೧೯೫. ಲಲಿತಾ ಸಹಸ್ರನಾಮ ೯೧೩ರಿಂದ ೯೧೭ನೇ ನಾಮಗಳ ವಿವರಣೆ

೧೯೫. ಲಲಿತಾ ಸಹಸ್ರನಾಮ ೯೧೩ರಿಂದ ೯೧೭ನೇ ನಾಮಗಳ ವಿವರಣೆ

                                                                  ಲಲಿತಾ ಸಹಸ್ರನಾಮ ೯೧೩ - ೯೧೭

Sarvāpad-vinivāriṇī सर्वापद्-विनिवारिणी (913)

೯೧೪. ಸರ್ವಾಪದ್-ವಿನಿವಾರಿಣೀ

           ದೇವಿಯು ಎಲ್ಲಾ ವಿಧವಾದ ಆಪತ್ತುಗಳನ್ನು ನಿವಾರಿಸುವವಳಾಗಿದ್ದಾಳೆ. ನಾವು ಹಿಂದಿನ ನಾಮದಲ್ಲಿ ಚರ್ಚಿಸಿದ ಸವ್ಯ ಮತ್ತು ಅಪಸವ್ಯ ಮಾರ್ಗಗಳನ್ನು ಅನುಸರಿಸದೇ ಇರುವುದರಿಂದ ಆಪತ್ತುಗಳು ಉಂಟಾಗುತ್ತವೆ. ಯಾವುದೇ ಮಾರ್ಗವನ್ನನುಸರಿಸಲಿ, ಒಬ್ಬನಿಗೆ ಕೊಡಲ್ಪಟ್ಟ ಸಂಸ್ಕಾರಕ್ಕೆ ಅನುಗುಣವಾಗಿ, ದೇವಿಯ ಮಂತ್ರ (ಉದಾ: ಪಂಚದಶೀ ಮಂತ್ರ)ವನ್ನು ಅಥವಾ ಆಕೆಯ *ನಾಮಾವಳಿಗಳನ್ನು (ಉದಾ: ಲಲಿತಾ ಸಹಸ್ರನಾಮ) ಪದೇ ಪದೇ ಉಚ್ಛರಿಸುವುದರ ಮೂಲಕ ಆಕೆಯನ್ನು ಜ್ಞಾಪಿಸಿಕೊಳ್ಳಲಾಗುತ್ತದೆ. ಇದನ್ನು ಬೃಹದಾರಣ್ಯಕ ಉಪನಿಷತ್ತಿನಲ್ಲಿ (೬.೨.೧೬) ವಿವರಿಸಲಾಗಿದೆ, "ಯಾರು ಈ ಎರಡು ಮಾರ್ಗಗಳನ್ನು ತಿಳಿದಿಲ್ಲವೋ ಅವರು ಕೀಟ,ಪತಂಗ, ಮೊದಲಾದವುಗಳಾಗಿ ಜನ್ಮತೆಳೆಯುವರು". ಇದೇ ವಿಧವಾದ ಭಾವನೆಯು ನಮಗೆ ಛಾಂದೋಗ್ಯ ಉಪನಿಷತ್ತಿನಲ್ಲಿ (೫.೧೦.೮) ಸಿಗುತ್ತದೆ, "ಯಾರು ಈ ಎರಡು ಮಾರ್ಗಗಳನ್ನು ಅನುಸರಿಸುವುದಿಲ್ಲವೋ ಅವರು ಪುನಃ ಪುನಃ ಸಣ್ಣ-ಪುಟ್ಟ ಪ್ರಾಣಿ ಮತ್ತು ಕೀಟಗಳಾಗಿ ಜನ್ಮತಾಳುತ್ತಾರೆ". ಉಪನಿಷತ್ತುಗಳು, ಒಬ್ಬನು ಈ ಎರಡರಲ್ಲೊಂದು ಮಾರ್ಗವನ್ನು ಅನುಸರಿಸದಿದ್ದರೆ ಅಂತಹ ವ್ಯಕ್ತಿಯು ಪುನಃ ಪುನಃ ಈ ಜನನ ಮರಣಗಳ ಚಕ್ರಕ್ಕೆ ಸಿಲುಕುತ್ತಾನೆ ಎಂದು ನಮಗೆ ಎಚ್ಚರಿಕೆಯನ್ನು ಕೊಡುತ್ತವೆ, ಏಕೆಂದರೆ ಚಿಕ್ಕ ಕೀಟ ಮತ್ತು ಪ್ರಾಣಿಗಳ ಆಯುಷ್ಯವು (ಜೀವಿತಾವಧಿಯು) ಬಹಳ ಅಲ್ಪ ಕಾಲದ್ದಾಗಿರುತ್ತದೆ.

          ಸ್ವಯಂ ದೇವಿಯೇ ಹೀಗೆ ಹೇಳುತ್ತಾಳೆ, "ಯಾರು ಮೋಹಪಾಶಗಳಿಂದ ಮುಕ್ತರಾಗಿ ನನ್ನಲ್ಲಿಯೇ ಶರಣಾಗತಿಯನ್ನು ಕೋರಿ ದೈವೀ ಯೋಗದಿಂದ ನನ್ನನ್ನೇ ಭಕ್ತಿಯಿಂದ ಭಜಿಸುತ್ತಾರೆಯೋ, ಯಾರು ಸಕಲ ಜೀವಿಗಳಲ್ಲಿ ಕರುಣೆಯನ್ನುಳ್ಳವರಾಗಿದ್ದಾರೋ, ಶಾಂತಚಿತ್ತರಾಗಿರುತ್ತಾರೆಯೋ, ಇಂದ್ರಿಯನಿಗ್ರಹ ಹೊಂದಿದವರಾಗಿರುತ್ತಾರೆಯೋ, ಹೊಟ್ಟೆ ಕಿಚ್ಚಿನಿಂದ (ಮಾತ್ಸರ್ಯದಿಂದ) ದೂರವಿರುತ್ತಾರೆಯೋ, ಸರಳವಾಗಿರುತ್ತಾರೋ, ಸಾಧುವಾಗಿರುತ್ತಾರೋ, ನನ್ನ ಮೇಲೆಯೇ ದೃಷ್ಟಿಯನ್ನು ಕೇಂದ್ರೀಕರಿಸುವ ವ್ರತಗಳನ್ನು ಕೈಗೊಂಡಿದ್ದಾರೆಯೋ, ಯಾರು ಜೀವನವು ನನಗೆ ಸಮರ್ಪಿಸಲಾಗಿದೆಯೋ, ನನ್ನ ವಿವೇಕವನ್ನು ಹಾಡಿ ಹೊಗಳುವುದರಲ್ಲಿ ಸಂತೋಷ ಹೊಂದುತ್ತಾರೆಯೋ.......... ಮತ್ತು ಒಂದು ವೇಳೆ ಈ ಗುಣಗಳನ್ನು ಹೊಂದಿಲ್ಲದೇ ಇದ್ದರೂ ಸಹ, ಅವರು ನನ್ನನ್ನು ನಾಮವನ್ನು ಉಚ್ಛರಿಸುತ್ತಾ ನನ್ನಲ್ಲಿ ಭಕ್ತಿಯನ್ನುಳ್ಳವರಾಗಿದ್ದರೆ, ಈ ಜನ್ಮದಲ್ಲಿಯೇ ಅವರ ಪರ್ವತೋಪಮವಾದ ದುರಾದೃಷ್ಟವನ್ನು ವಿವೇಕದ ಜ್ಯೋತಿಯಿಂದ ತ್ವರಿತವಾಗಿ ನಾಶಗೊಳಿಸುತ್ತೇನೆ."

            ಹಿಂದಿನ ನಾಮದಲ್ಲಿ ಸೂಚಿಸಿರುವ ಯಾವುದಾದರೂ ಒಂದು ಮಾರ್ಗವನ್ನು ಅನುಸರಿಸಿದರೂ ಸಹ ಅವರ ಮನೋಭಾವವು ಅಷ್ಟೇ ಪ್ರಮುಖವೆನಿಸುತ್ತದೆ. ದೇವಿಯು ಕೇವಲ ಪೂಜಾಚರಣೆಯ ಮಾರ್ಗವನ್ನು ಅನುಸರಿಸುವುದಷ್ಟೇ ಮುಖ್ಯವಲ್ಲ ಎಂದು ಹೇಳುತ್ತಿದ್ದಾಳೆ. ಒಬ್ಬನು ಆತ್ಮವನ್ನು ಪರಮಾತ್ಮದೊಂದಿಗೆ ಸಂವಹನಗೊಳಿಸಲು ಸೂಕ್ತವಾದ ಜ್ಞಾನವನ್ನು ಹೊಂದಬೇಕು. ಈ ವಿಧವಾದ ಜ್ಞಾನವನ್ನು ಹೊಂದಿದಲ್ಲದೇ ಈ ದೈವೀ ಸಂವಹನು ಸಾಧ್ಯವಿಲ್ಲ. ಕಷ್ಟ ಕಾಲದಲ್ಲಿ, ಯಾವಾಗಲೂ ಒಬ್ಬನು ನಿರಂತರವಾಗಿ ದೇವಿಯ ಪಾದಪದ್ಮಗಳನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಲಾಗುತ್ತದೆ.

            ಯಾರು ಮೇಲಿನ ಹಂತಗಳನ್ನು ಅನುಸರಿಸುತ್ತಾರೆಯೋ, ಅವರಿಗೆ ಎಂದಿಗೂ ದುರಾದೃಷ್ಟ/ಕಷ್ಟಗಳ ಬಾಧೆಯಿರುವುದಿಲ್ಲ ಮತ್ತು ಯಾರಿಗೆ ಈ ಹಂತಗಳನ್ನು ಅನುಸರಿಸಲಾಗುವುದಿಲ್ಲವೋ ಅವರು ಕಷ್ಟಕಾಲದಲ್ಲಿ ನಿರಂತರವಾಗಿ ದೇವಿಯ ಪಾದಪದ್ಮಗಳನ್ನು ನೆನಯಬೇಕು. ಆದರೆ ಯಾರು ದೇವಿಯ ಧ್ಯಾನವನ್ನು ಮಾಡುತ್ತಾರೆಯೋ ಅವರಿಗೆ ಮಾತ್ರವೇ ಮುಕ್ತಿಯು ದೊರೆಯುತ್ತದೆ.

            ಈ ನಾಮದ ಒಟ್ಟಾರೆ ಅರ್ಥವು ಭಕ್ತಿಯ ಆಳವನ್ನು ಹೊರತುಪಡಿಸಿದರೂ ಸಹ, ಒಬ್ಬನು ದೇವಿಯನ್ನು ಸರಿಯಾದ ಕ್ರಮದಲ್ಲಿ ಪೂಜಿಸಿದರೆ ಅವನಿಗೆ ದೌರ್ಭಾಗ್ಯವು ಉಂಟಾಗುವುದಿಲ್ಲವೆಂದು ಹೇಳುತ್ತದೆ.

(*ಯಾರೋ ಒಬ್ಬಾಕೆಯು ತಾನು ನೂರು ಸಾವಿರ ಪತ್ರೆಗಳಿಂದ ದೇವಿಯ ಪೂಜೆಯನ್ನು ಮಾಡಿದ್ದಾಗಿ ರಮಣ ಮಹರ್ಷಿಗಳಿಗೆ ತಿಳಿಸಿದರಂತೆ. ಆಗ ಮಹರ್ಷಿಗಳು, ಅವರಿಗೆ ತಿರುಗಿ, "ಹಾಗೆ ಗಿಡವನ್ನು ಚಿವುಟುವ ಬದಲು ನಿನ್ನ ಚರ್ಮವನ್ನೇ ನೂರು ಸಾವಿರ ಸಲ ಚಿವುಟಿಕೊಂಡು ನಿನ್ನ ಪೂಜೆಯನ್ನು ನೆರವೇರಿಸಲಾಗುತ್ತಿರಲಿಲ್ಲವೇ?" ಎಂದು ಕೇಳಿದರಂತೆ).

Svasthā स्वस्था (914)

೯೧೪. ಸ್ವಸ್ಥಾ

           ಸ್ವಸ್ಥಾ ಎಂದರೆ ಒಬ್ಬನು ತನ್ನ ಸಹಜವಾದ ಸ್ಥಿತಿಯಲ್ಲಿ ಇರುವುದು ಅಂದರೆ ಪ್ರಕೃತಿ ಸಹಜವಾಗಿ - ಆರೋಗ್ಯ ಪೂರ್ಣ ದೇಹ ಮತ್ತು ಉಪಾಧಿಯಿಲ್ಲದ ಮನಸ್ಸುಗಳಿಂದ ಕೂಡಿರುವುದು (ಉಪಾಧಿ ಎಂದರೆ ಪರಿಸ್ಥಿತಿ. ಉಪಾಧಿಯಿಂದಾಗಿ ಅಪರಿಮಿತ ವಸ್ತುವು ಪರಿಮಿತವಾಗಿ ಕಾಣಿಸುತ್ತದೆ). ಛಾಂದೋಗ್ಯ ಉಪನಿಷತ್ತಿನಲ್ಲಿ (೭.೨೪.೧) ನಾರದ ಮಹರ್ಷಿಯು ಸನತ್ಕುಮಾರನನ್ನು (ಬ್ರಹ್ಮನ ನಾಲ್ವರು ಮಾನಸಿಕ ಪುತ್ರರಲ್ಲಿ ಒಬ್ಬನು) ಉದ್ದೇಶಿಸಿ ಹೀಗೆ ಕೇಳುತ್ತಾನೆ, "ಅಪರಿಮಿತವಾದದ್ದು ಎಲ್ಲಿ ನಿವಸಿಸುತ್ತದೆ?" ಅದಕ್ಕೆ ಪ್ರತ್ಯುತ್ತರವಾಗಿ ಸನತ್ಕುಮಾರನು ನುಡಿಯುತ್ತಾನೆ, "ಅವನು ತನ್ನ ಸ್ವಂತ ಬಲದ ಮೇಲೆ ಆಸೀನನಾಗಿದ್ದಾನೆ, ಅಥವಾ ಅವನು ಆ ಬಲದ ಮೇಲೆಯೂ ಅಲ್ಲ".

          ಸಂತೋಷ ಮತ್ತು ದುಃಖಗಳು ಒಬ್ಬರು ಇನ್ನೊಂದು ವಸ್ತುವಿನ ಕುರಿತಾಗಿ ಆಲೋಚಿಸಿದಾಗಲಷ್ಟೇ ಅವುಗಳ ಅನುಭವವಾಗುತ್ತದೆ ಏಕೆಂದರೆ ಆಗ ಮನಸ್ಸಿಗೆ ಆಯ್ಕೆಯ ಅವಕಾಶವಿದೆ. ದ್ವಂದ್ವವು ಆಧ್ಯಾತ್ಮಿಕ ಮಾರ್ಗದಲ್ಲಿ ಎದುರಿಸಬೇಕಾದ ಅತ್ಯಂತ ಕಠಿಣವಾದ ಶತ್ರುವಾಗಿದೆ.

          (ಗಣೇಶ ಮತ್ತು ಅವನ ತಾಯಿಯಾದ ಪಾರ್ವತಿಯ ಕುರಿತಾದ ಒಂದು ಕಥೆಯಿದೆ. ಗಣೇಶನು ಒಂದು ಬೆಕ್ಕಿನೊಂದಿಗೆ ಆಟವಾಡುತ್ತಾ ಅದಕ್ಕೆ ಗಾಯಗಳನ್ನುಂಟು ಮಾಡಿದ. ಆಮೇಲೆ ಅವನು ತನ್ನ ತಾಯಿಯ ಬಳಿಗೆ ಸಾಗಿದ. ಅವನು ತನ್ನ ತಾಯಿಯ ಮೈಮೇಲೆ ಕೆಲವೊಂದು ಗಾಯಗಳನ್ನು ನೋಡಿ ಇದನ್ನು ಯಾರು ಮಾಡಿದರೆಂದು ಕೇಳಿದ. ಆಗ ಪಾರ್ವತಿಯು ಅವನಿಗೆ ಹೀಗೆ ಉತ್ತರ ಕೊಟ್ಟಳು, " ಈ ಗಾಯಗಳನ್ನು ಮಾಡಿದವನು ನೀನೇ. ನೀನು ಆ ಬೆಕ್ಕನ್ನು ಹೊಡೆದೆ, ನಾನು ಆ ಬೆಕ್ಕಿನಲ್ಲಿಯೂ ಇದ್ದೇನೆ. ಆದ್ದರಿಂದ ನೀನು ಬೆಕ್ಕಿಗೆ ನೋವುಂಟು ಮಾಡಿದಾಗ, ನೀನು ನನಗೂ ನೋವುಂಟು ಮಾಡಿದೆ").

         ದೇವಿಯ ಸ್ವತಂತ್ರ ಸ್ವಭಾವನ್ನೂ ಕಠೋಪನಿಷತ್ತಿನಲ್ಲಿ (೧.೩.೧೧) ವಿವರಿಸಲಾಗಿದೆ, ಅದು ಹೀಗೆ ಹೇಳುತ್ತದೆ, "ಬ್ರಹ್ಮಾಂಡ ಆತ್ಮಕ್ಕಿಂತ ಉನ್ನತವಾದದ್ದು ಮತ್ತ್ಯಾವುದೂ ಇಲ್ಲ. ಅದು ಎಲ್ಲಾ ಬೆಳವಣಿಗೆಗೆ ಮುಕ್ತಾಯವನ್ನು ಸೂಚಿಸುತ್ತದೆ. ಇದು ಯಾರು ಬೇಕಾದರೂ ಹೊಂದಬಹುದಾದ ಅತ್ಯುನ್ನತ ಗುರಿಯಾಗಿದೆ”.

         ದೇವಿಯು ಪರಮೋನ್ನತಳಾಗಿರುವುದರಿಂದ ಆಕೆಯು ಸ್ವಸ್ಥಾ ಆಗಿದ್ದಾಳೆ.

Svabhāva-madhurā स्वभाव-मधुरा (915)

೯೧೫. ಸ್ವಭಾವ-ಮಧುರಾ

           ದೇವಿಯು ಮಧುರವಾಗಿದ್ದಾಳೆ, ಆಹ್ಲಾದವನ್ನುಂಟು ಮಾಡುತ್ತಾಳೆ, ಕಳೆಯಿಂದ ಕೂಡಿದ್ದಾಳೆ ಮತ್ತು ಸಂತೋಷವನ್ನುಂಟು ಮಾಡುತ್ತಾಳೆ. ಆಕೆಯ ಈ ಗುಣಗಳಿಂದಾಗಿ ಎಲ್ಲರೂ ಆಕೆಗೆ ಆಕರ್ಷಿತರಾಗುತ್ತಾರೆ.

           ಈ ನಾಮವನ್ನು ಸ್ವ+ಭಾ+ಅವಮ+ಧುರ ಎಂದೂ ಸಹ ವಿಭಜಿಸಬಹುದು. ಸ್ವ ಎಂದರೆ ಆಕೆ, ಭ ಎಂದರೆ ಹೊಳೆಯುವುದು, ಅವಮ ಎಂದರೆ ವಿವೇಕಿಗಳಲ್ಲಿ ಶ್ರೇಷ್ಠರಾದವರು, ಮತ್ತು ಧುರ ಎಂದರೆ ಕಟ್ಟಿ ಹಾಕು (ಜೋಡಿಸು). ಈ ಸಂದರ್ಭದಲ್ಲಿ ಈ ನಾಮವು ದೇವಿಯು ವಿವೇಕಿಗಳ ನೊಗವನ್ನು ಹೊರುತ್ತಾಳೆ ಎಂದಾಗುತ್ತದೆ. ಆಕೆಯು ತನ್ನ ಉಪಸ್ಥಿತಿಯಿಂದಾಗಿ ವಿವೇಕಿಗಳ ಮಾರ್ಗವು ಪ್ರಕಾಶಿಸುವಂತೆ ಮಾಡುತ್ತಾಳೆ; ವಿವೇಕಿಗಳ ಮಾರ್ಗವು ಪ್ರಕಾಶಿಸುತ್ತದೆ. ಅವರು ದೇವಿಯ ಪ್ರಕಾಶಿಸುವ ಬೆಳಕಿನಿಂದ ಆಧ್ಯಾತ್ಮಿಕ ಹಾದಿಯನ್ನು ತುಳಿಯಬಹುದು. ಬ್ರಹ್ಮವು ಸ್ವಯಂ-ಪ್ರಕಾಶಕವಾಗಿದೆ.

           ಸ್ವಭಾ (ವ)+ವಮ+ಧುರ; ಇಲ್ಲಿ ಸ್ವಭಾ(ವ) ಎಂದರೆ ಆತ್ಮ ಸಾಕ್ಷಾತ್ಕಾರಕ್ಕೆ ಬೇಕಾಗುವ ಜ್ಞಾನ, ವಮ ಎಂದರೆ ಆತ್ಮದ ಜ್ಞಾನವನ್ನು ಒದಗಿಸುವುದು, ಮತ್ತು ಧುರ ಎಂದರೆ ಪ್ರಮುಖ. ದೇವಿಯು ಬ್ರಹ್ಮ (ಶಿವ) ಜ್ಞಾನವನ್ನು ಒದಗಿಸುವವರಲ್ಲಿ ಪ್ರಮುಖಳಾಗಿದ್ದಾಳೆ. ಸ್ವ+ಭಾವ+ಮಧುರ, ಎಂದರೆ ದೇವಿಯು ತನ್ನ ಭಕ್ತರೊಂದಿಗೆ ಆಹ್ಲಾದದಿಂದಿರುತ್ತಾಳೆ.

          ಸ್ವ+ಭಾವ+ಮಧು+ರ, ಎಂದು ವಿಭಜಿಸಿದಲ್ಲಿ, ದೇವಿಯ ಭಕ್ತರು ಅತ್ಯುತ್ತಮವಾದ ಜ್ಞಾನವನ್ನು ಹೊಂದುತ್ತಾರೆ ಎಂದು ಅರ್ಥೈಸಬಹುದು.

          ಒಬ್ಬನು ದೇವಿಯನ್ನು ತನ್ನೊಳಗೇ ಜ್ಞಾನ ಮತ್ತು ಭಕ್ತಿಗಳಿಂದ ಅರಿಯಬಹುದು ಎಂದು ಹೇಳಲಾಗುತ್ತದೆ.

Dhīrā धीरा (916)

೯೧೬. ಧೀರಾ

            ದೇವಿಯು ಬಲದ ಮೂರ್ತರೂಪವಾಗಿದ್ದಾಳೆ. ಇಲ್ಲಿ ಬಲವೆಂದರೆ ಜ್ಞಾನದ ಬಲ. ಅದ್ವೈತ ಅಥವಾ ನಿರ್ದ್ವಂದತೆಯೇ ಜ್ಞಾನವಾಗಿದೆ. ಅದ್ವೈತ ಜ್ಞಾನವು ದೇವಿಯಿಂದ ಹೊಂದಲ್ಪಡುತ್ತದೆ.

Dhīra-samarcitā धीर-समर्चिता (917)

೯೧೭. ಧೀರ-ಸಮರ್ಚಿತಾ

           ದೇವಿಯು ವಿದ್ವಾಂಸರಿಂದ ಗೌರವಿಸಲ್ಪಡುತ್ತಾಳೆ. ವಿದ್ವಾಂಸರು ಮತ್ತು ಕವಿಗಳು ದೇವಿಯನ್ನು ಹೊಗಳುತ್ತಾರೆ. ಧೀ ಎಂದರೆ ಯಾರು ಜ್ಞಾನದ ಸಾರದಿಂದ ವಿಭಿನ್ನರಾಗಿಲ್ಲವೋ ಅವರು ಮತ್ತು ರಸ ಎಂದರೆ ಅಧಿಕವಾದ ಸಂತೋಷ ಮತ್ತು ಅರ್ಚಿತ ಎಂದರೆ ಪೂಜಿತ ಎಂದರ್ಥ. ಈ ನಾಮದ ಅರ್ಥವು, ಯಾರಿಗೆ ಪರಮೋನ್ನತವಾದ ಜ್ಞಾನದ ಅವಶ್ಯಕತೆಯಿದೆಯೋ ಅವರು ಆಕೆಯನ್ನು ಅರ್ಚಿಸುತ್ತಾರೆ. ಪರಮೋನ್ನತವಾದ ಜ್ಞಾನವು ಪರಮಾನಂದದೆಡೆಗೆ ಕೊಂಡೊಯ್ಯುತ್ತದೆ.

                                                                           *****

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 913 - 917 http://www.manblunder.com/2010/07/lalitha-sahasranamam-913-917.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Fri, 01/10/2014 - 20:09

ಶ್ರೀಧರರೆ,"೧೯೫. ಶ್ರೀ ಲಲಿತಾ ಸಹಸ್ರನಾಮದ ವಿವರಣೆ" ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೯೧೩ - ೯೧೭
______________________________________________
.
೯೧೩. ಸರ್ವಾಪದ್-ವಿನಿವಾರಿಣೀ
ಸವ್ಯ-ಅಪಸವ್ಯ ಮಾರ್ಗ ಅನುಕರಿಸದೆ ಆಪತ್ತು, ದೇವಿ ನಿವಾರಿಸುತ ವಿಪತ್ತು
ಸಂಸ್ಕಾರಾನುಗುಣ ಉಚ್ಛಾರಣೆ, ಇರದಿರೆ ಕ್ಷುದ್ರ ಜಂತು ಪುನರ್ಜನ್ಮದ ಕುತ್ತು
ಪೂಜಾಚಾರಣೆಯಷ್ಟೆ ಸಾಲದು ದೈವೀ ಸಂವಹನಕಿರಬೇಕು ಸೂಕ್ತ ಆತ್ಮಜ್ಞಾನ
ಪಾದ ಪದ್ಮ ನೆನೆ, ದೌರ್ಭಾಗ್ಯ ತೊಡೆವ ಸರ್ವಾಪದ್-ವಿನಿವಾರಿಣೀ ಮುಕ್ತಿ ಘನ ||
.
ಮೋಹಪಾಶ ಮುಕ್ತ ಶರಣಾಗತ, ದೈವೀಯೋಗ ಭಕ್ತಿಯಿಂದ ಭಜಿಸುತ
ಅಷ್ಟ ಕುಸುಮ ಗುಣ ಹೊಂದಿದ ಭಕ್ತ, ಹೊಂದಿರದಿರೆ ನಾಮೋಚ್ಛರಿಸುತ
ಸಕಲ ಜೀವಿ ಕರುಣೆ-ಶಾಂತಚಿತ್ತ-ಇಂದ್ರಿಯ ನಿಗ್ರಹ-ಮಾತ್ಸರ್ಯ ದೂರ
ಸರಳ-ಸಾಧು-ವ್ರತಬದ್ಧ-ಹಾಡಿ ಹೊಗಳೊ ಬದುಕು ಬೆಳಗೆ ಜ್ಯೋತಿ ತರ ||
.
೯೧೪. ಸ್ವಸ್ಥಾ
ಪ್ರಕೃತಿ ಸಹಜ ಸ್ಥಿತಿ ಸ್ವಸ್ಥಾ, ಉಪಾಧಿರಹಿತ ಮನ ಅರೋಗ್ಯ ಪೂರ್ಣ ದೇಹ
ಪರಮೋನ್ನತ ಬ್ರಹ್ಮಾಂಡದಾತ್ಮ, ಅಂತಿಮಾತ್ಯುನ್ನತ ಗುರಿ ದೇವಿ ಸ್ವಸ್ಥಾ ಸ್ವತಃ
ಆಧ್ಯಾತ್ಮಿಕ ಮಾರ್ಗದ ಕಠಿಣ ಶತ್ರು ದ್ವಂದ್ವ, ಸುಖದುಃಖಕಾಗಿರೆ ಕಾರಣ ಆಸೆ
ಪರಿಮಿತವಪರಿಮಿತ, ನಿವಸಿತ ಅಧಾರ ರಹಿತ, ಬೆಕ್ಕ ಗಾಯವು ನೋಯಿಸೆ ||
.
೯೧೫. ಸ್ವಭಾವ-ಮಧುರಾ 
ತನ್ನೊಳಗಿನ ಜ್ಞಾನ ಭಕ್ತಿಯಿಂದರಿಯಬಹುದು ದೇವಿಯ ಸಾರ
ಆಹ್ಲಾದಕರ-ಕಳೆ-ಸಂತೋಷದೆ ಆಕರ್ಷಿಸೊ ಸ್ವಭಾವ ಮಧುರ
ವಿವೇಕಿ ಮಾರ್ಗದ ಪ್ರಕಾಶ, ಆಧ್ಯಾತ್ಮಿಕ ಹಾದಿಗೆ ನೊಗ ಹೊತ್ತ
ಭಕ್ತರಿಗುನ್ನತ ಆತ್ಮಜ್ಞಾನಕೆ ಪ್ರಮುಖ ಮೂಲ, ಆಹ್ಲಾದ ಸತತ ||
.
೯೧೬. ಧೀರಾ
ಜ್ಞಾನ ಬಲದ ಮೂರ್ತರೂಪವಾಗಿಹ ದೇವಿ ಪರಾ
ದ್ವಂದ್ವದ ಹಂಗಿರದ ಅದ್ವೈತ ಜ್ಞಾನಪೂರ್ಣೆ ಧೀರಾ
ನಿರ್ದ್ವಂದತೆಯ ಅದ್ವೈತಜ್ಞಾನವ ಕರುಣಿಸಿ ಲಲಿತೆ
ಅಧೀರ ಭಕ್ತರನು ತನ್ನಂತೆ ಧೀರವಾಗೆ ಕರುಣಿಸುತೆ ||
.
೯೧೭. ಧೀರ-ಸಮರ್ಚಿತಾ
ಜ್ಞಾನವೆ ಸಾರವಾದವರು-ಧೀ, ಅಧಿಕ ಸಂತೋಷ-ರಸ, ಪೂಜಿತ-ಅರ್ಚಿತ
ಪರಮೋನ್ನತ ಜ್ಞಾನದಾಹಿಗಳಿಂ ಸತತಾರ್ಚಿತೆ ಲಲಿತೆ ಧೀರ-ಸಮರ್ಚಿತಾ
ವಿದ್ವಾಂಸರಿಂದ ಗೌರವಿತೆ, ಕವಿ ವಿದ್ವಾಂಸರೆ ದೇವಿಯ ಹೊಗಳಿ ಸ್ತುತಿಸುತ
ಪರಮಾನಂದದೆಡೆಗೊಯ್ಯುವಳು ಲಲಿತೆ ಪರಮೋನ್ನತಜ್ಞಾನ ಕರುಣಿಸುತ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು