೋಯ್ತು..ಹೋದ ಸಾರಿಯ ಹಾಗೆ ಎತ್ತಿ ಹಾಕಿ ಬೀಳಿಸಿ ನೋಡಲಿಲ್ಲವೆ?" ಎಂದರು ಛೇಡಿಸುವ ದನಿಯಲ್ಲಿ.
.
"ನಾನು ಹೋದಬಾರಿಯೆ ಹೇಳಿದೆನಲ್ಲಾ? ಅದೇನಾದರೂ ಸರಿ ಮತ್ತೊಮ್ಮೆ ಎತ್ತಿ ಹಾಕಿ ಪರೀಕ್ಷಿಸುವ ಮೂರ್ಖತನಕ್ಕಿಳಿಯುವುದಿಲ್ಲಾ, ಎಂದು..."
.
"ಹಾಗಲ್ಲ ವಿಷಯ...ಹೇಗಿದ್ದರೂ ಬಿದ್ದು ಹಾಳಾಗಿದೆ ಏನ್ನುತ್ತಿಯಾ..."
.
"ಹೌದು...?"
.
"ಮೊದಲೆರಡು ಬಾರಿಗಿಂತ ಹೆಚ್ಚು 'ಖರಾಬ್' ಆಗಿದೆಯೆಂದು ಬೇರೆ ಹೇಳುತ್ತಿದ್ದಿಯಾ"
.
"ಸರಿ..ಅದಕ್ಕೆ?"
.
"ಇಷ್ಟೆಲ್ಲಾ ಅಲ್ಲದೆ, ಹೊಸದನ್ನು ಕೊಳ್ಳುವ ಕುರಿತೂ ಯೋಚಿಸುತ್ತಿದ್ದೀಯಾ...."
.
"ಅದೆಲ್ಲ ಸರಿಯೆ ದೊರೆ, ಆದರೆ ಈ 'ಮೆಜೆಸ್ಟಿಕ್ ಸುತ್ತಿ ರೈಲ್ವೆ ಸ್ಟೇಷನ್' ಯಾಕೆ? ನೇರಾ ಟಾಪಿಕ್ಕಿಗೆ ಬರಬಾರದೆ?"
.
" ಅದು 'ಕೊಂಕಣ ಸುತ್ತಿ ಮೈಲಾರ ಯಾಕೆ' ಅಂತಲ್ವ ಗಾದೆ?"
.
" ಪದ ಬೇರೆ ಆದ್ರೂ ಅರ್ಥ ಒಂದೆ ಹೇಳಪ್ಪಾ..'ಅಡ್ವಾನಿ ಸುತ್ತಿ ಮೋದಿ ಯಾಕೆ?' , 'ಮನಮೋಹನ್ ಸುತ್ತಿ ರಾಹುಲ್ ಯಾಕೆ' ಅಂತೆಲ್ಲ ಕೇಳಿದ್ರೆ ಕಾಂಟ್ರೊವರ್ಸಿಯಾಗುತ್ತೆ ಅಂತ ಸಿಂಪಲ್ಲಾಗಿ ಹೇಳ್ದೆ ಅಷ್ಟೆ.."
.
"ಸರಿ ಹಾಳಾಗ್ಲಿ ಬಿಡು...ನಾನು ಹೇಳಿದ್ದರ ಅರ್ಥ ಏನಂದ್ರೆ - ಹೇಗೂ ಈ ಐಪ್ಯಾಡು ಮುಗಿದ ಕಥೆ..ಮೂಲೆಗೆಸೆಯೋಕ್ ಮೊದಲು ಒಂದು ಸಾರಿ ಎತ್ತಾಕಿಯೂ ನೋಡಿಬಿಡು..ಕೆಲಸ ಮಾಡುದ್ರೆ ಮಾಡ್ಲಿ, ಇಲ್ಲಾಂದ್ರೂ ನಷ್ಟವೇನೂ ಇರೋದಿಲ್ಲವಲ್ಲಾ..?ಯು ಕ್ಯಾನ್ ಜಸ್ಟ್ ಗೀವ್ ಎ ಟ್ರೈ..."
.
ತಮಾಷೆಗ್ಹೇಳಿದರೊ, ನಿಜಕ್ಕೆ ನುಡಿದರೊ - ಹೌದಲ್ಲ , ಪ್ರಯತ್ನಿಸಿ ನೋಡಬಹುದಲ್ಲಾ ಅನಿಸಿತು.  ಆ ಸಂವಾದ ಅಲ್ಲಿಗೆ ಮುಗಿದರೂ, ಅದರ ಗುಂಗು ತಲೆಯಲ್ಲಿ ಸುತ್ತುತ್ತಲೆ ಇತ್ತು, ಸಂಜೆ ಮನೆ ಸೇರುವತನಕವು.
.
ಅದೇ ಗುಂಗಿನಲ್ಲಿ ಸಂಜೆ ಮನೆಗೆ ಬಂದಾಗ, 'ಸರಿ, ಒಮ್ಮೆ ಪ್ರಯತ್ನಿಸಿಯೆ ಬಿಡೋಣವೆ? ಅನಿಸಿ ಐಪ್ಯಾಡ್ ಕೈಗೆತ್ತಿಕೊಂಡೆ. ಒಂದೆಡೆ 'ಡವಡವ' - ಈ ಹುಚ್ಚಾಟದಲ್ಲಿ ಸರಿಯಿರುವ ಡೇಟಾ ಎಕ್ಕುಡಿಸಿಬಿಟ್ಟರೆ ಎಂದು. ಮತ್ತೊಂದೆಡೆ, ಡೇಟಾಗೇನೂ ಆಗಿರಲಾರದು..ಬಣ್ಣ ಮಾತ್ರ ತಾನೆ ಕಳುವಾಗಿರುವುದು ಎಂಬ ಅರೆಬರೆ ಆತ್ಮವಿಶ್ವಾಸ. ಕೊನೆಗೆ ಎರಡತಿರೇಖಗಳ ನಡುವಿನ ಸುವರ್ಣ ಮಾಧ್ಯಮವೊಂದನ್ನು ಹಿಡಿಯುತ್ತಾ, 'ಎತ್ತಿ ಹಾಕೇನೊ ಪರೀಕ್ಷಿಸಿಬಿಡುವುದು, ಆದರೆ ತುಸು ಕಡಿಮೆ ಎತ್ತರದಿಂದ ಮೆಲುವಾಗಿ ಜಾರಿಸಿ ನೋಡುವುದು' ಎಂದು ನಿರ್ಧರಿಸಿ ಕಾರ್ಯೋನ್ಮುಖನಾದೆ. ಅದೇ ಹೊತ್ತಿಗೆ ಅಲ್ಲೆ ಅಡ್ಡಾಡುತ್ತಿದ ಸುಕುಮಾರ ಪುತ್ರ ಒಳಗಿಣುಕಿ ನಾನೇನು ಮಾಡುತ್ತಿರುವೆನೆಂದು ನೋಡುತ್ತ, "ಯಾಕಪ್ಪಾ ಮತ್ತೆ ಕೆಟ್ಟು ಹೋಯ್ತಾ?" ಎಂದ
