ಸುಬ್ಬನೂ ... ಮೂಢನಂಬಿಕೆಯೂ !
ಬೆಳಗಿನ ಕಾಫಿಗೆ ಸಾಥಿಯಾದ ಪೇಪರ್ ಅನ್ನು ಹೆಕ್ಕಿಕೊಂಡು ಬರಲು ಬಾಗಿಲು ತೆರೆದು ಹೊರಗಡಿ ಇಡಬೇಕೆನ್ನೋಷ್ಟರಲ್ಲಿ, ನಮ್ಮ ಮನೆ ಮುಂದೆ ಬೆಚ್ಚಗೆ ಬಿದ್ಗೊಂಡಿದ್ದ ಪಕ್ಕದ್ ಮನೆ ಕರೀಬೆಕ್ಕು ’ನೆಮ್ಮದಿಯಾಗಿ ಮಲಗೋಕ್ಕೂ ಬಿಡೋಲ್ಲ’ ಅಂತ ಸಿಡಿಸಿಡಿ ಮಾಡ್ಕೊಂಡ್ ಆ ಕಡೆ ಹೋಯ್ತು.
ನನಗೆ ಮೂಗಿನ ಮೇಲೇ ಕೋಪ ಅಂತಾರೆ ಜನ ... "ನಾನು ಇಲ್ಲಿ ಫುಟ್-ರಗ್ ಹಾಕಿರೋದು ನೀನು ಬೆಚ್ಚಗೆ ಮಲಿಕ್ಕೋ ಅಂತಲ್ಲ. ಒಳಗೆ ಬರೋವ್ರು ಕಾಲು ಒರೆಸಿಕೊಂಡು ಬರಲಿ ಅಂತ. ಬೇಕಿದ್ರೆ ನಿಮ್ಮ ಮನೆ ಮುಂದೆ ಹೋಗಿ ಬಿದ್ಗೋ ಹೋಗು" ಅಂದೆ ಗಟ್ಟಿಯಾಗಿ. ಆ ಕರೀಬೆಕ್ಕು ಬೆಕ್ಕಿನ ಕಣ್ಣಿಂದ ನನ್ನನ್ನೇ ಗುರಾಯಿಸಿತ್ತು. ನಾನು ಮೆಲ್ಲಗೆ ಪೇಪರ್ ತೆಗೆದುಕೊಂಡು ಒಳಗೆ ಬಂದುಬಿಟ್ಟೆ. ಅಲ್ಲಾ, ಅದೂ ಸರಿ ಅನ್ನಿ ... ಬೆಕ್ಕಿಗೆ ಬೆಕ್ಕಿನ ಕಣ್ಣಲ್ಲದೆ, ನಾಯಿ ಕಣ್ಣಾ ಇರುತ್ತೆ?
ಅಡುಗೆ ಮನೆಯಿಂದ ಬಂತೊಂದು ಕೂಗು "ಈಗ ಅಂದ ಅದೇ ಮಾತು, ಆ ಬೆಕ್ಕಿನ ಯಜಮಾನಿ, ಎಂಬತ್ತು ವರ್ಷದ ಅಜ್ಜಿ, ಆಕೆ ಮುಂದೆ ಹೇಳಿ ನೋಡೋಣ? ನಿಮ್ಮ ಪೌರುಷವೆಲ್ಲ ಬಾಯಿಲ್ಲದ ಆ ಪ್ರಾಣಿ ಮುಂದೆ ಮತ್ತೆ ಬಾಯಿರೋ ನನ್ ಮುಂದೆ ಅಷ್ಟೇ ! ... ನಾನು "ಅಯ್ಯೋ, ಅಲ್ವೇ ಮಾರಾಯ್ತಿ! ನಾನು ಆ ಅಜ್ಜಿ ಮುಂದೆ ಹೀಗೆ ರೇಗೋದು, ಆ ಅಜ್ಜಿ ಎದೆ ನಿಂತು ಸಾಯೋದು ... ಯಾಕೆ ಅಂತೀನಿ" ... "ಕಳ್ಳಂಗೊಂದು ಪಿಳ್ಳೇ ನೆವ ಅಷ್ಟೇ. ನೀವಿನ್ನೇನು ಕೂಗಿದ್ರೂ ಆ ಅಜ್ಜಿಗೆ ಕೇಳಲ್ಲ. ನೀವೂ ಆ ಅಜ್ಜಿ ಎಲ್ಲ ಒಂದೇ ಜಾತಿ. ’ರ್ರೀ ಮಾರ್ಕೆಟ್’ಗೆ ಹೋಗಿದ್ರಾ? ಇಲ್ಲ ಕಣ್ರೀ ಮಾರ್ಕೆಟ್’ಗೆ ಹೋಗಿದ್ದೆ’ ಅನ್ನೋ ಜಾತಿ !"
