ಮಳೆಯಾಗವ್ಳೆ ಚೌಡಿ..

ಮಳೆಯಾಗವ್ಳೆ ಚೌಡಿ..

ಮಳೆ ಭಾವ ಪ್ರೇರೇಪಕವಾದಷ್ಟೆ ಸಹಜವಾಗಿ, ಕರಾಳ ವಿಶ್ವರೂಪ ತೋರುವ ವಿಧ್ವಂಸಕ ಶಕ್ತಿಯೂ ಹೌದು. ಸಲಿಲ ಮಳೆಧಾರೆ ಮಧುರ ಭಾವನೆ ಯಾತನೆಗಳನ್ನು ಬಡಿದೆಬ್ಬಿಸುವಷ್ಟೆ ಸಹಜವಾಗಿ, ಮುಸಲಧಾರೆಯ ಆರ್ಭಟ ರೊಚ್ಚಿನಿಂದ ಕೊಚ್ಚಿ, ಸಕಲವನ್ನು ವಿನಾಶದತ್ತ ಒಯ್ದು ನೆಲಸಮಗೊಳಿಸುವ ಬಗೆಯೂ ಅಷ್ಟೆ ಸಹಜ. ಒಂದು ರೀತಿ ಈ ಜಗದ ಸೃಷ್ಟಿ-ಸ್ಥಿತಿ-ಲಯಗಳೆಲ್ಲದರ ಸಂಕೇತವನ್ನು ಮಳೆಯ ವಿವಿಧ ರೂಪಗಳಲ್ಲೆ ಕಾಣಬಹುದು. ಕವಿಗಳಿಗೆ ಕವಿತೆಯಾಗುವ, ಪ್ರೇಮಿಗಳಿಗೆ ಬತ್ತದ ಒರತೆಯಾಗುವ, ವಿರಹಿಗಳಿಗೆ ಸಾಮೀಪ್ಯದ ಕೊರತೆಯಾಗಿಸುವ ಈ ವಿಶ್ವದೇಹಿ ನಿಜವಾದ ಅರ್ಥದಲಿ ನಿರಂತರ ಭಾವ ಚಿಲುಮೆ, ಅಂತೆಯೆ ಅಭಾವದ ಪ್ರೌಢಿಮೆ. ಆ ಮಳೆಯ ಆರ್ಭಟ, ರೌದ್ರ ರೂಪವನ್ನು ತುಸು ಆಡು ಭಾಷೆಯ ಮೂಲಕ ಪದವಾಗಿ ಹಿಡಿಯುವ ಯತ್ನ, ಈ ಜೋಡಿ ಕವನ - 'ಮಳೆಯಾಗವ್ಳೆ ಚೌಡಿ'

ಮೊದಲನೆಯ ಕವನ 'ಹುಚ್ಮಳೆ, ಕೆಚ್ಮಳೆ, ಪೆಚ್ಮಳೆ...' ಆ ಚೌಡಿಯವತಾರದ ಬಗೆಯನ್ನು ವರ್ಣಿಸುತ್ತಲೆ ಸಂವಾದಕ್ಕಿಳಿದರೆ ಎರಡನೆ ಪದ್ಯ 'ಕ್ಯಾಣ ಬಿಟ್ಟಾಕು, ಬೃಹನ್ನಳೆ..' ಆ ಸಂವಾದವನ್ನು ಸಂಧಾನದ ಮಾತುಕಥೆಯ ರೂಪಕ್ಕಿಳಿಸಿ ಚೌಡಿಯವತಾರದ ಮಳೆಯನ್ನು ರಮಿಸಿ, ತಣಿಸಲು ಯತ್ನಿಸುತ್ತದೆ. ಮಳೆ ಕೇಳುವುದೊ ಬಿಡುವುದೊ - ಒಟ್ಟಾರೆ ಕವಿಯಾಶಯ ಬಿಂಬಿಸುವ ಪ್ರಯತ್ನವಂತೂ ಮಾಡುತ್ತದೆ - ನಿರಂತರವಾದ, ಎಡಬಿಡದ ಮಾನವ ಪ್ರಯತ್ನದ ದ್ಯೋತಕವಾಗಿ. ಪ್ರಕೃತಿಯ ಶಕ್ತಿಗಳೊಡನೆ ಹೋರಾಡಲಾಗದಿದ್ದರೂ, ಮಾತುಕಥೆಯಾಡಿ ಮನಗೆಲ್ಲಬಹುದೇನೊ ಎಂಬ ಶಾಂತಿಯ ಸದಾಶಯವೂ ಇಲ್ಲಿ ಅಡಕವಾಗಿದೆ. 

ಆಡುಭಾಷೆಯ ಬಳಕೆ ಮಳೆಯೊಂದಿಗಿನ ಸಂವಾದದ ತಾದಾತ್ಮ್ಯತೆಯನ್ನು ಇನ್ನಷ್ಟು ಆಪ್ತವಾಗಿಸಬಹುದೆಂದು ನನ್ನ ಅನಿಸಿಕೆ - ಹಾಗೆಯೆ ಗ್ರಾಮ್ಯ ಭಾಷೆಯ ಸೊಗಡನ್ನು ಲೇಪಿಸುವ ಹುನ್ನಾರ. ತಮಗೆ ಹಿಡಿಸೀತೆಂಬ ಆಶಯದೊಂದಿಗೆ ತಮ್ಮೆಲ್ಲರ ಮಡಿಲಿಗೆ ಇದೋ - 'ಮಳೆಯಾಗವ್ಳೆ ಚೌಡಿ..'

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

01. ಹುಚ್ಮಳೆ ಕೆಚ್ಮಳೆ ಪೆಚ್ಮಳೆ
___________________

ಹುಚ್ಮಳೆ ಕೆಚ್ಮಳೆ ಪೆಚ್ಮಳೆ
ಹಾದಿ ಬೀದಿ ಗದ್ದೆ ಕೊಚ್ಮಳೆ
ಕೋಲ್ಮಳೆ ಕುಣಿತಿರೊ ಬೃಹನ್ನಳೆ
ತಗ್ಸಿ ಮೂತಿ ಮೊರೆ ಜೋಲ್ಮಳೆ ||

ಊರ್ತೋಳೆ ಮನೆ ಮಾರ್ತೊಳೆ
ಬಿಡಿಸಿಟ್ಟಂಗೆ ಹಣ್ ತೊಳ್ತೊಳೆ
ಗಾಳಿ ಮರಗಿಡ ಮುರ್ದ್ ಹಾಕ್ತಲೆ
ತಲೆ ಚಿಟ್ಟಿಡ್ಸೋ ಹಂಗೆ ಸುರಿಯೆಲೆ ||

ಸದ್ದಿಂದ್ಲೆ ಮುದ್ದೆ ತಲ್ತಲೆ ಶೂಲೆ
ಮೈ ಕೈಯೆಲ್ಲಾ ವದ್ದೆ ದೊಗಳೆ
ನೀ ಜಪ್ಪಿ ಜಪ್ಪಿ ನೆಲ ಬಿದ್ದಾಗಲೆ
ಧೋ ಅಂತಾ ಸುರ್ದು ಬಿಗ್ದಂಗೆ ಕಳ್ಳೆ ||

ತಂಗ್ಳಂಗೆ ತಂಪಾಗಿ ಕುಳ್ಕುಳು ಮೈಗೆ
ಜಡ್ಡಿಡ್ದೋರ ಮ್ವಾರೆ ಅತ್ತಂಗೆ ಬೆವರ್ಗೆ
ಸುಕ್ಕೆಲ್ಲ ಸುಪನಾತಿ ಮಾಡಿಲ್ದಂಗ್ ಚೌರ
ಕತ್ಲೆ ಮುಸ್ಕಲೆನ್ ಲೆಕ್ಕನೊ ಕಪ್ಪಾಗ್ತದೆ ಗೌರ ||

ಕಪ್ ಕೊಚ್ಚೊ ಮೋರಿಲಿ ಕೆಂಪಣ್ಣನ್ ತಂಗಿ
ಕೆಸರಲ್ ಬಸ್ರಾದಂಗೆ ನುಲ್ಕೊಂಡಂಗ್ ಭಂಗಿ
ಮೈಕೈ ಕಾಲ್ ಸುತ್ಕೊಂಡ್ ಒಂಟೋರ ತೆಪ್ಪ
ಕೊಂಬೆ ರೆಂಬೆ ಕೊಚ್ಕೊಂಡು ದಬ್ದಂಗೆ ಬೆಪ್ಪಾ ||

------------------------------------------------------------
ನಾಗೇಶ ಮೈಸೂರು, ೦೫. ಡಿಸೆಂಬರ. ೨೦೧೩, ಸಿಂಗಾಪುರ
-------------------------------------------------------------

02. ಕ್ಯಾಣ ಬಿಟ್ಟಾಕು, ಬೃಹನ್ನಳೆ
___________________________

ಗೊತ್ತಿಲ್ದೊಂದ್ ಮಾತ್ಕೇಳ್ತೀನಿ ಕ್ಯಾಣ ಬಿಟ್ಟಾಕು
ಯಾರ್ಮೇಲಪ್ಪ ಕೋಪ ತಾಪ ಸುಟ್ಟಾಕು
ಮುಟ್ಟಾದವ್ಳು ಮಿಡ್ದಂಗೆ ಯಾಕಪ್ಪ ದುಡುಕ್ತಿ
ಯಾರ್ದೊ ಮೇಲ್ ಕ್ವಾಪಕ್ಕೆ ಇಲ್ಲ್ಯಾಕೆ ಸಿಡುಕ್ತಿ ? ||

ಬರ್ಬಾರ್ದೆ ತಂಪಾಗಿ ಬಿಸ್ಲೊತ್ತಿನ್ ಮುಸ್ಸಂಜೆ
ಬಿಸ್ಬಿಸಿ ಚಾ ಕಾಫಿ ಜೊತೆ ಕಳ್ಳೆ ಪುರಿ ಗಿಂಜೆ
ಬೋಂಡಾ ಬಜ್ಜಿ ಕರ್ದೋರಜ್ಜಿ ಬೆಚ್ಗಿದ್ರೆ ಕುರ್ಕು
ಗರ್ಮಾಗರಂ ಚೌಚೌ ಜತೆ ಬೆಚ್ಬೇಕ್ ಮಳೆ ಮುರ್ಕು ||

ಕಟ್ಟೆ ಮೇಲ್ ಮಾತಾಟ ಚಿಕ್ಮಕ್ಳಾ ಕೂತಾಟ
ಪುಂಡು ಹೊಂಡ್ದಲಿ ಕಾಲಲ್ ನೆಗ್ದು ನೆಗ್ದಾಟ
ಅಂಚೆಲ್ಲಾ ವದ್ದೆ ಆದ್ರು ಬಿಡ್ದೇನೆ ಕುಣ್ದಿದ್ದೆ
ಆ ಮಾಯನೆಲ್ಲಾ ಯಾಕೊ ನೀನಿಂಗೆ ಕದ್ದೆ ||

ಬಲ್ ಮರ್ಯಾದಸ್ತ ನೀನು ಸಾಭ್ಯಸ್ತ
ಕದ್ದು ಮುಚ್ಚಿ ಇರ್ದೆ ಗುಟ್ಮಾತ್ನ ಕೇಳ್ತಾ
ಯಾಕಪ್ಪ ಬೇಕು ಚೆಲ್ಲಾಟ ಈ ಹೊತ್ನಲ್ಲಿ
ಕತ್ಲೆಲ್ ಕಾಲಿಟ್ಟವಳ್ಗೆ ಸುಮ್ನನ್ನಲ್ವಾ ಚಿನಾಲಿ ||

ಈಚಲ್ ಮರ್ದಾ ಕೆಳ್ಗೆ ಬ್ಯಾಡಪ್ಪಾ ಮಜ್ಗೆ
ಹೆಂಡಾಂತ್ಲೆ ಅನ್ನೋದು ಕುಡ್ದ್ರೂನು ಸಜ್ಗೆ
ಯಾರೊ ತಪ್ ಮಾಡುದ್ರೆ ಎಲ್ರಿಗ್ಯಾಕ್ ಶಿಕ್ಷೆ
ಮೊದ್ಲೆ ನೆಟ್ಗಿಲ್ದೊರ್ಗೆ ಕೊಟ್ ಕಿತ್ತಂಗಲ್ವಾ ಭಿಕ್ಷೆ ||

------------------------------------------------------------ 
ನಾಗೇಶ ಮೈಸೂರು, ೦೫. ಡಿಸೆಂಬರ. ೨೦೧೩, ಸಿಂಗಾಪುರ
-------------------------------------------------------------
 

Comments

Submitted by H A Patil Thu, 12/19/2013 - 19:25

ನಾಗೇಶ ಮೈಸೂರು ರವರಿಗೆ ವಂದನೆಗಳು
'ಮಳೆಯಾಗವ್ಳೆ ಚೌಡಿ' ಗ್ರಾಮ್ಯ ಭಾಷೆಯ ನುಡಿಗಟ್ಟಿನಲ್ಲಿ ಬರೆದ ಸುಂದರ ನಿರೂಪಣೆಯ ಕವನ. ನೀವು ಬಳಸಿದ ಭಾಷೆ ಗೀತೆಯ ಅಂತರಾಳ ನಮನ್ಮು ಥಟ್ಟನೆ ಕುಗ್ರಾಮವೊಂದರ ದರ್ಶನ ಮಾಡಿಸುತ್ತದೆ. ಧನ್ಯವಾದಗಳು.

Submitted by nageshamysore Fri, 12/20/2013 - 05:31

In reply to by H A Patil

ಪಾಟೀಲರೆ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಮಳೆಯ ಕುರಿತು ಬರೆಯುವಾಗೆಲ್ಲ ಮಳೆಯಿಂದಾಚೆಯ ಭಾವ ವಿಸ್ಮರಣೆಗಳೆ ಹೆಚ್ಚು ಕೆಲಸ ಮಾಡುವುದರಿಂದ ಮಳೆ ಕೇವಲ ಉತ್ತೇಜನ ನೀಡುವ ಪ್ರೇರೇಪಕ ಅಂಶವಾಗಿ ಹುರಿದುಂಬಿಸುತ್ತದೆ. ಆಗ ಅದರ ಸುತ್ತಲ ಪರಿಸರ, ಕಾಳಜಿ, ಅದರ ಧನಾತ್ಮಕ ಯಾ ಋಣಾತ್ಮಕ ಪರಿಣಾಮಗಳೆ ವಸ್ತುವಾಗುವುದು. ಯಾಕೊ ಬರೆಯುವಾಗ ಗ್ರಾಮ್ಯ ಭಾಷೆ ಚೆನ್ನಾಗಿ ಹೊಂದಬಹುದೆನಿಸಿತು. ತಮಗೂ ಅದು ಹಿಡಿಸಿದ್ದಕ್ಕೆ ಸಂತಸ. ಮತ್ರೆ ಧನ್ಯವಾದಗಳು :-)

Submitted by Shashikant P Desai Fri, 12/20/2013 - 14:20

ಕವನ‌ ಓದುತ್ತಿಂದತ್ತೆ ಕುಮಾರ‌ ಬ್ಂಗಾರಪ್ಪನವರ‌ ಕ್ಷೀರಸಾಗರ‌ ಚಲನಚಿತ್ರದ‌ ಹೊಡಿತವ್ಳೆ,ಬಡಿತವ್ಳೆ ಹಾಡು ನೆನಪಾಯಿತು.ಗ್ರಾಮೀಣ‌ ಸೊಗಡಿನ‌ ಕವಿತೆ.ಚೆನ್ನಾಗಿದೆ.

Submitted by nageshamysore Sat, 12/21/2013 - 03:22

In reply to by Shashikant P Desai

ಶಶಿಕಾಂತ ದೇಸಾಯಿಯವರೆ ನಮಸ್ಕಾರ. ನಾನು ಕ್ಷೀರಸಾಗರದ ಆ ಹಾಡು ಕೇಳಿಲ್ಲ. ನಿಮ್ಮ ಹೋಲಿಕೆಯಿಂದ ಅದನ್ನು ಕೇಳುವ ಕುತೂಹಲವುಂಟಾಗಿದೆ!

ಕವಿತೆ ತಮಗೆ ಮೆಚ್ಚುಗೆಯಾದದ್ದಕ್ಕೆ ನಿಜಕ್ಕೂ ಖುಷಿ. ಬರಹಗಾರರಾಗಿ ಈಗಾಗಲೆ ಸಾಕಷ್ಟು ಕೈಯಾಡಿಸಿ, ಅನುಭವ ಮೈಗೂಡಿಸಿಕೊಂಡು ಹೆಸರಾಗಿರುವ ತಮ್ಮಂತಹವರ ಪ್ರೋತ್ಸಾಹ ಮತ್ತಷ್ಟು ಹುರಿದುಂಬಿಸುತ್ತಿದೆ. ಹೀಗೆ ನಿರಂತರವಿರಲಿ ತಮ್ಮ ಉತ್ತೇಜನ, ಧನ್ಯವಾದಗಳು.