.
" ಹೌದು ಕಂದ..."
.
" ಸರಿ ಮತ್ತೆ ಹೋದ ಸಾರಿಯ ಹಾಗೆ ಮೇಲಿಂದ ಬೀಳಿಸಿಬಿಡೋಣ, ಸರಿಯಾಗಿಬಿಡುತ್ತದೆ.." 
.
ಒಬ್ಬರ ಬದಲಿಗೆ ಇಬ್ಬರು ಈ 'ಡ್ರಾಪ್ ಟೆಸ್ಟ್' ವಿಧಾನವನ್ನೆ ಅನುಮೋದಿಸಿದಾಗ ನನ್ನ ಧೈರ್ಯ ಇನ್ನು ಹೆಚ್ಚಾಯ್ತು. ಇಂತಹ ಎಡಬಿಡಂಗಿ ಪ್ರಯೋಗಗಳಲ್ಲೆ ಯಾವಾಗಲೂ ಕಾಲದೂಡುವ ಮಗರಾಯ, ಆಹ್ವಾನಕ್ಕೂ ಕಾಯದೆ ಕೈ ಜತೆಗೂಡಿಸಿದ. ಅಂದುಕೊಂಡಿದ್ದಂತೆ ಪುಟ್ಟ ಒಂದಡಿ ಎತ್ತರದ ಸ್ಟೂಲೊಂದನ್ನು ಹುಡುಕಿ ಅದರ ಮೇಲೆ ಬ್ಯಾಗಿನ ಸಮೇತ ಐಪ್ಯಾಡಿರಿಸಿದೆವು. ಆಮೇಲೆ ಹುಷಾರಾಗಿ ತುಸುತುಸುವೆ ಬ್ಯಾಗನ್ನೆಳೆಯುತ್ತ ಮೆಲ್ಲನೆ ತುದಿಯತ್ತ ತಂದು ನಿಲ್ಲಿಸಿದೆವು. ಆ ನಂತರ ಅತಿ ಎಚ್ಚರಿಕೆಯಿಂದ ಇನ್ನೂ ನಿಧಾನಗತಿಯಲ್ಲಿ ಎಳೆದು ಹೆಜ್ಜೆಯಿಕ್ಕಿಸಲಾರಂಬಿಸಿದೆವು. ಹೀಗೆ ಎತ್ತರವನ್ನೆ ತುಸು ಆಚೀಚೆ ಆಡಿಸಿ ಬೀಳಿಸಿದರೆ, ಅದು ಸರಿಯಾಗಬಹುದೆಂಬ ಆಶಯ. ಮಗನ ತುಡುಗು ಬುದ್ದಿಯ ಅರಿವಿದ್ದ ನಾನು ಅವನಿಗೆ ಎಳೆಯಲು ಬಿಡದೆ, ಬರಿ ಇತರೆ ಕೆಲಸದಲ್ಲಿ ಸಹಾಯ ಮಾಡಲು ಹೇಳಿದ್ದೆ. 
.
ಮೊದಲ ಪ್ರಯೋಗ ಶುರುವಾಯ್ತು. ಐ ಪ್ಯಾಡನ್ನು ನಾನು ಸರಿಸುತ್ತಿದ್ದರೆ, ಅವನು ಅದು ಜಾರುವಾಗ ನಾಜೂಕಾಗಿ ಬೀಳುವಂತೆ ನೋಡಿಕೊಳ್ಳುವ ಜವಾಬ್ದಾರಿ...
.
" ಹೂಂ..ಈಗ ಎಳೆಯಪ್ಪ ನಿನ್ನ ಕಡೆಯಿಂದ.."
.
"ಜೋಪಾನ ಮಗನೆ, ಕೇರ್ಪುಲ್ ಆಗಿ ಬೀಳಬೇಕು ನಮ್ಮ ಹಳೆ ಕಾಲದದ ಹೀರೋಯಿನ್ನುಗಳ ತರ ನಯವಾಗಿ. ಹೊಸಕಾಲದವರ ತರ ಒರಟೊರಟಾಗಿ ಅಲ್ಲ. .."
.
" ಸರಿಯಪ್ಪ..ಸಾಯಿರಾ ಬಾನು ತರ ಸ್ಮೂಥಾಗಿ ಬೀಳ್ಸೋಣ...." 
.
'ಎಲಾ ಇವನಾ? ನನಗೆ ಸರಿಯಾಗಿ ಗೊತ್ತಿರದ ಹಳೆ ಹೆಸರೆಲ್ಲ ಇವನಿಗೆ ಚೆನ್ನಾಗಿ ತಿಳಿದಂತಿರುವುದಲ್ಲಾ' ಎಂದುಕೊಳ್ಳುತ್ತಲೆ, ಸರಿ ಮೊದಲು ಕೆಲಸ ಮುಗಿಯಲಿ ಆಮೇಲೆ ವಿಚಾರಿಸಿಕೊಳ್ಳುವ ಎಂದು ಪ್ರಸ್ತುತದತ್ತ ಗಮನ ಹರಿಸಿದೆ. 
.
'ಹುಷಾರು ಹುಷಾರು' ಎಂದುಕೊಂಡೆ ಮೆದುವಾಗಿ ಐಪ್ಯಾಡ ಸುತ್ತ ಕೈ ಹಾಕಿ  ಮೆಲುವಾಗಿ ಎಳೆದೆ. ಐಪ್ಯಾಡು ಜಾರೇನೊ ಬಿತ್ತು. ಆದರೆ ತೆಗೆದು ನೋಡಿದರೆ ಹೇಗಿತ್ತೊ ಹಾಗೆಯೆ ಇದೆ. ಅಂದರೆ ಮೊದಲ ಯತ್ನ ಸಫಲವಾಗಲಿಲ್ಲ.. ತುಸು ಬದಲಾವಣೆಯೊಂದಿಗೆ ಕೆಲವು ಬಾರಿ ಪುನರಾವರ್ತಿಸಿದ ಮೇಲೂ ಅದೆ  ಫಲಿತಾಂಶ.
.
"ಮಗನೆ,, ಒಂದು ಕೆಲಸ ಮಾಡೋಣ..ನಾವ್ಯಾಕೆ ಸ್ವಲ್ಪ ಸ್ವಲ್ಪವೆ ಎತ್ತರ ಜಾಸ್ತಿ ಮಾಡ್ತಾ ಟ್ರೈ ಮಾಡಬಾರದು? "
.
ಸರಿ , ಎರಡನೆ ಕಾಂಡವೂ ಅರಂಭ. ಆದರೆ ಫಲಿತ ಮಾತ್ರ ಅದೇ ರಾಗಾ, ಅದೇ ಹಾಡು!
.
ಈ ಚಕ್ರವೂ ಸುಮಾರು ಬಾರಿ ನಡೆದು ಕೊನೆಗೆ ಬೇಸತ್ತು "ಬಿಡು ಕಂದ , ಇದು ಕೆಲಸ ಮಾಡುವ ಹಾಗೆ ಕಾಣುತ್ತಿಲ್ಲ " ಎಂದು ಕೈ ಚೆಲ್ಲಿದೆ.
.
"ಅಪ್ಪಾ..."
.
"ಯಸ್ ಮೈ ಸನ್..."
.
"ಯೂ ಆರ್ ನಾಟ್ ಡೂಯಿಂಗ್ ಇಟ್ ರೈಟ್ .." ಈಗ ಸ್ವಲ್ಪ ಶಾಕ್ ಆಗುವ ಸರದಿ ನನಗೆ.
.
"ಯಾಕೆ? ನಾನೇನಪ್ಪ ಮಿಸ್ಟೇಕ್ ಮಾಡಿದ್ದು?"
.
" ಅಲ್ಲಪ್ಪ ಆ ಹಳೆ 'ಹೃದಯ ಸಂಗಮ' ತರ ಸಿನಿಮಾದಲ್ಲಿ ಆಕ್ಸಿಡೆಂಟ್ ಆಗೋದು, ವಾಸಿಯಾಗೋದು ನೋಡಿದ್ದಿಯಾ?"
.
" ನೋಡಿದ್ದೀನಿ..ಅದಕ್ಕೂ ಇದಕ್ಕೂ ಏನು ಕನೆಕ್ಷನ್ನು?"
.
"ಅಲ್ಲಿ ಏನೊ ಆಕ್ಸಿಡೆಂಟ್ ಆಗಿ ತಲೆಗೆ ಏಟು ಬೀಳುತ್ತೆ, ಹೀರೋಗೆ ಹಳೆದೆಲ್ಲಾ ಮರೆತು ಹೋಗುತ್ತೆ...ಆದರೆ ಕೊನೆಗೆ ಇನ್ನೊಂದು ಅದೇ ರೀತಿ ಆಕ್ಸಿಡೆಂಟು ಆಗಿ ಅದೇ ಜಾಗಕ್ಕೆ ಏಟು ಬಿದ್ದಾಗ ಮರೆತಿದ್ದೆಲ್ಲಾ ಪುನಃ ನೆನಪಿಗೆ ಬಂದುಬಿಡುತ್ತೆ..."
.
ನನಗೆ ಸೂಕ್ಷ್ಮವಾಗಿ ಅವನು ಹೇಳುತ್ತಿರುವ ಪ್ಲಾಟಿನ ಅಂದಾಜು ಸಿಗಲಾರಂಭಿಸಿತು. ಆದರೆ ಅದನ್ನ ಈ ಐಪ್ಯಾಡಿಗೆ ಅಳವಡಿಸುವುದು ಹೇಗೆಂದು ಮಾತ್ರ ಇನ್ನೂ ಕ್ಲಿಯರಾಗಿ ಹೊಳೆದಿರಲಿಲ್ಲ...ಅದೆ ಹೊದರಿನಲ್ಲಿ ಕೇಳಿದೆ "ಅಂದರೆ?"
.
"ಅಂದರೆ, ನಾವು ಐ ಪ್ಯಾಡು ಬಿದ್ದಾಗ ಹೇಗಿತ್ತೊ, ಅದೆ ಸೀನ್ ಕ್ರೀಯೇಟ್ ಮಾಡಿ, ಅದೆ ತರದಲ್ಲಿ ಮತ್ತೆ ಬೀಳುವ ಹಾಗೆ ಮಾಡಬೇಕು.."
.
ನಾನೂ ಮೂಲೆಯಲ್ಲಿದ್ದ ಆ ಸ್ಟೂಲಿನ ಎತ್ತರವನ್ನ ನೋಡಿ ಗಾಬರಿಯಾದೆ. 'ವಿಲ್ ಇಟ್ ರೀಯಲಿ ವರ್ಕ್ಸ್?'
.
" ಹಾಗೆ ಮಾಡಿದ್ರೆ ಕೆಲ್ಸ ಮಾಡುತ್ತೆ ಅಂತಿಯಾ?"
.
"ಇಷ್ಟೆಲ್ಲಾ ಹೇಗೂ ಟ್ರೈ ಮಾಡಿ ನೋಡಾಯ್ತು..ಇನ್ನದೊಂದನ್ನ ಯಾಕೆ ಉಳಿಸಬೇಕು? ಮಾಡಿ ನೋಡಿಬಿಡೋದೆ ತಾನೆ?"
.
ಹೀಗೆ ಕೊನೆಗೆ, ನಾನು ಯಾವುದನ್ನು ಮಾಡುವುದಿಲ್ಲವೆಂದು ಶಪಥ ಕೈಗೊಂಡಿದ್ದೇನೊ ಅದೆ ನಡೆಯುವ ಹಂತಕ್ಕೆ ಬಂತು. ನೀರಿಗಿಳಿದ ಮೇಲೆ ಚಳಿಯೇನು, ಮಳೆಯೇನು? (ಬೀರಿಡಿದ ಮೇಲೆ ವೈನೇನು, ರಮ್ಮು , ವಿಸ್ಕಿಯೇನೂ ..ಎಲ್ಲಾ ಆಲ್ಕೋ'ಹಾಲು' ತಾನೆ - ಅನ್ನುವ ಹಾಗೆ). ಸರಿ ಇದೂ ಆಗಿಬಿಡಲಿ ಎಂದು 'ಹೂಂ'ಗುಟ್ಟಿದೆ. ಈ ಬಾರಿ ಎಲ್ಲಾ ಮಗನದೆ ಡೈರೆಕ್ಷನ್. ನನ್ನದೇನಿದ್ದರೂ ಅವನು ಹೇಳಿದಂತೆ ಮಾಡುವುದಷ್ಟೆ. ಅವನ ಲೆಕ್ಕಾಚಾರದಂತೆ ರಾತ್ರಿ ಸ್ಟೂಲಿನಲಿ ಇಟ್ಟ ಬಗೆಯಿಂದ ಹಿಡಿದು, ಅದು ಕೆಳಬಿದ್ದ ಬಗೆಯವರೆಗೆ ಎಲ್ಲಾ ವಿವರಿಸಿ, ಅದೇ ರೀತಿಯಲ್ಲಿ ಜೋಡಿಸಿ ಕೂಡ ತೋರಿಸಿದೆ, ಬೀಳುವ ಮುನ್ನ ಇದ್ದ ವಿನ್ಯಾಸದಲ್ಲಿ.
.
" ನೀನು ಕೊನೆಯ ಬಾರಿ ನೋಡಿದಾಗ ಇದ್ದಂತಹ ಸೀನು ಹೀಗೆ ಇತ್ತ?"
.
"ಹೌದು.."
.
" ಸರಿ, ಹಾಗಾದ್ರೆ ಕಣ್ಮುಚ್ಕೊ.."
.
" ಯಾಕಪ್ಪ ಅದು ಬೇರೆ?"
.
"ಯಾಕೆಂದ್ರೆ ಐ ಪ್ಯಾಡು ಬಿದ್ರೆ ನಿನಗೆ ನೋಡ್ಕೊಂಡು ತಡ್ಕೊಳಕಾಗಲ್ಲ..ಗೋಳೊ ಅಂದುಬಿಡ್ತೀಯಾ"
.
'ಎಲಾ ಇವನಾ? ' ಅಂದುಕೊಂಡರೂ ಅವನ್ಹೇಳಿದ್ದರಲ್ಲಿ ಉತ್ಪ್ರೇಕ್ಷೆಯೇನೂ ಇರಲಿಲ್ಲ. ಸರಿ, 'ಬಾಯಿ ಮುಚ್ಚಿಕೊಂಡು' ಕಣ್ಮುಚ್ಚಿದೆ.
.
ಮುಂದಿನ ಕೆಲ ಕ್ಷಣಗಳು ಯುಗಗಳಂತೆಯೆ ಉರುಳಿದವು....ಅದೇನು ಮಾಡಿದನೊ, ಏನೊ ಒಂದೂ ಗೊತ್ತಾಗಲಿಲ್ಲ..ಕೆಲ ಧೀರ್ಘ ಕ್ಷಣಗಳ ನಂತರ 'ದೊಪ್ಪನೆ' ಕೆಳಬಿದ್ದ ಸದ್ದು - ಹೆಚ್ಚು ಕಡಿಮೆ ಬೆಳಿಗ್ಗೆ ಬಿದ್ದಹಾಗೆ. ಆದರೂ ನನಗಿನ್ನು ಕಣ್ತೆರೆಯುವ ಧೈರ್ಯವಿಲ್ಲ...
.
"ಅಪ್ಪಾ..."
.
"ಹೂಂ.."
.
"ಕಣ್ತೆಗಿಯಪ್ಪಾ.."
.
"ರಿಸಲ್ಟ್ ಏನಾಯ್ತೊ ಮಗನೆ? ಪಾಸೊ, ಫೇಲೊ?"
.
" ನೀನೆ ನೋಡಪ್ಪ...ನನಗೆ ಪಾಸ್ವರ್ಡ್ ಗೊತ್ತಿಲ್ಲ, ಪೂರ್ತಿ ತೆಗೆಯೊದಕ್ಕೆ..." 
.
ಅವನ ಕೈಯಲ್ಲಿ ಐಪ್ಯಾಡು ಸಿಕ್ಕಿ ಜರ್ಝರಿತವಾಗಲಿಕ್ಕೆ ಬಿಡಬಾರದೆಂದರೆ ನನಗಿದ್ದ ಕಂಟ್ರೋಲ್ ಪಾಸ್ವರ್ಡ್ ಒಂದೆ.. ಕಣ್ಬಿಟ್ಟು ಪಾಸ್ವಾರ್ಡು ಹಾಕಿ ಪರದೆ ಬಿಚ್ಚಿದರೆ....
.
ಪಾಸು, ಫೇಲೇನು ಬಂತು? ಫಸ್ಟಕ್ಲಾಸ್, ಡಿಸ್ಟಿಂಕ್ಷನ್ನಿಗೂ ಮೀರಿದ ರೀತಿಯಲ್ಲಿ ರೆಡಿಯಾಗಿಬಿಟ್ಟಿತ್ತು ಐಪ್ಯಾಡು! 
.
ಅದರ ಈಗಿನ ರೂಪ ನೋಡಿದರೆ, ಅದು ಕೆಟ್ಟು ಹೋಗಿದ್ದೆ ಸುಳ್ಳೆನ್ನುವ ಹಾಗೆ ಫಳಫಳ ಹೊಳೆಯುತ್ತಿದೆ. ಯಾವುದಕ್ಕೂ ಕನ್ ಫರ್ಮ್ ಆಗಲೆಂದು ಮತ್ತಷ್ಟು ಆಪ್ಸ್ ತೆರೆದೂ ನೋಡಿದೆ; ಬಿಲ್ಕುಲ್ ಸಂಶಯವಿಲ್ಲ - ಮೊದಲಿಗಿಂತ ಹೆಚ್ಚು ಪ್ರಖರವಾಗಿ, ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದೆ...
.
ಮಗನಿಗೆ ಮೊದಲು ಥ್ಯಾಂಕ್ಸು ಹೇಳಿದೆ....!
.
ಆದರೂ ಯಾಕೊ ಈ ಕಾಕತಾಳೀಯತೆ, ಈ ಸಂಭವನೀಯತೆ ಮಾತ್ರ ತೀರಾ ಅಪರೂಪದ್ದು ಅಸಹಜದ್ದು ಎನಿಸಿತು. ನಿಜ ಹೇಳಬೇಕೆಂದರೆ ನನಗೇ ಇನ್ನು ಪೂರ್ತಿ ನಂಬಲಾಗಿರಲಿಲ್ಲ - ಎದುರಲ್ಲೆ ಸಾಕ್ಷಿ ಇದ್ದರೂ ಸಹ.. ಇದನ್ನೇನು ಸ್ಟೀವ್ ಜಾಬನ ವಿನ್ಯಾಸ ದೂರದೃಷ್ಟಿ ಎನ್ನಬೇಕೊ? ಅಥವಾ ನನಗೆ ಸಿಕ್ಕ ಐಪ್ಯಾಡಿನಲ್ಲಿ ಮಾತ್ರವಿರುವ ವಿಶೇಷತೆಯೆನ್ನಬೇಕೊ ಗೊತ್ತಾಗಲಿಲ್ಲ. ಬಹುಶಃ, ಈ ವಿನ್ಯಾಸ ಬಲದ ಗುಟ್ಟೆ ಸ್ಟೀವ್ಜಾಬ್ಸನನ್ನು ಮತ್ತೆ ಉಳಿದ ಸ್ಪರ್ಧಾಳು ಕಂಪನಿಗಳಿಂದ ಪ್ರತ್ಯೇಕಿಸುವ ಮಾನದಂಡವೆ ? 
