ನಿನ್ನೊಳಗೆ ಕಣ್ಣಿಟ್ಟು ಒಮ್ಮೆ ನೋಡು

ನಿನ್ನೊಳಗೆ ಕಣ್ಣಿಟ್ಟು ಒಮ್ಮೆ ನೋಡು

ಇಂದು ಬೆಳಗ್ಗೆ ಏಳುವಾಗಲೇ ನನ್ನ ಮನದೊಳಗೆ ಸುಳಿದಾಡಿದ ಶಬ್ಧಗಳಿಗೆ ಅಕ್ಷರ ಕೊಡಬೇಕೆನಿಸಿತು. ಒಂದು ಪದ್ಯ ರಚನೆ ಯಾಯ್ತು. ನನ್ನ ಹಿರಿಯ ಮಿತ್ರ ಕವಿ ನಾಗರಾಜ್ ಹೇಳುತ್ತಾರೆ "ನೀವು ಬರೆಯ ಬೇಕೆನಿಸಿದ್ದನ್ನು ಹಿಂದು ಮುಂದು ನೋಡದೆ , ಬರೆದು ತಿದ್ದದೆ ಪ್ರಕಟಿಸಿ ಬಿಡುತ್ತೀರಿ" ಎಂದು, ನನ್ನ ಸ್ವಭಾವ ಏನೆಂದರೆ ಯಾವುದೋ ಸಂದರ್ಭದಲ್ಲಿ ಮೂಡಿದ ಭಾವನೆಗೆ ಧಕ್ಕೆ ಆಗದಂತೆ ಆಗಲೆ ಬರೆದು ಮುಗಿಸಿ ಬಿಡುವುದು. ತಿದ್ದುವುದಕ್ಕೆ ನೀವಿದ್ದೀರಲ್ಲಾ.
ಮುಂದೆ ನೋಡಿ....

ಅವರಿವರ ಮಾತನ್ನು
ಕೇಳುತ್ತಾ ಸಾಗುತ್ತಾ
ಅತ್ತಿತ್ತ ಸುತ್ತಿದರೆ ಲಾಭವೇನು?|
ಅತ್ತಿತ್ತ ಸುತ್ತಾಡಿ
ಹೊತ್ತು ಮುಳುಗುವಾಗ
ನಿನ್ನತ್ತ ಮುಖಮಾಡಿ ಲಾಭವೇನು? ||

ಮನದೊಳಗೆ ಮಲಿನವ
ತುಂಬಿಟ್ಟು ಕಾಪಿಟ್ಟು
ಹೊರಗೆ ಸ್ನಾನವ ಮಾಡಿ ಲಾಭವೇನು?|
ಅಂತರಂಗವನೊಮ್ಮೆ
ತೆರೆದುನೋಡಲು ನೀನು
ಅದರ ಸೌಂದರ್ಯಕೆ ಸಾಟಿಯೇನು?||

ನಿನ್ನ ಅನುಭವಾಮೃತವು
ನಿನಗೆ ಗುರುವಲ್ಲದೆ 
ಅನ್ಯಗುರುವಾಶ್ರಯವು ನಿನಗೆ ಬೇಕೇ?|
ನಿನ್ನೊಳಗೆ ಇರುವ
ಅವನನ್ನೆ ಮರೆತು
ಅನ್ಯರಿಗೆ ಶರಣಾಗಿ ಹೋದೆ ಏಕೆ?||

ನೋಡು ನಿನ್ನೊಳಗೆ
ನೋಡು ಜಗದೀಶ್ವರನ
ಕರುಣಾನಿಧಿಯನ್ನು ನಿನ್ನೊಳಗೆ ನೋಡು|
ಚೈತನ್ಯರೂಪಿಯನು
ಪ್ರಜ್ವಲಿಪ ಜ್ಯೋತಿಯನು
ನಿನ್ನೊಳಗೆ ಕಣ್ಣಿಟ್ಟು ಒಮ್ಮೆ ನೋಡು||

ಅವರಿವರ ಮಾತನ್ನು ಕೇಳುತ್ತಾ ಸಾಗುತ್ತಾ ಅತ್ತಿತ್ತ ಸುತ್ತಿದರೆ ಲಾಭವೇನು?

 ಈ ನುಡಿಗೆ ವಿವರಣೆ ಏನೂ ಬೇಡ. ಆದರೂ ಎರಡು ಮಾತು. ಸಾಮಾನ್ಯವಾಗಿ ಭಗವಂತನಲ್ಲಿ ಶರಣಾಗಬಯಸುವವರು, ಜೀವನದಲ್ಲಿ ನೆಮ್ಮದಿಯನ್ನು ಬಯಸುವವರು ಒಬ್ಬ ಗುರುವಿಗಾಗಿ ಹುಡುಕುತ್ತಿರುತ್ತಾರೆ. "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಲ್ಲರೂ ಕೇಳಿರುವ ಮಾತಿದು. ಆದರೆ ಎಲ್ಲಿಯವರಗೆ ಗುರು ಬೇಕು? ಎಂತಹ ಗುರು ಬೇಕು? ಇವೆಲ್ಲವೂ ಚಿಂತನೆಗೆ ಯೋಗ್ಯವಾದ ವಿಚಾರಗಳು. ಇವತ್ತು ಯಾರೋ ಒಬ್ಬ ಸ್ವಾಮೀಜಿ ಬರುತ್ತಾರೆ. ಅವರ ಉಪನ್ಯಾಸ ಕೇಳುತ್ತೇವೆ. ಆಕರ್ಶಿತರಾಗುತ್ತೇವೆ. ನಾಳೆ ಮತ್ತೊಬ್ಬರು, ನಾಡಿದ್ದು ಮಗದೊಬ್ಬರು.ಹೀಗೆ ಉಪನ್ಯಾಸವನ್ನು ಕೇಳುತ್ತಲೇ ಇರುತ್ತೇವೆ. ಇವೆಲ್ಲದರ ಒಟ್ಟಾರೆ ಪರಿಣಾಮ ನಮ್ಮ ಮೇಲೆ ಏನಾಗಬೇಕು?ನಮ್ಮ ಅಂತರಂಗದಲ್ಲಿ ಒಂದು ಸ್ಪಷ್ಟತೆ ಮೂಡಬೇಕು. ಹಾಗಾಗದೇ ಕಾವಿ ಹಾಕಿದವರಿಗೆಲ್ಲಾ ಅಡ್ದಬಿದ್ದು ಅವರ ಹಿಂದೆ ಓಡಾಡಿ, ಕೆಲವೇ ದಿನಗಳಲ್ಲಿ ಏನೂ ಲಾಭವಿಲ್ಲವೆಂಬ ಅರಿವುಂಟಾದಾಗ ಮತ್ತೊಬ್ಬರ ಹಿಂದೆ ಬಿದ್ದು ಅವರು ಹೇಳಿದಂತೆ ಮಾಡಿ, ತೀರ್ಥ ಕ್ಷೇತ್ರಗಳನ್ನು ಸುತ್ತಿ, ಪೂಜೆ ಪುನಸ್ಕಾರಗಳನ್ನು ಮಾಡಿ, ದಾನ ಧರ್ಮಗಳನ್ನು ಮಾಡಿ, ಏನು ಮಾಡಿದರೂ ಕೊನೆಗೂ ಮನಸ್ಸಿಗೆ ನೆಮ್ಮದಿ ಸಿಕ್ಕದಿದ್ದಾಗ ಆಗುವ ಲಾಭವೇನು?
ಲೌಕಿಕ ಚಿಂತನೆಯಲ್ಲಿ ಮುಳುಗಿರುವ ಗುರುಗಳು ಎಲ್ಲೆಡೆ ಸಿಕ್ಕಬಲ್ಲರು.ಆದರೆ ಪಾರಮಾರ್ಥಿಕ ಚಿಂತನೆ ಮಾಡುವವರು ಅಲ್ಲೊಬ್ಬ ಇಲ್ಲೊಬ್ಬರು ಸಿಗಬಹುದು. ಗುರುವನ್ನು ಅರಸುವುದರಲ್ಲೇ ಜೀವನ ಕೊನೆಯಾದರೇ?
ಅತ್ತಿತ್ತ ಸುತ್ತಾಡಿ ಹೊತ್ತು ಮುಳುಗುವಾಗ ನಿನ್ನತ್ತ ಮುಖಮಾಡಿ ಲಾಭವೇನು? ||

ಗುರುವಿಗಾಗಿ ಹಂಬಲಿಸಿ ಕಂಡ ಕಂಡವರಿಗೆಲ್ಲಾ ಕಾಲಿಗೆ ಬಿದ್ದು ಅವರನ್ನು ಅನುಸರಿಸಿದರೂ ಏನೂ ಲಾಭವಾಗದಾಗ ನಿನಗೆ ಗೊತ್ತಿಲ್ಲದೆ ನಿನ್ನ ವಯಸ್ಸು ಜಾರಿರುತ್ತದೆ, ಜೀವನದ ಕಡೆಯ ಗಳಿಗೆಯಲ್ಲಿ ನಿಜವಾದ ಭಗವಚ್ಚಿಂತನೆಯಲ್ಲಿ ಮನಸ್ಸು ಮಾಡಬೇಕೆನ್ನುವಾಗ ನಿನ್ನ ಶರೀರ ಸಹಕರಿಸುವುದು ಕಷ್ಟ. ಆದ್ದರಿಂದ ಯೌವ್ವನದಲ್ಲೇ ಸರಿಯಾದ ದಿಕ್ಕಿನಲ್ಲಿ ಚಿಂತನೆ ಮಾಡಬೇಕು-ಎಂಬುದು ತಾತ್ಪರ್ಯ
ಮನದೊಳಗೆ ಮಲಿನವ ತುಂಬಿಟ್ಟು ಕಾಪಿಟ್ಟು ಹೊರಗೆ ಸ್ನಾನವ ಮಾಡಿ ಲಾಭವೇನು?|
ಎಲ್ಲಾ ಮಹಾಮಹಿಮರೂ ಈ ಮಾತನ್ನು ಒತ್ತಿ ಹೇಳಿದ್ದಾರೆ. ನಮ್ಮೊಳಗೆ ಕಲ್ಮಶವನ್ನು ತುಂಬಿಕೊಂಡು ತೀರ್ಥಕ್ಷೇತ್ರಗಳಲ್ಲಿ ಮಿಂದು ಬಂದರೇನು ಪ್ರಯೋಜನ? ನಮ್ಮೊಳಗಿರುವ ದುಷ್ಟಕಾಮನೆಗಳನ್ನು ಬಿಡದೆ ಎಲ್ಲಿ ಸ್ನಾನ ಮಾಡಿದರೆ ಏನು ಪ್ರಯೋಜನ?. ಆದರೆ ತೀರ್ಥ ಕ್ಷೇತ್ರಗಳು, ಪುಣ್ಯಕ್ಷೇತ್ರಗಳು ಇವೆಲ್ಲವೂ ವಿಹಾರೀ ಸ್ಥಳಗಳಾಗಿ ಬಿಟ್ಟಿವೆ. ಹಣವಿದ್ದವರು ಸಾಯುವುದರೊಳಗೊಮ್ಮೆ ಕಾಶಿಗೆ ಹೋಗಿ ಬಂದರೆ ಜನ್ಮ ಸಾರ್ಥಕವೆಂಬ ಭಾವನೆ. ನಿಜವಾಗಿ ಯಾವುದು ತೀರ್ಥ ಕ್ಷೇತ್ರ? ಯಾವುದು ಪುಣ್ಯಕ್ಷೇತ್ರ?
ನಗುನಗುತ್ತಾ ಆನಂದವಾಗಿರುವ, ಮನೆಗೆ ಬಂದ ಅತಿಥಿಗಳಿಗೆ ಸತ್ಕಾರ ಮಾಡುವ, ನಿಶ್ಕಲ್ಮಶ ಸ್ವಭಾವದ ಜನರಿರುವ ಮನೆಗಳೇ ಪುಣ್ಯ ಕ್ಷೇತ್ರ -ತೀರ್ಥಕ್ಷೇತ್ರ ವಲ್ಲವೇ? ಊರೂರು ಸುತ್ತಿ ಪುಣ್ಯ ಗಳಿಸಬೇಕೇ? 
ಒಳಗಿನ ಕೊಳೆಯನ್ನು ತೊಳೆದು ಕೊಳ್ಳದೆ, ಯಾವ ಸಾಬಾನು ತಿಕ್ಕಿ ಸ್ನಾನ ಮಾಡಿ, ಎಂತಹಾ ಉಡುಪು ಧರಿಸಿದರೂ, ಮುಖಕ್ಕೆ ಯಾವ ಪೌಡರ್ ಸ್ನೋ ಬಳಿದುಕೊಂದರೂ ಮೈಗೆ ಯಾವ ಸೆಂಟ್ ಹಚ್ಚಿಕೊಂಡರೂ ಮುಖದಲ್ಲಿ ನಿಜವಾದ ಕಾಂತಿ ಬರಲು ಸಾಧ್ಯವೇ ಇಲ್ಲ. ನಿಶ್ಕಲ್ಮಶ ಮನಸ್ಸಿನ ಜನರಿಗೆ ಮುಖದ ಕಾಂತಿಗೆ ಯಾವ ಪೌಡರ್ ಸ್ನೋ ಅಗತ್ಯವಿಲ್ಲ. ಶುದ್ಧ ಮನಸ್ಸಿನ ಕಾಂತಿ ನಿಮ್ಮ ಮುಖದಲ್ಲಿ ಬಿಂಬಿಸದೇ ಇರದು
ಅಂತರಂಗವನೊಮ್ಮೆ ತೆರೆದುನೋಡಲು ನೀನು ಅದರ ಸೌಂದರ್ಯಕೆ ಸಾಟಿಯೇನು?||
ಬಾಹ್ಯ ಸೌಂದರ್ಯಕ್ಕಾಗಿ ನೀನು ಎಷ್ಟು ತಯಾರಿ ನಡೆಸಿದರೂ ಪ್ರಯೋಜನವಿಲ್ಲ. ಆದರೆ ಒಮ್ಮೆ ನೀನು ನಿನ್ನ ಅಂತರಂಗದೊಳಗೆ ದೃಷ್ಟಿಹಾಯಿಸಲು ಸಾಧ್ಯವಾದರೆ ಅದರ ಸೌಂದರ್ಯಕ್ಕೆ ಯಾವುದೂ ಸರಿಸಮವಲ್ಲ. ಈ ಸತ್ಯದ ಅರಿವು ನಿನಗೆ ಆಗಬೇಕು
ನಿನ್ನ ಅನುಭವಾಮೃತವು ನಿನಗೆ ಗುರುವಲ್ಲದೆ ಅನ್ಯಗುರುವಾಶ್ರಯವು ನಿನಗೆ ಬೇಕೇ?|
ಈ ಮಾತು ಸ್ವಲ್ಪ ಅಹಂಕಾರದಿಂದ ಕೂಡಿದ್ದೇನೋ ಅನ್ನಿಸದೇ ಇರದು. ಗುರುಗಳ ಮಾರ್ಗದರ್ಶನ ಬೇಕು, ಎಲ್ಲಿಯವರಗೆ? ನೀನು ಒಂದು ದಾರಿಯನ್ನು ಕಂಡು ಕೊಳ್ಳುವ ವರೆಗೆ. ಒಂದು ಮರಿಹಕ್ಕಿ ಎಷ್ಟು ದಿನ ತಾಯಿಯ ಆಶ್ರಯದಲ್ಲಿದ್ದೀತು? ರೆಕ್ಕೆ ಬಲಿತ ಕೂಡಲೇ ವಿಶಾಲವಾದ ಆಕಾಶದಲ್ಲಿ ಹಾರಾಡುವುದಿಲ್ಲವೇ? ಆಗ ತಾಯಿ ಹಕ್ಕಿ ಮರಿಹಕ್ಕಿಯ ಮೇಲೆ ಸಿಟ್ಟಾಗುವುದೇ? ಇಲ್ಲ. ಹಾಗೆಯೇ ಗುರುವಿನ ಆಶ್ರಯ ಬೇಕು. ಎಲ್ಲಿಯ ವರಗೆ? ಒಂದು ದಾರಿ ಕಾಣುವವರಗೆ. ಆನಂತರ ವಿಶಾಲವಾದ ಆಕಾಶದಂತೆ ನಿನಗೆ ನಿನ್ನ ಅನುಭವಗಳೇ ನಿನಗೆ ದಾರಿದೀಪವಾಗಬಲ್ಲವು.ಆಗ ನಿನ್ನ ಅನುಭವವೇ ನಿನಗೆ ಗುರು. ಅದೆಷ್ಟು ಗುರುಗಳ ಮಾರ್ಗದರ್ಶನ ನಿನಗೆ ಸಿಕ್ಕಿಲ್ಲಾ! ಅದೆಲ್ಲದರ ಫಲವಾಗಿ ನಿನ್ನೊಳಗೆ ಒಂದು ವಿಚಾರವು ಮೂಡಿಲ್ಲವೇ? ಆ ಬೆಳಕಿನಲ್ಲಿ ನೀನು ಸಾಗು.ನಿನಗೆ ಅದೇ ದಾರಿ ತೋರಿಸುತ್ತದೆ. ತನ್ನ ಶಿಶ್ಯಯನ ಉನ್ನತಿಯನ್ನು ಕಂಡು ಇಲ್ಲಿಯವರಗೆ ಆಶ್ರಯಿಸಿದ್ದ ಗುರುವಿಗೆ ಆಗ ನಿಜವಾದ ಸಂತೋಷವಾಗುತ್ತದೆ.
ನಿನ್ನೊಳಗೆ ಇರುವ ಅವನನ್ನೆ ಮರೆತು ಅನ್ಯರಿಗೆ ಶರಣಾಗಿ ಹೋದೆ ಏಕೆ?||
ಇಷ್ಟು ದಿನ ಗುರುಗಳ ಮಾರ್ಗದರ್ಶನದಲ್ಲಿ ಬೆಳೆದ ನೀನು ನಿನ್ನೊಳಗಿನ ಬೆಳಕನ್ನು ಕಾಣುವ ಪ್ರಯತ್ನವನ್ನೇ ಮಾಡದೆ ಎಷ್ಟು ವರ್ಷಗಳು ಕಳೆದರೂ ಬೇರೆಯವರಿಗೆ ಶರಣಾಗಿಯೇ ಇದ್ದೀಯಲ್ಲಾ! ಇದು ನಿನಗೆ ತರವೇ? ಈಗಲಾದರೂ ನಿನ್ನೊಳಗಿನ ಅರಿವನ್ನು ತಿಳಿಯುವ ಪ್ರಯತ್ನವನ್ನು ಮಾಡು
ನೋಡು ನಿನ್ನೊಳಗೆ ನೋಡು ಜಗದೀಶ್ವರನ ಕರುಣಾನಿಧಿಯನ್ನು ನಿನ್ನೊಳಗೆ ನೋಡು|
ಈ ನುಡಿಯಲ್ಲೂ ನಿನ್ನೊಳಗಿನ ಅರಿವನ್ನು ನೋಡುವ ಪ್ರಯತ್ನವನ್ನು ಮಾಡು, ನಿನ್ನೊಳಗೇ ಭಗವಂತನಿದ್ದಾನೆಂಬುದನ್ನು ಒತ್ತಿ ಹೇಳುವ ಪ್ರಯತ್ನ ಮಾಡಲಾಗಿದೆ. ನಮ್ಮೊಳಗೆ ನಾವು ಭಗವಂತನನ್ನು ಕಾಣಬೇಕಾದರೆ ಅಂತರಂಗ ಶುದ್ಧಿ ಬೇಕು. ಅಂತರಂಗವನ್ನು ಶುದ್ಧಿ ಮಾಡಿಕೊಳ್ಳುವುದು ಹೇಗೆ ಎಂಬುದಕ್ಕೆ ಅರಿಶಡ್ವರ್ಗಗಳ ನಿಯಂತ್ರಣ, ಚತುರ್ವಿಧ ಪುರುಷಾರ್ಥಗಳ ಬಗ್ಗೆ ಗಮನ, ಇಂದ್ರಿಯಗಳ ಮೇಲೆ ಸಂಯಮ,....ಇತ್ಯಾದಿ ಚಿಂತನೆ ಮಾಡಬೇಕಾಗುತ್ತದೆ.
ಚೈತನ್ಯರೂಪಿಯನು, ಪ್ರಜ್ವಲಿಪ ಜ್ಯೋತಿಯನು, ನಿನ್ನೊಳಗೆ ಕಣ್ಣಿಟ್ಟು ಒಮ್ಮೆ ನೋಡು||
ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಎಲ್ಲರೂ ಚೈತನ್ಯ ಸ್ವರೂಪಿಗಳೆಂದು. ನಮ್ಮ ಚೈತನ್ಯದ ಅರಿವು ನಮಗಿದೆಯೇ? ನ್ಬಮ್ಮೊಳಗಿರುವ ಬೆಳಕನ್ನು ನಾವು ನೋಡಬಲ್ಲವೇ? ನಿನ್ನೊಳಗೆ ಕಣ್ಣಿಟ್ಟು ಒಮ್ಮೆ ನೋಡು-ಎಂಬ ಮಾತನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಳ್ಲಬೇಕು. ನನ್ನೊಳಗೆ ಕಣ್ಣಿಟ್ಟು ನೋಡುವುದಾದರೂ ಹೇಗೆ? ನಮ್ಮ ಕಣ್ಣಿನ ದೃಷ್ಟಿ ನೋಡುವುದೆಲ್ಲಾ ಹೊರಗಿನ ಪ್ರಪಂಚವನ್ನು. ಒಳಗಿನ ಪ್ರಪಂಚವನ್ನು ನೋಡುವುದಾದರೂ ಹೇಗೆ? ಅದಕ್ಕೆ ಬೇಕು ಅಂತ:ಚ್ಛಕ್ಷು. ಅದಕ್ಕೆ ಒಳಗಣ್ಣು ಬೇಕು. ಧ್ಯಾನದ ಸ್ಥಿತಿಯಲ್ಲಿ ಒಳಗಣ್ಣು ತೆರೆದೀತು. ಅದಕ್ಕೆ ನಿತ್ಯ ಸಾಧನೆ ಬೇಕು.

Rating
No votes yet

Comments

Submitted by nageshamysore Fri, 12/20/2013 - 04:55

ನಮಸ್ಕಾರ ಶ್ರೀಧರ್, ಕೆಲವರಿಗೆ ಸೃಷ್ಟಿಸುವುದರಲ್ಲಿ ಇರುವ ಆಸಕ್ತಿ ಪೋಷಿಸುವುದರಲ್ಲಿ ಇರುವುದಿಲ್ಲ. ಬ್ರಹ್ಮ ಸೃಷ್ಟಿಸಲಷ್ಟೆ ಇದ್ದಂತೆ, ವಿಷ್ಟು ಸ್ಥಿತಿಪಾಲನೆಗೆ ಹಾಗೆ ಲಯವಾಗಿಸೆ ಶಿವ. ಈ ಮೂರು ಗುಣಗಳು ಒಬ್ಬರಲ್ಲೆ ಇರುವುದು ಅಪರೂಪ (ಶ್ರೀಧರ ಬಂಡ್ರಿಯವರನ್ನು ಕೇಳಿದರೆ ಬರಿ ಪರಬ್ರಹ್ಮಕೆ ಮಾತ್ರ ಇದು ಸಾಧ್ಯ ಅನ್ನುತ್ತರೆ:-) ) ನನಗೂ ಬರೆಯುವತನಕ ಇದ್ದ ಆಸಕ್ತಿ, ಒಂದು ಆವೃತ್ತಿ ಮುಗಿಸುತ್ತಿದ್ದಂತೆ ಅರ್ಧಕರ್ಧ ಬತ್ತಿ ಹೋಗುತ್ತದೆ (ಬಹುಶಃ ಮನದ ಭಾವಕ್ಕೆ ಪದ ರೂಪ ಕೊಟ್ಟ ತೃಪ್ತಿ ಆ ತುಡಿತದ ಒತ್ತಡ ಇಲ್ಲಾವಾಗಿಸುತ್ತದೇನೊ) - ಹೀಗಾಗಿ ತಿದ್ದುವುದರಲ್ಲಿ ನಾನೂ ಬಲು 'ವೀಕು' ಮತ್ತು ತಿದ್ದುವಿಕೆ ಸಾಧಾರಣ ಬರೆಯುವುದಕ್ಕಿಂತ ಹೆಚ್ಚು ಸಮಯ ಬೇಡುತ್ತದೆ ಕೂಡ! ಹಾಗೆ ನಾ ಬಲ್ಲ ಕೆಲವರನ್ನು ನೋಡಿದ್ದೇನೆ - ಎಂತಹ ಹದ್ದಿನ ಕಣ್ಣು ಎಂದು ಅಚ್ಚರಿಯಾಗುವಷ್ಟರ ಮಟ್ಟಿಗೆ ತಪ್ಪು ಹುಡುಕುತ್ತಾರೆ - ಬಹುಶಃ ಅವರಿಗೆ ತಿದ್ದುವಿಕೆಯೆ ಪ್ರಿಯ. ಹೀಗಾಗಿ ಸಾಧ್ಯವಿದ್ದಷ್ಟು ಮೊದಲ ಆವೃತ್ತಿಯೆ ಚೆನ್ನಾಗಿರುವಂತೆ ಯತ್ನಿಸಿದರೆ, ತಪ್ಪುಗಳ ಸಂಖ್ಯೆ ಕಡಿಮೆಯಾದೀತೊ ಏನೊ?

Submitted by hariharapurasridhar Fri, 12/20/2013 - 07:11

In reply to by nageshamysore

ಬಹುಷ: ಹೆಚ್ಚು ತಪ್ಪು ಇರಬಹುದು. ನನ್ನ ಸಮಸ್ಯೆ ಹೇಳಿ ಬಿಡಲೇ? ಸಾಮಾನ್ಯವಾಗಿ ನಾನು ಪತ್ರಿಕೆಗೆ ಬರೆಯುವ ರೆಗ್ಯುಲರ್ ಬರಹವನ್ನು ನಿದ್ರೆಗೆಟ್ಟಾದರೂ ತಿದ್ದಿ ಮೇಲ್ ಮಾಡುವೆ. ಆದರೆ ಯಾವುದೋ ಸಮಯದಲ್ಲಿ ಇದ್ದಕ್ಕಿದ್ದಂತೆ ಮನದಲ್ಲಿ ಸುಳಿದಾಡಿದ ಭಾವನೆಯನ್ನು ಇಲ್ಲಿ ಹಂಚಿಕೊಂಡು ಬಿಡುವೆ. ಈ ಕೆಲಸಕ್ಕೆ ನಾನು ಹೆಚ್ಚು ಸಮಯ /ಪರಿಶ್ರಮ ಎರಡನ್ನೂ ಹಾಕುವುದಿಲ್ಲ. ಕಾರಣ ಇದಕ್ಕಿಂತಲೂ ಹೆಚ್ಚು ಮಾಡ ಬೇಕಾದ್ದು ಬೇರೆ ಇರುತ್ತೆ. ತಪ್ಪು ತಿಳಿಯಬೇಡಿ. ಇಲ್ಲಿ ಪ್ರಕಟಿಸಿದ ಮೇಲೆ ಯಾವಾಗಲೋ ಒಮ್ಮೆ ಇಣುಕಿದಾಗ ಯಾರಾದರೂ ಕಾಮೆಂಟಿಸಿದ್ದರೆ ಅದರಲ್ಲಿ ನಾನು ತಿದ್ದಿಕೊಳ್ಳಬೇಕಾದ್ದು ಇದ್ದರೆ ಸ್ವೀಕರಿಸುವೆ. ಹಿಂದೆ ಸಂಪದದಲ್ಲಿ ಚರ್ಚೆ ಮಾಡುವುದರಲ್ಲಿ ಬಹಳ ಸಮಯ ಹೋಗಿಬಿಡುತ್ತಿತ್ತು. ನಿಜವಾಗಲೂ ನನಗೆ ಈಗ ಅಷ್ಟು ಸಮಯವಿಲ್ಲ. ಆದರೂ ಯಾವಾಗಲಾದರೊಮ್ಮೆ ನಿಮ್ಮನ್ನೆಲ್ಲಾ ನೋಡಲು ಇಲ್ಲಿ ಬರುವೆ. ನಿಮ್ಮ ಮತ್ತು ಶ್ರೀಧರ್ ಭಂಡ್ರಿಯವರ ಬಿಚ್ಚು ಮಾತುಗಳು ಇಷ್ಟವಾಯ್ತು. ನಮಸ್ಕಾರ.