ಥತ್! ಬೆಳಿಗ್ಗೆ ಬೆಳಿಗ್ಗೆ ಆ ಬೆಕ್ಕಿನ ಮುಖ ನೋಡಿದ್ದಕ್ಕೇ ಇಷ್ಟೆಲ್ಲ ಹಗರಣ. ಹಾಗಂತ ಗಟ್ಟಿಯಾಗಿ ಹೇಳೋ ಹಾಗೂ ಇಲ್ಲ. ’ತಮ್ಮ ಮೂಢನಂಬಿಕೆಗೆ ನನ್ನ ಹೆಸರು ಬಳಸಿ ಮಾನ ನಷ್ಟ ಮಾಡಿದ್ದಾರೆ’ ಅಂತ ಬೆಕ್ಕು ಕೇಸ್ ಹಾಕಿದರೆ, ಈಗಿನ ಸರಕರಾದವರು ನನ್ನನ್ನ ಒಳಗೆ ಹಾಕ್ತಾರೆ ಅಷ್ಟೇ!
ಪೇಪರ್’ಅ ಮೊದಲ ಪೇಜ್ ಭರ್ತಿ ಅದದೇ ಸುದ್ದಿಗಳು ... ಹೊಸಾ ಬಾಟ್ಲಿ, ಹಳೇ ಮದ್ಯ! ಅದದೇ ಘಟನೆಗಳು, ಪಾತ್ರಧಾರಿಗಳು ಬೇರೆ ಬೇರೆ. ನಿಮ್ಮ ಈ ಸುದ್ದಿಗಳಿಂದ ನನಗೆ ಖಿನ್ನತೆ ಆವರಿಸಿದೆ ಅಂತ ನಾನೇ ಈ ಪತ್ರಿಕೆಯವರ ಮೇಲೆ ಕೇಸ್ ಹಾಕಿದರೆ? ... "ಸಾರ್, ತಮಗೆ ನಮ್ ಪೇಪರ್ ಓದಿ ಅಂತ ನಾವೇನಾದ್ರೂ ನಿಮ್ ಕಾಲಿಗೆ ಬಿದ್ದಿದ್ವಾ?" ಅಂತ ಅಂದುಬಿಟ್ಟರೆ? ಥತ್! ಎಂಥಾ ಕಾಲ? ಮನುಷ್ಯರ ವಿರುದ್ದವೋ ಏಳೋ ಹಾಗಿಲ್ಲ, ಪ್ರಾಣಿಗಳ ಮೇಲೂ ಏರೋ ಹಾಗಿಲ್ಲ !
ಎರಡನೇ ಪುಟಕ್ಕೆ ತಿರುವಿದೆ. "ಅಜ್ಜಿ ಕೈಲಿ ಲಟ್ಟಣಿಗೆ ಪೆಟ್ಟು ತಿಂದ ಸುಬ್ಬ!" ಅನ್ನೋ ಸುದ್ದಿ .... ಪೇಪರ್’ನಲ್ಲಲ್ಲ ... ನನ್ನಾಕೆ ಅಡುಗೆಮನೆಯಿಂದ ಕೂಗಿ ಹೇಳಿದ ಸುದ್ದಿ. ಪೇಪರ್ ಸುದ್ದಿಗಿಂತ ಈ ಸುದ್ದೀನೇ ಸೊಗಸಾಗಿದೆ ಅನ್ನಿಸಿ, ಫೋನ್ ತೆಗೆದುಕೊಂಡು ಕರೆ ಹಚ್ಚಿಯೇಬಿಟ್ಟೆ. ಮೂರು ರಿಂಗ್ ಆದ ಮೇಲೆ ಪಾತಾಳದಿಂದ ಬಂತೊಂದು ದನಿ "ಹ ..ಲೋ" ಅಂತ ... "ಏನೋ ಸುಬ್ಬ? ಬಾವೀಲಿದ್ಯಾ?" ಅಂದೆ ... ಅದಕ್ಕೆ ಅವನು "ಇಲ್ಲ ಕಣೋ ಬಾವೀಲಿ ಸಿಗ್ನಲ್ ಸಿಗೋಲ್ಲ" ಅಂದ ... ಅಂದ್ರೇ, ಅದನ್ನೂ ಪ್ರಯತ್ನ ಮಾಡಿಬಿಟ್ಟಿದ್ದಾನೆ ಅಂತಾಯ್ತು ! "ಯಾವಾಗೋ ಟ್ರೈ ಮಾಡ್ದಿ ಅದನ್ನ?" ಅಂದೆ
ಸುಬ್ಬ ಉವಾಚ "ಮೊನ್ನೆ ಅಜ್ಜಿ ಕೊಡ ಸರಿಯಾಗಿ ಕಟ್ಟಿರಲಿಲ್ಲ ಅನ್ನಿಸುತ್ತೆ. ತುಂಬಿದ್ ಕೊಡ ಎಳೆದಾಗ್ ಹಗ್ಗ ಬಿಚ್ಚುಕೊಳ್ತು. ನಾನು ಆ ಹಗ್ಗ ತೊಲೆಗೆ ಕಟ್ಟಿ, ಒಳಗೆ ಇಳಿದು ಕೊಡ ತೆಗೆದು ಹಗ್ಗಕ್ಕೆ ಕಟ್ಟಿ ಅಜ್ಜಿಗೆ ಮೇಲೆ ತೆಗೊಳ್ಳೋಕ್ಕೆ ಹೇಳ್ದೆ. ಮೇಲೆ ಎಳೆದುಕೊಂಡಷ್ಟೆ ರಭಸಕ್ಕೆ ಮತ್ತೆ ಬಾವಿ ಒಳಗೆ ಕಳಿಸಿದ್ರು" ... "ಯಾಕಂತೆ" ... "ಖಾಲೀ ಕೊಡ ಮೇಲೆ ಕಳಿಸಿದ್ಯಲ್ಲೋ ಹು.ಮು.ದೇ. ಅಲ್ಲೇ ಇದ್ಯಲ್ಲ, ನೀರು ತುಂಬಿ ಕಳಿಸೋದು ತಾನೇ ಅಂತ ... ಸರಿ ಅಂತ ನಾನು ನೀರು ತುಂಬಿ ಕಳಿಸಿದ ಮೇಲೆ, ಅಜ್ಜಿ ಯಥಾಪ್ರಕಾರ ಹಗ್ಗ ಬದಿ ಹಾಕಿ ಒಳಗೆ ಹೊರಟೇ ಹೋದರು, ನನ್ನನ್ನ ಒಳಗೇ ಬಿಟ್ಟು ... ಪುಣ್ಯಕ್ಕೆ ಜೇಬಲ್ಲಿ ಫೋನಿತ್ತು. ಏನ್ ಮಾಡೋದು, ಯಾರಿ ಫೋನು ಮಾಡಿದ್ರೂ ಕಾಲ್ ಹೋಗ್ತಾನೇ ಇಲ್ಲ. ಬಾವಿ ಒಳಗೆ ಸಿಗ್ನಲ್ ಸಿಗಲ್ಲ ಕಣೋ"
"ಮಹಾ ಶೋಚನೀಯವಾಗಿದೆ ಕಣೋ ಸುಬ್ಬ ನಿನ್ ಕಥೆ" ... "ಹೌದು ಕಣೋ. ನಿನ್ ಬಿಟ್ರೆ ನನ್ ಹಿತೈಶಿ ಅಂದ್ರೆ ಆ ಫೇಸ್ಬುಕ್ಕು. ನಾನು I was in the well ಅಂತ ಬರೆದೆ. ತುಂಬಾ ಜನ ಅದಕ್ಕೆ ಬರೆದ್ರು. ನಿನ್ ಇಂಗ್ಲೀಷು ತಪ್ಪು. I am well ಅಂತ ಹಾಕು ಸಾಕು ಅಂತ ... ನಮ್ ಜನಕ್ಕೆ ಕಾವಿ, ಕೋವಿ ಅಂತೆಲ್ಲ ಗೊತ್ತೇ ವಿನಹ ಬಾವಿ ಯಾರಿಗೂ ಗೊತ್ತಿಲ್ಲ ಕಣೋ" .... ನಾನು ದಂಗಾಗಿ ಹೋದೆ ... ಇಷ್ಟೆಲ್ಲ ಬುದ್ದಿವಂತ ಯಾವಾಗಾದ ನಮ್ ಸುಬ್ಬ? ಬುದ್ದ ಬೋಧೀ ವೃಕ್ಷದ ಕೆಳಗೆ ಕೂತಾಗ ಜ್ಞ್ನಾನೋದಯ ಆದಂತೆ, ನಮ್ಮ ಈ ಬುದ್ದಿಜೀವಿಗೆ ಬಾವೀಲಿ ಜ್ಞ್ನಾನೋದಯ ಆಗಿರಬಹುದೇ?
ಇದೇ ಯೋಚನೆಯಲ್ಲಿ ಅಡುಗೆ ಮನೆಗೆ ಹೋದೆ. ಪೂರಿ-ಸಾಗು ತಯಾರಿ ನೆಡೀತಿತ್ತು. ’ಸ್ವಲ್ಪ ಲಟ್ಟಿಸಿಕೊಡ್ತೀರ? ಬೇಗ ಕೆಲಸ ಆಗುತ್ತೆ?’ ಅಂದಳು ನನ್ನ ಧರ್ಮಪತ್ನಿ. ಆಗ ನನಗೆ ಜ್ಞ್ನಾನೋದಯ ಆಯ್ತು ... "ಒಂದು ನಿಮಿಷ ಇರು. ನಾನು ಸುಬ್ಬನಿಗೆ ಕರೆ ಮಾಡಿದ್ದೇ ಲಟ್ಟಣಿಗೆಯಲ್ಲಿ ಏಟು ಬಿದ್ದಿದ್ಯಾಕೆ ಅಂತ. ಅದನ್ನ ಕೇಳೋದೇ ಮರೆತು ಹೋಯ್ತು" ಅಂತ ಮತ್ತೆ ಕರೆ ಮಾಡಿದೆ. ಅವನು ಹಂಚಿಕೊಂಡ ವಿಷಯ ಅವನ ಬಾಯಲ್ಲೇ ಹೇಳ್ತೀನಿ ಕೇಳಿ ...
ಸರಕಾರವೇ ದೇಗುಲ. ಅಧಿಕಾರಿಗಳು ಪ್ರಭುಗಳು. ಅವರು ನುಡಿದಂತೆ ನೆಡೆವುದು ಧರ್ಮ ಅಂತೆಲ್ಲ ಭಯಂಕರ ನಂಬಿಕೆ ಇರೋ ಮಾನವ ನಮ್ ಸುಬ್ಬ.
ಬೆಳಿಗ್ಗೆ ಎದ್ದು ಪಾಯಿಖಾನೆಗೆ ಹೋಗಿಬಂದವ, ಕೈಯನ್ನು ಶುಭ್ರವಾಗಿ ತೊಳೆದರೂ ಕಾಲಿಗೆ ನೀರು ಸೋಕಿಸಲಿಲ್ಲ. "ಕಾಲಿಗೆ ನೀರು ಹಾಕದೆ ಇದ್ರೆ ಅದು ಶನಿಕಾಟ ಕಣೋ ಹು.ಮು.ದೇ" ಅಂತ ಅಜ್ಜಿ ಕೂಗಿದ್ದಕ್ಕೆ "ಅಜ್ಜೀ, ಅವೆಲ್ಲ ಮೂಢ ನಂಬಿಕೆ. ಜಗತ್ತಲ್ಲಿ ಎಷ್ಟು ಜನರಿಗೆ ಕಾಲಿದೆ, ಏನ್ ಕಥೆ. ಬೆಳಿಗ್ಗೆ ಹೊತ್ತು ಹೊರಗೆ ಹೋದೋರು ಎಲ್ರೂ ಕಾಲು ತೊಳೀತಾರಾ? ಹಾಗಂತ ಶನಿ ಎಲ್ಲೆಲ್ಲೀ ಅಂತ ಸೇರ್ಕೊಂಡು ಕಾಟ ಕೊಡ್ತಾನೆ? ನಾನು ಕಾಲು ತೊಳೆಯಲ್ಲ" ಅಂತ ಸುಬ್ಬನ ವಾದ. ಅಜ್ಜಿ ಹೇಳೋದು "ಮನೆಯಿಂದ ಹೊರಗೆಲ್ಲೋ ಇರೋ ಪಾಯಿಖಾನೆಗೆ ಹೋಗಿ ಬಂದು ಮಾಡುವಾಗ ಕಾಲಿಗೆ ಏನೇನು ಅಂಟಿರುತ್ತೋ ಅದನ್ನ ಶುಚಿ ಮಾಡಿಕೊಳ್ಳಿ ಅಂದ್ರೆ ಜನಕ್ಕೆ ಅರ್ಥವಾಗೋಲ್ಲ ಅನ್ನೋದಕ್ಕೆ ಈ ರೀತಿ ಶಾಸ್ತ್ರ ಮಾಡಿರಬಹುದು, ಆ ಕಾಲದವರು. ಆದರೆ ಈಗಿನ ಕಾಲಕ್ಕೆ ಇದು ಸಲ್ಲದು ಅಲ್ಲವೇ?" ಅಂತ. ಸುಬ್ಬನ ಮನೆಯಲ್ಲಿ ಹಾಗೆ ಇಲ್ಲದೇ ಇದ್ದರೂ, ರೂಮಲ್ಲೇ ಟಾಯ್ಲೆಟ್ ಇಟ್ಕೊಂಡವರು ಕಾಲು ಎಲ್ಲಿ ತೊಳೀತಾರೆ?
ತುಳಸೀ ಹಬ್ಬಕ್ಕೆ ಸುಬ್ಬನಿಗೆ ಎಣ್ಣೆ ಸ್ನಾನ. ಸರಿಯಾಗಿ ಹೇಳಬೇಕೂ ಅಂದ್ರೆ, ಗಂಡು ಹಬ್ಬವಾಗಲಿ, ಹೆಣ್ಣೂ ಹಬ್ಬವಾಗಲಿ ಸುಬ್ಬನಿಗೆ ಎಣ್ಣೆ ಸ್ನಾನ. ಎಣ್ಣೆ ಹಚ್ಚಿಕೊಂಡ ಮೇಲೆ ಏನೂ ತಿನ್ನಬಾರದು ಅನ್ನೋ ಶಾಸ್ತ್ರ ಇದೆ. ಈಗ ಸುಬ್ಬ ಅದಕ್ಕೆ ವಿರುದ್ದ. ಎಣ್ಣೆ ಹಚ್ಚಿಕೊಂಡು ನಾನು ತಿಂದರೆ ಸೋದರಮಾವನಿಗೆ ಹೇಗೆ ಸಾಲ ಆಗುತ್ತೆ ಅಂತ ಅವನ ವಾದ. "ಎಣ್ಣೆ ಹಚ್ಚಿಕೊಂಡ ತಲೆಗೆ ಸೀಗೇಪುಡಿ ಹಚ್ಚಿ ಸ್ನಾನ ಮಾಡಿದಾಗ, ಆ ಸೀಗೆಪುಡಿ ಬಾಯಿಗೆ ಹೋಗಿ ಕಹಿ ಬಂದು ತಿಂದದ್ದೆಲ್ಲ ವಯಕ್ ಅಂದ್ರೆ ಬಚ್ಚಲೆಲ್ಲ ಗಲೀಜು ಆಗುತ್ತೆ ಅನ್ನೋದಕ್ಕೆ ಬಹುಶ: ಈ ಶಾಸ್ತ್ರ ಮಾಡಿರಬಹುದು" ಅಂತ ಅಜ್ಜಿ ಹೇಳಿಕೆ. ಆದರೆ ಸರಕಾರೀ ಭಕ್ತ ಸುಬ್ಬನಿಗೆ ಇವೆಲ್ಲ ಎಲ್ಲಿ ಅರ್ಥವಾಗುತ್ತೆ? ಎಣ್ಣೆ ಹಚ್ಚಿಕೊಂಡು, ಅರ್ಧ ಕೇಜಿ ಕರಿದವಲಕ್ಕಿ ತಿಂದು, ಜೊತೆಗೆ ಸೀಗೇಪುಡಿಯನ್ನೂ ತಿಂದವನಿಗೆ ಹೊಟ್ಟೆ ಎಲ್ಲ ಹೇಗೇಗೋ ಆಗ್ತಿತ್ತಂತೆ. ತಲೆ ಉಜ್ಜಿ ನೀರು ಸುರಿಯೋ ನೆಪದಲ್ಲಿ ಬೋಸಿಯಲ್ಲೇ ತಲೆಗೆ ಎರಡು ಮಟುಕಿದ್ದರಿಂದ ಜೋರಾಗಿ ಹೇಳಲಿಲ್ಲ ಅಷ್ಟೇ!
ಸ್ನಾನ ಆದ ಮೇಲೆ ದೇವರಿಗೆ ಅಡ್ಡ ಬೀಳೋಲ್ಲ ಅಂತ ಹೇಳೋಕ್ಕೆ ಮಾತ್ರ ಅವನಿಗೇ ಧೈರ್ಯ ಇರಲಿಲ್ಲ. ಹತ್ತು ನಿಮಿಷ ದೇವರ ಮುಂದೆ ಕೂತವ ತೂಕಡಿಸಲು ಶುರು ಮಾಡಿದಾಗ ಅವನಮ್ಮ ತಿವಿದೆಬ್ಬಿಸಿ, ದೇವರು ಆಗಲೇ ಬಂದು ಹೋಗಾಯ್ತು ಅಂದ್ರು .... ಬಟ್ಟೆ ಬರೆ ಅಂತಾದ ಮೇಲೆ ಬಿಸಿ ಬಿಸಿ ಕಾಫಿ ಲೋಟ ಹಿಡ್ಕೊಂಡು ಹೊಸ್ತಿಲ ಮೇಲೆ ನಿಂತುಕೊಂಡು ಕುಡೀತಿದ್ದ. "ಹೊಸ್ತಿಲ ಮೇಲೆ ನಿಲ್ಲಬಾರದು ಅಂತ ಎಷ್ಟು ಸಾರಿ ಹೇಳೋದೋ ಹು.ಮು.ದೇ" ... ಗಾಳಿ ಬೆಳಕು ಆಡಲಿ ಅಂತ ಬಾಗಿಲು ತೆಗೆಯೋದು. ಬಾಗಿಲಿಗೆ ಅಡ್ಡ ನಿಂತರೆ, ಅದೂ ನಮ್ ಸುಬ್ಬನಂತಹ ದೊಡ್ಡ ದೇಹದವ್ರು, ಗಾಳಿ ಬೆಳಕಿಗೆ ಜಾಗವಾದ್ರೂ ಎಲ್ಲಿರುತ್ತೆ. ಆದರೆ ಸುಬ್ಬನಿಗೆ ಅವೆಲ್ಲ ಎಲ್ಲಿ ಅರ್ಥವಾಗುತ್ತೆ. ಅಜ್ಜೀ ಮಾತಿಗೆ ವಿರುದ್ದವಾಗಿ ಹೊಸ್ತಿಲ ಮೇಲೇ ನಿಂತು ಕಾಫಿ ಮುಗಿಸಿ ಒಳ ಬಂದ. ಅವನಿಗೆ ಅರಿವಾಗದೇ ಇದ್ದ ಒಂದಂಶ ಅಂದರೆ, ಇವನೆಲ್ಲ ಆಟ ಅಜ್ಜಿಗೆ ಪಿತ್ತ ನೆತ್ತಿಗೆ ಏರಿಸುತ್ತಿತ್ತು.
ಮಧ್ಯಾನ್ನವೆಲ್ಲ ಹಾಗೇ ಏನೋ ಮಾಡ್ತಾ ಕೂತಿದ್ದು ಮುಸ್ಸಂಜೆ ಮೇಲೆ ಮಲಗೋಕ್ಕೆ ಹೋದ. ಅಜ್ಜಿ ಸೀರಿಯಸ್ಸಾಗಿ ಬೈದದ್ದಕ್ಕೆ, ಮೇಲಾಗಿ ನಿದ್ದೆ ಬಾರದೆ ಇದ್ದುದರಿಂದ ಸುಮ್ಮನಿದ್ದ. ಹಬ್ಬದ ಸಂಜೆ ಹೊತ್ತು, ಅಜ್ಜಿ ಮನೆಯಲ್ಲಿ ದೀಪ ಹಾಕಲು, ಹಿಂದೆಯೇ ಬಂದು ಆರಿಸಿದ್ದ. ಮನೆಯ ಜಗಲಿ ಮೇಲೆ ಕೂತು ಉಗುರು ಕತ್ತರಿಸಲು ಹತ್ತಿದ್ದ. ಸಂಜೆ ತುಳಸೀ ನೈವೇದ್ಯಕ್ಕೆ ಅಂತ ನಾಲ್ಕಾರು ಕಡುಬು ಮಾಡೋಣ ಲಟ್ಟಿಸುತ್ತಿದ್ದ ಅಜ್ಜಿ, ಅದೇ ಲಟ್ಟಣಿಗೆಯಲ್ಲಿ ಒಂದು ಬಿಟ್ಟರು.
"ರಾಮಾ! ರಾಮಾ!! ಹಬ್ಬದ ದಿನ ಎಲ್ಲ ಅನಿಷ್ಟದ ಕೆಲಸವೇ ಮಾಡ್ತಿದ್ದೀಯ, ಹು.ಮು.ದನ್ನ ತಂದು" ... ಮೂಢನಂಬಿಕೆಯ ವಿರುದ್ದ ಹೋರಾಡಿದರೂ ಅಜ್ಜಿಯ ಮೇಲೆ ಅವನ ಹೋರಾಟವಂತೂ ವ್ಯರ್ಥವಾಗಿತ್ತು. ಎಲ್ಲ ಮೂಢನಂಬಿಕೆಗೂ ಅಜ್ಜಿ ತಕ್ಕ ಸಮಾಧಾನ ಹೇಳಿದ್ದರು. ಸುಬ್ಬನ ಅಜ್ಜಿ ಹಳಬರಿರಬಹುದು ಆದರೆ ಮೂರ್ಖರಲ್ಲವಲ್ಲ ! ಸುಬ್ಬ ಅಜ್ಜಿಯನ್ನು ಕೇಳಿದ "ಅಜ್ಜೀ, ನೀವು ಈಗ ರಾಮಾ, ರಾಮಾ ಅಂದ್ರಲ್ಲ ಅದೇ ರೀತಿ ಜಾನಕೀರಾಮ, ಕೋದಂಡರಾಮ ಅಂತೆಲ್ಲ ಅಂತೀರ ಅಲ್ವಾ?" "ಹೌದು ಕಣೋ, ಹು.ಮು.ದೇ ಏನೀಗ?" "ಅಲ್ಲಾ, ಎಲ್ಲ ಥರ ರಾಮ ಅಂತೀರಲ್ಲ, ಸಿದ್ದರಾಮ ಅಂತ ಯಾಕೆ ಅನ್ನೋಲ್ಲ? ಇಷ್ಟಕ್ಕೂ ಸಿದ್ದರಾಮಾ ಅಂದರೇನು ಅಜ್ಜೀ?"
"ಸಿದ್ದವಾಗಿರು ಬಂದು ಹೇಳ್ತೀನಿ ... ಮೂಢನಂಬಿಕೆ ಅದೂ ಇದೂ ಅಂತ ತಲಹರಟೆ ಮಾಡ್ತಾ ಇದ್ರೆ, ಲಟ್ಟಣಿಗೇಲೇ ಉತ್ತರ ಕೊಡ್ತೀನಿ ... ಹು.ಮು.ದೇ" ... ಈ ಮಾತು ಸುಬ್ಬನಿಗೇ ಹೇಳಿದರೋ ಅಥವಾ ....?
Comments
ಉ: ಸುಬ್ಬನೂ ... ಮೂಢನಂಬಿಕೆಯೂ !
ಭಲ್ಲೆ ಜೀ, ಮೂಡ ನಂಬಿಕೆಗಳೊ, ನಿಗೂಢ ನಂಬಿಕೆಗಳೊ - ಒಟ್ಟಾರೆ ಲಟ್ಟಣಿಗೆ ಸೇವೆಯಿಂದಾಗುವ ಗಾಢ ನಂಬಿಕೆಗಳು :-)
In reply to ಉ: ಸುಬ್ಬನೂ ... ಮೂಢನಂಬಿಕೆಯೂ ! by nageshamysore
ಉ: ಸುಬ್ಬನೂ ... ಮೂಢನಂಬಿಕೆಯೂ !
ನಮಗೆ ನಂಬಿಕೆ ಇಲ್ಲದಿದ್ದರೆ ಬೇಡ, ಇನ್ನೊಬ್ಬರ ನಂಬಿಕೆಗೆ ಅಡ್ಡ ಬರೋದು ಬ್ಯಾಡ ಅಂತ ಸುಬ್ಬನಿಗೇನೋ ತಿಳೀತು ... ಆದರೆ ... ಹೋಗ್ಲಿ ಬಿಡಿ :-)
In reply to ಉ: ಸುಬ್ಬನೂ ... ಮೂಢನಂಬಿಕೆಯೂ ! by bhalle
ಉ: ಸುಬ್ಬನೂ ... ಮೂಢನಂಬಿಕೆಯೂ !
ಆ ಹು.ಮು. ಮ. ಸುಬ್ಬ ಜಾಣ! ಅರ್ಥ ಮಾಡಿಕೊಳ್ತಾನೆ! :)
In reply to ಉ: ಸುಬ್ಬನೂ ... ಮೂಢನಂಬಿಕೆಯೂ ! by kavinagaraj
ಉ: ಸುಬ್ಬನೂ ... ಮೂಢನಂಬಿಕೆಯೂ !
ಹೌದು ಕವಿಗಳೇ .... ಸುಬ್ಬನಿಗೂ ಅರ್ಥವಾಯಿತು ಆದರೆ ...
ಉ: ಸುಬ್ಬನೂ ... ಮೂಢನಂಬಿಕೆಯೂ !
:) :) ಭಲ್ಲೇಜಿ, ಜಗ್ಗೇಶ್ ಸಿನೆಮಾದಲ್ಲೊಬ್ಬಳು ಅಜ್ಜಿ ಮಡಿ-ಮಡಿ ಅಂತ ಮೂತು ಮಾತಿಗೆ ಮುಂಡೇದೆ ಅಂತ ಶಾಪ ಹಾಕುವ ಅಜ್ಜಿಯ ನೆನಪಾಯಿತು. ನಿಮ್ಮ ಮಿತ್ರ ಸುಬ್ಬನಿಗೆ ಏನು ಬೇಕಿದ್ದರೂ ಮಾಡಿ.. ಆದರೆ ಈ ಅಜ್ಜಿ ಮಾತ್ರ ಪರ್ಮನೆಂಟ್ ಇರಬೇಕು.
ಉ: ಸುಬ್ಬನೂ ... ಮೂಢನಂಬಿಕೆಯೂ !
ಅಜ್ಜಿಯೆಂದರೆ ಅಜ್ಜಿ ! ಖಂಡಿತ ಗಣೇಶ್'ಜಿ ... ಅಜ್ಜಿ ಚಿರಾಯು ಆಗಿರುತ್ತಾರೆ :-)