ವೈಕುಂಠ ಏಕಾದಶಿ - ಭಾಗ ೨

ವೈಕುಂಠ ಏಕಾದಶಿ - ಭಾಗ ೨

                                                                       ವೈಕುಂಠ ಏಕಾದಶಿ - ಭಾಗ ೨    
            ತಿರುಮಲ ತಿರುಪತಿ ದೇವಸ್ಥಾನಗಳು, ತಿರುಪತಿ; ಇವರು ವೈಕುಂಠ ಏಕಾದಶಿ ಆಚರಣೆಯ ಹಿನ್ನಲೆ ಮತ್ತು ಅದರ ಮಹತ್ವದ ಕುರಿತು ಒಂದು ಕಿರುಹೊತ್ತುಗೆಯನ್ನು ೨೦೦೬ರಲ್ಲಿ ಪ್ರಕಟಿಸಿರುತ್ತಾರೆ. ಅದರಲ್ಲಿ ಡಿಸೆಂಬರ್ ತಿಂಗಳಿನ ೧೬ನೇ ತಾರೀಕಿನಿಂದ ಪ್ರಾರಂಭವಾಗುವ ಧನುರ್ಮಾಸದ ವ್ರತ ಮತ್ತು ವೈಕುಂಠ ಏಕಾದಶಿಯ ಕುರಿತಾದ ವಿವರಗಳಿವೆ. ಅದರ ಕನ್ನಡ ಅವತರಣಿಕೆ ಲಭ್ಯವಿದಯೋ ಇಲ್ಲವೋ ತಿಳಿಯದು, ಹಾಗಾಗಿ ಕನ್ನಡ ಬಲ್ಲ ಆಸಕ್ತರು ಇದರಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಆ ಕಿರು ಪುಸ್ತಕದ ಅನುವಾದವನ್ನು ನಾನು ಮಾಡಿದ್ದೇನೆ. ಇದರಿಂದ ಸಂಭಂದಪಟ್ಟವರಿಗೆ ಉಪಯೋಗವಾದರೆ ನಾನು ಕೃತಾರ್ಥನಾದಂತೆ. ಇಂದು ಮಾರ್ಗಶಿರ ಶುಕ್ಲ ಏಕಾದಶಿ ದಿನದಂದು ಇದರ ಮೊದಲ ಕಂತನ್ನು ಸಂಪದದಲ್ಲಿ ಸೇರಿಸಿದ್ದೆ; ಈಗ ಅದರ ಮುಂದುವರೆದ ಭಾಗವನ್ನು ಪ್ರಕಟಿಸಿದ್ದೇನೆ. ಸಕಲರಿಗೂ ಆ ಭಗವಂತನು ಒಳಿತನ್ನುಂಟು ಮಾಡಲಿ ಎಂದು ಹಾರೈಸುತ್ತೇನೆ.  
                                                                                  ******

೨೪ ಏಕಾದಶಿಗಳ ಹೆಸರುಗಳು ಮತ್ತು ಅವುಗಳ ಫಲಗಳನ್ನು ಸಂಗ್ರಹವಾಗಿ ತಿಳಿದುಕೊಳ್ಳೋಣ.

೧) ಚೈತ್ರ ಶುಕ್ಲ ಏಕಾದಶಿ - ಕಾಮದಾ - ಕೋರಿಕೆಗಳನ್ನು ಪೂರೈಸುತ್ತದೆ.

೨) ಚೈತ್ರ ಬಹುಳ ಏಕಾದಶಿ - ವರೂಧಿನಿ - ಸಹಸ್ರ ಗೋದಾನ ಫಲವು ಲಭಿಸುತ್ತದೆ.

೩) ವೈಶಾಖ ಶುದ್ಧ ಏಕಾದಶಿ - ಮೋಹಿನಿ - ದರಿದ್ರನು ಧನವಂತನಾಗುತ್ತಾನೆ.

೪) ವೈಶಾಖ ಬಹುಳ ಏಕಾದಶಿ - ಅಪರಾ - ರಾಜ್ಯಪ್ರಾಪ್ತಿ

೫) ಜ್ಯೇಷ್ಠ ಶುಕ್ಲ ಏಕಾದಶಿ - ನಿರ್ಜಲ - ಆಹಾರ ಸಮೃದ್ಧಿ

೬) ಜ್ಯೇಷ್ಠ ಬಹುಳ ಏಕಾದಶಿ  - ಯೋಗಿನಿ - ಪಾಪಗಳನ್ನು ಹರಿಸುತ್ತದೆ (ಪಾಪಗಳಿಂದ ಮುಕ್ತಗೊಳಿಸುತ್ತದೆ)

೭) ಆಷಾಢ ಶುದ್ಧ ಏಕಾದಶಿ - ದೇವಶಯನಿ - ಸಂಪತ್ ಪ್ರಾಪ್ತಿ - ವಿಷ್ಣುವು ಯೋಗನಿದ್ರೆಗೆ ಜಾರುವ ದಿನ

೮) ಆಷಾಢ ಬಹುಳ ಏಕಾದಶಿ - ಕಾಮಿಕಾ - ಬೇಡಿದ ವರಗಳು ಪ್ರಾಪ್ತಿಯಾಗುತ್ತವೆ.

೯) ಶ್ರಾವಣ ಶುಕ್ಲ ಏಕಾದಶಿ - ಪುತ್ರದಾ - ಸತ್ ಸಂತಾನ ಪ್ರಾಪ್ತಿ

೧೦) ಶ್ರಾವಣ ಬಹುಳ ಏಕಾದಶಿ - ಅಜಾ - ರಾಜ್ಯ, ಪತ್ನೀಪುತ್ರ ಪ್ರಾಪ್ತಿ ಮತ್ತು ಆಪತ್ ನಿವಾರಣೆ

೧೧) ಭಾದ್ರಪದ ಶುದ್ಧ ಏಕಾದಶಿ - ಪರಿವರ್ತನ (ಯೋಗ ನಿದ್ರೆಯಲ್ಲಿ ವಿಷ್ಣುವು ಪಕ್ಕಕ್ಕೆ ಹೊರಳುತ್ತಾನಂತೆ ಹಾಗಾಗಿ ಇದು ಪರಿವರ್ತನ) - ಯೋಗ ಸಿದ್ಧಿ

೧೨) ಭಾದ್ರಪದ ಬಹುಳ ಏಕಾದಶಿ - ಇಂದಿರಾ - ಸಂಪದಗಳು ಮತ್ತು ರಾಜ್ಯ ಪ್ರಾಪ್ತಿಯುಂಟಾಗುತ್ತದೆ.

೧೩) ಆಶ್ವಯುಜ ಶುಕ್ಲ ಏಕಾದಶಿ - ಪಾಪಾಂಕುಶ - ಪುಣ್ಯಪ್ರದವಾದುದು

೧೪) ಆಶ್ವಯುಜ ಬಹುಳ ಏಕಾದಶಿ - ರಮಾ - ಸ್ವರ್ಗಪ್ರಾಪ್ತಿ

೧೫) ಕಾರ್ತೀಕ ಶುಕ್ಲ ಏಕಾದಶಿ - ಪ್ರಬೋಧಿನಿ (ಯೋಗ ನಿದ್ರೆಯಿಂದ ವಿಷ್ಣುವು ಎಚ್ಚರಗೊಳ್ಳುವ ದಿನ) - ಜ್ಞಾನಸಿದ್ಧಿ

೧೬) ಕಾರ್ತೀಕ ಬಹುಳ ಏಕಾದಶಿ - ಉತ್ಪತ್ತಿ - ದುಷ್ಟ ಸಂಹಾರ (ಮುರಾಸುರನನ್ನು ಸಂಹರಿಸಿದ ಕನ್ಯೆಯು ವಿಷ್ಣುವಿನ ಶರೀರದಿಂದ ಜನಿಸಿದ ದಿನ)

೧೭) ಮಾರ್ಗಶಿರ ಶುಕ್ಲ ಏಕಾದಶಿ - ಮೋಕ್ಷದಾ - ಮೋಕ್ಷಪ್ರಾಪ್ತಿ (ಮಾರ್ಗಶಿರ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ*)

೧೮) ಮಾರ್ಗಶಿರ ಬಹುಳ ಏಕಾದಶಿ - ವಿಮಲಾ (ಸಫಲಾ) - ಅಜ್ಞಾನ ನಿವೃತ್ತಿ

೧೯) ಪುಷ್ಯ ಶುಕ್ಲ ಏಕಾದಶಿ - ಪುತ್ರದಾ - ಪುತ್ರಪ್ರಾಪ್ತಿ (ಪುಷ್ಯ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ*)

*ವೈಕುಂಠ ಏಕಾದಶಿ ಮಾರ್ಗಶಿರ ಅಥವಾ ಪುಷ್ಯ ಮಾಸದಲ್ಲಿ ಬರುತ್ತದೆಂದು ಈ ಮುಂಚೆಯೇ ಹೇಳಿದೆ.

೨೦) ಪುಷ್ಯ ಕೃಷ್ಣ ಏಕಾದಶಿ - ಕಲ್ಯಾಣೀ (ಷಟ್‌ತಿಲಾ) - ಶಾರೀರಿಕ ಬಾಧೆಗಳಿಂದ ಮುಕ್ತಿ 

೨೧) ಮಾಘ ಶುಕ್ಲ ಏಕಾದಶಿ - ಕಾಮದಾ (ಜಯಾ) - ಶಾಪವಿಮುಕ್ತಿ

೨೨) ಮಾಘ ಕೃಷ್ಣ ಏಕಾದಶಿ - ವಿಜಯಾ - ಸಕಲ ಕಾರ್ಯ ವಿಜಯ (ಇದು ಭೀಷ್ಮೈಕಾದಶಿ ಎಂದು ಪ್ರಸಿದ್ಧಿಯಾಗಿದೆ)

೨೩) ಫಾಲ್ಗುಣ ಶುಕ್ಲ ಏಕಾದಶಿ - ಆಮಲಕೀ - ಆರೋಗ್ಯ ಪ್ರಾಪ್ತಿ

೨೪) ಫಾಲ್ಗುಣ ಕೃಷ್ಣ ಏಕಾದಶಿ - ಸೌಮ್ಯಾ - ಪಾಪ ವಿಮುಕ್ತಿ

(ಈ ಏಕಾದಶಿಗಳಿಗೆ ಇರುವ ಹೆಸರುಗಳು ಪುರಾಣದಿಂದ ಪುರಾಣಕ್ಕೆ ಸ್ವಲ್ಪ ಭಿನ್ನವಾಗಿರುತ್ತವೆ)

                                                                       ಏಕಾದಶೀ ದೇವಿಯ ಜನನ

          ಪೂರ್ವದಲ್ಲಿ ಕೃತಯುಗದಲ್ಲಿ ಚಂದ್ರಾವತೀ ನಗರವನ್ನು ಮುರಾ ಎನ್ನುವ ಹೆಸರಿನ ರಾಕ್ಷಸನು ಪಾಲಿಸುತ್ತಿದ್ದನು. ಅವನು ದೇವತೆಗಳನ್ನು ಸೋಲಿಸಿ ಅವರನ್ನು ಪೀಡಿಸುತ್ತಿದ್ದನು. ವಿಷ್ಣುವು ಅವನ ಮೇಲೆ ಸಹಸ್ರ ವರ್ಷಗಳ ಕಾಲ ಹೋರಾಡಿ, ಬಳಲಿಕೆಯಿಂದ ವಿಶ್ರಾಂತಿ ಹೊಂದಲು ಒಂದು ಗುಹೆಯೊಳಗೆ ನಿದ್ರಿಸುತ್ತಿದ್ದನು. ಆ ಸ್ಥಿತಿಯಲ್ಲಿದ್ದ ಶ್ರೀ ಹರಿಯನ್ನು ಸಂಹರಿಸಲು ಮುರನು ಸಿದ್ಧನಾದನು, ಆ ಸಮಯದಲ್ಲಿ ವಿಷ್ಣುವಿನ ಶರೀರದಿಂದ ದಿವ್ಯ ತೇಜಸ್ಸಿನಿಂದ ಕೂಡಿದ ಒಬ್ಬ ಕನ್ಯೆಯ ಉದ್ಭವವಾಯಿತು. ಆ ಕನ್ಯೆಯು ದಿವ್ಯಾಸ್ತ್ರಗಳಿಂದ ಮುರಾಸುರನ ಮೇಲೆ ಯುದ್ಧ ಮಾಡಿ ಅವನನ್ನು ಸಂಹರಿಸಿದಳು. ನಿದ್ದೆಯಿಂದ ಎಚ್ಚರಗೊಂಡ ವಿಷ್ಣುವು ಆ ಕನ್ಯೆಯನ್ನೂ ಮತ್ತು ಪಕ್ಕದಲ್ಲಿಯೇ ಸತ್ತು ಬಿದ್ದಿದ್ದ ಮುರಾಸುರನನ್ನೂ ನೋಡಿ ಆಶ್ಚರ್ಯ ಹೊಂದಿದನು. ಆಗ ಆ ಕನ್ಯೆಯು ವಿಷ್ಣುವಿಗೆ ನಮಸ್ಕರಿಸಿ ನಡೆದ ವೃತ್ತಾಂತವೆಲ್ಲವನ್ನೂ ಅರುಹಿದಳು. ಇದರಿಂದ ಸಂತುಷ್ಟನಾದ ವಿಷ್ಣುವು ಆಕೆಯನ್ನು ವರವನ್ನು ಕೋರುವಂತೆ ಹೇಳಿದನು. ಆಗ ಆ ಕನ್ಯೆಯು ಸಂತೋಷದಿಂದ, "ಹೇ ದೇವಾ! ನಾನು ಏಕಾದಶಿಯಂದು ನಿನ್ನ ದೇಹದಿಂದ ಉದ್ಭವಿಸಿರುವುದರಿಂದ ನನ್ನ ಹೆಸರು ಏಕಾದಶಿ. ನನ್ನ ವ್ರತವನ್ನು ಮಾಡುತ್ತಾ ಯಾರು ಈ ದಿನದಂದು ಉಪವಾಸ ಮಾಡುತ್ತಾರೆಯೋ ಅವರು ಸಂಸಾರ ಬಂಧನಗಳಿಂದ ಮುಕ್ತರಾಗುವಂತೆ ವರವನ್ನು ಪ್ರಸಾದಿಸಿ ಅನುಗ್ರಹಿಸು" ಎಂದು ಬೇಡುತ್ತಾಳೆ. ಆಗ ವಿಷ್ಣುವು ತಥಾಸ್ತು - ಹಾಗೇ ಆಗಲಿ ಎಂದು ವರವನ್ನು ಕೊಡುತ್ತಾನೆ. ಅಂದಿನಿಂದ ಯಾರು ಏಕಾದಶೀ ವ್ರತವನ್ನು ಕೈಗೊಳ್ಳುತ್ತಾರೆಯೋ ಅವರು ಸಕಲ ಪಾಪಗಳಿಂದ ಮುಕ್ತರಾಗಿ ಅವರು ವಿಷ್ಣುಲೋಕವನ್ನು ಹೊಂದುತ್ತಾರೆನ್ನುವುದು ಪ್ರತೀತಿಯಾಗಿದೆ.

          ಏಕಾದಶಿ ತಿಥಿಗೆ ಏಕಾದಶೀ ದೇವಿಯು ಅಧಿದೇವತೆಯಾಗಿದ್ದಾಳೆ. ಈಕೆಯು ಶ್ರೀ ವಿಷ್ಣುವಿನ ದೇಹದಿಂದ ಜನಿಸಿರುವುದರಿಂದ ಆಕೆಯು ಸ್ತ್ರೀ ಮೂರ್ತಿಯಾದ ಮಹಾ ವಿಷ್ಣುವೇ! ’ಜನಕ ಮತ್ತು ಜನ್ಯರಲ್ಲಿ ಭೇದವು ತರವಲ್ಲ!" ಆದ್ದರಿಂದ ಏಕಾದಶಿಯು ಸರ್ವೋತ್ತಮ ತಿಥಿಯಾಗಿದೆ. ಏಕಾದಶೀ ವ್ರತ ಮಹಾತ್ಮ್ಯೆಯನ್ನು ತಿಳಿಸುವ ಅನೇಕಾನೇಕ ಕಥೆಗಳಿವೆ.

