ಮಂಡೋದರಿ ನಿನಗ್ಯಾಕಿ ಪರಿ ಕಿರಿಕಿರಿ....?

ಮಂಡೋದರಿ ನಿನಗ್ಯಾಕಿ ಪರಿ ಕಿರಿಕಿರಿ....?

_____________________ 

ಅಯ್ಯೋ ಪಾಪ, ಮಂಡೋದರಿ...!
_____________________
.
ರಾಮಾಯಣದ ಕೆಲವು ಹೆಣ್ಣು ಪಾತ್ರಗಳನ್ನು ಆಳವಾಗಿ ಹೊಕ್ಕಿ ಅವಲೋಕಿಸಿದಷ್ಟು ಕೆಲವು ವಿಸ್ಮಯಕಾರಿ ಅಂಶಗಳು ಎದ್ದು ಕಾಣುತ್ತವೆ. ಇದು ತೇತ್ರಾಯುಗದಲ್ಲಿ ನಡೆದ ಕಾರಣವೊ ಏನೊ ಧರ್ಮ ಮೂರು ಕಾಲಲಿ ನಿಂತು ಅಧರ್ಮ ಒಂದು ಕಾಲಲಿ ಅಡಿಯಿಟ್ಟು ಬರುತ್ತಿದ್ದ ಕಾಲ. ಆ ಒಂದು ಕಾಲೆ ಇಡಿ ರಾಮಾಯಣದ ಪ್ರವರಕ್ಕೆ ಕಾರಣವಾದದ್ದನ್ನು ನೋಡಿದರೆ, ಹಾಗು ಅದು ಮಾಡಿದ ದಾಂಧಲೆಯನ್ನು ಗಮನಿಸಿದರೆ - ಆ ಒಂದು ಪಾದದ ಶಕ್ತಿ ಸಾಕಷ್ಟು ಅಸಾಧಾರಣವೆಂದೆ ಹೇಳಬೇಕು. ರಾವಣ, ಶೂರ್ಪನಖಿಯಂತಹ ಎಷ್ಟೊ ಬಲಶಾಲಿ ರಕ್ಕಸಿ ಪ್ರವೃತ್ತಿಯ ದುಷ್ಟರು ಮೂರು ಪಾದದ ರಕ್ಷೆಯಡಿ ನಿಂತ ಸಜ್ಜನರನ್ನೂ ದಂಡಿಸಿ ಆಳುವುದೂ ಸಾಧ್ಯವಾಯ್ತು. ಬಹುಶಃ ಆ ಅಸುರಿ ಶಕ್ತಿಯ ಬಲದಿಂದಲೆ ರಾವಣನಂತಹ ಅಸುರಿ ಮನದ ಧೂರ್ತರು, ಮಂಡೋದರಿಯಂತಹ ಸುಶೀಲೆಯ ಇಷ್ಟಾನಿಷ್ಟಗಳನ್ನು ಬದಿಗೊತ್ತಿಸಿ, ಸೀತಾಪಹಣದ ದುಸ್ಸಾಹಸಕ್ಕಿಳಿಯುವುದು ಸಾಧ್ಯವಾಯ್ತು. 
.
ಅಪೂರ್ವ ಸುಂದರಿ ಮಂಡೋದರಿ
ತಂಪಾಗಿಸಿದಳೆ ರಾವಣನ ಕಣ್ಣುರಿ
ಆತ್ಮಲಿಂಗವನರಸಿ ಪಾರ್ವತಿ ಗೆಲ್ಲೆ
ಸದ್ಯ ಮಂಡೋದರಿ ತಪ್ಪಿಸಿದ ಗಲ್ಲೆ || 01 ||
.
ವಿಚಿತ್ರವೆಂದರೆ ಮಂಡೋದರಿಯೇನು ಯಾರೊ ತಂದು ಕಟ್ಟಿದ ಹೆಣ್ಣಲ್ಲ. ಅಪರೂಪದ ಸುಂದರಿಯಾಗಿಯೆ ರಾವಣನ ಕಣ್ಮನ ಸೆಳೆದವಳು. ಶಿವನಾತ್ಮಲಿಂಗಕೆಂದು ತಪಸ್ಸು ಮಾಡಿದ ರಾವಣ, ಶಿವನ ಜತೆ ಪ್ರತ್ಯಕ್ಷಳಾದ ಅಪರೂಪದತಿಶಯ ಸೌಂದರ್ಯವತಿ ಪಾರ್ವತಿಯನ್ನು ಕಂಡು ಬೆರಗಾಗಿ, ಅವಳನ್ನೆ ವರವಾಗಿ ಬೇಡಿ ಪೇಚಿಗೆ ಸಿಕ್ಕಿಸಿದ ಪ್ರಸಂಗದಲ್ಲಿ, ಶಿವೆಯ ಪಾಲಿನ ರಕ್ಷಕಿಯಾಗಿ ಬಂದ ಹೆಣ್ಣು ಮಂಡೋದರಿ. 
.
ಮಾತೆಗೇನೊ ಮಾತು ಕೊಟ್ಟಾ ರಾವಣ
ಶಿವನಾತ್ಮಲಿಂಗ ತರೆ ತಪಕೊರಟ ಕ್ಷಣ
ಮಂಕು ಹಿಡಿಸಿತ್ತೆ ಶಿವೆಯಾ ಸೌಂದರ್ಯ
ಬೇಡಿ ಕೆಣಕಿದನೆನೆ ಕೊಡವಳ ಭಾರ್ಯ || 02 ||
.
ಭಕ್ತ ಪರಾಧೀನ ಶಿವ ಉಸಿರೆತ್ತದ ಭಾವ
ಬರಬೇಡವೆಂದರೆ ಕೇಳಾ ಗಿರಿಜೆ ಸ್ವಭಾವ
ವಿಧಿಯಿರದೆ ವರವಿತ್ತ ಪಾರ್ವತಿ ಸಂಪತ್ತ
ಕೊಟ್ಟು ಬರಿಗೈಲಿ ನಡೆದನೆ ಕೈಲಾಸದತ್ತ || 03 ||
.
ಭಕ್ತ ಪರಾಧೀನ ಭಕ್ತರ ಕೋರಿಕೆಗೆ ಇಲ್ಲವೆನ್ನುವಂತಿಲ್ಲ. ಆತ್ಮಲಿಂಗದ ತಪಕೆ ಕುಳಿತವನ ಮನ ಇಷ್ಟೊಂದು ಚಂಚಲವೆಂದು ಪಾಪ ಅವನೂ ಊಹಿಸಿರಲಿಲ್ಲವೇನೊ? ಆದರೆ, ಅದಕ್ಕೂ ಮೊದಲು ಬರುವ ಪ್ರಶ್ನೆ, ಭಕ್ತರಿಗೆ ವರಕೊಡಲು ಜತೆಯಲ್ಲಿ ಜಗನ್ಮಾತೆಯನ್ನು ಕರೆತರುವ ಅಗತ್ಯವೇನಿತ್ತು? ಎನ್ನುವುದು. ಸಾಧಾರಣ ಭಕ್ತರನ್ನು ನೋಡಬರುವ ವರದಾತರೆಲ್ಲ ತಾವೊಬ್ಬರೆ ಬರುವುದಲ್ಲವೆ? ನನಗೆ ನೆನಪಿರುವ ಮಟ್ಟಿಗೆ ಯಾವ ತಪಸ್ಸಿನ ಸಂಧರ್ಭದಲ್ಲೂ ಬ್ರಹ್ಮದೇವ ಸರಸ್ವತಿಯ ಜತೆಯಲ್ಲಿ ಬಂದದ್ದೆ ಇಲ್ಲ. ಅದು ಬ್ರಹ್ಮದೇವನ ಮುನ್ನೆಚ್ಚರಿಕೆಯೊ ಅಥವಾ ಸರಸ್ವತಿದೇವಿಯ ಆಲಸಿಕೆಯೊ - ಒಟ್ಟಾರೆ ಬ್ರಹ್ಮದೇವನೊಬ್ಬನೆ ಪ್ರತ್ಯಕ್ಷವಾಗುವ ಸಾಮಾನ್ಯ ದೃಶ್ಯವೆ ನೆನಪಾಗುವುದು. ಆದರೆ ಶಿವನ ವಿಷಯದಲ್ಲಿ ಹಾಗೆ ಹೇಳುವಂತಿಲ್ಲ. ಶಿವೆಯೊಡನೆ ಬರುವ ಎಷ್ಟೊ ಸಂಧರ್ಭಗಳನ್ನು ಕಾಣಬಹುದು. ಇಲ್ಲಿ ಎರಡು ತರದ ಸಾಧ್ಯತೆಗಳನ್ನು ಊಹಿಸಬಹುದು : ಮೊದಲನೆಯದು ಶಿವಶಕ್ತಿಯರ ಐಕ್ಯ ರೂಪವಾದ ಅರ್ಧನಾರೀಶ್ವರ - ಅರ್ಧನಾರೀಶ್ವರಿ ರೂಪವನ್ನು ಆಧರಿಸಿ ಹೇಳುವುದಾದರೆ ಶಿವ-ಶಿವೆಯರು ಯಾವಾಗಲೂ ಜತೆಯಲ್ಲೆ ಇರುತ್ತಾರೆನ್ನುವ ಒಂದು ಸಿದ್ದಾಂತ; ಅವರಲ್ಲಿನ ಪರಸ್ಪರರ ಮೇಲಿನ ಅಪರಿಮಿತ ಪ್ರೀತಿಯ ರೂಪಕವೆಂದೂ ಹೇಳಬಹುದೇನೊ. ಇನ್ನು ಎರಡನೆಯದಾಗಿ, ರಾವಣ ಆತ್ಮಲಿಂಗಕ್ಕಾಗಿ ತಪಸ್ಸು ಮಾಡುತ್ತಿರುವುದು ಗೊತ್ತೆ ಇತ್ತು. ಆತ್ಮಲಿಂಗವನ್ನೆ ಕೊಟ್ಟುಬಿಟ್ಟರೆ, ಆತ್ಮ ತೇಜಸ್ಸನೆ ರಾವಣನ ಕೈಗಿತ್ತು ತೇಜೋಹಿನ ಆತ್ಮರಹಿತ ಶಿವರೂಪಿನ ಜತೆ ಶಿವೆ ನಿಭಾಯಿಸುವುದಾದರೂ ಹೇಗೆ? ಶಕ್ತಿಯನ್ನು ನೋಡಿಯಾದರೂ, ರಾವಣ ತಾನು ಕೇಳುವ ವರದಲ್ಲಿ ಮಾರ್ಪಾಡು ಮಾಡಿಕೊಂಡಾನೆಂಬ ಅನಿಸಿಕೆಯು ಇತ್ತೇನೊ? ರಾವಣನೇನೊ ಮನಸು ಬದಲಿಸಿ ಬೇರೆ ವರವನ್ನೆ ಕೇಳಿದ - ಆದರೆ ಬುಡಕ್ಕೆ ಕೈಯಿಟ್ಟುಬಿಟ್ಟ!
.
ಕಲಹಪ್ರಿಯ ನಾರದ ನಾಟಕ ವಿಶಾರದ
ಚಾಲಾಕಿತನದೆ ರಾವಣಗೆ ಏಮಾರಿಸಿದ
ಬದುಕಿದೆ ಬಡ ಜೀವವೆ ರಕ್ಕಸಿ ಪಾರ್ವತಿ
ಕಂಡಳೆ ಸುಂದರಿ ಮಂಡೋದರಿ ಕನ್ಯಾರ್ಥಿ || 04 ||
.
ಶಿವೆಯನ್ನೆ ಗೆದ್ದ ಹಮ್ಮಿನಲ್ಲಿ ಗರ್ವದಿಂದ ಹೊರಟ ರಾವಣನ ಹಿಂದೆ ವಿಧಿಯಿಲ್ಲದೆ ನಡೆದ ಶಿವೆಯ ಮನಸ್ಥಿತಿ ಹೇಗಿತ್ತೊ? ಆಗ ರಂಗಕ್ಕೆ ಪ್ರವೇಶ ಮಾಡಿದವ ಕಲಹ ಪ್ರಿಯ ನಾರದ. ಈ ತ್ರಿಲೋಕ ಸಂಚಾರಿ ತಾನಾಗಿಯೆ ಬಂದನೊ, ಅಥವ ಶಿವನಿಂದ ಸುದ್ದಿ ಪಡೆದು ಮುಂದಿನ ಅಂಕ ರೂಪಿಸಿ ಪಾರ್ವತಿಯನ್ನು ರಕ್ಷಿಸಲೆಂದು ಬಂದನೊ - ಒಟ್ಟಲ್ಲಿ ಅವನ ನೋಡಿಯೆ ಪಾರ್ವತಿಗೆ ಅರ್ಧ ಹೋದ ಜೀವ ಬಂದಂತಹ ಭಾವನೆಯುಂಟಾಗಿರಬೇಕು. ಅವನ ಸಂಕೇತದ ಸುಳಿವು ಹಿಡಿದು ಮಾಯಾರೂಪಿ ರಾಕ್ಷಸಿಯೊಬ್ಬಳ ಜತೆಗೇಕೆ ಬರುತ್ತಿರುವೆ ಎಂದು ಕೇಳಿ ರಾವಣನ ದಾರಿ ತಪ್ಪಿಸುತ್ತಾನೆ. ನಾರದನ ಕಪಟದಿಂದ ಜಗನ್ಮಾತೆಯು ವಿಕಾರ ರಾಕ್ಷಸಿ ರೂಪು ಧರಿಸಿ, ರಾವಣನ ದಿಕ್ಕು ತಪ್ಪಿಸಿದಾಗ ಶಿವನೆ ಮೋಸ ಮಾಡಿದನೆಂದು ರಾವಣ ಕ್ಷುದ್ರನಾಗಿ ಪಾರ್ವತಿಯನ್ನು ಬಿಡುಗಡೆಗೊಳಿಸಿಬಿಡುತ್ತಾನೆ. ನಿಜವಾದ ಪಾರ್ವತಿಯನ್ನು ಪಾತಾಳ ರಾಜನಲ್ಲಿ ಬಚ್ಚಿಟ್ಟಿರುವುದಾಗಿ ನಂಬಿಸಿ ರಾವಣನನ್ನು ನಿಜವಾದ ಪಾರ್ವತಿಯನ್ನು ತೋರಿಸುವ ಭರವಸೆಯೊಂದಿಗೆ ಕರೆದೊಯ್ದು, ಅಲ್ಲಿ ಉದ್ಯಾನದಲ್ಲಿ ಸಖಿಯೊಡನಾಡುತ್ತಿದ್ದ ಲಾವಣ್ಯರಾಶಿ, ಸೌಂದರ್ಯರಾಶಿ ಬಾಲೆ ಮಂಡೋದರಿಯನ್ನು ತೋರಿಸಿ ಅವಳನ್ನೆ ಮಂಡೋದರಿಯ ಹೆಸರಿನಲ್ಲಿ ಅಡಗಿಸಿಟ್ಟ ಪಾರ್ವತಿಯೆಂದು ಹೇಳುತ್ತಾನೆ. ಹೀಗೆ ಯೌವನ ಮದ, ಕಾಮತೃಷೆಯಿಂದ ಕುರುಡಾಗಿದ್ದ ರಾವಣನ ಹುಚ್ಚಾಟಕ್ಕೆ ತಂಪೆರೆಯುವ ದಾರಿ ತೋರಿಸಿ, ಮಂಡೋದರಿಯೆ ಪಾರ್ವತಿಯೆಂದು ನಂಬಿಸಿ ಕಳಿಸಿಕೊಡುತ್ತಾನೆ. ಅವಳೆ ರಾವಣನ ಪತ್ನಿಯಾಗುವಂತೆ ಮಾಡುತ್ತಾನೆ. ಮಂಡೋದರಿ ರಾವಣನ ಅಂತಃಪುರ, ಅಂತರಂಗ ಪ್ರವೇಶಿಸಿ ಪಟ್ಟ ಮಹಿಷಿಯಾದದ್ದು ಹೀಗೆ.
.
ಪಟ್ಟಮಹಿಷಿಯಾದಳೆ ಲಾವಣ್ಯ ಸುಂದರಿ
ಕಟ್ಹಿಡಿದೆ ಚಂಚಲ ಮನ ರಾವಣನ ಸವರಿ
ಬಿಡದೆ ಗೆಲಿಸಿದಳವನಾತ್ಮಲಿಂಗ ದುಬಾರಿ
ಬಾಲ ಬ್ರಹ್ಮಚಾರಿ ನೆಲಕುಕ್ಕಿದರೂ ಸವರಿ || 05 ||
.
ಹೀಗೆ ಪರಿಣಯದ ಕಥೆಯೆಲ್ಲಾ ಮುಗಿಯಿತು. ಅವಳಿಗೂ ಪತಿಯ ತಪದ ಕಾರಣದ ಹಿನ್ನಲೆ ತಿಳಿಯಿತು. ಆತ್ಮಲಿಂಗವನರಸಿ ಹೊರಟವನಿಗೆ, ತನ್ನ ಗಳಿಸುವ ಹುನ್ನಾರವೆ ಅಡ್ಡಿಯಾಯ್ತೆಂದು ಅವಳಿಗೂ ಸಂಕಟವಾಗಿರಬೇಕು. ಅದಲ್ಲದೆ ಸ್ವತಃ ರಾವಣೇಶ್ವರನಿಗೆ ತಾಯಿಯ ಮುಖ ಕಂಡಾಗೆಲ್ಲಾ ಅವಳಿಗೆ ಕೊಟ್ಟ ಮಾತು, ಆತ್ಮಲಿಂಗ ತಂದುಕೊಡುವೆನೆಂದು ವಚನವಿತ್ತು ಹೋಗಿ, ಕನ್ಯಾಮಣಿಯೊಂದಿಗೆ ಹಿಂದಿರುಗಿದ್ದು - ಕಾಡುತ್ತಿದ್ದಿರಬೇಕು. ಜಾಣೆ ಮಂಡೋದರಿ, ಆರಂಭದ ಪ್ರಣಯಾವೇಶದ ದಿನಗಳೆಲ್ಲ ಕಳೆದ ಮೇಲೆ ಮತ್ತೆ ಪತಿಗೆ ನೆನಪಿಸುತ್ತಾಳೆ - ಆತ್ಮಲಿಂಗ ತರಲು ಹೋಗಿ ಹೆಣ್ಣೊಂದನ್ನು ತಂದನೆಂಬ ಅಪಖ್ಯಾತಿಗೆ ಗುರಿಯಾದದ್ದನ್ನು. ನಿಧಾನವಾಗಿ, ಮೆದುವಾಗಿ ಅವನನ್ನು ಹದಕ್ಕೆ ತಂದು, ಮತ್ತೊಮ್ಮೆ ಅದನ್ನು ಪಡೆಯಲೆತ್ನಿಸುವಂತೆ ಹುರಿದುಂಬಿಸುತ್ತಾಳೆ. ಮತ್ತೆ ತಪ ಕೈಗೊಳ್ಳಲು ಪ್ರೇರೇಪಿಸಿ ಯಶಸ್ವಿಯೂ ಆಗುತ್ತಾಳೆ. ಈ ಬಾರಿ, ಕಾಮನ ಅಂಕೆಯಿಂದ ಹೊರಬಂದು, ಮಂಡೋದರಿಯ ಪ್ರೇಮ ತೃಷೆಯಲ್ಲಿ ಮಿಂದು ಪ್ರಶಾಂತನಾಗಿದ್ದು, ಮತ್ತೆ ಹಳೆಯ ತಪ್ಪು ಮಾಡದೆ ಆತ್ಮಲಿಂಗವನ್ನೇನೊ ಸಂಪಾದಿಸುತ್ತಾನೆ. ಆದರೆ ಈ ಬಾರಿ ಶಿವನಾತ್ಮಲಿಂಗದ ರಕ್ಷಣೆಗೆ ಬಾಲವಟುವಿನ ರೂಪಲ್ಲಿ ಬಂದಿದ್ದು - ಬಾಲ ಗಣಪ. ರಾವಣೇಶ್ವರನನ್ನು ಏಮಾರಿಸಿ ಆತ್ಮಲಿಂಗವನ್ನೆ ಭೂಗತಗೊಳಿಸಿಬಿಡುತ್ತಾನೆ. ಈ ಬಾರಿಯೂ ಕೈಗೆ ಸಿಕ್ಕಿದ ತುತ್ತು ಬಾಯಿಗೆ ಸೇರುವುದಿಲ್ಲ ರಾವಣೇಶ್ವರನಿಗೆ - ಹಿಡಿದ ಹಟ ಬಿಡದೆ ಸಾಧಿಸಿದನೆಂಬ ಕೀರ್ತಿಗೆ ಭಾಜಕನಾದರೂ ಸಹ. 
.
ಹಾವು ಚೇಳು ಹರಿದಿದ್ದಾ ಬಾಳಲಿ ತಂಪು
ಸಾಧು ಮೆಲುವಾಗಿಸುತವನೊರಟ ರೂಪು
ಪ್ರಳಯವಾಗಿದ್ದ ಬಾಳಲಿ ಪ್ರಣಯ ಶಾಂತಿ
ಪ್ರಾಯದಲೆ ತುಂಬಿದಳೆ ದಶಾನನನೊಡತಿ || 06 ||
.
ಅಂತಹ ಅನ್ಯೋನ್ಯ ದಾಂಪತ್ಯ ಪುತ್ರಾ ಸುಖ
ಎಣೆಯಿಲ್ಲದ ವೈಭೋಗ ಲಂಕೆಯೆಲ್ಲಾ ಪುಳಕ
ಬಂತೇಕೊ ದುರ್ಬುದ್ದಿ ಸೀತಾಪಹರಣಾ ಸುದ್ದಿ
ಒಡೆದಿತ್ತೆ ಎದೆ ಹೃದಯದಿ ಸುಟ್ಟುಳಿದ ಬೂದಿ || 07 ||
.
ಆಯಿತು, ಎಲ್ಲಾ ಮುಗಿದ ಕಥೆ. ಆತ್ಮಲಿಂಗಕೆ ಗೋಳಾಡಿದ ರಾವಣನನ್ನು ಕೊನೆಗವನ ಮಾತೆಯೆ ಸಂತೈಸಿ, ದಿನವೂ ಅಲ್ಲಿಗೆ ಬಂದು ಪೂಜೆ ಕೈಗೊಳ್ಳುವೆನೆಂದು ಸಮಾಧಾನಿಸಿದಳು. ಹಾವು ಚೇಳುಗಳ ಹರಿದಾಟದಂತಿದ್ದ ಬಾಳಲಿ ಈಗ ಮಂಡೋದರಿಯೆಂಬ ತಂಪುಗಾಳಿ, ಅವನ ವ್ಯಕ್ತಿತ್ವವನ್ನೆ ಮೆಲುವಾಗಿಸುತ, ಸಾಧುಗೊಳಿಸಿ ಮೃದುವಾಗಿಸತೊಡಗಿತ್ತು. ಯೌವ್ವನದ ಮದ, ದೌರ್ಜನ್ಯಗಳ ಬಿಸಿಪ್ರಾಯದ ಅಮಲಿನಲ್ಲಿದ್ದವನನ್ನು ಮಂಡೋದರಿಯ ಪ್ರೇಮಧಾರೆ ಮೀಯಿಸುತ್ತ, ಪ್ರಳಯದ ಗಣತಿಯಿಂದ ಪ್ರಣಯದ ಶೃತಿಯಲಿ ಪುಳಕಿಸಿ ಶಾಂತಿಯ ಅಮೃತಧಾರೆಯನ್ನೆ ಮೊಗೆಮೊಗೆದೆರೆಸಿತು. ಸುಖವನ್ನು ಮೊಗೆದಾಗ, ಮಧುರ ಸಂಗೀತ ಬರದೆ ಅಪಶೃತಿ ಬಂದೀತೆ? ಅನ್ಯೋನ್ಯತೆಯ ದಾಂಪತ್ಯ ತನ್ನ ಕುರುಹನ್ನು ಬಿಡುವ ಹವಣಿಕೆಯಲ್ಲಿ ಮಂಡೋದರಿಯ ಒಡಲಿನಲ್ಲಿ ಹೂವ್ವುಗಳನ್ನು ಅರಳಿಸಿಬಿಟ್ಟಿತು. ಅಕ್ಷಯಕುಮಾರ, ಮೇಘನಾದನಾದಿಯಾಗಿ ದಾಂಪತ್ಯದ ಕಾಣಿಕೆಗಳು ಊಡಿಯಿಂದ ಮಡಿಲು ತುಂಬಿ ಲಂಕೆಯ ಸಮಷ್ಟಿಯನೆಲ್ಲ ಹರ್ಷದ ಕಡಲಲ್ಲಿ ಮುಳುಗಿಸಿತು. ಆ ಹರ್ಷದ ಹೊನಲು ಹರಿಯುತ್ತಲೆ ಹೋದದ್ದು ಅದೆಷ್ಟು ವರ್ಷಗಳೊ...ಆದರೆ, ವಿಧಿ ವಿಲಾಸವೆ ಬೇರೆಯಾಗಿತ್ತು. ಮೇಲೆ ಹೋದ ಕಾಯ ಕೆಳಗೆ ಬರಲೆ ಬೇಕಲ್ಲಾ? ಅದು ಗುರುತ್ವದ ತತ್ವ. ಸುಖ ಎಷ್ಟೆ ಅಪರಿಮಿತವಾದರೂ ಒಂದಲ್ಲ ಒಂದು ದಿನ ದಿಕ್ಕು ಬದಲಿಸಿ ದುಃಖದ ಸೆರಗ್ಹೊದೆಯುವುದು ಜೀವನದ ಸಹಜ ಪ್ರಕ್ರಿಯೆ. ಎಲ್ಲಾ ಸರಿಯಾಗಿ ಸಾಗಿದೆ, ಜೀವನವೆಲ್ಲ ಹೀಗೆ ಸುಖಕರವಾಗಿ ಸಾಗಲಿದೆಯೆಂದು ನಿರಾಳವಾಗಿರುವಾಗಲೆ ಧುತ್ತೆಂದು ಬಂದೆರಗಿತ್ತು ಸುದ್ದಿ ಸಿಡಿಲಿನಂತೆ : ಶೂರ್ಪನಖಿಯ ಪ್ರಕರಣದ ಸೇಡಿನ ಸಲುವಾಗಿ ರಾವಣ ಸೀತಾಪಹರಣಕ್ಕಿಳಿದ ಸುದ್ದಿ. ಅದರ ಕುರಿತು ಸುಳಿವೆ ಇಲ್ಲದವಳಿಗೆ, ಆ ಸುದ್ದಿಯೆ ಮೊದಲ ಆಘಾತ. ಬಂದವಳು ಅವಳ ಜಾಗವನ್ನಕ್ರಮಿಸಬಲ್ಲ ಸಾಧ್ಯತೆ ಎರಡನೆ ಆಘಾತ. ಎದೆಯೊಡೆದ ಹೃದಯದಲ್ಲಿ ಬೇಗುದಿ ಸುಡುವ ಬೆಂಕಿಯಾಗಿ, ಬೂದಿಯಾಗಿಸದಿದ್ದೀತೆ?
.
ಮಹಾರಾಣಿಯಾಗವಳಂತಃಪುರದಲ್ಲಿ ಕೊಸರು
ರಾವಣೇಶನ ಬಾಯಲಿ ಸದ ಸೀತೆಯ ಹೆಸರು
ಕೂತವಳು ಮಳ್ಳಿ ಅಶೋಕವೃಕ್ಷದಡಿ ಕೊರಗಲಿ
ಹೇಗೆ ನೆಮ್ಮದಿಯಿತ್ತೆ ಮಡಿಲಲೆ, ಕೆಂಡ ಸೆರಗಲಿ || 08 ||
.
ವನದಿ ಕೂತವಳದೊಂದುಪವಾಸಾ ವನವಾಸ
ಮನದಿ ಕೂತವಳ ಪಲ್ಲಂಗ ಶಯನಕೂ ಖಾಸ
ಅರೆಮನದಿ ಅರಮನೆಯಲಿದ್ದರು ತನು ಭೂಸ
ಪ್ರಾಣಕಾಂತನ ಮನವಲ್ಲಿರೆ ಮನಸೆ ಬರಿತ್ರಾಸ || 09 ||
.
ಹೆಸರಿಗವಳು ಅಂತಃಪುರದಲಿ ಮಹಾರಾಣಿಯಾದರೂ, ಈ ವಿಷಯದಲ್ಲಿ ಮಾತ್ರ ಯಾರೂ ಅವಳ ಅಭಿಪ್ರಾಯವನ್ನು ಕೇಳಲಿಲ್ಲ, ಹೇಳಲೂ ಇಲ್ಲ. ಅಶೋಕ ವನದಲಿ ಯಾರೊ ಕದ್ದು ತಂದ ಸುಂದರ ಹೆಣ್ಣೊಂದು ಕೂತಿದೆಯಂತೆ ಎಂಬ ಸುದ್ದಿ ಬಂದಿದ್ದೆ ಕೆಲವು ದಾಸಿಯರಿಂದ. ಅವರಲೊಬ್ಬ ಆತ್ಮಸಖಿಯಿಂದಾಗಿ ಬಂದವಳ ಹೆಸರು ಸೀತೆಯೆಂದು ಗೊತ್ತಾಗಿದ್ದು. ಪಕ್ಕ ಶಯನದಲ್ಲಿ ಮಲಗಿದ್ದ ರಾವಣೇಶ್ವರನೂ ಸದಾ ಕಾಲ ಸೀತೆಯ ಹೆಸರನ್ನೆ ಜಪಿಸುತಿದ್ದರೆ, ವರ್ಷಾನುಗಟ್ಟಲೆ ಜತೆಯಲಿದ್ದ ಹೆಣ್ಣು ಜೀವ ಅದು ಹೇಗೆ ತಾನೆ ಸಹಿಸೀತು? ಸದ್ಯಕ್ಕೇನೊ ಅವಳೂ ರಾವಣನನ್ನು ನಿರಾಕರಿಸುತ್ತಿದ್ದಳೆಂದು ಸುದ್ದಿಯಿದ್ದರೂ, ಎಷ್ಟು ದಿನ ಹಾಗೆ ಇರಬಲ್ಲಳು? ಅವಳು ಯಾವತ್ತಿದ್ದರೂ ಮಡಿಲಲಿ, ಸೆರಗಿಗೆ ಕಟ್ಟಿಕೊಂಡ ಕೆಂಡದಂತೆಯೆ ತಾನೆ?
.