.
ಮತ್ತೆ ನಾಲ್ಕನೆ ಬಾರಿ ಹೀಗಾದರೆ, ಇದೆ ಸೂತ್ರ ಮತ್ತೆ ಬಳಸುತ್ತೇನೆಯೆ? ಕಳೆದ ಬಾರಿಯ ಮನಸ್ಥಿತಿಯಲ್ಲಿ ಉತ್ತರ 'ಇಲ್ಲಾ' ಅಂದಾಗುತ್ತಿತ್ತು. ಆದರೆ ಈಗ ಬೇಲಿಯ ಮೇಲೆ ಕೂತುಬಿಟ್ಟಿದೆ ಮನ - ಅರ್ಧ ಅತ್ತ, ಅರ್ಧ ಇತ್ತ!
.
ಈ ಉವಾಚ ಮುಗಿಸುವ ಮುನ್ನ, ಒಂದು ಕಿರುಗಥೆ. ನನ್ನ ಮಗನ ಬಳಿಯಿರುವ ಪೀಎಸ್ಪಿ ಗೇಮ್ ಕನ್ಸೋಲ್, ಇತ್ತೀಚಿನ ಅವನ ರೌದ್ರಾತಾರ ತಾಳಿದ್ದ ಹೊತ್ತಿನಲ್ಲಿ ನೆಲಕ್ಕೆಸೆಯಲ್ಪಟ್ಟು, ಕೆಲಸ ಮಾಡುವುದೆ ಪೂರ್ತಿ ನಿಂತು ಹೋಯ್ತು. ಐ ಪ್ಯಾಡಿನ ಹಾಗೆ ಇಲ್ಲೂ ಮಾಡುತ್ತೇನೆಂದು ಮಗ ತಿಂಗಳು ಪೂರ್ತಿ ಪ್ರಯತ್ನಿಸಿದ - ಆದರೆ ಯಶಸ್ಸು ಸಿಗಲಿಲ್ಲ. ಕೊನೆಗೆ, ರಿಪೇರಿಯವನ ಮೊರೆ ಹೊಕ್ಕೆ, ಹಣ ತೆತ್ತು ರಿಪೇರಿ ಮಾಡಿಸಬೇಕಾಯ್ತು :-(
.
ಅದೇನೆ ಇರಲಿ ನಾನಂತೂ ಎಲ್ಲಾ ಮುವತ್ಮೂರು ಕೋಟಿ ಪ್ಲಸ್ (ದ್ವಾದಶಾದಿತ್ಯರು, ಏಕದಶಾ ರುದ್ರರು, ಅಷ್ಟವಸುಗಳು ಮತ್ತು ಅಶ್ವಿನಿದ್ವಯರು - ಮತ್ತು ಅವರ ಸೇವೆ, ಸಹಾಯಕ್ಕೆ ನಿಯೋಜಿತವಾದ ಒಂದೊಂದು ಕೋಟಿ ಉಪ ದೇವತೆಗಳು ಸೇರಿಯೆ ಮೂವತ್ಮೂರು ಕೋಟಿ ಮೂವತ್ಮೂರು ಆಗುತ್ತದೆ ಲೆಕ್ಕ..) ಮತ್ತು ಮಿಕ್ಕೆಲ್ಲಾ ಮತ ಧರ್ಮದ ದೇವತೆಗಳಿಗೂ ಸೇರಿದಂತೆ ಒಂದು ಒಟ್ಟಾದ ಭಾರಿ ಧೀರ್ಘದಂಡ ನಮಸ್ಕಾರ ಹೊಡೆದು, ಈ ಕಥನವನ್ನು ಬರೆಯಲು ಕುಳಿತೆ, ಮತ್ತೆ ಅದೇ ಐಪ್ಯಾಡಿನಲ್ಲಿ!
.
ಅಂತೂ ಮೂರಕ್ಕೆ ಮುಕ್ತಾಯವಾಗಲಿಲ್ಲ ನನ್ನೀ ಐ ಪ್ಯಾಡಿನ ಕೇಸಿನಲ್ಲಿ :-)
.
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
____________________________________________________________________________
ಅಡಿ ಟಿಪ್ಪಣಿ : 
1. ಅಂದ ಹಾಗೆ ನಾನು ಆಪಲ್ ಕಂಪನಿಯ ಸೇಲ್ಸ್ ಮ್ಯಾನ್ ಆಗಲಿ, ಕೆಲಸ ಮಾಡುವವನಾಗಲಿ ಅಲ್ಲ. ಆಪಲ್ ಬಿಟ್ಟು ಬೇರೆ ಸ್ಮಾರ್ಟ್ಫೋನ್ ಬಳಸಿಲ್ಲದ ಕಾರಣ ಹೋಲಿಸಿ ನೋಡುವ ಹುನ್ನಾರವೂ ಅಲ್ಲ. ಕಾಕತಾಳೀಯತೆಯನ್ನು ಮೀರಿಸಿದ ಅನುಭವವೊಂದನ್ನು 'ಕಾಕತಾಳೀಯವಾಗಿ' ವಿವರಿಸುವ ಪುಟ್ಟ ಯತ್ನ, ಅಷ್ಟೆ :-) 
2. ಇದಕ್ಕೆ ಮತ್ತೊಂದು ಭಾಗ ಸೇರಲಿದೆಯ? ಅಥವಾ ಇದೆ ಕೊನೆಯ ಭಾಗವೆ? ಎನ್ನುವುದು ನನ್ನೀ ಐಪ್ಯಾಡಿನ ಮೇಲೆ ಅವಲಂಬಿಸಿದೆ. ಅದರಿಂದ ಹೊಸ ಸಾಹಸವ್ಯಾವುದು ನಡೆಯದಿದ್ದರೆ ಇದನ್ನೆ ಕೊನೆಯ ಭಾಗವೆಂದು ಪರಿಗಣಿಸಬಹುದು :-)
____________________________________________________________________________
 

