ಕಾಲಚಕ್ರ - ಲಕ್ಷ್ಮೀಕಾಂತ ಇಟ್ನಾಳ
ಚಿತ್ರ
ಕಾಲಚಕ್ರ
ಕಣ್ಣುನೆಟ್ಟು ಎಳೆಯ ರೆಕ್ಕೆ ಬಡಿದು ಹಾರಲಾರದ
ಗೂಡತುದಿಗೆ ಚುಂಚು ನೆವರಿ ಕುಳಿತ ಮರಿಯ ಜೋಡು
ಕಣ್ಣುಬಿಡುತ ಕಾದ ಜೊತೆಗೆ, ಜೊತೆಯು ಹಸಿವುಗೂಡಿ
ಕಡ್ಡಿ ಕಡ್ಡಿಗೂ ಕಾಯಲೇಳಿ ಹೆಣೆದ ಹಕ್ಕಿ ಗೂಡು
ಕೊಕ್ಕೆ ನೇಗಿಲ ಉತ್ತಿ, ಮುಗಿಲ ಹೊಲವ ಬಿತ್ತಿ, ತುತ್ತು ಭರತಿ,
ಬೇಡವದಕೆ ಮೋಡ, ಬೆರಗು, ಆಳ ನೀಲಾಂಬರ ಮೆರಗು
ಕಾಣದದಕೆ ಯಾವ ನೋಟ, ಪಕಳೆ ಒಡೆದ ರಮೆಯ ತೋಟ
ತಡೆಯದಾವ ಜಗದ ಮಾಟ, ಮರಿಯೆಡೆಯ ಗುರಿಯ ಓಟ
ಕಡಲ ಪ್ರೀತಿ ಒರತೆ ಬೆರೆತ, ಒಡಲ ಕುಡಿಯ ಮೊರೆವ ಕರೆತ
ದೂರಾಗಸವೆ ನೆಗೆದು ಬಂತೆ, ಹಕ್ಕಿ ಗೂಡಿಗೆ ಉಲ್ಕೆಯಂತೆ
ತುತ್ತಿಗೊಮ್ಮೆ ಚುಂಚು ಮುತ್ತು, ಮರಿಗೆ ಉಣಿಸಿ ಜೇನು ತುತ್ತು
ದಣಿಯಲಾರದ ತೊರೆಯದು, ತಣಿಯಲಾರದ ದನಿಯಿದು
ಬೀಜ ಬೇರು ಬಳ್ಳಿ ಕಾಯಿ ಹೂವು ಹಣ್ಣು ಜೀವನ
ಭಾವ ಮಮತೆ ಚೆಲುವು ಪ್ರೀತಿ ಒಲವಿನಾಕರ್ಷಣ
ಸೂತ್ರಬಂಧಿ ಕಾಲಚರಕ, ಜನನ ಮರಣ ಪೂರಕ
ಹಾಡುತಿಹುದು ನಿಸರ್ಗವಿದನು ಮೌನವಾಗಿ ದೈನಿಕ
(ಚಿತ್ರ ಕೃಪೆ: ಇಂಟರ್ ನೆಟ್)
Rating
Comments
ಉ: ಕಾಲಚಕ್ರ - ಲಕ್ಷ್ಮೀಕಾಂತ ಇಟ್ನಾಳ
ಇಟ್ನಾಳರೆ ನಮಸ್ಕಾರ,
ಸೂತ್ರಬಂಧಿ ಕಾಲಚರಕ, ಜನನ ಮರಣ ಪೂರಕ
ಹಾಡುತಿಹುದು ನಿಸರ್ಗವಿದನು ಮೌನವಾಗಿ ದೈನಿಕ
ಕಾಲ ಚಕ್ರದ ಬದಲು ಕಾಲ 'ಚರಕ' ಬಳಸಿದ್ದಿರ. ಚರಕವೂ ಚಕ್ರವೆ ಆದರೂ, ನಿಯಂತ್ರಣದಲಿರುವ, ಉತ್ಪಾದಕತೆಯತ್ತ ಸುತ್ತುವ ಚಕ್ರ. ಹೀಗಾಗಿ ನಿರಂತರತೆ ಮತ್ತು ಸಫಲತೆ ಎರಡು ಒಟ್ಟಾಗಿ ಪ್ರತಿಬಿಂಬಿಸಿದಂತಾಗಿದೆ. ಬಿಡಿಸಲಾರದ ಬಂಧಗಳ ಆಕರ್ಷಣೆಯಲಿ ಸುತ್ತುತಲೆ ಇರುವ ಕಾಲಚಕ್ರ ಚೆನ್ನಾಗಿ ಉರುಳಿದೆ, ನಿಮ್ಮೀ ಕವನದಲ್ಲಿ :-)
In reply to ಉ: ಕಾಲಚಕ್ರ - ಲಕ್ಷ್ಮೀಕಾಂತ ಇಟ್ನಾಳ by nageshamysore
ಉ: ಕಾಲಚಕ್ರ - ಲಕ್ಷ್ಮೀಕಾಂತ ಇಟ್ನಾಳ
ನಾಗೇಶಜಿ, ತಮ್ಮ ಮನಪೂರ್ವಕ ಪ್ರೀತಿಯುತ ಪ್ರತಿಕ್ರಿಯೆಗೆ ವಂದನೆಗಳು
ಉ: ಕಾಲಚಕ್ರ - ಲಕ್ಷ್ಮೀಕಾಂತ ಇಟ್ನಾಳ
ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
'ಕಾಲ ಚಕ್ರ' ಕವನ ಹೆಣೆದ ರೀತಿ ವೈಶಿಷ್ಟ್ಯಪೂರ್ಣವಾಗಿದೆ, ಕವನ ನಿರೂಪಿಸಿದ ರೀತಿ, ಅದು ಹೊರಡಿಸುವ ಪ್ರಕೃತಿಯ ಜೀವಿಗಳ ಲ್ಲೊಂದಾದ ಹಕ್ಕಿ ತನ್ನ ಬದುಕುನ್ನು ಕಟ್ಟಿಕೊಳ್ಳುವ ಬಗೆ, ವಂಶಾಭಿವೃದ್ಧಿಯ ರೀತಿ, ಮರಿಗಳನ್ನು ಹಕ್ಕಿಗಳು ಪಾಲಿಸಿ ಪೋಷಿಸಿ ಬೆಳೆಸುವ ರೀತಿ ಅನನ್ಯವಾಗಿ ಮೂಡಿ ಬಂದಿದೆ, ಕವನ ನಿರೂಪಣೆಯ ರೀತಿಯಲ್ಲಿ ಒಂದು ರೀತಿಯ ಲಾಲಿತ್ಯವಿದೆ ಜೊತೆಗೆ ಸಮಗ್ರ ಬದುಕಿನ ವಾಂಛೆಯ ಆದಮ್ಯ ಚಿತ್ರಣವಿದೆ, ಸುಂದರ ಕವನ ನೀಡಿದ್ದೀರಿ ಧನ್ಯವಾದಗಳು.
In reply to ಉ: ಕಾಲಚಕ್ರ - ಲಕ್ಷ್ಮೀಕಾಂತ ಇಟ್ನಾಳ by H A Patil
ಉ: ಕಾಲಚಕ್ರ - ಲಕ್ಷ್ಮೀಕಾಂತ ಇಟ್ನಾಳ
ಹಿರಿಯರಾದ ಪಾಟೀಲರವರಿಗೆ, ನಮಸ್ಕಾರಗಳು. ಕವನದ ವಿಮರ್ಶೆಗೆ ಧನ್ಯ. ಪ್ರಕೃತಿಯ ಚಕ್ರ ಇನ್ನೂ ಹೆಚ್ಚು ಧ್ವನಿಸಬೇಕಾಗಿತ್ತೇನೊ. ಹೆಚ್ಚು ಉದ್ದವಾದೀತೆಂದು ಕಡಿಮೆ ಮಾಡಿದೆ. ಹೀಗೆ ಮಾಡುವಲ್ಲಿ ಮೊದಲೆರಡು ಪ್ಯಾರಾಗಳ ಪ್ರಾಸಬದ್ಧತೆ ತುಸು ಏರುಪೇರು, ಅದೇನು ಅನಿವಾರ್ಯವೇನಲ್ಲವಾದರೂ ಕವನದ ಓಟಕ್ಕೆ ಕಡಿವಾಣವಾದಂತೆ ನನಗನಿಸಿತು. ಕವನದ ಆಶಯವನ್ನು ಆದಾಗ್ಯೂ ಸರಿಯಾಗಿ ಗ್ರಹಿಸಿದ್ದೀರಿ. ಅದಕ್ಕಾಗಿ ವಿಶೇಷ ವಂದನೆಗಳು
In reply to ಉ: ಕಾಲಚಕ್ರ - ಲಕ್ಷ್ಮೀಕಾಂತ ಇಟ್ನಾಳ by lpitnal
ಉ: ಕಾಲಚಕ್ರ - ಲಕ್ಷ್ಮೀಕಾಂತ ಇಟ್ನಾಳ
ಲಕ್ಷ್ಮೀಕಾಂತ ಇಟ್ನಾಳರಿಗೆ ವಂಧನೆಗಳು
ತಮ್ಮ ಮರು ಪ್ರತಿಕ್ರಿಯೆ ಓದಿದೆ, <<<<< ಪ್ರಕೃತಿಯ ಚಕ್ರ ..........ತುಸು ಏರುಪೇರು >>>>> ಎಂದು ಸಂಶಯ ಪಟ್ಟುಕೊಂಡಿದ್ದೀರಿ, ಎಲ್ಲರೂ ಎಲ್ಲ ಕಾಲಕ್ಕೂ ಮಾತ್ರಾ, ಗಣ, ಛಂದಸ್ಸುಗಳ ಅಳತೆಗೋಲನ್ನು ಇಟ್ಟುಕೊಂಡು ಕವನ ರಚಿಸಲಾಗುವುದಿಲ್ಲ, ನಿಮ್ಮ ಅನಿಸಿಕೆ ಕವನ ರಚನೆ ಕುರಿತ ನಿಮ್ಮ ಕಾಳಜಿಯನ್ನು ವ್ಯಕ್ತ ಪಡಿಸುತ್ತದೆ, ಆ ಕೊರಗು ಬರಹಗಾರನಿಗೆ ಇರಬೇಕು ಅಂದರೆ ಮಾತ್ರ ಆತನಿಂದ ಗೂನ ಮಟ್ಟದ ರಚನೆ ಸಾಧ್ಯ, ನಿಮ್ಮ ಕೊರಗು ಕಾವ್ಯ ರಚನೆಯೆಡೆಗಿನ ನಿಮ್ಮ ಬದ್ದಥೆಯನ್ನು ತೋರಿಸುತ್ತದೆ, ನಿಮ್ಮ ಅಭಿವ್ಯಕ್ತಿಗೆ ಧನ್ಯವಾದಗಳು.