ಇಂದು ಶಿಕ್ಷಣ ಎಂದರೆ?

ಇಂದು ಶಿಕ್ಷಣ ಎಂದರೆ?

ಕೆಲವು ದಿನಗಳ ಹಿಂದೆ ಅಂಕೋಲಾಕ್ಕೆ ಹೋಗಿದ್ದಾಗ ದೂರದ ಸಂಭಂದಿಯೊಬ್ಬರ ಬೇಟಿ ಆಯಿತು. ಉಭಯ ಕುಶಲೋಪಹಾರಿಗಳ ನಂತರ ನಾನು ಅವರ ಮಕ್ಕಳ ಬಗ್ಗೆ ಕೇಳತೊಡಗಿದೆ. ಮಕ್ಕಳ ಬಗ್ಗೆ ಕೇಳಿದರೆ ಯಾರಿಗೆ ತಾನೆ ಸಂತೋಷವಾಗಲ್ಲ ಹೇಳಿ. ಅವರು ಕುತೂಹಲದಿಂದ ಅವರ ಮಕ್ಕಳ ಬಗ್ಗೆ ಹೇಳಿ ಕೊಂಡರು. ಅವರು ಓದಿನ ಬಗ್ಗೆ, ಅವರು ಓದುತ್ತಿರುವ ಶಾಲೆಯ ಬಗ್ಗೆ, ಅವರಿಗೆ ಇಬ್ಬರು ಮಕ್ಕಳು, ಒಬ್ಬ ೬ನೇ ತರಗತಿಯಲ್ಲೂ, ಇನ್ನೊಬ್ಬ ೪ನೇ ತರಗತಿಯಲ್ಲೂ ಓದ್ತಾ ಇದ್ದಾರೆ. ತಂದೆ ತಾಯಿ ಇಬ್ಬರೂ ಶಿಕ್ಷಕರೂ. ಮಕ್ಕಳು ದಿನಾ ಶಾಲೆ ಬಿಟ್ಟ ನಂತರ ಟ್ಯೂಷನಗೆ ಹೋಗೋದು ಅಭ್ಯಾಸ. ನಾನು ಕೇಳಿದೆ ಯಾಕೆ ಟ್ಯೂಷನಗೆ ಕಳಿಸ್ತಿರಾ, ನೀವೇ ಮನೆಯಲ್ಲಿ ಹೇಳಬಹುದಲ್ವಾ ಅಂತಾ. ಅದಕ್ಕೆ ಅವರು ಹೇಳಿದ್ದು "ಇಲ್ಲಾ ನಾವು ಹೇಳಿದರೆ ಮಕ್ಕಳು ಕೇಳಲ್ಲ, ನಮಗೆ ಮನೆ ಕೆಲಸ ಬೇರೆ ಇರುತ್ತೆ ನಾವು ಏನನ್ನಾದರೂ ಹೇಳೋಣಾ ಅಂದರೆ ಮಕ್ಕಳು ಆಸಕ್ತಿನೇ ತೋರಿಸಲ್ಲ. ಟ್ಯೂಷನ್ ಆದರೆ ತುಂಬಾ ಜನ ಮಕ್ಕಳಿರ್ತಾರೆ, ಅವರಲ್ಲಿ ಎಲ್ಲರ ಹಾಗೆ ತಾವೂ ಓದಬೇಕಾಗತ್ತೇ ಅನ್ನುವ ಹುಮ್ಮಸ್ಸು ಇರುತ್ತದೆ. ಮನೆಯಲ್ಲಿ ಆ ವಾತಾವರಣ ಇರಲ್ಲ ಹಾಗಾಗಿ ಮಕ್ಕಳು ಟ್ಯೂಷನ ಹೋಗ್ತಾರೆ ಅಂಥಾ" ನಾನು ಕೇಳಿದೆ ಟ್ಯೂಷನ ಯಾರು ಹೇಳ್ತಾರೆ ಅಂಥಾ, ಅದಕ್ಕೆ ಅವರು ಹೇಳಿದು "ಅವರ ಶಾಲೆಯ ಶಿಕ್ಷಕರೇ, ಶಾಲೆ ಮುಗಿದ ಮೇಲೆ ಟ್ಯೂಷನ ಹೇಳ್ತಾರೆ ಅಂತಾ". ಎಂತಹ ವಿಪರ್ಯಾಸ ನೋಡಿ. ಶಾಲೆ ಮುಗಿದ ಬಳಿಕ ಟ್ಯೂಷನ ಹೇಳಿ ಇತರೆ ಆದಾಯ ಗಳಿಸೋ ಶಿಕ್ಷಕ ಒಂದು ಕಡೆಯಾದರೆ, ತಮ್ಮ ಇಬ್ಬರು ಮಕ್ಕಳಿಗೆ ಪಾಠ ಹೇಳಲಾಗದ ದುರ್ಭಾಗ್ಯ ಈ ಶಿಕ್ಷಕರು ಇನ್ನೋಂದೆಡೆಗೆ. ತನ್ನ ಮಕ್ಕಳಿಗೆ ತಲೆನೋವು ಎಂದು ಇನ್ನೊಬ್ಬ ವೈದ್ಯರ ಬಳಿಗೆ ಕರೆದೊಯ್ಯುವ  ವೈದ್ಯನಂತಾಗಿದೆ ಇವರ ಪರಿಸ್ಥಿತಿ.

