ಅಂಗಜನ ಅಂಗದ ಸದ್ದು ...

ಅಂಗಜನ ಅಂಗದ ಸದ್ದು ...

ಬೆಳದಿಂಗಳಿನ ಸಖಿಯಿಲ್ಲದ ಏಕಾಂತದ ರಾತ್ರಿಯೊಂದರಲ್ಲಿ ವಿರಹಿಯೊಬ್ಬ ಕಿಟಕಿಯಿಂದ ಕಾಣುವ ನಭ ವೈಭವವನು ನೋಡಿ ಆಸ್ವಾದಿಸುತ್ತಲೆ, ಕಾರ್ಮೋಡಗಳ ಆಲಿಂಗನ ಸದ್ದಿನಲಿ ವಿರಹಿಗಳ ಪ್ರಣಯದ ತಾದ್ಮಾತ್ಮತೆಯನ್ನು ಕಾಣುತ್ತಾ, ಹುಚ್ಚೆದ್ದಂತೆ ಮಳೆಯಾಗುವ ಹೊತ್ತು, ಮನಕೂ ಹುಚ್ಚಿಡಿಸಿ ರಚ್ಚೆಯಾಡಿಸುತ ಕಾಡುವ ಬಗೆಯನ್ನು, ಅಂಗಜನ ಕೆದಕನ್ನು, ಪ್ರಣಯಿನಿಯಿರದೆ ಕೇಳಲಾಗದ ಅಂಗದದ ಸದ್ದಿರದ ಸ್ಥಿತಿಯನ್ನು ಚಿತ್ರಿಸುವ ಕವನ.

ಅಂಗಜನ ಅಂಗದ ಸದ್ದು ...
__________________________

ನಡುರಾತ್ರಿ ಕಳೆದು ಎಲ್ಲೆಡೆ ನಿದ್ದೆಯ ಸದ್ದು
ತಾರಾಲೋಕದಿ ಬೆಳದಿಂಗಳು ಸರಹದ್ದು 
ಏಕಾಕಿ ಮಲಗಿ ಏಕಾಂತ ಮಂಚದ ಮೇಲೆ 
ತಾಡಿಸಿತ ಅಂಗಜ ಅಂಗದ ಸದ್ದಿನ ತಾಳೆ ||

ಹಚ್ಚ ಅರಳೆಯ ಸೀರೆ ನಳ ನಳಿಸೊ ನೀರೆ
ಸೆರಗಂಚಲಿ ಥಳ ಕಪ್ಪು ಮಿನುಗುವ ತಾರೆ 
ಉಲ್ಕೆ ನೀಹಾರಿಕೆ ಹಬ್ಬ ವಿಸ್ತಾರದ ಗಬ್ಬ 
ಸಾಗರವೆ ಸಡಗರವೆ ದೂರ ಕಾಣದ ದಿಬ್ಬ ||

ಕಿಟಕಿಯೊಳಿಂದ ಕಟಕಿಯಾಡುವ ಭರ್ತ್ಯ
ಕೋಲು ಬೆಳಕು ಓರೆ ಒರೆಗಚ್ಚುವ ಧಾರ್ಷ್ಟ್ಯ 
ತಂಪು ಕಿರಣಕೆ ಮಾತ್ರ ಸ್ಪರ್ಶ ತನು ಪಾತ್ರೆ 
ನಿಗಿ ಕೆಂಡ ಬಯಕೆ ಸಖಿ ಜತೆಗಿಲ್ಲದ ರಾತ್ರೆ ||

ಬೆವರೊಡೆದ ಹೊತ್ತು ಬಯಕೆಗೊ ಸೆಕೆಗೊ
ಮುಗಿಲಲೊಗ್ಗೂಡಿತ್ತು ಕರಿ ಮೇಘ ಭವಕೊ 
ಸಿಂಪಡಿಸಿ ಸಿಂಚನ ಹನಿಹನಿ ದನಿ ಭುವನ  
ಹುಚ್ಚೆಬ್ಬಿಸಿ ಅಂಗಜನಂಗದ ಸದ್ದಿನ ಕವನ ||

ಕಪ್ಪಿಡಿದು ಕಾರ್ಮೋಡ ಹೆಪ್ಪಿಡಿದು ತಾಡ
ಹುಚ್ಚಿಡಿದ ಕಪ್ಪುಬಿಳಿ ಮೋಡದ ಕರತಾಡ 
ಮಾತುಗ ಜಾಣ್ಮೆ ಮಾತಾಟ ಬಲ್ಮೆ ಗುಡುಗೆ 
ಕೋಲ್ಮಿಂಚ ಕರವಾಳ ಸಿಡಿಲಾಗಿಸಿ ನಡುಗೆ ||