ವನದಲಿ ಹಠ ಹಿಡಿದು ಕುಳಿತವಳದೊಂದು ತರ ಉಪವಾಸ, ವನವಾಸವಾದರೆ ಅವಳ ನೆನಪಲ್ಲೆ ಕೊರಗುತ್ತಿರುವ, ಶಯನದಲ್ಲಿ ಪಕ್ಕದಲ್ಲೆ ಹೆಸರಿಗೆ ಮಾತ್ರ ಇರುವ ರಾವಣೇಶ್ವರನದೊಂದು ತರಹದ ತ್ರಾಸ. ಬರಿ ದೇಹವನಲ್ಲಿಟ್ಟುಕೊಂಡು, ಮನಸೆಲ್ಲ ಅವಳಲ್ಲಿ ನೆಟ್ಟು ಕೂತವನ ಪಾಡು. ಅದನ್ನೆಲ್ಲಾ ನೋಡಿಯೂ, ಸಹಿಸುತ್ತ, ಈರ್ಷೆ ಪಡದೆ ಸಹಿಸಬೇಕಾದ ಕರ್ಮ ಮಂಡೋದರಿಯದು. ಇಡೀ ರಾಮಾಯಣದ ಸೀತಾಪಹರಣ ಪ್ರಹಸನದಲ್ಲಿ ಪದೆಪದೆ ಸೀತೆಯ ಕುರಿತು ಚರ್ಚೆ, ಸಂತಾಪ, ಕನಿಕರಗಳು ವ್ಯಕ್ತವಾದರೂ ಯಾಕೊ ಮಂಡೋದರಿಯ ಇಕ್ಕಟ್ಟಿನ ಸ್ಥಿತಿಯ ಬಗ್ಗೆ ಹೆಚ್ಚಿನ ಸದ್ದೆ ಕೇಳಿಸುವುದಿಲ್ಲ. ಅವಳ ಯಾತನೆ, ನಿಸ್ಸಹಾಯಕತೆ, ಅಸಹಾಯಕತೆ, ಹೊಟ್ಟೆಯೊಳಗಿನ ಸಂಕಟ, ಈರ್ಷೆಗಳ ಕುರಿತು ಸೂಕ್ತ ಪರಿಗಣನೆಯೂ ಕಾಣಿಸುವುದಿಲ್ಲ. ಈ ಕೋನದಲ್ಲಿ ನೋಡಿದರೆ ಅವಳೊಂದು ನಿಕೃಷ್ಟಗೊಳಿಸಲ್ಪಟ್ಟ, ಸಾಮಾನ್ಯ ಹೆಣ್ಣಿನ ಪ್ರತಿರೂಪಾಗಿ ಬೆಲೆ ನೀಡದ ಪಾತ್ರವೆಂದೆ ಹೇಳಬೇಕು. ಹೇಳಿ ಕೇಳಿ 'ರಾಜ ಬಹು ವಲ್ಲಭ' ಎಂಬ ಸೂಕ್ತಿಯೆ ಇದ್ದರೂ, ರಾಮಾಯಣದ ತೇತ್ರಾಯುಗದ ಕಾಲದಲ್ಲಿ, ಸತ್ಯ ಮೂರು ಕಾಲಲ್ಲಿ ನಡೆಯುತ್ತಿದ್ದು ತೀರಾ ಹದಗೆಟ್ಟ ಪರಿಸ್ಥಿತಿಯಾಗಿರಲಿಲ್ಲವೆಂಬುದನ್ನು ಗಮನದಲಿಟ್ಟುಕೊಳ್ಳಬೇಕು. ಇದೆಲ್ಲಾ ಮಸೂರದಲಿ ನೋಡಿದರೆ, 'ಪಾಪ! ಮಂಡೋದರಿ' ಅನ್ನದೆ ವಿಧಿಯಿಲ್ಲ ಎಂದೆ ಹೇಳಬೇಕು. 
.
ಉಣನು ಉಣಿಸನು ಅರೆಮನಸ್ಕ ಪರಿಗಣಿಸನು
ಇದ್ದೂ ಇಲ್ಲದಾ ಹಾಗೆ ಕಂಡೂ ಕಡೆಗಣಿಸುವನು
ಬರಲೀ ಸವತಿಯಾಗೆ ಪೊರೆವೆನೆ ಬೇಡೆನ್ನುವೆನೆ
ಬರದವಳ ಹಿಂದೆ ಸುತ್ತಿದರೆ ಹೇಗೆ ಸಹಿಸುವೆನೆ? || 10 ||
.
ಬರಡು ಜೀವನದ ಜತೆಜತೆಗೆ ಜಾನಕಿಯ ವ್ಯಥೆ
ತಂದಿಕ್ಕಿಬಿಟ್ಟಿತೆ ಸಂದಿಗ್ದ ಹೆಣ್ಣು ಹೆಣ್ಣಿನ ಕೊರತೆ
ಅರ್ಥವಾದಂತವಳ ಸ್ಥಿತಿಯನರ್ಥೈಸುವವರಾರೆ
ಲಂಕಾಧೀಶನ ಮೌಢ್ಯಕೆ ಬೆಲೆ ತೆರವಾಗಿ ಬೆವರೆ || 11 ||
.
ಮನದೊಳಗಣ ಯಾತನೆ ಒಂದೆಡೆಯಾದರೆ, ಜತೆಗಿದ್ದೂ ಇಲ್ಲದ ರಮಣನ ಅನ್ಯಮನಸ್ಕ ನಡತೆ ಇನ್ನೊಂದೆಡೆ. ಊಟೋಪಚಾರದತ್ತ ಗಮನವಿಡನು; ಪಕ್ಕದಲಿದ್ದರೂ ಪರಿವೆಯೆ ಇಲ್ಲದವನಂತೆ ಕೂತು ಕಡೆಗಣಿಸುವ ನಿಕೃಷ್ಟತೆಯನ್ನು ತೋರುವನು. ಇದ್ದೂ ಇಲ್ಲದ ಹಾಗೆ ಬದುಕಬೇಕಾದ ಪರಿಸ್ಥಿತಿ - ಅದೂ ಅಂತಃಪುರದಂತಹ ಬರಿ ಹೆಣ್ಣು ಜನಗಳಿಂದಲೆ ಕಿಕ್ಕಿರಿದ ಸ್ಥಳಗಳಲ್ಲಿ. ಈ ಹೆಣ್ಣು ಮನಗಳೆ ಬಲು ಸೂಕ್ಷ್ಮ. ಹೇಳದಿದ್ದರೂ, ಎಲ್ಲೊ ಏನೊ ಹೆಚ್ಚುಕಡಿಮೆಯಾಗಿದೆಯೆಂದು ಬರಿ ಕಣ್ಣೋಟದಲ್ಲೆ ಅಳೆದು ಊಹಿಸಬಲ್ಲ ಸಾಮರ್ಥ್ಯದವರು. ಅಂತಹ ನೂರಾರು, ದಾಸಿ, ಸೇವಕಿ, ಮೇಲ್ವಿಚಾರಕಿಗಳೆ ತುಂಬಿರುವ ಜಾಗದಲ್ಲಿ ಕೆಮ್ಮನ್ನಾಗಲಿ, ಪ್ರೇಮವನ್ನಾಗಲಿ ಮುಚ್ಚಿಡಲಾಗದಂತೆ, ಬಿರುಕು ಬಿಟ್ಟ ಸಂಬಂಧಗಳನ್ನು ಅಡಗಿಸಿಡಲಾಗದು. ಮೇಲೆಲ್ಲಾ ಸರಿಯಿರುವಂತೆ ತೋರಿಕೆಗಾದರೂ ನಟಿಸೋಣವೆಂದರೆ, ಅದಕ್ಕೂ ಎಡೆ ಕೊಡುತ್ತಿಲ್ಲ ರಾವಣೇಶ್ವರನ ಈ ಅನ್ಯಮನಸ್ಕ ನಡುವಳಿಕೆ. ಸೀತೆಯನ್ನು ಕದ್ದು ತಂದಿದ್ದು ಸಾರ್ವತ್ರಿಕ ವಿಷಯ. ಹೀಗಾಗಿ ಎಲ್ಲರಿಗೂ ಗೊತ್ತಿರುವ ವಿಷಯವನ್ನು ಮುಚ್ಚಿಡಲಂತೂ ಆಗದು. ಆದರೆ ಕನಿಷ್ಟ, ಆ ವಿಷಯದಲ್ಲಿ ದಂಪತಿಗಳಿಬ್ಬರೂ ಒಂದೆ, ಏಕಮನಸ್ಕರೆಂದು ತೋರಿಕೆಗಾದರೂ ನಟಿಸಬಹುದಲ್ಲಾ? ನಿಜ ಹೇಳುವುದಾದರೆ ಸೀತೆ ರಾವಣನ ಪತ್ನಿಯಾಗಿ ಮನಃಪೂರ್ವಕವಾಗಿ ಬರುವುದಾದರೆ, ತಾನೇನು ಬೇಡವೆನ್ನುವೆನೆ? ಚಿಕ್ಕ ರಾಣಿಯ ಹಾಗೆ ಪ್ರೀತಿ, ಗೌರವದಿಂದ ಆದರಿಸುವ ಔದಾರ್ಯ ತನಗಿಲ್ಲವೆ? ಆದರೆ ಒಲ್ಲೆನೆನ್ನುವವಳ ಹಿಂದೆ ಹೀಗೆ ರಾಜ ಘನತೆ, ಗಾಂಭೀರ್ಯವನ್ನು ಬದಿಗಿಟ್ಟು ಪದೆ ಪದೆ ಪೀಡಿಸುವ ಸಾಮಾನ್ಯ ಕಾಮದಾಹಿಯಂತೆ ವರ್ತಿಸಿದರೆ ಸಹಿಸುವುದಾದರೂ ಹೇಗೆ? ಅದೂ ಲಂಕೆಯ ಮಹಾರಾಜ್ಞಿಯಾಗಿ, ಹೆಣ್ಣೊಂದರ ಹಿಂದೆ ಬಿದ್ದವನ ಕುಲದ ಗೌರವ, ಮನೆತನದ ಮರ್ಯಾದೆ ಕಾಪಾಡುವ ಹೊಣೆಯ್ಹೊತ್ತವಳಿಗೆ?
.
ಅದೂ ಸಾಲದೆಂಬಂತೆ, ಮಂಡೋದರಿಯೂ ಉತ್ತಮ ಕುಲದ ಹೆಣ್ಣು. ಸುಕುಲದಿಂದ ಬೆಳೆದು ಬಂದ ಸಂಸ್ಕಾರಯುಕ್ತ ನಾರಿಮಣಿ. ಅವಳಿಗೆ ಸೀತೆಯ ವೇದನೆ, ಯಾತನೆ, ವ್ಯಥೆ ಅರ್ಥವಾಗದೆ ಇದ್ದೀತೆ? ಆದರಿಲ್ಲಿ ಅವಳೆ ತನ್ನ ಸ್ಪರ್ಧಾಳುವಾಗಿ ನಿಂತ ವಿಚಿತ್ರ ಪರಿಸ್ಥಿತಿ. ಮಗಳ ವಯಸಿನ ಸೀತೆಯ ಮನದ ಪರಿಸ್ಥಿತಿ ಅರ್ಥವಾಗದಷ್ಟು ಮೂಢಳೇನಲ್ಲ ಮಂಡೋದರಿ. ಆದರೆ ಅರ್ಥವಾಗಿಯೂ ಏನೂ ಮಾಡಲಾಗದಲ್ಲಾ? ತಾನೆ ಕಾದ ಬಾಣಲಿಯಲಿರುವ ಸ್ಥಿತಿಯಲಿ, ಬೆಂಕಿಗೆ ಬಿದ್ದವಳ ಬವಣೆ ಗಮನಿಸಲೆಂತು? ಅಂತೂ ಲಂಕಾಧಿಪತಿಯ ಹುಚ್ಚುತನದ ಪರಮಾವಧಿಗೆ ಹೆಣ್ಣು ರೂಪದಲಿ ತೆರವಾಗುವ ಹತಾಶ ಸ್ಥಿತಿ. ನೈತಿಕ ಮೌಲ್ಯ ಮತ್ತು ಸ್ವಾರ್ಥದ ನಡುವಿನ ತಿಕ್ಕಟದಲಿ ಬಳಲಿ ಬೆಂಡಾಗುವ ಅಸಹಾಯಕ, ಹತಾಶ, ದಾರುಣತೆ ಮಂಡೋದರಿಯದು. 
.
ಕಡೆಗು ಶುರುವಾಯ್ತೆ ಯುದ್ಧ ದುಃಖಕೆ ಸಮೃದ್ದ
ಕಳೆದುಕೊಂಡೊಂದೊಂದೆ ಕರುಳಬಳ್ಳಿಯೆ ಛಿದ್ರ
ಒಲ್ಲದ ಹೆಣ್ಣೊಂದರೊಲಿಯದೊಲುಮೆಯೆ ಕುತ್ತ
ಕಳುವಾದರೆ ಭಾಂಧವ ಮಿತ್ರರೊಬ್ಬೊಬ್ಬರೆ ಸುತ್ತ || 12 ||
.
ಅಂತೂ ಹಠ ಬಿಡದ ರಾವಣೇಶ್ವರನ ಮೂರ್ಖತನದಿಂದ ಯುದ್ಧ ಆರಂಭವಾಗಿಯೆ ಹೋಯ್ತು. ಯುದ್ಧವೆಂದರೆ ಅದೆಂಥಾ ಯುದ್ಧ? ಸಮ ಬಲವೊ, ಅಸಮ ಬಲವೊ ಅದು ಬೇರೆ ವಿಚಾರ. ಆದರೆ ಅದರ ಸಲುವಾಗಿ ಕಾಡುಮೇಡೆಲ್ಲಾ ಅಲೆದು, ವಾನರ ಸೈನ್ಯ ಕಟ್ಟಿ ಬರಿಗಾಲಲ್ಲಿ ಗುಡ್ಡ ಬೆಟ್ಟಗಳೆಲ್ಲ ದಾಟಿ ಬಂದದ್ದು ಇರಲಿ. ನೂರಾರು ಯೋಜನ ಉದ್ದದ ಸೇತುವೆಯನ್ನೆ ಕಟ್ಟಿ ಸಮುದ್ರ ದಾಟಿ ಲಂಕೆಯ ತಟ ಸೇರಿದರೆಂದರೆ, ಅದೊಂದು ಅದ್ಭುತ ಸಾಹಸ ಯಾತ್ರೆಯಲ್ಲವೆ? ಸಂಪನ್ಮೂಲಗಳ ಕೊರತೆಯಿಲ್ಲದ ರಾವಣೇಶ್ವರ ತನ್ನ ಪಾಡಿಗೆ ತಾನು ಲಂಕೆಯಲ್ಲಿ 'ಬಂದರಿಲ್ಲಿಗೇ ಬರಲಿ, ನೋಡಿಕೊಳ್ಳುವೆ ಒಂದು ಕೈ' ಎನ್ನುವ ಮನೋಭಾವದಲ್ಲಿ ನಿರಾಳವಾಗಿ ಸೀತಾಪೀಡನೆಯಲ್ಲಿ ಮಗ್ನನಾಗಿದ್ದರೆ, ಬಿಲ್ಲು ಬಾಣ, ಪತ್ನಿವಿಯೋಗದ ದುಃಖ, ಹುಡುಕಲೆ ಬೇಕೆನ್ನುವ ಛಲವನ್ನು ಬಿಟ್ಟು ಬೇರೇನೂ ಸಂಪನ್ಮೂಲವಿಲ್ಲದ ರಾಮ, ಪ್ರತಿಯೊಂದು ಸಂಪನ್ಮೂಲವನ್ನು ಶೂನ್ಯದಿಂದಲೆ ಕಟ್ಟಿ, ಬೆಳೆಸಿ, ಬಲಪಡಿಸುವ ಪಂಥ. ಇದು ಶಿಸ್ತಿನ ವ್ಯವಸ್ಥೆಯೊಂದರ ವಿರುದ್ಧ ವ್ಯವಸ್ಥಿತವಲ್ಲದ ಅವ್ಯವಸ್ಥೆಯ ಸಮಷ್ಟಿ ಶಕ್ತಿಯನು ಕಟ್ಟಿ ಹೋರಾಡಬೇಕಾದ ಅನಿವಾರ್ಯ. ಮಂಡೋದರಿಯ ಪಾಲಿಗಂತೂ, ಈ ಯುದ್ಧ ದುಸ್ವಪ್ನವೇ ಆಗಿ ಹೋಯ್ತು. ಕರುಳ ಬಳ್ಳಿಯ ವಧೆಯೊಡನೆ ಆರಂಭವಾದ ಕದಳಿ ಕದನ, ಅಂತಿಮ ಯುದ್ಧದಲ್ಲಿ ಮಗನಿಂದ ಹಿಡಿದು ಮೈದುನನಷ್ಟೆ ಅಲ್ಲದೆ, ಮಂತ್ರಿ , ಸೇನಾನಿ ಸಮೇತ ಎಲ್ಲಾ ಬಂಧು, ಭಾಂಧವ, ಗೆಳೆಯ ಬಳಗವನ್ನೆಲ್ಲಾ ಕಳೆದುಕೊಳ್ಳಬೇಕಾಯ್ತು. ಹತಾಶಳಾಗಿ ಒಬ್ಬೊಬ್ಬರೆ ರಣರಂಗದಲ್ಲಿ ಹೋರಾಡಿ ಮಡಿದು ವೀರ ಸ್ವರ್ಗ ಸೇರುವ ಪರಿಸ್ಥಿತಿಗೆ ಮೂಕಸಾಕ್ಷಿಯಾಗಬೇಕಾಯಿತು. ಕೊನೆಗೆಲ್ಲರೂ ಉದುರಿ, ಚದುರಿ, ಚೆಲ್ಲಾಡಿ ಹೋದಾಗ ಯಾರೂ ಇಲ್ಲದ ಏಕಾಕಿ ಶೋಕದ ಪಾಡಲಿ ಗೋಳಾಡುವಂತಾಯ್ತು.
.
ಮಡಿದರೆಲ್ಲಾ ನುಡಿದರು ಕೇಳದೆ ಹೋದವರೆಲ್ಲ
ಬುದ್ದಿ ವಿವೇಕ ವಿವೇಚನೆ ಹೃದಯದಾ ಹಾಡಲ್ಲ
ವಿಧವೆಯಾಗಿಸಿ ಸತ್ತನೆ ರಾವಣನು ಕೊನೆಯಲಿ
ಉಳಿದವಳೊಬ್ಬಳೆ ಮಂಡೋದರಿ ಬರಿ ಕಣ್ಣೀರಲಿ || 13 ||
.
ಆ ಹೆಪ್ಪುಗಟ್ಟಿದ ಯಾತನೆಯಲ್ಲೆ, ಎದೆ ಬಡಿದುಕೊಂಡು ಹಲುಬುತ್ತಾಳೆ ಮಂಡೋದರಿ. ಬುದ್ಧಿ ಹೇಳಿದರೂ, ಕೇಳದೆ ಎಲ್ಲ ಅಂತಕನ ಮನೆ ಸೇರಿದರಲ್ಲಾ? ಹೃದಯದೇವಿಯಾಗಿಸಿಕೊಳ್ಳುವ ಹಠದಲಿ ಬಿದ್ದು, ಬುದ್ದಿ, ವಿವೇಕ, ವಿವೇಚನಾಶೂನ್ಯರಾಗಿ ಸಾವಿನರಮನೆಯ ಅತಿಥಿಗಳಾದರಲ್ಲ ಎಂದು ಗೋಳಿಡುತ್ತಾಳೆ. ಇದು ಸಾಲದೆಂಬಂತೆ, ಕೊನೆಗೆ ಯುದ್ದವನ್ನಾದರೂ ಗೆದ್ದನೆ ಪತಿರಾಯ? ಅದೂ ಇಲ್ಲ. ರಾಮನ ಕೈಯಿಂದ ಹತನಾಗಿ ಅವಳಿಗೆ ವಿಧವೆ ಪದವಿ ಕಟ್ಟಿ , ಏಕಾಕಿಯಾಗಿಸಿ ದಯಮಾಡಿಸಿಬಿಟ್ಟ. ಇದ್ದೂ ಸುಖ ನೀಡಲಿಲ್ಲ, ಸತ್ತೂ ಸುಮ್ಮನೆ ಬಿಡಲಿಲ್ಲ. ಅವಳು ಏಕಾಕಿಯಾಗಿ ಕಣ್ಣೀರಲೆ ಕೈ ತೊಳೆಯುವಂತೆ ಮಾಡಿ , ತನ್ನ ಹುಂಬತನದ ಪರಮಾವಧಿಯಲ್ಲಿ , ತನ್ನದೇನೂ ತಪ್ಪಿಲದಿದ್ದರೂ ಕೊರಗುವಂತೆ, ನರಳುವಂತೆ ಮಾಡಿ ಕೈಲಾಸ ಸೇರಿಬಿಟ್ಟ. 
.
ಪಾಪದವಳೆ ಮಂಡೋದರಿ ಸಹಿಸಿದಳಾಕ್ರಮಣ
ಹೆಣ್ಣಿನ ಮೇಲ್ದೌರ್ಜನ್ಯಕೆಲ್ಲ ಸಾಕ್ಷಿಯಾಗಿ ನಿತ್ರಾಣ
ಕಾರಣ ಸೀತೆಯೆಂದರೂ ದೂಷಿಸದಾ ಸಾತ್ವಿಕತೆ
ಶೂರ್ಪನಖಿಯಂತಲ್ಲದೆ ಸೇಡ ಮಸೆಯದ ವನಿತೆ || 14 ||
.
ಇಷ್ಟೆಲ್ಲಾ ಸಂಕಟಗಳು ಭೋರ್ಗರೆದರೂ ತಾಳ್ಮೆಯಿಂದ ತನ್ನ ಆತ್ಮಾಭಿಮಾನದ ಮೇಲಾದ ಆಕ್ರಮಣವನೆಲ್ಲಾ ಸಹಿಸುತ್ತ ಬದುಕಿದ ಪಾಪದ ಹೆಣ್ಣು ಮಂಡೋದರಿ. ಒಂದು ರೀತಿಯಲ್ಲಿ ಹೆಣ್ಣಿನ ಮೇಲಿನ ವ್ಯವಸ್ಥೆಯ ದೌರ್ಜನ್ಯದ ಮತ್ತೊಂದು ಬಗೆಯ ಪ್ರತೀಕ. ಆ ದೌರ್ಜನ್ಯದ ಪರಿಮಾಣ, ಪರಿಣಾಮಗಳಿಗೆಲ್ಲ ಮೂಕಸಾಕ್ಷಿಯಾಗಿ ನಿತ್ರಾಣವಾಗುತ್ತಾ ಬಂದ ವನಿತೆ. ತನ್ನೆಲ್ಲ ದುರಂತಕ್ಕೆ ಸೀತೆ ಕಾರಣಲಾದರೂ, ಅವಳ ಪರಿಸ್ಥಿತಿಗೆ ಸ್ಪಂದಿಸಿ ಅವಳ ಮನಸ್ಥಿತಿಯನ್ನು ಅರ್ಥಮಾಡಿಕೊಂಡ ವಿಶಾಲ ಹೃದಯೀ ನಾರಿ. ತನ್ನ ವಿಧಿಗೆ ಸೀತೆಯನ್ಹಳಿಯದ, ದೂಷಿಸದ, ಎಲ್ಲಾ ತನ್ನ ದುರ್ವಿಧಿಯೆಂದು ಸ್ವೀಕರಿಸುತ್ತ ಬಾಳಿದ ಸಾತ್ವಿಕ ಹೆಣ್ಣು. ಅದೇ ಕುಟುಂಬದ ಮತ್ತೊಂದು ಹೆಣ್ಣು ಶೂರ್ಪನಖಿಗೆ ಹೋಲಿಸಿದರೆ ಎಷ್ಟು ಅಜಗಜಾಂತರ ! ಅವಳೊ ಇಡೀ ರಾಮಾಯಣದ ಕರ್ಮಕಾಂಡಕ್ಕೆ ಮುನ್ನುಡಿ ಬರೆದು ಹಿನ್ನುಡಿಯಾದವಳು. ಅವಳ್ಹೊತ್ತಿಸಿದ ಜ್ವಾಲೆಯ ಕೆನ್ನಾಲಿಗೆ ಯಾರನ್ನೂ ಬಿಡಲಿಲ್ಲ - ಮಂಡೋದರಿಯನ್ನು ಸೇರಿದಂತೆ. ಆದರೆ ಶೂರ್ಪನಖಿಗೆ ಬರಿ ಮೂಗು ಕಿವಿಗಳಷ್ಟೆ ಘಾಸಿಯಗಿದ್ದು; ಅಷ್ಟಕ್ಕೆ ಅವಳ ರಾದ್ದಾಂತ ರಾಮಾಯಣದಗಲಕ್ಕೂ ಪಸರಿಸಿದ ವಿಷವಾಯ್ತು. ಆದರೆ, ಈ ಪ್ರಕರಣದಲ್ಲಿ ಶೂರ್ಪನಖಿಗಿಂತಲೂ ಹೆಚ್ಚು ಘಾಸಿಗೊಳಗಾದ ವ್ಯಕ್ತಿ ಮಂಡೋದರಿ. ಶೂರ್ಪನಖಿಯ ಹುನ್ನಾರದ ಹಿನ್ನಲೆಯಲ್ಲೆ ಗಂಡನ ಪ್ರೀತಿಗೆ ಎರವಾಗಬೇಕಾಗಿ ಬಂತು. ತನ್ನ ಕಣ್ಣೆದುರೆ ಪರನಾರಿಗಾಗಿ ಪರದಾಡುವ ಪತಿಯ ಜತೆ ಬಾಳುವೆ ನಡೆಸಬೇಕಾಯ್ತು. ಕೊನೆಗೆ ಅವನ ಸಾವನ್ನು ಕಂಡು, ವಿಧವೆಯ ಪಟ್ಟ ಧರಿಸಿ ಹಪಹಪಿಸಬೇಕಾಯ್ತು. ಇಷ್ಟೆಲ್ಲಾ ಆದರೂ ಶೂರ್ಪನಖಿಯ ಹಾಗೆ ಸೇಡಿನ ಹಾದಿ ಹಿಡಿಯದ ಹಿರಿಮೆ ಮಂಡೋದರಿಯ ಪಾತ್ರದ್ದು. 
.
ಪಾಪಿ ರಾವಣ ಮಾಡಲವಳ ಆತ್ಮಾಭಿಮಾನ ಧಕ್ಕೆ
ಆದರು ಹದಿಬದೆ ಧರ್ಮ ಸಹಿಸಿದಳೆ ಮನಬೊಕ್ಕೆ
ಅನುಮತಿಯಾದರು ಕೇಳಿದ್ದನೆನೆ ಯಾರಿಗೆ ಗೊತ್ತು
ಕಸದಂತೆ ಕಡೆಗಣಿಸಿದ್ದರು ಅಲ್ಲಚ್ಚರಿಯೇನು ಬಂತು || 15 ||
.
ತಾನೆ ಒಲಿದು ಮೆಚ್ಚಿ ಮದುವೆಯಾಗಿ, ಅಕ್ಷಯ ಕುಮಾರ, ಇಂದ್ರಜಿತುಗಳಂತಹ ಪುತ್ರರನು ಪಡೆದು ಹಲವಾರು ವರ್ಷ ಸಾಮರಸ್ಯದಿಂದ ನಡೆದುಕೊಂಡ ರಾವಣನೆ, ಪಾಪಿ ಸ್ತ್ರೀ ಕಾಮನೆಯ ಬಲೆಯಲಿ ಸಿಲುಕಿ ಅವಳಾತ್ಮಾಭಿಮಾನಕ್ಕೆ ಪದೆ ಪದೆ ಧಕ್ಕೆ ಮಾಡಿಬಿಟ್ಟ. ಪತಿವ್ರತಾ ಧರ್ಮದ ಚೌಕಟ್ಟಿನಲ್ಲಿ ಅವಳೆಲ್ಲ ಸಹಿಸುತ್ತಾ ನಡೆದರೂ, ಅದು ಅವಳ ಮನದೊಳಗೆಬ್ಬಿಸಿದ ಬೊಕ್ಕೆಗಳಿಗೆ ಲೆಕ್ಕವಿಟ್ಟವರಾರು? ಅದನ್ನು ಕೇಳಿ ಸಂತೈಸುವವರಾದರೂ ಯಾರಿದ್ದರು? ಮಸಲ, ಸೀತಾಪಹರಣದ ಮುನ್ನ ತನ್ನ ಕಾಮನೆಯ ಕುರಿತು ಅವಳ ಜೊತೆ ಚರ್ಚಿಸಿ, ಅವಳ ಸಹಮತಿಗಾಗಲಿ, ಅನುಮತಿಗಾಗಲಿ ಪ್ರಯತ್ನಿಸಿದ್ದನೆ? ಅದೂ ಇಲ್ಲ. ಸೀತೆಯನ್ನು ಕಂಡ ಬಳಿಕ ಒಂದಲ್ಲ ಒಂದು ದಿನ ಅವಳು ತನ್ನವಳಾಗೇ ತೀರುವಳೆಂಬ ಮೋಹದ ಮಂಕಿನಲ್ಲಿ, ಸಹಚರಿಣಿ ಮಂಡೋದರಿಯನ್ನು ಕಡೆಗಣಿಸಿದ್ದೆ ಹೆಚ್ಚು. ಸ್ತ್ರೀ ವ್ಯಾಮೋಹಕ್ಕೆ ಸಿಲುಕಿ ಏನೆಲ್ಲಾ ಮಾಡುವ ಈ ಜಗನ್ನಾಟಕದಲ್ಲಿ ರಾವಣನ ಈ ಬಲಹೀನತೆ ಅಚ್ಚರಿಯನೇನು ಉಂಟುಮಾಡುವುದಿಲ್ಲ. 
.
ಮತ್ತೊಂದೀತರ ಮಹರಾಣಿಯ ದುರಂತದಿ ಕಥನ
ರಾವಣನಂತಾರಾವಣನನೂ ಬಿಡದ ಸ್ತ್ರೀಮೋಹನ
ಅನುಭವಿಸಿದ್ದು ಮಂಡೋದರಿ ಶಾಪಾ ಕರ್ಮಕಾಂಡ
ತಂಗಿಗೆ ಅವಮಾನದ ಹೆಸರಲಿ ಏನೆಲ್ಲಾ ಹಳವಂಡ || 16 ||
.
ಕುಂತೀ, ಗಾಂಧಾರಿಯರಂತೆ ಮಹಾರಾಣಿಯರಾಗಿದ್ದುಕೊಂಡೆ ಸುಖ ದುಃಖ ವೈಭೋಗಗಳೆಲ್ಲದರಲ್ಲೂ ಪಾಲು ಪಡೆದ ಹೆಣ್ಣು ಮಂಡೋದರಿ. ತಂಗಿಯ ಅವಮಾನದ ಹೆಸರಲ್ಲಿ ಆರಂಭವಾದ ರಾವಣನ ದರ್ಪಯಾಗಕ್ಕೆ ತುತ್ತಾಗಿ ಜೀವನ ಶಾಪ ಅನುಭವಿಸುವಂತಾದದ್ದು ಅವಳ ಕರ್ಮ. ಉಸಿರೆತ್ತಿ ಗರ್ಜಿಸಿ ಅಂಕೆಯಿಡಲಾಗದಂತ, ಘನ ಪತಿಯಾದ  ರಾವಣೇಶ್ವರನ ನೆರಳಾಗಿ ಬಾಳಬೇಕಾದ ಅನಿವಾರ್ಯದಲ್ಲೂ ತನ್ನ ಸಂತಸವನ್ನು ಕಂಡುಕೊಳ್ಳಲು ಯತ್ನಿಸಿದಾಕೆ. ಹಾಗೆಯೆ, ಸೀತೆಯ ತರವೆ, ಮತ್ತೊಂದು ರೀತಿಯ ಗೋಳನುಭವಿಸುವ ಕರ್ಮಕ್ಕೆ ತುತ್ತಾದ ಮಹಾಸಾಧ್ವಿ. ಅವಳ ಪಾಡು ಸೀತೆಯ ಪಾಡಂತೆ ಹೆಚ್ಚು ಚರ್ಚಿತವಾಗದಿದ್ದರೂ ಅವಳ ಮೂಕರೋಧನ ಸೀತೆಯ ಮೂಕವೇದನೆಗಿಂತ ಕಡಿಮೆಯೇನಿರಲಿಲ್ಲವೆಂದೆ ಹೇಳಬೇಕು.
.
ಹೀಗಾಗಿ ಮಂಡೋದರಿಯ ಪಾತ್ರದಲ್ಲಿ, ಕೊನೆಗುಳಿಯುವ ಭಾವನೆ, ಅನುಭೂತಿ - ' ಅಯ್ಯೊ ಪಾಪ! ಮಂಡೋದರಿ ' ಎಂದೆ. ನಿಮಗೇನನಿಸುವುದೊ?
_________________________________________________________________________________________________________________________________

. ಅಡಿ ಟಿಪ್ಪಣಿ 1. ಈ ವಿಶ್ಲೇಷಣೆಯಲ್ಲಿ ಮಾಮೂಲಿ ಹೆಣ್ಣಾಗಿ, ಮಹಾರಾಣಿಯಾಗಿ ಮಂಡೋದರಿಯ ತುಮುಲ, ವೇದನೆ, ಅಸಹಾಯಕತೆ, ಯಾತನೆಗಳನ್ನು ಕಟ್ಟಿಕೊಡಲೆತ್ನಿಸಿದ್ದೇನೆ.  ಹಾಗೆಂದು ಆ ಪಾತ್ರದ ಖಾಲಿ ವೈಭವೀಕರಣಕ್ಕಿಳಿಯದೆ ಹೆಣ್ಣಿನ ಸಹಜ ಸಂವೇದನೆಗಳ ದೃಷ್ಟಿಕೋನದಲಿ ಅಳೆಯುವ ಪ್ರಯತ್ನ. ಹೀಗಾಗಿ ಹೆಣ್ಣು ಮನದ ಭಾವ ಸಂಘರ್ಷವೆ ಇಲ್ಲಿನ ಮೂಲ ಸರಕು. ಸಾಮಾನ್ಯವಾಗಿ ನಾವು ತಿಳಿದ ಮೂಲಕಥೆಗೆ ಅಪಚಾರವಾಗದಂತೆಯೆ, ಅಲ್ಲಲ್ಲಿ ಪಾತ್ರದ ಗುಣ-ವೈಭವಿಕರಣದ ಸಲುವಾಗಿ ಕೆಲವು ಊಹಾಲಹರಿಯ ತುಣುಕುಗಳನ್ನು ತಾರ್ಕಿಕ ನೆಲೆಗಟ್ಟಿನಲ್ಲೆ ಬಳಸಿಕೊಂಡಿದ್ದೇನೆ. ಅವೆಲ್ಲ ಬರಿ ಹೆಣ್ಣಿನ ಭಾವನಾತ್ಮಕತೆಯ ವರ್ಣನೆಯ ಪರಿಧಿಯೊಳಗೆ ಸೀಮಿತವಾದ ಕಾರಣ ಮೂಲ ಕಥಾಶಯಕ್ಕೆ ಧಕ್ಕೆಯಾಗದಂತೆ ಚಿತ್ರಿತವಾಗಿದೆಯೆಂದು ನನ್ನ ಅನಿಸಿಕೆ. ಜತೆಗೆ, ಯುದ್ಧಾನಂತರ ರಾವಣ ವಧೆಯಾದ ಮೇಲೆ, ಮಂಡೋದರಿಯ ಜೀವನ ಕುರಿತು ಹೆಚ್ಚಿನ ಮಾಹಿತಿಯ ಅರಿವಿಲ್ಲದ ಕಾರಣ, ಅಲ್ಲಿಯತನಕದ ಪಾತ್ರ ಚಿತ್ರಣಕ್ಕೆ ಹೆಚ್ಚು ಗಮನ ಹರಿಸಿದ್ದೇನೆ. ಒಟ್ಟಾರೆ ಒಂದು ಅಪರೂಪದ ಪಾತ್ರದ ಸರಳ ವಿಶ್ಲೇಷಣೆಯ ಜತೆಗೆ ಸರಳ ಕಾವ್ಯಾಸ್ವಾದನೆಯ ಹಂದರವೂ ಮೇಳೈಸಿರುವ ಕಾರಣ ಒಂದು ರಸಪೂರ್ಣ ಕಥನ-ಕಾವ್ಯಾನುಭೂತಿ ಒಟ್ಟಿಗೆ ಸಿಗುವುದೆನ್ನುವ ನನ್ನ ಆಶಯ, ಸಾಕಾರವಾಗಿದೆಯೆಂದು ಅಂದುಕೊಂಡಿದ್ದೇನೆ. ಉದ್ದದ ದೃಷ್ಟಿಯಿಂದ ಸಾಕಷ್ಟು ಕಡೆ ಜಿಗಿಯಬೇಕಾದ, ಸಂಕ್ಷೇಪಿಸಬೇಕಾಗಿ ಬಂದ ಅನಿವಾರ್ಯದ ಅಳುಕೂ ಇದೆ. 
.
ಅಡಿ ಟಿಪ್ಪಣಿ 2: ಕಾವ್ಯಸ್ವಾದನೆಗೆ ಅನುಕೂಲವಾಗಲೆಂದು, ಪದ್ಯದ ಪಂಕ್ತಿಗಳನ್ನೆಲ್ಲ ಕೊನೆಯಲ್ಲಿ ಬೇರೆಯಾಗಿಯೂ ಸೇರಿಸಿದ್ದೇನೆ, ಒಟ್ಟು ಸಾರವನ್ನು ಕಾವ್ಯದ ರೂಪದಲ್ಲಿ ಬಿಂಬಿಸುವ ರೀತಿಯಲ್ಲಿ. 
.
_________________________________________________________________________________________________________________________________
ಮಂಡೋದರಿ
___________________________
.
ಅಪೂರ್ವ ಸುಂದರಿ ಮಂಡೋದರಿ
ತಂಪಾಗಿಸಿದಳೆ ರಾವಣನ ಕಣ್ಣುರಿ
ಆತ್ಮಲಿಂಗವನರಸಿ ಪಾರ್ವತಿ ಗೆಲ್ಲೆ
ಸದ್ಯ ಮಂಡೋದರಿ ತಪ್ಪಿಸಿದ ಗಲ್ಲೆ || 01 ||
.
ಮಾತೆಗೇನೊ ಮಾತು ಕೊಟ್ಟಾ ರಾವಣ
ಶಿವನಾತ್ಮಲಿಂಗ ತರೆ ತಪಕೊರಟ ಕ್ಷಣ
ಮಂಕು ಹಿಡಿಸಿತ್ತೆ ಶಿವೆಯಾ ಸೌಂದರ್ಯ
ಬೇಡಿ ಕೆಣಕಿದನೆನೆ ಕೊಡವಳ ಭಾರ್ಯ || 02 ||
.
ಭಕ್ತ ಪರಾಧೀನ ಶಿವ ಉಸಿರೆತ್ತದ ಭಾವ
ಬರಬೇಡವೆಂದರೆ ಕೇಳಾ ಗಿರಿಜೆ ಸ್ವಭಾವ
ವಿಧಿಯಿರದೆ ವರವಿತ್ತ ಪಾರ್ವತಿ ಸಂಪತ್ತ
ಕೊಟ್ಟು ಬರಿಗೈಲಿ ನಡೆದನೆ ಕೈಲಾಸದತ್ತ || 03 ||
.
ಕಲಹಪ್ರಿಯ ನಾರದ ನಾಟಕ ವಿಶಾರದ
ಚಾಲಾಕಿತನದೆ ರಾವಣಗೆ ಏಮಾರಿಸಿದ
ಬದುಕಿದೆ ಬಡ ಜೀವವೆ ರಕ್ಕಸಿ ಪಾರ್ವತಿ
ಕಂಡಳೆ ಸುಂದರಿ ಮಂಡೋದರಿ ಕನ್ಯಾರ್ಥಿ || 04 ||
.
ಪಟ್ಟಮಹಿಷಿಯಾದಳೆ ಲಾವಣ್ಯ ಸುಂದರಿ
ಕಟ್ಹಿಡಿದೆ ಚಂಚಲ ಮನ ರಾವಣನ ಸವರಿ
ಬಿಡದೆ ಗೆಲಿಸಿದಳವನಾತ್ಮಲಿಂಗ ದುಬಾರಿ
ಬಾಲ ಬ್ರಹ್ಮಚಾರಿ ನೆಲಕುಕ್ಕಿದರೂ ಸವರಿ || 05 ||
.
ಹಾವು ಚೇಳು ಹರಿದಿದ್ದಾ ಬಾಳಲಿ ತಂಪು
ಸಾಧು ಮೆಲುವಾಗಿಸುತವನೊರಟ ರೂಪು
ಪ್ರಳಯವಾಗಿದ್ದ ಬಾಳಲಿ ಪ್ರಣಯ ಶಾಂತಿ
ಪ್ರಾಯದಲೆ ತುಂಬಿದಳೆ ದಶಾನನನೊಡತಿ || 06 ||
.
ಅಂತಹ ಅನ್ಯೋನ್ಯ ದಾಂಪತ್ಯ ಪುತ್ರಾ ಸುಖ
ಎಣೆಯಿಲ್ಲದ ವೈಭೋಗ ಲಂಕೆಯೆಲ್ಲಾ ಪುಳಕ
ಬಂತೇಕೊ ದುರ್ಬುದ್ದಿ ಸೀತಾಪಹರಣಾ ಸುದ್ದಿ
ಒಡೆದಿತ್ತೆ ಎದೆ ಹೃದಯದಿ ಸುಟ್ಟುಳಿದ ಬೂದಿ || 07 ||
.
ಮಹಾರಾಣಿಯಾಗವಳಂತಃಪುರದಲ್ಲಿ ಕೊಸರು
ರಾವಣೇಶನ ಬಾಯಲಿ ಸದ ಸೀತೆಯ ಹೆಸರು
ಕೂತವಳು ಮಳ್ಳಿ ಅಶೋಕವೃಕ್ಷದಡಿ ಕೊರಗಲಿ
ಹೇಗೆ ನೆಮ್ಮದಿಯಿತ್ತೆ ಮಡಿಲಲೆ ಕೆಂಡ ಸೆರಗಲಿ || 08 ||
.
ವನದಿ ಕೂತವಳದೊಂದುಪವಾಸಾ ವನವಾಸ
ಮನದಿ ಕೂತವಳ ಪಲ್ಲಂಗ ಶಯನಕೂ ಖಾಸ
ಅರೆಮನದಿ ಅರಮನೆಯಲಿದ್ದರು ತನು ಭೂಸ
ಪ್ರಾಣಕಾಂತನ ಮನವಲ್ಲಿರೆ ಮನಸೆ ಬರಿತ್ರಾಸ || 09 ||
.
ಉಣನು ಉಣಿಸನು ಅರೆಮನಸ್ಕ ಪರಿಗಣಿಸನು
ಇದ್ದೂ ಇಲ್ಲದಾ ಹಾಗೆ ಕಂಡೂ ಕಡೆಗಣಿಸುವನು
ಬರಲೀ ಸವತಿಯಾಗೆ ಪೊರೆವೆನೆ ಬೇಡೆನ್ನುವೆನೆ
ಬರದವಳ ಹಿಂದೆ ಸುತ್ತಿದರೆ ಹೇಗೆ ಸಹಿಸುವೆನೆ? || 10 ||
.
ಬರಡು ಜೀವನದ ಜತೆಜತೆಗೆ ಜಾನಕಿಯ ವ್ಯಥೆ
ತಂದಿಕ್ಕಿಬಿಟ್ಟಿತೆ ಸಂದಿಗ್ದ ಹೆಣ್ಣು ಹೆಣ್ಣಿನ ಕೊರತೆ
ಅರ್ಥವಾದಂತವಳ ಸ್ಥಿತಿಯನರ್ಥೈಸುವವರಾರೆ
ಲಂಕಾಧೀಶನ ಮೌಢ್ಯಕೆ ಬೆಲೆ ತೆರವಾಗಿ ಬೆವರೆ || 11 ||
.
ಕಡೆಗು ಶುರುವಾಯ್ತೆ ಯುದ್ಧ ದುಃಖಕೆ ಸಮೃದ್ದ
ಕಳೆದುಕೊಂಡೊಂದೊಂದೆ ಕರುಳಬಳ್ಳಿಯೆ ಛಿದ್ರ
ಒಲ್ಲದ ಹೆಣ್ಣೊಂದರೊಲಿಯದೊಲುಮೆಯೆ ಕುತ್ತ
ಕಳುವಾದರೆ ಭಾಂಧವ ಮಿತ್ರರೊಬ್ಬೊಬ್ಬರೆ ಸುತ್ತ || 12 ||
.
ಮಡಿದರೆಲ್ಲಾ ನುಡಿದರು ಕೇಳದೆ ಹೋದವರೆಲ್ಲ
ಬುದ್ದಿ ವಿವೇಕ ವಿವೇಚನೆ ಹೃದಯದಾ ಹಾಡಲ್ಲ
ವಿಧವೆಯಾಗಿಸಿ ಸತ್ತನೆ ರಾವಣನು ಕೊನೆಯಲಿ
ಉಳಿದವಳೊಬ್ಬಳೆ ಮಂಡೋದರಿ ಬರಿ ಕಣ್ಣೀರಲಿ || 13 ||
.
ಪಾಪದವಳೆ ಮಂಡೋದರಿ ಸಹಿಸಿದಳಾಕ್ರಮಣ
ಹೆಣ್ಣಿನ ಮೇಲ್ದೌರ್ಜನ್ಯಕೆಲ್ಲ ಸಾಕ್ಷಿಯಾಗಿ ನಿತ್ರಾಣ
ಕಾರಣ ಸೀತೆಯೆಂದರೂ ದೂಷಿಸದಾ ಸಾತ್ವಿಕತೆ
ಶೂರ್ಪನಖಿಯಂತಲ್ಲದೆ ಸೇಡ ಮಸೆಯದ ವನಿತೆ || 14 ||
.
ಪಾಪಿ ರಾವಣ ಮಾಡಲವಳ ಆತ್ಮಾಭಿಮಾನ ಧಕ್ಕೆ
ಆದರು ಹದಿಬದೆ ಧರ್ಮ ಸಹಿಸಿದಳೆ ಮನಬೊಕ್ಕೆ
ಅನುಮತಿಯಾದರು ಕೇಳಿದ್ದನೇನೆ ಯಾರಿಗೆ ಗೊತ್ತು
ಕಸದಂತೆ ಕಡೆಗಣಿಸಿದ್ದರು ಅಲ್ಲಚ್ಚರಿಯೇನು ಬಂತು || 15 ||
.
ಮತ್ತೊಂದೀತರ ಮಹರಾಣಿಯ ದುರಂತದಿ ಕಥನ
ರಾವಣನಂತಾರಾವಣನನೂ ಬಿಡದ ಸ್ತ್ರೀಮೋಹನ
ಅನುಭವಿಸಿದ್ದು ಮಂಡೋದರಿ ಶಾಪಾ ಕರ್ಮಕಾಂಡ
ತಂಗಿಗೆ ಅವಮಾನದ ಹೆಸರಲಿ ಏನೆಲ್ಲಾ ಹಳವಂಡ || 16 ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
 

Comments

Submitted by makara Tue, 12/03/2013 - 06:33

ನಾಗೇಶರೆ,
ರಾಮಾಯಣದ ವಿವಿಧ ಸ್ತ್ರೀ ಪಾತ್ರಗಳ ಮಾನಸಿಕ ಚಿತ್ರಣವನ್ನು ಬಹಳ ವಿವೇಚನೆಯಿಂದ ಮತ್ತು ಮೂಲ ಕಥೆಗೆ ಚ್ಯುತಿಬಾರದಂತೆ ಮನಮುಟ್ಟುವಂತೆ ಗದ್ಯ ಮತ್ತು ಪದ್ಯ ರೂಪದಲ್ಲಿ ಕಟ್ಟಿಕೊಡುತ್ತಿದ್ದೀರ. ಅದರೊಂದಿಗೆ, ಆ ಪಾತ್ರದ ಕುರಿತೂ ಅನೇಕಾನೇಕ ವಿವರಣೆಗಳನ್ನೂ ಒದಗಿಸುತ್ತಿದ್ದೀರ. ಒಟ್ಟಿನಲ್ಲಿ ಎಲೆಮರೆಯ ಕಾಯಿಯಂತಿದ್ದ ಪಾತ್ರಗಳನ್ನು ತೆರೆಯ ಮೇಲೆ ತರುವ ಉತ್ತಮ ಕಾರ್ಯವನ್ನು ಮಾಡುತ್ತಿದ್ದೀರ ಅದಕ್ಕಾಗಿ ಅಭಿನಂದೆನೆಗಳು,
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Wed, 12/04/2013 - 18:11

In reply to by makara

ಶ್ರೀಧರರೆ, ಸದ್ಯ ಪಾರ್ಥರು ಸಂಪದದಲ್ಲಿ ಇನ್ನು ಬರೆಯದಿದ್ದ ಒಂದು ಪಾತ್ರವಾದರೂ ಸಿಕ್ಕಿತಲ್ಲ ಅಂದುಕೊಳ್ಳುತ್ತಿದ್ದೇನೆ. ಹಾಗೇನಾದರೂ ಬರೆದುಬಿಟ್ಟಿದ್ದರೆ ಮತ್ತೆ 'ಬ್ಯಾಕ್ ಟು ಸ್ಕೈಯರ ವನ್ !'

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

Submitted by nageshamysore Wed, 12/04/2013 - 18:11

In reply to by makara

ಶ್ರೀಧರರೆ, ಸದ್ಯ ಪಾರ್ಥರು ಸಂಪದದಲ್ಲಿ ಇನ್ನು ಬರೆಯದಿದ್ದ ಒಂದು ಪಾತ್ರವಾದರೂ ಸಿಕ್ಕಿತಲ್ಲ ಅಂದುಕೊಳ್ಳುತ್ತಿದ್ದೇನೆ. ಹಾಗೇನಾದರೂ ಬರೆದುಬಿಟ್ಟಿದ್ದರೆ ಮತ್ತೆ 'ಬ್ಯಾಕ್ ಟು ಸ್ಕೈಯರ ವನ್ !'

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

Submitted by venkatb83 Thu, 12/05/2013 - 17:41

In reply to by makara

"ಅಂತಹ ಅನ್ಯೋನ್ಯ ದಾಂಪತ್ಯ ಪುತ್ರಾ ಸುಖ
ಎಣೆಯಿಲ್ಲದ ವೈಭೋಗ ಲಂಕೆಯೆಲ್ಲಾ ಪುಳಕ
ಬಂತೇಕೊ ದುರ್ಬುದ್ದಿ ಸೀತಾಪಹರಣಾ ಸುದ್ದಿ
ಒಡೆದಿತ್ತೆ ಎದೆ ಹೃದಯದಿ ಸುಟ್ಟುಳಿದ ಬೂದಿ || 07 ||
.
ಮಹಾರಾಣಿಯಾಗವಳಂತಃಪುರದಲ್ಲಿ ಕೊಸರು
ರಾವಣೇಶನ ಬಾಯಲಿ ಸದ ಸೀತೆಯ ಹೆಸರು
ಕೂತವಳು ಮಳ್ಳಿ ಅಶೋಕವೃಕ್ಷದಡಿ ಕೊರಗಲಿ
ಹೇಗೆ ನೆಮ್ಮದಿಯಿತ್ತೆ ಮಡಿಲಲೆ ಕೆಂಡ ಸೆರಗಲಿ || 08 ||
.
ವನದಿ ಕೂತವಳದೊಂದುಪವಾಸಾ ವನವಾಸ
ಮನದಿ ಕೂತವಳ ಪಲ್ಲಂಗ ಶಯನಕೂ ಖಾಸ
ಅರೆಮನದಿ ಅರಮನೆಯಲಿದ್ದರು ತನು ಭೂಸ
ಪ್ರಾಣಕಾಂತನ ಮನವಲ್ಲಿರೆ ಮನಸೆ ಬರಿತ್ರಾಸ || 09 ||"

>>>ಎರಡು ಜೀವಗಳ‌ ನಡುವಿನ‌ ಮನಸಿಕ‌ ತುಮುಲ‌ ವೇದನೆ ನೀವ್ ಬರಹಕ್ಕಿಳಿಸಿದ‌ ಪರಿ ಅನನ್ಯ ‍, ಅಮೋಘ‌, ವಾಹ್ವ್...!!
ಇಡೀ ಬರಹ‌ ಓದುತ್ತಿರುವಾಗ‌ ಪಾತ್ರಗಳೇ ಮತ್ತು ಆ ಸನ್ನಿವೇಷಗಳೇ ಕಣ್ಣ ಮುಂದೆ ಬಂದ‌ ಹಾಗಿದೆ..
ನಿಮ್ಮನ್ನು ಹೊಗಳಲು ಪದಗಳೇ ಸಿಗುತಿಲ್ಲ..ಹೊಗಳಿಕೆ ನೀವ್ ಸಂಪೂರ್ಣ‌ ಅರ್ಹರು..

ನಾಗೇಶ್ಹ್ ಸಾರ್ ನಿಮ್ಮಾಬರಹಕ್ಕೆ http://bit.ly/1eS6uXO ಪ್ರತಿಕ್ರಿಯಿಸಿ ಈಗ‌ ಇಲ್ಲಿ ಪ್ರತಿಕ್ರಿಯಿಸುತ್ತಿರುವೆ..
ಈ ಬರಹಕ್ಕೆ ಶ್ಹ್ರೀಧರ್ ಜೀ ವ್ಯಕ್ತ ಪಡಿಸಿದ‌ ಪ್ರತಿಕ್ರಿಯೆಗೆ ನನ್ನ ಸಹಮತ‌ ಇದೆ..
ಅವರು ಹೇಳಿದ‌ ಹಾಗೆ ರಾಮಾಯಣ‌ ಮಹಾ ಭಾರತ‌ ಕುರಿತ‌ ಹಲವು ಬರಹ್ಗಳು ಇಲ್ಲಿವೆ ಮತ್ತು ಬೇರೆಡೆಯೂ ಓದಿರುವೆವು, ಆದರೆ ಬರಹಗಾರರ‌ ಆ ಪಾತ್ರಗಳ‌ ಬಗೆಗಿನ‌ ಧ್ರುಸ್ಟಿಕೋನ‌, ಭಾವ‌ ಭಿನ್ನ ಭಿನ್ನ , ಮಂಡೋದರಿ ಅತೀವ‌ ಸುಂದರಿ ಆಗಿದ್ದಳು ಎಂದು ನನಗೆ ಈಗಲೇ ಗೊತ್ತಾಗಿದ್ದು .. ಈ ಪಾತ್ರ ,ಪರಿಚ್ಹಯ‌ ಸೂಪರ್.. ಪುರಾಣ‌ ಐತಿಹಾಸಿಕ‌ ಸನ್ನಿವೇಷ‌, ಪಾತ್ರಗಳ‌ ಬಗ್ಗೆ ಬರೆಯುವಾಗ‌ ಆ ಬಗ್ಗೆ ಈ ಹಿಂದೆ ಹಲವು ಜನ‌ ಬರೆದ‌ ರೀತಿ ಅದಕ್ಕೆ ಓದುಗರಿಂದ‌ ದೊರೆತ‌ ಸ್ಪಂದನೆ ‍ಇತ್ಯಾದಿ ಮನದಲ್ಲಿ ಹಾದು ಹೋಗೋದು ಸಹಜ‌, ನಿಮಗೂ ಆ ರೀತಿ ಏನಾದರೂ ಅನ್ನಿಸಿತ್ತೇ? ಎಂದರೆ ಈ ಬರಹಕ್ಕೆ ಓದುಗರು ಯಾವ‌ ಯಾವ‌ ರೀತಿ ಭಾವ‌ ವ್ಯಕತಪಡಿಸಬಹುದು ಎಂದು...
ಈ ನಡುವೆ ಯಾವುದೇ ಬರಹ‌ ಬರೆಯಲು ಏನೂ ಹೊಳೆಯುತ್ತಿಲ್ಲ , ಆದರೆ ನೀವು ಮತ್ತಿತರರು ಬರೆವ‌ ಬರಹಗಳನ್ನು ಓದಿ ಪ್ರತಿಕ್ರಿಯಿಸೋದು ಮಜಾ ಕೊಡುತ್ತಿದೆ..!!

ನನ್ನಿ

ಶ್ಹುಭವಾಗಲಿ..

\|/

Submitted by partha1059 Tue, 12/03/2013 - 09:08

ನಾಗೇಶರೆ
ರಾವಣನಂತ ಚಪಲಚಿತ್ತನನ್ನು ಗಂಡನನ್ನಾಗಿ ಪಡೆದವಳಿಗೆ ಕಷ್ಟಗಳಲ್ಲದೆ ಇನ್ನೇನು ಸಿಕ್ಕೀತು ಹೇಳಿ. ನಿಮ್ಮ ಕವನ ಓದುತ್ತ ಅದೇಕೊ ಅಧುನಿಕ ಮಂಡೋದರಿಯರ ಮನ ಹೇಗಿರಬಹುದು ಎಂದು ಅನ್ನಿಸಿತು
ಸಮಾಜದಲ್ಲಿ ಹಲವು ರಾವಣರನ್ನು ನಾವು ಕಾಣುತ್ತಿರುವೆವು ಪರಸ್ರೀ ವ್ಯಾಮೋಹಕ್ಕಿಳಿದು ಕಡೆಗೆ ಸಾರ್ವಜನಿಕ ವಾಗಿ ಅಪಮಾನ ಪಡುವ
ತರುಣ್ ತೇಜ್ ಪಾಲ್ ಹಾಗು ಇತರರು .....
ಅಂತಹ ಸಂದರ್ಭದಲ್ಲಿ ಅವರ ಪತ್ನಿ ಹಾಗು ಮಕ್ಕಳ ಕತೆ ಮಂಡೋಧರಿಗಿಂತ ಭಿನ್ನವಾಗೇನು ಇರಲಾರದು

Submitted by nageshamysore Wed, 12/04/2013 - 18:19

In reply to by partha1059

ಪಾರ್ಥಾ ಸಾರ್,
.
ಖಂಡಿತ ಇಂತಹ ಎಷ್ಟೋ ಮಂಡೋದರಿಯರು ಸಂಸಾರವನ್ನು ಮುರಿಯಬಾರದೆಂಬ ತಪನೆಯಿಂದ ಎಲ್ಲವನ್ನು ಸಹಿಸಿಕೊಂಡಿರುವುದೆ ಹೆಚ್ಚು. ಸಾರ್ವಜನಿಕವಾಗಿ ಬಯಲಿಗೆ ಬಂದ ಪ್ರಕರಣಗಳಲ್ಲಿ ಅವರು ಅದು ಹೇಗೆ ತಮ್ಮ ಸುತ್ತುಮುತ್ತಿನವರೊಡನೆ ವ್ಯವಹಾರ ನಡೆಸಲು ಸಾಧ್ಯವಾಗುತ್ತದೊ ಎಂದು ನೆನೆದರೆ ಬೇಸರವಾಗುತ್ತದೆ. ಅವಮಾನ, ಸಂಕಟಗಳ ಜತೆ ಒಂದೆ ಬಾರಿ ಶಿಖರದ ಮೇಲಿಂದ ಕೆಳಬಿದ್ದ ಅನುಭವಗಳೆ ದಾರುಣ..
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

Submitted by venkatb83 Thu, 12/05/2013 - 18:03

In reply to by nageshamysore

ನಾಗೇಶ್ಹ್ ಅವರೇ ನಿಮ್ಮಲ್ಲಿ ನನ್ನದು ಒಂದು ಕೋರಿಕೆ ಇದೆ, ಅದು ಮನದಲ್ಲಿ ಬಂದಿದ್ದು ನೀವ್ ಅದನ್ನು ಸಮರ್ಥವಾಗಿ ಬರಹ‌ ರೂಪಕ್ಕೆ ಇಳಿಸಬಲ್ಲಿರಿ ಅಂತ‌...
http://en.wikipedia.org/wiki/Duryodhana

ಅದ್ರಲ್ಲಿ ಕರ್ಣನೊಡನೆ ಸಂಬಂಧ‌ ಎಂದು ಇರುವ‌ ಸನ್ನಿವೇಶ್ಹ ವಿವರಣೆ..Relationship with Karna (1) Loyal friend and trusting)
ಈ ಬರಹ್ದಲ್ಲಿ ಬರುವ‌ ಒಂದು ಸನ್ನಿವೇಶ್ಹ
ನೀವು ಭಾನುಮತಿ(ದುರ್ಯೋಧನನ‌ ಪತ್ನಿ) ಮತ್ತು ಕರ್ಣ‌ ಚದುರಂಗ‌ ಆಡುವಾಗ‍ ಭಾನುಮತಿ ಸೋತು ಏಳುವಾಗ‌ , ಕರ್ಣ‌ ಎಳೆದ‌ ರಭಸಕ್ಕೆ ಅವಳ‌ ಸರ‌ ಹರಿದು ಮುತ್ತುಗಳು ಚ್ಹೆಲ್ಲಿ ಅವುಗಳನ್ನು ಇಬ್ಬರೂ ಸೇರಿ ಹೆಕ್ಕುವಾಗ‌ , ಧುರ್ಯೋಧನ‌ ಬಂದಾಗ‌ ಇಬರಿಗೂ ಆಗುವ‌ ಧಿಗಿಲು ಆ ಸಂದರ್ಭವನ್ನು ದುರ್ಯೋಧನ‌ ತಿಳೀಗೊಳಿಸಿದ‌ ರೀತಿ ಕುರಿತ‌ ಒಂದು ಕಾವ್ಯ ಬರಹ‌ ಬರೆಯಿರಿ.. ಅದು ಓದುವ‌ ಆಶ್ಹೆ ಆಗಿದೆ... ಮಹಾಭಾರತದ‌ ಈ ಸನ್ನಿವೇಶ್ಹ ನನಗೆ ಮೊದಲಿಂದಲೂ ಬಹು ಇಸ್ಟ ಆಗಿದೆ.. ಆ ಸ್ಮಯದಲ್ಲಿ ಬೇರೆ ಯಾರೇ ಆಗಿದ್ದರು ಪ್ರತಿಕ್ರಿಸ್ಯ್ಸಿರುತ್ತಿದ್ದ ರೀತಿಯೇ ಬೇರೆ ಅನಿಸುತ್ತಿದೆ..
ನಿಮ್ಮ ಬರಹ್ದಲ್ಲಿ ಆ ಸನ್ನಿವೇಶ್ಹ ಹೇಗೆ ಬರುವುದೋ ನೋಡುವ‌..

ಶ್ಹುಭವಾಗಲಿ..

\|/

Submitted by venkatb83 Thu, 12/05/2013 - 18:05

In reply to by venkatb83

ಅಯ್ಯೋ...!! ನಾ ಮೇಲೆ ಬರೆದ‌ ಪ್ರತಿಕ್ರಿಯೆಯಲ್ಲಿ ಅಚ್ವ್ಹಾತುರ್ಯವಾಗಿದೆ..
ಅದು ಹೀಗಿರಬೇಕು
ನೀವು ಈ ಸನ್ನಿವೇಶ್ಹದ‌ ಬಗೆಗೆ ಒಂದು ಕಾವ್ಯ ಬರಹ‌ ಬರೆಯುವಿರ‌? ಅಂತ‌.

ಆದರೆ ಆಗಿದ್ದು 'ನೀವು ಭಾನುಮತಿ(ದುರ್ಯೋಧನನ‌ ಪತ್ನಿ) ಮತ್ತು ಕರ್ಣ‌ ಚದುರಂಗ‌ ಆಡುವಾಗ‍ ' ಅಂತ‌...!!
ಕ್ಷಮೆ ಇರಲಿ..

Submitted by nageshamysore Thu, 12/05/2013 - 19:39

In reply to by venkatb83

ಸಪ್ತಗಿರಿಗಳೆ, ನೀವು ಹೀಗೆ ಅಚಾತುರ್ಯ ಮಾಡುತ್ತಲೆ ಇರಿ, ಆಗ ಓದುವ ನಮಗೆಲ್ಲ ಬೋರು ಆಗುವುದಿಲ್ಲ, ಸ್ವಲ್ಪ ಎಂಟರ್ಟೈನ್ಮೆಂಟೂ ಇರುತ್ತದೆ!

ಕ್ಷಮೆ ಕೇಳುವಂತದ್ದು ಅಲ್ಲೇನೂ ಇರಲಿಲ್ಲ ಬಿಡಿ. ನೀವು ಈ ವಿವರಣೆ ಬರೆಯದೆಯು,ನಿಮ್ಮ ಭಾವವೇನೆಂದು ಗೊತ್ತಾಗಿತ್ತು:-)

Submitted by venkatb83 Thu, 12/05/2013 - 17:50

In reply to by partha1059

+1

ಗುರುಗಳೇ ನಿಮ್ಮ ಮನದ‌ ಈ ಭಾವ‌ ನನಗೂ ಬಂತು ಮತ್ತು ಓದಿದ‌ ಎಲ್ಲರ‌ ಮನದಲ್ಲೂ ಬಂದಿರಬಹುದು..
ಪುರಾಣಗಳಲ್ಲಿ ದಿನ ನಿತ್ಯ ಈ ತರಹದ‌ ಸುದ್ದ್ಹಿ ಓದಿ ಆ ಬಗ್ಗೆ ಕೇಳಿ ನೋಡಿಯೂ ಈ ತರಹದ‌ ತಪ್ಪು ಮಾಡುವ‌ ಜನ‌ ಇನ್ನೂ ಇರುವರು ಎಂದರೆ....!!

ಇಂದಿನ‌ ಪತ್ರಿಕೆಯಲ್ಲಿ ತೇಜ‌ ಕಳೆಗುಂದಿದ‌ ಪಾಲ್ ಹೇಳಿದ್ದು‍ ಅದು ಸಹಮತದ‌ ಕ್ರಿಯೆ ಆಗಿತ್ತು ‍, ಅದು ಇಬ್ಬರಿಗೂ ಇಸ್ಟವಾಗಿತ್ತು ಅಂತ‌...!!
ಇನ್ನು ಏನೇನೂ ವಿರುದ್ಧ ಹೇಳಿಕೆಗಳು ಬರುವವೋ....

ಶ್ಹುಭವಾಗಲಿ..

\|/

Submitted by H A Patil Tue, 12/03/2013 - 17:53

ನಾಗೇಶ ಮೈಸೂರು ರವ ರಿಗೆ ವಂದನೆಗಳು
ಮಂಡೋದರಿಯ ಪಾತ್ರವನ್ನು ಅದ್ಭುತವಾಗಿ ಚಿತ್ರಿಸಿದ್ದೀರಿ, ಆಕೆ ಅನುಭವಿಸಿದ ಕಿರಿ ಕಿರಿಗಳನ್ನು ತನ್ನ ಸಂಯಮದಿಂದಲೆ ಗೆದ್ದವಳು ಅವಳು, ಆಕೆಯ ಕುರಿತ ಮನೋಜ್ಞ ಬರವಣಿಗೆ ಧನ್ಯವಾದಗಳು.

Submitted by nageshamysore Wed, 12/04/2013 - 18:23

In reply to by H A Patil

ಪಾಟೀಲರೆ ನಮಸ್ಕಾರ. ಮಂಡೋದರಿಯ ಪಾತ್ರ ರಾಮ ರಾವಣರ ವೈಭವಿಕರಿಸಿದ ಕಥಾನಕದಿಂದಾಗಿ ಹೆಚ್ಚು ಗಮನ ಸೆಳೆದಂತೆ ಕಾಣುವುದಿಲ್ಲ (ಸದ್ದು ಮಾಡದವರ ಕಥೆಯೊ ಹಾಗೆಂದು ಕಾಣುತ್ತದೆ). ಬರಹ ನಿಮಗೆ ಮೆಚ್ಚಿಗೆಯಾದದ್ದು ತುಂಬಾ ಸಂತೋಷ. ವಂದನೆಗಳು.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by nageshamysore Wed, 12/04/2013 - 18:25

In reply to by naveengkn

ನವೀನ್ ರವರೆ ನಮಸ್ಕಾರ. ಮಂಡೋದರಿಯ ಪಾತ್ರವು ವಿಶಿಷ್ಟವಾದ ಆದರೆ ಕಡೆಗಣಿಸಲ್ಪಟ್ಟ ಪಾತ್ರ. ನಿಮಗೆ ಹಿಡಿಸಿದ್ದು ತುಂಬಾ ಸಂತಸ. ವಂದನೆಗಳು.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by nageshamysore Wed, 12/04/2013 - 18:28

In reply to by Vasant Kulkarni

ನಿರಂತರ ಪ್ರೋತ್ಸಾಹ, ಉತ್ತೇಜನದ ಸಹೃದಯೀ ಬೆಂಬಲಕ್ಕೆ ಹೃತ್ಪೂರ್ವಕ ಧನ್ಯವಾದ ವಸಂತ್ :-) - ನಾಗೇಶ ಮೈಸೂರು

Submitted by nageshamysore Thu, 12/05/2013 - 18:54

ಸಪ್ತಗಿರಿಗಳೆ,
.
ಇವತ್ತು ನಾನು ಖಂಡಿತ ಊಟ ಮಾಡುವ ಅಗತ್ಯವಿಲ್ಲ. ನಿಮ್ಮ ಪ್ರತಿಕ್ರಿಯೆಯಲ್ಲೆ ಸೊಗಸಾದ ರಸ ಪಾಕ ಬಡಿಸಿಬಿಟ್ಟಿದ್ದೀರಾ - ಆ ಹೊಟ್ಟೆ ಭಾರಕ್ಕೆ ತೂಕಡಿಕೆ ಬರುವಷ್ಟು! ನಿಮ್ಮಿ ಭೂರಿ ಭೋಜನಕ್ಕೆ, ಅಭಿಮಾನ, ಹಾರೈಕೆಗಳಿಗೆ ಮೊದಲು ವಿನಮ್ರ ನನ್ನಿ ! ಹೀಗಾಗಿ ನಿಮ್ಮ ಕೋಪವೂ ಕೂಡ ಸ್ವಾದಿಷ್ಟ ತಿನಿಸು :-)
.
ನಿಮ್ಮ ಪ್ರತಿಕ್ರಿಯೆಗೆ ಉತ್ತರವೆ ಮತ್ತೊಂದು ಲೇಖನ ಬರೆಯುವಷ್ಟಿದೆ. ಸದ್ಯಕ್ಕೆ ಒಂದು ಸಂಕ್ಷಿಪ್ತ ಉತ್ತರ :
.
1. ಕಳೆದ ಬಾರಿಯ ನಿಮ್ಮ ಸಲಹೆಯಂತೆ ಕೆಲವು ಬರಹಗಳನ್ನು ದೀಪಾವಳಿ ವಿಶೇಷಾಂಕಕ್ಕೆ ಕಳಿಸಿದ್ದೆ, ಕೊನೆ ದಿನದಂದು. ಯಾಕೊ ಉತ್ತರವೆ ಬರಲಿಲ್ಲ. ಇನ್ನು ಮೇಲೆ ಸ್ವಲ್ಪ ಸೀರಿಯಸ್ಸಾಗಿ ಕಳಿಸುತ್ತೇನೆ. ಪ್ರಕಟವಾಗುವುದೊ ಕಾದು ನೋಡೋಣ. ಸಾಮಾನ್ಯ ಹೊಸಬರ ಬರಹ ಮೊದಲ ಯತ್ನಗಳಲ್ಲಿ ಸಫಲವಾಗುವುದು ಕಡಿಮೆ ಎಂದು ಕೇಳಿದ್ದೇನೆ :-)
2. ಧುರ್ಯೋಧನ-ಕರ್ಣ-ಭಾನುಮತಿಯರ ಪ್ರಸಂಗದ ಕುರಿತು ಬರೆಯುತ್ತೇನೆ. ಸದ್ಯಕ್ಕೆ ಗಣೇಶರ ಸಲಹೆಯಂತೆ ರಾಮನ ಕುರಿತು ಬರೆಯ ಹೊರಟೆ - ಇನ್ನು ಶೇಕಡ ಐದು ಹತ್ತು ಮುಗಿದಿಲ್ಲ ಆಗಲೆ 150 ಪಂಕ್ತಿ ದಾಟಿಬಿಟ್ಟಿತು! ಅದು ಉಳಿದ 80 % ಮುಗಿಸಹೊರಟರೆ ಎಷ್ಟು ಪಂಕ್ತಿಯಾಗುವುದೊ ಗೊತ್ತಿಲ್ಲ !
3. ನಾನು ಬರೆಯುವಾಗ ಸಾಮಾನ್ಯ ಯಾವುದೆ ಹಿನ್ನಲೆ ಮನಸಿನಲ್ಲಿ ಇರುವುದಿಲ್ಲ. ಬಾಲ್ಯದಲ್ಲಿ ಓದಿದ ಕಥೆಗಳೊ ಅಥವ ಅಣ್ಣಾವ್ರ ಅಭಿನಯದ ಆ ಹಳೆ ಚಿತ್ರಗಳ ನೆನಪಿನ ಮೇಲೆ ಕಲ್ಪನೆ, ಊಹೆಯನ್ನು ಸೇರಿಸಿ ಬರೆಯುತ್ತಾ ಹೋಗುತ್ತೇನೆ. ಹೀಗಾಗಿ ಒಂದು ರೀತಿ 'ಫ್ರೀ ಸ್ಟೈಲ್ ರೈಟಿಂಗ್' ಅನ್ನಬಹುದು. ಆ ಗಳಿಗೆಯಲ್ಲಿ ಮನಸಿಗೆ ಬಂದದ್ದನ್ನು ಆದಷ್ಟು ಸರಳವಾಗಿ ಬರೆಯಲು ಯತ್ನಿಸುತ್ತೇನೆ. ಆ ಹೊತ್ತಿನಲ್ಲಿ ಮನಸಿನಲ್ಲಿರುವ ಓದುಗರೆಂದರೆ 'ಸಂಪದಿಗರು' - ಇದು ಸಂಪದಿಗರಿಗೆ ಹಿಡಿಸುತ್ತದೊ ಇಲ್ಲವೊ ಎಂಬ ಒಂದು ಸಣ್ಣ ಹಿನ್ನಲೆ ಭಾವ ಸದಾ ಜತೆಗಿರುತ್ತದೆ.
.
ಅಡಿಗೆ ಮಾಡಿ ಬಡಿಸುವವರಿಗೆ, ತಿನ್ನುವವರು ಖುಷಿಯಿಂದ ತಿಂದಾಗಲೆ ತೃಪ್ತಿಯಂತೆ. ನಿಮ್ಮಂತೆ ಓದಿ ಪ್ರೋತ್ಸಾಹಿಸುವ ಮಂದಿಯಿದ್ದರೆ ತಾನೆ ತಾಳ ಮೇಳ? ಅದಕ್ಕೆ ನೀವು ಸದಾ ಅಭಿನಂದನಾರ್ಹರು :-)
.
ಧನ್ಯವಾದಗಳೊಂದಿಗೆ  
ನಾಗೇಶ ಮೈಸೂರು