Comments

Submitted by H A Patil Fri, 11/29/2013 - 19:35

ನಾಗೇಶ ಮೈಸೂರು ರವರಿಗೆ ವಂದನೆಗಳು
' ಐಗಳ ಪುರಾಣ ಭಾಗ - 3 ' ಸೊಗಸಾಗಿ ಮೂಡಿ ಬಂದಿದೆ, ಲೇಖನದ ನಿರೂಪಣೆಯಲ್ಲಿ ಲವಲವಿಕೆಯಿದೆ ಬರವಣಿಗೆಯ ಶೈಲಿ ಓದುಗನಲ್ಲಿ ಆಸಕ್ತಿಯನ್ನು ಹುಟ್ಟಿಸುತ್ತದೆ, ಅಡಿ ಟಿಪ್ಪಣೆ 2 ರಲ್ಲಿ ಇದಕ್ಕೆ ಇನ್ನೊಂದು ಭಾಗ ಸೇರಲಿದೆಯೆ ? ಅಥವಾ ಇದೆ ಕೊನೆಯ ಭಾಗವೆ? ಎಂದಿದ್ದೀರಿ, ಬರೆಯಿರಿ ಎನ್ನುವ ಆಶಯದೊಂದಿಗೆ ತಮಗೆ ಧನ್ಯವಾದಗಳು.

Submitted by nageshamysore Sat, 11/30/2013 - 03:11

In reply to by H A Patil

ಹಿರಿಯರಾದ ಪಾಟೀಲರೆ, ತಮ್ಮ ನಿರಂತರ ಪ್ರೋತ್ಸಾಹಕೆ ಎಂದಿನಂತೆ ಚಿರಋಣಿ. ನಿಮ್ಮ ಆಶಯದಂತೆ ಸಾಧ್ಯವಾದಷ್ತು ಬರೆಯಲು ಪ್ರಯತ್ನಿಸುತ್ತಲೆ ಇರುವೆ - ಇದರ ಭಾಗವಾದರೂ ಸರಿ, ಅಥವಾ ಮತ್ತಾವುದೊ ಹೊಸತಾದರೂ ಸರಿ. ಇದೊಂದು ನಿಜವಾದ ಅನುಭವದ ಬರಹವಾದ ಕಾರಣ ಮತ್ತೆ ಏನಾದರೂ ವಿಶಿಷ್ಠ ಅನುಭವಾದರೆ ಅದನ್ನು ಖಂಡಿತ ದಾಖಲಿಸುತ್ತೇನೆ.

ಧನ್ಯವಾದಗಳೊಂದಿಗೆ  
ನಾಗೇಶ ಮೈಸೂರು

Submitted by makara Sat, 11/30/2013 - 09:00

ನಾಗೇಶರೆ,
ನಿಮ್ಮ ಐ-ಪ್ಯಾಡ್ ಕಾರಣ ಜನ್ಮ ತೆಳೆದು ಬಂದಿದೆ ಅಂದರೆ ಅದು ಅವತಾರ ಪುರುಷರಿದ್ದಂತೆ ಯಾವುದೋ ಮಹತ್ಕಾರ್ಯ ಸಾಧನೆಗೆ ಉತ್ಪತ್ತಿಯಾಗಿದೆ. ಅದು ಇತರ ಪಾಮರ ಐ-ಪ್ಯಾಡುಗಳಿಗೆ ಅನ್ವಯಿಸದು. ಹೀಗೆ ಮಾಡಹೋಗಿ ಇತರೇ ಐ-ಪ್ಯಾಡುಗಳು ಕುಲಗೆಟ್ಟು ಹೋಗುತ್ತವೆಯಷ್ಟೇ :)
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Sun, 12/01/2013 - 04:49

In reply to by makara

ಶ್ರೀಧರರೆ,
.
ನಿಮ್ಮ ಮಾತು ನಿಜವೆಂದೆ ಕಾಣುತ್ತದೆ - ಇದ್ಯಾವುದೊ ಅಪ್ಪಿತಪ್ಪಿ ನನ್ನ ಕೈ ಸೇರಿದ ಕಾರಣ ಜನ್ಮ ಐಪ್ಯಾಡೆ ಇರಬೇಕು. ಯಾಕೆಂದರೆ ಶ್ರೀ ಲಲಿತೆಯ ಕಾವ್ಯಯಾನ ಸಹ ಶುರುವಾಗಿದ್ದು ಇದರಿಂದಲೆ. ಬಹುಶಃ ಬರೆದುಕೊಳ್ಳುತ್ತಲೆ ಐಪ್ಯಾಡಲಿ ಅಂತರ್ಗತವಾದ ಲಲಿತಾ ಶಕ್ತಿ, ಐಪ್ಯಾಡಿನ ಕುಂಡಲಿನೀಯನ್ನು ಮೂಲಾಧಾರದಿಂದ ಸಹಸ್ರಾರದತ್ತ ಮೇಲೇರಿಸುತ್ತಲೆ ಬ್ರಹ್ಮರಂಧ್ರ ಮುಖೇನ ಪರಬ್ರಹ್ಮದೊಂದಿಗೆ ನೇರ ಸಂಪರ್ಕ ಏರ್ಪಡಿಸಿಕೊಳ್ಳುತ್ತಿದೆಯೋ ಏನೊ?! ಆ ರಕ್ಷಾ ಕವಚವೆ ಈ ಕೆಲಸ ಮಾಡಿಸುತ್ತಿರಬೇಕು :-)
.
ಅದೇನೆ ಆಗಲಿ, ಈ ಮೂಲಕ ಒಂದು ಡಿಸ್-ಕ್ಲೈಮರ್ ಅಂತೂ ಹಾಕಬೇಕೆನಿಸುತ್ತದೆ : ಈ ಬರಹ ಓದಿ ಯಾರಾದರೂ ತಮ್ಮ ಐಫೋನ್, ಐಪ್ಯಾಡುಗಳಿಗೆ ಇದೇ ಪ್ರಯೋಗ ಮಾಡ ಹೊರಟರೆ, ಅದರಿಂದಾಗುವ ಕಷ್ಟ ನಷ್ಟಕ್ಕೆ ಲೇಖಕನಾಗಲಿ, ಸಂಪದವಾಗಲಿ ಜವಾಬ್ದಾರರಲ್ಲ ಎಂದು :-)
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by ಗಣೇಶ Sun, 12/01/2013 - 21:44

