' ಕಾಣದೂರಿಗೆ ತೆರಳಿದ ಕಾವ್ಯ ಚೇತನ '

' ಕಾಣದೂರಿಗೆ ತೆರಳಿದ ಕಾವ್ಯ ಚೇತನ '

ಚಿತ್ರ

         ಸುಮಾರು ಮೂರು ತಿಂಗಳುಗಳ ಕಾಲದಿಂದ ಅನಾರೋಗ್ಯದಿಂದ ನರಳುತ್ತಿದ್ದ ನಾಡೋಜ, ಸಮನ್ವಯ ಕವಿ ಮತ್ತು ರಾಷ್ಟಕವಿಯೆಂದು ಕರೆಯಲ್ಪಡುತ್ತಿದ್ದ ಜಿ.ಎಸ್.ಶಿವರುದ್ರಪ್ಪ 2013 ರ ಡಿಸೆಂಬರ್ 23 ರಂದು ಮಧ್ಯಾನ್ಹ 12-30 ಗಂಟೆಗೆ ನಮ್ಮನಗಲಿ ಹೋಗಿದ್ದಾರೆ. ಅವರ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ಮಾತ್ರವೆ ಅಲ್ಲ ಇಡಿ ಕನ್ನಡ ನಾಡಿಗೆ ಮಾತ್ರವೆ ಅಲ್ಲ ನಮ್ಮ ಸಾಹಿತ್ಯ ಪರಂಪರೆಗೆ ಆದ ತುಂಬಲಾರದ ನಷ್ಟ. ಭಾವ ಗೀತೆಗಳ ಎದೆತುಂಬಿ ಹಾಡಿದ ರಾಷ್ಟ್ರಕವಿ ಮತ್ತು ಕಾವ್ಯ ಚೇತನ ಜಿ.ಎಸ್ ಶಿವರುದ್ರಪ್ಪ ಕಾಣದೂರಿಗೆ ಪಯಣ ಬೆಳೆಸಿ ಬಿಟ್ಟಿದ್ದಾರೆ. ಅವರು ತಮ್ಮ ಕೊನೆಯ ದಿನಗಲಲ್ಲಿ ತಾನು ಹೆಚ್ಚು ದಿನ ಬದುಕಲು ಇಚ್ಛಿಸುವುದಿಲ್ಲ ಜೀವನ ಪ್ರೀತಿಯಿಂದ ಬದುಕಿದ್ದೇನೆ.  ಕೃತಕ ವ್ಯವಸ್ಥೆಯಿಂದ ತನ್ನ ಜೀವನವನ್ನು ವಿಸ್ತರಿಸುವ ಅಗತ್ಯವಿಲ್ಲ.  ತನ್ನ ಮರಣಾನಂತರ ತನ್ನ ದೇಹಕ್ಕೆ ಯಾವುದೆ ರೀತಿಯಲ್ಲಿ ಜಾತಿ ಲಾಂಛನಗಳನ್ನು ಲೇಪಿಸಬೇಡಿ ಎಂದವರು ಅವರು. ಬಹುತೇಕ ಸಾಮಾನ್ಯ ಮನುಷ್ಯರು ಈ ತೀರ್ಮಾನಕ್ಕೆ ಬರುವುದು ಬಹು ಕಷ್ಟ. ತಮ್ಮ ಕಾವ್ಯಗಳ ಆಶಯ ಅವರ ಬರವಣಿಗೆ ಮಾತ್ರವಾಗಿರಲಿಲ್ಲ ಆ ರೀತಿ ಬದುಕುವ ನಿಶ್ಚಯ ಮಾಡಿದುದನ್ನು ತೋರಿಸುತ್ತದ

                             ಕಾಣದ ಕಡಲಿಗೆ ಹಂಬಲಿಸಿದೆ ಮನ

                             ಕಾಣ ಬಲ್ಲೆನೆ ಒಂದು ದಿನ

                             ಕಡಲನು ಕೂಡ ಬಲ್ಲನೆ ಒಂದು ದಿನ

     ಎಂದು ಹಾಡಿದ ಕವಿ ಜಿ.ಎಸ್.ಎಸ್.ಕಾಣದ ಕಡಲನು ಕಾಣ ಹಂಬಲಿಸಿ ಹೊರಟು ಬಿಟ್ಟಿದ್ದಾರೆ. ಶಿವರುದ್ರಪ್ಪ ಕಡಲು ಸೇರುವ ಹಂಬಲದ ತವಕದಲ್ಲಿದ್ದ ಒಂದು ಹಂಬಲದ ನದಿ. ಅದಕ್ಕೆ ಒಂದು ಸಂಭ್ರಮವಿದೆ. ತನ್ನ ಪಯಣದುದ್ದಕ್ಕೂ ದಾರಿಯಲಿ ಸಿಗುವ ವೈವಿಧ್ಯಪೂರ್ಣ ಜಗತ್ತು, ಕಾಡು ಮೇಡು ಗುಡ್ಡ ಬೆಟ್ಟ ಹಚ್ಚ ಹಸಿರಿನ ಸಸ್ಯಕಾಶಿ ಪಶು ಪಕ್ಷಿ ಕ್ರಿಮಿ ಕೀಟಗಳನ್ನು ಎಲ್ಲ ಪ್ರಕೃತಿ ನಿರ್ಮಿತ ಸೃಷ್ಟಿಯನ್ನು ನೋಡುತ್ತ ನಲಿಯುತ್ತ ನೋಯುತ್ತ ಸಾಗುವ ಪರಿಯಲ್ಲಿ ಒಂದು ಅಲೌಕಿಕ ಜೀವನ ದರ್ಶನವಿದೆ ಜೊತೆಗೆ ಸಾರ್ಥಕ ಭಾವವಿದೆ. ಕವಿ ಮೌನವಾಗಿದ್ದರೂ ಅವರ ಕವನಗಳು ಮಾತನಾಡುತ್ತವೆ. ವೈಚಾರಿಕತೆ ಅವರ ಚಿಂತನೆ ಮಾತ್ರವಾಗಿರಲಿಲ್ಲ ಅದು ಅವರ ಜೀವನ ರೀತಿಯ ಪರಂಪರೆಯಾಗಿತ್ತು. ನದಿ ತನ್ನ ಅಸ್ತಿತ್ವವನ್ನು ಕಳೆದು ಕೊಳ್ಳದೆ ಅದನ್ನು ಕಾಪಾಡಿಕೊಂಡು ಪಯಣದುದ್ದಕ್ಕೂ ಎಲ್ಲ ಸತ್ವವನು ಹೀರಿ ಬೆಳೆದು ಕೊನೆಗೆ ಅಂತಿಮ ಸತ್ಯವಾದ ಕಡಲನ್ನು ಸೇರುವ ನದಿ ಅವರ ಉದಾತ್ತ ವಿಚಾರ ಧಾರೆಯ ತವಕ ಅದಾಗಿತ್ತು. ಅವರು ಎಂದೂ ದೇವರು ದೈವ ಮತ್ತು ಮೋಕ್ಷಗಳ ಬಗ್ಗೆ ಭಾವ ಪರವಶತೆಗೆ ಒಳಗಾದವರಲ್ಲ. ಇದೊಂದು ಅತೀಂದ್ರಿಯ ಪ್ರಪಂಚ ತಲುಪುವ ಹಂಬಲವಿದೆ ಆದರೆ ಆ ಕಡಲು ಮಿತಿಯೆ ಇಲ್ಲದ ಒಂದು ಮಹಾ ಸಾಗರ ಇದೊಂದು ಈ ಕವನದ ಸುಂದರ ಮೆಟಾಫರ್ ಎನ್ನಬಹುದು.

     ಈ ಸಮನ್ವಯ ಕವಿ ಹುಟ್ಟಿದ್ದು 1926 ರ ಫೆಬ್ರುವರಿ 7 ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜನಿಸಿದರು. ಗ್ರಾಮೀಣ ಪರಿಸರದಲ್ಲಿ ಹುಟ್ಟಿದ ಇವರು ರಾಷ್ಟ್ರ ಕವಿ ಪಟ್ಟವೆರುವವರೆಗೆ ಸಾಗಿಬಂದ ದಾರಿ ಒಂದು ಯಶಸ್ಸಿನ ದಾರಿ. ಇವರ ತಂದೆ ಶಾಂತವೀರಪ್ಪ ಶಿಕ್ಷಕ ರಾಗಿದ್ದು ಅವರ ಪ್ರಾಥಮಿಕ ವಿದ್ಯಾಭ್ಯಾಸ ಹೊನ್ನಾಳಿಯಲ್ಲಿ ನಡೆಯಿತು. ಮಾಧ್ಯಮಿಕ ವಿದ್ಯಾಭ್ಯಾಸ ಗುಬ್ಬಿಯಲ್ಲಿ ನಡೆಯಿತು. ಇಂಟರ್ ಮೀಡಿಯಟ್ ತುಮಕೂರಿನಲ್ಲಾಯಿತು. ಕಾಲೇಜು ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ತೆರಳಿದ ಅವರು ಮಹಾರಾಜಾ ಕಾಲೇಜಿನಲ್ಲಿ 1949 ರಲ್ಲಿ ಬಿ.ಎ.ಆನರ್ಸನಲ್ಲಿ ಉನ್ನತ ಶ್ರೇಣಿಯಲ್ಲಿ ಎರಡು ಸ್ವರ್ಣ ಪದಕಗಳೊಂದಿಗೆ ಪಾಸಾಗುತ್ತಾರೆ. ಸ್ನಾತಕೋತ್ತರ ಪದವಿಗಾಗಿ ಮೈಸೂರು ವಿಶ್ವ ವಿದ್ಯಾಲಯ ಸೇರಿದ ಅವರು ಅಲ್ಲಿಯೂ ಎಂ.ಎ.ಯಲ್ಲಿಯೂ ಸಹ 1953 ರಲ್ಲಿ ಎರಡು ಸ್ವರ್ಣ ಪದಕಗಳೊಂದಿಗೆ ಪಾಸಾಗುತ್ತಾರೆ. ಮುಂದೆ ಇವರು ಕುವೆಂಪುರವರ ಮಾರ್ಗ ದರ್ಶನದಲ್ಲಿ ‘ಸೌಂದರ್ಯ ಸಮೀಕ್ಷೆ’ ಎಂಬ ಪ್ರ ಬಂಧ ಕೃತಿ ರಚಿಸಿ ಪಿ.ಹೆಚ್.ಡಿ ಪಡೆಯುತ್ತಾರೆ. ಇವರು ತಮ್ಮ ವೃತ್ತಿ ಬದುಕನ್ನು ಮೈಸೂರು, ಡಾವಣಗೆರೆ, ಶಿವಮೊಗ್ಗ, ಹೈದರಾಬಾದ ಸವೆಸಿ ನಂತರ ಬೆಂಗಳೂರಿಗೆ ಬಂದು ಅಲ್ಲಿನ ವಿಶ್ವ ವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಅಲ್ಲಿ ಉನ್ನತ ಹುದ್ದೆಗೇರಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತ ರಾಗುತ್ತಾರೆ.    

    ಇವರು ದೇವಶಿಲ್ಪಿ, ತೆರೆದದಾರಿ, ಗೋಡೆ, ಪ್ರೀತಿ ಇಲ್ಲದ ಮೇಲೆ, ಸಾಮಗಾನ, ಚೆಲುವು ಒಲವು, ಕಾರ್ತಿಕ, ಚಕ್ರಗತಿ, ವ್ಯಕ್ತ ಮಧ್ಯಸ್ತ ಮುಂತಾದ ಕವನ ಸಂಕಲನಗಳನ್ನು ಹೊರತಂದಿದ್ದು ಅಲ್ಲದೆ ಪ್ರವಾಸ ಕಥನಗಳನ್ನು ಸಹ ರಚಿಸಿದ್ದಾರೆ. ಇವರಿಗೆ ನಾಡೋಜ, ಪಂಪ ಪ್ರಶಸ್ತಿ, ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಲ್ಲದೆ 2006 ರಲ್ಲಿ ರಾಷ್ಟ್ರಕವಿ ಪ್ರಶಸ್ತಿ ಅಲ್ಲದೆ ಇನ್ನೂ ಅನೇಕ ಪ್ರಶಸ್ತಿಗಳು ಇವರನ್ನರಸಿ ಬಂದಿವೆ. ಇವರು ಡಾವಣಗೆರೆಯಲ್ಲಿ ನಡೆದ 61 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

     ಈ ಸಮನ್ವಯ ಕವಿ ಸಾಗಿ ಬಂದ ದಾರಿ ಪರಿಶ್ರಮದ ನೇರ ದಾರಿ. ಇವರಿಗೆ ಗುರುಗಳೆಂದರೆ ಗೌರವ, ವಿಶೇಷವಾಗಿ ತ.ಸು.ಶಾಮರಾಯರು ಮತ್ತು ಕುವೆಂಪು ರವರೆಂದರೆ ವಿಶೇಷ ಗೌರವ. ಇವರ ಪ್ರಸಿದ್ಧ ಭಾವಗೀತೆ

                              ಎದೆ ತುಂಬಿ ಹಾಡಿದೆನು ಅಂದು ನಾನು

                              ಮನವಿಟ್ಟು ಕೇಳಿದಿರಿ ಅಲ್ಲಿ ನೀವು

     ಎಂಬ ಈ ಗೀತೆಯನ್ನು ತಮ್ಮ ಗುರುಗಳಾದ ತ.ಸು.ಶಾಮರಾಯರು ತಮ್ಮ ಬಗೆಗೆ ತೋರಿದ ಕಳಕಳಿಯ ಕುರಿತು ಬರೆದ ಗೀತೆಯಾಗಿದ್ದು ಇದನ್ನು ತಮ್ಮ ಆ ಗುರುಗಳ ಎದುರು ಓದಿ ತೋರಿಸುತ್ತಾರೆ. ಇವರ ಮೊದಲ ಕವನ ಸಂಕಲನ ಹೊರ ಬರಲು ಶಾಮರಾಯರು ತೋರಿದ ಕಾಳಜಿಯನ್ನು ನೆನೆದು ತಮ್ಮ ಆ ಕವನ ಸಂಕಲನವನ್ನು ಗುರುಗಳಿಗೆ ಅರ್ಪಿಸುತ್ತಾರೆ. ಇದು ಪ್ರಸಿದ್ಧ ಭಾವ ಗೀತೆಗಳ ಪೈಕಿ ಒಂದಾಗಿದ್ದು ಇದನ್ನು ಕನ್ನಡದ ಸಾಹಿತಿ, ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ತಮ್ಮ ಚಿತ್ರ ‘ಪ್ಯಾರಿಸ ಪ್ರಣಯ’ದಲ್ಲಿ ಅಳವಡಿಸಿಕೊಂಡಿದ್ದು ಕೀರ್ವಾಣಿ ರಾಗದಲ್ಲಿ ಸಂಯೋಜಿಸಲಾದ ಈ ಗೀತೆಯನ್ನು ಖ್ಯಾತ ಗಾಯಕಿ ನಂದಿತಾ ದಾಸ್ ಭಾವ ಪೂರ್ಣವಾಗಿ ಹಾಡಿದ್ದಾರೆ. ಇದನ್ನು ಸುಗಮ ಸಂಗೀತ ಪ್ರಾಕಾರದಲ್ಲಿಯೂ ಹಾಡಲಾಗಿದ್ದು ಅಲ್ಲಿಯೂ ಇದು ಹೆಸರು ಮಾಡಿದೆ.

     ಅದೇ ರೀತಿ ಶಿವರುದ್ರಪ್ಪನವರ ಜನಪ್ರಿಯ ಗೀತೆಗಳಾದ ‘ಹಾಡು ಹಳೆಯದಾದರೇನು ಭಾವ ನವ ನವೀನ’ ಮತ್ತು ‘ವೇದಾಂತಿ ಹೇಳದನು ಹೊನ್ನೆಲ್ಲ ಮಣ್ಣು ಮಣ್ಣು, ಕವಿಯೊಬ್ಬ ಹಾಡಿದನು ಮಣ್ಣೆಲ್ಲ ಹೊನ್ನು ಹೊನ್ನು’ ಗಳನ್ನು ಕನ್ನಡದ ಶ್ರೇಷ್ಟ ನಿರ್ದೇಶಕ ಪುಟ್ಟಣ್ಣ ಕಣಗಾಲ ನಟ ಶ್ರೀನಾಥ ನಿರ್ಮಾಣ ಮತ್ತು ಅಭಿನಯದ ‘ಮಾನಸ ಸರೋವರ’ ಚಿತ್ರದಲ್ಲಿ ಸಮಯೋಚಿವಾಗಿ ಅಳವಡಿಸಿಕೊಳ್ಳಲಾಗಿದ್ದು ಈ ಗೀತೆಗಳು ಆ ಚಿತ್ರದ ಗಹನತೆಯನ್ನು ಹೆಚ್ಚಿಸಿವೆ, ಅದು ಕವಿಯ ಗೀತೆಗಳ ಸತ್ವ !

     ಇನ್ನು ಐದು ವರ್ಷಗಳ ಕಾಲ ಕುವೆಂಪು ರವರ ಪಾಠ ಕೇಳಿದ ಮತ್ತು ಪಿ.ಹೆಚ್.ಡಿ.ಗೆ ಮಾರ್ಗದರ್ಶನ ಮಾಡಿದ ಅವರೆಂದರೆ ಇವರಿಗೆ ಒಂದು ಗೌರವಭಾವ. ಅವರ ಬಗೆಗೆ ವಿಶೇಷ ಒಲವಿದ್ದ ಇವರು ಕುವೆಂಪುರವರನ್ನು ತಮ್ಮ ಕಾವ್ಯ ಮೂಲ ಸೆಲೆಯೆಂದು ಬಣ್ಣಿಸಿದ್ದಾರೆ. ಅವರ ಎಲ್ಲ ಕೃತಿಗಳೂ ತನಗೆ ಇಷ್ಟ ಆದರೆ ‘ರಾಮಾಯಣ ದರ್ಶನಂ’ ಅತಿ ಶ್ರೇಷ್ಟ ಕೃತಿ ಎನ್ನುತ್ತಾರೆ. ಕವಿಯೆಂದರೆ ಬರಿ ಪ್ರಕೃತಿಪ್ರೇಮ ಮತ್ತು ಆಧ್ಯಾತ್ಮಪ್ರೇಮ ಮಾತ್ರವಲ್ಲ ಜನ ಸಾಮಾನ್ಯರ ವೇದನೆ ನೋವುಗಳಿಗೆ ಸ್ಪಂದಿಸುವ ಗುಣವಿರುವವ  ನಿಜವಾದ ಕವಿ ಎನ್ನುತ್ತಾರೆ.

                                  ಯಾವ ಹಾಡ ಹಾಡಲಿ

                                  ಯಾವ ಹಾಡಿನಿಂದ ನಿಮಗೆ

                                  ನೆಮ್ಮದಿಯನು ನೀಡಲಿ

     ಎನ್ನುವ ಅವರು ಸಾಮಾಜಿಕ ಬದಲಾವಣೆ ಮತ್ತು ಅಸಮಾನತೆ ಕುರಿತು ಒಳ ತುಡಿತ ಅವರಿಗಿತ್ತು. ಮನುಷ್ಯ ಸಂಬಂಧಗಳನ್ನು ಕಾಪಾಡುವ ಮೂಲಕ ಪರ್ಯಾಯ ಸಂಸ್ಕೃತಿಯೊಂದನ್ನು ಕಟ್ಟುವ ತುರ್ತು ಇತ್ತು. ಅದನ್ನು ಕವಿ ಕುವೆಂಪು ತಮ್ಮ ಕೃತಿಗಳಾದ ಶಂಭೂಕ ಮತ್ತು ಜಲಗಾರ ಗಳಲ್ಲಿ ತಂದರು. ದಮನಕ್ಕೆ ಒಳಗಾದ ಸಮುದಾಯಗಳನ್ನು ಮೇಲಕ್ಕೆತ್ತುವ ಆಶಯ. ಅದನ್ನೆ ಜಿಎಸ್ಎಸ್ ಅವೆಲ್ಲವನ್ನೊಳಗೊಂಡಂತೆ ಮಾನವ ಸಂವೇದನೆ ಅವರ ಮೂಲ ಕಾವ್ಯಧಾರೆ. ಪ್ರಧಾನವಾಗಿ ಅವರು ಭಾವನಾತ್ಮಕ ಕವಿ ನೊಂದವರ ಶೋಷಿತರ ತೊಳಲಾಟಗಳ ಕುರಿತು ಅವರು ಬರೆದರು. ಎಷ್ಟು ಸುಂದರವಾಗಿ ಅವರು ಬರೆದರೆಂದರೆ ಕುವೆಂಪು ಪರಂಪರೆಯ ಮುಂದುವರಿಕೆಯಾಗಿ ಇವರು ಕಂಡು ಬಂದರು. ಜಿಎಸ್ಎಸ್ ಈ ನೆಲದ ಕವಿ ಅವರು ಗಗನದಲ್ಲಿ ವಿಹರಿಸುವ ಕವಿಯಲ್ಲ. ‘ನೀನು ಮುಗಿಲು ನಾನು ನೆಲ’ ಎನ್ನುವ ಅವರು ಮಾನವ ಸಂಬಂಧ ಗಳನ್ನು ಕಟ್ಟುವ ಕ್ರಮ ಅನನ್ಯವಾದುದು.

                                ಎಲ್ಲೋ ಹುಡುಕಿದೆ ಇಲ್ಲದ ದೇವರ

                                ಕಲ್ಲು ಮಣ್ಣುಗಳ ಗುಡಿಯೊಳಗೆ

     ಎಂದೆನ್ನುವ ಅವರು ದೇವರನ್ನು ನಿರಾಕರಿಸದೆ ಜೀವನದ ಹುಡುಕಾಟ ಜನ ಸಾಮಾನ್ಯರಲ್ಲಿ ಕಂಡವರು. ಸಾಮಾಜಿಕ ತುಮುಲಗಳನ್ನು ಕಾವ್ಯದ ಮೂಲಕ ಅಭಿವ್ಯಕ್ತಿಸಿದವರು. ಅವರು ನಿಸರ್ಗೋಪಾಸಕರಾಗಿದ್ದರು. ಪ್ರಕೃತಿಯ ಮಡಿಲಲ್ಲಿ ಸೂರ್ಯೋಸ್ತಮಾನವನ್ನು ವೀಕ್ಷಿಸುತ್ತ ಮುಳಗುನ ಸೂರ್ಯನನ್ನು ನೋಡುತ್ತ ಪಶ್ಚಿಮದ ಅಂಗಣದಲ್ಲಿ ಸೃಷ್ಟಿಗೊಳ್ಳುವ ವರ್ಣಮಯ ಲೋಕ, ಗೋಧೂಳಿ ಸಮಯದ ಸಂಧ್ಯಾಕಾಲ ಗೂಡಿಗೆ ಮರಳುವ ತವಕದಲ್ಲಿರುವ ಹಕ್ಕಿಗಳ ಕಲರವ, ಜೀರುಂಡೆ ಹುಳು ಹುಪ್ಪಡಿಗಳ ಸಮೂಹ ಗಾನ ಪ್ರಕೃತಿಯ ರಮ್ಯತೆಗೆ ಅವರು ಕಣ್ಣು ಕಿವಿಯಾಗುತ್ತಿದ್ದರು. ನಿ’ಶ್ಯಬ್ದದ ಆಚೆಗೂ ಜೀವನ ಪ್ರೀತಿಯನ್ನು ಕಂಡು ಕೊಂಡವರಾಗಿದ್ದರು. ದೇವರು ಪ್ರಕೃತಿಯಲ್ಲಿದ್ದಾನೆ ಪ್ರೀತಿ ಸ್ನೇಹಗಳಲ್ಲಿದ್ದಾನೆ. ಅವರ ಪರ್ಯಾಯ ದೇವರು ನಿರಾಕಾರ ಕಲ್ಪನೆಯವನಾಗಿದ್ದ. ಕುವೆಂಪು ರವರಂತೆ ಅವರಿಗೆ ಪರಮಹಂಸರ ಬಗ್ಗೆ ಮತ್ತು ರಾಮಕೃಷ್ಣರ ಬಗ್ಗೆ ಅವರ ಜೀವನ ರೀತಿ ತತ್ವಾದರ್ಶಗಳ ಬಗ್ಗೆ ಒಂದು ರೀತಿಯ ಆಸಕ್ತಿಯಿತ್ತು. ಅವರು ಜಂಗಮ ತತ್ವದ ಕವಿಯಾಗಿದ್ದರು. ವಿಮರ್ಶಾ ಕ್ಷೇತ್ರದಲ್ಲಿ ಕೀರ್ತೀನಾಥ ಕುರ್ತಕೋಟಿ ಯವರಷ್ಟೆ ಹೆಸರು ಪಡೆದಿದ್ದರು. ಅದರ ಜೊತೆಗೆ ಕ.ನ್ನಡದ ಕಾವ್ಯ ಮಿಮಾಂಶೆಗೆ ಒಂದು ರೂಪ ಕೊಟ್ಟವರು ಇವರು

     ಬರಿ ಅವರ ಕೆಲವು ಕವನಗಳ ಮೂಲಕ ನಮಗೆ ಜಿಎಸ್ಎಸ್ ಪೂರ್ಣವಾಗಿ ಅರ್ಥವಾಗುವುದಿಲ್ಲ, ಅವರ ಸಮಗ್ರ ಕಾವ್ಯದ ಅಧ್ಯಯನ ಮೂಲಕ ಅವರನ್ನು ಗುರುತಿಸುವ ಕೆಲಸವಾಗಬೆಕು. ಇವರನ್ನು ಆಸ್ತಿಕ ಮತ್ತು ನಾಸ್ತಿಕ ರೂಪಗಳಲ್ಲಿ ಕೂರಿಸಲಾಗುವುದಿಲ್ಲ. ಆದರೆ ಅವ್ಯಕ್ತ ಶಕ್ತಿಯ ಬಗೆಗೆ ಅವರದು ಗಟ್ಟಿಯಾದ ನಿಲುವು ಇರುವವರು ಆದರೆ ಜಡ ರೂಪದಲ್ಲಿ ಅಲ್ಲ. ಅವರು ತಮ್ಮ ಸುಮಾರು ಅರವತ್ತು ವರ್ಷಗಳ ಸಾಹಿತ್ಯಿಕ ಜೀವನ ದಲ್ಲಿ ಬದಲಾಗುತ್ತ ಬಂಧ ಇಡೀ ತಲೆಮಾರುಗಳ ವಿವೇಕವನ್ನು ತಿದ್ದುತ್ತ ಬಂದ ಕವಿ ಅವರು. ಹೀಗಾಗಿ ಭಿನ್ನ ಭಿನ್ನ ವಿಚಾರ ಧಾರೆಗಳ ತರುಣರನ್ನು ಒಟ್ಟಿಗೆ ಕರೆದೊಯ್ಯಲು ಅವರಿಗೆ ಸಾಧ್ಯವಾಯಿತು. ಎಲ್ಲರ ಮೇಲು ವಿಶೇಷವಾಗಿ ಪ್ರಭಾವ ಬೀರಿದವರು ಅವರು. ಮನುಷ್ಯ ಪ್ರಸಿದ್ಧನಾಗುತ್ತ ಹೋದಂತೆ ವಿನಯವಂತನಾಗುತ್ತ ಹೋಗಬೇಕು. ಅದಕ್ಕೆ ಉತ್ತಮ ಉದಾಹರಣೆ ಈ ಜಿಎಸ್ಎಸ್.

    ಕವಿ ಜಿ.ಎಸ್.ಶಿವರುದ್ರಪ್ಪ ರವರಲ್ಲಿ ಜನಪರ ಆಶಯಗಳಿದ್ದವು ಅವುಗಳ ಈಡೇರಿಕೆ ಕುರಿತು ಅವರಿಗೆ ನಂಬಿಕೆಗಳಿದ್ದವು. ಅವುಗಳನ್ನು ನಿಯಂತ್ರಿಸುವ ಶಕ್ತಿಗಳ ಕುರಿತು ಅವರಲ್ಲಿ ಆತಂಕವಿತ್ತು. ಅವರು ಪ್ರವಾಸ ಪ್ರಿಯರಾಗಿದ್ದರು. ನಿಜವಾದ ಅವರು ಜಂಗಮ, ಅವರು ತಮ್ಮನ್ನು ತಾವೆ ತಮಾಷೆ ಗಾಗಿ ಚಕ್ರವರ್ತಿ ಎನ್ನುತ್ತಿದ್ದರು, ಎಂದರೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗುವವರು ಎಂದು ಅರ್ಥ. ಅವರಲ್ಲಿ ಹಾಸ್ಯ ಪ್ರಜ್ಞೆ ಇತ್ತು ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೆ. ಕೇದಾರದಲ್ಲಿನ ಪರ್ವತವನ್ನೆ ಅವರು ಶಿವಲಿಂಗದ ಪ್ರತೀಕವಾಗಿ ಕಂಡ ಕವಿ ಅವರು. ಎಲ್ಲಿಗಾದರೂ ಪ್ರವಾಸ ಹೊರಡುವುದಾದರೆ ಸೂಕ್ಷ್ಮವಾದ ಸಿದ್ಧತೆ ಅವರದಾಗಿರುತ್ತಿತ್ತು. ಎಲ್ಲಿಗೆ ಹೋಗಲಿ ಪ್ರತಿ ಕ್ಷಣವನ್ನು ಅವರು ಅನುಭವಿಸು ತ್ತಿದ್ದರು. ಜೀವನ ಪ್ರೀತಿಯ ರಸಿಕರಾಗಿದ್ದರವರು. ಪ್ರವಾಸ ಸಂಧರ್ಬದಲ್ಲಿ ವಿದ್ಯಾರ್ಥಿಗಳನ್ನು ಸುತ್ತಲೂ ಕೂಡ್ರಿಸಿಕೊಂಡು ತಾವು ಹಾಡುವುದಲ್ಲದೆ ಅವರಿಂದಲೂ ಹಾಡಿಸಿ ಸಂತಸ ಪಡುತ್ತಿದ್ದರು. ನಿರಂತರ ಅನ್ವೇಷಣೆ ಅವರ ಕಾವ್ಯದ ಬದುಕಾಗಿತ್ತು. ಯಾವಾಗಲೂ ಅವರು ಹೊಸ ಲೇಖಕರ ಅದರಲ್ಲಿಯೂ ಯುವಕರ ಪುಸ್ತಕಗಳನ್ನು ಓದುತ್ತಿದ್ದರು. ಕನ್ನಡ ಸಂಸ್ಕೃತಿ ಬಗೆಗಿನ ಅವರ ಆಸಕ್ತಿ ಅದ್ಭುತವಾದುದು. ಅವರು ಸಮಾಜದ ಎತ್ತರದ ಪ್ರಜ್ಞೆಯಾಗಿದ್ದರು. ಮಾಸ್ತಿಯವರ ಚಿಕವೀರ ರಾಜೇಂದ್ರ ಕೃತಿಯ ಬಗೆಗೆ ವಿರೋಧ ಬಂದಾಗ ಅವರು ಮಾಸ್ತಿಯವರ ಪರವಾಗಿ ನಿಂತವರು. ಕನ್ನಡ ಶಾಲೆಗಳನ್ನು ಯಾವ ಕಾರಣಕ್ಕೂ ಮುಚ್ಚಬಾರದು ಎನ್ನುವ ನಿಲುವು ಅವರದಾಗಿತ್ತು.

     ಜಿಎಸ್ಎಸ್ ಬದುಕಿದ್ದ ಕಾಲದಲ್ಲಿ ನಾವೂ ಇದ್ದೆವು ಎನ್ನುವುದು ಒಂದು ಸಂತಸಕರ ಸಂಗತಿ. ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ, ದಲಿತ ಮತ್ತು ನವ್ಯೋತ್ತರ ಸಾಹಿತ್ಯದ ಕಾಲಘಟ್ಟಗಳಲ್ಲಿ ಬದುಕಿ ಅವುಗಳನ್ನು ನಿರಾಕರಿಸದೆ ಅವುಗಳನ್ನು ಅರಗಿಸಿಕೊಂಡು ತಮ್ಮತನ ಕಾಪಾಡಿಕೊಂಡು ಬಂದ ಕವಿ ಶ್ರೇಷ್ಟರು ಅವರು. ತಾಯ್ತನದ ಪ್ರೀತಿ ಅವರಲ್ಲಿತ್ತು. ಅದನ್ನು ಎಲ್ಲರಿಗೂ ಹಂಚುವ ವಾತ್ಸಲ್ಯ ಅವರಲ್ಲಿತ್ತು. ಪರೋಕ್ಷ ಮತ್ತು ಅಪರೋಕ್ಷ ಶಿಷ್ಯವರ್ಗ ಅವರಿಗಿತ್ತು. ಎಲ್ಲವನ್ನೂ ಇಲ್ಲಿಯೆ ಬಿಟ್ಟು ಜಿಎಸ್ಎಸ್ ಕಾಣದ ಅವ್ಯಕ್ತ ಲೋಕದೆಡೆಗೆ ಸಾಗಿ ಬಿಟ್ಟಿದ್ದಾರೆ. ಅಲ್ಲಿಯೂ ಸಾರ್ಥಕ ಬದುಕು ಅವರದಾಗಲಿ. ಅವರಿಗೆ ನಮ್ಮೆಲ್ಲರ ಹೃತ್ಪೂರ್ವಕ ಶೃದ್ಧಾಂಜಲಿ.

      ಚಿತ್ರ ಕೃಪೆ:  ಅಂತರ್ ಜಾಲ                                        ***                                                                                                                                                                                                                                                                                                              

Rating
No votes yet

Comments

Submitted by lpitnal Tue, 12/24/2013 - 13:31

ಪಾಟೀಲರವರಿಗೆ, ವಂದನೆಗಳು. ರಾಷ್ಟ್ರಕವಿಗಳ ನುಡಿನಮನ ಚನ್ನಾಗಿ ಮೂಡಿಬಂದಿದೆ. ಅವರ ಬಗ್ಗೆ ತಿಳಯದವರಿಗೆ ಬಹು ಮೂಲ್ಯ ಮಾಹಿತಿಗಳನ್ನು ಒಳಗೊಂಡ ನಮನ. ಧನ್ಯವಾದಗಳು.

Submitted by venkatb83 Tue, 12/24/2013 - 14:15

In reply to by lpitnal

ಸದಾ ಪ್ರಚಾರ ಬಯಸುವ -ಸಾಹಿತಿಗಳ ಮಧ್ಯೆ ಇವರದು ಸೀದಾ ಸಾದಾ ನೇರ ನಿಷ್ಟುರ ನಡೆ -. ಮಾತು ನಂತರ -ಕೃತಿ ಮೊದಲು ವ್ಯಕ್ತಿತ್ವ ..
ಸುಗಮ ಸಂಗೀತ ಎಲ್ಲೆಲ್ಲೂ ಮೊಳಗಲಿಕ್ಕೆ ಕಾರಣಕರ್ತರಲ್ಲಿ ಒಬ್ಬರು ಮತ್ತೊಬ್ಬರು ದಿವಂಗತ ಸಿ ಅಶ್ವಥ್ ಅವರು .
ಅವರು
ಹಚ್ಚಿದ ಅಕ್ಷರಗಳ ಹಣತೆ -ಅದರ ದೀಪದ ಬೆಳಕು ಸದಾ ಕರುನಾಡನ್ನು ಬೆಳಗುತ್ತದೆ..
ಆಶಾವಾಧವನ್ನು ಜೀವಂತವಾಗಿಡುವ ಅವರ ಸಾಲು -ಹಣತೆ ಹಚ್ಚುತ್ತೇನೆ ನಾನು ..ನಾವ್ ಹೇಗೆ ಮರೆಯುವೆವು?
ಅವರ ಆತ್ಮಕ್ಕೆ ಶಾಂತಿ ಸಿಗಲಿ ಸದ್ಗತಿ ಲಭಿಸಲಿ ..

Submitted by H A Patil Tue, 12/24/2013 - 20:11

In reply to by venkatb83

ಸಪ್ತಗಿರಿ ಯವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆಯಲ್ಲಿ ಜಿಎಸ್ಎಸ್ ಅವರ ಗುಣ ಸ್ವಭಾವ ಸುಗಮ ಸಂಗೀತದ ಮೂಲಕ ಕನ್ನಡ ನಾಡಿನ ಮನ ಮಾತಾದುದನ್ನು ನೆನಪಿಸಿದ್ದೀರಿ, ಅವರ ಕವನದ ಸಾಲುಗಳನ್ನು ಉಚ್ಚರಿಸದ್ದೀರಿ ತಮ್ಮ ಮೆಚ್ಚುಗೆಯ ನುಜಡಿಗಳಿಗೆ ಧನ್ಯವಾದಗಳು.

Submitted by H A Patil Tue, 12/24/2013 - 20:08

In reply to by lpitnal

ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
ಈ ಲೇಖನವನ್ನು ಮೆಚ್ಚಿದ್ದೀರಿ ತಮ್ಮ ಈ ಪ್ರೋತ್ಸಾಹಕರ ನುಡಿಗಳಿಗೆ ಧನ್ಯವಾದಗಳು.

Submitted by ravindra n angadi Tue, 12/24/2013 - 15:30

ನಮಸ್ಕಾರ ಸರ್
ಡಾ: ಜಿ ಎಸ್ ಶಿವರುದ್ರಪ್ಪನವರ ಸಾಗಿ ಬಂದ ಜೀವನ ಕಥೆ ಅವರ ಕವನಗಳು ಪ್ರತಿಯೂಬ್ಬರ ಮನ ಮುಟ್ಟವ ಹಾಗೆ ,ನಿಮ್ಮ ಲೇಖನದಲ್ಲಿ ಮೂಡಿ ಬಂದಿದೆ ಸರ್.

Submitted by H A Patil Tue, 12/24/2013 - 20:14

In reply to by ravindra n angadi

ರವೀಂದ್ರ ಎನ್ ಅಂಗಡಿಯವರಿಗೆ ವಂದನೆಗಳು
ಜಿ.ಎಸ್.ಶಿವರುದ್ರಪ್ಪರವರ ಕುರಿತು ಬರೆದ ಬರಹಕ್ಕೆ ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದೀರಿ ತಮ್ಮ ಈ ಪಾಲ್ಗೊಳ್ಳುವಿಕೆ ನನಗೆ ಸಂತಸ ತಂದಿದೆ, ಧನ್ಯವಾದಗಳು.

Submitted by H A Patil Tue, 12/24/2013 - 20:16

In reply to by partha1059

ಪಾರ್ಥ ಸಾರಥಿ ಯವರಿಗೆ ವಂದನೆಗಳು
ಜಿ.ಎಸ್.ಶಿವರುದ್ರಪ್ಪ ರವರ ಕುರಿತು ಬರೆದ ನುಡಿ ನಮನವನ್ನು ಮೆಚ್ಚಿಕೊಂಡಿದ್ದಿರಿ ತಗಮ್ಮ ೀ ಮೆಚ್ಚುಗೆಯ ಪ್ರತಿಒಕ್ರಿಯೆಗೆ ಧನ್ಯವಾದಗಳು.

Submitted by swara kamath Tue, 12/24/2013 - 16:24

ಕವಿ ಜಿಎಸ್ಎಸ್ ಕುರಿತು ನಾವು ಸಂಪದಿಗರು ಇಂದು ಎದೆತುಂಬಿ ಮನಕರಗಿ ಎರಡು ಹನಿ ಕಣ್ಣೀರು ಮಿಡಿಯಲೇ ಬೇಕಿದೆ.ಸಂಪದ ಸಂದರ್ಶನದಲ್ಲಿ ಅವರ ಮಾತುಗಳ ಆಲಿಸಿದಾಗ ನಾವು ಎಂಥಹ ಒಬ್ಬ ಮಾಹನ್ ಕವಿಶ್ರೇಷ್ಟರನ್ನು ಇಂದು ಕಳೆದು ಕೊಂಡಿದ್ದೇವೆ ಎಂಬ ಭಾವನೆ ಬರದೇ ಇರಲಾರದು.ಅವರ ಆತ್ಮಕ್ಕೆ ಚಿರ ಶಾಂತಿಯನ್ನು ಕೋರುತ್ತಾ ಶೃದ್ಧಾಂಜಲಿ ಅರ್ಪಿಸುವ ಮುನ್ನ ಪಾಟೀಲರೆ ನಿಮ್ಮಈ ಲೇಖನವನ್ನ ಮನಸಾರೆ ಮೆಚ್ಚಿ ಅಭಿನಂದಿಸುತ್ತೇನೆ. ವಂದನೆಗಳು

Submitted by H A Patil Tue, 12/24/2013 - 20:20

In reply to by swara kamath

ರಮೇಶ ಕಾಮತರವರಿಗೆ ವಂದನೆಗಳು
ಡಾ.ಜಿ.ಎಸ್.ಶಿವರುದ್ರಪ್ಪ ನಮ್ಮನ್ನಗಲಿದ ಈ ಸಂಧರ್ಭದಲ್ಲಿ ಸಾಹಿತ್ಯ ಕೃತಿಗಳ ಮೂಲಕ ಅವರು ನನಗೆ ಅರ್ಥವಾದ ಬಗೆಯನ್ನು ಕುರಿತು ಸಂಪದದಲ್ಲಿ ದಾಖಲಿಸ ಬೇಕೆನಿಸಿತು, ಅದರ ಪರಣಾಮವೆ ಈ ಲೇಖನ ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by H A Patil Thu, 12/26/2013 - 19:13

In reply to by kavinagaraj

ಕವಿ ನಾಗರಾಜ ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ನನ್ನ ಬರವಣಿಗೆ ಎಂದೋ ಓದಿದ ನೆನಪುಗಳ ಆಧಾರದ ಮೇಲೆ ನಿಂತಿರುವಂತಹುದು, ಆದರೂ ಮೆಚ್ಚುವ ತಮ್ಮ ಉದಾರತನಕ್ಕೆ ಧನ್ಯವಾದಗಳು.