ಒಂದೂ ಇಂದೂ ಹೆಚ್ಚು ಕಮ್ಮಿ ಒಂದೇ ಕಣ್ರೀ !
ಅಂದು ವಿದ್ಯುತ್ ದೀಪ ಇಲ್ಲ ಅಂತ ಬುಡ್ಡೀ ದೀಪ ಇಟ್ಕೊಂಡಿದ್ರು
ಇಂದು ವಿದ್ಯುತ್ ದೀಪ ಇದ್ದು ಕರೆಂಟಿಲ್ಲ ಅಂತ ಕ್ಯಾಂಡಲ್ ಇಟ್ಕೊಳ್ತಾರೆ
ಅಂದು ತಿಂಗಳಿಗೊಮ್ಮೆ ಶೆಟ್ಟಿ ಅಂಗಡಿಯಿಂದ ದಿನಸಿ ತರ್ತಿದ್ರು
ಇಂದು ವಾರಕ್ಕೊಮ್ಮೆ ಸೂಪರ್ ಮಾರ್ಕೆಟ್ ಗ್ರಾಸರಿ ತರ್ತಾರೆ
ಅಂದು ಜೇಬಲ್ಲೊಂದೇ ನೋಟನ್ನು ತುರುಕಿ ಅಂಗಡಿಗೆ ಹೋಗ್ತಿದ್ರು
ಇಂದು ಜೇಬಲ್ಲೊಂದೇ ಕಾರ್ಡು ತುರುಕಿ ಅಂಗಡಿಗೆ ಹೋಗ್ತಾರೆ
ಅಂದು ವಾರಕೊಮ್ಮೆ ಸಂತೆ ಅಂತಾ ಮೋಜು ಮಾಡ್ತಿದ್ರು
ಇಂದು ದಿನವೂ ಮಾಲುಗಳ ಸುತ್ಕೊಂಡ್ ಮೋಜು ಮಾಡ್ತಾರೆ
ಅಂದು ಬೈಸಿಕಲ್ ಏರ್ಕೊಂಡ್ ಕುತ್ತಿಗೆಗೆ ಕೈಹಾಕಿ ಸರ ಕದ್ದೋಡ್ತಿದ್ರು
ಇಂದು ಬೈಕನ್ನು ಏರ್ಕೊಂಡ್ ಕುತ್ತಿಗೆಗೆ ಕೈಹಾಕಿ ಸರ ಕದ್ದೋಡ್ತಾರೆ
ಅಂದು ಮಡಿ ಮೈಲಿಗೆ ಅಂತ ಯಾರನ್ನೂ ಮುಟ್ಟಿಸಿಕೊಳ್ಳದೆ ದೂರ ಇರ್ತಿದ್ರು
ಇಂದು ಪ್ರೈವಸಿ, ಕೀಟಾಣುಗಳು ಅಂತ ಮುಟ್ಟಿಸಿಕೊಳ್ಳದೆ ದೂರ ಇರ್ತಾರೆ
ಅಂದು ನೂರಾರು ರೂಪಾಯಿ ಸಂಬಳ ತಂದೂ ಸಾಲ ಮಾಡ್ತ ಇರ್ತಿದ್ರು
ಇಂದು ಲಕ್ಷಾಂತರ ರೂಪಾಯಿ ಸಂಬಳ ತಂದೂ ಸಾಲ ಮಾಡ್ತಾರೆ
ಅಂದು ವೈನಾದ ಬಟ್ಟೆ ಬರೆ ತೊಟ್ಟು ಸಿರಿತನ ತೋರಿ ತಾರತಮ್ಯ ಮಾಡ್ತ ಇದ್ರು
ಇಂದು ‘why’ ಬಟ್ಟೆ ಬರೆ ಅಂತ ತೊಟ್ಟೂ ತೊಡದಂತೆ ಯಾವ್ದೋ ಸಿರಿತನ ತೋರುತ್ತಾರೆ
ಅಂದು ಗಳಿಕೆ ಇಲ್ಲದ ಸಂಕಟದಿಂದ ಕಾಪಾಡೆಂದು ದೇವನ ಮುಂದೆ ತಲೆ ಬಾಗುತ್ತಿದ್ದರು
ಇಂದು ಗಳಿಸಿದ ಸಂಕಟದಿಂದ ಕಾಪಾಡೆಂದು ದೇವನ ಮುಂದೆ ತಲೆ ಬಾಗುತ್ತಲೇ ಇರ್ತಾರೆ
ಅಂದಿಗೂ ಇಂದಿಗೂ ಏನೂ ಬದಲಾಗಿಲ್ಲ ಇದ್ದ ಹಾಗೇ ಇದೆ ಕಣ್ರೀ ಜೀವನ
ಬಾಟ್ಲಿ ಹೊಸತು ಮದ್ಯ ಹಳತು ಹಚ್ಚಿದ ಲೇಬಲ್ ಮಾತ್ರ ನವನವೀನ
ಅಂದೂ ಡಿಸೆಂಬರ್ ೩೧ಕ್ಕೆ ಹೊಸ ಆಶಯಗಳೊಂದಿಗೆ ಎದುರು ನೋಡ್ತಿದ್ರು ಹೊಸ ವರ್ಷ
ಇಂದೂ ಕಾಯ್ವರು ಜನವರಿ ಒಂದರ ದಿನಕರ ತಂದೇ ತರುವನೆಂದು ಹೊಸ ಹರುಷ
ಹೊಸ ವರುಷದ ಮೊದಲ್ ದಿನವೇ ಅಮಾವಾಸ್ಯೆ ಎಂದು ಮೂಗೆಳೆಯಬೇಡಿ
ಹೊಸ ವರುಷದ ಮೊದಲ್ ದಿನವೇ ಕಾರ್ಗತ್ತಲು ಕರಗಿತು ಎನ್ನಲು ಮರೆಯಬೇಡಿ
ಹಿಂದಿನವರಿಗೂ ಇಂದಿನವರಿಗೂ ಮುಂಬರುವವರಿಗೂ ೨೦೧೪ ಹೊಸ ಹರುಷದ ಶುಭಾಶಯಗಳು !
Comments
ಉ: ಒಂದೂ ಇಂದೂ ಹೆಚ್ಚು ಕಮ್ಮಿ ಒಂದೇ ಕಣ್ರೀ !
ಅಂದು ಯುಗಾದಿಗೆ ಶುಭಾಶಯ ಕೋರುತ್ತಿದ್ದರು,
ಇಂದು ನ್ಯೂ ಇಯರ್‌ಗೆ ಶುಭಾಶಯ ಕೋರುತ್ತಿದ್ದೇವೆ!
ಅಂದು ಹೋಳಿಗೆ ಕೋಸಂಬರಿ ನೈವೇದ್ಯ ಮಾಡಿ ಸಂತಸಪಟ್ಟರೆ,
ಇಂದು ಬೀರು, ಮಟನ್ ಚಿಕನ್ ತಿಂದು ಸಂತಸ ಪಡುತ್ತಿದ್ದೇವೆ!
ಅಂದು ಹೊಸ ಚಂದ್ರನ ನೋಡಿ ಹಿರಿಯರ ಕಾಲಿಗೆ ಬಿದ್ದರೆ,
ಇಂದು ರಾತ್ರಿ ೧೨ರ ನಂತರ ಕೈಕುಲಕಿ ಕಾಲೆಳೆಯುತ್ತೇವೆ!
ಅಂದು ಆಚಾರವೂ ಇತ್ತು ಅದಕ್ಕೊಂದು ಆಕಾರವೂ ಇತ್ತು
ಇಂದು ಆಚಾರವಿಲ್ಲ ಆದರೆ ಯಾವುದೋ ಒಂದು ಆಕಾರವಂತೂ ಇದೆ.
ಅಂದು ಪತ್ರಮುಖೇನ ಶುಭಾಶಯ ವಿನಿಮಯ,
ಇಂದು ನೆಟ್-ಮೂಲಕ ಶುಭಾಶಯ ವಿನಿಮಯ,
ಕಾಲಾಯ ತಸ್ಮೈ ನಮಃ
ನಿಮ್ಮ ವಿನೂತನ ರೀತಿಯ ಶುಭಾಶಯಕ್ಕೆ ಧನ್ಯವಾದಗಳು ಭಲ್ಲೇಜಿ.
In reply to ಉ: ಒಂದೂ ಇಂದೂ ಹೆಚ್ಚು ಕಮ್ಮಿ ಒಂದೇ ಕಣ್ರೀ ! by makara
ಉ: ಒಂದೂ ಇಂದೂ ಹೆಚ್ಚು ಕಮ್ಮಿ ಒಂದೇ ಕಣ್ರೀ !
ತುಂಬಾ ಚೆನ್ನಾಗಿ ಅಂದು-ಇಂದು ಕವನವನ್ನು ಮುಂದುವರೆಸಿದ್ದೀರಿ. ಅನಂತ ಧನ್ಯವಾದಗಳು. ನಿಮಗೂ ನಿಮ್ಮ ಕುಟುಂಬವರ್ಗದವರಿಗೂ ಹೊಸವರ್ಷದ ಶುಭಾಶಯಗಳು.
ನಿಮ್ಮನ್ನು ಭೇಟಿಯಾದ ದಿನ ಇನ್-ಪರ್ಸನ್ ಶುಭಾಶಯ ಹೇಳುವೆ. ಅಲ್ಲಿಯವರೆಗೂ ನೆಟ್ ಶುಭಾಶಯ ಸ್ವೀಕರಿಸಿ :-)