          ಕುಚೇಲನಾದ ಸುಧಾಮನು ಏಕಾದಶೀ ವ್ರತವನ್ನು ಮಾಡಿ ಮಹಾನ್ ಐಶ್ವರ್ಯವಂತನಾದನೆಂಬುದು ಒಂದು ಐತಿಹ್ಯ. ಧರ್ಮರಾಯನು ಈ ವ್ರತವನ್ನಾಚರಿಸಿ ಕಷ್ಟಕೋಟಲೆಗಳಿಂದ ಮುಕ್ತನಾದನು. ರುಕ್ಮಾಂಗದನು ಈ ವ್ರತವನ್ನಾಚರಿಸಿ ಪುತ್ರ ಪ್ರಾಪ್ತಿಯನ್ನು ಮತ್ತು ಸಕಲ ದೇವತೆಗಳ ಅನುಗ್ರಹವನ್ನು ಹೊಂದಿದ್ದಲ್ಲದೇ ಮೋಕ್ಷವನ್ನೂ ಪಡೆದನು. ಕ್ಷೀರಸಾಗರ ಮಥನ ಮತ್ತು ಲಕ್ಷ್ಮೀ ದೇವಿಯ ಆವಿರ್ಭಾವವು ಈ ಏಕಾದಶಿ ದಿನದಂದೇ ಆಗಿವೆ. ವೈಖಾನನ ರಾಜನು ಏಕಾದಶಿ ವ್ರತವನ್ನಾಚರಿಸಿ ತನ್ನ ಪಿತೃಗಳಿಗೆ ಸದ್ಗತಿಯುಂಟಾಗುವಂತೆ ಮಾಡಿದನು. ಇನ್ನು ಅಂಬರೀಷನ ವ್ರತ ಕಥೆಯಂತೂ ಲೋಕ ಪ್ರಸಿದ್ಧವಾಗಿದೆ.

                                                                      ಆಧ್ಯಾತ್ಮಿಕ ಸ್ಪೂರ್ತಿ

          ವ್ರತ ಪೂಜಾದಿಗಳೆಲ್ಲಾ ಇಂದ್ರಿಯಗಳನ್ನು ನಿಗ್ರಹಿಸಿ ಜನರು ಭಗವತ್ ಕೈಂಕರ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡುವುದಲ್ಲದೆ ಅವರನ್ನು ಜ್ಞಾನ ಮತ್ತು ವಿವೇಕವುಳ್ಳರನ್ನಾಗಿ ಮಾಡುತ್ತಾ ಅವರಿಗೆ ಮುಕ್ತಿ ಮಾರ್ಗವನ್ನು ತೋರಿಸುವ ವಿಶಿಷ್ಠ ಸಾಧನಗಳಾಗಿವೆ. ಆಧ್ಯಾತ್ಮಿಕ ತತ್ತ್ವವು ಅಂತರ್ಗತವಾಗದೇ ಕರ್ಮಫಲವು ಸಿದ್ಧಿಸದು ಎನ್ನುವುದು ಭಾರತೀಯರ ಚಿಂತನೆ. "ಸರ್ವ ಕರ್ಮಗಳೂ ಜ್ಞಾನದಲ್ಲೇ ಪರಿಸಮಾಪ್ತಿಯಾಗುತ್ತವೆ" ಎಂದು ಶ್ರೀ ಕೃಷ್ಣನೂ ಸಹ ಭಗವದ್ಗೀತೆಯಲ್ಲಿ ಇದನ್ನೇ ಹೇಳಿದ್ದಾನೆ. ಆದ್ದರಿಂದ ಸಹಜವಾಗಿಯೇ ಏಕಾದಶೀ ವ್ರತದಲ್ಲಿಯೂ ಸಹ ಆಧ್ಯಾತ್ಮಿಕ ನಿಧಿಯು ರಹಸ್ಯವಾಗಿ ಹುದುಗಿಸಲ್ಪಟ್ಟಿದೆ. ಯಥಾಶಕ್ತ್ಯಾನುಸಾರ ಏಕಾದಶೀ ವ್ರತದಲ್ಲಿ ಅಂತರ್ಗತವಾಗಿರುವ ತಾತ್ತ್ವಿಕತೆಯನ್ನು ಆಸ್ವಾದಿಸೋಣ.

          ’ವೈಕುಂಠ ಏಕಾದಶಿ’ಯಲ್ಲಿ ವೈಕುಂಠ ಮತ್ತು ಏಕಾದಶಿ ಎನ್ನುವ ಎರಡು ಪದಗಳಿವೆ. ವೈಕುಂಠ ಎನ್ನುವುದು ಅಕಾರಾಂತ ಪುಲ್ಲಿಂಗ ಶಬ್ದ. ಇದು ವಿಷ್ಣುವನ್ನೂ ಮತ್ತು ವಿಷ್ಣುವು ನಿವಾಸವಾಗಿರುವ ಸ್ಥಳವನ್ನೂ ಸೂಚಿಸುತ್ತದೆ. ಚಾಕ್ಷುಷ ಮನ್ವಂತರದಲ್ಲಿ ವಿಕುಂಠ ಅನೇ ಸ್ತ್ರೀಯಿಂದ ಜನ್ಮತಾಳಿದ್ದರಿಂದ ವಿಷ್ಣುವು ವೈಕುಂಠಃ (ವೈಕುಂಠದಲ್ಲಿರುವವನು) ಎನ್ನುವ ಹೆಸರನ್ನು ಪಡೆದಿದ್ದಾನೆ. ಈ ಶಬ್ದಕ್ಕೆ ಜೀವಿಗಳ ಒಡೆಯ, ಜೀವಿಗಳ ಸಾಕ್ಷೀಭೂತ, ಸ್ವೇಚ್ಛಾ ಸ್ವಭಾವವನ್ನು ನಿಯಂತ್ರಿಸುವವನು - ಹೀಗೆ ನಾನಾ ಅರ್ಥಗಳಿವೆ. ವೈಕುಂಠವನ್ನು ಸ್ಥಳ ಎಂದಾಗ ಅದು ಶ್ವೇತ ದ್ವೀಪವಾದ ವಿಷ್ಣುವಿನ ನಿವಾಸ ಸ್ಥಾನವಾಗುತ್ತದೆ. ಪುನರಾವೃತವಾಗದ್ದು, ಶಾಶ್ವತವಾಗಿರುವುದು ವಿಷ್ಣುವಿನ ಪರಂಧಾಮವಾಗಿದೆ. ಜೀವಿಗಳು ವಿಷ್ಣುವನ್ನು ಅರ್ಚಿಸಿ, ಉಪಾಸನೆ ಮಾಡಿ, ವೈಕುಂಠವನ್ನು ಸೇರುವುದೇ ಮುಕ್ತಿಯಾಗಿದೆ. ಇಂದ್ರಿಯಗಳು ಇಂದ್ರಿಯಗಳ ಅಧಿಪತಿಯಾದ ನಾರಾಯಣನ ಸೇವೆಯನ್ನು ಮಾಡುವುದೇ ಭಕ್ತಿಯಲ್ಲವೇ!

          "ಮನಃ ಷಷ್ಠಾನೀಂದ್ರಿಯಾಣಿ ಪ್ರಕೃತಿಸ್ಥಾನಿ ಕರ್ಷತಿ" ಎನ್ನುವ ಗೀತಾವಾಕ್ಯದಂತೆ ಆರೂ ಇಂದ್ರಿಯಗಳನ್ನು ಪ್ರಕೃತಿಯ ಉತ್ಪನ್ನಗಳಾದ ಶಬ್ದ, ಸ್ಪರ್ಶ, ರೂಪ, ರಸ, ಗಂಧ ಎನ್ನುವ ತನ್ಮಾತ್ರಗಳು ಜೀವಿಯನ್ನು ಆಕರ್ಷಿಸುತ್ತದೆ. ಇಲ್ಲಿ ಪಂಚೇಂದ್ರಿಯಗಳೆಂದಾಕ್ಷಣ ಅವು ಐದು ಕರ್ಮೇಂದ್ರಿಗಳು ಮತ್ತು ಐದು ಜ್ಞಾನೇಂದ್ರಿಗಳನ್ನು ಸೂಚಿಸುತ್ತದೆ ಮತ್ತು ಮನಸ್ಸಿನೊಂದಿಗೆ ಸೇರಿ ಒಟ್ಟು ಹನ್ನೊಂದು ಇಂದ್ರಿಯಗಳಾಗುತ್ತವೆ. ಅಂದರೆ ಆತ್ಮವು ಶರೀರವನ್ನು ಬಿಟ್ಟು ಹೋಗುವಾಗ ಕರ್ಮೇಂದ್ರಿಯಗಳನ್ನು, ಪ್ರಾಣಗಳನ್ನು, ಮತ್ತು ಬುದ್ಧಿಯನ್ನೂ ಸಹ ತನ್ನೊಂದಿಗೆ ತೆಗೆದುಕೊಂಡು ಹೋಗುತ್ತದೆ. ಜೀವಾತ್ಮವು ಒಂದು ಶರೀರವನ್ನು ಬಿಟ್ಟು ಮತ್ತೊಂದು ಶರೀರವನ್ನು ಪ್ರವೇಶಿಸುವಾಗ ಮನಸ್ಸಿನೊಂದಿಗೆ ಇಂದ್ರಿಯಗಳನ್ನೂ ಆಕರ್ಷಿಸುತ್ತದೆ. ಮನಸ್ಸು ಅಂತಃಕರಣದ ಭಾಗವಾಗಿದೆ.  

            ಹೀಗೆ ವೈಕುಂಠವೆಂದರೆ ಪರಂಧಾಮವಾಗಿದೆ. ಏಕಾದಶಿ ಅಂದರೆ ಹನ್ನೊಂದು ಇಂದ್ರಿಯಗಳಾಗಿವೆ. ಐದು ಕರ್ಮೇಂದ್ರಿಯಗಳು, ಐದು ಜ್ಞಾನೇಂದ್ರಿಯಗಳು ಮತ್ತು ಒಂದು ಮನಸ್ಸು ಸೇರಿ ಹನ್ನೊಂದು ಇಂದ್ರಿಯಗಳ ಸಮೂಹವಾಗುತ್ತದೆ. ಮನಸ್ಸನ್ನೂ ಸಹ ಇಂದ್ರಿಯವಾಗಿ ಪರಿಗಣಿಸಲಾಗಿದೆ ಎನ್ನುವುದನ್ನು ತಿಳಿಯಿರಿ. ಈ ಹನ್ನೊಂದೂ ಇಂದ್ರಿಯಗಳನ್ನು ವೈಕುಂಠನಿಗೆ ಅರ್ಪಿಸಲ್ಪಟ್ಟು, ಆ ವೈಕುಂಠನನ್ನು ಅರ್ಚನೆ ಮಾಡಿ, ಸೇವೆಯನ್ನು ಮಾಡಿ, ಉಪಾಸನೆ ಮಾಡಿದಾಗಲೇ ಆ ಇಂದ್ರಿಯಗಳು ಪವಿತ್ರವಾಗಿ ಅವುಗಳ ಮೂಲಕ ಸುಖಾನುಭೂತಿ ಹೊಂದುವ ಜೀವಿಯನ್ನು ವೈಕುಂಠಕ್ಕೆ ಸೇರಿಸುತ್ತವೆ. ಆದ್ದರಿಂದ, "ಏಕಾದಶ ಇಂದ್ರಿಯಗಳನ್ನು ವೈಕುಂಠನಿಗೆ ಅರ್ಪಿಸಿ, ವೈಕುಂಠವನ್ನು ಸೇರಿ, ಶಾಶ್ವತ ಮುಕ್ತಿಯನ್ನು ಹೊಂದಿ ಧನ್ಯರಾಗಿರಿ" ಎಂದು ವೈಕುಂಠ ಏಕಾದಶಿಯು ಬೋಧಿಸುತ್ತದೆ. ವಿಕುಂಠ ಎಂದರೆ ತಾಡಿತವಾಗದೇ ಇರುವುದು (ಹೊಡೆತ ತಿನ್ನದೇ ಇರುವುದು). ಇಂದ್ರಿಯಗಳು ವಿಕುಂಠವಾದಾಗಲೇ ವೈಕುಂಠನ ಅರ್ಚನೆಯು ಪ್ರಶಾಂತವಾಗಿ ಆಗುತ್ತದೆ. ದ್ವಾದಶಿಯು ೧೨ನೇ ಸ್ಥಿತಿ. ಇದುವೇ ಇಂದ್ರಿಯಾತೀತವಾದ ದಿವ್ಯಾನಂದದ ಸ್ಥಿತಿ! ಏಕಾದಶಿ ದಿವಸದ ಉಪವಾಸವು ಸತ್ತ್ವ ಗುಣಕ್ಕೆ ಸಂಕೇತವಾಗಿದೆ. ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಸಮೀಪದಲ್ಲಿರಿಸಿದಾಗ ಮೊದಲನೇ ವಸ್ತುವಿನ ಗುಣ ಮತ್ತು ವಾಸನೆಗಳು ಎರಡನೇ ವಸ್ತುವಿನ ಮೇಲೆ ಪ್ರಭಾವ ಬೀರುತ್ತವೆಯಲ್ಲವೇ? ಅದೇ ವಿಧವಾಗಿ ಏಕಾದಶೇಂದ್ರಿಗಳಿಂದ ಕೂಡಿದ ಜೀವಾತ್ಮವು ವೈಕುಂಠನಿಗೆ ಉಪ=ಸಮೀಪದಲ್ಲಿ, ವಾಸಃ = ನಿವಸಿಸುವುದರಿಂದ ಅತ್ಯಂತ ಸಮೀಪದ ವಾಸ್ತವ್ಯದ ಪ್ರಭಾವದಿಂದ ಜೀವಾತ್ಮದ ಮೇಲೆ ಪರಮಾತ್ಮದ ಪ್ರಭಾವವು ಉಂಟಾಗುತ್ತದೆ. ಆಗ ಜೀವಿಯು ಪರಿಶುದ್ಧನಾಗುತ್ತಾನೆ. ದ್ವಾದಶೀ ದಿನದಂದು ಚಕ್ರಸ್ನಾನವನ್ನು ಕೈಗೊಂಡು, ಸ್ವಾಮಿಯ ಪ್ರಸಾದವನ್ನು ಸ್ವೀಕರಿಸುವುದರ ಮೂಲಕ ದ್ವಾದಶಾಕ್ಷರೀಮಂತ್ರಯುಕ್ತವಾದ ವಾಸುದೇವ ತತ್ತ್ವವನ್ನು ಜೀವಾತ್ಮನು ಅನುಭವಿಸುತ್ತಾನೆ. ಈ ಅನುಭವವೇ ಕಲಿಯುಗ ವೈಕುಂಠವಾದ ತಿರುಮಲದಲ್ಲಿರುವ ಶ್ರೀ ಪುಷ್ಕರಿಣಿಯ ಮುಕ್ಕೋಟಿ ಚಕ್ರಸ್ನಾನ ಫಲವಾಗಿದೆ.

            ಇದು ಧನುರ್ಮಾಸವಾಗಿದೆ. "ಪ್ರಣವೋ ಧನುಃ" ಹೇಳುವಂತೆ ಓಂಕಾರವೇ ಧನುಸ್ಸಾಗಿದೆ. ಶ್ರೀ ಸ್ವಾಮಿಯನ್ನು ಪ್ರಣವಮೂರ್ತಿಯಾಗಿ ಉಪಾಸಿಸುವುದೇ ಧನುರ್ಮಾಸ ಪೂಜೆಯಾಗಿದೆ. ಹಾಗಾಗಿ ವೈಕುಂಠ ಏಕಾದಶಿಯು ಸರ್ವವನ್ನೂ ಸಮರ್ಪಿಸುವ ತ್ಯಾಗದ ಪ್ರತಿರೂಪವಾದ ಸತ್ತ್ವ ಗುಣದ ಸಂಕೇತವಾಗಿದೆ. ಸ್ವಾಮಿಯು ’ಪವಿತ್ರಾಣಾಂ ಚ ಪವಿತ್ರಂ ಮಂಗಳಾನಾಂ ಚ ಮಂಗಳಂ’ ಅಲ್ಲವೇ! ಅಂತಹ ಮಂಗಳರೂಪನ ಕೈಯ್ಯಲ್ಲಿರುವ ದಿವ್ಯಾಯುಧವೇ ಸುದರ್ಶನ ಚಕ್ರವಾಗಿದೆ. ಈ ಸುದರ್ಶನ ಚಕ್ರವು ಕಾಲಚಕ್ರಕ್ಕೆ ಮತ್ತು ದರ್ಶನಮಾತ್ರದಿಂದ ಮುಕ್ತಿಯನ್ನುಂಟು ಮಾಡುವ ತತ್ತ್ವಕ್ಕೆ ಪ್ರತೀಕವಾಗಿದೆ. ಸುದರ್ಶನಚಕ್ರ ಸ್ನಾನ ಸ್ಪರ್ಶದಿಂದ ಕೂಡಿದ ಜಲದಲ್ಲಿ (ಪುಷ್ಕರಿಣೀ ತೀರ್ಥದಲ್ಲಿ) ಸ್ನಾನ ಮಾಡುವುದರಿಂದ ಜೀವಾತ್ಮರು ಪರಿಶುದ್ಧರೂ, ’ಸುದರ್ಶನ’ರೂ ಆಗುತ್ತಾರೆ. ಇಂತಹ ಜೀವಿಗಳಿಗೆ ವೈಕುಂಠದ ಬಾಗಿಲುಗಳು ಒಂದೇ ದಿನವಲ್ಲ ಎಂದಿಗೂ ತೆರೆದೇ ಇರುತ್ತವೆ.

            ಇಂತಹ ಮಹಿಮಾನ್ವಿತವಾದ ವೈಕುಂಠ ಏಕಾದಶಿ ಮತ್ತು ದ್ವಾದಶಿಗಳನ್ನು ಶ್ರದ್ಧಾ-ಭಕ್ತಿಗಳಿಂದ ಆಚರಿಸಿದವರಿಗೆ ಪುನರ್ಜನ್ಮವಿರುವುದಿಲ್ಲ.

                                                                                    ತಿರುಮಲೆಯಲ್ಲಿ ವೈಕುಂಠ ಏಕಾದಶಿ, ದ್ವಾದಶಿ

         ಕಲಿಯುಗ ವೈಕುಂಠವಾದ ತಿರುಮಲೆಯಲ್ಲಿನ ಶ್ರೀ ಸ್ವಾಮಿಯ ಆಲಯದಲ್ಲಿ ವೈಕುಂಠ ಏಕಾದಶಿಯು ಮಹಾನ್ ವೈಭವದಿಂದ ಆಚರಿಸಲ್ಪಡುತ್ತದೆ. ಈ ಏಕಾದಶಿಯ ಮುನ್ನಾದಿನ ಅಂದರೆ ದಶಮಿಯ ದಿನ ರಾತ್ರಿ ಸ್ವಾಮಿಯವರ ಏಕಾಂತ ಸೇವಾ ಕಾರ್ಯಕ್ರಮವು ಮುಗಿದ ನಂತರ ಬಂಗಾರದ ಬಾಗಿಲುಗಳನ್ನು ಮುಚ್ಚುತ್ತಾರೆ. ಮರುದಿನ ಬೆಳಗಿನ ಜಾವ ಅಂದರೆ ವೈಕುಂಠ ಏಕಾದಶಿಯ ದಿನದಂದು ಸುಪ್ರಭಾತವು ಪ್ರಾರಂಭವಾಗಿ ಮರುದಿವಸ ದ್ವಾದಶಿ ಏಕಾಂತಸೇವೆಯವರೆಗೂ ಶ್ರೀ ಸ್ವಾಮಿಯ ಗರ್ಭಗುಡಿಗೆ ಆನಿಕೊಂಡಿರುವ ಮುಕ್ಕೋಟಿ ಪ್ರದಕ್ಷಿಣ ದ್ವಾರವನ್ನು ತೆರೆದಿಡುತ್ತಾರೆ. ಈ ಏಕಾದಶಿ ಮತ್ತು ದ್ವಾದಶಿಯಂದು ಎರಡು ದಿನಗಳ ಕಾಲ ಭಕ್ತರು ಶ್ರೀ ಸ್ವಾಮಿಯ ದರ್ಶನದ ನಂತರ ಮುಕ್ಕೋಟಿ ಪ್ರದಕ್ಷಿಣ ಮಾರ್ಗದಲ್ಲಿ ಸಾಗುತ್ತಾರೆ. ಈ ಮುಕ್ಕೋಟಿ ಪ್ರವೇಶ ದ್ವಾರವನ್ನೇ ವೈಕುಂಠ ದ್ವಾರವೆಂದೂ ಆ ದಾರಿಯನ್ನು ವೈಕುಂಠ ಪ್ರದಕ್ಷಿಣವೆಂದೂ ಅನ್ನುತ್ತಾರೆ.

          ವೈಕುಂಠ ಏಕಾದಶಿಯ ಪರ್ವದಿನದಂದು ಮುಕ್ಕೋಟಿ ಪ್ರದಕ್ಷಿಣ ಮಾರ್ಗವು ವರ್ಣರಂಜಿತ ವಿದ್ಯುದ್ದೀಪಗಳಿಂದ ಮತ್ತು ಪುಪ್ಷಾಹಾರಗಳಿಂದ ಅಲಂಕೃತಗೊಂಡು ಮನೋಹರವಾಗಿ ಕಾಣಿಸುತ್ತದೆ. ಶ್ರೀ ಸ್ವಾಮಿಯ ದರ್ಶನದ ನಂತರ ಈ ಪ್ರದಕ್ಷಿಣಾ ಮಾರ್ಗದಲ್ಲಿ ತೆರಳುವ ಭಕ್ತರು ಒಂದು ವಿಶಿಷ್ಟವಾದ ಆಶ್ಚರ್ಯಕರವಾದ ದಿವ್ಯಾನುಭೂತಿಯನ್ನು ಅನುಭವಿಸುತ್ತಾರೆ.

                                                                                  ವೈಕುಂಠ ದ್ವಾದಶಿ

         ವೈಕುಂಠ ಏಕಾದಶಿಯ ಮರುದಿನವೇ ದ್ವಾದಶಿ ಇರುತ್ತದೆ. ಆ ದಿನ ಸೂರ್ಯೋದಯದ ಸಮಯಕ್ಕೆ "ಶ್ರೀ ಸ್ವಾಮಿ ಪುಷ್ಕರಣೀ ತೀರ್ಥಕೋಟಿ" ಜರುಗುತ್ತದೆ. ವೈಕುಂಠ ಏಕಾದಶಿಯ ದಿವಸ ಮೂಜಗಗಳಲ್ಲಿರುವ ಮೂರು ಕೋಟಿ ಐವತ್ತು ಲಕ್ಷ ಪುಣ್ಯತೀರ್ಥಗಳೂ, ಪುಷ್ಕರಿಣಿಗಳೂ, ತಿರುಮಲೆಯಲ್ಲಿರುವ ಶ್ರೀ ಸ್ವಾಮಿಯ ಪುಷ್ಕರಣಿಯಲ್ಲಿ ದಿವ್ಯಸೂಕ್ಷ್ಮ ರೂಪದಲ್ಲಿ ಲೀನವಾಗಿರುತ್ತವೆ. ಅದೇ ದಿನ ಅಲ್ಲಿ ಸಕಲ ದೇವತೆಗಳೂ ಉಪಸ್ಥಿತರಾಗಿರುತ್ತಾರೆ. ಆದ್ದರಿಂದ ಈ ದಿನದಂದು ಶ್ರೀಸ್ವಾಮಿಯ ಆಲಯದಲ್ಲಿ ಶ್ರೀ ಸ್ವಾಮಿಗೆ ಸುಪ್ರಭಾತ, ತೋಮಾಲ ಸೇವೆ, ಅರ್ಚನೆ, ನೈವೇದ್ಯಗಳು ಯಥಾವಿಧಿಯಲ್ಲಿ ಜರುಗುತ್ತವೆ. ತದನಂತರ ಆನಂದನಿಲಯದಲ್ಲಿ ಇರುವ "ಸುದರ್ಶನ ಚಕ್ರತ್ತಾಳ್ವಾರ್" ಪಲ್ಲಕಿಯನ್ನು ಅಧಿರೋಹಿಸಿ, ಮೆರವಣಿಗೆಯಲ್ಲಿ ತಿರುಮಲ ತಿರು ಬೀದಿಗಳಲ್ಲಿ ಮಹಾಪ್ರದಕ್ಷಿಣೆ ಬಂದು ಶ್ರೀ ವರಾಹ ಸ್ವಾಮಿಯ ಆಲಯ ಪ್ರಾಂಗಣವನ್ನು ಸೇರಿಕೊಳ್ಳುತ್ತಾರೆ. ಅಲ್ಲಿ ಚಕ್ರತ್ತಾಳ್ವಾರರಿಗೆ ಅಭಿಷೇಕವು ಜರುಗಿದ ನಂತರ ಪುಷ್ಕರಿಣಿಯಲ್ಲಿ ಪವಿತ್ರ ಸ್ನಾನವನ್ನು ಮಾಡಿಸುತ್ತಾರೆ. ಈ ವಿಧವಾಗಿ ಚಕ್ರಸ್ನಾನವು ಜರುಗುತ್ತಿರುವಾಗ ಅಸಂಖ್ಯ ಭಕ್ತರೂ ಸಹ ಪುಷ್ಕರಿಣಿಯಲ್ಲಿ ಮುಳಿಗಿ ಪವಿತ್ರಸ್ನಾನವನ್ನು ಮಾಡುತ್ತಾರೆ. ಇದಾದ ನಂತರ ಚಕ್ರತ್ತಾಳ್ವಾರರಿಗೆ ವಸ್ತ್ರಾಲಂಕಾರ, ನೈವೇದ್ಯ, ಆರತಿ ಮೊದಲಾದುವುಗಳನ್ನು ವೈಭವಯುತವಾಗಿ ನೇರವೇರಿಸುತ್ತಾರೆ. ಅಲ್ಲಿಂದ ಚಕ್ರತ್ತಾಳ್ವಾರರು (ಸುದರ್ಶನ ಭಗವಾನರು) ಹೊರಟು ಪ್ರದಕ್ಷಿಣಾಕಾರವಾಗಿ ಸಾಗಿ ಶ್ರೀ ಸ್ವಾಮಿಯ ಆಲಯವನ್ನು ಪ್ರವೇಶಿಸುತ್ತಾರೆ.

          ತಿರುಮಲೆಯ ಸ್ವಾಮಿಪುಷ್ಕರಿಣಿಯಲ್ಲಿ ಸಂವತ್ಸರದಲ್ಲಿ ನಾಲ್ಕು ಬಾರಿ ಚಕ್ರಸ್ನಾನವು ಜರುಗುತ್ತದೆ. ೧) ಭಾದ್ರಪದ ಶುದ್ಧ ಚತುರ್ದಶಿ - ಅನಂತಪದ್ಮನಾಭ ವ್ರತದಂದು ೨) ೧೦ ದಿನಗಳ ಕಾಲ ಜರುಗುವ ಬ್ರಹ್ಮೋತ್ಸವದ ಕಡೆಯ ದಿನದಂದು ೩) ವೈಕುಂಠ ಏಕಾದಶಿಯ ಮರುದಿನ - ದ್ವಾದಶಿಯಂದು ಮತ್ತು ೪) ರಥಸಪ್ತಮಿಯ ಮಧ್ಯಾಹ್ನದಂದು.

          ಈ ನಾಲ್ಕರಲ್ಲಿ ವೈಕುಂಠ ದ್ವಾದಶಿಯ ಬೆಳಿಗ್ಗೆ ಜರುಗುವ ಚಕ್ರಸ್ನಾನದಲ್ಲಿ ಅಸಂಖ್ಯಾತ ಭಕ್ತರು ಪಾಲ್ಗೊಳ್ಳುತ್ತಾರೆ.

                                                                ವಿಶೇಷ ಪೂಜೆಪುನಸ್ಕಾರಗಳು

          ವೈಕುಂಠ ಏಕಾದಶಿಯಂದು ಮಲಯಪ್ಪ ಸ್ವಾಮಿಯು ಸರ್ವಾಲಂಕಾರಭೂಷಿತನಾಗಿ ತನ್ನ ಇಬ್ಬರು ಪತ್ನಿಯರೊಡಗೂಡಿ ತಿರುಮಲೆಯ ಬೀದಿಗಳಲ್ಲಿ ಸ್ವರ್ಣರಥದಲ್ಲಿ ಮೆರವಣಿಗೆ ಹೋಗುತ್ತಾನೆ. ಆ ದಿನ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ "ರಾಪತ್ತುತೊಡಕ್ಕಂ" ಜರುಗಿ, ಶ್ರೀ ನಮ್ಮಾಳ್ವಾರರು ರಚಿಸಿದ "ಭಗವದ್ವಿಷಯಂ" ಎನ್ನುವ ಅಪರನಾಮಧೇಯಾಂಕಿತವಾದ "ತಿರುವಾಯ್‌ಮೊಳಿ" (ಸಿರಿ ಬಾಯಿ ನುಡಿ) ಎನ್ನುವ ದಿವ್ಯಪ್ರಬಂಧದಲ್ಲಿನ ನಾಲ್ಕನೇ ಆಯಿರದ ಅಧ್ಯಯನವನ್ನು ಪ್ರಾರಂಭಿಸುತ್ತಾರೆ. ವೈಕುಂಠ ದ್ವಾರದ ಮೂಲಕ ಈ ದಿನದಂದು ಸಾವಿರಾರು ಭಕ್ತರು ಶ್ರೀ ಸ್ವಾಮಿಯ ದರ್ಶನವನ್ನು ಕೈಗೊಳ್ಳುವುದರಿಂದ ಈ ಉತ್ಸವವನ್ನು "ವೈಕುಂಠ ದ್ವಾರಸ್ಥ ಭಗವದವಲೋಕನ ಮಹೋತ್ಸವಂ" ಎಂದು ಕೀರ್ತಿಸುತ್ತಾರೆ.

          ದ್ವಾದಶಿ ದಿನದಂದು ಚಕ್ರಸ್ನಾನದೊಂದಿಗೆ ತಾವೂ ಸ್ನಾನವನ್ನಾಚರಿಸಿ ಭಕ್ತರು ವೈಕುಂಠ ಏಕಾದಶೀವ್ರತದ ಫಲವನ್ನು ಸಂಪೂರ್ಣವಾಗಿ ಹೊಂದುತ್ತಿದ್ದಾರೆ.

(ತಿರುಮಲೆಯಲ್ಲಿ ವೈಕುಂಠ ಏಕಾದಶಿ, ದ್ವಾದಶಿ ವಿಶೇಷಗಳ ಕುರಿತಾದ ಈ ಕಿರು ಹೊತ್ತುಗೆಯು ಶ್ರೀ ಜೂಲಕಂಟಿ ಬಾಲಸುಬ್ರಹ್ಮಣ್ಯಂ ಅವರಿಂದ ರಚಿಸಲ್ಪಟ್ಟ "ಶ್ರೀನಿವಾಸ ವೈಭವಂ" ಎನ್ನುವ ಗ್ರಂಥವನ್ನು ಆಧರಿಸಿದೆ. ಅವರಿಗೆ ನಮ್ಮ ಕೃತಜ್ಞತೆಗಳು)

                                                                   "ಸದಾ ವೇಂಕಟೇಶಂ ಸ್ಮರಾಮಿ ಸ್ಮರಾಮಿ"

                                                                        ll ಓಂ ಶಾಂತಿ ಶ್ಶಾಂತಿ ಶ್ಶಾಂತಿಃ ll

(ವಿ.ಸೂ. : ದಿನಾಂಕ ೧೬-೧೨-೨೦೧೩ರಿಂದ ಧನುರ್ಮಾಸ ಪ್ರಾರಂಭವಾಗುತ್ತದೆ, ಅದು ಜನವರಿ ೧೩, ೨೦೧೪ರ ತನಕ ಇರುತ್ತದೆ. ಜನವರಿ ೧೪ರಿಂದ ಮಕರ ಮಾಸ ಆರಂಭವಾಗುತ್ತದೆ)

 

Rating
Average: 5 (1 vote)

Comments

Submitted by nageshamysore Mon, 12/16/2013 - 19:54

ಶ್ರೀಧರರೆ,
ನನಗೆ ಬರಿ ಏಕಾದಶಿ ಎಂಬ ಪದ ಬಿಟ್ಟು ಬೇರೆನೂ ಗೊತ್ತಿರಲಿಲ್ಲ - ಅದು ಯಾವಾಗಲೊ ವೈಕುಂಠ ಎಕಾದಶಿಯ ಕ್ಯೂ ನೋಡಿ ಒಂದು ಕವನ ಬರೆದದ್ದು ಬಿಟ್ಟರೆ. ಇಲ್ಲಿ ನೋಡಿದರೆ ಏಕಾದಶಿಯಲ್ಲೆ ಎಷ್ಟು ವೈವಿಧ್ಯ! ಉಪವಾಸ ಅನ್ನುವ ಪದ ಎಷ್ಟು ಬಾರಿ ಕೇಳಿದ್ದರೂ ಅದರ ಅರ್ಥದ ಸರಳತೆ ನಿಮ್ಮ ಬರಹ ಓದುವ ತನಕ ಅರಿವಾಗಿರಲಿಲ್ಲ. ಈ ವಿಷಯಗಳ ಕುರಿತು ನಿಮ್ಮ ವಿವರಣಾ / ಅನುವಾದದ ಸಾಮರ್ಥ್ಯ ಅದ್ಭುತ!
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by makara Tue, 12/17/2013 - 10:11

In reply to by nageshamysore

ನಾಗೇಶರೆ,
ಇದು ಮೂಲತಃ ತೆಲುಗಿನ ಕೃತಿ; ಇದನ್ನು ಅನುವಾದ ಮಾಡುವಾಗ ಕನ್ನಡಕ್ಕೆ ಅಸಹಜವೆನಿಸುವ ಅನೇಕ ವಾಕ್ಯಗಳು ಮತ್ತು ನಿತ್ಯವೂ ತೆಲುಗಿನಲ್ಲಿ ವ್ಯವಹರಿಸುವುದರಿಂದ ಅನೇಕ ಕಡೆ ತೆಲುಗಿನ ಛಾಯೆ ತಿಳಿದೋ ತಿಳಿಯದೆಯೋ ಉಳಿದು ಬಿಡುತ್ತದೆ. ನಿಮ್ಮ ಅಭಿಪ್ರಾಯ ನನಗೆ ಸ್ವಲ್ಪ ಧೈರ್ಯವನ್ನು ಕೊಟ್ಟಿದೆ, ನಿಮ್ಮ ಈ ಉತ್ತೇಜನಪೂರ್ವಕ ನುಡಿಗಳಿಗೆ ಧನ್ಯವಾದಗಳು. ನನಗೂ ಸಹ ವೈಕುಂಠ ಏಕಾದಶಿಯ ಕುರಿತು ಏನೂ ತಿಳಿದಿರಲಿಲ್ಲ; ಆ ದಿನ ವಿಷ್ಣುವು ಭೂಲೋಕ ಸಂಚಾರವನ್ನು ಮುಗಿಸಿ ವೈಕುಂಠದೆಡೆ ಪಯಣಿಸುವುದರಿಂದ ಆ ದಿನ ಅವನನ್ನು ದರ್ಶಿಸಿ ಪ್ರಾರ್ಥಿಸಿದರೆ ವೈಕುಂಠ ಪ್ರಾಪ್ತಿಯಾಗುತ್ತದೆ ಎನ್ನುವುದಷ್ಟೇ ತಿಳಿದಿತ್ತು. ವೈಕುಂಠ ಏಕಾದಶಿಯ ಆಚರಣೆ ಬಳ್ಳಾರಿ ಜಿಲ್ಲೆ ಮತ್ತು ಉತ್ತರ ಕರ್ನಾಟಕದ ಭಾಗಗಳಲ್ಲಿ ಅಷ್ಟೇನೂ ಮಹತ್ವವನ್ನು ಪಡೆದಿಲ್ಲ. ಇದರ ಕುರಿತ ಹೆಚ್ಚಿನ ತಿಳುವಳಿಕೆ ನನಗೆ ಅಯ್ಯಪ್ಪ ಮಾಲೆಯ ದೀಕ್ಷೆಯನ್ನು ಧರಿಸಿದಾಗ (೨೦೦೬ನೇ ಇಸವಿಯಲ್ಲಿ) ಆಂಧ್ರ ಪ್ರದೇಶದಲ್ಲಿ ಮತ್ತು ಶಬರಿಮಲೆಯ ದಾರಿಯಲ್ಲಿ ಬೆಂಗಳೂರಿನ ಮೂಲಕ ಹಾಯ್ದು ಹೋಗುವಾಗ ಉಂಟಾಯಿತು. ಅದಾದ ಕೆಲವು ದಿವಸಗಳ ನಂತರ ಈ ಪುಸ್ತಕ ನನ್ನ ಕೈಗೆ ಸಿಕ್ಕಿತು; ಅದನ್ನು ಓದಿ ಬಹಳ ದಿವಸಗಳಾಗಿದ್ದರೂ ಸಹ ಅದನ್ನು ಸರಿಯಾಗಿ ತಿಳಿಯಲು ಸಾಧ್ಯವಾಗಿದ್ದು ಈ ಅನುವಾದದ ಕಾರ್ಯದಿಂದಾಗಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by sathishnasa Mon, 12/16/2013 - 21:00

ನೀವು ತಿಳಿಸಿರುವ 24 ಏಕಾದಶಿಗಳ ಬಗ್ಗೆ ತಿಳಿದಿರಲಿಲ್ಲ ಒಳ್ಳಯ ಮಾಹಿತಿ, ಧನ್ಯವಾದಗಳು ಶ್ರೀಧರ್ ರವರೇ .....ಸತೀಶ್

Submitted by makara Tue, 12/17/2013 - 10:14

In reply to by sathishnasa

ಸತೀಶರೆ,
ಏಕಾದಶಿಯ ಸಂಕ್ಷಿಪ್ತ ಮತ್ತು ಸಂಪೂರ್ಣ ಮಾಹಿತಿಗೆ ನಾವು ತಿರುಮಲ-ತಿರುಪತಿ ದೇವಸ್ಥಾನಗಳು ಪ್ರಚುರ ಪಡಿಸಿದ ಆ ಕಿರುಹೊತ್ತುಗೆಗೆ ಕೃತಜ್ಞರಾಗಿರಬೇಕು. ನಾನೇನಿದ್ದರೂ ಕೇವಲ ಭಾಷಾ ಅನುವಾದಕನಷ್ಟೇ! ಈ ಪುಸ್ತಕದಲ್ಲಿರುವ ವಿಷಯಗಳನ್ನು ನಿಜವಾದ ಅರ್ಥದಲ್ಲಿ ಅನುವಾದ ಮಾಡಿಕೊಂಡು ಅನ್ವಯಿಸಿಕೊಳ್ಳಬೇಕಾಗಿದೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by ಗಣೇಶ Sun, 12/29/2013 - 00:17

ಶ್ರೀಧರ್‌ಜಿ, ಈ ವರ್ಷದ ಕೊನೆಯ ಏಕಾದಶಿ (೨೮-೧೨-೨೦೧೩ ಮಾರ್ಗಶಿರ ಬಹುಳ ಏಕಾದಶಿ - ವಿಮಲಾ /ಸಫಲಾ - ಅಜ್ಞಾನ ನಿವೃತ್ತಿ ) ಮುಗಿಯಿತು.
೨೦೧೪ರಲ್ಲಿ ಏಕಾದಶಿ ವೃತ ಮಾಡುವ ಉತ್ಸಾಹ ಇರುವವರಿಗೆ ಸುಲಭವಾಗಲು ಒಂದು ಪಟ್ಟಿ-
ಜನವರಿ ೧೧ : ಪುಷ್ಯ ಶುಕ್ಲ ಏಕಾದಶಿ - ಪುತ್ರದಾ - ಪುತ್ರಪ್ರಾಪ್ತಿ (ಪುಷ್ಯ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ*)
*ವೈಕುಂಠ ಏಕಾದಶಿ ಮಾರ್ಗಶಿರ ಅಥವಾ ಪುಷ್ಯ ಮಾಸದಲ್ಲಿ ಬರುತ್ತದೆಂದು ಈ ಮುಂಚೆಯೇ ಹೇಳಿದೆ.
ಜನವರಿ ೨೭- ಪುಷ್ಯ ಕೃಷ್ಣ ಏಕಾದಶಿ - ಕಲ್ಯಾಣೀ (ಷಟ್‌ತಿಲಾ) - ಶಾರೀರಿಕ ಬಾಧೆಗಳಿಂದ ಮುಕ್ತಿ
ಫೆ. ೯ - ಮಾಘ ಶುಕ್ಲ ಏಕಾದಶಿ - ಕಾಮದಾ (ಜಯಾ) - ಶಾಪವಿಮುಕ್ತಿ (ಇದು ಭೀಷ್ಮೈಕಾದಶಿ ಎಂದು ಪ್ರಸಿದ್ಧಿಯಾಗಿದೆ)
ಫೆ. ೨೪ - ಮಾಘ ಕೃಷ್ಣ ಏಕಾದಶಿ - ವಿಜಯಾ - ಸಕಲ ಕಾರ್ಯ ವಿಜಯ
ಮಾ. ೧೦ - ಫಾಲ್ಗುಣ ಶುಕ್ಲ ಏಕಾದಶಿ - ಆಮಲಕೀ - ಆರೋಗ್ಯ ಪ್ರಾಪ್ತಿ
ಮಾ. ೨೫ - ಫಾಲ್ಗುಣ ಕೃಷ್ಣ ಏಕಾದಶಿ - ಸೌಮ್ಯಾ - ಪಾಪ ವಿಮುಕ್ತಿ
ಎ. ೧೦ - ಚೈತ್ರ ಶುಕ್ಲ ಏಕಾದಶಿ - ಕಾಮದಾ - ಕೋರಿಕೆಗಳನ್ನು ಪೂರೈಸುತ್ತದೆ.
ಎ. ೨೪ - ಚೈತ್ರ ಬಹುಳ ಏಕಾದಶಿ - ವರೂಧಿನಿ - ಸಹಸ್ರ ಗೋದಾನ ಫಲವು ಲಭಿಸುತ್ತದೆ.
ಮೇ - ೧೦ -ವೈಶಾಖ ಶುದ್ಧ ಏಕಾದಶಿ - ಮೋಹಿನಿ - ದರಿದ್ರನು ಧನವಂತನಾಗುತ್ತಾನೆ.
ಮೇ - ೨೪ : ವೈಶಾಖ ಬಹುಳ ಏಕಾದಶಿ - ಅಪರಾ - ರಾಜ್ಯಪ್ರಾಪ್ತಿ
ಜೂ. ೧೦ : ಜ್ಯೇಷ್ಠ ಶುಕ್ಲ ಏಕಾದಶಿ - ನಿರ್ಜಲ - ಆಹಾರ ಸಮೃದ್ಧಿ
ಜೂ. ೨೪ : ಜ್ಯೇಷ್ಠ ಬಹುಳ ಏಕಾದಶಿ - ಯೋಗಿನಿ - ಪಾಪಗಳನ್ನು ಹರಿಸುತ್ತದೆ (ಪಾಪಗಳಿಂದ ಮುಕ್ತಗೊಳಿಸುತ್ತದೆ)
ಜು. ೧೦ : ಆಷಾಢ ಶುದ್ಧ ಏಕಾದಶಿ - ದೇವಶಯನಿ - ಸಂಪತ್ ಪ್ರಾಪ್ತಿ - ವಿಷ್ಣುವು ಯೋಗನಿದ್ರೆಗೆ ಜಾರುವ ದಿನ
ಜು. ೨೪ : ಆಷಾಢ ಬಹುಳ ಏಕಾದಶಿ - ಕಾಮಿಕಾ - ಬೇಡಿದ ವರಗಳು ಪ್ರಾಪ್ತಿಯಾಗುತ್ತವೆ.
ಆ. ೧೦ : ಶ್ರಾವಣ ಶುಕ್ಲ ಏಕಾದಶಿ - ಪುತ್ರದಾ - ಸತ್ ಸಂತಾನ ಪ್ರಾಪ್ತಿ
ಆ. ೨೪ : ಶ್ರಾವಣ ಬಹುಳ ಏಕಾದಶಿ - ಅಜಾ - ರಾಜ್ಯ, ಪತ್ನೀಪುತ್ರ ಪ್ರಾಪ್ತಿ ಮತ್ತು ಆಪತ್ ನಿವಾರಣೆ
ಸೆ. ೯ : ಭಾದ್ರಪದ ಶುದ್ಧ ಏಕಾದಶಿ - ಪರಿವರ್ತನ (ಯೋಗ ನಿದ್ರೆಯಲ್ಲಿ ವಿಷ್ಣುವು ಪಕ್ಕಕ್ಕೆ ಹೊರಳುತ್ತಾನಂತೆ ಹಾಗಾಗಿ ಇದು ಪರಿವರ್ತನ) - ಯೋಗ ಸಿದ್ಧಿ
ಸೆ. ೨೩ : ಭಾದ್ರಪದ ಬಹುಳ ಏಕಾದಶಿ - ಇಂದಿರಾ - ಸಂಪದಗಳು ಮತ್ತು ರಾಜ್ಯ ಪ್ರಾಪ್ತಿಯುಂಟಾಗುತ್ತದೆ.
ಅ. ೯ : ಆಶ್ವಯುಜ ಶುಕ್ಲ ಏಕಾದಶಿ - ಪಾಪಾಂಕುಶ - ಪುಣ್ಯಪ್ರದವಾದುದು
ಅ. ೨೪ : ಆಶ್ವಯುಜ ಬಹುಳ ಏಕಾದಶಿ - ರಮಾ - ಸ್ವರ್ಗಪ್ರಾಪ್ತಿ
ನ. ೯ : ಕಾರ್ತೀಕ ಶುಕ್ಲ ಏಕಾದಶಿ - ಪ್ರಬೋಧಿನಿ (ಯೋಗ ನಿದ್ರೆಯಿಂದ ವಿಷ್ಣುವು ಎಚ್ಚರಗೊಳ್ಳುವ ದಿನ) - ಜ್ಞಾನಸಿದ್ಧಿ
ನ. ೨೪ : ಕಾರ್ತೀಕ ಬಹುಳ ಏಕಾದಶಿ - ಉತ್ಪತ್ತಿ - ದುಷ್ಟ ಸಂಹಾರ (ಮುರಾಸುರನನ್ನು ಸಂಹರಿಸಿದ ಕನ್ಯೆಯು ವಿಷ್ಣುವಿನ ಶರೀರದಿಂದ ಜನಿಸಿದ ದಿನ)
ಡಿ. ೯ : ಮಾರ್ಗಶಿರ ಶುಕ್ಲ ಏಕಾದಶಿ - ಮೋಕ್ಷದಾ - ಮೋಕ್ಷಪ್ರಾಪ್ತಿ (ಮಾರ್ಗಶಿರ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ*)
ಡಿ. ೨೫ : ಮಾರ್ಗಶಿರ ಬಹುಳ ಏಕಾದಶಿ - ವಿಮಲಾ (ಸಫಲಾ) - ಅಜ್ಞಾನ ನಿವೃತ್ತಿ
೨೦೧೪ರ ಹೊಸ ಕ್ಯಾಲೆಂಡರ್ ಈ ದಿನ ಸಿಕ್ಕಿತು. ಹಾಗೇ ಏಕಾದಶಿಗಳನ್ನು ಹುಡುಕಿದೆ. ಇದರಲ್ಲಿ ತಪ್ಪೂ ಇರಬಹುದು. ಇದ್ದರೆ ಸರಿಪಡಿಸಿ.
ಭೀಷ್ಮ ಏಕಾದಶಿ ಬಗ್ಗೆ ಒಂದು ಸಂಶಯವಿದೆ-
ಫೆ. ೨೪ - ಮಾಘ ಕೃಷ್ಣ ಏಕಾದಶಿ - ವಿಜಯಾ - ಸಕಲ ಕಾರ್ಯ ವಿಜಯ (ಇದು ಭೀಷ್ಮೈಕಾದಶಿ ಎಂದು ಪ್ರಸಿದ್ಧಿಯಾಗಿದೆ)- ಇದು ಮಾಘ "ಶುಕ್ಲ" ಏಕಾದಶಿ ಆಗಬೇಕು- http://hindupad.com/bhishma-ekadasi-bheeshma-ekadashi-in-magha-masam/http://www.templesindia.org/index.php?option=com_content&view=article&id...