"ಬೀರಿನ" ದೇವರು ಒಳಗಿಳಿದರೆ ಶುರು !
ಈಗಿನ ಆಧುನಿಕ ಸಮಾಜದ ಸಾಮಾಜಿಕ ಪರಿಸರದಲಿ 'ಸಾಮಾಜಿಕ ಕುಡಿತದ' ಹೆಸರಿನಲ್ಲಿ ಸಾಧಾರಣ ಬಹುತೇಕರು 'ಬೀರಬಲ್ಲ'ರಾಗಿರುವುದು ಎದ್ದು ಕಾಣುವ ಪ್ರಕ್ರಿಯೆ. 'ಕುಡಿಯದ' ಖಂಡಿತವಾದಿಗಳೂ ಸಹ, ಬೀರಬಲ್ಲರಾಗದಿದ್ದರೂ ಬೀರ'ಬಲ್ಲವ'ರಾಗಿರುವುದಂತೂ ಖಚಿತ. ಕೆಲವು ತೂಕದ ಬೀರಬಲ್ಲರು ಕುಡಿದರೂ ಇರುವೆ ಕಚ್ಚದ ಹಾಗೆ ಸಮತೋಲನದಲ್ಲಿರಬಲ್ಲ ಘನಿಷ್ಟರಾದರೆ, ಮತ್ತೆ ಕೆಲವರು ತಮ್ಮ 'ಲಿಮಿಟ್' ತಿಳಿದುಕೊಂಡು, ಅದು ಮೀರದಂತೆ ಹತೋಟಿ ಕಾಯ್ದುಕೊಂಡು ಸಂಭಾಳಿಸುವವರು. ಮತ್ತುಳಿದ 'ಬೀರ್ದಾಸರು' ಸಿಕ್ಕಿದವರಿಗೆ ಸೀರುಂಡ ಎಂದುಕೊಂಡು ಸಿಕ್ಕಿದ್ದೆಲ್ಲ ಉಡಾಯಿಸಿ ಮಾತು, ಮನಸು, ದೇಹ - ಎಲ್ಲವನ್ನು ಸಡಿಲಬಿಟ್ಟು ಬೀರಾಡಿ, ತೂರಾಡುತ, ಹಾರಾಡುವ ಪರಿಯೂ ಅಷ್ಟೆ ಸಾಮಾನ್ಯವಾಗಿಹ ದೃಶ್ಯ.
ಅಂತಹ ದೃಶ್ಯವನ್ನು ದಿನರಾತ್ರಿಯೂ ಕಾಣುತ್ತಿದ್ದ ಬಾಲ್ಯದ ನೆನಪು ಇನ್ನು ಹಚ್ಚ ಹಸಿರು. ಆ ದಿನಗಳಲ್ಲಿ ನಾವು ವಾಸಿಸುತ್ತಿದ್ದ ಸ್ಥಳದಲ್ಲಿ ಬೀರಬಲ್ಲರೂ ಇದ್ದರು, ಅವರನ್ನು ಮೀರಿಸಿದ 'ಪ್ಯಾಕೆಟ್ಟಿನ' ಗಿರಾಕಿಗಳೂ ಇದ್ದರು. ಅದರಲ್ಲೂ ತರಾತುರಿಯಲ್ಲಿ ಪ್ಯಾಕೆಟೊಂದನ್ನು ಜೇಬಿನಿಂದ ಎಳೆಯುತ್ತ, ಕೈಯಲ್ಲೊಂದೆರಡು ಉಪ್ಪಿನ ಹರಳು ಹಿಡಿದು ನಂಚಿಕೊಳ್ಳುತ್ತ ಗಟಗಟ ಏರಿಸಿಬಿಟ್ಟರೆಂದರೆ ಸಾಕ್ಷಾತ್ ಪರಮಾತ್ಮನ ಅಪರಾವತಾರವೆ ಇಳಿದುಬಂದಂತೆ. ವೈನ್ ಶಾಪುಗಳಿಂದ ರಮ್ಮು, ವಿಸ್ಕಿ, ಬ್ರಾಂದಿಯಂತಹ 'ಹಾಟ್ ಡ್ರಿಂಕ್ಸಿಗೆ' ಶರಣಾದವರ ಸಂಖ್ಯೆಯೇನೂ ಕಡಿಮೆಯಿರುತ್ತಿರಲಿಲ್ಲ. ಕುಡಿತದ ಮೂಲ ಪ್ರಕೃತಿ ಯಾವುದೆ ಆದರೂ, ನಂತರದ ನಡುವಳಿಕೆಯ ಪ್ರವೃತ್ತಿ ಮಾತ್ರ ಹೆಚ್ಚುಕಡಿಮೆ ಒಂದೆ ಆಗಿರುತ್ತಿತ್ತು. ಆಗೆಲ್ಲ ಮನೆ ಬಾಗಿಲ ಹೊರಗೆ ಕುಳಿತು ನಿದ್ದೆ ಬರುವ ತನಕ ಈ ಬಿಟ್ಟಿ ಮನರಂಜನೆಯನ್ನು ಆಸ್ವಾದಿಸುವುದು ನಮಗೊಂದು ತರಹ ಮಜವಾಗಿರುತ್ತಿತ್ತು.
ಗೆಳೆಯರ ಜತೆಯೊ, ಇನ್ನಾವುದೊ ತರದ 'ಗುಂಡು' ಪಾರ್ಟಿಯಲ್ಲಿ ಕುಡಿದು ಕೊನೆಗೆ ಮನೆಗೆ ಹೊರಟಾಗ ಹೊರ ಜಗತ್ತಿನ ಕಣ್ಣಿಗೆ ಆದಷ್ಟು ಸಮತೋಲನದಲಿರುವಂತೆ ಕಾಣಿಸಲು ಹೆಣಗಾಡುತ, ಮನೆ ಸೇರಿದ ಮೇಲೂ ಬಾಯಿಯ ವಾಸನೆ ಅರಿವಾಗದಂತೆ, ಕುಡಿದದ್ದು ಗೊತ್ತಾಗದಂತೆ ಹೇಗೊ ತೂರಾಟ ನಿಯಂತ್ರಿಸಲು ಒದ್ದಾಡುತ್ತ ಮಲಗುವ ಜಾಗ ಸೇರುವುದು ಮತ್ತೊಂದು ಸಾಧಾರಣ ಚಿತ್ರ. ಅದನ್ನು ನೋಡಿಯೂ ಗೊತ್ತಿದ್ದು ಗೊತ್ತಿಲ್ಲದವರಂತೆ ಕ್ಷಿಪ್ರ ಶಯನಕೆ ಅನುವು ಮಾಡಿಕೊಡುವ ಮನೆಯವರದು ಇನ್ನೊಂದು ಬಗೆಯ ಚಿತ್ರಣ. ಒಟ್ಟಾರೆ ಎಲ್ಲಾ ಒಂದು ತನ್ನದೆ ಆದ ಪರಿಸರದ 'ಎಕೋ ಸಿಸ್ಟಂ'ನಲ್ಲಿ ನಡೆದಂತೆ ಭಾಸವಾಗುತ್ತವೆ.
ಆ ದಿನಗಳಲ್ಲಿ ಕಂಡ ದೃಶ್ಯಗಳ, ಘಟನೆಗಳ ತುಣುಕುಗಳನೆಲ್ಲ 'ಬೀರಿನ' ದೇವರ ಹೆಸರಲ್ಲಿ ಕಟ್ಟಿಡುವ ಯತ್ನ ಈ ಕವನದಲ್ಲಿದೆ.
"ಬೀರಿನ" ದೇವರು ಒಳಗಿಳಿದರೆ ಶುರು !
_____________________________
ಬೀರಿನ ದೇವರು
ಒಳಗಿಳಿದರೆ ಶುರು
ರತ್ನನ ಪದಗಳು
ಹರಿದಾಡುವ ಜೋರು ||
ಎಳೆದಾ ತೇರು
ಬಾಟಲಿನಲೆ ಬೆವರು
ಹತ್ತಿಯಂತೆ ಹಗುರ
ಹೆಚ್ಚೆಚ್ಚು ಕುಡಿದಂತೆ ನೀರಾ ||
'ಜುಂ' ಹಿಡಿದ ತೊಗಲೊ
ತಿಳಿಯದ ಹಗಲೊ ಇರುಳೊ
ಮಂಕು ದೀಪದ ಕೆಳಗೆ
ಸೂರ್ಯನ ಕಾಯಿಲೆಗೆ ದಿಗಿಲು ||
ಮಾತೆಲ್ಲಾ ಸದರ
ಅಯೋಮಯದವತಾರ
ಕೇಳಿದ್ದೆಲ್ಲ ಮಂಜೂರಾತಿ
ಲೆಕ್ಕವಿಡಲು ಬೀರಿನ ಸರತಿ ||
ನಡೆದದ್ದೆ ನೆಟ್ಟಗೆ
ನೆಲ ಮೇಲ್ಮೇಲೆದ್ದು ಲಟಿಕೆ
ಬೀರ್ಭಾರಕೆ ಭೂಕಂಪಿಸೆ
ಸುಳ್ಳೆ ತೂರಾಟ ಆರೋಪಿಸೆ ||
ಬುದ್ದಿಯೆಲ್ಲ ಹತೋಟಿ
ಮಾತಷ್ಟೆ ತುಸು ಲಂಗೋಟಿ
ಅರ್ಧಂಬರ್ಧ ತೊದಲಿಟ್ಟು
ಎಲ್ಲ ಮಾದೇಶನಾದೇಶ ಗಟ್ಟಿ ||
ನೇರಕ್ಕೆ ನಡೆದು ಸೊಟ್ಟ
ಹೇಗೊ ಸೇರಿದ ಅಟ್ಟ
ಬಾಯ್ವಾಸನೆ ಬಿಗಿದ ತುಟಿ
ಮಲಗೊ ರಾತ್ರಿ ಶಿವನೆ ಗತಿ ||
------------------------------------------------------------------------------------
ನಾಗೇಶ ಮೈಸೂರು, ಸಿಂಗಾಪುರ
------------------------------------------------------------------------------------
Comments
ಉ: "ಬೀರಿನ" ದೇವರು ಒಳಗಿಳಿದರೆ ಶುರು !
:)) ಬೀರೇದೇವರ ಪುರಾಣ ಚೆನ್ನಾಗಿದೆ.
In reply to ಉ: "ಬೀರಿನ" ದೇವರು ಒಳಗಿಳಿದರೆ ಶುರು ! by kavinagaraj
ಉ: "ಬೀರಿನ" ದೇವರು ಒಳಗಿಳಿದರೆ ಶುರು !
ಧನ್ಯವಾದಗಳು ಕವಿಗಳೆ, ಬೀರ್ಪುರಾಣ ಅನ್ನೊ ಹೆಸರೆ ಇಡಬಹುದಿತ್ತು. ಆ ಹೆಸರಲ್ಲೆ ಬೇರೆ ಹಳೆಯದೊಂದು ಕವನ ಇರೋದರಿಂದ ಬೇರೆ ಹೆಸರಿಟ್ಟೆ :-)
ಉ: "ಬೀರಿನ" ದೇವರು ಒಳಗಿಳಿದರೆ ಶುರು !
" 'ಗುಂಡು' ಪಾರ್ಟಿಯಲ್ಲಿ ಕುಡಿದು ಕೊನೆಗೆ ಮನೆಗೆ ಹೊರಟಾಗ ಹೊರ ಜಗತ್ತಿನ ಕಣ್ಣಿಗೆ ಆದಷ್ಟು ಸಮತೋಲನದಲಿರುವಂತೆ ಕಾಣಿಸಲು ಹೆಣಗಾಡುತ, ಮನೆ ಸೇರಿದ ಮೇಲೂ ಬಾಯಿಯ ವಾಸನೆ ಅರಿವಾಗದಂತೆ, ಕುಡಿದದ್ದು ಗೊತ್ತಾಗದಂತೆ ಹೇಗೊ ತೂರಾಟ ನಿಯಂತ್ರಿಸಲು ಒದ್ದಾಡುತ್ತ ಮಲಗುವ ಜಾಗ ಸೇರುವುದು ಮತ್ತೊಂದು ಸಾಧಾರಣ ಚಿತ್ರ. ಅದನ್ನು ನೋಡಿಯೂ ಗೊತ್ತಿದ್ದು ಗೊತ್ತಿಲ್ಲದವರಂತೆ ಕ್ಷಿಪ್ರ ಶಯನಕೆ ಅನುವು ಮಾಡಿಕೊಡುವ ಮನೆಯವರದು ಇನ್ನೊಂದು ಬಗೆಯ ಚಿತ್ರಣ. ಒಟ್ಟಾರೆ ಎಲ್ಲಾ ಒಂದು ತನ್ನದೆ ಆದ ಪರಿಸರದ 'ಎಕೋ ಸಿಸ್ಟಂ'ನಲ್ಲಿ ನಡೆದಂತೆ ಭಾಸವಾಗುತ್ತವೆ."
