ಮಂಕುತಿಮ್ಮನ ಕಗ್ಗ ಮತ್ತು ದಾಸರ ಪದ ಹೋಲಿಕೆ - ನಾ ಕಂಡಂತೆ!

ಮಂಕುತಿಮ್ಮನ ಕಗ್ಗ ಮತ್ತು ದಾಸರ ಪದ ಹೋಲಿಕೆ - ನಾ ಕಂಡಂತೆ!

ಮಂಕುತಿಮ್ಮನ ಕಗ್ಗ ಮತ್ತು ದಾಸರ ಪದ ಹೋಲಿಕೆ - ನಾ ಕಂಡಂತೆ!

ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.

ಮಾನ್ಯ ಡಿ. ವಿ. ಜಿ. ಯವರು ಜೀವನದಲ್ಲಿ ಬದುಕನ್ನು (ಬಾಳನ್ನು) ಹೇಗೆ ಅರ್ಥಪೂರ್ಣವಾಗಿ ಬಾಳಬೇಕು ಎನ್ನುವುದನ್ನು ಸರಳ ಭಾಷೆಯಲ್ಲಿ ಜನ ಸಾಮಾನ್ಯರಿಗೆ ಅರ್ಥವಾಗುವಂತೆ ಪದ್ಯಗಳ ರೂಪದಲ್ಲಿ ಬರೆದಿದ್ದಾರೆ. ಅವರು ಬಹಳಷ್ಟು ಕೃತಿಗಳನ್ನು ರಚಿಸಿದರೂ "ಮಂಕುತಿಮ್ಮನ ಕಗ್ಗ" ತುಂಬಾ ಜನಪ್ರಿಯವಾಗಿ ಖ್ಯಾತಿಯನ್ನು ಪಡೆದಿದೆ. ಜೀವನದ ತತ್ವ, ಮೌಲ್ಯಗಳನ್ನು ಸಂಪೂರ್ಣವಾಗಿ ಸೆರೆ ಹಿಡಿದಿದ್ದಾರೆ. ಮಂಕುತಿಮ್ಮನ ಕಗ್ಗ ಕನ್ನಡದ ಭಗವತ್ ಗೀತೆಯಾಗಿದೆ ಕೋಟಿ ಕನ್ನಡಿಗರಿಗೆ ಎಂದರೆ ಅತಿಶಯೋಕ್ತಿ ಎನಿಸುವುದಿಲ್ಲ. ಪ್ರತಿಯೊಬ್ಬ ಕನ್ನಡಿಗನೂ ಅದರ ಒಂದೇ ಒಂದು ಪದ್ಯವನ್ನಾದರೂ ನೆನಪಿಸಿಕೊಂಡು ಅದರ ಅರ್ಥವನ್ನು ಸಮರ್ಥವಾಗಿ ಹೇಳಬಲ್ಲ ಎಂಬುದು ಇದರ ಪ್ರಸಿದ್ಧಿ ಮತ್ತು ಜನಪ್ರಿಯತೆಯನ್ನು ಖಚಿತಪಡಿಸುತ್ತದೆ.

ದಾಸರ ಪದಗಳೂ ಜೀವನದ ತತ್ವಗಳು, ಮೌಲ್ಯಗಳನ್ನು ಎತ್ತಿಹಿಡಿದು, ಆ ಪರಬ್ರಹ್ಮನ ಜೊತೆ ಆತ್ಮ ಸಂಸ್ಕಾರಕ್ಕೆ ದಾರಿಯನ್ನು ತೋರಿಸಿದೆ. ದಾಸಶ್ರೇಷ್ಠರಾದ ಪುರಂದರ ದಾಸರು ಸುಮಾರು ಮೂರೂ ಮುಕ್ಕಾಲು ಲಕ್ಷ್ಯ ಒಟ್ಟು ಪದಗಳನ್ನು ( ಎಲ್ಲ ಸೇರಿ) ರಚಿಸಿದ್ದಾರೆ ಎಂಬುದು ಸಂಶೋಧಕರ ಅಭಿಪ್ರಾಯ. ಅದು ಏನೇ ಇರಲಿ, ದಾಸರ ಪದಗಳು ಮತ್ತು ಮಂಕುತಿಮ್ಮನ ಕಗ್ಗದ ಕೆಲವು ಪದ್ಯಗಳಿಗೂ ಬಹಳಷ್ಟು ಹೋಲಿಕೆಗಳು ಇವೆ. ಎರಡೂ ಜೀವನದ ತತ್ವ ಮತ್ತು ಮೌಲ್ಯಗಳನ್ನು ತೋರಿಸಿರುವಾಗ ಅದರ ಸತ್ಯತೆ ಇನ್ನಷ್ಟು ಬಲವಾಗುತ್ತದೆ. ಹೀಗೊಂದು ನನಗೆ ಕಂಡಂತೆ ಪದ್ಯ ಮತ್ತು ಪದದ ಹೋಲಿಕೆ ನಿಮ್ಮೆಲ್ಲರಲ್ಲಿ ಹಂಚಿ ಕೊಳ್ಳಬೇಕೆನಿಸಿತು.....

ಮಂಕುತಿಮ್ಮನ ಕಗ್ಗದಿಂದ.....

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ವಿಧಿಯ ಮಳೆ ಸುರಿಯೆ
ಕಲ್ಲು ಸಕ್ಕರೆಯಾಗು ದೀನದುರ್ಭಲರಿಗೆ
ಎಲ್ಲರೊಳಗೊಂದಾಗು ಮಂಕುತಿಮ್ಮಾ....

ಇದು ಒಂದು ತುಂಬಾ ಜನಪ್ರಿಯವಾದ ಪದ್ಯ. ನಿಮಗೆಲ್ಲರಿಗೂ ಗೊತ್ತಿರುವ ಪದ್ಯ ಮತ್ತು ಅದರ ತಾತ್ಪರ್ಯ ಕೂಡಾ. ಆದರೂ ಅದರ ಅರ್ಥವನ್ನು ಹೇಳಬೇಕೆನೆಸಿದೆ.

ತಾತ್ಪರ್ಯ: ಹುಲ್ಲಾಗು ಬೆಟ್ಟದಡಿ- ಬೆಟ್ಟದ ಕೆಳಗೆ ಹುಲ್ಲಾಗಿ, ಹುಲ್ಲಿನ ಹಾಸಿಗೆಯಂತಾದರೆ, ಬೆಟ್ಟದಿಂದ  ಯಾರಾದರೂ ಆಯ ತಪ್ಪಿ ಬಿದ್ದರೂ ಅವರಿಗೆ ರಕ್ಷಣೆ ಕೊಡುತ್ತದೆ. ಹಾಗೆಯೇ ಹಸು ಕರುಗಳು ಹುಲ್ಲನ್ನು ತಿಂದು ತೃಪ್ತಿ ಪಡೆಯುತ್ತದೆ. ಅಂದರೆ, ನೀನು ಬೇರೆಯವರಿಗೆ ಉಪಯೋಗವಾದಂತೆ, ಸಹಾಯಮಾಡಿದಂತೆ ನಿನ್ನ ಜೀವನ ಧನ್ಯವಾಗುತ್ತೆ. ಮನೆಗೆ ಸುಗಂಧ ಬೀರಿ, ಎಲ್ಲರನ್ನೂ ಆನಂದ ಪಡಿಸುವ ಮಲ್ಲಿಗೆಯಾಗು. ಮಲ್ಲಿಗೆ ಜೀವನ ಅಂದರೆ ಒಳ್ಳೆಯ ಜೀವನ, - ಸಾರ್ಥಕವಾದ ಜೀವನ. ಹಾಗೇ ವಿಧಿಯು ಕಷ್ಟಗಳ ಮಳೆ ಸುರಿದಾಗ ನಿನ್ನ ಮೇಲೆ, ಹೆದರಬೇಡ. ಕಲ್ಲಿನಂತೆ ಧೈರ್ಯವಾಗಿ ಎದುರಿಸು. ಧೃಢವಾದ ಮನಸ್ಸಿನಿಂದ ಬಂದ ಕಷ್ಟಗಳನ್ನು ಎದುರಿಸು. ಕಲ್ಲು ಸಕ್ಕರೆಯಾಗು ದೀನ ದುರ್ಭಲರಿಗೆ - ದೀನರಿಗೆ, ಸಂಕಟಪಡುತ್ತಿರುವ ದುರ್ಭಲರಿಗೆ ಸಕ್ಕರೆಯ ಸಿಹಿಯಂತೆ ಸವಿಯಾದ ಮಾತನಾಡಿ ನಿನಗಾದ ಸಹಾಯ ಮಾಡಿ ಅವರನ್ನು ಕಷ್ಟದಿಂದ ಪಾರುಮಾಡು. ಹೀಗೆ ನಾವು ಸಮಾಜದಲ್ಲಿ "ಎಲ್ಲರೊಳಗೊಂದಾಗಿ’ ಬಾಳಬೇಕು. ಸಮಾಜದಲ್ಲಿ ಇದ್ದು, ನಮ್ಮ ಸುತ್ತ ಮುತ್ತಲಿನ ಅವಶ್ಯಕತೆಗಳಿಗೆ ಗಮನಕೊಡದಂತಾಗಬೇಡ. ಆ ಬಾಳು ನಿರರ್ಥಕ, ಅನಂದಮಯವಾಗುವುದಿಲ್ಲ. ಸುಖವಾದ, ಸಂವೃದ್ಧಿಯಾದ, ಅರ್ಥಪೂರ್ಣವಾದ, ಸಂಪೂರ್ಣವಾದ ಬದುಕಿಗೆ ನಾವೆಲ್ಲ "ಎಲ್ಲರೊಳಗೊಂದಾಗಬೇಕು" ಎಂದು ಮಾನ್ಯ ಡಿ.ವಿ.ಜಿ ಯವರು ಈ ಒಂದು ಪದ್ಯದಲ್ಲಿ ಬಹಳ ಚೆನ್ನಾಗಿ ಸರಳ ಭಾಷೆಯಲ್ಲಿ ತೋರಿಸಿಕೊಟ್ಟಿದ್ದಾರೆ.

ಇದಕ್ಕೆ ಸ್ವಲ್ಪಮಟ್ಟಿಗೆ ಹೋಲುವ ದಾಸರ ಪದದಿಂದ.....ಪುರಂದರ ದಾಸರ ಕೃತಿ!

ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಾ
ನಮ್ಮ ಪದುಮನಾಭನ ಪಾದ ಭಜನೆ ಸುಖವಯ್ಯ...ಪ...

"ಕಲ್ಲಾಗಿ ಇರಬೇಕು ಕಠಿಣಭವತೊರೆಯೊಳಗೆ
 ಬಿಲ್ಲಾಗಿ ಇರಬೇಕು ಬಲ್ಲವರೊಳಗೆ
 .............................
 ಬೆಲ್ಲವಾಗಿರಬೇಕು ಬಂಧುಜನರೊಳಗೆ...ಚ...

ಇಲ್ಲಿ ದಾಸರೂ ಅದೇ ಹೇಳುತ್ತಾರೆ...ಕಲ್ಲಾಗಿ ಇರಬೇಕು ಕಠಿಣಭವತೊರೆಯೊಳಗೆ ಅಂತ. ಕಷ್ಟಗಳು ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಬಂದೇ ತೀರುತ್ತದೆ. ಅದಕ್ಕೆ ನಾವು ಹೆದರಿದರೆ, ಅವು ನಮ್ಮನ್ನು ಇನ್ನಷ್ಟು ಹೆದರಿಸಿ ಕೊಲ್ಲುತ್ತದೆ. ಆದ್ದರಿಂದ ಗಟ್ಟಿಯಾಗಿ ಕಲ್ಲಿನಂತೆ ಧೈರ್ಯವನ್ನು ತೆಗೆದುಕೊಂಡು ಎದುರಿಸಬೇಕು. ಇದ್ದು ಜಯಿಸಬೇಕು. ಇಲ್ಲಿ ದಾಸರು ಬೆಲ್ಲ ವಾಗಿರಬೇಕು ಬಂಧು ಜನರೊಳಗೆ ಅನ್ನುತ್ತಾರೆ. ನೆಂಟರ - ಇಷ್ಟರ ಒಡನೆ ಸಂಬಂಧವನ್ನು ಕಳೆದುಕೊಳ್ಳಬಾರದು. ಆದಷ್ಟು ಜಾಣತನದಿಂದ ಬೆಲ್ಲದಂತೆ - ಸವಿಯಾಗಿ, ಸಿಹಿಯಾಗಿ ವರ್ತಿಸಿ ಸಂಬಂಧವನ್ನು ಉಳಿಸಿಕೊಳ್ಳಬೇಕು. ಶ್ರೀಕೃಷ್ಣನು ಇದೇ ಕೆಲಸವನ್ನು "ಶ್ರೀಕೃಷ್ಣ ಸಂಧಾನ" ದಲ್ಲಿ ಪಾಂಡವರಿಗೂ ಕೌರವರಿಗೂ ಸಂಬಂಧವನ್ನು ಉಳಿಸಲು ಯತ್ನಮಾಡುತ್ತಾನೆ. ಅದನ್ನು ನಾವು ಮಹಭಾರತದಲ್ಲಿ ಓದಿದ್ದೇವೆ.

ಹೀಗೆ "ಜೀವನ ತತ್ವ - ಮೌಲ್ಯಗಳ" ಹೋಲಿಕೆಯನ್ನು ಮಂಕುತಿಮ್ಮನ ಕಗ್ಗ ಮತ್ತು ದಾಸರ ಪದಗಳಲ್ಲಿ ನೋಡಬಹುದು ಅಂತ ನನಗನಿಸಿದ್ದನ್ನು ನಿಮ್ಮಲ್ಲಿ ಹಂಚಿಕೊಂಡಿದ್ದೇನೆ.

Comments

Submitted by makara Fri, 05/17/2013 - 07:23

ಕಲ್ಲು ಸಕ್ಕರೆ ಹಾಗೂ ಬೆಲ್ಲದ ಸವಿಯನ್ನು ಸವಿದಂತಾಯಿತು ನಿಮ್ಮ ಈ ಅರ್ಥಪೂರ್ಣ ಹೋಲಿಕೆಯ ಬರಹವನ್ನು ಓದಿ. ಒಳ್ಳೆಯ ಬರಹಕ್ಕೆ ಧನ್ಯವಾದಗಳು, ಡಾ! ಮೀನಾ ಅವರೆ.
Submitted by ಸುಮ ನಾಡಿಗ್ Thu, 05/23/2013 - 18:26

ಮೀನ ಅವರೆ, ಉತ್ತಮ ಬರಹ. ಧನ್ಯವಾದಗಳು.