ಇವತ್ತು ಟ್ಯೂಷನ ಅನ್ನೋದು ಪಾಲಕರಿಗೆ ಪ್ರತಿಷ್ಟೆಯ ವಿಷಯ. ತನ್ನ ಮಗ ಟ್ಯೂಷನಗೆ ಹೋಗ್ತಾ ಇದ್ದಾನೆ ಅನ್ನೋದೆ ಹೆಮ್ಮೆ. ೧ನೇ ತರಗತಿಯಿಂದ ಪ್ರಾರಂಭವಾದ ಟ್ಯೂಷನ ಶಿಕ್ಷಣ ಮುಗಿಯುವವರೆಗೂ ಬೆನ್ನಟ್ಟಿ ಹೋಗ್ತಾನೇ ಇರುತ್ತದೆ. ಕೆಲವು ಶಿಕ್ಷಕರಿಗೂ, ಸಂಸ್ಥೆಗೆಳಿಗಂತೂ ಎಲ್ಲಿಲ್ಲದ ಖುಸಿ. ಈ ವಿಷಯಕ್ಕೆ ಇಷ್ಟು ಹಣ ಅಂತಾ ವಸೂಲಿ ಮಾಡೋದೇ ಇವರ ಅಭ್ಯಾಸ. ಬೆಂಗಳೂರಿನಂತಹ ಮಹಾನಗರದಲ್ಲಿ ಕೆಲವು ಶಿಕ್ಷಕರೂ ಶಾಲೆಗೆ ಹೋಗದನ್ನು ಬಿಟ್ಟು ಟ್ಯೂಷನ ಪ್ರಪಂಚದಲ್ಲಿ ಅಲೆದಾಡ್ತಾ ಇದ್ದಾರೆ.

ಇವತ್ತಿನ ಶೈಕ್ಷಣಿಕ ಪದ್ದತಿಯಂತೂ ಹೇಳತೀರದೂ, ಕೊಳೆತು ನಾರುತ್ತಿರುವ ಹಳೆಯ ಶೈಕ್ಷಣಿಕ ಪದ್ದತಿಯಲ್ಲೇ ಇನ್ನೂ ಶಿಕ್ಷಣ ಮುಂದುವರೆಯುತ್ತಿದೆ. ಕಾಲ ಬದಲಾಗುತ್ತಾ ಇದ್ದ ಹಾಗೆ ತೆಗೆದುಕೊಳ್ಳುವ ಹಣ ಏರಿಕೆಯಾಗುತ್ತಿದೆಯೇ ಹೊರತು ಶೈಕ್ಷಣಿಕ ಪದ್ದತಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಪಾಲಕರಲ್ಲೂ ಅಷ್ಟೇ ತನ್ನ ಮಗ ಇಂಜೀನಿಯರ್ ಆಗಬೇಕು, ಡಾಕ್ಟರ್ ಆಗಬೇಕು, ಇಲ್ಲಾ ಸರ್ಕಾರಿ ಊದ್ಯೋಗಿ ಆಗಬೇಕು ಅನ್ನೋದನ್ನು ಬಿಟ್ಟರೆ ಬೇರೆ ಇನ್ನೇನಿಲ್ಲ. ಹಾಗಾಗಿ ನಾವು ಅತ್ಯಧಿಕ ಪೀಸ್ ಕೋಡೋದು, ಇಂಜಿನಿಯರಿಂಗ್, ಮೆಡಿಕಲ್ ಸೀಟಿಗೆ ಹಾಗೂ ವ್ರತ್ತಿಪರ ಶಿಕ್ಷಣಗಳಿಗೆ. ಆದರೆ ಯಾವುದೇ ಪಾಲಕರಾಗಲಿ, ಶಿಕ್ಷಕರಾಗಲಿ, ವಿದ್ಯಾರ್ಥಿಗಳಿಗೆ, ಅವರ ಮನಸ್ಸಲ್ಲಿರೋ, ಆಸಕ್ತಿಯಿರೋ ವಿಷಯಗಳನ್ನೂ ಓದಲು ಬಿಡಲ್ಲ. ಕೆಲವು ಶೈಕ್ಷಣಿಕ ಸಂಸ್ಥೆಗಳಂತೂ, ತಮ್ಮಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಎಷ್ಟೆಷ್ಟು ಅಂಕ ಗಳಿಸಬೇಕು ಅಂತಾ, ಯಾರು ಎಷ್ಟು ಹೆಚ್ಚು ಅಂಕ ಗಳಿಸುತ್ತಾರೋ ಅವರಿಗೆ ಅಷ್ಟು ಮನ್ನಣೆ. ಆದರೆ ವಿದ್ಯಾರ್ಥಿಗೆ ಶೈಕ್ಷಣಿಕ ವಿಷಯ ಬಿಟ್ಟರೆ ಬೇರೆ ಯಾವುದೇ ಸಾಮಾನ್ಯ ಜ್ನಾನ ಇರುವುದಿಲ್ಲ. ಕೆಲವರಿಗಂತೂ ನಮ್ಮ ಪ್ರದಾನಿಯಾರು, ರಾಷ್ಟ್ರಪತಿಯಾರು ಅಂತಾನೂ ಗೊತ್ತಿರಲ್ಲ. ಅದಕ್ಕೆ ಇತ್ತಿಚೆಗೆ ನಡೆದ ಪ್ರಹಸನವೇ ಸಾಕ್ಷಿ. ಕೆಲವು ದಿನಗಳ ಹಿಂದೆ, ಆಗ ಪ್ರತಿಭಾ ಪಾಟೀಲ್ ರಾಷ್ಟ್ರಪತಿಯಾಗಿದ್ದ ಕಾಲ  ಸುದ್ದಿ ವಾಹಿನಿಯೊಂದು, ಕೆಲವು ವಿದ್ಯಾರ್ಥಿನಿಯರಿಗೆ ಸಾಮಾನ್ಯ ಜ್ನಾನ ಸ್ಪರ್ಧೆ ಏರ್ಪಡಿಸಿತ್ತು.ಅದರಲ್ಲಿ ಒಂದು ವಿದ್ಯಾರ್ಧಿನಿಗೆ ಕೇಳಿದ ಪ್ರಶ್ನೆ " ನಮ್ಮ ದೇಶದ ರಾಷ್ಟ್ರಪತಿ ಯಾರು?" ಅಂತಾ. ಅದಕ್ಕೆ ಅವಳಲ್ಲಿ ಉತ್ತರ ಇರಲಿಲ್ಲ. ಒಬ್ಬ ವಿದ್ಯಾರ್ಥಿನಿಯಾಗಿ, ಓರ್ವ ಭಾರತಿಯ ಮಹಿಳೆಯಾಗಿ, ನಮ್ಮ ದೇಶದ ಮಹಿಳಾ ರಾಷ್ಟ್ರಪತಿ " ಪ್ರತಿಭಾ ಪಾಟೀಲ್ " ಅನ್ನುವುದು ಗೊತ್ತಿರಲಿಲ್ಲ. ಹೇಗಿದೆ ನೋಡಿ ನಮ್ಮ ಶೈಕ್ಷಣಿಕ ಪದ್ದತಿ. ಓದುವ ಪುಸ್ತಕ ಬಿಟ್ಟರೆ ಬೇರೇನು ಗೊತ್ತಿಲ್ಲ.

ಪುಸ್ತಕ ಓದಿ ಪ್ರಥಮ ಶ್ರೇಣಿ ಗಳಿಸಿದರಷ್ಟೇ, ಅವರ ಬದುಕು ಸಾರ್ಥಕ. ನನ್ನ ಮಗ/ಮಗಳು ೯೫% ಮಾಡಿದಳು, ೧೦೦% ಮಾಡಿದಳು ಅಂತಾ ಓಡಾಡಿಕೊಂಡು ಪ್ರತಿಷ್ಟೆಯನ್ನು ತೋರಿಸುವ ಇಂದಿನ ಪಾಲಕರಿಗೆ ಗೊತ್ತಿಲ್ಲ, ತಮ್ಮ ಮಕ್ಕಳಿಗೆ ಪುಸ್ತಕ  ಬಿಟ್ಟು ಬೇರೇನು ಗೊತ್ತಿಲ್ಲ ಅಂತಾ. ಟ್ಯೂಷನ್ ಆಗಲಿ, ಶೈಕ್ಷಣಿಕ ಸಂಸ್ಥೆಗಳಾಗಲಿ, ಸಾಮಾನ್ಯ ಜ್ನಾನವನ್ನು ಹೇಳಿ ಕೊಡುವುದಿಲ್ಲ. ಹಾಗಾಗಿ ಇಂದಿನ ಮಕ್ಕಳಿಗೆ ಸಾಮಾನ್ಯ ಜ್ನಾನದ ಸೊಗಡೇ ಇಲ್ಲ. ಇಂಥ ವಿದ್ಯಾರ್ಥಿಗಳೂ ಎಲ್ಲದರೂ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಿದರಂತೂ ಮುಗಿದೇ ಹೋಯಿತು. ಸಿಕ್ಕ ಸಿಕ್ಕ ಕೋಚಿಂಗ್ ಸೆಂಟರಗಳಿಗೆ ಸೇರಿ, ಒಂದಿಷ್ಟು ಹಣ ಸುರಿದು, ಸಾಮಾನ್ಯ ಜ್ನಾನವನ್ನು ಅಭ್ಯಾಸ ಮಾಡುವುದು.

ಇನ್ನು ಕೆಲವು ವಿದ್ಯಾರ್ಥಿಗಳು, ಉನ್ನತ ಶಿಕ್ಷಣಕ್ಕಾಗಿ ನಡೆಸುವ ಪರೀಕ್ಷೆಗಳನ್ನು ಬರೆಯುದಕ್ಕೂ ಕೋಚಿಂಗ್ ಕ್ಲಾಸಗಳೆ ಬೇಕು. ಅದೇ ವಿದ್ಯಾರ್ಥಿಗಳು ಓದಿನ ಸಮಯದಲ್ಲಿ ಒಂದಿಷ್ಟು ಸಮಯವನ್ನು ಸಾಮಾನ್ಯ ಜ್ನಾನಕ್ಕಾಗಿ ಮೀಸಲಟ್ಟರೆ ಇಷ್ಟೊಂದು ಸಮಸ್ಯೆಗಳು ಕಾಡುತ್ತಿರಲಿಲ್ಲ. ಇವತ್ತು ಶಿಕ್ಷಣ ಅನ್ನುವುದು, ಬ್ಯುಸಿನೆಸ್ ಆಗಿ ಬಿಟ್ಟಿದೆ. ದಿನ ನಾಯಿಕೊಡೆಗಳಂತೆ ಅಲ್ಲಲ್ಲಿ ಒಂದೊಂದು ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು ತಲೆ ಎತ್ತುತ್ತಿವೆ. ಒಂದು ಕಾಲದಲ್ಲಿ ವರ್ಷಕ್ಕೆ ೫ ಸಾವಿರ ಹತ್ತು ಸಾವಿರ ಇದ್ದ ಫೀಸು ಇವತ್ತು ಲಕ್ಷ ದಾಟಿದೆ. ಸಾಮಾನ್ಯ ಮುಗ್ಧ ವಿದ್ಯಾರ್ಥಿಗಳಿಗೆ ಇವತ್ತು ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು ಕನಸಾಗಿ ಬಿಟ್ಟಿದೆ. ಇದು ಫೀಸಗಳಿಗೇ ಸಿಮಿತವಾಗಿಲ್ಲ, ಲಕ್ಷ ಲಕ್ಷ ಡೊನೇಷನ ಬೇರೆ. ಹೇಗಿದೆ ನೋಡಿ ಈ ಬ್ಯುಸಿನೆಸ್. ಇಂದಿಗೆ ಶಿಕ್ಷಣ ಅನ್ನುವುದು ಶ್ರೀಮಂತ ವ್ಯಕ್ತಿಗಳಿಗೆ ಶಿಮೀತವಾಗಿ ಬಿಟ್ಟಿದೆ. ಶಿಕ್ಷಣದಲ್ಲಿ ಉನ್ನತ ಶ್ರೇಣಿ ಪಡೆದು, ಸೀಟ್ ಸಿಕ್ಕರೂ, ಶಿಕ್ಷಣ ಕೊಡಿಸಲಾಗದ ಪರಿಸ್ಥಿತಿ. ಅಷ್ಟೇ ಅಲ್ಲ ಇವತ್ತು ಎಂ.ಬಿ.ಎ ಮಾಡಬೇಕಾದರೆ ಲ್ಯಾಪ್ ಟಾಪ್  ಇಲ್ಲದೇ ಪ್ರವೇಶವಿಲ್ಲ. ಹೇಗಿದೆ ನೋಡಿ ವಿಪರ್ಯಾಸ.

ಇನ್ನೂ ಕೆಲವು ಸಂಸ್ಥೆಗಳಂತೂ, ಅಲ್ಲಿ ಸೇರಿದ ವಿದ್ಯಾರ್ಥಿಗಳಿಗೆ ಅವರೇ  ಲ್ಯಾಪ್ ಟಾಪ್ ಕೊಡಿಸುತ್ತಾರೆ. ಯಾವುದೋ ಕಂಪ್ಯೂಟರ್ ಮಾರಾಟ ಮಾಡುವ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು, ಇವರು ಲ್ಯಾಪ್ ಟಾಪ್ ಕರಿದಿಸಿ, ವಿದ್ಯಾರ್ಥಿಗಳಿಗೆ ಮಾರಾಟ ಮಾಡುವುದು. ಹೇಗಿದೆ ನೋಡಿ. ಇವತ್ತು ಶಿಕ್ಷಣ ಅನ್ನುವುದು ಕೇವಲ ಹಣಾ ಇರುವವನಿಗೆ ಮಾತ್ರ ಮೀಸಲಾಗಿ ಬಿಟ್ಟಿದೆ. ಇನ್ನು ಸರಕಾರಿ ಶಾಲಾ- ಕಾಲೇಜುಗಳ ಪರಿಸ್ಥಿತಿ ಅಂತೂ ಹೇಳತೀರದು. ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ರೀತಿ. ಶಿಕ್ಷಕರಿದ್ದರೆ ವಿದ್ಯಾರ್ಥಿಗಳಿಲ್ಲ, ವಿದ್ಯಾರ್ಥಿಗಳಿದ್ದರೆ ಸರಿಯಾದ ಕೊಠಡಿಗಳಿಲ್ಲ, ಕೊಠಡಿಗಳಿದ್ದರೆ ಶಿಕ್ಷಕರಿಲ್ಲ, ವಿದ್ಯಾರ್ಥಿಗಳಿದ್ದರೆ ಶಿಕ್ಷಕರಿಲ್ಲ.

ಇಂದು ಶಿಕ್ಷಣ ಎಂದರೆ ದಿನದಿಂದ ದಿನಕ್ಕೆ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಶೈಕ್ಷಣಿಕ ಸಂಸ್ಥೆಗಳೋ, ಅವರು ತೆಗೆದು ಕೊಳ್ಳುತ್ತಿರುವ ಲಕ್ಷಾಂತರ ರೂಪಾಯಿ ಡೊನೇಷನ್ಗಳೋ, ತನ್ನ ಮಗುವನ್ನು ಈ ಸಂಸ್ಥೆಗೆ ಸೇರಿಸಿದೆ, ಆ ಸಂಸ್ಥೆಗೆ ಸೇರಿಸಿದೆ ಎನ್ನುವ ತಂದೆ ತಾಯಿಯರ ಪ್ರತೀಷ್ಟೆಯೋ ಆಗಿದೆಯೇ ಹೊರತು ಬೇರೇನು ಅಲ್ಲ್ ಅನ್ನುವುದು ನನ್ನ ಅನಿಸಿಕೆ.

--ಮಂಜು ಹಿಚ್ಕಡ್

Rating
No votes yet

Comments

Submitted by makara Mon, 12/09/2013 - 09:05

ಇಂದಿನ ಶಿಕ್ಷಣದ ಗುಣಮಟ್ಟದ ಕುರಿತಾಗಿ ಚೆನ್ನಾಗಿ ಬಿಡಿಸಿ ಹೇಳಿದ್ದೀರ ಮಂಜುನಾಥ್ ಅವರೆ. ಇಂದಿನ ಮಕ್ಕಳು ಓದಿಕೊಳ್ಳುವುದಿಲ್ಲ, ಓದುಕೊಳ್ಳುತ್ತಾರೆ (ಓದನ್ನು ಕೊಳ್ಳುತ್ತಾರೆ?) ಮತ್ತು ಇಂದಿನ ಶಿಕ್ಷಣವಾಗಿಲ್ಲ ಅದು ಶಿಕ್ಹಣವಾಗಿದೆ. ಪೋಷಕರಿಗೆ ಶಿಕ್ಷೆ ಮತ್ತು ವಿದ್ಯಾಸಂಸ್ಥೆಗಳಿಗೆ ಹಣ :(

Submitted by sri.ja.huddar Mon, 12/16/2013 - 13:32

ನಮ್ಮ ಓದು ನಮ್ಮ ಭಾವ ಜಗತ್ತು ವಿಸ್ತರಿಸಲು ಸಹಾಯ ಮಾಡಬೇಕು, ಇದೇ ಓದಿನ ಆಶಯ.
ನಿಮ್ಮ ಚಿಂತನಾ ಬರಹ ಚೆನ್ನಾಗಿದೆ.

Submitted by CHALAPATHI V Mon, 12/16/2013 - 16:02

ನಾನು ನಮ್ಮ‌ ತರಗತಿಯಲ್ಲೇ ಅನೇಕ‌ ವಿದ್ಯಾರ್ಥಿಗಳನ್ನು ನೋಡಿದ್ದೇನೆ, ಅವರು ಬರೀ ಪುಸ್ತಕಕ್ಕೆ ಅಂಟಿಕೊಂಡಿರುತ್ತಾರೆ,ಪ್ರಚಲಿತ‌ ವಿಷಯಗಳೇ ಬಗ್ಗೆಯೇ ಸರಿಯಾಗಿ ಗೊತ್ತಿರುವುದಿಲ್ಲ‌. ಇದು ಇಂದಿನ‌ ಶಿಕ್ಷಣದ‌ ವಿಪರ್ಯಾಸ‌.

Submitted by ಕೀರ್ತಿರಾಜ್ ಮಧ್ವ Tue, 12/17/2013 - 19:04

ಮಂಜುರವರ ಲೇಖನ ನಿಜಕ್ಕೂ ಪ್ರಸ್ತುತ..
ಇಂದಿನ ಜನ ಯಾವುದಕ್ಕೋ ಹೆಮ್ಮೆ ಪಡುತ್ತಾರೆ, ಇನ್ಯಾವುದಕ್ಕೋ ದುಃಖಪಡುತ್ತಾರೆ. ಶಿಕ್ಷಣ ಕೂಡ ಇದಕ್ಕೆ ಹೊರತಾಗಿಲ್ಲ..

Submitted by ಗಣೇಶ Tue, 12/17/2013 - 23:41

ಮಂಜು ಅವರೆ, "ಸಾಮಾನ್ಯ"..ಥತ್ ನಮ್ಮಂತಹವರ "ಅಸಾಮಾನ್ಯ" ಮಕ್ಕಳಿಗೆ "ಸಾಮಾನ್ಯ ಜ್ಞಾನ" ಬೇಕಿಲ್ಲರೀ.. ನನ್ನ ಮಗನ ಪ್ರಕಾರ ರಾಷ್ಟ್ರ‍ಪತಿ ದೇವೇಗೌಡ ಏನಾಯಿತೀಗ? ನನ್ನ ಬಳಿ ಹಣವಿದೆ. ನಿಮ್ಮ ಮಾಮೂಲಿ ಸ್ಕೂಲಿಗೆ ಸೇರಿಸುವುದಿಲ್ಲ. ವಿದೇಶದಲ್ಲೇ ಕಲಿಸುವೆ.. ಅಲ್ಲೇ ನೆಲೆಸಲಿ.... ಈ ತರಹ ಯೋಚಿಸುವವರೇ ಜಾಸ್ತಿ. ಎಲ್ ಕೆ ಜೀಗೇ ಲಕ್ಷಾಂತರ ಡೊನೇಷನ್ ಕೊಟ್ಟು ಹೆಸರಿಗೆ ಕರ್ನಾಟಕದಲ್ಲಿರುವ ವಿದೇಶೀ ನಡವಳಿಕೆಯ ಸ್ಕೂಲ್ಗೇ ಸೇರಿಸಿ ಹೆಮ್ಮೆ ಪಡುವ ತಂದೆ ತಾಯಿಯರು ಇರುವಾಗ ಮಕ್ಕಳನ್ನು ದೂರಿ ಪ್ರಯೋಜನವಿಲ್ಲ. "ನನ್ನ ಮಗಳು (ಇಂಗ್ಲೀಷಲ್ಲಿ ಬಿಟ್ಟು ಬೇರೆ ಬರಬೇಕೆ) ಮಾತನಾಡುತ್ತಾ ’ಯಕ್’ ಎಂದಳು" ಎಂದು ಹೆಮ್ಮೆಯಿಂದ ಕನ್ನಡ ಮೀಡಿಯಮ್ಮಲ್ಲೇ ಕಲಿತು ಈಗ ಸಾಕಷ್ಟೂ ಹಣಮಾಡಿರುವ ತಾಯಿ ಹೇಳುವಾಗ, ನನಗೆ ಒಮ್ಮೆಗೆ ಅರ್ಥವೇ ಆಗಲಿಲ್ಲ. ನಂತರ ಗೊತ್ತಾಯಿತು ಅದು ಇಂಗ್ಲೀಷರ ಸ್ಟೈಲಲ್ಲೇ ಮಾತನಾಡಿದ್ದು ಅಂತ. ಈ ತರಹ ನಾಯಿಕೊಡೆ ತರಹ ಧನವಂತರ ಮಕ್ಕಳಿಗಾಗಿ ವಿದೇಶೀ ಶಾಲೆಗಳು ಅಲ್ಲಲ್ಲಿ ಪ್ರಾರಂಭವಾಗಿದೆ. ಇನ್ನು ಮುಂದೆ ಹೈಯರ್ ಬಿಡಿ ಒಂದನೇ ಕ್ಲಾಸ್ ಸೇರಿಸುವುದೂ ಮಧ್ಯಮವರ್ಗಕ್ಕೆ ಸಾಧ್ಯವಾಗಲಿಕ್ಕಿಲ್ಲ. ಬಡವರ ಸಂಗತಿ ಬಿಡಿ. ಉತ್ತಮ ವಿಷಯ ಎತ್ತಿದ್ದೀರಿ..
ಈ ಮಕ್ಕಳ ಮಧ್ಯವಿರುವಾಗ ಕೆಲವೊಮ್ಮೆ ನಾನು ಕರ್ನಾಟಕದಲ್ಲಿದ್ದೇನೋ ಎಂಬ ಅನುಮಾನ ಬರುವುದು..:(

Submitted by manju.hichkad Wed, 12/18/2013 - 14:04

In reply to by ಗಣೇಶ

ನಿಜ ಗಣೇಶ ಅವರೇ, ನೀವು ಹೇಳಿದ ಹಾಗೆ ಹೀಗೆ ಮುಂದುವರೆದರೆ ಬಡವರಿಗೆ ಅಂತಲ್ಲ ಮಧ್ಯಮ ವರ್ಗದವರಿಗೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಕಷ್ಟವಾಗಬಹುದು. ತುಂಬಾ ಉತ್ತಮವಾದ ಪ್ರತಿಕ್ರಿಯಯನ್ನು ನಿಡಿದ್ದಿರಾ ಧನ್ಯವಾದಗಳು