In reply to by nageshamysore

-- ಈ ಬರಹ ಓದಿ ಯಾರಾದರೂ ತಮ್ಮ ಐಫೋನ್, ಐಪ್ಯಾಡುಗಳಿಗೆ ಇದೇ ಪ್ರಯೋಗ ಮಾಡ ಹೊರಟರೆ, ಅದರಿಂದಾಗುವ ಕಷ್ಟ ನಷ್ಟಕ್ಕೆ ಲೇಖಕನಾಗಲಿ, ಸಂಪದವಾಗಲಿ ಜವಾಬ್ದಾರರಲ್ಲ ಎಂದು :-)
--ಲೇಖಕರ ಮಗ? :)
ನಾಗೇಶರೆ, ೩ ಕಂತುಗಳ ಪುರಾಣ! ಒಂದೊಂದು ಸಾರಿ ಹಾಳಾದಾಗಲೂ ಆದ ಪ್ರಾಣ ಸಂಕಟವನ್ನ ಪುರಾಣದಲ್ಲಿ ಹಾಸ್ಯಮಯವಾಗಿ ಬರೆದಿದ್ದೀರಿ. ನನ್ನದೂ ಒಂದು ಅನುಭವ ಇಲ್ಲಿ ಹೇಳುವೆ- ನನ್ನದು ಮಾಮೂಲಿ ಫೋನ್. ಫೋನಾಗಿ ಉಪಯೋಗಿಸಿದ್ದು ಕಮ್ಮಿ-ಜಾಸ್ತಿ ಕ್ಯಾಮರಾ ಆಗಿಯೇ ಉಪಯೋಗ. :) ಯಾವತ್ತೂ ಕಿಸೆಯಲ್ಲಿ ಇಟ್ಟುಕೊಳ್ಳದವನು ಕಳೆದ ರವಿವಾರ ಕಿಸೆಯಲ್ಲಿ ಇಟ್ಟು ಹೊರಟೆ. ಶೂ ಹಾಕಿ ಹೊರಡುವ ಅವಸರದಲ್ಲಿ ಫೋನ್ ಕೆಳಗೆ ಬಿದ್ದು ಫುಟ್ ಬಾಲ್ ತರಹ ಅಷ್ಟು ದೂರ ಹೋಯಿತು. ಕೆಳಗಿನ ಫ್ಲೋರ್‌ಗೆ ಹೋಗಿ ಬೀಳುವ ಮೊದಲು ಗೋಲಿ ತರಹ ಡೈವ್ ಹೊಡೆದು ಸೇವ್ ಮಾಡಿದೆ. ಆನ್ ಮಾಡಿ ನೋಡಿದೆ-ಕ್ಯಾಮರಾ ವರ್ಕ್ ಮಾಡುತ್ತಿದೆ:) ಫೋನ್ ಯಾಕೆ ಎತ್ತಲಿಲ್ಲ ಎಂದು (ರಾತ್ರಿ ಮನೆಗೆ ಬಂದಾಗ) ಮನೆಯಾಕೆ ಜೋರು ಮಾಡಿದಾಗಲೇ ( :( ) ಗೊತ್ತಾದದ್ದು-ಫೋನ್ ಢಮಾರ್ ಎಂದು. ನನಗೆ ಗೊತ್ತಿದ್ದ ರಿಪೇರಿ ಕೆಲಸ ಎಲ್ಲಾ ಮಾಡಿದೆ....ನೋ ಕ್ರಿಯಾ...ಯಾರೋ ಕರೆದರೆಂದು ಫೋನನ್ನು ಸೋಫಾದ ಮೇಲೆ ಎಸೆದು ಹೊರಟೆ- ಫೋನ್ ಸೋಫಾ ತಲುಪಲಿಲ್ಲ...:( ಅವರ ಬಳಿ ಮಾತನಾಡುತ್ತಿದ್ದರೂ ಫೋನ್ ರಿಪೇರಿಗೆ ಕೊಡುವುದಾ ಬೇರೆ ಹೊಸದು ತೆಗೆದುಕೊಳ್ಳುವುದಾ ಎಂದು ಆಲೋಚಿಸುತ್ತಿದ್ದೆ.. ನಂತರ ಬಂದು ನೋಡಿದಾಗ..!!ಖುಷಿಯಲ್ಲಿ ಲುಂಗಿ ಡ್ಯಾನ್ಸ್ ಮಾಡಿದೆ. :)

Submitted by nageshamysore Mon, 12/02/2013 - 05:51

In reply to by ಗಣೇಶ

ಗಣೇಶ್ ಜಿ,
.
ಯಾಕೊ ಕೆಲದಿನದಿಂದ ಕಾಣಿಸಲೆ ಇಲ್ಲವಲ್ಲ, 'ಮುರಿದುಬಿದ್ದ ಪೀಎಸ್ಪಿ' ಪ್ರಕಟಿಸಲು ಹೇಳಿ ಎಲ್ಲಿ ಹೋದರು, ಪೀಎಸ್ಪಿ ಮುಗಿದು ಐಪ್ಯಾಡಾದರೂ ಪತ್ತೆಯಿಲ್ಲವಲ್ಲ -  ಅಂದುಕೊಳ್ಳುತ್ತಿದ್ದೆ, ನೀವು ಬಂದೆಬಿಟ್ಟಿರಿ :-)
.
ಲೇಖಕರ ಮಗ ಈಗ ಸ್ವಲ್ಪ ಬೆಳೆದುಬಿಟ್ಟಿದ್ದಾನೆ, - ಐಪ್ಯಾಡಿನತ್ತ ಕಣ್ಣೇ ಹಾಕುವುದಿಲ್ಲ. ನಮ್ಮ ಜೆಂಟಲ್ಮೆನ್ ಅಗ್ರಿಮೆಂಟಿನ ಪ್ರಕಾರ, ನನ್ನ ಹಳೆ ಪೋನು, ಪೀಎಸ್ಪಿ, ಆಗ್ಗಾಗೆ ಕಂಪ್ಯೂಟರು ಮಾತ್ರ ಅವನ ಜಗ. ಹೀಗಾಗಿ ಸ್ವಲ್ಪ ಜವಾಬ್ದಾರನಾಗುತ್ತಿದ್ದಾನೆ ಅಂದುಕೊಂಡಿದ್ದೇನೆ - ಮುಂದಿನ ಅವಘಡದ ತನಕ ಕಾದು ನೋಡೋಣ :-)
.
ಶ್ರೀಧರರು ಮೊದಲೆ ಹೇಳಿದ್ದಂತೆ, ನಿಮ್ಮ ನೋಕೀಯ ಕೇಸಿನಲ್ಲೂ ಲಲಿತಾ ಪವಾಡವೆ ಇರಬೇಕು! ನನ ಐಪ್ಯಾಡಿಗೆ ಕಾವ್ಯ ಬರೆದ ಪುಣ್ಯದ ರಕ್ಷೆ. ನಿಮ್ಮ ಫೋನಿಗೆ ನೀವು ಶ್ರದ್ದೆಯಿಂದ ಓದುವ ನಾಮಾವಳಿಯ ಶ್ರೀ ರಕ್ಷೆ. ಹೀಗಾಗಿ ಎರಡು ಸೇಪು!
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by partha1059 Mon, 12/02/2013 - 18:51

ಒಟ್ಟಾಗಿ ಮೂರು ಬಾಗಗಳನ್ನು ಪಟ್ಟು ಬಿಡದೆ ಕುಳಿತು ಓದಿದೆ !
ಅದಕ್ಕೆ ನಾನು ಹೇಳೋದು ನಮ್ಮ ಸುತ್ತ ಪವಾಡಗಳು ಘಟಿಸುತ್ತಲೆ ಇರುತ್ತದೆ ನಾವು ಗುರುತಿಸಬೇಕು ಅಷ್ಟೆ!

ನೀವು ನಿಮ್ಮ ಮಗ‌ ಸೇರಿ ಐಪ್ಯಾಡ್ ರಿಪೇಸ್ ಸೆಂಟರ್ ತೆರೆಯುವ ಬಗ್ಗೆ ಯೋಚಿಸಬಹುದು !
ದಿನಕ್ಕೆ ನೂರಾರು (ಸಾವಿರಾರು?) ಐ ಪಾಡ್ ರೆಪೇರಿ ಮಾಡಬಹುದು !
50 % ಯಶಸ್ಸು ಸಿಗಲಿ ಬಿಡಿ ! ಉಳಿದಿದ್ದು ರಿಪೇರಿ ಆಗಲ್ಲ ಸಾರ್ ಸಾರಿ ಅಂತ‌ ಹೇಳಿ ಹಿಂದೆ ಕೊಟ್ಟು ಬಿಡಿ !
:‍)

Submitted by nageshamysore Tue, 12/03/2013 - 20:40

In reply to by partha1059

ಪಾರ್ಥಾ ಸಾರ್, ಮಳಿಗೆ ತೆಗೆಯುವ ಮೊದಲು ನಾವಿಬ್ಬರೂ ಎಷ್ಟು ಎತ್ತರದಿಂದ ಬೀಳಿಸುವುದು ಅಂತ ಮತ್ತಷ್ಟು ಪ್ರಾಕ್ಟೀಸ್ ಮಾಡಬಹುದು. ಜತೆಗೆ ಗಣೇಶರು ಸೇರಿಕೊಂಡರೆ ನೋಕೀಯ ರಿಪೇರಿಗೂ ಕೈ ಹಾಕಬಹುದು ! (ನೋ-ಪ್ಯಾಡ್ ಸರ್ವೀಸಸ್ ಅಂತ ಬೋರ್ಡ್ ಹಾಕಿ ಕುಳಿತರೆ ಸಾಕು) :-)

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು

Submitted by partha1059 Tue, 12/03/2013 - 20:52

In reply to by nageshamysore

ಸಂಜೆ ಗೆಳೆಯರೊಬ್ಬರು ಆಫೀಸಿನಲ್ಲಿ ಐಪ್ಯಾಡ್ ಕೆಟ್ಟಿದೆ ಅಂತ ಓಡಾಡುತ್ತಿದ್ದರು
ಸರಿ ಅಂತ ನಿಮ್ಮ ಉಪಾಯ ಹೇಳಿದೆ
ನನ್ನ ಮುಖವನ್ನೆ ವಿಚಿತ್ರವಾಗಿ ದಿಟ್ಟಿಸಿದರು !
ಏಕೊ ನಿಮ್ಮ ಪ್ಲಾನ್ ಸರಿಯಾಗಲಿಲ್ಲ ಅನ್ನಿಸುತ್ತೆ ಬಿಡಿ ! :‍)

Submitted by ಗಣೇಶ Tue, 12/03/2013 - 23:57

In reply to by partha1059

ನಾಗೇಶರೆ, ಮೂರು ಎಪಿಸೋಡ್‌ನಲ್ಲಿ ವಿವರವಾಗಿ ಹೇಳಿದರೂ, ಈ ಪಾರ್ಥರು ಸಿಕ್ಕಿದ ಒಳ್ಳೆಯ ಅವಕಾಶವನ್ನು ವ್ಯರ್ಥ ಮಾಡಿದರು. ಫೋನ್ ಗೆಳೆಯರದ್ದು, ಪ್ಲಾನ್ ನಿಮ್ಮದು, ಎತ್ತಿ ಹಾಕುವುದು ಬಿಟ್ಟು- ನಿಮ್ಮ ಪ್ಲಾನೇ ಸರಿಯಿಲ್ಲ ಅನ್ನುತ್ತಾರೆ!

Submitted by nageshamysore Wed, 12/04/2013 - 03:06

In reply to by ಗಣೇಶ

ಪಾರ್ಥಾ ಸಾರ್,

ಈಗ ಬೇರೆ ದಾರಿಯೆ ಇಲ್ಲ..ಒಂದು ಲೈವ್ ಡೆಮೊ ಮಾಡಿಬಿಡಲೆ ಬೇಕು. ಅರ್ಜೆಂಟಾಗಿ ಒಂದು 'ಹೊಸ' ಐಪ್ಯಾಡು ಖರೀದಿಸಿ. ಮಗನೊಂದಿಗೆ (ಮೊದಲು ಕೆಡಿಸಲೊಬ್ವರು ಬೇಕಲ್ಲ?) ಅಲ್ಲಿಗೆ ನೇರ ಬಂದು ' ಡ್ರಾಪ್ ಟೆಸ್ಟು ಡೆಮೊ ' ಮಾಡಿಬಿಡುವ. ಸಕ್ಸಸ್ಸು ಆಗದಿದ್ದರೆ ನೀವೆ ದಾರಿ ಹೇಳಿಕೊಟ್ಟಿದ್ದಿರಾ - 50% ಗ್ಯಾರಂಟಿ ಅಂತ :-) ಮತ್ತೆ ಯಶಸ್ವಿಯಾದರೆ ನಿಮ್ಮ ಗೆಳೆಯರಿಗೆ ನಂಬಿಸಲು ಮತ್ತೊಂದು ಆಧಾರ ಸಿಕ್ಕಂತೆ ಆಗುತ್ತದೆ!