ಕಚ'ಗುಳಿಗೆ' - ೦೪

ಕಚ'ಗುಳಿಗೆ' - ೦೪

ಈ ಬಾರಿಯ ಸಂಕ್ರಾಂತಿ ಒಂದು ರೀತಿ ಎರಡು ದಿನಗಳ ನಡುವೆ ಕಾಲಿಟ್ಟಂತಿದೆ. ಹೀಗಾಗಿ ಕೆಲವು ಕಡೆ ನಿನ್ನೆ ರಜೆಯಾದರೆ ಇನ್ನು ಕೆಲವೆಡೆ ಇಂದು. ನಮಗೇನು ರಜೆಯಿರದಿದ್ದರೂ ಪೊಂಗಲ್ ಆಚರಣೆಯ ಸಂಭ್ರಮ ನಿನ್ನೆಯೆಲ್ಲಾ ಗಲಗಲಿಸುತ್ತಿತ್ತು. ಏನಾದರಾಗಲಿ ಸಂಕ್ರಾಂತಿ ದಾಟಿ ಹೋಗುವ ಮೊದಲು ಇನ್ನೊಂದಷ್ಟು ಕಚಗುಳಿಗೆ ಸೇರಿಸೋಣವೆಂದು ಹೊಸೆದ ಅರ್ಜೆಂಟ್ ಎಳ್ಳು ಬೆಲ್ಲಗಳಿವು -ಒಂದೆರಡು ಮಾತ್ರ  ನಿನ್ನೆ ಹೊಸೆದದ್ದು ಸೇರಿಕೊಂಡಿವೆ. ಹೊಸ ಗುಳಿಗೆಗಳು ಮಿಕ್ಕುಳಿದ ಸಂಕ್ರಾಂತಿಯ ನವಿರು ಕಚಗುಳಿ ಕೊಡಲೆಂದು ಆಶಿಸುತ್ತಾ, ಇಗೋ ಕಚ'ಗುಳಿಗೆ' - ೦೪ :-) 

೦೧. ಬುದ್ದಿವಂತರು ಯಾರು?
________________

ನಮ್ಮ ಜನ
ಸೂಕ್ಷ್ಮ ಮತಿಗಳು
ಏನೆಲ್ಲಾ 
ಕಂಡು ಹಿಡಿಯುತ್ತಾರೆ !
ಹೊರಗಿನ ಜನ
ತೀಕ್ಷ್ಣಮತಿಗಳು
ನಮ್ಮ ಜನರನ್ನೆ 
ಕೊಂಡು ಕೊಳ್ಳುತ್ತಾರೆ !!

೦೨. ಯಾರ 'ಪರ' ?
_________________

ಅಮೇರಿಕ ಈಗ ಸ್ವಲ್ಪ
'ಪರವಾಗಿಲ್ಲ' ;
ಪೂರ್ತಿ ಪಾಕಿಸ್ತಾನದ
'ಪರ'ವಾಗಿಲ್ಲ ! 

೦೩.ಕು'ತರ್ಕಾ
___________

ನಿಜವಾದ
ಪ್ರೀತಿಗದೇನಂತಾ
'ತರ್ಕಾ' ರೀ ?
ಕೇಳೊ ಮೊದಲೆ
ಸರಸರ 
ಹೆಚ್ಚಿಕೊಟ್ಟರೆ 
ಸಾಕು
'ತರಕಾರಿ' !

೦೪. ವ್ಯಂಗ್ಯ
__________

ಕಿವಿಯಾಗಿದ್ರೇನು
ಹಿತ್ತಾಳೆ
ಕಿವಿಯೋಲೆ ಮಾತ್ರ
ಬಂಗಾರದಲ್ಲೆ !

೦೫. ಹದ್ದು ಬಸ್ತು
____________

ಹೆಂಡತಿಯರು 
ಗಂಡಂದಿರನ್ನು 
'ಬ್ಲಾಕ್ ಮೇಲಿಸೋ'
ರೀತಿ..
'ನಿಮಗೆ 
ನನ್ಮೇಲಿದ್ರೆ 
ನಿಜವಾದ ಪ್ರೀತಿ...!'

೦೬. Double Chin!
_______________

ಚಿನ್ನು ಚಿನ್ನು ತಿನ್ನು
ಅನ್ನುತ್ತ 
ಮುದ್ದು ಮಾಡುತ್ತಾಳೆ
ಮಗನನ್ನು ;
'ಚಿನ್ನು ಡಬ್ಬಲ್ ಚಿನ್ನು'
ಅನ್ನುತ್ತ 
ಚೆನ್ನಾಗೆ ತಿವಿಯುತ್ತಾಳೆ
ಅಪ್ಪನನ್ನು !!

೦೭. ತುಂಟಾಟ
___________

ಸದಾ
ಹಾಸಿದ್ದರೂ 
'ಹಾಸಿಗೆ'
ಹಗಲಲ್ಲಿ
ನಾ 'ಸಿಗೆ' !

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
 

Comments

Submitted by H A Patil Wed, 01/15/2014 - 20:22

ನಾಗೇಶ ಮೈಸೂರು ರವರಿಗೆ ವಂದನೆಗಳು
ಕಚಗುಳಿಗೆ ಸರಣಿ ಚೆನ್ನಾಗಿ ಮೂಡಿ ಬರುತ್ತಿದೆ, ಸಮಾಜದಲ್ಲಿ ಸುತ್ತೆಲ್ಲ ನಡೆಯುವ ಘಟನೆಗಳಿಗೆ ಕನ್ನಡಿ ಹಿಡಿಯುತ್ತಿದೆ..... ಅಮೇರಿಕಾನೀಗ ಸ್ವಲ್ಪ ಪರವಾಯಿಲ್ಲ ಆದರೆ ಚೈನಾದ ಬಗೆಗಿನ ಅದರ ಒಲವು ನಮಗೆ ಅರ್ಥವಾಗುತ್ತಿಲ್ಲ. ಧನ್ಯವಾದಗಳು.

Submitted by nageshamysore Thu, 01/16/2014 - 03:51

In reply to by H A Patil

ಪಾಟೀಲರೆ ನಮಸ್ಕಾರಗಳು. ಅಮೇರಿಕದಂತಹ ದೊಡ್ಡ ದೇಶಗಳ ಒಲವು, ನಿರ್ಧಾರವಾಗುವುದು ಅದರ ವಾಣಿಜ್ಯ ಉದ್ದೇಶಗಳ / ಹಿತಾಸಕ್ತಿಗಳನ್ನವಲಂಬಿಸಿ ಅನಿಸುತ್ತದೆ (ಉದಾಹರಣೆಗೆ ಚೈನಾದಲ್ಲಿ ಬಂಡವಾಳ ಸುರಿದು ನಿರ್ಮಿಸಿದ ಅಗಾಧ ಸಂಖ್ಯೆಯ ಉತ್ಪಾದನಾ ಕಾರ್ಖಾನೆಗಳು). ಈಗ ಒಲವಿನ ಮಟ್ಟ ನಿರ್ಧರಿಸುವುದು ಕೂಡ ಏಕಪಕ್ಷೀಯವಲ್ಲಾ - ಚೈನ ಕೂಡ ತನಗಿಷ್ಟ ಬಂದ ಹಾಗೆ ನಿರ್ಧಾರ ಕೈಗೊಳ್ಳುವ ತಾಕತ್ತು ಬಂದಿದೆ ಅದರ ಆರ್ಥಿಕ ಸ್ಥಿತಿಯ ಶಕ್ತಿಯಿಂದಾಗಿ..
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು