ಜಮಾಲಾಬಾದ್ ಕೋಟೆ (ಬೆಟ್ಟ ಹತ್ತೋಣ ಬನ್ನಿರೋ.. ೩)

ಜಮಾಲಾಬಾದ್ ಕೋಟೆ (ಬೆಟ್ಟ ಹತ್ತೋಣ ಬನ್ನಿರೋ.. ೩)

ಚಿತ್ರ

ಬೆಟ್ಟ ಹತ್ತುವಾಗ ಮಕ್ಕಳು ಜತೆಯಿದ್ದರೆ ಪ್ರಶ್ನೆ ಮೇಲೆ ಪ್ರಶ್ನೆಗಳ ಸುರಿಮಳೆಯಾಗುವುದು. ಉತ್ತರಿಸುವುದೇ ಕಷ್ಟ. ಇನ್ನೂ ೨೦-೩೦ ಮೆಟ್ಟಲು ಹತ್ತಿದೆವೋ ಇಲ್ಲವೋ ಮೊದಲ ಪ್ರಶ್ನೆ ಬಂತು- "ಸುತ್ತಲೆಲ್ಲಾ ಸಮತಟ್ಟಾಗಿದೆ. ಕುದುರೆಮುಖ ಪರ್ವತ ಸಹ ತುಂಬಾ ದೂರವಿದೆ. ಇದೊಂದೇ ಭಾರೀ ಗಾತ್ರದ ಕಲ್ಲು ಇಲ್ಲಿ ಹೇಗೆ ಬಂತು?" ( ಈ ಲಿಂಕ್- https://maps.google.co.in/maps?oe=utf-8&client=firefox-a&q=wikimapia&ie=... -ನಲ್ಲಿರುವುದು ವೀಕೀಮ್ಯಾಪ್‌ನ ಸ್ಯಾಟಲೈಟ್ ಚಿತ್ರ.  Tippu's Bungalow, Nada ವನ್ನು "+"(zoom in) ಕ್ಲಿಕ್ ಮಾಡುತ್ತಾ ಹೋಗಿ. ಆಗ ಈ ಗಡಾಯಿಕಲ್ಲಿನ ಸುಂದರ ಸ್ಯಾಟಲೈಟ್ ಚಿತ್ರ ಸಿಗುವುದು. ಸುತ್ತಮುತ್ತಲೂ ಗಮನಿಸಿ, ಎಲ್ಲೂ ದೊಡ್ಡಗಾತ್ರದ ಕಲ್ಲಿಲ್ಲ)
ಏನು ಹೇಳುವುದು ಅಂತ ಆಲೋಚಿಸುತ್ತಿದ್ದಾಗ, "ನಿಮ್ಮ ಗಣೇಶ್ ಮಾಮನೇ ಕಾರಣ" ಎಂದ ನನ್ನ ಭಾವ!
"ಮೊದಲು ಈ ಪ್ರದೇಶವೂ ಸಮತಟ್ಟಾಗಿತ್ತು. ನಿಮ್ಮ ಮಾಮ ಮತ್ತು ಅವರ ಗೆಳೆಯರು ಇಲ್ಲಿ ಕ್ರಿಕೆಟ್ ಆಡುತ್ತಿದ್ದರು. ನನ್ನನ್ನು ಸೇರಿಸುವುದಿಲ್ಲ ಅಂದದ್ದಕ್ಕೆ ಕುದುರೆಮುಖದಿಂದ ಕಲ್ಲನ್ನು ಹೊತ್ತು ತಂದು ಇಲ್ಲಿಟ್ಟೆ!" ಅಂದ.
ನನಗೂ  ಮೆಟ್ಟಲು ಹತ್ತಿ ಸುಸ್ತಾಗಿತ್ತು. ಉತ್ತರ ಹೇಳುವ ನೆವನದಿಂದ ಎಲ್ಲರನ್ನೂ ಕುಳ್ಳಿರಿಸಿ, ಭಾವನ ರೈಲಿಗೆ ನನ್ನ ಬೋಗಿಯನ್ನೂ ಸೇರಿಸಿದೆ- "ನಮಗೂ ಒಳ್ಳೆಯದೇ ಆಯಿತು. ನಾವು ಕಲ್ಲಿನ ಮೇಲೇ ದಿನಾ ಕ್ರಿಕೆಟ್ ಆಡುತ್ತಿದ್ದೆವು. ಬಾಲು ಕೆಳಗೆ ಬೀಳದ ಹಾಗೆ ಕೋಟೆ ಕಟ್ಟಿದ್ದು ನಾವೇ :)" ಅಂದೆ.
"ಮಾಮ ಸಿಕ್ಸರ್ ಹೊಡೆದು, ಬಾಲ್ ಕೋಟೆ ದಾಟಿ ಕೆಳಗೆ ಬಿದ್ದರೆ, ನಾನೇ ಅಲ್ಲಿಗೆ ಎಸೆಯುತ್ತಿದ್ದೆ!" ಅಂದ ಭಾವ...
 ಹೀಗೇ ಮಾತನಾಡುತ್ತಾ, ನೀರು ಕುಡಿದು, ಸುಧಾರಿಸಿಕೊಂಡು ಮುಂದೆ ಹೊರಟೆವು. (ಮಕ್ಕಳ ಪ್ರಶ್ನೆಗೆ ಸರಿಯಾದ ಉತ್ತರ ಏನಿರಬಹುದು? ಊರಿಗೆ ಹೋದ ಮೇಲೆ, ನೆಟ್‌ನಲ್ಲಿ ನೋಡಬೇಕು ಅಂತ ಆಲೋಚಿಸಿ, ಬೆಂಗಳೂರು ಬಂದ ಮೇಲೆ ಗೂಗ್‌ಲ್ ಸರ್ಚ್ ಮಾಡಿದೆ. ಉತ್ತರ ಸಿಗಲಿಲ್ಲ.)
ಮುಂದೆ ನಡೆಯುತ್ತಾ, ಮಾತುಕತೆ ಟಿಪ್ಪು ಸುಲ್ತಾನ್ ಬಗ್ಗೆ ನಡೆಯಿತು. ಮಕ್ಕಳ ಪ್ರಶ್ನೆಗಳು-
"ನಡಕೊಂಡು ಹೋಗುವಾಗಲೇ ಜಾರುತ್ತೇವೆ. ಕುದುರೆ ಏರಿ ಹತ್ತಲು ಸಾಧ್ಯವಾ? ಟಿಪ್ಪುವಿಗೆ ಕೆಳಗೆ ನೋಡುವಾಗ ಭಯವಾಗಲಿಲ್ಲವಾ? ಬರೀ ಗುಡ್ಡದ ಮೇಲೆ ಕೋಟೆ ಕಟ್ಟುವ ಅಗತ್ಯವೇನು? ಇಲ್ಲಿ ಏನಿದೆ ಎಂದು ಬ್ರಿಟಿಷರು ಯುದ್ಧಕ್ಕೆ ಬರುವರು? ತಾಯಿಯ ಹೆಸರು ಯಾಕೆ ಇಟ್ಟದ್ದು?....."
ಮಕ್ಕಳ ಸಮಾಧಾನಕ್ಕೆ ಅಂದಾಜಿನ ಮೇಲೆ ನಾವು ವಿವರಿಸುತ್ತಲಿದ್ದೆವು(ಕೆಲವೊಂದು ವಿವರ ಈಗ ಸೇರಿಸಿದ್ದು)-
ಕುದುರೆ ಏರಿ ವೈರಿಗಳೊಂದಿಗೆ ಹೋರಾಡುವಾಗ ಇಲ್ಲದ ಭಯ, ಬೆಟ್ಟ ಹತ್ತುವಾಗ ಬರುವುದಾ? ಇದೆಲ್ಲಾ ಮೆಟ್ಟಲುಗಳು ನಂತರ ಕೆತ್ತಿದ್ದು, ಮೊದಲೆಲ್ಲಾ ಕುದುರೆಗೆ ಹೋಗಲು ಅನುಕೂಲವಾಗುವಂತಹ ದಾರಿ ಇದ್ದಿರಬಹುದು.
ಈ ಕಾಲದಲ್ಲಿ ನೈಟ್ ವಿಶನ್ ಕ್ಯಾಮರಾ, ಸ್ಯಾಟಲೈಟ್ ಸಹಾಯವಿದ್ದರೂ, ಕಾರ್ಗಿಲ್‌ಗೆ ಪಾಕಿಸ್ತಾನೀಯರು ನುಗ್ಗಿದ್ದರು. ಆ ಕಾಲದಲ್ಲಿ ವೈರಿಗಳ ಓಡಾಟ ಗಮನಿಸಲು, ಹೀಗೇ ಅಲ್ಲಲ್ಲಿರುವ ಗುಡ್ಡ ಬೆಟ್ಟಗಳ ಮೇಲೆ ಕೋಟೆ ಕಟ್ಟಿ ಸೈನಿಕರನ್ನು ಇರಿಸುತ್ತಿದ್ದರು. ಅರಬ್ಬೀ ಸಮುದ್ರದಿಂದ ಬರುವ ವೈರಿಗಳ ಕಡೆ ಗಮನವಿಡಲು "ಸುಲ್ತಾನ್ ಬತ್ತೇರಿ" ( http://mangalorehistory.blogspot.in/2012/06/blog-post.html ) ಇತ್ತು. ಇಲ್ಲಿ ಜಮಾಲಾಬಾದ್ ಕೋಟೆ, ಮುಂದೆ  ಸಕಲೇಶಪುರ ಸಮೀಪದ ಗುಡ್ಡದಲ್ಲೂ ಒಂದು ಕೋಟೆ ಇದೆ..(  http://www.youtube.com/watch?v=n-1uM9x4tqg  )
ಪಕ್ಕದಲ್ಲಿರುವ "ಫಿರಂಗಿ" (ಚಿತ್ರ-೬ ) ಗಮನಿಸಿ. ಆತ ಒಬ್ಬ ಅಲ್ಲ, ನಾವು ೩-೪ ಮಂದಿ ಸೇರಿದರೂ ಅಲುಗಿಸಲು ಸಾಧ್ಯವಾಗದು. ಅಂತಹ ಭಾರೀ ಗಾತ್ರದ ಫಿರಂಗಿಗಳನ್ನು ಅದು ಹೇಗೆ ೧೬೦೦ ಅಡಿ ಎತ್ತರಕ್ಕೆ ಸಾಗಿಸಿದರೋ ಗೊತ್ತಾಗುತ್ತಿಲ್ಲ. ಈ ಫಿರಂಗಿ ಬಗ್ಗೆ ಹೇಳುವಾಗ ಇನ್ನೊಂದು ಮುಖ್ಯ ವಿಷಯ ಟಿಪ್ಪು ಬಗ್ಗೆ- Dr APJ Abdul Kalam, the then President of India, in his Tipu Sultan Shaheed Memorial Lecture in Bangalore called Tipu Sultan the innovator of the world's first war rocket.
http://www.spaceline.org/history/2.html
http://londonhistorians.files.wordpress.com/2012/05/dsc05872b.jpg
ಟಿಪ್ಪು ವಶಪಡಿಸುವ ಮೊದಲು ಈ ಗುಡ್ಡಕ್ಕೆ "ನರಸಿಂಹ ಗಡ" ಎಂದು ಕರೆಯುತ್ತಿದ್ದರು. ಮೊದಲ ಮತ್ತು ಕೊನೆಯ ಅಕ್ಷರ ಸೇರಿಸಿ "ನಡ"  ಕೆಳಗಿನ ಹಳ್ಳಿಯ ಹೆಸರು. ಟಿಪ್ಪು ಅನೇಕ ಊರುಗಳ ಹೆಸರನ್ನು ಬದಲಾಯಿಸಿರುವನು. ಜಲಾಲಬಾದ್, ಕುಸಾನಬಾದ್, ನಝಾರಾಬಾದ್, ಮುಸ್ತಫಾಬಾದ್,ಖಾಲಿಖಾಬಾದ್, ಇಸ್ಲಾಮಾಬಾದ್(ಕ್ಯಾಲಿಕಟ್)...ಹೀಗೇ (ಗಡಾಯಿ ಕಲ್ಲು) ನರಸಿಂಹಗಡಕ್ಕೆ ತನ್ನ ತಾಯಿಯ ಹೆಸರನ್ನು ಇಟ್ಟಿರುವನು.
ಚಿತ್ರ ೭-ನ್ನು ಗಮನಿಸಿ. ಗಿಡ, ಮರ, ಹುಲ್ಲು, ಇರುವುದರಿಂದ ಸರಿಯಾಗಿ ತೆಗೆಯಲು ಆಗಲಿಲ್ಲ. ಇದು ನಂದಿಬೆಟ್ಟದಲ್ಲಿರುವಂತೆ ಜಮಾಲಾಬಾದ್ ಕೋಟೆಯ "ಟಿಪ್ಪು ಡ್ರಾಪ್". ತನ್ನ ವೈರಿಗಳನ್ನು ಈ ಸ್ಥಳದಿಂದ ತಳ್ಳುತ್ತಿದ್ದನಂತೆ. ಬೆಟ್ಟದ ಯಾವುದೇ ಸ್ಥಳದಿಂದ ತಳ್ಳಿದರೂ ತಳ ತಲುಪುವುದು ಗ್ಯಾರಂಟಿ ಇದ್ದರೂ, ಈ ಸ್ಥಳ ಆಯ್ಕೆ ಮಾಡಿದ್ದು ಬಹುಷಃ ಸುತ್ತಲೂ ಉಳಿದವರು ನಿಂತು ನೋಡಲು ಅನುಕೂಲವಾಗಲಿ ಎಂದಿರಬಹುದು.
ಇನ್ಯಾಕೆ ತಡ.. ಮಳೆಗಾಲ ಪ್ರಾರಂಭಕ್ಕೆ ಮೊದಲು ಜಮಾಲಾಬಾದ್ ಕೋಟೆಗೆ ಲಗ್ಗೆ ಹಾಕಿ- ಕತ್ತಿ ಗುರಾಣಿಯೊಂದಿಗಲ್ಲ, ನೀರಿನ ಬಾಟಲುಗಳು, ಹಣ್ಣು, ಸ್ವೀಟ್ಸ್...ಜತೆ. ಕೋಟೆಗೆದ್ದ ಖುಷಿ ನಮ್ಮೊಂದಿಗೆ ಹಂಚಿಕೊಳ್ಳಿ.
 

Rating
No votes yet

Comments

Submitted by ಗಣೇಶ Sat, 01/11/2014 - 00:32

ಕ್ಷಮಿಸಿ. ಮೊದಲ ಲಿಂಕ್ ತಪ್ಪಿದೆ. ಗೂಗ್‌ಲ್ ಸರ್ಚಲ್ಲಿ, Map ಕ್ಲಿಕ್ ಮಾಡಿ, "Tippu's Bungalow, Nada " ಸರ್ಚ್ ಮಾಡಿ, ಅಲ್ಲಿ ಸ್ಯಾಟಲೈಟ್ ಚಿತ್ರಕ್ಕೆ ಕ್ಲಿಕ್ ಮಾಡಿ, ಮುಂದೆ ಮೇಲೆ ಹೇಳಿದಂತೆ ಮಾಡಿದರಾಯಿತು.

Submitted by nageshamysore Sat, 01/11/2014 - 06:34

ಗಣೇಶ್ ಜಿ, ಮೂರೆ ಕಂತಲ್ಲಿ ಗುಡ್ಡ ಹತ್ತಿಸಿ ಇಳಿಸಿ ಸಚಿತ್ರ ಸಮೇತ ಕಟ್ಟಿಕೊಟ್ಟ ಅನುಭವ ಮಜಬೂತಾಗಿದ್ದುದಷ್ಟೆ ಅಲ್ಲದೆ, ಮಾಹಿತಿಪೂರ್ಣ ಕೂಡ. ಹತ್ತಿಳಿದ ಏದುಸಿರು, ಉಬ್ಬಸಗಳೊಂದು ಕಾಣಿಸಿಕೊಳ್ಳದ ಲಘು ಲಹರಿಯ ಲೇಖನ, ಅಲ್ಲಿಗೆ ಹೋಗಬಯಸುವವರಿಗೆ ಸುಂದರ ಪ್ರಾಥಮಿಕ ಕೈಪಿಡಿಯಾಗಿದೆ :-)
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by ಗಣೇಶ Sun, 01/12/2014 - 00:22

In reply to by nageshamysore

ನಾಗೇಶರೆ, ಈ ಕೋಟೆಯನ್ನು ಮಗಳಿಗೆ ತೋರಿಸಬೇಕೆಂದು ಬಹಳ ವರ್ಷಗಳ ಆಸೆಯಿತ್ತು. ಮಗಳು ನೋಡಿ ಖುಷಿಪಟ್ಟಾಗ ಆ ಆನಂದ ಇಮ್ಮಡಿಯಾಯಿತು. ಈಗ ನೀವೆಲ್ಲಾ ಮೆಚ್ಚಿದಾಗ ಖುಷಿ ನೂರು ಪಟ್ಟು ಜಾಸ್ತಿಯಾಯಿತು. ಧನ್ಯವಾದಗಳು.

Submitted by partha1059 Sat, 01/11/2014 - 10:25

ನಾವು ೩-೪ ಮಂದಿ ಸೇರಿದರೂ ಅಲುಗಿಸಲು ಸಾಧ್ಯವಾಗದು. ಅಂತಹ ಭಾರೀ ಗಾತ್ರದ ಫಿರಂಗಿಗಳನ್ನು ಅದು ಹೇಗೆ ೧೬೦೦ ಅಡಿ ಎತ್ತರಕ್ಕೆ ಸಾಗಿಸಿದರೋ ಗೊತ್ತಾಗುತ್ತಿಲ್ಲ.....
ಭಾಆಆಅ....ರಿ ಗಾತ್ರದ ಕಲ್ಲುಬಂಡೆಯನ್ನೆ ತಂದಿಟ್ಟವರಿಗೆ ಅದೊಂದು ಥುಸ್ ಪಿರಂಗಿ ತಂದಿಡುವುದು ಕಷ್ಟವೇ? ನಾನೆ ತಂದಿಟ್ಟೆ ಅಂತ ಹೇಳಿದ್ದರೆ ಆಗುತ್ತಿತ್ತು, ಏಕೆ ಅಂದರೆ ಒಲೆ ಊದಲು ಕೊಳವೇ ಬೇಕಿತ್ತು ಅಂತ ಹೇಳಿದ್ದರೆ ನಂಬುತ್ತಿದ್ದರು.
..
ವಂದನೆಗಳು ಗಣೇಶರೆ
ಪಾರ್ಥಸಾರಥಿ

Submitted by ಗಣೇಶ Sun, 01/12/2014 - 00:30

In reply to by partha1059

->...ಅದೊಂದು ಥುಸ್ ಪಿರಂಗಿ ತಂದಿಡುವುದು ಕಷ್ಟವೇ?..ಏಕೆ ಅಂದರೆ ಒಲೆ ಊದಲು ಕೊಳವೇ ಬೇಕಿತ್ತು..:)))

Submitted by venkatb83 Sat, 01/11/2014 - 14:35

ಗಮನಿಸಿ. ಆತ ಒಬ್ಬ ಅಲ್ಲ, ನಾವು ೩-೪ ಮಂದಿ ಸೇರಿದರೂ ಅಲುಗಿಸಲು ಸಾಧ್ಯವಾಗದು. "
;()))))
ಅದು ನೀವೇ ಎಂದರೂ ನಂಬಲು ..... ದ್ಯ ..!!
ಅಂತಹ ಭಾರೀ ಗಾತ್ರದ ಫಿರಂಗಿಗಳನ್ನು ಅದು ಹೇಗೆ ೧೬೦೦ ಅಡಿ ಎತ್ತರಕ್ಕೆ ಸಾಗಿಸಿದರೋ ಗೊತ್ತಾಗುತ್ತಿಲ್ಲ.
ನಂ ರಾಯಚೂರಲ್ಲಿ ಕೆ ಎಸ್ ಆರ್‌ಟಿಸಿ ಬಸ್ಟ್ಯಾಂಡ್ ಮುಂದೆ ಹಿಂದೆ ಇರೋ ಕೋಟೆಯನ್ನು ಸಹಾ ಮಾರಾಯ್ (ದೊಡ್ಡ ದೊಡ್ಡ ಎಂದು ಅರ್ಥ ) ಕಲ್ಲ್ಲೂ ಉಪಯೋಗಿಸಿ ಕಟ್ಟಿರುವರು. ಅದು ನೋಡಿದಾಗೆಲ್ಲಾ ನನಗೂ ಅದೇ ಅನಿಸುತ್ತೆ ಹೇಗೆ ಕಟ್ಟಿದರು ಅಂತ ...!! ಮೋಸ್ಟ್ಲಿ ನಂ ಕಡೆ ಆನೆ ಉಪಯೋಗಿಸಿ ಕಲ್ಲು ಎತ್ತಿ ಕಟ್ಟಿರಬಹುದಾ? ಗೊತ್ತಿಲ್ಲ ..
http://bit.ly/1flor5o
http://bit.ly/1hGwNVv
http://bit.ly/1kutxi2
http://bit.ly/KbDdNt
http://bit.ly/1kutAdP
ಹತ್ತೋದು ಸುಲಭ ಇಳಿಯೋದು ಕಸ್ಟ- ನಮಗೆ ಅನುಭವ ಆಗಿದ್ದು ಸಾವನ ದುರ್ಗ ಬೆಟ್ಟ ಹತ್ತಿ ಇಳಿವಾಗ ..!!
ನೆಕ್ಸ್ಟ್ ಗಣೇಶ್ ಅಣ್ಣ
ಅವರ ಪ್ರವಾಸ -ಎಲ್ಲಿಗೋ?
ನಾ ಈಗಲೇ ಪ್ರವಾಸಿ ತಾಣಗಳ ಪಟ್ಟಿ ಮಾಡುತ್ತಿರುವೆ ,ನಿಮ್ನ ರೆಡ್ ಹ್ಯಾಂಡ್ ..... ಲು ...!!
ಶುಭವಾಗಲಿ
ನನ್ನಿ
\|/

Submitted by ಗಣೇಶ Sun, 01/12/2014 - 00:51

In reply to by venkatb83

ಸಪ್ತಗಿರಿವಾಸಿ, ನಿಮ್ಮ ಸಾವನದುರ್ಗ ಬೆಟ್ಟ ಹತ್ತಿಳಿದ ಲೇಖನ ನಾನು ಯಾವತ್ತೂ ಮರೆಯಲಾರೆ.:)
ರಾಯಚೂರು ಕೋಟೆ ಚಿತ್ರಗಳಿಗೆ ಧನ್ಯವಾದ. ಅಲ್ಲಲ್ಲಿ ಬಿರುಕು ಬಿಟ್ಟಿದೆ. ಅದರ ಬಗ್ಗೆ ಲೇಖನ ಬರೆಯಿರಿ.
->ನಾ ಈಗಲೇ ಪ್ರವಾಸಿ ತಾಣಗಳ ಪಟ್ಟಿ ಮಾಡುತ್ತಿರುವೆ ,ನಿಮ್ನ ರೆಡ್ ಹ್ಯಾಂಡ್ ..... ಲು ...!!
-ಸಮೀಪದ್ದೇ...ಒಂದು ಯೋಚನೆಯಲ್ಲಿದೆ. ಒಂದೆರಡುವಾರದಲ್ಲಿ ಧಾಳಿ ಮಾಡಬೇಕೆಂದಿರುವೆ. :)

Submitted by H A Patil Sat, 01/11/2014 - 20:19

ಗಣೇಶ ರವರಿಗೆ ವಂದನೆಗಳು
'ಜಮಾಲಾಬಾದ್ ಕೋಟೆ' ಯ ಚಿತ್ರಗಳು ಮತ್ತು ಪುಟ್ಟ ನಿರೂಪಣೆಗಳು ನಮಗೆ ಸಾಕ್ಷಾತ್ ದರ್ಶನ ಮಾಡಿದಷ್ಟು ಅನುಭವ ನೀಡಿದವು, ಓದಿ ಮತ್ತು ನೋಡಿ ಸಂತಸವಾಯಿತು ಧನ್ಯವಾದಗಳು.

Submitted by sathishnasa Sun, 01/12/2014 - 20:55

ನಾನೆ ಬೆಟ್ಟ ಹತ್ತಿ ಇಳಿದ ಹಾಗಾಯಿತು ಒಂದೊಳ್ಳಯ ಜಾಗದ (ಬೆಟ್ಟದ) ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು ಗಣೇಶ್ ರವರೇ
>>ಪಕ್ಕದಲ್ಲಿರುವ "ಫಿರಂಗಿ" (ಚಿತ್ರ-೬ ) ಗಮನಿಸಿ. ಆತ ಒಬ್ಬ ಅಲ್ಲ, ನಾವು ೩-೪ ಮಂದಿ ಸೇರಿದರೂ ಅಲುಗಿಸಲು ಸಾಧ್ಯವಾಗದು<<
ಆತ ಒಬ್ಬ ಅಲ್ಲ..... ಅದು ನೀವೇ ಇರಬಹುದೇ ಎಂಬ ಅನುಮಾನ ವೆಂಕಟೇಶ್ ರಂತೆ ನನಗೂ ಇದೆ.........ಸತೀಶ್

Submitted by ಗಣೇಶ Tue, 01/14/2014 - 00:11

In reply to by sathishnasa

-ಅದು ನೀವೇ ಇರಬಹುದೇ ಎಂಬ ಅನುಮಾನ ವೆಂಕಟೇಶ್ ರಂತೆ ನನಗೂ ಇದೆ :) ಸತೀಶರೆ, ನಿಮಗೂ ಅನುಮಾನನಾ? :)ನನ್ನ ಗಾತ್ರ,ತೂಕದ ಒಂದಂಶನೂ ಇಲ್ಲಾತ...:). ಬೆಟ್ಟ ಹತ್ತೋಣ ಬನ್ನಿರೋ ೨ ರಲ್ಲಿ ಹೇಳಿರುವೆ- "ನಾನು ಫುಲ್ ಕೈ ಶರ್ಟ್ ಹಾಕಿರುವುದರಿಂದ ಹುಲ್ಲಿನಿಂದ ತೊಂದರೆ ಆಗಿಲ್ಲ" ಎಂದು. ಇಲ್ಲಾತ ಹಾಕಿರುವುದು ಅರ್ಧ ತೋಳಿನ ಅಂಗಿ...
ತಮ್ಮ ಮೆಚ್ಚುಗೆಗೆ ಧನ್ಯವಾದಗಳು.

Submitted by venkatb83 Tue, 01/14/2014 - 12:58

In reply to by ಗಣೇಶ

;())))
ಸರ್ವ ಸಂಪದ ಬಂಧು ಬಳಗಕ್ಕೆ
******* ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು*******
ಶುಭವಾಗಲಿ
\|/

Submitted by nkumar Wed, 02/12/2014 - 08:07

ಚೆನ್ನಾಗಿದೆ ನಿರೂಪಣೆ. ನನ್ನ ಊರಿಗೆ ಹತ್ತಿರವಿದ್ದರೂ ಇದುವರೆಗೆ ಹತ್ತುವ ಭಾಗ್ಯ ಸಿಗಲಿಲ್ಲ :-(. ಯಾವತ್ತಾದರೂ ಪ್ಲಾನ್ ಮಾಡಬೇಕು. ಹಾಗೆಯೇ ಬೆಳ್ತಂಗಡಿ ಹತ್ತಿರದ ಬೊಳ್ಳೆ ಮನೆ ಜಲಪಾತಕ್ಕೆ ಹೋಗಿ ಬರಬಹುದಿತ್ತು. ೨.೫ ಕಿ.ಮಿ ನಡೆಯಬೇಕಷ್ಟೇ

Submitted by ಗಣೇಶ Fri, 02/14/2014 - 00:24

In reply to by nkumar

ನಂದಕುಮಾರರೆ, ಬಹಳ‌ ದಿನಗಳ‌ ನಂತರ‌ ತಮ್ಮ‌ ಭೇಟಿ..ಊರಿಗೆ ಹತ್ತಿರ‌ ಅಂತೀರಿ. ಪ್ಲಾನ್ ಗೀನ್ ಏನೂ ಬೇಡ‌. ಒಂದು ಸಂಡೆ ನೀರಿನ‌ ಬಾಟಲುಗಳು, ತಿನಿಸುಗಳೊಂದಿಗೆ ಧಾಳಿ ಮಾಡಿ ನಮಗೆ ವರದಿ ಸಲ್ಲಿಸಿ. :)
ಬೊಳ್ಳೆ ಮನೆ ಜಲಪಾತದ‌ ಬಗ್ಗೆ ನೀವು ಹೇಳಿದ‌ ಮೇಲೆ ನೆಟ್ನಲ್ಲಿ ನೋಡಿದೆ. ಸೂಪರ್ ಆಗಿದೆ. 2.5 ಕಿಮೀ ನಡೆಯುವುದು ಪರವಾಗಿಲ್ಲ‌. ಲೀಚ್(ಇಂಬಳ‌) ಕಾಟದ್ದೇ ಭಯ‌. ಒಮ್ಮೆ ಹೋಗಬೇಕು.