೧೮೯. ಲಲಿತಾ ಸಹಸ್ರನಾಮ ೮೮೨ರಿಂದ ೮೯೦ನೇ ನಾಮಗಳ ವಿವರಣೆ

೧೮೯. ಲಲಿತಾ ಸಹಸ್ರನಾಮ ೮೮೨ರಿಂದ ೮೯೦ನೇ ನಾಮಗಳ ವಿವರಣೆ

                                                                    ಲಲಿತಾ ಸಹಸ್ರನಾಮ ೮೮೨-೮೯೦

Yajña-kartrī यज्ञ-कर्त्री (882)

೮೮೨. ಯಜ್ಞ-ಕರ್ತ್ರೀ

           ಯಜ್ಞಕರ್ತ್ರೀ ಎಂದರೆ ದೇವಿಯು ಯಜಮಾನನ ಪತ್ನಿಯ ಸ್ವರೂಪದಲ್ಲಿದ್ದಾಳೆ ಎಂದರ್ಥ. ಯಜಮಾನ ಎಂದರೆ ಯಾರು ಯಜ್ಞವನ್ನು ಕೈಗೊಳ್ಳುತ್ತಾರೋ ಅವನು ಅಥವಾ ಯಾರಿಗಾಗಿ ಯಜ್ಞವು ನಿರ್ವಹಿಸಲ್ಪಡುತ್ತಿದೆಯೋ ಅವನು ಅಥವಾ ಯಾರು ಯಜ್ಞಗಳ ವೆಚ್ಚವನ್ನು ಭರಿಸುತ್ತಾನೆಯೋ ಅವನು. ಯಜಮಾನನ ಪತ್ನಿಯು ಯಜ್ಞಕ್ರಿಯೆಗಳಲ್ಲಿ ಮಹತ್ವದ ಸ್ಥಾನವನ್ನು ಹೊಂದಿರುತ್ತಾಳೆ. ಯಜಮಾನನ ಮನೆಯಲ್ಲಿ ಮೂರು ವಿಧವಾದ ಅಗ್ನಿಗಳನ್ನು ಸ್ಥಾಪಿಸಲಾಗಿರುತ್ತದೆ. ಅವುಗಳೆಂದರೆ ”ಗಾರ್ಹಪತ್ಯ’ - ಇದು ಗೃಹಕ್ಕೆ ಸಂಭಂದಿಸಿದ ಅಗ್ನಿ; ಎರಡನೆಯದು ’ಆಹವನೀಯ’ ಇದರಲ್ಲಿ ಆಹುತಿಗಳನ್ನು ಅರ್ಪಿಸಲಾಗುತ್ತದೆ; ಮತ್ತು ಮೂರನೆಯದು ದಕ್ಷಿಣಾಗ್ನಿ - ಇದನ್ನು ಮನೆಯ ದಕ್ಷಿಣದ ಮೂಲೆಯಲ್ಲಿರಿಸಲಾಗಿರುತ್ತದೆ. ಎಲ್ಲಾ ಮೂರು ವಿಧವಾದ ಅಗ್ನಿಗಳನ್ನು ಮಣ್ಣಿನಿಂದ ತಯಾರಿಸಲ್ಪಟ್ಟ ಯಜ್ಞವೇದಿಕೆಗಳಲ್ಲಿ ಇರಿಸಲಾಗಿರುತ್ತದೆ. ಯಾರು ಈ ಮೂರೂ ವಿಧವಾದ ಅಗ್ನಿಗಳನ್ನು ನಿರ್ವಹಣೆ ಮಾಡುತ್ತಾರೋ ಅವರನ್ನು ಅಗ್ನಿಹೋತ್ರಿಗಳೆಂದು ಕರೆಯುತ್ತಾರೆ. ಯಜಮಾನನ ಪತ್ನಿಯೂ ಸಹ ಯಜಮಾನನ ಅಲ್ಪಕಾಲೀನ ಅನುಪಸ್ಥಿತಿಯಲ್ಲಿ ಗಾರ್ಹಪತ್ಯಾಗ್ನಿಯನ್ನು ನಿರ್ವಹಿಸುವ ಅಧಿಕಾರವನ್ನು ಹೊಂದಿರುತ್ತಾಳೆ.

          ಯಜ್ಞವನ್ನು ಕೈಗೊಳ್ಳುವವನನ್ನು ಸಾಕ್ಷಾತ್ ಶಿವನೆಂದೇ ಪರಿಗಣಿಸಲಾಗುತ್ತದೆ. ಅವನ ಹೆಂಡತಿಯು ಶಕ್ತಿಯಾಗಿದ್ದಾಳೆ.

Yajamāna-svarūpiṇī यजमान-स्वरूपिणी (883)

೮೮೩. ಯಜಮಾನ-ಸ್ವರೂಪಿಣೀ

            ದೇವಿಯು ಯಜಮಾನನ ಸ್ವರೂಪದಲ್ಲಿದ್ದಾಳೆ. ಶಿವನ ಎಂಟು ರೂಪಗಳಲ್ಲಿ ರುದ್ರ ರೂಪವು ಅಗ್ನಿಯ ಸ್ವರೂಪದಲ್ಲಿರುತ್ತದೆ. ಯಜ್ಞ-ರೂಪಾ - ನಾಮ ೭೬೯ರಲ್ಲಿ, ದೇವಿಯು ಸ್ವಯಂ ಯಜ್ಞವೇ ಆಗಿದ್ದಾಳೆ ಎಂದು ಹೇಳಲಾಗಿತ್ತು.

            ಕೃಷ್ಣನು ಭಗವದ್ಗೀತೆಯಲ್ಲಿ (೯.೨೪), "ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ l अहं हि सर्वयज्ञानां भोक्ता च प्रभुरेव च l ಅಂದರೆ ನಾನು ಭೋಕ್ತೃವೂ (ಅನುಭವಿಸುವವನೂ) ಮತ್ತು ಎಲ್ಲಾ ಯಜ್ಞಗಳ ಪ್ರಭುವೂ ಹೌದು" ಎಂದು ಹೇಳಿದ್ದಾನೆ. ವಿಷ್ಣು ಸಹಸ್ರನಾಮದಲ್ಲಿ ಯಜ್ಞವನ್ನು ತಿಳಿಸುವ ಅನೇಕ ನಾಮಗಳಿವೆ.