>>>>ಈ ತರಹದ ಸನ್ನಿವೇಶಗಳನ್ನ ಇಂದೂ ಬಹುಷ ಮುಂದೂ ಕಾಣಬೆಕಾಗಿರುವುದು ....:((((
ಅಟೋಮ್ಯಾಟಿಕ್ ಆಗಿ ಗುಂಡು ಸಂಬಂದಿ ಹಾಡುಗಳು ದ್ರುಶ್ಹ್ಯಗಳೂ ನೆನಪಿಗೆ ಬಂದವು....!!
ಹಾಗೆಯೇ ಕುಡಿತ ಅದರ ದುಸ್ಪರಿಣಾಮ ವಿರುದ್ಧ ಹೊರಾಟದ ಕುರಿತ ಅಣ್ಣಾವ್ರ ಚ್ಹಿತ್ರ , 'ಜೀವನ ಚ್ಹೈತ್ರ' ನೆನಪಿಗೆ ಬಂತು..
ಶ್ಹುಭವಾಗಲಿ...
ನನ್ನಿ
\|/
In reply to ಉ: "ಬೀರಿನ" ದೇವರು ಒಳಗಿಳಿದರೆ ಶುರು ! by venkatb83
ಉ: "ಬೀರಿನ" ದೇವರು ಒಳಗಿಳಿದರೆ ಶುರು !
ಸಪ್ತಗಿರಿಗಳೆ, ನಿಮ್ಮ ಮಾತು ನಿಜ. ಕೆಲವು ಸಾಮಾಜಿಕ ಸ್ತರಗಳಲ್ಲಿ ನಾವೀನ್ಯತೆಯ ಹೆಸರಿನಲ್ಲಿ ಇದು ಬದಲಾಗಿದ್ದರೂ, (ಬಹುಶಃ ಹೆಚ್ಚು ನಗರಗಳಲ್ಲಿ), ಈ ನಡುವಳಿಕೆ ಹಿಂದೆ, ಇಂದೂ, ಮುಂದೂ ಪ್ರಸ್ತುತ. ನನಗೆ ನಿಮ್ಮ ನೆನಪುಗಳ ಜತೆಗೆ ನಾಜೂಕಯ್ಯನ 'ಸುಖವೀವ ಸುರಾಪಾನವಿದು ಸ್ವರ್ಗ ಸಮಾನ' ಕೂಡ ನೆನಪಿಗೆ ಬರುತ್ತಿದೆ :-)
ಉ: "ಬೀರಿನ" ದೇವರು ಒಳಗಿಳಿದರೆ ಶುರು !
ನಾಗೇಶ ಮೈಸೂರು ರವರಿಗೆ ವಂದನೆಗಳು
' ಬೀರ ದೇವರ ಪುರಾಣ' ಎನ್ನುವ ಶಿರ್ಷಿಕೆ ನೋಡುತ್ತಿದ್ದಂತೆ ನನಗೆ ಹೊಳೆದದ್ದು ಮತ್ತು ಕಲ್ಪನೆ ಮೂಡಿದ್ದು ಮೈಲಾರ ದೇವರು ತರಹ ನಮ್ಮ ಕಡೆಗೆ ಬೀರ ದೇವರು ಎಂದು ಕರೆಯುತ್ತಾರೆ, ಆ ಕುರಿತು ಈ ಬರಹ ಇರಬೇಕೋ ಏನೋ ಎನ್ನುವ ಊಹೆ ನನ್ನದಾಗಿತ್ತು. ಆದರೆ ನನ್ನ ಊಹೆ ತಪ್ಪಾಗಿದೆ, ಎಲ್ಲ ಗ್ರಾಮಗಳಲ್ಲಿ ಸರ್ವ ವ್ಯಾಪಿಯಾಗಿರುವ ಜಾತ್ಯಾತೀತ ಬೇರ ದೇವರುಗಳ ಮಹಾತ್ಮೆಯನ್ನು ಚೆನ್ನಾಗಿ ನಿರೂಪಿಸಿ ದ್ದೀರಿ, ಓದಿ ಖುಷಿಯಾಯಿತು ಜೊತೆಗೆ ಈ ವ್ಯಸನ ಸರ್ವವ್ಯಾಪಿಯಾಗಿ ಹಬ್ಬಿರುವ ರೀತಿ ಕಣ್ಮುಂದೆ ಬಂದು ವಿಷಾದವೂ ಆಯಿತು. ಈ ಬಗೆಗೆ ಎಲ್ಲರನು ಎಚ್ಚರಿಸುವ ಕವನ ಮತ್ತು ನಿರೂಪಣೆಯ ರೀತಿಗೆ ಧನ್ಯವಾದಗಳು.
In reply to ಉ: "ಬೀರಿನ" ದೇವರು ಒಳಗಿಳಿದರೆ ಶುರು ! by H A Patil
ಉ: "ಬೀರಿನ" ದೇವರು ಒಳಗಿಳಿದರೆ ಶುರು !
ಪಾಟೀಲರೆ,
ಮೊದಲಿಗೆ ಶೀರ್ಷಿಕೆ 'ಬೀರ ದೇವರು ಒಳಗಿಳಿದರೆ ಶುರು' ಅಂತಲೆ ಹಾಕಿದ್ದೆ. ಆದರೆ 'ಬೀರ ದೇವರಾ' ಮತ್ತು 'ಬೀರಿನ ದೇವರ' ನಡುವಿನ ಗೊಂದಲ ಆಗದಿರಲೆಂದೆ 'ಬೀರಿನ ದೇವರು..' ಎಂದು ಬಳಸಿದೆ. ಬೀರ ದೇವರು ನಮ್ಮ ಕಡೆಯೂ ಪ್ರಚಲಿತವೆ (ರಾಜಕುಮಾರರ ಬಂಗಾರದ ಪಂಜರ ಚಿತ್ರದಲ್ಲಿ ಆ ಕುರಿತ ಚೆನ್ನಾದ ಹಾಡು ಇದೆ).
ಕುಡಿತದ ಶಕ್ತಿ, ವ್ಯಾಪ್ತಿಯ ಕಾರಣದಿಂದಲೆ ಬಹುಶಃ ಅದಕ್ಕೆ ದೇವರ ನಾಮಧೇಯ ಅಡ್ಡಹೆಸರಾಗಿ ಬಂತೆಂದು ಕಾಣುತ್ತದೆ. 'ಹತೋಟಿಯಲಿಟ್ಟವ ಬೀರ, ತಪ್ಪಿದವ ಮನೆ ಮಠ ಮಾರ' :-)
ಉ: "ಬೀರಿನ" ದೇವರು ಒಳಗಿಳಿದರೆ ಶುರು !
ನಾಗೇಶರೆ,
ಚೆನ್ನಾಗಿದೆ ಬೀರಬಲ್ಲರ ಗಮ್ಮತ್ತು. ಇಂಗ್ಲೀಷಿನ Social Drinkingಗೆ ಸೂಕ್ತ ಪದವ್ಯಾವುದೆಂದು ಬಹಳ ಹಿಂದೆ ಆಲೋಚಿಸಿದ್ದೆ, ಆದರೆ ಅದಕ್ಕೆ ಸೂಕ್ತ ಪದ ದೊರಕಿರಲಿಲ್ಲ, ನೀವು ಸಾಮಾಜಿಕ ಕುಡಿತ ಎನ್ನುವ ಪದ ಬಳಸಿದ್ದನ್ನು ಓದುತ್ತಿರುವಾಗ ಇದೇಕೋ ಸೂಕ್ತಪದ ಎನಿಸಲಿಲ್ಲ; ಆಗ ಥಟ್ಟನೆ ಹೊಳೆಯಿತು ಇದು ಶಿಷ್ಠಾಚಾರಕ್ಕಾಗಿ ಮಾಡುವ ಕುಡಿತ. ಹಾಗಾಗಿ ಶಿಷ್ಠಾಚಾರದ ಕುಡಿತವೇ ಸರಿಯಾದ ಪದವೆನಿಸಿತು, ಏಕೆಂದರೆ ಇದು ಇಂದಿನ ಶಿಷ್ಠಾಚಾರವಾಗಿದೆ :(.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: "ಬೀರಿನ" ದೇವರು ಒಳಗಿಳಿದರೆ ಶುರು ! by makara
ಉ: "ಬೀರಿನ" ದೇವರು ಒಳಗಿಳಿದರೆ ಶುರು !
ಶ್ರೀಧರರೆ,
ಶಿಷ್ಟಾಚಾರದ ಕುಡಿತ ಸರಿಯಾಗಿದೆ. ನನಗೆ ಅದು ತಕ್ಷಣಕ್ಕೆ ಹೊಳೆಯಲಿಲ್ಲ. ಹಾಗೆಯೆ ದಾಕ್ಷಿಣ್ಯಕ್ಕಾಗಿ ಕುಡಿಯುವುದರಿಂದ 'ದಾಕ್ಷಿಣ್ಯದ ಕುಡಿತ', ಸೋಗಿಗೆ ಕುಡಿಯುವುದರಿಂದ 'ಸೋಗಲಾಡಿ ಕುಡಿತ' ಕೆಲವರು ಕಷ್ಟಪಟ್ಟು ಕುಡಿಯುವುದರಿಂದ 'ಕಷ್ಟಾಚಾರದ ಕುಡಿತ' ಇತ್ಯಾದಿಗಳನ್ನು ಗುಂಪಿಗೆ ಸೇರಿಸಬಹುದೆಂದು ಕಾಣುತ್ತದೆ :-)
ಉ: "ಬೀರಿನ" ದೇವರು ಒಳಗಿಳಿದರೆ ಶುರು !
ನಮಸ್ಕಾರ ನಾಗೇಶ ಜಿ, ಕವನದ ವ್ಯಾಖ್ಯಾನದಲ್ಲಿ '' ಅದನ್ನು ನೋಡಿಯೂ ಗೊತ್ತಿದ್ದು ಗೊತ್ತಿಲ್ಲದವರಂತೆ ಕ್ಷಿಪ್ರ ಶಯನಕೆ ಅನುವು ಮಾಡಿಕೊಡುವ ಮನೆಯವರದು ಇನ್ನೊಂದು ಬಗೆಯ ಚಿತ್ರಣ' ಸುಂದರ ಸೂಕ್ಷ್ಮ ಮನಸ್ಸಿನ ಪ್ರಜ್ಞೆ.ಕವನದ ವ್ಯಾಖ್ನಾನ ಬೀರನ್ನು ಬಾರನ್ನು ಮೀರಿದೆ. ಕವನ ಚನ್ನಾಗಿ ಎಲ್ಲಿಯೂ ತೂರಾಡದೆ ಚನ್ನಾಗಿದೆ, ನೀಟಾಗಿದೆ. ಎಲ್ಲಿಯೂ, ಓಲಾಡದೆ, ಏನಂತೀರಿ!
In reply to ಉ: "ಬೀರಿನ" ದೇವರು ಒಳಗಿಳಿದರೆ ಶುರು ! by lpitnal
ಉ: "ಬೀರಿನ" ದೇವರು ಒಳಗಿಳಿದರೆ ಶುರು !
ಇಟ್ನಾಳ್ ಜಿ, ಕವನ ಚೂರೂ ತೂರಾಡದೆ, ಕುಡಿದ 'ಬೀರು' ಅಲ್ಲಾಡದ ಹಾಗೆ ನಡೆದು ಬಂದಿರುವುದಕ್ಕೆ ನೇರ ಸಾಕ್ಷಿ, ಅದು ಸುರಕ್ಷಿತವಾಗಿ ಸಂಪದದ ಮಡಿಲನ್ನು ಸೇರಿ ಸಂಪದಿಗರನ್ನು ಮುಟ್ಟಿದ್ದು. ಹೀಗಾಗಿ 'ಒಳಗೆ ಸೇರಿದರೂ ಗುಂಡು, ಕವನ ಆಗುವುದು ಗಂಡು..' ಎಂದು ಏಮಾರಿಸಿ ಹಾಡಬಹುದು ನಂಜುಂಡಿ ಕಲ್ಯಾಣದ ಮಾಲಾಶ್ರೀ ಗುಂಡಿನ ಹಾಡಿನ ಪರವಾಗಿ :-)
ಉ: "ಬೀರಿನ" ದೇವರು ಒಳಗಿಳಿದರೆ ಶುರು !
ಚೆನ್ನಾಗಿದೆ......
In reply to ಉ: "ಬೀರಿನ" ದೇವರು ಒಳಗಿಳಿದರೆ ಶುರು ! by hemalata jadhav
ಉ: "ಬೀರಿನ" ದೇವರು ಒಳಗಿಳಿದರೆ ಶುರು !
ನಮಸ್ಕಾರ ಹೇಮಲತಾರವರೆ, ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು :-)