' ಏಕಾಂಗಿತನ '

' ಏಕಾಂಗಿತನ '

ಸುತ್ತಲೂ ವ್ಯಾಪಿಸಿದಿ ಕರಾಳ ಕತ್ತಲು 

ಎಲ್ಲೆಡೆಗೆ ಕವಿದ ಕಾರ್ಮೋಡಗಳು

ಚುಕ್ಕಿಗಳ ಸುಳಿವಿಲ್ಲ ಎಲ್ಲೆಡೆಗೆ ಹಬ್ಬಿ 

ಹರಡಿದ ನೀರವ ಮೌನ ! ಎಲ್ಲಿಯೋ 

ದಿಗಂತದಂಚಿನಲಿ ಸುಳಿವ ಕೋಲ್ಮಿಂಚು '

ದೂರದಲೆಲ್ಲಿಂದಲೋ ಅಲೆಯಲೆಯಾಗಿ 

ಕೇಳಿ ಬರುತಿದೆ ' ಫಿರ್ ವಹಿ ಶಾಮ್ 

ವಹಿ ಗಮ್ ' ಗಾಯಕ ಎಷ್ಟೊಂದು 

ಮಡುಗಟ್ಟಿದ ನೋವಿನಿಂದ ಹಾಡುತ್ತಿದ್ದಾನೆ 

ಯಾರ ನೆಮ್ಮದಿಗಾಗಿ  ಸಾಂತ್ವನಕ್ಕಾಗಿ 

 

ಏನಿದು ನಿಷ್ಕಾರಣ ಬೇಸರ? ವಿವರಿಸಲಾಗದ

ಆಳ ನೋವು ಎಂತಹದೋ ಅಸಹನೆ ! 

ಏನು ಯಾವುದರ ಕುರಿತಾಗಿ ? ಮನ ಕಲಕುವ

ಹೃದಯವನು ಆರ್ದ್ರಗೊಳಿಸುವ ಗೀತೆ 

ತೇಲಿ ಬರುತ್ತಿದ್ದರೂ ಏನಿದು ಮನದ ತಕರಾರು?

ಜಗ ಮುಕ್ತವಾಗಿ ತೆರೆದು ಕೊಂಡಿದ್ದರೂ ಏಕೆ 

ಒಂಟಿಯಾಗಿರಲು ಬಯಸುತಿದೆ 'ಹತಾಶ ಮನ'

ಬಿದ್ದುಕೊಂಡಿದೆ ಸುಂದರ ವಿನ್ಯಾಸದ ಹೊದಿಕೆಯ

ಕರ್ಲಾನ್ ಬೆಡ್‍ ಮೇಲೆ ಕಿಟಕಿಯ ಸಂದಿಯಲಿ 

ತೂರಿ ಬರುತಿದೆ ತಂಗಾಳಿ ಯಾವುವೂ ನೊಂದ 

ಮನ ತಣಿಸುತಲಿಲ್ಲ ಯಾವ ದುಸ್ವಪ್ಮ 

ಮನವ ಕಾಡುತಿದೆ ? ತಿಳಿಯುತಲಿಲ್ಲ

 

ಏನಿದು ಅವ್ಯಕ್ತ ಮನದ ತಲ್ಲಣ ತಳಮಳ?

ಯಾವುದರ ಯಾರ ಪರಿವೆಯೂ ಇಲ್ಲದೆ 

ಜಗತ್ತು ತನ್ನ ಪಾಡಿಗೆ ತಾನು ಸಾಗುತಿದೆ

ಸುತ್ತಲೂ ಎಲ್ಲೆಡೆ ಜನ ಜಂಗುಳಿಯ ಓಡಾಟ

ಮೈಚಾಚಿಕೊಂಡು ಬಿದ್ದ ವಿಶಾಲ ರಸ್ತೆಗುಂಟ 

ಸಾಗುತಿವೆ ರಿಕ್ಷಾ ಕಾರು ಬಸ್‍ ಲಾರಿಗಳು 

ಸುಂಯ್ಯೋ ಎಂದು ಕಣ್ಣು ಕೋರೈಸುವ ದೀಪ 

ಬೆಳಗಿಸಿಕೊಂಡು ಓಡುತಿವೆ ? ಏನಿದು ಅವಸರದ

ಧಾವಂತದ ಪಯಣ? ಪ್ರಶ್ನಿಸ ಬಹುದು ಆದರೆ

ಪ್ರಶ್ನಿಸಲಾಗುತ್ತಿಲ್ಲ ! ಇಡೀ ಜಗತ್ತೆ ಒಂದು ರೀತಿಯ 

ಧಾವಂತದಲ್ಲಿದೆ ಏನಿದು ವಿಕ್ಷಿಪ್ತತೆ ? ಇದರ 

ಸಾಂತ್ವನ ಹೇಗೆ ? ಇದು ಪ್ರೀತಿಯ ನಿರಾಶೆಯ 

ಸ್ಥಿತಿಯೆ ಇಲ್ಲ ವಾಸಿಯಾಗಲಾರದ ಆಳ ನೋವೆ? 

 

ಏನಿದು ಚಂಡಿ ಹಿಡಿದ ಮನದ ಏಕಾಂತ

ಇದೆಂಥ ನಿರ್ಲಿಪ್ತತೆ? ನಿರಾಶೆಯ ಚಿಪ್ಪಿಂದ 

ಹೊರ ಬರುವುದ್ಯಾವಾಗ? ಪ್ರೇಮ ನಿವೇದನೆ 

ವಿರಹ ಮನದಾಳದ ನೋವುಗಳ ಸಂತೈಪ 

ಸುಮಧುರ ಗೀತೆಗಳು ತೇಲಿ ಬರುತ್ತಿದ್ದರೂ 

ಹಗುರವಾಗುತ್ತಿಲ್ಲ ಹಟಮಾರಿ ಮನ ಬರಿ 

ಏಕಾಂತದೆಡೆಗೆಯೆ ಜಾರುತದೆ !

              *

ಚಿತ್ರ ಕೃಪೆ: ಅಂತರ್ ಜಾಲ

Comments

Submitted by partha1059 Tue, 12/17/2013 - 20:06

ಪಾಟೀಲರೆ ಮನದ‌ ಪರಿಯೇ ಹಾಗೆ, ಕೆಲವೊಮ್ಮೆ ಅಕಾರಣವಾಗಿ ಅದು ಸಂಕಟದಲ್ಲಿರುತ್ತದೆ ಹಾಗೆ ಸಂತಸ‌ ಸಹ‌,
ಕೆಲವೊಮ್ಮ ಸುತ್ತಲೂ ಜನರಿದ್ದು ಒಂಟಿ ಅನಿಸಿಬಿಡುತ್ತದೆ
ಕೆಲವೊಮ್ಮ ಯಾರು ಇಲ್ಲದಿದ್ದರೂ ಮನ‌ ಯಾವುದೋ ಸಂಗದಲ್ಲಿರುತ್ತದೆ
..
ಮನದ‌ ಸ್ಥಾಯಿಗಳೆ ಹಾಗೆ ...... ಅಸ್ಥಿರ‌.

Submitted by H A Patil Tue, 12/17/2013 - 20:18

In reply to by partha1059

ಪಾರ್ಫ ಸಾರಥಿ ಯವರಿಗೆ ವಂದನೆಗಳು
ಈ ಕವನ ಕುರಿತು ತಾವು ವ್ಯಕ್ತ ಪಡಿಸಿದ ಅಭಿಪ್ರಾಯ ಸರಿ<<<<< ಮನದ ಸ್ಸ್ಥಾಯಿಗಳೆ ಹಾಗೆ .... ಅಸ್ಥಿರ >>>>>. ಸುಂದರ ಗ್ರಹಿಕೆ ಧನ್ಯವಾದಗಳು.

Submitted by sathishnasa Tue, 12/17/2013 - 21:34

ಎಲ್ಲರ ಮನದಲ್ಲು ಒಮ್ಮೆಯಾದರು ಏಳುವ ಪ್ರಶ್ನೆಗಳಿವು. ಸುಂದರ ಭಾವದ ಕವನ ಪಾಟೀಲ್ ರವರೇ ....ಸತೀಶ್

Submitted by H A Patil Thu, 12/19/2013 - 19:07

In reply to by sathishnasa

ಸತೀಶ ರವರಿಗೆ ವಂದನೆಗಳು
ತಾವು ಕವನ ಓದಿ ಪ್ರತಿಕ್ರಿಯಿಸಿದ ಶ್ರಮಕ್ಕೆ ಹೃದಯವಂತಿಕೆಗೆ ಧನ್ಯವಾದಗಳು.

Submitted by lpitnal@gmail.com Wed, 12/18/2013 - 07:20

ಪಾಟೀಲ ಜಿ, ಕವನ, ಮಾನಸಿಕ ತೊಳಲಾಟ, ದ್ವಂದ್ವಗಳ ನಿವೇದನೆ ಚನ್ನಾಗಿದೆ, ಒಳ್ಳೆಯ ಕವನ ನೀಡಿದ್ದಕ್ಕೆ ವಂದನೆಗಳು.

Submitted by H A Patil Thu, 12/19/2013 - 19:09

In reply to by lpitnal@gmail.com

ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
ತಮ್ಮ ಕವನದ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by kavinagaraj Thu, 12/19/2013 - 11:20

ಏಕಾಂಗಿತನ/ಒಂಟಿತನದ ಸ್ವರೂಪದ ವಿವರಣೆ ಸೊಗಸಾಗಿದೆ, ಪಾಟೀಲರೇ. ಏಕಾಂಗಿತನ ನೋವು ತಂದರೆ ಏಕಾಂತ ಅರಿವು ತರುತ್ತದೆ. ಎರಡರ ಸ್ಥಿತಿಯೂ ಒಂದೇ, ಆದರೆ ಪರಿಣಾಮಗಳು ಬೇರೆ. ಧನ್ಯವಾದಗಳು.

Submitted by H A Patil Thu, 12/19/2013 - 19:11

In reply to by kavinagaraj

ಕವಿ ನಾಗರಾಜ ರವರಿಗೆ ವಂದನೆಗಳು
<<<< ಏಕಾಂಗಿತನ ನೋವು ತಂದರೆ ಏಕಾಂತ ಻ರಿವು ತರುತ್ತದೆ >>>> ತಮ್ಮ ಅಭಿಪ್ರಾಯ ಸರಿ, ಕವನದ ಮೆಚ್ಚುಗೆಗೆ ಧನ್ಯವಾದಗಳು.

Submitted by nageshamysore Fri, 12/20/2013 - 05:07

ಪಾಟೀಲರೆ ನಮಸ್ಕಾರ, ಮನದ ತಲ್ಲಣ ತಳಮಳಗಳನ್ನು ಸೊಗಸಾಗಿ ಹಿಡಿದಿಟ್ಟಿದೆ ಕವನ. ಏಕಾಂಗಿತನದ ಏಕಾಂತದಲಿ ಏಕತ್ವವನು ಸಾಧಿಸಲು ಹೆಣಗಾಡುವ ಮನದ ಪರಿ, ಅದನು ಆಗಬಿಡದೆ,  ಎಡಬಿಡದೆ ಕಾಡುವ ಸುತ್ತಲಿನ ಭಾವ ಪ್ರಚೋದಕಗಳು - ಏಕಾಂತದ ದಿಗ್ಬ್ರಮೆಯನ್ನು ಚೆನ್ನಾಗಿ ಕಟ್ಟಿಕೊಟ್ಟಿವೆ. ಕಾರಣವಿಲ್ಲದೆ ಪಿಚ್ಚೆನಿಸುವ ಭಾವ ಹುಟ್ಟಿಸುವ ಗಳಿಗೆಗಳಿಗೆ ಕಾರಣಗಳು ಬರಿ ನೆಪವಷ್ಟೆ ಆದರೂ, ಆ ವಿಷಾದದ ಬೆನ್ನಲ್ಲಿ ಕಲಸಿಕೊಂಡ ಎಷ್ಟೊ ಸಮ್ಮಿಶ್ರ ಭಾವಗಳು ಸಂಕರಗೊಂಡು ಪ್ರಭಾವ ಬೀರುವ ಸಾಧ್ಯತೆಯೂ ಅಷ್ಟೆ ಗಾಢ.

Submitted by H A Patil Fri, 12/20/2013 - 20:44

In reply to by nageshamysore

ನಾಗೇಶ ಮೈಸೂರು ರವರಿಗೆ ವಂದನೆಗಳು
ತಮ್ಮ ವಿಮರ್ಶಾತ್ಮಕ ಪ್ರತಿಕ್ರಿಯೆ ಚೆನ್ನಾಗಿದೆ. ನನಗೆ ಕವನ ಬರಹಗಳು ಅರ್ಥವಾಗುತ್ತವೆ ಆದರೆ ಅದನ್ನು ಶಬ್ದಗಳಲ್ಲಿ ಹಿಡಿದಿಡಲಾಗುವದಿಲ್ಲ ಅದು ನನ್ನ ಮಿತಿ, ನೀವು ಸೇರಿದಂತೆ ಅನೇಕರು ಪ್ರತಿಕ್ರಿಯಿಸುವ ರೀತಿ ನಾನು ಬರಹದಲ್ಲಿ ಕ್ರಿಯಾತ್ಮಕವಾಗಿ ತೊಡಗಿಕೊಳ್ಳಲು ಪೂರಕ ಎಂದು ಮಾತ್ರ ಹೇಳಬಲ್ಲೆ ಧನ್ಯವಾದಗಳು.

Submitted by swara kamath Fri, 12/20/2013 - 17:06

ಪಾಟೀಲರಿಗೆ ನಮಸ್ಕಾರ
' ಏಕಾಂಗಿತನ ' ಮನುಷ್ಯನಿಗೆ ಒಂದಲ್ಲಾಒಂದು ರೀತಿ ಸದಾ ಕಾಡುತ್ತಿರುತ್ತದೆ. ಮನಸ್ಸಿಗೆ ಖಿನ್ನತೆ ಉಂಟಾದಾಗ ಕಲವೊಮ್ಮೆ ಏಕಾಂಗಿತನ ಅಪೇಕ್ಷಿಸುತ್ತೇವೆ.ಮತ್ತೆ ಕೆಲವೊಮ್ಮೆ ನಮ್ಮಳೊಗಿರುವ ಮನಸ್ಸಿನೊಂದಿಗೆ ವಿಚಾರಗಳ ಮಂಥನ ಮಾಡಲು ನಾವೇ ಏಕಾಂತ ವನ್ನು ಬಯಸುತ್ತೇವೆ.ಉತ್ತಮವಾದ ಕವನ ಬರೆದಿರುವಿರಿ ,ವಂದನೆಗಳು.

Submitted by H A Patil Fri, 12/20/2013 - 20:47

In reply to by swara kamath

ರಮೇಶ ಕಾಮತರಿಗೆ ವಂದನೆಗಳು
ಈ ಕವನ ಕುರ್ರಿತು ಬರೆದ ತಮ್ಮ ಅಭಿಪ್ರಾಯ ಓದಿದೆ, ಏಕಾಂಗಿತನದ ಮಜಲುಗಳನ್ನು ಸಮರ್ಥವಾಗಿ ವಿಶ್ಲೇಷಿಸಿದ್ದೀರಿ, ಕವನದ ಮೆಚ್ಚುಗೆಗೆ ಧನ್ಯವಾದಗಳು.