೧೯೮. ಲಲಿತಾ ಸಹಸ್ರನಾಮ ೯೨೯ರಿಂದ ೯೪೦ನೇ ನಾಮಗಳ ವಿವರಣೆ

೧೯೮. ಲಲಿತಾ ಸಹಸ್ರನಾಮ ೯೨೯ರಿಂದ ೯೪೦ನೇ ನಾಮಗಳ ವಿವರಣೆ

                                                                  ಲಲಿತಾ ಸಹಸ್ರನಾಮ ೯೨೯-೯೪೦

Śruti-saṃstuta-vaibhavā श्रुति-संस्तुत-वैभवा (929)

೯೨೯. ಶ್ರುತಿ-ಸಂಸ್ಥುತ-ವೈಭವಾ

             ಶ್ರುತಿ ಎಂದರೆ ವೇದಗಳು ಮತ್ತು ಸಂಸ್ಥುತಾ ಎಂದರೆ ಅನುಭವ. ಈ ನಾಮವು ದೇವಿಯು ವೇದಗಳ ಮೂಲಕ ಪೂಜಿಸಲ್ಪಡುತ್ತಾಳೆ ಎಂದು ಹೇಳುತ್ತದೆ. ಈ ನಾಮದ ಮೂಲವು ಬಹುರ್ವಚಾ ಉಪನಿಷತ್ತು (ಪ್ರಚಲಿತವಿರುವ ೧೦೮ ಉಪನಿಷತ್ತುಗಳಲ್ಲಿ ೧೦೭ನೆಯದು) ಹೀಗೆ ಹೇಳುತ್ತದೆ, ದೇವಿಯು (ಇಲ್ಲಿ ದೇವಿಯನ್ನು ಮಹಾತ್ರಿಪುರ ಸುಂದರೀ ಅಥವಾ ಲಲಿತಾಂಬಿಕೆಯೆಂದು ಉಲ್ಲೇಖಿಸಲಾಗಿದೆ) ಸೃಷ್ಟಿಕರ್ತಳಾಗಿದ್ದಾಳೆ ಮತ್ತು ಆಕೆಯಿಂದಲೇ ಸಮಸ್ತವೂ ಸೃಜಿಸಲ್ಪಟ್ಟಿತು. ಈ ಉಪನಿಷತ್ತು ದೇವಿಯ ಪರಬ್ರಹ್ಮಸ್ವರೂಪವನ್ನು ಪುನಃ ದೃಢಪಡಿಸುತ್ತದೆ. ಪರಬ್ರಹ್ಮವು ಸಕಲ ವೇದೋಪನಿಷತ್ತುಗಳಲ್ಲಿ ಸ್ತುತಿಸಲ್ಪಟ್ಟಿದೆ.

            ದೇವಿಗೆ ಚತುರ್ವಿಧ ಶಕ್ತಿಗಳಿವೆ ಎಂದು ಹೇಳಲಾಗುತ್ತದೆ, ಅವೆಂದರೆ ಶಾಂತಿ, ಜ್ಞಾನ, ನಿರ್ವಿಕಾರ ಮತ್ತು ಚ್ಯುತಿಯಿಲ್ಲದಿರುವಿಕೆ (ಅಚ್ಯುತತೆ) ಮತ್ತಿವು ಅವು ಆಕೆಯ ಸ್ವಂತ ಶಕ್ತಿಗಳಾಗಿವೆ. ದೇವಿಯ ಈ ನಾಲ್ಕು ಶಕ್ತಿಗಳ ಮೂಲಕವಾಗಿ ಶಿವನು ಪರಮಾನಂದವನ್ನು ಅನುಭವಿಸುತ್ತಾನೆ ಎಂದು ಹೇಳಲಾಗುತ್ತದೆ. ದೇವಿಗೆ ಎಲ್ಲಾ ಶಕ್ತಿಗಳನ್ನು ಕೊಟ್ಟವನು ಶಿವನೇ.

            ಕೇನ ಉಪನಿಷತ್ತು (೪.೮) ಹೀಗೆ ಹೇಳುತ್ತದೆ, "ಧರ್ಮಾಚರಣೆ, ಇಂದ್ರಿಯನಿಗ್ರಹ ಮತ್ತು ಆಧ್ಯಾತ್ಮಿಕ ಸಾಧನೆ ಇವು ಆತ್ಮ ಜ್ಞಾನಕ್ಕೆ ಬುನಾದಿಯಾಗಿವೆ. ವೇದಗಳು ಅದರ ಅವಯವಗಳಾದರೆ, ಸತ್ಯವು ಅದರ ವಾಸಸ್ಥಾನವಾಗಿದೆ.

ಹೆಚ್ಚಿನ ವಿವರಗಳು: ಈ ಕೆಳಗಿನ ಶ್ಲೋಕವು ಶಿವನು ಎಲ್ಲಾ ವೇದ, ಉಪನಿಷತ್ತು, ಪುರಾಣ ಮತ್ತು ಇತಿಹಾಸಗಳ ಮೂಲವಾಗಿದ್ದಾನೆ ಎಂದು ಹೇಳುತ್ತದೆ.

                            ಶ್ರುತಿ ಸ್ಮೃತಿ ಪುರಾಣಾಂ ಆಲಯಂ ಕರುಣಾಲಯಂ l

                            ನಮಾಮಿ ಭಗವತ್ಪಾದಮ್ ಶಂಕರಂ ಲೋಕಶಂಕರಂ ll

                            श्रुति स्मृति पुराणां आलयं करुणालयं l

                            नमामि भगवत्पादम् शंकरं लोकशंकरं ll

            ಮೇಲಿನ ಶ್ಲೋಕದ ಅರ್ಥವು ಹೀಗಿದೆ: ಈ ಪ್ರಪಂಚಕ್ಕೆ ಕಲ್ಯಾಣವನ್ನುಂಟು ಮಾಡುವ, ಯಾರು ವೇದೋಪನಿಷತ್ತುಗಳ ಮತ್ತು ಪುರಾಣೇತಿಹಾಸಗಳ ದಿವ್ಯ ಜ್ಞಾನದ ಭಂಡಾರವಾಗಿದ್ದಾನೆಯೋ, ಯಾರು ಕರಣಾ ಮೂರ್ತಿಯಾಗಿದ್ದಾನೆಯೋ ಅಂತಹ ದೇವನಾದ ಶಂಕರನಿಗೆ ನಾನು ನಮಿಸುತ್ತೇನೆ.

ಶ್ರುತಿ ಮತ್ತು ಸ್ಮೃತಿಗಳಿಗಿರುವ ವ್ಯತ್ಯಾಸ:

              ಶ್ರುತಿ ಎಂದರೆ ಕೆಲವೊಂದು ಋಷಿಗಳಿಂದ ಕೇಳಿಸಿಕೊಳ್ಳಲ್ಪಟ್ಟ ಪವಿತ್ರವಾದ ಮತ್ತು ನಿತ್ಯನಿರಂತರವಾದ ಶಬ್ದ ಅಥವಾ ಪದಗಳು; ಮತ್ತು ಇವು ಸ್ಮೃತಿಗಳಿಗಿಂತ ಭಿನ್ನವಾಗಿವೆ ಏಕೆಂದರೆ ಸ್ಮೃತಿಗಳನ್ನು ನೆನಪಿನಲ್ಲಿಟ್ಟುಕೊಂಡು ಅವುಗಳು ಪೀಳಿಗೆಯಿಂದ ಪೀಳಿಗೆಗೆ ಬರವಣಿಗೆಯ ಮೂಲಕ ಮಾನವ ಲೇಖಕರಿಂದ ಕೊಡಮಾಡಲ್ಪಟ್ಟಿವೆ.

Manasvinī मनस्विनी (930)

೯೩೦. ಮನಸ್ವಿನೀ

             ದೇವಿಯ ಮನಸ್ಸು ಸ್ವತಂತ್ರವಾಗಿದೆ ಅಥವಾ ಅದು ಸ್ವಯಂ ನಿಯಂತ್ರಣಹೊಂದಿದೆ, ಅಥವಾ ಅದು ತನ್ನಿಚ್ಛೆಯಂತೆ ವರ್ತಿಸಬಲ್ಲುದು ಅಥವಾ ಅದಕ್ಕೆ ಯಾವುದೇ ವಿಧವಾದ ನಿರ್ಬಂಧಗಳಿಲ್ಲ. ಇದನ್ನೇ ಸ್ವತಂತ್ರ ಮನೋಭಾವದ ಸಿದ್ಧಾಂತ ಎಂದು ಕರೆಯಲಾಗುತ್ತದೆ. ಇದು ಅಸ್ತಿತ್ವವು ಇನ್ನೂ ರೂಪಾಂತರಗೊಳ್ಳದೇ ಇರುವ ಸ್ಥಿತಿಯಾಗಿದೆ. ಇದು ಮಾರ್ಪಾಟು ಹೊಂದುವ ದಶೆಯಲ್ಲಿರುತ್ತದೆ ಮತ್ತದು ಇಚ್ಛೆಯಾಗಿ ನಿಯೋಜಿಸಲ್ಪಟ್ಟಿರುತ್ತದೆ, ಈ ಹಂತದಲ್ಲಿ ಯಾವುದೇ ವಿಧವಾದ ಇಚ್ಛೆಯು ಇನ್ನೂ ಪ್ರಧಾನವಾಗಿರುವುದಿಲ್ಲ. ಮನಸ್ಸಿನ ಈ ಹಂತವು ರೂಪಾಂತರ ಹೊಂದುವ ಜೀವಿಯ ಪ್ರಜ್ಞೆಯ ಒಂದು ಸ್ಥಿತಿಯಾಗಿದೆಯಷ್ಟೇ. ಬ್ರಹ್ಮವು ಯಾವಾಗಲು ತನ್ನ ಪ್ರಜ್ಞೆಯ ಬಗೆಗೆ ಅರಿವನ್ನು ಹೊಂದಿರುತ್ತದೆ. ಈ ನಾಮವು ದೇವಿಗೆ ಸ್ಥಿತಪ್ರಜ್ಞವಾದ ಮನಸ್ಸಿದೆ ಎಂದು ಹೇಳುತ್ತದೆ.

            ದೇವಿಗೆ ಸ್ವತಂತ್ರ ಸ್ವಭಾವವಿದೆ ಎನ್ನುವುದರ ಅರ್ಥ ಸ್ವಾತಂತ್ರ‍್ಯವು ಆಕೆಯ ಮೂಲಭೂತ ಲಕ್ಷಣವಾಗಿದೆ.

            ಬೃಹದಾರಣ್ಯಕ ಉಪನಿಷತ್ತು (೪.೪.೨೦), "ಕೇವಲ ಮನಸ್ಸಿನಿಂದ ಮಾತ್ರವೇ ಬ್ರಹ್ಮವು ಅರಿಯಲ್ಪಡಬೇಕು", ಎಂದು ಹೇಳುತ್ತದೆ. ಇದನ್ನೇ ಈ ನಾಮವು ದೇವಿಯನ್ನು ಮನಸ್ಸಿನಿಂದ ಅರಿಯಬೇಕು ಎಂದು ಹೇಳುತ್ತದೆ.

Mānavatī मानवती (931)

೯೩೧. ಮಾನವತೀ

             ದೇವಿಗೆ ಅತ್ಯುನ್ನತವಾದ ನೈತಿಕತೆ ಅಥವಾ ಮೇಧಾವಿತನದಿಂದ ಕೂಡಿದ ಮನಸ್ಸಿದೆ, ಅದು ಸ್ವಭಾವ ಮತ್ತು ಲಕ್ಷಣಗಳಲ್ಲಿ ಶ್ರೇಷ್ಠತರದ್ದಾಗಿದೆ. ಮನಸ್ಸಿನ ಈ ವಿಧವಾದ ಗುಣದಿಂದಾಗಿ, ಆಕೆಯನ್ನು ಶ್ರೀ ಮಾತಾ ಅಥವಾ ದೈವೀ ಮಾತೆ ಎಂದು ಗೌರವಿಸಲಾಗುತ್ತದೆ. ಈ ನಾಮವು ದೇವಿಗೆ ಕ್ಷಮಾಗುಣದಿಂದ ಕೂಡಿದ ಮತ್ತು ಕರುಣಾಪೂರಿತವಾದ ಉನ್ನತವಾದ ಮನಸ್ಸಿದೆ ಎಂದು ಹೇಳುತ್ತದೆ.

Maheśi महेशी (932)

೯೩೨. ಮಹೇಶೀ

            ಮಹೇಶನ ಪತ್ನಿಯು ಮಹೇಶೀ ಆಗಿದ್ದಾಳೆ. ದೇವಿಯನ್ನು ಮಾಹೇಶ್ವರೀ ಎಂದು ನಾಮ ೨೦೮ರಲ್ಲಿ ಸಂಭೋದಿಸಲಾಗಿದ್ದರೆ, ಮಹೇಶ್ವರೀ ಎಂದು ನಾಮ ೭೫೦ರಲ್ಲಿ ಸಂಭೋದಿಸಲಾಗಿದೆ. ಈ ನಾಮವೂ ಸಹ ದೇವಿಯು ಮಹೇಶ್ವರನಿಂದ ಉದ್ಭವಿಸಿದ್ದಾಳೆ ಎನ್ನುವುದನ್ನು ಸೂಚಿಸುತ್ತದೆ.

Maṅgalākṭtiḥ मङ्गलाकृतिः (933)

೯೩೩. ಮಂಗಳಾಕೃತಿಃ

             ಮಂಗಳ ಎಂದರೆ ಶುಭಕರವಾದದ್ದು, ಸಂತೋಷ, ಸೌಭಾಗ್ಯ, ಕಲ್ಯಾಣ, ಆನಂದ, ಮೊದಲಾದ ಅರ್ಥಗಳನ್ನು ಹೊಂದಿದೆ. ಈ ನಾಮವು ದೇವಿಯು ಇಂತಹ ಗುಣಗಳ ಮೂರ್ತರೂಪವಾಗಿದ್ದಾಳೆ ಎಂದು ಹೇಳುತ್ತದೆ. ಈ ನಾಮವು ೧೧೬ ಮತ್ತು ೨೦೦ನೇ ನಾಮಗಳ ವಿವರಣೆಯಲ್ಲಿ ಚರ್ಚಿಸಿದ ವಿಷಯಗಳನ್ನು ಪುನಃ ದೃಢಪಡಿಸುತ್ತದೆ.

Viśvamātā विश्वमाता (934)

೯೩೪. ವಿಶ್ವಮಾತಾ

            ದೇವಿಗೆ ಎಲ್ಲಾ ವಿಧವಾದ ಆಕಾರಗಳಿವೆ ಅಥವಾ ಆಕೆಯ ಶರೀರವು ಪ್ರಪಂಚವಾಗಿದೆ ಮತ್ತು ಇದನ್ನು ಕೇವಲ ಪರಮಾತ್ಮಕ್ಕೆ ಮಾತ್ರವೇ ಅನ್ವಯಿಸಲಾಗುತ್ತದೆ. ಇವೆಲ್ಲವೂ ವಿಶ್ವಮೂರ್ತಿಯ ಗುಣಲಕ್ಷಣಗಳು. ಕೃಷ್ಣನು ಭಗವದ್ಗೀತೆಯಲ್ಲಿ (೧೩.೧೩), "ಬ್ರಹ್ಮವು ಈ ಪ್ರಪಂಚದಲ್ಲಿ ಅಂತರ್ಯಾಮಿಯಾಗಿದೆ", ಎಂದು ಹೇಳುತ್ತಾನೆ. ಈ ನಾಮವು ದೇವಿಯ ಸರ್ವವ್ಯಾಪಕತ್ವದ ಗುಣವನ್ನು ದೃಢ ಪಡಿಸುತ್ತದೆ ಮತ್ತು ಈ ಗುಣವು ಪರಬ್ರಹ್ಮದ ಪ್ರತ್ಯೇಕ ಲಕ್ಷಣವಾಗಿದೆ. ಆಕೆಯು ವಿಶ್ವಮಾತೆಯಾಗಿರುವುದರಿಂದ ಆಕೆಯು ಶ್ರೀ ಮಾತಾ (ನಾಮ ೧) ಆಗಿದ್ದಾಳೆ.

            ವಿಷ್ಣು ಸಹಸ್ರನಾಮದ ಮೊದಲನೇ ನಾಮವು ವಿಶ್ವಃ ಆಗಿದೆ ಏಕೆಂದರೆ ಅವನು ವಿಶ್ವಮೂರ್ತಿ ಆಗಿದ್ದಾನೆ. ದೇವಿಯು ವಿಷ್ಣುವಿನ ತಾಯಿಯೆಂತಲೂ ಹೇಳಲಾಗುತ್ತದೆ. ವಿಶ್ವ ಎಂದರೆ ವಿಷ್ಣು ಮತ್ತು ಮಾತಾ ಎಂದರೆ ತಾಯಿ. ವಿಶ್ವ ಎನ್ನುವುದರ ಸಾಮಾನ್ಯ ಅರ್ಥವು ಸರ್ವಾಂತರಯಾಮಿ ಅಥವಾ ಎಲ್ಲವನ್ನೂ ಒಳಗೊಂಡ, ಸರ್ವವ್ಯಾಪದಕವಾದ ಎಂದಿದ್ದರೂ ಸಹ ಅದು ವಿಶೇಷವಾಗಿ ಭಗವಾನ್ ವಿಷ್ಣುವನ್ನು ಸೂಚಿಸುತ್ತದೆ. ಈ ವಿವರಣೆಯನ್ನು ಆಧರಿಸಿ, ದೇವಿಯು ವಿಷ್ಣುವಿಗೆ ಮಾತೆಯಾಗಿದ್ದಾಳೆ ಎಂದು ಹೇಳಲಾಗುತ್ತದೆ.

Jagaddhātrī जगद्धात्री (935)

೯೩೫. ಜಗದ್ಧಾತ್ರೀ

           ದೇವಿಯು ಜಗತ್ತಿಗೆ ಆಧಾರವಾಗಿದ್ದಾಳೆ; ನಾಮ ೩೩೭ ವಿಧಾತ್ರೀಯಲ್ಲಿ ಚರ್ಚಿಸಿದಂತೆ.

           ಬೃಹದಾರಣ್ಯಕ ಉಪನಿಷತ್ತು (೪.೪.೨೨), "ಅದು (ಬ್ರಹ್ಮವು) ಎಲ್ಲರ ಒಡೆಯನಾಗಿದೆ, ಅದು ಎಲ್ಲಾ ಜೀವಿಗಳ ಅಧಿಪತಿಯಾಗಿದೆ, ಅದು ಸಕಲ ಜೀವಿಗಳ ರಕ್ಷಕನಾಗಿದೆ" ಎಂದು ಹೇಳುತ್ತದೆ. ದೇವಿಯು ಈ ಪ್ರಪಂಚಕ್ಕೆ ಆಧಾರವಾಗಿದ್ದುಕೊಂಡು ಇದನ್ನು ಪರಿಪಾಲಿಸುತ್ತಾಳೆ.

Viśālākṣī विशालाक्षी (936)

೯೩೫. ವಿಶಾಲಾಕ್ಷೀ

           ದೇವಿಗೆ ದೊಡ್ಡದಾದ ಕಣ್ಣುಗಳಿವೆ. ಸೌಂದರ್ಯ ಲಹರಿಯು (ಸ್ತೋತ್ರ ೪೯) ದೇವಿಯ ಕಣ್ಣುಗಳನ್ನು ವರ್ಣಿಸುತ್ತದೆ. "ನಿನ್ನ ಕಣ್ಣುಗಳು ವಿಶಾಲವಾಗಿವೆ, ಮಂಗಳಕರವಾಗಿವೆ, ತೇಜಸ್ಸಿನಿಂದ ಹೊಳೆಯುತ್ತಿವೆ, ಕರುಣಾಪೂರಿತವಾಗಿವೆ, ಮೊದಲಾಗಿ.."

           ಲಲಿತಾಂಬಿಕೆಯ ರೂಪವು ಅಭಯ (’ಅ’ವನ್ನು ಭಯದ (ಹೆದರಿಕೆಯ) ವಿರುದ್ಧಾರ್ಥ ನೀಡಲು ಬಳಸಲಾಗಿದೆ) ಮತ್ತು ವರದ (ವರವನ್ನು ಕರುಣಿಸುವ ಅಥವಾ ಬೇಡಿದ ವರಗಳನ್ನು ದಯಪಾಲಿಸುವ) ಹಸ್ತಗಳನ್ನು ಒಳಗೊಂಡಿರುವುದಿಲ್ಲ. ಸಾಮಾನ್ಯವಾಗಿ ದೇವ-ದೇವಿಯರ ರೂಪಗಳನ್ನು ಎರಡಕ್ಕಿಂತ ಹೆಚ್ಚು ಕೈಗಳಿರುವಂತೆ ಚಿತ್ರಿಸಲಾಗುತ್ತದೆ. ವರದ ಹಸ್ತವೆಂದು ಕರೆಯಲ್ಪಡುವ ಕೈಯು ವರಗಳನ್ನು ದಯಪಾಲಿಸಿದರೆ ಅಭಯ ಹಸ್ತವೆಂದು ಕರೆಯಲ್ಪಡುವ ಮತ್ತೊಂದು ಹಸ್ತವು ಭಯವನ್ನು ಹೋಗಲಾಡಿಸಿ, ಶಾಂತಿಯನ್ನು ಕರುಣಿಸಿ, ರಕ್ಷಣೆಯನ್ನು ಮತ್ತು ಭದ್ರತೆಯನ್ನು ಒದಗಿಸುತ್ತದೆ. ಆದರೆ ಲಲಿತಾಂಬಿಕೆಯು ಇವನ್ನು ತನ್ನ ಕಣ್ಣುಗಳಿಂದಲೇ ದಯಪಾಲಿಸುತ್ತಾಳೆ. ಆದ್ದರಿಂದ ದೇವಿಯ ಕಣ್ಣುಗಳನ್ನು ಅನೇಕ ಕೃತಿಗಳಲ್ಲಿ ಸ್ತುತಿಸಲಾಗಿದೆ. ಸೌಂದರ್ಯ ಲಹರಿಯು (ಸ್ತೋತ್ರ ೫೨ರಿಂದ ೫೭) ದೇವಿಯ ಕಣ್ಣುಗಳನ್ನು ವಿಶೇಷವಾಗಿ ವರ್ಣಿಸುತ್ತದೆ. ಈ ಸಹಸ್ರನಾಮದಲ್ಲಿಯೂ ಸಹ ನಾಮ ೧೮, ೩೬೨, ೫೬೧ ಮತ್ತು ೬೦೧ ದೇವಿಯ ಕಣ್ಣುಗಳನ್ನು ಸ್ತುತಿಸುತ್ತವೆ.

           ದೇವಿಯ ಕಣ್ಣುಗಳು ಏಕೆ ವಿಶಾಲವಾಗಿವೆ ಎಂದೆ ಆಕೆಯು ತನ್ನ ಕರುಣೆಯನ್ನು ಸಮಸ್ತ ಪ್ರಪಂಚದ ಮೇಲೆ ಬೀರುತ್ತಾಳಾದ್ದರಿಂದ. ದೇವಿಯ ಕಣ್ಣುಗಳು ಆಕೆಯ ಸಂಪೂರ್ಣ ಸ್ವರೂಪವನ್ನು ಸುಂದರಗೊಳಿಸುತ್ತವೆ.

Virāgiṇī विरागिणी (937)

೯೩೭. ವಿರಾಗಿಣೀ

            ದೇವಿಯು ಭಾವೋದ್ವೇಗ ರಹಿತಳಾಗಿದ್ದಾಳೆ. ವೈರಾಗ್ಯವೆಂದರೆ ಎಲ್ಲಾ ವಿಧವಾದ ಐಹಿಕ ಸುಖಭೋಗಗಳಿಂದ ಮುಕ್ತಿ ಹೊಂದುವುದು. ಈ ಗುಣವನ್ನು ನಾಮ ೧೫೬ -’ನಿರಾಗಾ’ದಲ್ಲಾಗಲೇ ಚರ್ಚಿಸಲಾಗಿದೆ.

            ಈ ಸಹಸ್ರನಾಮದಲ್ಲಿ ಕೆಲವೊಂದು ನಾಮಗಳು ಬೇರೆ ನಾಮಗಳಲ್ಲಿ ವಿವರಿಸಿರುವಂತಹ ಒಂದೇ ಅರ್ಥಗಳನ್ನು ಹೊಂದಿವೆ. ಇಂತಹ ಬಳಕೆಯು ಇದಾಗಲೇ ಹೇಳಿರುವ ಗುಣಗಳನ್ನು ಮತ್ತೊಮ್ಮೆ ದೃಢ ಪಡಿಸುವುದಾಗಿದೆ. ಉದಾಹರಣೆಗೆ, ದೇವಿಯ ಪರಬ್ರಹ್ಮದ ಸ್ಥಾನವನ್ನು ದೃಢೀಕರಿಸುವ ಹಲವಾರು ನಾಮಗಳಿವೆ.

Pragalbhā प्रगल्भा (938)

೯೩೮. ಪ್ರಗಲ್ಭಾ

           ದೇವಿಯು ಧೈರ್ಯಶಾಲಿ ಮತ್ತು ಆತ್ಮವಿಶ್ವಾಸಳ್ಳವಳಾಗಿದ್ದು ಆಕೆಯು ದೃಢ ಚಿತ್ತದಿಂದ ವ್ಯವಹರಿಸಿತ್ತಾಳೆ. ಆಕೆಯು ದೃಢ ಸಂಕಲ್ಪವನ್ನು ಹೊಂದಿದ್ದಾಳೆ ಏಕೆಂದರೆ ಆಕೆಯು ಸಮಸ್ತ ಪ್ರಪಂಚದ ಆಳ್ವಿಕೆಯನ್ನು  ದೈವ ನಿಯಾಮಕವಾದ ಕರ್ಮ ನಿಯಮದಂತೆ ಕೈಗೊಳ್ಳಬೇಕಾಗಿದೆ. ದೇವಿಯು ತನ್ನ ನಿಯಮಗಳನ್ನು ತಾನೇ ಅಧಿಗಮಿಸುವುದಿಲ್ಲ.

Paramodārā परमोदारा (939)

೯೩೯. ಪರಮೋದಾರ

            ದೇವಿಯು ಪರಮ ಉದಾರಿಯಾಗಿದ್ದಾಳೆ. ದೇವಿಯು ಬೇಡದೇ ಕೊಡುತ್ತಾಳೆ ಅಥವಾ ನಾವು ಬೇಡಿದ್ದಕ್ಕಿಂತಲೂ ಅಧಿಕವಾದದ್ದನ್ನು ಕೊಡುತ್ತಾಳೆ. ಉದಾರ ಎಂದರೆ ಮಹತ್ತರವಾದ ಮತ್ತು ಪರಾ ಎಂದರೆ ಶ್ರೇಷ್ಠವಾದ. ದೇವಿಯು ಮಹಾನ್ ಶ್ರೇಷ್ಠಳೆಂದು ಸಂಭೋದಿಸಲ್ಪಡುತ್ತಾಳೆ ಮತ್ತು ಆಕೆಯು ದೇಶ, ಕಾಲಗಳಿಗೆ ಅತೀತಳಾಗಿದ್ದಾಳೆ.

            ಈ ನಾಮವನ್ನು ಪರಾ (ಪರಮೋನ್ನತ)+ಮೋದ (ಆನಂದ)+ಆ(ಸರ್ವ ವಿಧವಾದ)+ರ (ದಯಪಾಲಿಸು). ಆಗ ಇದರ ಒಟ್ಟಾರೆ ಅರ್ಥವು ದೇವಿಯು ನಿರಂತರವಾದ ಆನಂದ ಅಥವಾ ಪರಮಾನಂದವನ್ನು ದಯಪಾಲಿಸುತ್ತಾಳೆ ಎಂದಾಗುತ್ತದೆ. ಪರಮಾನಂದವು ಅಂತಿಮವಾದ ಮುಕ್ತಿಯ ಹಂತಕ್ಕಿಂದ ಒಂದು ಹೆಜ್ಟೆ ಹಿಂದಿನದಾಗಿದೆ.

ಕುತೂಹಲಕರ ಮಾಹಿತಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನ್ಮ ಕುಂಡಲಿಯಲ್ಲಿ, ಕೇತು ಅಥವಾ ಗುರುಗ್ರಹವು ಒಂಭತ್ತನೆಯ ಮನೆಯೊಂದಿಗೆ ಅನುಬಂಧ ಹೊಂದಿದ್ದರೆ ಮಾತ್ರ ಮುಕ್ತಿಯನ್ನು ಉಂಟು ಮಾಡುತ್ತವೆ. ಹನ್ನೆರಡನೇ ಮನೆಯು ಮೋಕ್ಷವನ್ನು ಕೊಡುವ ಮನೆಯಾಗಿದೆ. (ಹನ್ನೆರಡನೇ ಮನೆಯಲ್ಲಿ ಕೇತುವು ಉಪಸ್ಥಿತನಾಗಿದ್ದರೆ ಮಾತ್ರ ಮುಕ್ತಿಯನ್ನು ಕರುಣಿಸುತ್ತಾನೆಂದು ಹೇಳಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಆತ್ಮಕಾರಕ ಗ್ರಹದಿಂದ ನವಾಂಶದಲ್ಲಿ ಹನ್ನೆರಡನೇ ಮನೆಯಲ್ಲಿದ್ದರೆ ಮುಕ್ತಿಯನ್ನು ಕೊಡುತ್ತಾನೆಂದು ಹೇಳಲಾಗುತ್ತದೆ).

Parā-modā परा-मोदा (940)

೯೪೦. ಪರಾ-ಮೋದಾ

            ಪರಾ ಎಂದರೆ ಅತ್ಯುನ್ನತವಾದ ಮತ್ತು ಮೋದ ಎಂದರೆ ಸಂತೋಷ, ಆನಂದ, ಹಿಗ್ಗುವಿಕೆ, ಆಹ್ಲಾದ ಮೊದಲಾದವು. ಈ ನಾಮವು ದೇವಿಯ ಪರಮಾನಂದದ ಮೂರ್ತಿಯಾಗಿದ್ದಾಳೆಂದು ಹೇಳುತ್ತದೆ. ಹಿಂದಿನ ನಾಮವು ದೇವಿಯು ಪರಮಾನಂದವನ್ನು ಕರುಣಿಸುತ್ತಾಳೆಂದು ಹೇಳಿದರೆ ಈ ನಾಮವು ಆಕೆಯನ್ನೇ ಪರಮಾನಂದದ ಮೂರ್ತರೂಪವೆಂದು ಸಾರುತ್ತದೆ.

           ಈ ಸಹಸ್ರನಾಮದಲ್ಲಿ ದೇವಿಯ ಸ್ಥೂಲ ರೂಪವನ್ನು ಅದೆಷ್ಟು ಸುಂದರವಾಗಿ ವಿವರಿಸಲಾಗಿದೆ ಎಂದರೆ ಅದರ ಮೂಲಕ ಆಕೆಯ ಕಲ್ಪನೆಯನ್ನು ಮಾಡಿಕೊಳ್ಳಬಹುದು ಮತ್ತು ತನ್ಮೂಲಕ ಪರಮಾನಂದದೆಡೆಗೆ ಸಾಗಬಹುದು. ಆದ್ದರಿಂದ, ಒಬ್ಬರು ಪ್ರತಿಯೊಂದು ನಾಮದ ಅರ್ಥವನ್ನೂ ಸರಿಯಾಗಿ ತಿಳಿದುಕೊಳ್ಳಬೇಕು. ದೇವಿಯು ಮಂಗಳ ಸ್ವರೂಪಳೂ, ದಯೆ ಮತ್ತು ಕೃಪೆಯುಳ್ಳವಳಾಗಿರುವುದರಿಂದ ಆಕೆಯು ಪರಮಾನಂದದ ಮೂರ್ತರೂಪವೆಂದು ಹೇಳಲಾಗುತ್ತದೆ.

                                                                               ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 929 - 940 http://www.manblunder.com/2010/07/lalitha-sahasranamam-929-939.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Wed, 01/08/2014 - 19:50

ಶ್ರೀಧರರೆ,"೧೯೮. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯ ರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೯೨೯-೯೪೦
________________________________
.
೯೨೯. ಶ್ರುತಿ-ಸಂಸ್ಥುತ-ವೈಭವ
ಸಮಸ್ತವ ಸೃಜಿಸುತ ಲಲಿತಾಂಬಿಕೆ ಸೃಷ್ಟಿಕರ್ತಾ, ವೇದಮುಖೇನ ಪೂಜಿತ
ಸಕಲ ವೇದೋಪನಿಷತ್ ಸ್ತುತ್ಯ ಪರಬ್ರಹ್ಮ, ಚತುರ್ವಿಧ ಸ್ವಂತಶಕ್ತಿ ಶಿವನಿತ್ತ
ಶಾಂತಿ-ಜ್ಞಾನ-ನಿರ್ವಿಕಾರ-ಅಚ್ಯುತತೆ ಶಕ್ತಿ ಮುಖೇನ ಪರಮಾನಂದದೆ ಶಿವ
ವೇದಾವಯವದೆ ಆತ್ಮಜ್ಞಾನಕೆ ಬುನಾದಿ, ಲಲಿತೆ ಶ್ರುತಿ-ಸಂಸ್ಥುತ-ವೈಭವ ||
.
೯೩೦. ಮನಸ್ವಿನೀ
ಮನಸ್ಸಿಂದಷ್ಟೆ ಅರಿಯಲಹುದು ಬ್ರಹ್ಮವ, ದೇವಿ ಮನ ಸ್ವತಂತ್ರ ಮನಸ್ವಿನೀ
ಸ್ವಯಂನಿಯಂತ್ರಣ-ನಿರ್ಬಂಧರಹಿತತೆ ಮೂಲಭೂತ ಲಕ್ಷಣ ಇಚ್ಛಾವರ್ತಿನಿ
ಅಸ್ತಿತ್ವದ ಸ್ಥಿತ್ಯಂತರ ಹಂತದ ಇಚ್ಛೆ, ಮನ ರೂಪಾಂತರದೊಂದು ಪ್ರಜ್ಞಾಸ್ಥಿತಿ
ಸ್ವಪ್ರಜ್ಞೆಯನರಿತ ಸ್ಥಿತಪ್ರಜ್ಞ ಮನ ಬ್ರಹ್ಮ, ಸ್ವತಂತ್ರ ಮನೋಭಾವ ಸಿದ್ಧಾಂತಿ ||
.
೯೩೧. ಮಾನವತೀ
ಉದಾತ್ತ ವಿಚಾರ ಲಲಿತೆ, ಗುಣ ಲಕ್ಷಣ ಸ್ವಭಾವದೆ ಶ್ರೇಷ್ಠತೆ
ಮೇರುಮಟ್ಟದ ಮೇಧಾವಿ ಮನಸು, ಅತ್ಯುನ್ನತದ ನೈತಿಕತೆ
ಹಿರಿಗುಣದ ಶ್ರೀ ಮಾತಾ, ದೇವಿ ಮಾನವತೀ ದೈವೀ ಮಾತೆ
ಕ್ಷಮಾಗುಣ ಕರುಣಾಪೂರ್ಣ ಉನ್ನತಮನವಿಹ ದೇವಿ ಲಲಿತೆ ||
.
೯೩೨. ಮಹೇಶೀ
ಮಹೇಶ್ವರ ಸಂಗಾತಿ ಮಹೇಶ್ವರೀ, ಮಾಹೇಶ್ವರನಿಗೆ ಮಾಹೇಶ್ವರಿ
ಮಹೇಶನ ಸಂಗಾತಿ ಮಹೇಶೀ, ಶಿವನಿಂದ ಉದ್ಭವಿಸಿದ ಶಂಕರಿ
ಅರ್ಧನಾರೀಶ್ವರ-ನಾರೀಶ್ವರೀ ಸ್ವರೂಪ ಐಕ್ಯತೆಯಲಿ ವಿಶ್ವ ಲಾಸ್ಯ
ಮಹಾ ಕಾಮೇಶ್ವರ-ಕಾಮೇಶ್ವರಿ, ಶಿವಶಕ್ತಿ ಮಿಲನ ಸೃಷ್ಟಿಗೆ ಭಾಷ್ಯ ||
.
೯೩೩. ಮಂಗಳಾಕೃತಿಃ
ಶುಭಕರ-ಹರ್ಷ-ಸೌಭಾಗ್ಯ-ಆನಂದ-ಕಲ್ಯಾಣವೆಲ್ಲ ಮಂಗಳ
ಮಂಗಳಕರದೀ ಗುಣಗಳ ಮೂರ್ತ ರೂಪಿಣಿ ಲಲಿತೆ ಸಕಲ
ಸರ್ವ ಮಂಗಳಕರ ರೂಪ ಗುಣಲಕ್ಷಣವಿಹ ಮಂಗಳಾಕೃತಿಃ
ಸಕಲರಿಗೂ ಸನ್ಮಂಗಳ ಪ್ರದಾಯಿಸುವುದು ದೇವೀ ಪ್ರಕೃತಿ ||
.
೯೩೪. ವಿಶ್ವಮಾತಾ
ದೇವಿಯೆ ಪರಮಾತ್ಮ, ಸರ್ವಾಕಾರ ವಿಧ ಪ್ರಸ್ತುತ, ತನುವೆ ಪ್ರಪಂಚ
ಅಂತರ್ಯಾಮಿ ಬ್ರಹ್ಮ, ಸರ್ವ ವ್ಯಾಪಿಯಾಗಿ ವಿಶ್ವಮೂರ್ತಿಯ ಕುಂಚ
ವಿಶ್ವವೆನೆ ವಿಷ್ಣು ಮಾತೆ ತಾಯಾಗಿ ಲಲಿತೆ, ಹರಿಯ ಜಗಕೆ ಶ್ರೀಮಾತ
ವಿಷ್ಣು ಮಾತೆಯಾಗಿ ಸುಸ್ಥಿತಿಗೆ ದಾತೆ, ತಾಯಂತೆ ಸಲಹಿ ವಿಶ್ವಮಾತ ||
.
೯೩೫. ಜಗದ್ಧಾತ್ರೀ
ಬ್ರಹ್ಮವೆಲ್ಲರ ಒಡೆಯ, ಸಕಲ ಜೀವಿಗಳ ಅಧಿಪತಿ
ಎಲ್ಲ ಜೀವಿಗಳ ರಕ್ಷಕ, ಸೃಷ್ಟಿ ಪರಿಪಾಲಿಸೊ ನೀತಿ
ಸುಸ್ಥಿತಿಯಲಿಡೆ ತಾನೇ, ಆಧಾರವಾಗಿಹ ವಿಧಾತ್ರೀ
ಜಗತ್ತಿಗೆ ಆಧಾರವಾಗಿರುತ, ಲಲಿತೆಯೆ ಜಗದ್ಧಾತ್ರೀ ||
.
೯೩೬. ವಿಶಾಲಾಕ್ಷೀ
ಭಯಕೆ ಅಭಯ ಹಸ್ತ, ಬೇಡಿಕೆಗೆ ವರದ ಹಸ್ತ ಸಾಮಾನ್ಯ ದೇವತೆಗೆ
ಅಭಯ, ಶಾಂತಿ-ರಕ್ಷಣೆ-ಭದ್ರತೆಗೆ ವರ, ವಿಶಾಲನೇತ್ರದಲೆ ಲಲಿತೆಗೆ
ಕರುಣೆಯ ಪಸರಿಸೆ ಬೃಹತ್ಪ್ರಪಂಚಕೆ, ವಿಶಾಲ ಕಣ್ಣಾಗಿ ಕರುಣಾ ಸಾಕ್ಷಿ
ಫಳಫಳ ಹೊಳೆವ ತೇಜೋಪುಂಜ, ಮಂಗಳ ನೇತ್ರೆ ಲಲಿತೆ ವಿಶಾಲಾಕ್ಷೀ ||
.
೯೩೭. ವಿರಾಗಿಣೀ
ಐಹಿಕ ಸುಖ ಭೋಗಗಳೊಲ್ಲದ ನಿರಾಗ ದೇವಿ ಪೂಜ್ಯ
ಸಕಲ ಲೌಕಿಕ ಸಂಪದಗಳಿಂದ ಮುಕ್ತಳಾಗಿ ವೈರಾಗ್ಯ
ಜಗವನೆ ಸೃಜಿಸಿದ ಮಾತೆ ಭಾವೋದ್ವೇಗರಹಿತ ಗಣಿ
ಸೃಷ್ಟಿ-ಸ್ಥಿತಿ-ಲಯ ಚಕ್ರ ನಿರ್ಲಿಪ್ತದೆ ನಡೆಸಿ ವಿರಾಗಿಣೀ ||
.
೯೩೮. ಪ್ರಗಲ್ಭಾ
ತನ್ನ ನಿಯಮ ತಾನೆ ಅಧಿಗಮಿಸದ ದೃಢಸಂಕಲ್ಪದ ಲಲಿತೆ
ದೈವನಿಯಾಮಕ ಕರ್ಮನಿಯಮದಂತೆ ಪ್ರಪಂಚವನಾಳುತೆ
ಧೈರ್ಯ ಆತ್ಮವಿಶ್ವಾಸ ದೃಢಚಿತ್ತ, ಶಿವನಿತ್ತ ಸ್ವತಂತ್ರದ ಲಾಭ
ಬಳಸುತ ಜಗವಾಳೊ ಕ್ರಿಯಾಶೀಲಶಕ್ತಿಯಾಗಿ ದೇವಿ ಪ್ರಗಲ್ಭಾ ||
.
೯೩೯. ಪರಮೋದಾರ
ಬೇಡೆದೆಯು ಕೊಡುವ ಉದಾರೀ ದೇವಿ, ಬೇಡಿಕೆಗೂ ಅಧಿಕ
ಕಾಲದೇಶಗಳಿಗತೀತ ಲಲಿತೆ ವರ ಪರಮಾನಂದದಾಯಕ
ಶ್ರೇಷ್ಠತೆಯಲಿ ಜೇಷ್ಠತೆ ದೇವಿ, ಉದಾರತೆಯಲಿಡೆ ನಿರಂತರ
ಪರಮಾನಂದದಿಂದಂತಿಮಮುಕ್ತಿಗೆ ನಡೆಸೊ ಪರಮೋದಾರ ||
.
೯೪೦. ಪರಾ-ಮೋದಾ
ಸಂತೋಷ-ಆನಂದ-ಹಿಗ್ಗು-ಆಹ್ಲಾದವೆ ಮೋದ, ಪರಾ ಅತ್ಯುನ್ನತ
ಪರಮಾನಂದ ಪ್ರದಾಯಿನಿ ತಾನೆ ಮೂರ್ತರೂಪಾಗಿ ದೇವಿ ಲಲಿತ
ದಯಾಕರಿ-ಕೃಪಾಕರಿ-ಮಂಗಳರೂಪಿ ಬ್ರಹ್ಮಾನಂದಕೆ ಸಿದ್ದಾಯುಧ
ನಾಮಾಮೃತ ವರ್ಣನೆ, ನಿಜರೂಪ ಕಲ್ಪನೆ, ದೇವಿ ಪರಾ ಮೋದಾ ||
.
.
ಧನ್ಯವಾದಗಳೊಂದಿಗೆ  
ನಾಗೇಶ ಮೈಸೂರು