ಇನ್ನಷ್ಟು ವಿವರಗಳು: ಶಿವನ ಎಂಟು ರೂಪಗಳೆಂದರೆ - ಶರ್ವ - ಭೂಮಿ; ಭವ- ನೀರು; ರುದ್ರ-ಅಗ್ನಿ; ಉಗ್ರ - ವಾಯು; ಭೀಮ - ಆಕಾಶ; ಪಶುಪತಿ - ಆತ್ಮ; ಈಶಾನ - ಸೂರ್ಯ; ಮತ್ತು ಮಹದೇವ - ಚಂದ್ರ

Dharmā-dhārā धर्मा-धारा (884)

೮೮೪. ಧರ್ಮ-ಧಾರಾ

           ಧರ್ಮ ಎನ್ನುವುದು ಶಾಸ್ತ್ರವಿಹಿತ ಜೀವನ ಪದ್ಧತಿ. ಒಂದು ಸ್ಥಳದಲ್ಲಿನ ಧರ್ಮವು ಮತ್ತೊಂದು ಸ್ಥಳದಲ್ಲಿನ ಧರ್ಮಕ್ಕೆ ಹೊಂದಾಣಿಕೆಯಾಗದೇ ಹೋಗಬಹುದು. ಧರ್ಮದ ಮೂಲವು ಪರಂಪರಾನುಗತ ಸಾಂಪ್ರದಾಯಿಕ ಆಚರಣೆಗಳು ಮತ್ತು ಒಂದು ಸ್ಥಳದ ಜೈವಿಕ ಪರಿಸರಗಳನ್ನು ಆಧರಿಸಿರುತ್ತದೆ. ಯಾವುದೇ ವಿಧವಾದ ದುಷ್ಟ ಗುಣಗಳಿಲ್ಲದೆ ಜೀವನ ನಡೆಸಿದವರ ರೀತಿಯೇ ಧರ್ಮ ಎಂದು ವಿವರಿಸಲಾಗುತ್ತದೆ ಮತ್ತು ಋಷಿ ಮುನಿಗಳು ಅನುಸರಿಸಿದ ಜೀವನ ಪದ್ಧತಿಯೇ ಧರ್ಮವಾಗಿದೆ. ಮಹರ್ಷಿಗಳಾದ ಮನು, ಆಪಸ್ತಂಭ, ಪರಾಶರ, ನಾರದ ಮೊದಲಾದರು ಸ್ವಲ್ಪ ಹೆಚ್ಚೂ ಕಡಿಮೆ ಧರ್ಮವನ್ನು ಏಕಧಾಟಿಯಲ್ಲಿ ವಿವರಿಸಿದ್ದಾರೆ. ಶಾಸ್ತ್ರದಲ್ಲಿ ವಿಧಿಸಿರುವ ಮಾರ್ಗದರ್ಶಕಗಳನ್ನು ಅನುಸರಿಸದೇ ಆಚರಿಸುವ ಧರ್ಮವು ಕಾಮಿತ ಫಲಗಳನ್ನು ಕೊಡದು ಎಂದು ಹೇಳಲಾಗುತ್ತದೆ.

          ವಿಷ್ಣು ಸಹಸ್ರನಾಮದ ಉತ್ತರ ಭಾಗದ ಅಥವಾ ಫಲಶ್ರುತಿಯು (ಶ್ಲೋಕ ೧೭) ಹೀಗೆ ಹೇಳುತ್ತದೆ, “ಆಚಾರ ಪ್ರಭವೋ ಧರ್ಮೋ ಧರ್ಮಸ್ಯ ಪ್ರಭುರಚ್ಯುತಃ” ಅಂದರೆ ಧರ್ಮವು ಎಲ್ಲಾ ಶಾಸ್ತ್ರಗಳಿಗೂ ಮೂಲವಾಗಿದೆ ಎಂದು ಹೇಳಲಾಗಿದೆ. ಆಚಾರ ಎಂದರೆ ರೂಢಿ, ಪದ್ಧತಿ, ಸಂಪ್ರದಾಯ, ಪರಂಪರೆ, ಅನಾದಿಕಾಲದಿಂದಲೂ ಪಾಲಿಸಿಕೊಂಡು ಬರುತ್ತಿರುವ ಆಚರಣೆ ಮೊದಲಾದವುಗಳು. ಆಚಾರವು ಧಾರ್ಮಿಕ ಕಟ್ಟಳೆ ಅಥವಾ ನೀತಿ ನಿಯಮಗಳಿಗೆ ಅಡಿಪಾಯವಾಗಿದೆ. ಧರ್ಮವು ಸಂಪ್ರದಾಯ ಮತ್ತು ಅದರ ಆಚರಣೆಯಿಂದ ಉದ್ಭವಿಸುತ್ತದೆ. ಧರ್ಮವು ಆಚಾರದಿಂದ ಉಗಮವಾಗುತ್ತದೆ ಮತ್ತು ಧರ್ಮದ ಪ್ರಭುವು ವಿಷ್ಣು ಅಥವಾ ಅಚ್ಯುತನಾಗಿದ್ದಾನೆ.

         ಮಹಾನಾರಾಯಣ ಉಪನಿಷತ್ತು, “ಎಲ್ಲವೂ ಧರ್ಮದಲ್ಲಿ ಸ್ಥಾಪಿತವಾಗಿದೆ” ಎಂದು ಹೇಳುತ್ತದೆ.

        ಈ ನಾಮವು ದೇವಿಯು ಧರ್ಮದ ರೂಪದಲ್ಲಿದ್ದಾಳೆಂದು ಹೇಳುತ್ತದೆ.

Dhanādhyakṣā धनाध्यक्षा (885)

೮೮೫. ಧನಾಧ್ಯಕ್ಷಾ

          ಧನಾಧ್ಯಕ್ಷ ಎಂದರೆ ಸಂಪತ್ತಿನ ಅಧಿದೇವತೆಯಾದ ಕುಬೇರ. ಯಕ್ಷರು ಅತಿಮಾನವರಾಗಿದ್ದು ಅವರನ್ನು ಕುಬೇರನ ಪರಿಚಾರಕರು ಎಂದು ಪರಿಗಣಿಸಲಾಗುತ್ತದೆ. ಕುಬೇರನು ಯಕ್ಷರ ಪ್ರಮುಖನಾಗಿದ್ದು ಅವನು ದೇವಿಯ ಹನ್ನೆರಡು ಮಹಾನ್ ಪೂಜಕರಲ್ಲಿ ಒಬ್ಬನಾಗಿದ್ದಾನೆ. ಪೂಜಿಸುವವರು ಮತ್ತು ಪೂಜೆಗೊಳಪಡುವವರಲ್ಲಿ ಭೇದವು ಇಲ್ಲದೇ ಇರುವುದರಿಂದ ದೇವಿಯನ್ನು ಧನಾಧ್ಯಕ್ಷಾ ಅಂದರೆ ಸಂಪತ್ತಿನ ಅಧಿದೇವತೆ ಎಂದು ಕರೆಯಲಾಗಿದೆ.

Dhana-dhānya-vivardhinī धन-धान्य-विवर्धिनी (886)

೮೮೬. ಧನ-ಧಾನ್ಯ-ವಿವರ್ಧಿನೀ

          ದೇವಿಯು ಧನ-ಧಾನ್ಯಗಳ ಸಮೃದ್ಧಿಯನ್ನು ಉಂಟು ಮಾಡುವವಳಾಗಿದ್ದಾಳೆ. ಇದು ಅವಳ ಭಕ್ತರಿಗೆ ಅಯಾಚಿತವಾಗಿ ಉಂಟಾಗುತ್ತದೆ.

Vipra-priyā विप्र-प्रिया (887)

೮೮೭. ವಿಪ್ರ-ಪ್ರಿಯಾ

           ವಿಪ್ರ ಎಂದರೆ ಜ್ಞಾನಿಗಳು. ದೇವಿಯು ಜ್ಞಾನಿಗಳು ಮತ್ತು ಬುದ್ಧಿವಂತರನ್ನು ಇಷ್ಟಪಡುತ್ತಾಳೆ. ಆತ್ಮಸಾಕ್ಷಾತ್ಕಾರಕ್ಕೆ ಕೇವಲ ಜ್ಞಾನವೊಂದೇ ಅವಶ್ಯವಾಗಿದೆ.

Vipra-rūpā विप्र-रूपा (888)

೮೮೮. ವಿಪ್ರ-ರೂಪಾ

          ಈ ನಾಮವು ಹಿಂದಿನ ನಾಮದ ಮುಂದುವರೆದ ಭಾಗವಾಗಿದೆ. ದೇವಿಯು ಜ್ಞಾನಿಗಳನ್ನು ಇಷ್ಟಪಡುತ್ತಾಳೆಂದು ಹೇಳಿದ ನಂತರ ಈ ನಾಮವು ಇನ್ನೊಂದು ಹೆಜ್ಜೆ ಮುಂದುವರೆದು ದೇವಿಯು ಜ್ಞಾನದ ಸ್ವರೂಪವೇ ಆಗಿದ್ದಾಳೆ ಎಂದು ಹೇಳುತ್ತದೆ. ಯಾರಲ್ಲಿ ಯಾವ ಗುಣವಿರುತ್ತದೆಯೋ ಅವರು ಆ ಗುಣವನ್ನು ಇಷ್ಟಪಡುತ್ತಾರೆ.

         ಯಾರು ಕೆಲವೊಂದು ಆಚರಣೆಗಳನ್ನು ಕೈಗೊಳ್ಳುವ ಮೂಲಕ ಪರಿಶುದ್ಧನಾಗಿದ್ದಾನೋ, ವೇದವನ್ನು ಅರಿತವನೋ, ಶಾಸ್ತ್ರಗಳನ್ನು ತಿಳಿದವನೋ, ಧರ್ಮ ಮತ್ತು ಶಾಸ್ತ್ರಗಳನ್ನು ಅನುಸರಿಸುವವನೋ, ಯಾರು ತನ್ನ ಮನಸ್ಸು ಮತ್ತು ಇಂದ್ರಿಯಗಳನ್ನು ನಿಗ್ರಹದಲ್ಲಿಟ್ಟುಕೊಂಡಿರುತ್ತಾನೆಯೋ ಅವನನ್ನೇ ಬ್ರಾಹ್ಮಣನೆಂದು ಕರೆಯಲಾಗುತ್ತದೆ. ದೇವಿಯು ಅಂತಹ ಬ್ರಾಹ್ಮಣರನ್ನು ಹೆಚ್ಚು ಜ್ಞಾನವಂತರನ್ನಾಗಿ ಮಾಡುತ್ತಾಳೆ. ಒಂದು ಹಸು ಮತ್ತು ಬ್ರಾಹ್ಮಣನಿಗೆ ಹೋಲಿಕೆಯನ್ನು ಮಾಡಲಾಗುತ್ತದೆ. ಒಂದು ಹಸುವು ಮೇವಿನಿಂದ ಪೋಷಿಸಲ್ಪಟ್ಟರೆ ಒಬ್ಬ ಬ್ರಾಹ್ಮಣನು ಜಪ ಮತ್ತು ಹೋಮಗಳಿಂದ ಪೋಷಿಸಲ್ಪಡುತ್ತಾನೆ. ಬ್ರಾಹ್ಮಣನ ಒಂದು ಮೂಲಭೂತ ಗುಣವು ಇತರರ ಒಳಿತಿಗಾಗಿ ಪೂಜಾಚರಣೆಗಳನ್ನು ಮಾಡುವುದಾಗಿದೆ. ಅವರು ಪ್ರವಚನಗಳ ಮೂಲಕ ಇತರರಿಗೆ ಜ್ಞಾನ ಪ್ರಸರಣ ಮಾಡಬೇಕು. ಕೃಷ್ಣನು ಭಗವದ್ಗೀತೆಯಲ್ಲಿ (೪.೧೩), "ಚಾತುರ್ವಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ  चातुर्वण्यं मया सृष्टं गुणकर्मविभागशः ಅಂದರೆ ಸಮಾಜದಲ್ಲಿನ ನಾಲ್ಕು ವರ್ಣಗಳನ್ನು ಅವರ ಗುಣ ಮತ್ತು ಅನುಸರಿಸುವ ವೃತ್ತಿಯನ್ನು ಆಧರಿಸಿ ನಾನೇ ವಿಭಾಗಿಸಿದೆ" ಎಂದು ಹೇಳುತ್ತಾನೆ. ಕೃಷ್ಣನು ಈ ವಿಧವಾದ ವರ್ಣ ವಿಭಜನೆಯ ಕುರಿತಾಗಿ ಭಗವದ್ಗೀತೆಯಲ್ಲಿ ಅನೇಕ ಕಡೆಗಳಲ್ಲಿ ಹೇಳಿದ್ದಾನೆ. ಈ ವರ್ಣ ಪದ್ಧತಿಯು ಮೂಲಭೂತವಾಗಿ ಪ್ರಧಾನವಾಗಿರುವ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಗುಣಗಳನ್ನಾಧಿರಿಸಿ ಮಾಡಲಾಗಿದೆ. ಒಬ್ಬನು ಹೆಚ್ಚು ಸಾತ್ವಿಕ ಪ್ರಕೃತಿಯನ್ನು ಹೊಂದಿದ್ದರೆ ಬ್ರಾಹ್ಮಣನಾಗುವುದಕ್ಕೆ ಅದು ಒಂದು ಪ್ರಧಾನ ಗುಣವಾಗುತ್ತದೆ.

          ಒಬ್ಬ ನಿಜವಾದ ಬ್ರಾಹ್ಮಣನ ಮಾತುಗಳು ಪಾಪಿಯನ್ನು ಪರಿಶುದ್ಧಗೊಳಿಸುತ್ತವೆ ಎಂದು ಹೇಳಲಾಗುತ್ತದೆ (ಬಹುಶಃ ಬ್ರಹ್ಮಸಾಕ್ಷಾತ್ಕರವನ್ನು ಹೊಂದುವ ಹೊಸ್ತಿಲಿನಲ್ಲಿರುವವರ ಆಶೀರ್ವಾದವಿರಬೇಕು). ಅವರು ತಮ್ಮನ್ನು ತಾವು ಅತಿಶಯವಾಗಿ ಹೊಗಳಿಕೊಳ್ಳಬಾರದು ಏಕೆಂದರೆ ಅದು ಅಹಂಕಾರಕ್ಕೆಡೆ ಮಾಡಿ ಕೊಡಬಹುದು. ಒಬ್ಬ ಬ್ರಾಹ್ಮಣನನ್ನು ಪೂಜಿಸಿದರೆ ಅವನು ಹಾಲಿರುವ ಹಸುವಿನಂತಾಗುತ್ತಾನೆ. ಬ್ರಾಹ್ಮಣರೆಂದರೆ ಒಂದು ಸಮುದಾಯವಾಗಲಿ, ಜಾತಿ ಅಥವಾ ಪಂಗಡವಾಗಲಿ ಅಲ್ಲ. ಬ್ರಾಹ್ಮಣ ಎನ್ನುವುದು ಜ್ಞಾನವನ್ನು ಆಧರಿಸಿದೆ ಮತ್ತು ಅದರ ಗುಣಮಟ್ಟವನ್ನಾಧರಿಸಿದೆ. ಯಾರು ಪರಬ್ರಹ್ಮದ ಹತ್ತಿರದಲ್ಲಿದ್ದಾರೋ ಅವರು ಬ್ರಾಹ್ಮಣರು ಮತ್ತು ಅವರ ಮುಂದಿನ ಹಂತವು ಬ್ರಹ್ಮದೊಳಗೆ ಐಕ್ಯವಾಗುವುದಾಗಿದೆ.

Viśva-bhramaṇa-kāriṇī विश्व-भ्रमण-कारिणी (889)

೮೮೯. ವಿಶ್ವ-ಭ್ರಮಣ-ಕಾರಿಣೀ

           ವಿಶ್ವ ಎಂದರೆ ಸಮಸ್ತ ಮತ್ತು ಈ ಸಂದರ್ಭದಲ್ಲಿ ಎಲ್ಲಾ ಪ್ರಪಂಚಗಳು ಅಥವಾ ಬ್ರಹ್ಮಾಂಡಗಳು (ಬ್ರಹ್ಮಾಂಡಗಳೆಂದರೆ ಒಂದಕ್ಕಿಂತ ಹೆಚ್ಚು ಪ್ರಪಂಚಗಳು ಅಥವಾ ಲೋಕಗಳು). ಮಾನವನ ಬುದ್ಧಿಮತ್ತೆಗೆ ನಿಲುಕದ ಅನೇಕಾನೇಕ ಲೋಕಗಳಿವೆ. ಅನೇಕ ಪ್ರಪಂಚಗಳಿದ್ದಾಗ್ಯೂ ಸಹ ಪರಬ್ರಹ್ಮವು ಒಂದೇ ಆಗಿದೆ. ದೇವಿಯನ್ನು ಯಾವಾಗಲೂ ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕೀ ಅಂದರೆ ಅನೇಕಾನೇಕವಾಗಿರುವ ಬ್ರಹ್ಮಾಂಡಗಳನ್ನು ಸೃಷ್ಟಿಸಿದಾಕೆ ಮತ್ತು ಅದನ್ನು ಪರಿಪಾಲಿಸುವವಳು ಎನ್ನುವುದಾಗಿದೆ. ವಿವಿಧ ಪ್ರಪಂಚಗಳಲ್ಲಿ ದೇವಿಯು ಪುರಷ ಆಥವಾ ಆತ್ಮದೊಂದಿಗೆ ಸಮಾಗಮಗೊಂಡು ಪ್ರಕೃತಿಯ ರೂಪವಾಗಿ ಆವಿರ್ಭವಿಸುತ್ತಾಳೆ.

          ಶ್ವೇತಾಶ್ವತರ ಉಪನಿಷತ್ತು (೧.೧.೧) ಹೀಗೆ ಪ್ರಶ್ನಿಸುವುದರೊಂದಿಗೆ ಆರಂಭಗೊಳ್ಳುತ್ತದೆ, "ಬ್ರಹ್ಮವು ಈ ಪ್ರಪಂಚಕ್ಕೆ ಕಾರಣವೇ? ನಾವು ಎಲ್ಲಿಂದ ಬಂದಿದ್ದೇವೆ?". ಇದೇ ಉಪನಿಷತ್ತು ಈ ಪ್ರಶ್ನೆಗೆ ಉತ್ತರವನ್ನು ಕಡೆಯ ಶ್ಲೋಕದಲ್ಲಿ (೬.೧) ಹೇಳಿ ಮುಕ್ತಾಯಗೊಳ್ಳುತ್ತದೆ. "ಕೆಲವು ವಿದ್ವಾಂಸರು ಈ ಪ್ರಪಂಚವು ಪ್ರಕೃತಿ ಸಹಜವಾಗಿ ಅಸ್ತಿತ್ವಕ್ಕೆ ಬಂತು ಎಂದು ಭಾವಿಸುತ್ತಾರೆ, ಅವರು ಹೇಳಿರುವುದು ತಪ್ಪು. ಕೆಲವೊಬ್ಬರು ಕಾಲವು ಇದಕ್ಕೆ ಕಾರಣ ಎನ್ನುತ್ತಾರೆ ಎಂದು ಅವರೂ ಸಹ ಹೇಳುವುದು ತಪ್ಪು. ಪರಬ್ರಹ್ಮದ ಶಕ್ತಿಯು ಈ ಬ್ರಹ್ಮಚಕ್ರವು ಸುತ್ತುವಂತೆ ಮಾಡಿದೆ".

          ಶ್ರೀಕೃಷ್ಣನು ಭಗವದ್ಗೀತೆಯಲ್ಲಿ (೧೮.೬೧), "ಬ್ರಹ್ಮವು ಎಲ್ಲಾ ಜೀವಿಗಳ ಹೃದಯದಲ್ಲಿ ನಿವಸಿಸುತ್ತದೆ. ಅವರವರ ಕರ್ಮಕ್ಕನುಗುಣವಾಗಿ ತನ್ನ ಮಾಯೆಯ ಶಕ್ತಿಯಿಂದ ದೇಹವನ್ನೇ ವಾಹನವಾಗಿಸಿ ಅವರನ್ನು ಸುತ್ತುವಂತೆ ಮಾಡುತ್ತಾನೆ" ಎಂದು ಹೇಳುತ್ತಾನೆ.

          ವಿಷ್ಣು ಸಹಸ್ರನಾಮದ ಮೊದಲನೇ ನಾಮವು ವಿಶ್ವಮ್ ಆಗಿದ್ದು ಅದೂ ಸಹ ಇದುವರೆಗೆ ಚರ್ಚಿಸಿದ ಅರ್ಥವನ್ನೇ ಕೊಡುತ್ತದೆ.

          ಈ ನಾಮವು, ದೇವಿಯು ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ಚಕ್ರದ ಪರಿಭ್ರಣದಂತೆ (ಸುತ್ತುವಿಕೆಯಂತೆ) ಉಂಟು ಮಾಡುತ್ತಾಳೆ. ಒಂದು ವಿಶ್ವವು ಸೃಷ್ಟಿಯಾದ ನಂತರ ಅದು ಪರಿಪಾಲಿಸಲ್ಪಡಬೇಕು ಮತ್ತು ಅಂತಿಮವಾಗಿ ಅದು ಅವಳಲ್ಲಿ ಲೀನವಾಗಬೇಕು, ಎಂದು ಹೇಳುತ್ತದೆ.

Viśvagrāsā विश्वग्रासा (890)

೮೯೦. ವಿಶ್ವಗ್ರಾಸಾ

           ದೇವಿಯು ಲೋಕಗಳನ್ನು ಗ್ರಹಿಸುತ್ತಾಳೆ (ತಿನ್ನುತ್ತಾಳೆ/ನುಂಗುತ್ತಾಳೆ). ಇದು ಆಕೆಯ ಲಯದ ಕ್ರಿಯೆಯನ್ನು ಉಲ್ಲೇಖಿಸುತ್ತದೆ. ಇದರ ಕುರಿತಾಗಿ ಇದಾಗಲೇ ’ಮಹಾಗ್ರಾಸಾ’ದ (ನಾಮ ೭೫೨) ವಿವರಣೆಯಲ್ಲಿ ಚರ್ಚಿಸಲಾಗಿದೆ ಮತ್ತು ಅದನ್ನು ಇಲ್ಲಿ ಪುನಃ ಉಚ್ಛರಿಸಲಾಗುತ್ತಿದೆ.

           ಕಠೋಪನಿಷತ್ತು (೧.೨.೨೫), "ಮನುಜರಲ್ಲಿರುವ ಎಲ್ಲಾ ಅತ್ಯುತ್ತಮರು ಬ್ರಹ್ಮಕ್ಕೆ ಆಹಾರವಿದ್ದಂತೆ. ಮರಣವು ಎಲ್ಲರನ್ನೂ ಅಧಿಗಮಿಸುತ್ತದೆ ಆದರೂ ಮರಣವು ಬ್ರಹ್ಮಕ್ಕೆ ಕೇವಲ ಒಂದು ಉಪಸೇಚನ(ಉಪಾಹಾರ)ವಿದ್ದಂತೆ". (ಮರಣವು ಬ್ರಹ್ಮಕ್ಕೆ ಕೇವಲ ಒಂದು  ಉಪಸೇಚನ ಎನ್ನುವುದರ ಅರ್ಥ ಮರಣವನ್ನೂ ಸಹ ಪರಬ್ರಹ್ಮವು ನುಂಗುತ್ತದೆ ಎಂದು).

          ಬ್ರಹ್ಮಸೂತ್ರವೂ (೧.೨.೯) ಸಹ ಹೀಗೆ ಹೇಳುತ್ತದೆ. "ಅತ್ತಾ ಚರಾಚರ ಗ್ರಹಣಾತ್" ಅಂದರೆ ಚರಾಚರಗಳನ್ನು ತಿನ್ನುವುದು ಬ್ರಹ್ಮವೇ.

          ಹಿಂದಿನ ನಾಮದಲ್ಲಿ ಹೇಳಿದಂತೆ, ದೇವಿಯು ಈ ಪ್ರಪಂಚಗಳನ್ನು ಸರ್ವನಾಶ ಮಾಡುತ್ತಾಳೆ.

                                                                  ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 882 - 890 http://www.manblunder.com/2010/06/lalitha-sahasranamam-882-890.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by partha1059 Tue, 12/17/2013 - 20:03

ಯಜ್ಞ-ಕರ್ತ್ರೀ‍‍‍‍‍....
ಶ್ರೀಧರ‌ ಭಂಡ್ರಿಯವರೆ ಅದೇಕೊ ಈ ಪದದ‌ ಅರ್ಥವಿವರಣೆ ಮನಸಿಗೆ ಸಮಾದಾನ‌ ಅನ್ನಿಸುತ್ತಿಲ್ಲ !
ಪಾರ್ಥಸಾರಥಿ

@ಪಾರ್ಥರೆ, ನಿನ್ನೆ ರಾತ್ರಿಯೇ ನಿಮ್ಮ ಪ್ರಶ್ನೆಯನ್ನು ನೋಡಿದೆ, ಆಗ ಹೊಳದದ್ದು @ಸತೀಶ್ ಅವರು ಹೇಳಿದ ಉತ್ತರವೇ. ಅದೇ ಅರ್ಥ ಬರುವಂತೆ ವಿವರಣೆಯನ್ನು ಅಲ್ಪ-ಸ್ವಲ್ಪ ಮಾರ್ಪಾಟು ಮಾಡೋಣವೆಂದುಕೊಂಡಿದ್ದೆ; ಆದರೆ @ಗಣೇಶ್ ಅವರು ನನ್ನ ಸಮಸ್ಯೆಯನ್ನು ಸರಳವಾಗಿ ಬಗೆಹರಿಸಿದ್ದಾರೆ. ಆದ್ದರಿಂದ ಕಡೆಯ ಸಾಲನ್ನು ಕೆಳಗಿನಂತೆ ಬದಲಾಯಿಸಿಕೊಂಡು ಓದಬಹುದು.
ಯಜ್ಞವನ್ನು ಕೈಗೊಳ್ಳುವವನನ್ನು ಅಂದರೆ ಯಜ್ಞಕರ್ತೃವನ್ನು ಸಾಕ್ಷಾತ್ ಶಿವನೆಂದೇ ಪರಿಗಣಿಸಲಾಗುತ್ತದೆ, ಆದ್ದರಿಂದ ಅವನ ಹೆಂಡತಿಯಾದ ಶಕ್ತಿಯು ಯಜ್ಞಕರ್ತ್ರೀ ಆಗಿದ್ದಾಳೆ.

Submitted by sathishnasa Tue, 12/17/2013 - 21:42

"ಯಜ್ಞ-ಕರ್ತ್ರೀ" ಎಂದರೆ ಯಜ್ಞವನ್ನು ಮಾಡಿಸುವವಳು ಅಥವಾ ಯಜ್ಞಪ್ರೇರಕಳು ಎಂದು ಅರ್ಥೈಸಿಕೊಳ್ಳಬನಹುದೇನು ಇದು ನನ್ನ ಮನಸ್ಸಿಗೆ ಅನ್ನಿಸಿದ್ದು ಅಷ್ಟೆ ಸರಿಯೋ , ತಪ್ಪೋ ಗೊತ್ತಿಲ್ಲ ......ಸತೀಶ್

ಸತೀಶರೆ, ನಿಮ್ಮ ವಿವರಣೆಯೂ ಸರಿಯಿದೆ, ಏಕೆಂದರೆ ಒಂದು ನಾಮವನ್ನು ಹಲವಾರು ಕೋನಗಳಿಂದ ಅರ್ಥೈಸಬಹುದು.

Submitted by ಗಣೇಶ Tue, 12/17/2013 - 23:52

ಯಾರು ಯಜ್ಞವನ್ನು ಕೈಗೊಳ್ಳುತ್ತಾರೋ ಅವನು ಯಜಮಾನ ಅರ್ಥಾತ್ "ಸಾಕ್ಷಾತ್ ಶಿವ"-ಯಜ್ಞಕರ್ತ್ರ್. ಆತನ ಪತ್ನಿ "ಯಜ್ಞಕರ್ತ್ರೀ". ಸರಿಯಾಗಿದೆಯಲ್ಲಾ?

ಗಣೇಶ್‌ಜಿ,
ಕ್ಲಿಷ್ಟವಾಗಿದ್ದ ಪ್ರಶ್ನೆಗೆ ಸರಳ ಪರಿಹಾರ ಸೂಚಿಸಿದ್ದಕ್ಕೆ ಧನ್ಯವಾದಗಳು.
ಕೊನೆ ಹನಿ - ಅಷ್ಟಿಲ್ಲದೇ ಅಂಡಾಂಡ ಬ್ರಹ್ಮರ ಪಟ್ಟ ದೊರೆಯುತ್ತದೆಯೇ :)

Submitted by partha1059 Wed, 12/18/2013 - 08:58

ಶ್ರೀಧರ್ ರವರೆ ನಮಸ್ಕಾರ‌ ನೀವು ಹೇಳಿರುವಿರಿ ಅರ್ಥಮಾಡುವಾಗ‌ ಬೇರೆ ಬೇರೆ ರೀತಿ ಸಾದ್ಯವೆಂದು
ದಕ್ಷಬ್ರಹ್ಮ ಅಂದರೆ ದಾಕ್ಷಾಯಿಣಿಯ‌ ತಂದೆ ಮಾಡಿದ‌ ಯಜ್ನದಲ್ಲಿ ಆಹುತಿಯಾದವರು ಅಲ್ಲಿ ಯಜ್~ಜ ಮಾಡಿದವನ‌ ಪುತ್ರಿ ಆದ್ದರಿಂದ
ಯಜ್ಞ-ಕರ್ತ್ರೀ ಅನ್ನಬಹುದೇ........

ಪಾರ್ಥರೆ,
ದಾಕ್ಷಾಯಣಿ ಎನ್ನುವ ಹೆಸರು ಬಂದದ್ದು ಆಕೆ ದಕ್ಷನ ಮಗಳಾಗಿದ್ದರಿಂದ ಎನ್ನುವುದು ಸರ್ವವಿಧಿತ. ಆದರೆ ಅಲ್ಲಿ ದೇವಿಯನ್ನು ಯಜ್ಞಕರ್ತ್ರೀ ಎನ್ನುವುದು ಎರಡು ಕಾರಣಗಳಿಂದ ಸಾಧ್ಯವಿಲ್ಲ - ಮೊದಲನೆಯದು ದೇವಿಯು ಆ ಯಜ್ಞವು ನಾಶವಾಗುವುದಕ್ಕೆ ಕಾರಣವಾದಳು ಹಾಗಾಗಿ ಈ ಅರ್ಥ ಅಲ್ಲಿ ಸೂಕ್ತವೆನಿಸುವುದಿಲ್ಲ ಮತ್ತು ಎರಡನೆಯದಾಗಿ ಈ ನಾಮದ ವಿವರಣೆಯಲ್ಲಿ ಯಜಮಾನನ ಹೆಂಡತಿಯು ಯಜ್ಞಕರ್ತ್ರೀ ಎಂದು ಹೇಳಲಾಗಿರುವುದರಿಂದ ನೀವು ಹೇಳಿದ ವಿವರಣೆ ಸಮಂಜಸವೆನಿಸದು. ಪದದ ವ್ಯುತ್ಪತ್ತಿಯನ್ನು ತೆಗೆದುಕೊಂಡರೆ ನೀವು ಹೇಳಿದ್ದು ಒಂದು ವಿಧದಲ್ಲಿ ಸರಿಹೋಗಬಹುದು. ಆದ್ದರಿಂದ ನಾಮವನ್ನು ವಿಶ್ಲೇಷಿಸುವಾಗ ಸಂದರ್ಭವನ್ನೂ ಗಣನೆಗೆ ತೆಗೆದುಕೊಳ್ಳಬೇಕು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Wed, 12/18/2013 - 19:21

ಶ್ರೀಧರರೆ, "೧೮೯. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
.
ಲಲಿತಾ ಸಹಸ್ರನಾಮ ೮೮೨-೮೯೦
____________________________
.
೮೮೨. ಯಜ್ಞ-ಕರ್ತ್ರೀ
ಯಜ್ಞಾರ್ಥಿ ಯಜಮಾನನ ವಸತಿ, ಯಜ್ಞಕ್ರಿಯೆಗೆ ಸ್ಥಾಪಿಸಿದ ತ್ರಿವಿಧಾಗ್ನಿ
ಗೃಹಸಂಬಂಧಿ-ಗಾರ್ಹಪತ್ಯ, ಯಜಮಾನತಿಗು ಅಲ್ಪಾಧಿಕಾರವಿಹ ಅಗ್ನಿ
ಆಹುತಿಗರ್ಪಿಸೆ-ಆಹವನೀಯ, ದಕ್ಷಿಣಮೂಲೆಗೆ-ದಕ್ಷಿಣಾಗ್ನಿ ಯಜ್ಞವೇದಿಕೆ
ನಿರ್ವಾಹಕ ಅಗ್ನಿಹೋತ್ರಿ, ಯಜ್ಞಕರ್ತ ಶಿವ ಯಜ್ಞಕರ್ತ್ರಿಯು ಸತಿ ಲಲಿತೆ ||
.
೮೮೩. ಯಜಮಾನ-ಸ್ವರೂಪಿಣೀ
ಶರ್ವ-ಭೂಮಿ ಭವ-ನೀರು ರುದ್ರ-ಅಗ್ನಿ ಉಗ್ರ-ವಾಯು ಭೀಮ-ಆಕಾಶವಿರ್ಪ
ಪಶುಪತಿಯೆ-ಅತ್ಮ ಈಶಾನ-ಸೂರ್ಯ ಮಹದೇವ-ಚಂದ್ರ ಶಿವನೆಂಟು ರೂಪ
ರುದ್ರಾಗ್ನಿ ರೂಪದಲಿಹ ಶಿವ ಅಗ್ನಿ-ಯಜಮಾನನಾಗಿ ಯಜ್ಞ ನೆರವೇರಿಸಲಣಿ
ಶಕ್ತಿಶಿವ ಏಕತ್ವದೆ, ಯಜ್ಞಭೋಕ್ತೃ-ಪ್ರಭುವಾಗಿ ದೇವಿ ಯಜಮಾನ-ಸ್ವರೂಪಿಣೀ ||
.
೮೮೪. ಧರ್ಮ-ಧಾರಾ
ಧರ್ಮದ ಮೂಲಾ ಪರಂಪರೆ, ಸಂಪ್ರದಾಯ, ಆಚರಣೆ, ಜೈವಿಕ ಪರಿಸರ
ಶಾಸ್ತ್ರವಿಹಿತ ಜೀವನ ಪದ್ದತಿ, ದುಷ್ಟಗುಣವಿರದಾ ಜೀವನ-ಋಷಿಗಳ ತರ
ಶಾಸ್ತ್ರಮೂಲ ಧರ್ಮ, ರೂಢಿ-ಪದ್ದತಿ-ಸಂಪ್ರದಾಯ-ಪರಂಪರೆಯೆ ಆಚಾರ
ನೀತಿನಿಯಮಕೆ ಬುನಾದಿ ಹುಟ್ಟೆ ಧರ್ಮ, ವಿಷ್ಣುರೂಪಿ ಲಲಿತೆ ಧರ್ಮಧಾರ ||
.
೮೮೫. ಧನಾಧ್ಯಕ್ಷಾ 
ಯಕ್ಷರ ಪ್ರಮುಖ ಕುಬೇರ, ಪಂಚದಶಿಯಲಿ ದೇವಿಯನಾರಧಿಸುವ
ಪರಿಚಾರಕ ಯಕ್ಷಗಣ ಅತಿಮಾನವ ಜತೆ ಸಂಪತ್ತಿಗೊಡೆಯನಾದವ
ಅಸೀಮ ಸಂಪದಕಧಿಕಾರಿಯಾಗಿ, ದ್ವಾದಶ ಭಕ್ತರಲೊಬ್ಬನಿಹ ದೃಶ್ಯ
ಪೂಜಿತೆ ಪೂಜಿಪನಿಗೆಲ್ಲಿ ಭೇದ, ಕುಬೇರನಂತೆಯೆ ಲಲಿತೆ ಧನಾಧ್ಯಕ್ಷ ||
.
೮೮೬. ಧನ-ಧಾನ್ಯ-ವಿವರ್ಧಿನೀ 
ದಮನಿಸುತ ದಾನವರ ದೇವಿ ದುಷ್ಟತೆಗೆಲ್ಲ ಮರ್ದಿನಿ
ಭಕ್ತರಿಗೆ ಕರುಣಿಸುತ ಲಲಿತೆ ಧನ-ಧಾನ್ಯ-ವಿವರ್ಧಿನೀ 
ಧನ ಧಾನ್ಯ ಜತೆ ಸಮೃದ್ಧಿ ಉಂಟು ಮಾಡುವಳು ದೇವಿ
ಭಕ್ತಜನರಿಗೆ ಕೇಳದೆ ಆಯಾಚಿತದಲಿ ದೊರಕಿಸೊ ಸವಿ ||
.
೮೮೭. ವಿಪ್ರ-ಪ್ರಿಯಾ
ಲೋಕಪ್ರಿಯರಾಗುವರು ಜನರು ಜ್ಞಾನಿಗಳು ಬುದ್ಧಿವಂತರು
ಬುದ್ಧಿವಂತಿಕೆಯಲಿ ಜ್ಞಾನ ಆತ್ಮಸಾಕ್ಷಾತ್ಕಾರಕೆ ಬಳಸುವರು
ಬುದ್ಧಿವಂತ ವಿಪ್ರ-ಜ್ಞಾನಿಗಳ ಮೆಚ್ಚುವ ಲಲಿತೆ ವಿಪ್ರ ಪ್ರಿಯಾ
ಸಾಕ್ಷಾತ್ಕಾರದ ಹಾದಿಯಲಿ ಕೈ ಹಿಡಿದು ನಡೆಸೊ ದೇವಿಯ ||
.
೮೮೮. ವಿಪ್ರ-ರೂಪಾ 
ಪರರೊಳಿತಿಗೆ ಪೂಜಾಚರಣೆ, ಜ್ಞಾನ ಪ್ರಸರಣ ಧರ್ಮ-ವೇದ-ಶಾಸ್ತ್ರಾ-ನಿಪುಣ
ಇಂದ್ರಿಯ ಮನೋನಿಗ್ರಹ, ವೃತ್ತಿಯಾಗಿವರ್ಣ, ತ್ರಿಗುಣದೆ ಸಾತ್ವಿಕ ಬ್ರಾಹ್ಮಣ
ಸ್ವಯಂ ಜ್ಞಾನ ಸ್ವರೂಪಿಣಿ ಲಲಿತೆ, ತನ್ನಂತಾ ವಿಪ್ರರ ಮೆಚ್ಚುವಳು ವಿಪ್ರರೂಪಾ
ಪರಬ್ರಹ್ಮಕೆ ಸಮೀಪ ಬ್ರಾಹ್ಮಣ, ಬ್ರಹ್ಮೈಕ್ಯಕೆ ಕಾದವನ ಮಾತಲೆ ಕಳೆವ ಪಾಪ ||
.
೮೮೯. ವಿಶ್ವ-ಭ್ರಮಣ-ಕಾರಿಣೀ 
ಅಗಣಿತ ಪ್ರಪಂಚ-ಲೋಕದ ಮೊತ್ತ ಬ್ರಹ್ಮಾಂಡ, ವಿಶ್ವದೊಳಗೆಲ್ಲ ಸೇರಿದವಂತೆ
ಬ್ರಹ್ಮಾಂಡ ಕೋಟಿ ಸೃಷ್ಟಿ ಪರಿಪಾಲನೆ, ಪುರಷ ಸಮಾಗಮದೆ ಪ್ರಕೃತಿ ಲಲಿತೆ
ಎಲ್ಲ ಜೀವಿ ಹೃದಯದಲಿಹ ಬ್ರಹ್ಮ, ಪ್ರಪಂಚದಸ್ತಿತ್ವಕೆ ಪರಬ್ರಹ್ಮವೆ ಶಕ್ತಿಚಕ್ರಿಣಿ
ಕರ್ಮಮಾಯಾಚಕ್ರ, ತ್ರಿಕಾರ್ಯವ ಪರಿಭ್ರಮಿಸುತೆ ದೇವಿ ವಿಶ್ವಭ್ರಮಣಕಾರಿಣೀ ||
.
೮೯೦. ವಿಶ್ವಗ್ರಾಸಾ
ಚರಾಚರ ನುಂಗುವ ಬ್ರಹ್ಮ, ಪ್ರಪಂಚ ಸರ್ವನಾಶ ಮಾಡೊ ಲಲಿತಾ ಪರಮ
ಮರಣವನೂ ಬಿಡದ ಉಪಸೇಚನ, ಉಪಹಾರವಾಗಿಸಿ ನುಂಗುವನು ಬ್ರಹ್ಮ
ಉತ್ತಮೋತ್ತಮ ಮನಜರು ಅಧಿಗಮಿಸಲಾರರೆ ಮರಣ, ಬ್ರಹ್ಮಕಾಗಿ ಸ್ವಾಹ
ಲೋಕಗಳೆಲ್ಲವ ಗ್ರಹಿಸಿ ಲಯಾವಾಗಿಸಿ ನುಂಗುವ ದೇವಿ ಕ್ರಿಯೆ ವಿಶ್ವ ಗ್ರಾಸಾ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು