ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ
ಟಿಪ್ಪು ಸುಲ್ತಾನನ ಪರವಾಗಿ ಮತ್ತು ವಿರುದ್ಧವಾಗಿ ಬರುತ್ತಿರುವ ಲೇಖನಗಳು ಮತ್ತು ಹೇಳಿಕೆಗಳನ್ನು ಗಮನಿಸಿದಾಗ ಹೆಚ್ಚಿನವು ಉತ್ಪ್ರೇಕ್ಷೆಯಿಂದ ಕೂಡಿದುದೆಂದು ಮೇಲ್ನೋಟಕ್ಕೆ ಕಾಣುತ್ತವೆ. ಇದರಲ್ಲಿ ಜಾತಿ, ಧರ್ಮಗಳೂ ಥಳಕು ಹಾಕಿಕೊಂಡು ವಿಷಯವನ್ನು ಜಟಿಲಗೊಳಿಸುತ್ತವೆ. ಟಿಪ್ಪು ಪರಮತ ಸಹಿಷ್ಣುವೋ ಅಲ್ಲವೋ, ಕ್ರೂರಿಯೋ ಅಲ್ಲವೋ ಎಂಬ ಬಗ್ಗೆ ಪ್ರಖರವಾದ ವಾದ, ಪ್ರತಿವಾದಗಳನ್ನು ಕಂಡಿದ್ದೇವೆ. ಟಿಪ್ಪು ಹೆಸರಿನಲ್ಲಿ ಮುಸ್ಲಿಮ್ ವಿಶ್ವವಿದ್ಯಾಲಯದ ಸ್ಥಾಪನೆಗೆ ನಡೆಯುತ್ತಿರುವ ಪ್ರಯತ್ನ ಇಂತಹ ಚರ್ಚೆಗಳಿಗೆ ಮತ್ತಷ್ಟು ಒತ್ತು ಕೊಟ್ಟಿದೆ. ಇತಿಹಾಸವನ್ನು ಇತಿಹಾಸವಾಗಿಯೇ ಆಧ್ಯಯನ ಮಾಡಬೇಕು, ಅದಕ್ಕೆ ಜಾತ್ಯಾತೀತತೆಯ ಲೇಪ ಕೊಡುವ ಸಲುವಾಗಿ ವಾಸ್ತವತೆಯನ್ನು ಮರೆಮಾಚುವ ಕೆಲಸ ಇತಿಹಾಸಕ್ಕೆ ಮಾಡುವ ಅಪಚಾರವಾಗುತ್ತದೆ ಎಂಬುದನ್ನು ಎಷ್ಟು ಬೇಗ ಮನಗಾಣುತ್ತೇವೋ ಅಷ್ಟೂ ದೇಶಕ್ಕೆ ಒಳ್ಳೆಯದು. ಈಗಾಗಲೇ ಬಹಳಷ್ಟು ಚರ್ಚಿತವಾಗಿರುವ ವಿಷಯಗಳನ್ನು ಪುನಃ ಇಲ್ಲಿ ಪ್ರಸ್ತಾಪಿಸಹೋಗದೆ ಟಿಪ್ಪುವಿನ ಕಾಲದಲ್ಲಿ ಬಂದಿಗಳಾಗಿದ್ದವರ ಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ಪ್ರಸ್ತಾಪಿಸಿ, ಟಿಪ್ಪುವಿನ ವಿರುದ್ಧ ಸೆಟೆದು ನಿಂತಿದ್ದ ಒಬ್ಬ ಧೀರ ಕನ್ನಡಿಗನ ಬಗ್ಗೆ ನನಗೆ ತಿಳಿದಿರುವ ಸಂಗತಿಗಳನ್ನು ಹಂಚಿಕೊಳ್ಳುತ್ತೇನೆ.
ಮೂಲ ವಿಷಯಕ್ಕೆ ಬರುವ ಮುನ್ನ ಮೊದಲೇ ಹೇಳಿದ್ದಂತೆ ಹೈದರ್ ಮತ್ತು ಟಿಪ್ಪೂರ ಕಾಲದಲ್ಲಿ ಬಂದಿಗಳ ಸ್ಥಿತಿಯನ್ನು ತಿಳಿಸುವ ಸಲುವಾಗಿ ಜೇಮ್ಸ್ ಸ್ಕರಿ ಎಂಬ ಬ್ರಿಟಿಷ್ ಕೈದಿಯೊಬ್ಬನ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ. ಜೇಮ್ಸ್ ಸ್ಕರಿಯ ತಂದೆ ಒಬ್ಬ ಬ್ರಿಟಿಷ್ ಸೈನಿಕನಾಗಿದ್ದು, ಸ್ಕರಿ ಚಿಕ್ಕಂದಿನಲ್ಲೇ ಗನ್ ಪೌಡರ್ ಸಾಗಾಟದ ಕೆಲಸ ಮಾಡುತ್ತಿದ್ದು ಅದಕ್ಕಾಗಿ ಸಮುದ್ರಯಾನ ಮಾಡಬೇಕಾಗುತ್ತಿತ್ತು. ಹೀಗೆ ಪ್ರಯಾಣ ಮಾಡುತ್ತಿದ್ದ ಸಮಯದಲ್ಲಿ ತನ್ನ ೧೪ನೆಯ ವಯಸ್ಸಿನಲ್ಲೇ ಸೈಂಟ್ ಹೆಲೆನಾ ಎಂಬ ದ್ವೀಪದಲ್ಲಿ ಫ್ರೆಂಚರಿಂದ ಹಡಗಿನಲ್ಲಿದ್ದ ಇತರ ೧೪ ಸಿಬ್ಬಂದಿಗಳೊಂದಿಗೆ ಕ್ರಿ.ಶ. ೧೭೮೦ರಲ್ಲಿ ಬಂಧಿಸಲ್ಪಟ್ಟ. ಈ ೧೫ ಜನರನ್ನು ಫ್ರೆಂಚ್ ಅಡ್ಮಿರಲ್ ಸಫ್ರೆನ್ ಹೈದರಾಲಿಯ ವಶಕ್ಕೆ ಒಪ್ಪಿಸಿದ. ಇವರುಗಳನ್ನು ಮೊದಲು ಬೆಂಗಳೂರಿನ ಜೈಲಿಗೆ, ನಂತರ ಶ್ರೀರಂಗಪಟ್ಟಣದ ಸೆರೆಮನೆಗೆ ಸಾಗಿಸಲಾಯಿತು. ಸೆರೆಯಾದ ಕೂಡಲೇ ಕಾಲುಗಳಿಗೆ ಬಲವಾದ ಕಬ್ಬಿಣದ ಸರಪಳಿಗಳನ್ನು ಹಾಕಿ, ಕೈಗಳಿಗೂ ಕಬ್ಬಿಣದ ಕೋಳಗಳನ್ನು ಹಾಕಿ ಸೆರೆಮನೆ ತಲುಪುವವರಗೆ ಹಲವಾರು ದಿನಗಳ ಕಾಲ ನಡೆಸಿಕೊಂಡೇ ಹೋಗಲಾಗಿತ್ತು. ಟಿಪ್ಪು ಇವರೆಲ್ಲರನ್ನೂ ಬಲವಂತವಾಗಿ ಇಸ್ಲಾಮ್ ಮತಕ್ಕೆ ಮತಾಂತರಿಸಿ, ಜೇಮ್ಸ್ ಸ್ಕರಿಗೆ ಮುಸ್ಲಿಮ್ ಹೆಸರಾದ ಶಂಶೇರ್ ಖಾನ್ ಎಂದು ಹೊಸ ಹೆಸರು ಕೊಟ್ಟು ಬಲವಂತವಾಗಿ ತನ್ನ ಸೇನೆಯಲ್ಲಿ ಕೆಲಸ ಮಾಡಿಸಿದ್ದ. ಟಿಪ್ಪು ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಸೋತಾಗ ಆದ ಒಪ್ಪಂದದಂತೆ ೧೭೯೨ರಲ್ಲಿ ಇವನ ಬಿಡುಗಡೆಯಾಯಿತು. ಬಿಡುಗಡೆಯ ನಂತರದಲ್ಲಿ ಇವನ ಸ್ಥಿತಿ ಹೇಗಿತ್ತೆಂದರೆ ಆತನಿಗೆ ಕುರ್ಚಿಯ ಮೇಲೆ ಕುಳಿತುಕೊಳ್ಳುವುದೇ ಕಷ್ಟವಾಗಿತ್ತಂತೆ. ಚಾಕು, ಫೋರ್ಕುಗಳನ್ನು ಉಪಯೋಗಿಸುವುದೇ ಮರೆತುಹೋಗಿತ್ತಂತೆ. ಈತನ ಬಿಳಿಯ ಚರ್ಮ ಕಪ್ಪಾಗಿ ನೀಗ್ರೋನಂತೆ ಕಾಣಿಸುತ್ತಿದ್ದ ಇವನ ರೂಪ ಇವನು ಪಟ್ಟ ಪಾಡನ್ನು ಎತ್ತಿ ತೋರಿಸುತ್ತಿತ್ತು. ಟಿಪ್ಪುವಿನ ಸೆರೆಮನೆಗಳಲ್ಲಿ ಬಂದಿಗಳನ್ನು ಕೋಳಗಳಲ್ಲಿ ಬಂಧಿಸಿಡುತ್ತಿದ್ದರು. ಕತ್ತಿನವರೆವಿಗೂ ಬರುವಂತೆ ನೀರು ತುಂಬಿಸಿದ ಸ್ಥಳಗಳಲ್ಲಿಟ್ಟು ಹಿಂಸಿಸುತ್ತಿದ್ದರು. ಕೈದಿಗಳಿಗೆ ನೀಡುತ್ತಿದ್ದ ಆಹಾರದ ಪ್ರಮಾಣ ಮತ್ತು ಗುಣಮಟ್ಟದ ಬಗ್ಗೆ ಹೇಳದಿರುವುದೇ ಸರಿ. ಬಂಧಿಸಲ್ಪಟ್ಟರೂ ಸೆರೆಮನೆಯಲ್ಲಿರಿಸುವಷ್ಟು ಗುರುತರ ಅಪರಾಧ ಮಾಡದವರ ಕಿವಿ, ಮೂಗು ಅಥವ ತುಟಿಗಳನ್ನು ಕತ್ತರಿಸಿ ಬಿಟ್ಟುಬಿಡುತ್ತಿದ್ದರು. ಕೈದಿಗಳನ್ನು ಮತ್ತು ಅಪರಾಧಿಗಳನ್ನು ನಂದಿ ಬೆಟ್ಟದಿಂದ ಪ್ರಪಾತಕ್ಕೆ ತಳ್ಳಿ ಸಾಯಿಸುತ್ತಿದ್ದ ಸ್ಥಳಕ್ಕೆ 'ಟಿಪ್ಪೂ ಡ್ರಾಪ್' ಎಂದು ಹೆಸರಿದ್ದು, ಆ ಹೆಸರು ಇಂದಿಗೂ ಉಳಿದಿರುವುದು ಟಿಪ್ಪು ದಯಾಮಯಿ ಎಂದು ಹೇಳುವವರಿಗೆ ಅರಗಿಸಿಕೊಳ್ಳುವುದು ಕಷ್ಟವಾದೀತು.
ಈಗ ಪ್ರಧಾನ ವಿಷಯಕ್ಕೆ ಬರುತ್ತೇನೆ. ಆತ ಕಟ್ಟುಮಸ್ತಾದ ಕನ್ನಡಿಗ ತರುಣ. ಹೆಸರು ದೊಂಢಿಯವಾಘ. ಹೆಸರಿಗೆ ತಕ್ಕಂತೆ ಹುಲಿಯಂತೆ ಧೈರ್ಯಶಾಲಿ. ಹಿಂದಿನ ಶಿವಮೊಗ್ಗ ಜಿಲ್ಲೆಗೆ ಸೇರಿದ್ದ, ಪ್ರಸ್ತುತ ದಾವಣಗೆರೆ ಜಿಲ್ಲೆಗೆ ಸೇರಿರುವ ಚನ್ನಗಿರಿಯಲ್ಲಿ ಹುಟ್ಟಿದವನು. ಹೈದರಾಲಿಯಿಂದ ಕೆಳದಿ ಸಾಮ್ರಾಜ್ಯ ಪತನ ಕಂಡಿದ್ದ ಸಮಯವದು. ತರುಣನಾದಾಗ ಕೆಳದಿ ಅರಸೊತ್ತಿಗೆ ಇದ್ದಿದ್ದರೆ ಆತ ಕೆಳದಿಯ ಸೈನ್ಯದಲ್ಲಿ ಒಬ್ಬ ಪ್ರಚಂಡನೆನಿಸುತ್ತಿದ್ದ. ಆದರೆ ಚನ್ನಗಿರಿ ಟಿಪ್ಪುವಿನ ಆಳ್ವಿಕೆಗೆ ಸೇರಿದ್ದರಿಂದ ಸಹಜವಾಗಿ ಆತ ಕ್ರಿ.ಶ. ೧೭೯೪ರಲ್ಲಿ ಟಿಪ್ಪುವಿನ ಸೈನ್ಯಕ್ಕೆ ಸೈನಿಕನಾಗಿ ಸೇರಿದ. ಆತನ ಪರಾಕ್ರಮ, ಶೌರ್ಯಗಳನ್ನು ಗಮನಿಸಿದ ಟಿಪ್ಪು ಅವನ ಮನವೊಲಿಸಿ ಇಸ್ಲಾಮಿಗೆ ಮತಾಂತರಿಸಲು ಪ್ರಯತ್ನಿಸಿದ. ಬಡ್ತಿ ನೀಡಿ, ಸಂಬಳ ಹೆಚ್ಚಿಸುವ ಪ್ರಲೋಭನೆ ಒಡ್ಡಿದರೂ ಮತಾಂತರಕ್ಕೆ ಒಪ್ಪದ ದೊಂಢಿಯನನ್ನು ಬಲವಂತವಾಗಿ ಮುಸ್ಲಿಮನನ್ನಾಗಿ ಮತಾಂತರಿಸಲಾಯಿತು. ಅದನ್ನೂ ಧಿಕ್ಕರಿಸುವ ಧಾರ್ಷ್ಟ್ಯ ತೋರಿಸಿದ್ದಕ್ಕೆ ಪ್ರತಿಯಾಗಿ ಟಿಪ್ಪು ಅವನನ್ನು ಬಂಧಿಸಿ ಶ್ರೀರಂಗಪಟ್ಟಣದ ಸೆರೆಮನೆಯಲ್ಲಿರಿಸಿದ. ಈ ರೀತಿ ಬಂಧಿಯಾಗಿದ್ದ ದೊಂಢಿಯ ತಪ್ಪಿಸಿಕೊಳ್ಳಲು ಅವಕಾಶವಾಗಲೇ ಇಲ್ಲ. ಅವನನ್ನು ಗಲ್ಲಿಗೇರಿಸಲು ಆದೇಶವಾಗಿದ್ದರೂ, ಕಾರಣಾಂತರದಿಂದ ಶಿಕ್ಷೆಯನ್ನು ಜಾರಿಗೊಳಿಸುವುದನ್ನು ಮುಂದೂಡಲಾಗಿತ್ತೆನ್ನಲಾಗಿದೆ. ಆತನಿಗೆ ಬಿಡುಗಡೆಯ ಭಾಗ್ಯ ಸಿಕ್ಕಿದ್ದು ಐದು ವರ್ಷಗಳ ನಂತರದಲ್ಲಿ, ಟಿಪ್ಪು ಬ್ರಿಟಿಷರಿಂದ ಯುದ್ಧದಲ್ಲಿ ಹತನಾದ ನಂತರವೇ.
ಶ್ರೀರಂಗಪಟ್ಟಣದ ಸೆರೆಮನೆಯಿಂದ ಹೊರಬಂದ ದೊಂಢಿಯ ಬಿದನೂರಿಗೆ ಬಂದು ಮೊದಲು ಮಾಡಿದ ಕೆಲಸವೆಂದರೆ ಸ್ವಾಭಿಮಾನಿ ತರುಣರನ್ನು ಸಂಘಟಿಸಿ ತನ್ನದೇ ಆದ ಒಂದು ಸೈನ್ಯವನ್ನು ಕಟ್ಟಿದ್ದು. ಹೈದರ್ ಮತ್ತು ಟಿಪ್ಪುರಿಂದ ನೊಂದವರು, ಸೈನ್ಯದಿಂದ ಹೊರಬಿದ್ದವರು, ಪರಕೀಯರಾದ ಬ್ರಿಟಿಷರ ಆಳ್ವಿಕೆಯನ್ನು ಕೊನೆಗೊಳಿಸಬೇಕೆಂಬ ಛಲವಿದ್ದ ಸಮೂಹವನ್ನು ಒಗ್ಗೂಡಿಸಿ ಕಟ್ಟಿದ ಆ ಸೈನ್ಯ ಬ್ರಿಟಿಷರ ವಿರುದ್ಧ ಕ್ರಾಂತಿಯ ಕಹಳೆ ಮೊಳಗಿಸಲಾರಂಭಿಸಿತು. ಬಿದನೂರು - ಶಿಕಾರಿಪುರ ಪ್ರದೇಶದಿಂದ ೧೮೦೦ರ ಸುಮಾರಿನಲ್ಲ್ಲಿ ಬ್ರಿಟಿಷರ ವಿರುದ್ಧ ಕ್ರಾಂತಿಯ ಬಾವುಟ ಹಾರಿಸಿದ ಇವನೊಂದಿಗೆ ಸುತ್ತಮುತ್ತಲಿನ ಪಾಳೆಯಗಾರರು ಕೈಜೋಡಿಸಿದ್ದರು. ಕುತಂತ್ರಗಳಿಂದಲೇ ಸಾಮ್ರಾಜ್ಯ ವಿಸ್ತರಣೆ ಮಾಡುತ್ತಿದ್ದ ಶತ್ರುಗಳನ್ನು ಎದುರಿಸಲು ಅವರ ಮಾರ್ಗವನ್ನೇ ಅನುಸರಿಸಬೇಕೆಂಬುದನ್ನು ಹಿಂದಿನ ಅನುಭವಗಳಿಂದ ಪಾಠ ಕಲಿತಿದ್ದ ದೊಂಡಿಯ ತನ್ನ ಪಡೆಗೆ ಗೆರಿಲ್ಲಾ ಮಾದರಿಯ ಯುದ್ಧತಂತ್ರಗಳಲ್ಲಿ ತರಬೇತಿ ನೀಡಿ ಸಜ್ಜುಗೊಳಿಸಿದ. ಕರಾವಳಿ ಪ್ರದೇಶದಲ್ಲಿ ಜಮಾಲಾಬಾದ್‌ನಿಂದ ಸೋದೆಯವರೆಗೆ ಮತ್ತು ಘಟ್ಟ ಪ್ರದೇಶದ ಮೇಲೆ ಬೆಳಗಾಮ್, ರಾಯಚೂರಿನವರೆಗೆ ಸಹ ಆತನ ಕ್ರಾಂತಿಯ ವ್ಯಾಪ್ತಿ ವಿಸ್ತರಿಸಿತ್ತು. ಧೊಂಡಿಯ ವಾಘನನ್ನು ಮಣಿಸುವುದು ಆಂಗ್ಲರಿಗೆ ಸುಲಭವಾಗಿರಲಿಲ್ಲ. ಗೆರಿಲ್ಲಾ ಮಾದರಿಯಲ್ಲಿ ಹೊಂಚುಹಾಕಿ ಆಂಗ್ಲ ಸೈನಿಕರ ಮೇಲೆ ದಾಳಿ ಮಾಡಿ ಸಾಕಷ್ಟು ಕಷ್ಟ-ನಷ್ಟ ಉಂಟುಮಾಡಿ ಅವರು ಎಚ್ಚೆತ್ತು ತಿರುಗಿ ಬೀಳುವ ವೇಳೆಗೆ ಕಣ್ಮರೆಯಾಗುತ್ತಿದ್ದ ಅವನನ್ನು ಹಿಡಿಯುವುದು ಸುಲಭವಾಗಿರಲಿಲ್ಲ.
ಬ್ರಿಟಿಷ್ ಸೇನಾ ತುಕಡಿಗಳ ಮೇಲೆ ಆಯಕಟ್ಟಿನ ಸ್ಥಳಗಳಲ್ಲಿ ಹೊಂಚು ಹಾಕಿ ಅನಿರೀಕ್ಷಿತ ದಾಳಿ ನಡೆಸಿ ಅಪಾರ ಹಾನಿ ಉಂಟು ಮಾಡುತ್ತಿದ್ದುದಲ್ಲದೆ ಅವರ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುತ್ತಿದ್ದುದನ್ನು ತಪ್ಪಿಸಲು ಆಂಗ್ಲರು ಹೆಣಗಾಡಬೇಕಾಯಿತು. ಅವನನ್ನು ಹಿಡಿಯುವ ಸಲುವಾಗಿಯೇ ಲಾರ್ಡ್ ವೆಲ್ಲೆಸ್ಲಿ ಸೈನಿಕರ ಒಂದು ಪ್ರತ್ಯೇಕ ತಂಡವನ್ನೇ ನಿಯೋಜಿಸಿದ್ದ. ಒಂದೊಮ್ಮೆ ಈ ರೀತಿಯ ಹೋರಾಟ ಮಾಡಿದ ಸಂದರ್ಭದಲ್ಲಿ, ಇಂತಹ ದಾಳಿಯ ಬಗ್ಗೆ ಎಚ್ಚರದಿಂದಿದ್ದ ಆಂಗ್ಲ ಸೈನಿಕರಿಂದ ತಪ್ಪಿಸಿಕೊಳ್ಳಲು ಹರಿಯುತ್ತಿದ್ದ ದೊಡ್ಡ ಹಳ್ಳವನ್ನು ತನ್ನ ಕುದುರೆಯನ್ನು ಹುರಿದುಂಬಿಸಿ ಹಾರಿಸಿ ತಪ್ಪಿಸಿಕೊಂಡಿದ್ದ ಧೀರನವನು. ಇಂತಹುದೇ ಮತ್ತೊಂದು ಸಂದರ್ಭದಲ್ಲಿ ಆಂಗ್ಲರ ಪ್ರತಿದಾಳಿಯಿಂದ ತಪ್ಪಿಸಿಕೊಂಡು, ಶಿಕಾರಿಪುರದ ಹುಚ್ಚರಾಯಸ್ವಾಮಿ (ಭ್ರಾಂತೇಶ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಆಂಜನೇಯ) ದೇವಾಲಯದಲ್ಲಿ ಅಡಗಿ ರಕ್ಷಣೆ ಪಡೆದಿದ್ದ. ತನ್ನನ್ನು ರಕ್ಷಿಸಿದ್ದಕ್ಕೆ ಕೃತಜ್ಞತೆಯಾಗಿ ತನ್ನ ಖಡ್ಗವನ್ನು ದೇವರಿಗೆ ಸಮರ್ಪಿಸಿದ್ದ ಧೊಂಡಿಯ ವಾಘ. ಈ ಖಡ್ಗ ಈಗಲೂ ಆ ದೇವಸ್ಥಾನದಲ್ಲಿದ್ದು, ಆಸಕ್ತರು ನೋಡಬಹುದಾಗಿದೆ. ಬ್ರಿಟಿಷರು ಅನೇಕ ರಾತ್ರಿಗಳನ್ನು ನಿದ್ರೆ ಮಾಡದೆ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿದ್ದವನು ಈ ಶೂರ. ಗವರ್ನರ್ ಜನರಲ್ ಆಗಿದ್ದ ಮಾರ್ಕಿಸ್ ವೆಲ್ಲೆಸ್ಲಿ ದೊಂಡಿಯವಾಘನನ್ನು ಸೆರೆ ಹಿಡಿದ ತಕ್ಷಣದಲ್ಲಿ ಹತ್ತಿರದ ಮೊದಲ ಮರಕ್ಕೆ ಅವನನ್ನು ನೇಣು ಹಾಕಬೇಕೆಂದು ಆದೇಶಿಸಿದ್ದ.
[ಟಿಪ್ಪಣಿ: ಪ್ರತಿ ವಿಜಯದಶಮಿಯಂದು ಹುಚ್ಚರಾಯಸ್ವಾಮಿ ದೇವಾಲಯದಲ್ಲಿರುವ ಧೊಂಡಿಯವಾಘನ ಖಡ್ಗದಿಂದಲೇ ಬನ್ನಿ ಕಡಿಯುವ ಸೌಭಾಗ್ಯ ಶಿಕಾರಿಪುರದ ತಾಲ್ಲೂಕು ದಂಡಾಧಿಕಾರಿಯಾದವರಿಗೆ ಸಿಗುತ್ತದೆ. ಎರಡು ವರ್ಷಗಳು ಈ ಖಡ್ಗವನ್ನು ಹಿಡಿಯುವ ಮತ್ತು ಬನ್ನಿ ಕಡಿಯುವ ಪುಣ್ಯ ನನಗೆ ಸಿಕ್ಕಿತ್ತು. ಬ್ರಿಟಿಷರನ್ನು ನಡುಗಿಸಿದ ಧೊಂಡಿಯವಾಘನ ಖಡ್ಗವನ್ನು ನಾನು ಹಿಡಿದು ಬಾಳೆಯ ಕಂದನ್ನು ಕಡಿಯುವಾಗ ಹೆಮ್ಮೆಯಿಂದ ಉಬ್ಬಿದ್ದು ಸುಳ್ಳಲ್ಲ. ಅನ್ಯಾಯಿಗಳನ್ನು, ಸಮಾಜಘಾತಕರನ್ನು ಹೀಗೆಯೇ ನಿವಾರಿಸಬೇಕೆಂದು ಅನ್ನಿಸಿದ್ದ ಆ ಕ್ಷಣಗಳನ್ನು ನೆನೆಸಿಕೊಂಡು ಈಗಲೂ ಪುಲಕಿತನಾಗುತ್ತಿರುತ್ತೇನೆ. ಚಿತ್ರ ಗಮನಿಸಿ.-ಲೇಖಕ.]
ಉಭಯ ಲೋಕಾಧೀಶ್ವರ(ಎರಡು ಲೋಕಗಳ ಒಡೆಯ) ಎಂಬ ಬಿರುದು ಸಂಪಾದಿಸಿದ್ದ ದೊಂಢಿಯವಾಘ್ ಹುಲಿಯಂತೆಯೇ (ವಾಘ್=ಹುಲಿ) ಹೋರಾಡುತ್ತಿದ್ದ. ಅವನನ್ನು ಶಿವಮೊಗ್ಗದ ಸಮೀಪ ಬ್ರಿಟಿಷರು ಸುತ್ತುವರೆದಾಗ ಆತ ಅಲ್ಲಿಂದ ತಪ್ಪಿಸಿಕೊಂಡು ಉತ್ತರ ಕರ್ನಾಟಕ ತಲುಪಿದ. ಆಗ ಅವನು ಮರಾಠಾ ಸೇನಾಪತಿ ಗೋಖಲೆಯಿಂದಲೂ ಪ್ರತಿರೋಧ ಎದುರಿಸಬೇಕಾಯಿತು. ಅಲ್ಲಿಂದಲೂ ತಪ್ಪಿಸಿಕೊಂಡು ಜೂನ್, ೧೮೦೦ರಲ್ಲಿ ತುಂಗಭದ್ರಾ - ಮಲಪ್ರಭಾ ನದಿಗಳ ನಡುವಿನ ಪ್ರದೇಶಕ್ಕೆ ಬಂದ ಇವನು ನಂತರದಲ್ಲಿ ಹೊಂಚು ಹಾಕಿ ೧೦,೦೦೦ ಕುದುರೆ ಸವಾರರು, ೫೦೦೦ ಕಾಲ್ದಳ, ೮ ಫಿರಂಗಿಗಳನ್ನು ಹೊಂದಿದ್ದ ಪ್ರಬಲ ಮರಾಠಾ ಸರದಾರ ಗೋಖಲೆಯನ್ನು ಎದುರಿಸಿ ಕೊಂದುಹಾಕಿದ್ದು ಆತನ ಧೈರ್ಯದ ಪ್ರತೀಕವೇ ಸರಿ.
ಬೇಹುಗಾರರನ್ನು ನೇಮಿಸಿ ದೊಂಢಿಯವಾಘನ ಚಲನವಲನಗಳನ್ನು ಗಮನಿಸುತ್ತಿದ್ದ ಲಾರ್ಡ್ ವೆಲ್ಲೆಸ್ಲಿ ಅವನನ್ನು ಮಲಪ್ರಭಾ ಬಲದಂಡೆಯ ಸಮೀಪಕ್ಕೂ ಬಂದು ಬೆನ್ನಟ್ಟಿದಾಗ ತನ್ನ ಸಾಮಗ್ರಿಗಳು, ಆನೆಗಳು, ಕುದುರೆಗಳನ್ನು ಬಿಟ್ಟು ಪುನಃ ತಪ್ಪಿಸಿಕೊಂಡು ಶಿರಹಟ್ಟಿಗೆ ಬಂದ. ನಿಜಾಮನ ಸೀಮೆ ತಲುಪಿದ ಇವನನ್ನು ಅಲ್ಲಿಯೂ ಬೆನ್ನಟ್ಟಿದ ಆಂಗ್ಲರು ಕೋಣಗಲ್ಲು ಎಂಬಲ್ಲಿ ೧೦-೦೯-೧೮೦೦ರಂದು ಸುತ್ತುಗಟ್ಟಿದಾಗ ವೀರಾವೇಶದಿಂದ ಚಕ್ರವ್ಯೂಹದಲ್ಲಿ ಸಿಲುಕಿದ್ದ ಅಭಿಮನ್ಯುವಿನಂತೆ ನಿಜವಾದ 'ಮಾಡು ಇಲ್ಲವೇ ಮಡಿ' ಎಂಬ ಹೋರಾಟ ನಡೆಸಿದ ಧೊಂಡಿಯವಾಘ ವೀರಮರಣ ಹೊಂದಿದ. ಅವಕಾಶ ಸಿಕ್ಕಿದ್ದರೆ ಧೊಂಡಿಯವಾಘ ಎರಡನೆಯ ಹ್ಶೆದರಾಲಿ ಆಗುತ್ತಿದ್ದ ಎಂಬುದು ಪ್ರಸಿದ್ಧ ಇತಿಹಾಸಕಾರ ಎಡ್ವರ್ಡ್ ಥಾರ್‍ನ್‌ಟನ್ನನ ಉದ್ಗಾರ! ಇವನಿಗೆ ಇತಿಹಾಸಕಾರರು ಕೊಡಬೇಕಾದ ಪ್ರಾಮುಖ್ಯತೆ ಕೊಟ್ಟಿಲ್ಲವೆಂದು ಉದ್ಗರಿಸಿದವರು ಶ್ರೀ ಡಿ.ಸಿ. ಬಕ್ಷಿಯವರು. ವೆಲ್ಲೆಸ್ಲಿ ತನ್ನ ಹೋರಾಟದ ಕುರಿತು ದಾಖಲಿಸಿರುವ ವಿವರಗಳಲ್ಲಿ ಧೊಂಡಿಯನ ವಿರುದ್ಧ ಸಾಧಿಸಿದ ಗೆಲುವಿಗೆ ಹೆಚ್ಚಿನ ಪ್ರಾಮುಖ್ಯ ಕೊಟ್ಟಿದ್ದಾನೆ; ಅದೊಂದು ಅದ್ಭುತ ಸಾಧನೆಯೆಂದಿದ್ದಾನೆ. ಆದರೆ ನಮ್ಮವರು ಧೊಂಡಿಯನ ಸಾಧನೆ ಗುರುತಿಸುವಲ್ಲಿ ಎಡವಿದ್ದಾರೆ ಎನ್ನದೆ ವಿಧಿಯಿಲ್ಲ. ದೇಶಕ್ಕಾಗಿ ಹೋರಾಡಿ ಗಲ್ಲಿಗೇರಿದ ಸಂಗೊಳ್ಳಿ ರಾಯಣ್ಣನಂತೆಯೇ ಅಪ್ರತಿಮ ರೀತಿಯಲ್ಲಿ ಬಲಿದಾನ ಮಾಡಿದ ದೊಂಢಿಯವಾಘನಿಗೆ ರಾಯಣ್ಣನಿಗೆ ಸಿಕ್ಕಷ್ಟು ಮಾನ್ಯತೆ ಸಿಗದಿರುವುದು, ಇವನ ಹೋರಾಟವನ್ನು ಸರ್ಕಾರಗಳು ಗುರುತಿಸದಿರುವುದು ನಿಜಕ್ಕೂ ಅನ್ಯಾಯವೇ ಸರಿ. ಕುಟಿಲತೆಗೆ ಹೆಸರಾದ ಬ್ರಿಟಿಷರು ಕೇವಲ ಗಾಂಧೀಜಿಯವರ ಅಹಿಂಸಾ ಸತ್ಯಾಗ್ರಹದಿಂದ ಮಾತ್ರ ಬೆದರಿ ದೇಶ ಬಿಟ್ಟು ಹೋದರು ಎಂಬಂತೆ ಬಿಂಬಿಸಲಾಗುತ್ತಿರುವುದು ಸರಿಯಲ್ಲ. ಧೊಂಡಿಯವಾಘನಂತಹ ಅಸಂಖ್ಯಾತ ಹೋರಾಟಗಾರರ ಪಾಲು ಮಹತ್ವದ್ದಾಗಿದ್ದು ಅವರೆಲ್ಲರ ಸಾಮೂಹಿಕ ಹೋರಾಟದ ಫಲವೇ ಸ್ವಾತಂತ್ರ್ಯವೆಂಬುದನ್ನು ಮರೆತರೆ ಅದು ಕೃತಘ್ನತೆಯಾಗುತ್ತದೆ. ಅಂತಹವರನ್ನು ಗುರುತಿಸಿ ಗೌರವಿಸುವುದು, ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಇಂದು ನಮ್ಮ ದೇಶವನ್ನಾಳುತ್ತಿರುವ ಜನಪ್ರತಿನಿಧಿಗಳೆನಿಸಿಕೊಂಡವರಲ್ಲಿ ಬಹುತೇಕರು ಭಂಡರು, ಪುಂಡರು. ಅವರು ಬಗ್ಗುವುದು ದಂಡಕ್ಕೆ ಮಾತ್ರ. ಹೀಗಿರುವಾಗ, ಯಾವುದೇ ರೀತಿಯ ಅನ್ಯಾಯದ ವಿರುದ್ಧ ಯಾರೇ ಹೋರಾಡಲಿ, ಅವರೊಡನೆ ಕೈಜೋಡಿಸದಿದ್ದರೂ ಪರವಾಗಿಲ್ಲ, ಅವರನ್ನು ಸಮರ್ಥಿಸುವ, ಪ್ರೋತ್ಸಾಹಿಸುವ ಕನಿಷ್ಠ ಕೆಲಸವನ್ನಾದರೂ ಮಾಡಲು ನಾವು ಮನಸ್ಸು ಮಾಡಬಹುದಲ್ಲವೇ? ಸಜ್ಜನ ಶಕ್ತಿ ರೂಪುಗೊಳ್ಳುವುದು ಇಂತಹ ಮನೋಭೂಮಿಕೆಯಿಂದಲೇ. ಇಂತಹ ಕೆಲಸಗಳೇ ನಾವು ದೊಂಡಿಯವಾಘನಂತಹವರ ಬಲಿದಾನಕ್ಕೆ ತೋರಬಹುದಾದ ಗೌರವ.
-ಕ.ವೆಂ.ನಾಗರಾಜ್.
ಆಧಾರ:
1. ಜ್ಞಾನಗಂಗೋತ್ರಿ -ಕಿರಿಯರ ವಿಶ್ವಕೋಶ-ಸಂಪುಟ-೭
2. International Referred Research Journal,June,2011,ISSN-0975-3486, RNI: RAJBIL 2009/30097, VOL-II *ISSUE 21
3. Shimogainfo.net/index.php/component/content/article/12-historical-places/1379-shikaripur.html
4. http://en.wikipedia.org/wiki/James_Scurry
5. ಚಿತ್ರ ಕೃಪೆ: ರಾಷ್ಟ್ರಗೌರವ ಸಂರಕ್ಷಣಾ ಪರಿಷತ್, ಬೆಂಗಳೂರು.
Comments
ಉ: ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ
ಎಲ್ಲಾ ಸಂಪದಿಗರಿಗೂ 2014ರ ಹೊಸವರ್ಷದ ಶುಭಾಶಯಗಳು. ಒಬ್ಬ ಧೀರ ಕನ್ನಡಿಗ ಸ್ವಾತಂತ್ರ್ಯವೀರನ ಪರಿಚಯ ಲೇಖನದೊಂದಿಗೆ ಈ ವರ್ಷದ ಪ್ರಥಮ ಲೇಖನ ಒಪ್ಪಿಸಿರುವೆ. ವಂದನೆಗಳು.
ಉ: ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ
ಕವಿ ನಾಗರಾಜರೆ ನಿಮಗೂ ಸಹ ಹೊಸ ವರುಷ(2014)ದ ಶುಭಾಶಯಗಳು.
ಹೊಸ ವರುಷದ ಪ್ರಥಮ ಬರಹವಾಗಿ ತಾವು ಬರೆದ ಧೊಂಡಿಯಾ ವಾಘ್ ಎಂಬ ಶೂರನ ಸಹಾಸ ಲೇಖನ ಓದಿದರೆ ಈಗಲೂ ಮೈ ರೋಮಾಂಚನ ಗೊಳ್ಳುವುದು.ಎಂಥೆಂಥಹ ಶೂರರು ಮರೆಯಲ್ಲಿದ್ದೇ ದೇಶಕ್ಕಾಗಿ ಹೋರಾಟಮಾಡಿದ್ದಾರೊ ಯಾರಿಗೆ ಗೊತ್ತು. ತಮ್ಮ ಈ ಲೇಖನ ದಿಂದ ಆ ಮಹಾ ಶೂರನ ಕುರಿತು ತಿಳಿಯಿತು. ವಂದನೆಗಳು.........ರಮೇಶ ಕಾಮತ್
In reply to ಉ: ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ by swara kamath
ಉ: ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ
ಶಿಕಾರಿಪುರದಲ್ಲಿರುವ ಧೊಂಡಿಯಾವಾಘನ ಖಡ್ಗ ಅವನ ಬಗ್ಗೆ ತಿಳಿಯಲು ನನಗೆ ಪ್ರೇರಿಸಿತ್ತು. ಶಿಕಾರಿಪುರಕ್ಕೆ ಹೋಗಿರದಿದ್ದರೆ ನನಗೂ ಅವನ ಪರಿಚಯವಾಗುತ್ತಿರಲಿಲ್ಲ ಎಂಬುದು ಸತ್ಯ.ಧನ್ಯವಾದ, ರಮೇಶ ಕಾಮತರೇ.
ಉ: ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ
ಕವಿನಾ ರವರೇ, ಧೋಂಡಿಯಾ ವಾಘ್ ಕುರಿತು ಅಷ್ಟಷ್ಟು ಕೇಳಿದವನಿಗೆ, ಇಡಿಯಾಗಿ ಪರಿಚಯ ನೀಡಿ, ಕನ್ನಡಮ್ಮನ ಶೂರನ ಕುರಿತು ಬಹಳ ವಿವರ ಮಾಹಿತಿಯೊಂದಿಗೆ ನೀಡಿದ್ದು ತಮಗೆ ಅಭಿನಂದನೆಗಳು. ಎಲೆ ಮರೆಯ, ಮರೆತುಹೋದ, ಗುರುತಿಸದಾದ ಅನೇಕ ಹುತಾತ್ಮ ಆತ್ಮಗಳಿಗೆ ಹೆಚ್ಚು ಹೆಚ್ಚು ಉತ್ತರದಾಯಿತ್ವ ತೋರಿಸುವುದು ನಮ್ಮೆಲ್ಲರ ಕರ್ತವ್ಯ. ಲೇಖನ ಉತ್ಕೃಷ್ಟವಾಗಿದೆ, ತಮಗೂ ಹೊಸ ವರ್ಷದ ಶುಭಾಶಯಗಳು ಸರ್.
In reply to ಉ: ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ by lpitnal
ಉ: ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ
ಧನ್ಯವಾದ ಇಟ್ನಾಳರೇ. ಮರೆತುಹೋದ, ಇತಿಹಾಸದಲ್ಲಿ ಲೀನವಾದ ಅನೇಕ ವೀರರ ವಿಚಾರಗಳನ್ನು ಹುಡುಕಿ ಅವರನ್ನು ಗೌರವಿಸುವ ಕೆಲಸ ನಾವು,, ನೀವು ಮಾಡಬೆಕು.
ಉ: ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ
ಕವಿ ನಾಗರಾಜ ರವರಿಗೆ ವಂದನೆಗಳು
ಟಿಪ್ಪು ಸುಲ್ತಾನನ ಬಗೆಗೆ ಬರೆಯುವುದೆಂದರೆ ಜೇನು ಗೂಡಿಗೆ ಕಲ್ಲೆಸೆದಂತೆ, ಅವನ ಪರ ವಿರೋಧವಾಗಿ ನಡೆದ ಸಾಹಿತ್ಯಕ ವಾಗ್ವಾದಗಳನ್ನು ಒದಿದ ನಮಗೆ ನಿಜ ಯಾವುದು ಎಂಬುದು ಗೊತ್ತಾಗದೆ ಬೇಸರವಾಗುತ್ತಿತ್ತು. ನೀವು ಈ ಬಗೆಗೆ ವಸ್ತುನಿಷ್ಟವಾಗಿ ಬರೆಯುತ್ತಿದ್ದೀರಿ, ತಾವು ಶಿಕಾರಿಪುರದಲ್ಲಿದ್ದಾಗ ಎರಡು ವರ್ಷ ಧೋಂಡಿ ವಾಘನ ಖಡ್ಗದಿಂದ ಬನ್ನಿ ಕಡಿಯುವ ಸೌಭಾಗ್ಯ ತಮಗೆ ದೊರೆತದ್ದು ಓದಿ ಸಂತಸವಾಯಿತು. ಐತಿಹಾಸಿಕ ಘಟನೆಗಳನ್ನು ಕುರಿತು ಆಧಾರ ಸಹಿತ ವಸ್ತು ನಿಷ್ಟವಾಗಿ ಬರೆಯುತ್ತಿದ್ದೀರಿ. ಈ ಹೊಸ ವರ್ಷದಲ್ಲಿ ತಮ್ಮ ಲೇಖನಿಯಿಂದ ಇನ್ನಷ್ಟು ಸತ್ವಪೂರ್ಣ ಲೇಖನಗಳು ಮೂಡಿ ಬರಲಿ, ಹೊಸ ವರ್ಷದ ಶೂಭಾಶಯಗಳೊಂದಿಗೆ ಧನ್ಯವಾದಗಳು.
In reply to ಉ: ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ by H A Patil
ಉ: ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ
ಧನ್ಯವಾದಗಳು, ಹನುಮಂತ ಅನಂತ ಪಾಟೀಲರೇ. ನೀವು ಹೇಳುವುದು ನಿಜ. ಸತ್ಯ ಎಲ್ಲರಿಗೂ ಪಥ್ಯವಾಗುವುದಿಲ್ಲ, ಪಥ್ಯವಾದರೂ ಜೀರ್ಣವಾಗುವುದಿಲ್ಲ.
ಉ: ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ
ಕವಿ ನಾಗರಾಜರಿಗೆ ಹೊಸವರ್ಷದ ಶುಭಾಶಯಗಳು ಮತ್ತು ನಮಸ್ಕಾರ. ಧೋಂಡಿಯ ವಾಘನ ಕುರಿತು ಈ ಮೊದಲು ಗೊತ್ತಿರಲಿಲ್ಲ. ತಮ್ಮ ಬೆಳಕು ಚೆಲ್ಲುವ ಈ ಲೇಖನದಿಂದ ಇತಿಹಾಸದ ಹೊಸದೊಂದು ಕನ್ನಡಿಗ ವ್ಯಕ್ತಿತ್ವದ ಪರಿಚಯವಾದಂತಾಯ್ತು. ಆದರೆ ನಿಜಕ್ಕೂ ನನಗೆ ಸೋಜಿಗವೆನಿಸಿದ್ದು ನೀವು ಹೊತ್ತು ಹಿಡಿದಿರುವ ದೊಡ್ಡ ಖಡ್ಗವನ್ನು ನೋಡಿದಾಗ. ನೋಟಕ್ಕೆ ಸಾಕಷ್ಟು ಭಾರವಿರುವಂತೆ ಕಾಣುವ ಅದನ್ನು ಬಳಸಬೇಕಾದರೆ (ಅದೂ ವೇಗದ ಲಾಘವದಲ್ಲಿ) ಆ ವ್ಯಕ್ತಿಗಳದೆಷ್ಟು ಶಕ್ತಿ ಸಾಮರ್ಥ್ಯವುಳ್ಳವರಾಗಿರಬೇಕೆಂದು ನೆನೆದು ಅಚ್ಚರಿಯಾಯ್ತು!
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ by nageshamysore
ಉ: ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ
ನಾಗೇಶರೆ,
-"...ಧೊಂಡಿಯವಾಘನ ಖಡ್ಗವನ್ನು ನಾನು ಹಿಡಿದು ಬಾಳೆಯ ಕಂದನ್ನು ಕಡಿಯುವಾಗ ಹೆಮ್ಮೆಯಿಂದ ಉಬ್ಬಿದ್ದು ಸುಳ್ಳಲ್ಲ. ಅನ್ಯಾಯಿಗಳನ್ನು, ಸಮಾಜಘಾತಕರನ್ನು ಹೀಗೆಯೇ ನಿವಾರಿಸಬೇಕೆಂದು ಅನ್ನಿಸಿದ್ದ ಆ ಕ್ಷಣಗಳನ್ನು ನೆನೆಸಿಕೊಂಡು ಈಗಲೂ ಪುಲಕಿತನಾಗುತ್ತಿರುತ್ತೇನೆ..."
ದೇಶಪ್ರೇಮ, ಗೆಲ್ಲುವ ಛಲ, ಅನ್ಯಾಯದ ವಿರುದ್ಧ ಹೋರಾಡುವ ಮನಸ್ಸಿದ್ದರೆ ಸಾಕು-ಶಕ್ತಿ ಸಾಮರ್ಥ್ಯ ಬಂದೇ ಬರುವುದು.
In reply to ಉ: ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ by ಗಣೇಶ
ಉ: ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ
ನಮ್ಮನ್ನು ಮುಂದೆ ದೂಕಿ ನೀವು ಹಿಂದೆ ಉಳಿಯುವುದಿಲ್ಲ ತಾನೇ, ಗಣೇಶರೇ? ಪ್ರೋತ್ಸಾಹಕ ಪ್ರತಿಕ್ರಿಯೆಗೆ ವಂದನೆಗಳು.
In reply to ಉ: ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ by nageshamysore
ಉ: ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ
ಧನ್ಯವಾದ ನಾಗೇಶರೆ. ಖಡ್ಗದ ರಚನೆ ಹೇಗಿದೆಯೆಂದರೆ ಮುಷ್ಠಿ ಮತ್ತು ಅರ್ಧ ಮೊಣಕೈಗೆ ರಕ್ಷಣೆ ಸಿಗುತ್ತದೆ. ನಾನು ಎರಡು ಕೈಗಳಿಂದಲೂ ಖಡ್ಗ ಹಿಡಿದು ಬಾಳೆಕಂದನ್ನು ರಭಸದಿಂದ ಕಡಿದಿದ್ದಾಗ ಅದು ಸ್ವಲ್ಪ ದೂರದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರ ಸಮೀಪಕ್ಕೆ ಹೋಗಿತ್ತು. ಪುಣ್ಯಕ್ಕೆ ಅನಾಹುತವಾಗಲಿಲ್ಲ. ಅವರ ಪ್ಯಾಂಟು ಸ್ವಲ್ಪ ಹರಿದಿತ್ತು! :)
ಉ: ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ
ತುಂಬಾ ಒಳ್ಳೆಯ ಲೇಖನ. ಧೊಂಡಿಯ ವಾಘನ ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು.
In reply to ಉ: ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ by Vasant Kulkarni
ಉ: ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ
ಧನ್ಯವಾದಗಳು ವಸಂತ ಕುಲಕರ್ಣಿಯವರೇ.
ಉ: ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ
ನಾಗರಾಜ್‌ರವರೇ ಆಸಕ್ತಿದಾಯಕ ಬರಹಕ್ಕಾಗಿ ಧನ್ಯವಾದಗಳು. ದೋಂಡಿಯಾ ವಾಘ್ ಬಗ್ಗೆ ಓದಿದ್ದೆನಾದರೂ, ಈ ವಿಷಯಗಳು ತಿಳಿದಿರಲಿಲ್ಲ.
In reply to ಉ: ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ by ಕೀರ್ತಿರಾಜ್ ಮಧ್ವ
ಉ: ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ
ಈ ಅಜ್ಞಾತವೀರನ ಗಾಥೆಯನ್ನು ನಾವು ನಾವು ಎಲ್ಲರಿಗೂ ಪರಿಚಯಿಸೋಣ. ದನ್ಯವಾದ, ಕೀರ್ತಿರಾಜ ಮಧ್ಯರೇ.