--------------------------------------------------------------------
ಧನ್ಯವಾದಗಳೊಂದಿಗೆ, ನಾಗೇಶ ಮೈಸೂರು, ಸಿಂಗಾಪುರ 
--------------------------------------------------------------------
ಅಂಗಜ = ಮನ್ಮಥ, ಕಾಮ
ಅಂಗದ = ತೋಳ್ಬಂದಿ, ತೋಳು ಬಳೆ

Comments

Submitted by lpitnal Sun, 12/01/2013 - 21:00

ಪ್ರಿಯ ನಾಗೇಶ್ ಜಿರವರೆ, ಉತ್ತಮ ಪ್ರಬುದ್ಧತೆಯ ಕವನ. ತಮ್ಮ ನುಡಿಗಳಲ್ಲೆ, 'ಬೆಳದಿಂಗಳಿನ ಸಖಿಯಿಲ್ಲದ ಏಕಾಂತದ ರಾತ್ರಿಯೊಂದರಲ್ಲಿ ವಿರಹಿಯೊಬ್ಬ ಕಿಟಕಿಯಿಂದ ಕಾಣುವ ನಭ ವೈಭವವನು ನೋಡಿ ಆಸ್ವಾದಿಸುತ್ತಲೆ, ಕಾರ್ಮೋಡಗಳ ಆಲಿಂಗನ ಸದ್ದಿನಲಿ ವಿರಹಿಗಳ ಪ್ರಣಯದ ತಾದ್ಮಾತ್ಮತೆಯನ್ನು ಕಾಣುತ್ತಾ, ಅಂಗದದ ಸದ್ದಿರದ ಸ್ಥಿತಿಯನ್ನು ಚಿತ್ರಿಸುವ ಕವನ.' ನಿಜಕ್ಕೂ ಬಹುಕಾಲ ನೆಲೆನಿಲ್ಲುವ ಕವನ. ಕೆಲ ಶಬ್ದಗಳ ಅರ್ಥ ಗೊತ್ತಿರದರೂ ಗ್ರಹಿಕೆಗೆ ಸಿಕ್ಕಷ್ಟು ಅರ್ಥೈಸಿಕೊಂಡಿದ್ದನ್ನು ಮುಚ್ಚಿಡಲಾರೆ. ಧನ್ವವಾದಗಳು.

Submitted by nageshamysore Mon, 12/02/2013 - 06:13

In reply to by lpitnal

ಇಟ್ನಾಳರೆ ನಮಸ್ಕಾರ. ತಮ್ಮ ಪ್ರಾಮಾಣಿಕ ಪ್ರತಿಕ್ರಿಯೆಗೆ ಧನ್ಯವಾದ. ಬಹುಶಃ ಕೆಲವು ಸಾಧಾರಣ ಬಳಕೆಯಿಲ್ಲದ ಪದಗಳು ನುಸುಳಿದ್ದರಿಂದ ಗೊಂದಲವಾಗಿರಬಹುದೆಂದು ಭಾವಿಸುವೆ. ನಿಮ್ಮನ್ನು ಗೊಂದಲಿಸಿದ್ದು ಯಾವ ಪದಗಳೆಂದು ಗೊತ್ತಿರದಿದ್ದರೂ, ಈ ಕೆಲ ಪದಗಳ ಅರ್ಥ ಕೆಳಗೆ ನೀಡಿದ್ದೇನೆ. ಇದೆ ಗೊಂದಲವಿರುವ ಇತರರಿಗೂ ಸಹಾಯಕವಾಗಲಿ ಎಂದು:
.
ಮಾತುಗ = ವಾಗ್ಮೀ
ಮಾತಾಟ = ಸರಸವಾದ ಮಾತುಕಥೆ
ಕರವಾಳ = ಕತ್ತಿ
ಕರತಾಡ - ಅನ್ನು ಕೈ ಮಿಲಾಯಿಸುವಿಕೆ, ತೀಡುವಿಕೆ, ಕರಸ್ಪರ್ಶ (ಕರತಾಡನದಂತೆ) ಅನ್ನುವ ಅರ್ಥದಲ್ಲಿ ಬಳಸಿದ್ದೇನೆ.

ಇನ್ನು ಯಾವುದಾದರು ಪದ ಗೊಂದಲವಿದ್ದರೆ ಹೇಳಿ. ಇದೊಂದು ರೀತಿ ಕಲಿಕೆಯ ಅವಕಾಶ ಮತ್ತು ನನಗೆ ತಪ್ಪಿದ್ದರೆ ತಿದ್ದಿಕೊಳ್ಳುವ ಸದಾವಕಾಶ :-)
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು